೭೯% ಮೇಲ್ಜಾತಿಯ ಹೈಕೋರ್ಟ್ ನ್ಯಾಯಾಧೀಶರುಗಳು ೨೦೧೮-೨೦೨೨ರ ನಡುವೆ ನೇಮಕ ಆಗಿದ್ದಾರೆ: ಕಾನೂನು ಸಚಿವಾಲಯ

Mar 21, 2023 - 14:31
 0  128

Google  News WhatsApp Telegram Facebook

೭೯% ಮೇಲ್ಜಾತಿಯ ಹೈಕೋರ್ಟ್ ನ್ಯಾಯಾಧೀಶರುಗಳು ೨೦೧೮-೨೦೨೨ರ ನಡುವೆ ನೇಮಕ ಆಗಿದ್ದಾರೆ: ಕಾನೂನು ಸಚಿವಾಲಯ

Janaa Akrosha News Desk.

೭೯% ಮೇಲ್ಜಾತಿಯ ಹೈಕೋರ್ಟ್ ನ್ಯಾಯಾಧೀಶರುಗಳು ೨೦೧೮-೨೦೨೨ರ ನಡುವೆ ನೇಮಕ ಆಗಿದ್ದಾರೆ: ಕಾನೂನು ಸಚಿವಾಲಯ

 ಈ ಅಂಕಿಅಂಶವು ಸಚಿವಾಲಯದಿಂದ ಬಿಡುಗಡೆ ಆಗಿದೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಎಲ್ಲಾ ಸಮುದಾಯದ ಪ್ರಾತಿನಿಧ್ಯವನ್ನು ಖಾತರಿ ಪಡಿಸುವಲ್ಲಿ ಕೊಲಿಜಿಯಂ ವಿಫಲವಾಗಿದೆ ಎಂದು ಎತ್ತಿ ತೋರುತ್ತಿದೆ.

ಇಂದಿರಾ ಜೈನ್‌ಸಿಂಗ್ ಅವರು ಡಿಸಂಬರ್ ೨೬ರಂದು ಲೀಫ್‌ಲೆಟ್ ಅಂತರ್ಜಾಲ ಪತ್ರಿಕೆಗೆ ಬರೆದ ಲೇಖನದ ಅನುಸಾರ ಸರ್ಕಾರದ ನಿರಂತರ ದಾಳಿಯಿಂದಾಗಿ ಸುಪ್ರೀಂಕೋರ್ಟ್ ತನ್ನ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಇತ್ತಿಚಿಗೆ ಕೇಂದ್ರ ಕಾನೂನು ಸಚಿವರು ಮತ್ತು ಉಪ ರಾಷ್ಟçಪತಿಗಳು ಮಾಡಿದ ಭಾಷಣದಿಂದ ಇದು ಸ್ಪಷ್ಟವಾಗಿದೆ. ನ್ಯಾಯಾಂಗ ನೇಮಕಾತಿಗಳಲ್ಲಿ ಪ್ರಾತಿನಿಧ್ಯದ ಅಗತ್ಯತೆ ಎನ್ನುವುದು ನಿಜವಾದರು ಸಹ ಕಾಯಿಲೆಗಿಂತಲೂ ಚಿಕಿತ್ಸೆಯೇ ಕೆಟ್ಟದಾಗಿದೆ.

ಈ ಹಿನ್ನಲೆಯಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ ಕಳೆದ ೫ ವರ್ಷಗಳಲ್ಲಿ ೨೦೧೮ರಿಂದ ೨೦೨೨ರ ಅವಧಿಯಲ್ಲಿ ಹೈಕೋರ್ಟ್ಗೆ ನೇಮಕಗೊಂಡ ನ್ಯಾಯಧೀಶರ ಪೈಕಿ ಶೇ. ೭೯ ಪ್ರಮಾಣದಷ್ಟು ಮೇಲ್ಜಾತಿಯವರು ಇದ್ದಾರೆ. ಸಂಸದೀಯ ಸಮಿತಿ ಮುಂದೆ ಕೇಂದ್ರ ಕಾನೂನು ಸಚಿವಾಲಯವು ಈ ಅಂಕಿಅAಶವನ್ನು ಮಂಡಿಸಿದೆ.

 ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಕಾನೂನು ಸಚಿವಾಲಯ ಈ ವಿಷಯವನ್ನು ಬಹಿರಂಗಪಡಿಸಿದೆ ಹಾಗೂ ಅಷ್ಟೆ ಅಲ್ಲದೆ ಇದರ ಹೊರತಾಗಿಯೂ ಹಲವು ವಿಷಯಗಳನ್ನು ಹೇಳಿದೆ. ಕೊಲಿಜಿಯಂ ವ್ಯವಸ್ಥೆಯು ೩೦ ವರ್ಷಗಳಿಂದ ಅಸ್ತಿತ್ವದಲ್ಲಿ ಇದ್ದರು ಕೂಡ, ಉನ್ನತ ನ್ಯಾಯಾಂಗದಲ್ಲಿ ಎಲ್ಲಾ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಸುಪ್ರೀಂಕೋರ್ಟ್ನಿಂದ ಆರಂಭದಲ್ಲಿ ಮಾರ್ಗಸೂಚಿಯನ್ನು ರೂಪಿಸಲಾಗಿತ್ತು. ಆದರೆ ಮುಂದೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಕೊಲಿಜಿಯಂಗಳು ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಯನ್ನು ಪಾಲಿಸದಿರುವುದು ಆಶ್ಚರ್ಯಕರವಾಗಿದೆ.

 ದೇಶದ ಎಲ್ಲಾ ೨೫ ಹೈಕೋರ್ಟ್ಗಳಲ್ಲಿ ನೇಮಕ ಆದ ನ್ಯಾಯಾಮೂರ್ತಿಗಳಲ್ಲಿ ಹೆಚ್ಚಿನವರು ಮೇಲ್ಜಾತಿಯವರು ಎಂಬ ಅಂಶ ಅಘಾತಕಾರಿ ಆಗಿದೆ. ನ್ಯಾಯಾಂಗ ನೇಮಕಾತಿಯಲ್ಲಿ ‘ತಾರತಮ್ಯ’ ಆಗಿದೆ. ದೇಶದಲ್ಲಿ ಹಿಂದುಳಿದ ವರ್ಗದವರು (ಒಬಿಸಿ) ೩೫% ಜನಸಂಖ್ಯೆ ಹೊಂದಿದ್ದಾರೆ. ಆದರೆ ನ್ಯಾಯಪೀಠ ಸ್ಥಾನದಲ್ಲಿ ೧೧%ಕ್ಕಿಂತ ಕಡಿಮೆ ನ್ಯಾಯಾಧೀಶರು ನೇಮಕ ಆಗಿದ್ದಾರೆ. ನ್ಯಾಯಾಂಗ ನೇಮಕಾತಿಯಲ್ಲಿ ೩೫% ಇರುವ ಹಿಂದುಳಿದ ವರ್ಗದವರಿಗೆ ತಾರತಮ್ಯ ನೀತಿ ಅನುಸರಿಸಲಾಗಿದೆ.

 ಮತ್ತೊಂದು ತಾರತಮ್ಯ ಅಂದರೆ ದೇಶದ ಎಲ್ಲಾ ಹೈಕೋರ್ಟ್ಗಳಲ್ಲಿ ೨೦೧೮ರಿಂದ ಒಟ್ಟು ೫೩೭ ನ್ಯಾಯಾಧೀಶರುಗಳು ನೇಮಕ ಆಗಿದ್ದಾರೆ. ಅವರಲ್ಲಿ ಅಲ್ಪಸಂಖ್ಯಾತ ಸಮುದಾಯದವರು ೨.೬%, ಪರಿಶಿಷ್ಟ÷ ಜಾತಿಯವರು ೨.೮%, ಪರಿಶಿಷ್ಟ ಪಂಗಡದವರು ಕೇವಲ ೧.೩% ನೇಮಕ ಆಗಿದ್ದಾರೆ. ಇಲ್ಲಿ ಕೂಡ ಪ್ರಾತಿನಿಧ್ಯ ಕಲ್ಪಿಸದೆ ತಾರತಮ್ಯ ಮಾಡಲಾಗಿದೆ. ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿಯಲ್ಲಿ ‘ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ’ ಕಣ್ಮರೆಯಾಗಿದೆ.

 ಕಾನೂನು ಸಚಿವಾಲಯದ ಪ್ರಕಾರ “ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ನ್ಯಾಯಾಲಯದ ನೇಮಕಾತಿ ಪ್ರಕ್ರಿಯೆಯಲ್ಲಿ ಸರಿಯಾಗಿ ನಿಭಾಯಿಸುವ ಪ್ರಾಥಮಿಕ ಹೊಣೆಗಾರಿಕೆಯು ಸುಪ್ರೀಂಕೋರ್ಟ್ನ ಕೊಲಿಜಿಯಂ ಹಾಗೂ ಹೈಕೋರ್ಟ್ನ ಕೊಲಿಜಿಯಂದು ಆಗಿರುತ್ತದೆ”.

