ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲು ಹೀಗೆ ಮಾಡಿ

Aug 9, 2023 - 11:09
 0  234

Google  News WhatsApp Telegram Facebook

ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲು ಹೀಗೆ ಮಾಡಿ

Janaa Akrosha News Desk.

ಬೆಂಗಳೂರು: ಎಸಿಬಿ ರದ್ದುಗೊಂಡ ನಂತ್ರ, ಈ ಮೊದಲಿನಂತೆ ಭ್ರಷ್ಟಾಚಾರ ತಡೆಗಟ್ಟುವ ಕೆಲಸವನ್ನು ರಾಜ್ಯದಲ್ಲಿ ಕರ್ನಾಟಕ ಲೋಕಾಯುಕ್ತ ( Karnataka Lokayukta ) ಮಾಡುತ್ತಿದೆ. ರಾಜ್ಯದ ಜನರು ತಮ್ಮ ದೂರುಗಳಲ್ಲಿ ಆಯಾ ಜಿಲ್ಲಾವಾರು, ಇಲ್ಲವೇ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿಯೂ ಲೋಕಾಯುಕ್ತಕ್ಕೆ ಸಲ್ಲಿಸಬಹುದಾಗಿದೆ.

ಹಾಗಾದ್ರೇ ನೀವು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದು ಹೇಗೆ.? ಎನ್ನುವ ಮಾಹಿತಿ ಮುಂದೆ ಓದಿ.

ನಾಗರೀಕರ ಕುಂದುಕೊರತೆಗಳ ನಿವಾರಣೆ ಮುಖ್ಯ ವಿಷಯವಾಗಿ ಪರಿಗಣಿಸಿ ಭಾರತದ ಪ್ರಧಾನ ಮಂತ್ರಿಯಾಗಿದ್ದ ದಿವಂಗತ ಮೊರಾರ್ಜಿ ದೇಸಾಯಿಯವರು ನೇತೃತ್ವ ವಹಿಸಿದ್ದ ಆಡಳಿತ ಸುಧಾರಣಾ ಸಮಿತಿ ತನ್ನ ಮೊದಲನೆಯ ವರದಿಯನ್ನು ಸಲ್ಲಿಸಿರುತ್ತದೆ. ಆಡಳಿತಾತ್ಮಕ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಥವಾ ಕೆಲವು ಸಾರ್ವಜನಿಕ ಪ್ರಾಧಿಕಾರಗಳ ಪರವಾಗಿ ತನಿಖೆ ಮಾಡುವ ಮೂಲಕ ನಾಗರೀಕರ ಕುಂದುಕೊರತೆಗಳನ್ನು ನಿವಾರಿಸಲು ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳನ್ನು ಅನುಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಾಪನೆ ಮಾಡಲು ಸದರಿ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತದೆ. ಸಂಬ೦ಧಿಸಿದ ಸರ್ಕಾರದಿಂದ ಸ್ವತಂತ್ರವಾಗಿ ಈ ಸಂಸ್ಥೆಗಳು ಸೇವೆ ಸಲ್ಲಿಸಬೇಕೆಂದು ಮತ್ತು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಥವಾ ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಸಂಸ್ಥೆಗಳು ನ್ಯಾಯಾಂಗ ಸಂಸ್ಥೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕೆಂದು ಉದ್ದೇಶಿಸಲಾಗಿರುತ್ತದೆ.

