ಸೋತು ಹೋದೇವಾ ಎನ್ನುವ ಸಂಕಟದಲ್ಲಿ ಬೆಂದು ಉರಿದು ಹೋಗುವ ಬದುಕಿನ ಕುರಿತು

Jul 21, 2023 - 13:12
Jul 21, 2023 - 13:22
 0  60

Google  News WhatsApp Telegram Facebook

ಸೋತು ಹೋದೇವಾ ಎನ್ನುವ ಸಂಕಟದಲ್ಲಿ ಬೆಂದು ಉರಿದು ಹೋಗುವ ಬದುಕಿನ ಕುರಿತು

Janaa Akrosha News Desk.

ಸಣ್ಣ ಜ್ವರಕ್ಕೆ ಜೀವನ ಮುಗಿದು ಹೋಯಿತು,ಇನ್ನೇನು ಸತ್ತೇ ಬಿಡುತ್ತೇವೆ ಎಂದು ಆತಂಕಕ್ಕೊಳಗಾಗುತ್ತೇವೆ.ಯಾವುದೋ ಚಿಂತೆಯಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಯೋಚನೆ ಮಾಡುತ್ತೇವೆ.ವಿನಾಕಾರಣ ಯಾರನ್ನೋ ದ್ವೇಷಿಸುತ್ತೇವೆ;ಯಾರ ಜತೆಗೋ ಜಗಳ ಕಾಯುತ್ತೇವೆ.ಉನ್ನತ ಮತ್ತು ಯಶಸ್ವಿ ಬದುಕು ನಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ಲಕ್ಷ ಕಾರಣಗಳನ್ನು ಹೇಳುತ್ತೇವೆ.ಯಾಕೋ ನರಗಳು ನೋಯುತ್ತವೆ,ಕತ್ತು ನೋಯುತ್ತದೆ,ತೂಕ ಹೆಚ್ಚಾಗಿದೆ,ನಿನ್ನ ಹಾಗೆ ಸ್ಲಿಮ್ ಆಗಿದ್ದರೆ ನಾನು ಅಸಾಧ್ಯವನ್ನು ಸಾಧಿಸುತ್ತಿದ್ದೆ.ನಿನ್ನ ಹಾಗೆ ಮನೆಯಲ್ಲಿ ಪ್ರತ್ಯೇಕ ಕೋಣೆ ಇದ್ದರೆ ನೂರಕ್ಕೆ ನೂರು ಮಾರ್ಕ್ಸ್ ತೆಗೆದುಕೊಳ್ಳುತ್ತಿದೆ,ಏನ್ ಮಾಡೋದರಿ,ನಮ್ ಟೈಂ ಸರಿ ಇಲ್ಲ.ಬಡತನ ತುಂಬಾ ಕಾಡುತ್ತದೆ;ದುಡಿಯುವುದರಲ್ಲಿಯೇ ಹೈರಾಣಾಗಿ ಬಿಡುತ್ತೇವೆ,ಸಾಧನೆ ಮಾಡುವುದೆಲ್ಲಿಂದ ಬಂತು?ಎಂದು ಲಕ್ಷ ಸಬೂಬುಗಳನ್ನು ಹೇಳುತ್ತೇವೆ.ಕಾಲು ಸರಿ ಇರುತ್ತವೆ;ಕಣ್ಣು ಸರಿ ಇರುತ್ತವೆ; ಕಿವಿ ಸರಿ ಇರುತ್ತವೆ;ಆರೋಗ್ಯ ಸರಿ ಇರುತ್ತದೆ;ಆದರೆ ಬರೀ ಸಮಸ್ಯೆಗಳನ್ನು ಹುಡುಕುತ್ತಾ,ಅವುಗಳನ್ನು ಸ್ನೇಹಿತರಿಗೆ ಜನಗಳಿಗೆ ಹೇಳುತ್ತಾ ಅನುಕಂಪದ ಸುಖ”(?)ದಲ್ಲಿ ಬದುಕುತ್ತೇವೆ.ಯಾಕೆ ಹೀಗೆ? 