 ಮೇಲಿನ ಹೇಳಿಕೆಯನ್ನು ಸ್ಥಾಯಿ ಸಮಿತಿ ಮುಂದೆ ನೀಡುವ ಮೂಲಕ ಕಾನೂನು ಸಚಿವಾಲಯವು ಆ ಮೂಲಕ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತದೆ. ನ್ಯಾಯಾಂಗವು ನ್ಯಾಯಾಧೀಶರ ನೇಮಕಾತಿಯಲ್ಲಿ ಪ್ರಾತಿನಿಧ್ಯದ ಪ್ರಶ್ನೆಯನ್ನು ಆದ್ಯತೆಯಾಗಿ ಮಾಡಿಕೊಳ್ಳಬೇಕು. ಆದ್ದರಿಂದ ಇದನ್ನು ನ್ಯಾಯಾಂಗವು ಸ್ವತಃ ಕೈಗೆತ್ತಿಕೊಂಡು ಪರಿಹರಿಸಬೇಕಾಗಿದೆ.

 ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳು ಎಂದು ನ್ಯಾಯಾಧೀಶರ ಕೊಲಿಜಿಯಂ ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದ ೪ ಸದಸ್ಯರ ಸುಪ್ರೀಂಕೋರ್ಟ್ನ ಕೊಲಿಜಿಯಂ ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡಲು ಪ್ರಸ್ತಾಪವನ್ನು ತಯಾರು ಮಾಡುತ್ತದೆ. ಮುಖ್ಯ ನ್ಯಾಯಾಧೀಶರ ನೇತೃತ್ವದ ೩ ಸದಸ್ಯರ ಹೈಕೋರ್ಟ್ ಕೊಲಿಜಿಯಂ ಹೆಸರುಗಳನ್ನು ಶಿಫಾರಸು ಮಾಡುತ್ತದೆ.

 ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರಗಳ ಮೂಲಕ ಕಾನೂನು ಸಚಿವಾಲಯವು ಉನ್ನತ ನ್ಯಾಯಾಂಗದಲ್ಲಿ “ಸಾಮಾಜಿಕ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಸಮಸ್ಯೆಯನ್ನು ಪರಿಹರಿಸುವ” ಅಗತ್ಯವನ್ನು ಒತ್ತಿ ಹೇಳಿದೆ. ಕೊಲಿಜಿಯಂನ ಮುಖ್ಯ ಕೆಲಸಗಳಲ್ಲಿ ಒಂದಾದ ನ್ಯಾಯಾಧೀಶರ ನೇಮಕಾತಿಯಲ್ಲಿ ಅಸ್ತಿತ್ವದಲ್ಲಿರುವ ಅಸಮಾನತೆಯನ್ನು ತೆಗೆದು ಹಾಕಿಲ್ಲ ಎಂದು ಕಾನೂನಿನ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹೇಳಿತು. “ಸರ್ಕಾರವು ಆಯಾ ನ್ಯಾಯಾಲಯದ ಕೊಲಿಜಿಯಂನಿಂದ ಶಿಫಾರಸು ಮಾಡಲ್ಪಟ್ಟ ಜನರನ್ನು ಮಾತ್ರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನಾಗಿ ನೇಮಿಸುತ್ತದೆ” ಎಂದು ಹೇಳಿತು.

 ಆದಾಗ್ಯೂ, ಸಚಿವಾಲಯವು ಹೈಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುವ ನೀತಿಗಳನ್ನೂ ಸ್ಪಷ್ಟಪಡಿಸಿತು. ಸಂವಿಧಾನದ ೨೧೭ ಮತ್ತು ೨೨೪ ವಿಧಿಗಳ ಪ್ರಕಾರ ಯಾವುದೇ ಜಾತಿ ಅಥವಾ ವರ್ಗದ ವ್ಯಕ್ತಿಗಳಿಗೆ ಮೀಸಲಾತಿಯನ್ನು ಒದಗಿಸುವುದಿಲ್ಲ. ನ್ಯಾಯಾಧೀಶರ ನೇಮಕಾತಿಗೆ ಪ್ರಸ್ತಾವನೆಗಳನ್ನು ಕಳುಹಿಸುವಾಗ ಸಾಮಾಜಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿದ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸಿ ನೀಡಬೇಕು ಎಂಬುದು ಸಂವಿಧಾನದ ಆಶಯವಾಗಿದೆ.

 ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಕಳಿಸಿದ ಶಿಫಾರಸುಗಳನ್ನು ಕಾನೂನು ಸಚಿವಾಲಯವು ಪರಿಶೀಲಿಸುತ್ತದೆ. ಗುಪ್ತಚರ ಇಲಾಖೆಯು ಈ ಶಿಫಾರಸುಗಳ ಅಭ್ಯರ್ಥಿ ಹಿನ್ನಲೆಯನ್ನು ಪರಿಶೀಲಿಸುತ್ತದೆ. ನಂತರ ಹೈಕೋರ್ಟ್ ಕೊಲಿಜಿಯಂನ ಶಿಫಾರಸುಗಳನ್ನು ಒಳಗೊಂಡಂತೆ ವಿವರವಾದ ವರದಿಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂಗೆ ಅವರ ಸಲಹೆಗಾಗಿ ಕಳುಹಿಸಲಾಗುತ್ತದೆ. ನಂತರ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂಯಿಂದ ಹೆಸರುಗಳು ಅಂತಿಮಗೊಳ್ಳುತ್ತದೆ, ಕೇಂದ್ರ ಸರ್ಕಾರ ನೇಮಕಾತಿಗಳ ಅಧಿಸೂಚನೆ ಪ್ರಕಟಿಸುತ್ತದೆ.