ಆಡಳಿತ ಯಂತ್ರದಲ್ಲಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಅಶಿಸ್ತಿನಂತಹ ಪ್ರಕರಣಗಳೂ ಸೇರಿದಂತಹ ಆಡಳಿತಾತ್ಮಕ ಕ್ರಮಗಳ ವಿರುದ್ಧದ ದೂರುಗಳನ್ನು ಪರಿಶೀಲನೆ ಮಾಡಿ ಸಾರ್ವಜನಿಕ ಆಡಳಿತದ ಮಾನದಂಡಗಳನ್ನು ಸುಧಾರಣೆ ಮಾಡಲು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರ ನೇಮಕಾತಿಯನ್ನು ಈ ವರದಿಯಲ್ಲಿ ಸೂಚಿಸಿರುವಂತೆ ಶಿಫಾರಸ್ಸು ಮಾಡಲಾಗಿರುತ್ತದೆ. ಭಾರತ ಸಂವಿಧಾನದ 7ನೇ ಅನುಸೂಚಿಯಲ್ಲಿರುವ 2 ಅಥವಾ 3 ನೇ ಪಟ್ಟಿಗಳಲ್ಲಿ ನಿರ್ದಿಷ್ಟಪಡಿಸಿರುವ ವಿಷಯಗಳಿಗೆ ಸಂಬ೦ಧಪಟ್ಟ ಆಡಳಿತಾತ್ಮಕ ಕ್ರಮಗಳಿಗೆ ಸಂಬ೦ಧಿಸಿದ ಆಪಾದನೆಗಳನ್ನು ಅಥವಾ ಕುಂದುಕೊರತೆಗಳನ್ನು ತನಿಖೆ ಮಾಡಲು ಸದರಿ ವರದಿಯ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ಶಾಸಕಾಂಗ ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ನ್ನು ರೂಪಿಸಿರುತ್ತದೆ.

ಸಾರ್ವಜನಿಕ ನೌಕರರ ವರ್ತನೆಗೆ ಸಂಬ೦ಧಪಟ್ಟ ಆಪಾದನೆಗಳನ್ನು ಅಥವಾ ಕುಂದುಕೊರತೆಗಳನ್ನು ತನಿಖೆ ಮಾಡಿ ವರದಿ ಮಾಡಲು ಲೋಕಾಯುಕ್ತರ ಮತ್ತು ಒಬ್ಬ ಅಥವಾ ಅದಕ್ಕಿಂತಲೂ ಹೆಚ್ಚಿನ ಉಪಲೋಕಾಯುಕ್ತರ ನೇಮಕಾತಿಗೆ ಈ ಕಾಯಿದೆ ಅವಕಾಶ ಕಲ್ಪಿಸುತ್ತದೆ.

ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಹೇಗೆ ದಾಖಲಿಸಬೇಕು.?

ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಕಲಂ 9 ರ ಅಡಿಯಲ್ಲಿ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಅಥವಾ ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ರ ಕಲಂ 2 (12) ರ ಅಡಿಯಲ್ಲಿ ಸಾರ್ವಜನಿಕ ನೌಕರರ ದುರ್ನಡತೆಯ ವಿರುದ್ಧ ದೂರನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಒಬ್ಬ ವ್ಯಕ್ತಿ ತನಗಾದ ಅನ್ಯಾಯದ ಅಥವಾ ದುರಾಡಳಿತದ ಪರಿಣಾಮವಾಗಿ ತನಗಾದ ಅನಗತ್ಯವಾದ ತೊಂದರೆಯನ್ನು ವ್ಯಕ್ತಪಡಿಸಿ ನ್ಯಾಯವನ್ನು ಅಪೇಕ್ಷಿಸುವುದನ್ನು "ಕುಂದುಕೊರತೆ" ಎಂದು ಅರ್ಥೈಸಲಾಗಿರುತ್ತದೆ.

ಸಾರ್ವಜನಿಕ ನೌಕರನಿಂದಾಗುವ ದುರ್ನಡತೆಗೆ ಸಂಬಂಧಪಟ್ಟಿರುವುದನ್ನು "ಆಪಾದನೆ" ಎನ್ನಲಾಗುತ್ತದೆ. ಸರ್ಕಾರಿ ಅಶಿಸ್ತು, ಸರ್ಕಾರಿ ಹುದ್ದೆಯ ದುರುಪಯೋಗ, ಸರ್ಕಾರಿ ಕೆಲಸಗಳ ನಿರ್ವಹಣೆಯಲ್ಲಿ ವೈಯಕ್ತಿಕ ಲಾಭಗಳ ಅಪೇಕ್ಷೆ, ಭ್ರಷ್ಟಾಚಾರ, ಪಕ್ಷಪಾತ ಧೋರಣೆ, ಸ್ವಜನ ಪಕ್ಷಪಾತ, ಅಪ್ರಾಮಾಣಿಕತೆ, ಕರ್ತವ್ಯ ನಿರ್ವಹಣೆಯಲ್ಲಿ ಅಸಮರ್ಪಕತೆ ಅಥವಾ ದುರುದ್ದೇಶಗಳು, ಪ್ರಾಮಾಣಿಕತೆಯ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಣೆಯಲ್ಲಿ ಲೋಪ, ಅವಿವೇಕ, ಅನ್ಯಾಯ, ದಬ್ಬಾಳಿಕೆಯ ಅಥವಾ ಅಸಮರ್ಪಕ ತಾರತಮ್ಯದ ಕಾರ್ಯಾಚರಣೆ, ಉದ್ದೇಶಪೂರ್ವಕ ನಿರ್ಲಕ್ಷ್ಯ, ಕ್ರಮ ತೆಗೆದುಕೊಳ್ಳಲು ಅನಾವಶ್ಯಕ ವಿಳಂಬ ಮಾಡುವುದು ಇತ್ಯಾದಿಗಳನ್ನು ಆಪಾದನೆ ಒಳಗೊಂಡಿರುತ್ತದೆ.