 

ಯಾಕೆ ಎಲ್ಲರೂ ಶ್ರೇಷ್ಠ ವ್ಯಕ್ತಿಗಳಾಗುವುದಿಲ್ಲ.ಯಾಕೆ ಎಲ್ಲರೂ ಸಾಧಕರಾಗುವುದಿಲ್ಲ?ನನ್ನಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.ಮತ್ತು ಉತ್ತರವೂ ಗೊತ್ತಿರುತ್ತದೆ,ಆದರೂ ಹೆಣದಂತಹ ಜೀವನ ಸಾಗಿಸುತ್ತೇನೆ.ತೀರಾ ಇನ್ನೇಕೆ ಜೀವನ?ಶುಗರ್ ಬಂತಲ್ಲ,ಇನ್ನೇನು ಸಾಧಿಸಬಲ್ಲೆ ಎಂದು ಖಿನ್ನತೆಗೆ ಒಳಗಾಗಿ ನಿಷ್ಕ್ರಿಯತೆಯಿಂದ ಮಲಗಿದಾಗ ನಾನು ಆಕೆಯನ್ನು ಸ್ಮರಿಸಿಕೊಳ್ಳುತ್ತೇನೆ;ಆಕೆಯ ಛಲವನ್ನು ಸ್ಮರಿಸಿಕೊಳ್ಳುತ್ತೇನೆ,ಆಕೆಯ ಹೋರಾಟದ ಬದುಕನ್ನು ಸ್ಮರಿಸಿಕೊಳ್ಳುತ್ತೇನೆ:ನನ್ನ ನರನಾಡಿಗಳಲ್ಲಿ ಪಾದರಸ ತುಂಬಿಕೊಳ್ಳುತ್ತದೆ.ನಂಗನನಗೇ ನಾಚಿಕೆಯಾಗುತ್ತದೆ;ತಲೆ ಕೊಡವಿ ಎದ್ದು ಜೀವನದಲ್ಲಿ ತೊಡಗಿಸಿಕೊಳ್ಳುತ್ತೇನೆ:ಏನೂ ಆಗಿಲ್ಲ ನನಗೆ,ಚಿಂತೆ ಮಾಡುವ ರೋಗದ ಹೊರತು ಎಂದು ಉತ್ತರ ಪಡೆದುಕೊಂಡು ಕ್ರಿಯಾಶೀಲನಾಗುತ್ತೇನೆ. 

 

Yes,she is a great woman! 

 

ಹಠಮಾರಿ,ಹಠ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟವಳು! 

 