 ಒಂದು ವೇಳೆ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವೆ ಭಿನ್ನಾಭಿಪ್ರಾಯ ಬಂದರೆ, ಸರ್ಕಾರವು ಅಂತಹ ಹೆಸರುಗಳನ್ನು ಮರುಪರಿಶೀಲನೆ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂಗೆ ವಾಪಾಸು ಕಳಿಸುತ್ತದೆ. ಆದರೆ ಅಸ್ತಿತ್ವದಲ್ಲಿರುವ ಕೊಲಿಜಿಯಂ ವ್ಯವಸ್ಥೆ ಪ್ರಕಾರ ಸುಪ್ರೀಂಕೋರ್ಟ್ನ ಕೊಲಿಜಿಯಂ ಅದೇ ಹೆಸರುಗಳನ್ನು ಪುನರ್ ಉಚ್ಚರಿಸಿದರೆ, ಮತ್ತೆ ಹೆಸರಿಸಿದರೆ ಅವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದಕ್ಕೆ ಸರ್ಕಾರವು ಬದ್ಧವಾಗಿರಬೇಕಿರುತ್ತದೆ.

 ಈ ಪರಿಸ್ಥಿತಿ ನ್ಯಾಯಾಲಯದಲ್ಲಿ ಮಾತ್ರವಲ್ಲ, ಮೀಸಲಾತಿ ಇಲ್ಲದ ಎಲ್ಲಾ ವಲಯಗಳಲ್ಲಿ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮೇಲಿನ ತಾರತಮ್ಯವು ಸಾಂಸ್ಥಿಕವಾದದ್ದು ಮತ್ತು ವ್ಯವಸ್ಥಿತವಾದದ್ದು ಆಗಿದೆ. ದೇಶ ಸ್ವತಂತ್ರಗೊAಡ ಇಷ್ಟು ವರ್ಷಗಳ ನಂತರ ಇಂದಿಗೂ ದುರ್ಬಲ ವರ್ಗಗಳು ತಮ್ಮ ಅಸ್ತಿತ್ವಕ್ಕಾಗಿ, ಪ್ರಾತಿನಿಧ್ಯಗಾಗಿ ಹೋರಾಡಲೇ ಬೇಕಾದಂತ ಪರಿಸ್ಥಿತಿ ಇದೆ. ಉನ್ನತ ನ್ಯಾಯಾಂಗದಲ್ಲಿನ ಈ ತಾರತಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನೆ ಅಣಕಿಸುತಿದೆ. ಸಂವಿಧಾನದ ಅನುಷ್ಠಾನ ಮತ್ತು ಪಾಲನೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳ ಪ್ರಧಾನ ಕರ್ತವ್ಯ. ಸಮಾಜದ ಎಲ್ಲಾ ರಂಗಗಳಲ್ಲಿ ದುರ್ಬಲ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ಕಲ್ಪಿಸಿ ಕೊಡಬೇಕು ಎಂಬುದು ಸಂವಿಧಾನದ ಆಶಯ ಆಗಿದೆ. ಕಲ್ಪಿಸಿ ಕೊಡುವುದು ಉನ್ನತ ನ್ಯಾಯಾಲಯದ ಕರ್ತವ್ಯ. ಸುಪ್ರೀಂಕೋರ್ಟ್ ಈ ತಾರತಮ್ಯ ಹೋಗಲಾಡಿಸಲು ಮುಂದಾಗಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಂಗವನ್ನು ಸರ್ಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ನಮಗೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯು ಬೇಕಿದೆ. ಸ್ವತಂತ್ರ ನ್ಯಾಯಾಂಗದೊಳಗೆ ಸಮಾನ ಪ್ರಾತಿನಿಧ್ಯವು ಬೇಕಿದೆ. ಆಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ.

ಲೇಖನ: ಮಹೇಶ್ ಕುಮಾರ್

ಅನುವಾದ: ಸಂಜಯ್

ಮೂಲ: ನ್ಯೂಸ್‌ಕ್ಲಿಕ್

Google  News WhatsApp Telegram Facebook
HTML smaller font

.

.