ಕರ್ನಾಟಕ ಲೋಕಾಯುಕ್ತ ನಿಯಮಾವಳಿಗಳು, 1985 ರ ನಿಯಮ 4 ರ ಪ್ರಕಾರ ಪ್ರತಿಯೊಂದು ದೂರನ್ನು ಅಧಿಕೃತ ಅಧಿಕಾರಿ ಅಥವಾ ನೋಟರಿಯ ಮುಂದೆ ಸಮರ್ಪಕವಾಗಿ ಪ್ರಮಾಣೀಕರಿಸಿದ ಶಪಥಪತ್ರ ಸಹಿತವಾದ ನಮೂನೆ - ರೊಡನೆ ಫಿರ್ಯಾದಿ ಸಹಿಮಾಡಿರುವ ನಮೂನೆ 1 ರಲ್ಲಿ ಸಲ್ಲಿಸಬೇಕು. ಆದ್ದರಿಂದ, ದೂರನ್ನು ಸಲ್ಲಿಸಬಯಸುವವರು ಈ ಜಾಲತಾಣದಿಂದ ನಮೂನೆ 1 ಮತ್ತು 2 ನ್ನು ಡೌನ್‌ಲೋಡ್ ಮಾಡಿಕೊಂಡು ಅವುಗಳನ್ನು ಸೂಕ್ತವಾಗಿ ದೃಢೀಕರಿಸಿ ವಿವರವಾದ ದೂರು ಮತ್ತು ಯಾವುದಾದರೂ ಸಂಬಂಧಪಟ್ಟ ದಾಖಲಾತಿಗಳಿದ್ದರೆ ಅವುಗಳ ಸಹಿತವಾಗಿ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮುಖ್ಯ ಕಛೇರಿಯಲ್ಲಿ ನೇರವಾಗಿ ದಾಖಲಿಸಿ ಈ ಜಾಲತಾಣದ ಶೀರ್ಷಿಕೆ "ದೂರಿನ ಸ್ಥಿತಿ" ಯ ಅಡಿಯಲ್ಲಿ ಸದರಿ ದೂರಿನ ಸ್ಥಿತಿಯನ್ನು ತಿಳಿಯಬಹುದು.

ದೂರನ್ನು ದಾಖಲಿಸಲು ಬೆಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮುಖ್ಯ ಕಛೇರಿಗೆ ಅಥವಾ ಜಿಲ್ಲಾ ಲೋಕಾಯುಕ್ತ ಕಛೇರಿಗೆ ಫಿರ್ಯಾದಿ ಭೇಟಿ ನೀಡಿ ನಮೂನೆ 1 ಮತ್ತು 2 ರಲ್ಲಿ ದೂರನ್ನು ದಾಖಲಿಸಬಹುದು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ) ಪ್ರತಿಯೊಂದು ಜಿಲ್ಲಾ ಕಛೇರಿಗಳಲ್ಲಿ ಆರಕ್ಷಕ ನಿರೀಕ್ಷಕರ ಹುದ್ದೆ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯ ಆರಕ್ಷಕ ಅಧಿಕಾರಿಗಳು ಪ್ರಮಾಣೀಕರಿಸಲು ಅಧಿಕಾರ ಹೊಂದಿದ್ದು ನಮೂನೆ 2 ರ ಶಪಥಪತ್ರವನ್ನು ದೃಢೀಕರಿಸುತ್ತಾರೆ. ಇದರೊಡನೆ, ಪೊಲೀಸ್ ಅಧಿಕಾರಿಗಳು ತಾಲ್ಲೂಕು ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಸಹ ನಮೂನೆ 1 ಮತ್ತು 2 ರಲ್ಲಿ ದೂರನ್ನು ಅವರಿಗೆ ಹಸ್ತಾಂತರಿಸಬಹುದು.