27/06/1880ರಲ್ಲಿ ಅಮೇರಿಕಾದ ಮಸ್ಕುಂಬಿಯಾ ಅಲಬಾಮಾ ಎನ್ನುವಲ್ಲಿ ಒಂದು ಮಗುವಿನ ಜನನವಾಗುತ್ತದೆ. ಮಗು ಹೆಣ್ಣು. ಮಗು ಹತ್ತೊಂಬತ್ತನೆಯ ತಿಂಗಳಿರುವಾಗ Scarlet fever ಅಥವಾ meningitis ಎನ್ನುವ ರೋಗಕ್ಕೆ ತುತ್ತಾಗಿ ಕಣ್ಣುಗಳನ್ನು,ಕಿವಿಯನ್ನು ಕಳೆದುಕೊಳ್ಳುತ್ತದೆ.ಕಣ್ಣು ಕಿವಿ ಹೋದ ಮೇಲೆ ಶೂನ್ಯದ ಹೊರತು ಏನಿರುತ್ತದೆ?ಅದು ಜಗತ್ತನ್ನು ಅರಿಯುವುದು ಹೇಗೆ?"ಯ್ರಾಯ್ರಾ"ಎನ್ನುವ ಧ್ವನಿಯ ಹೊರತು ಅದರ ಕೊರಳಿನಿಂದ ಏನನೂ ಹೊರಡುವುದಿಲ್ಲ.ಅತ್ಯಂತ ಭಯಾನಕವಾದ ಸ್ಥಿತಿ,ಕತ್ತಲಿನ ಹೊರತು ಏನೂ ಕಾಣಿಸದು;ಗಾಡಾಂಧಕಾರ!ಸ್ಪರ್ಷದ ಹೊರತು ಏನೂ ತಿಳಿಯದು!ಕಣ್ಣು ಕಿವಿ ಎರಡೂ ಇಲ್ಲದೆ ಆ ಮಗು ಭಾಷೆ ಕಲಿಯುವುದೆಂತು?ಅದನ್ನೂ ಜೀವಮಾನವಿಡೀ ಸಾಕುವುದೆಂತು?ಊಟ ಮಾಡಲು,ವಿಸರ್ಜನೆ ಮಾಡಲು ಅರಿಯದ ಆ ಮಗು ಹೆತ್ತವರಿಗೊಂದು ದೊಡ್ಡ ಪ್ರಶ್ನೆಯಾಗುತ್ತದೆ.ಆದರೂ ಹೆತ್ತ ಕರುಳಲ್ಲವೇ?ಅದಕ್ಕೆ ಜೀವನ ರೂಪಿಸುವ ಪ್ರಯತ್ನವನ್ನು ಅವರು ಮುಂದುವರೆಸುತ್ತಾರೆ:ಅವರೂ ಕೂಡಾ ಮಹಾನ್ ಹಠವಾದಿಗಳು,ಅವರ ಹೆಸರು:ಅರ್ಥರ್ ಎಚ್.ಕೆಲ್ಲರ್ ತಾಯಿ ಕೇಟ್ ಆಡಮ್ಸ್.ಆರ್ಥರ್ ಕೆಲ ಕಾಲ ಸೈನ್ಯಾಧಿಕಾರಿಯಾಗಿ ವೃತ್ತಿ ನಿರ್ವಹಿಸಿದವರು.ನಂತರ ಪತ್ರಕರ್ತರಾಗಿ ತಮ್ಮ ಜೀವನ ಸಾಗಿಸುತ್ತಿದ್ದವರು.ಕೇಟ್ ಆಡಮ್ಸ್ ಅಪ್ಪಟ ಗೃಹಿಣಿ.ಹಠಮಾರಿ.ಅದೊಂದು ದಿನ ಮಗುವಿನ ಹುಚ್ಚಾಟ,ಮಗುವಿನ ವಿಚಿತ್ರ ನಡವಳಿಕೆಗಳಿಂದ ಬೇಸತ್ತ ಆರ್ಥರ್ ಮಗುವನ್ನು ಆಶ್ರಮವೊಂದರಲ್ಲಿ ಸೇರಿಸುವ ಪ್ರಸ್ತಾಪ ಮಾಡುತ್ತಾನೆ.ಇದಕ್ಕೆ ತೀವ್ರವಾಗಿ ವಿರೋಧಿಸಿದ ಕೇಟ್ ಆಡಮ್ಸ್ ಮಗುವಿನ ಭವಿಷ್ಯದ ಕುರಿತು ಗಂಭೀರವಾಗಿ ಯೋಚಿಸಲು ಪ್ರಾರಂಭಿಸುತ್ತಾಳೆ. 

