ತಾಲ್ಲೂಕಿನ ಖಾನಾಪುರ, ಏವೂರು ಗ್ರಾಮಗಳಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಲಾಗುತ್ತಿದೆ ಬಿಲ್ ತಡೆಹಿಡಿದು ಸಂಬಂಧಿಸಿದ ಕಿರಿಯ ಅಭಿಯಂತರನ ಮೇಲೆ ಸೂಕ್ತವಾದ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಏವೂರು ಗ್ರಾಮ ಘಟಕದ ಅಧ್ಯಕ್ಷ ದೇವಿಂದ್ರಪ್ಪ ದೊರೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಉಪ ವಿಭಾಗ ಸುರಪುರ ಇವರಲ್ಲಿ ಮನವಿ ಸಲ್ಲಿಸಿದ್ದಾರೆ.
ಖಾನಾಪುರ ಗ್ರಾಮದಿಂದ ಏವೂರು ಹಣಮಂತ ಟಣಕೆದಾರನ ಹೊಲದವರೆಗೆ ನಡೆಯುತ್ತಿರುವ ರಸ್ತೆ ಬದಿಯ ಜಂಗಲ್ ಕಟಿಂಗ್ ಕಾಮಗಾರಿ, ಕಂಬಾರ ತಾಂಡಾದಿಂದ ಮಡ್ಡಿ ತಾಂಡಾದವರೆಗಿನ ಚೌಕ್‌ವರಗೆ ರಸ್ತೆ ಬದಿಯ ಜಂಗಲ್ ಕಟಿಂಗ್ ಹಾಗೂ ರಸ್ತೆ ಸುಧಾರಣೆ ಇನ್ನೂ ಮುಂತಾದ ಕಾಮಗಾರಿಗಳು ಕಳಪೆಯಾಗುತ್ತಿವೆ. ಈ ಕಳಪೆ ಕಾಮಗಾರಿಗಳನ್ನು ಗುತ್ತಿಗೆದಾರರಿಂದ ಹಣ ಪಡೆದು ನಿರ್ವಹಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಂಜಿನಿಯರ್ ಅವರನ್ನು ಪ್ರಶ್ನಿಸಿದಾಗ ಗೂಂಡಾ ವರ್ತನೆ ಮತ್ತು ದಬ್ಬಾಳಿಕೆಯ ಮಾತುಗಳನ್ನು ಆಡಲಾಗಿದೆ. ಜವಬ್ದಾರಿಯುತ ಸರ್ಕಾರಿ ನೌಕರನಾಗಿದ್ದು ಕಳಪೆ ಕಾಮಗಾರಿಗಳಿಗೆ ಕಾರಣವಾಗುವ ಮೂಲಕ ಸರ್ಕಾರಕ್ಕೂ ಇತ್ತ ಜನರಿಗೂ ವಂಚನೆ ಮಾಡುತ್ತಿದ್ದಾನೆ. ಈತನ ಮೇಲೆ ಕ್ರಮ ಜರುಗಿಸಿ ಕಳಪೆ ಕಾಮಗಾರಿಗಳ ಬಿಲ್ ಪಾವತಿ ಮಾಡಬಾರದು ಎಂದು ಮನವಿಯಲ್ಲಿ ವಿನಂತಿಸಿಕೊಳ್ಳಲಾಗಿದೆ.