ಹೀಗಿವೆ ನಮೂನೆ 1 ಮತ್ತು 2ರ ಫಾರಂಗಳು

ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಷರತ್ತುಗಳ ಅಡಿಯಲ್ಲಿ ನೀಡಲಾದ ಅಧಿಕಾರಗಳು ಮತ್ತು ಕಾರ್ಯಾಚರಣೆಗಳೊಡನೆ ಕರ್ನಾಟಕ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957 ರ ನಿಯಮ 14-ಎ ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರ ಸಂಸ್ಥೆಗೆ ವಹಿಸುವ ಶಿಸ್ತು ವಿಚಾರಣೆಗಳನ್ನು ಸಹ ಈ ಸಂಸ್ಥೆ ನಡೆಸುತ್ತಿದ್ದು ವಿಚಾರಣೆ ಪೂರ್ಣಗೊಂಡ ನಂತರ ವಿಚಾರಣಾಧಿಕಾರಿಗಳ ತೀರ್ಮಾನಗಳನ್ನು ಮತ್ತು ಸಂದರ್ಭಾನುಸಾರ ಲೋಕಾಯುಕ್ತರ ಅಥವಾ ಉಪಲೋಕಾಯುಕ್ತರ ಶಿಫಾರಸ್ಸುಗಳನ್ನು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಕಳುಹಿಸಲಾಗುವುದು.

ನಿಮ್ಮ ದೂರಿನ ಸ್ಥಿತಿ ತಿಳಿಯಲು ಹೀಗೆ ಮಾಡಿ

ಕರ್ನಾಟಕ ಲೋಕಾಯುಕ್ತಕ್ಕೆ ನಿಮ್ಮ ಸಮಸ್ಯೆ ಸಂಬಂಧಿಸಿದಂತೆ, ಅಧಿಕಾರಿಗಳ ಕಿರುಕುಳ, ಲಂಚಗುಳಿ ತನಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರೇ, ಆ ದೂರಿನ ಸ್ಥಿತಿ ಏನು ಎನ್ನುವ ಮಾಹಿತಿಯನ್ನು ತಿಳಿಯಲು https://lokayukta.kar.nic.in/casestatus_kan.php ಕ್ಲಿಕ್ ಮಾಡಿ. ಇಲ್ಲಿ ಕೇಳುವಂತ ವರ್ಗದಲ್ಲಿ ಲೋಕಾಯುಕ್ತ, ಉಪ ಲೋಕಾಯುಕ್ತದಂತ ಆಯ್ಕೆ ಮಾಡಿಕೊಳ್ಳಿ. ಆ ಬಳಿಕ ಯಾವ ವಿಭಾಗಕ್ಕೆ ಸೇರಿದ್ದು ಎನ್ನುವುದನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು ದೂರು ನೀಡಿದಾಗ ನಿಮಗೆ ನೀಡಿರುವಂತ ದೂರಿನ ಸಂಖ್ಯೆ ನಮೂದಿಸಿ, ಆ ದೂರಿನ ವರ್ಷ ನಮೂದಿಸಿದ ನಂತ್ರ ಹುಡುಕಿ ಎನ್ನುವ ಬಟನ್ ಕ್ಲಿಕ್ ಮಾಡಿದ್ರೇ, ನಿಮ್ಮ ದೂರಿನ ಸ್ಥಿತಿ ತಿಳಿಯಬಹುದಾಗಿದೆ.

Google  News WhatsApp Telegram Facebook
HTML smaller font

.

.