 

ಅಮೇರಿಕಾದ ಎಲ್ಲಾ ಕಡೆಯೂ ಇರುವ ಅಂಧಮಕ್ಕಳ ಶಾಲೆಗೆ ಸೇರಿಸುವ ಪ್ರಯತ್ನ ನಡೆಸುತ್ತಾಳೆ.ಕಿವಿಯೂ ಕೇಳದ ಧ್ವನಿಯೂ ಇಲ್ಲದ ಕಣ್ಣುಗಳಿಲ್ಲದ ಕೇವಲ ಜೀವಂತ ದೇಹಕ್ಕೆ ಶಿಕ್ಷಣ ನೀಡುವುದೆಂತು?ಆಡಮ್ಸ್ ಗೆ ಯಾವ ಶಾಲೆಗಳು ದೊರೆಯುವುದಿಲ್ಲ.ಆದರೂ ಅವರ ನಿರಂತರ ಅನ್ವೇಷಣೆ ನಡೆದೇ ಇರುತ್ತದೆ.ಅವರ ಅವಿರತ ಪ್ರಯತ್ನದ ಫಲವಾಗಿ 1887ರಲ್ಲಿ ಅವರಿಗೆ ಒಬ್ಬ ಶಿಕ್ಷಕಿ ದೊರಕುತ್ತಾಳೆ.ಆಕೆಯ ಹೆಸರು ಆನ್ ಸುಲ್ಲಿವನ್! ಆಕೆಯ ತಪ್ಪಸ್ಸಿನ ಬಗ್ಗೆ ಆಕೆಯ ಸಹನೆಯ ಬಗ್ಗೆ ವಿವರಿಸಲು ನನ್ನಲ್ಲಿ ಪದಗಳಿಲ್ಲ.ಆಕೆಯ ನಿರಂತರ ಶ್ರಮ,ತಾಳ್ಮೆ ಕಲಿಸುವ ಉಮೇದಿ ಅನನ್ಯವಾದದ್ದು.ಆ ಕಲ್ಲಿನಂತಹ ಕೊರಡಿನಂತಹ ಏಳು ವರ್ಷದ ಮಗುವಿಗೆ ನೀರಿನ ಅರಿವು ಮೂಡಿಸಿದಾಗ ಟೀಚರ್ ಸುಲ್ಲಿವನ್ ಅಕ್ಷರಶಃ ಅತ್ತು ಬಿಟ್ಟಿದ್ದಳು;ಅದು ಆಕೆಯ ಗೆಲುವಿನ ಮೊದಲ ದಿನ.ಸ್ಪರ್ಷದಿಂದ ಮಗು ಭಾಷೆ ಕಲಿಯುವುದು ವಸ್ತುಗಳನ್ನು ಗುರುತಿಸುವುದು ಪ್ರಾರಂಭಿಸತೊಡಗಿತ್ತು.ಮಗು ಅಮ್ಮಾ ಎನ್ನಲು ಅಪ್ಪ ಎನ್ನಲು ಪ್ರಯತ್ನಿಸುತ್ತಿರುವಾಗ ಆರ್ಥರ್ ಮತ್ತು ಕೇಟಲ್ ಆಡಮ್ಸ್ ಮಗುವನ್ನು ಎದೆಗವಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು,ಟೀಚರ್ ಆನ್ ಸುಲ್ಲಿವನ್ ಅಲ್ಲೇ ಇದ್ದ ಕಟ್ಟೆಯೊಂದರ ಮೇಲೆ ಕುಳಿತು ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಂಡಿದ್ದಳು.ಮೈಡೀಯರ್ ಫ್ರೇಂಡ್ಸ್,ನಾನು ಹೇಳ ಹೊರಟಿದ್ದು- 

 

ಹೆಲೆನ್ ಆಡಮ್ಸ್ ಕೆಲ್ಲರ್ ಕುರಿತು! 

 

ನೀವು ಬಿಡುವಿದ್ದಾಗ ನಿಮ್ಮ ಮೊಬೈಲಿನ ಯೂಟ್ಯೂಬ್‌ನಲ್ಲಿ ಹೆಲೆನ್ ಕೆಲ್ಲರ್ ಎಂದು ಟೈಪ್ ಮಾಡಿ ನೋಡಿ.ಆಕೆಯ ಜೀವನ ಹೋರಾಟದ ಕುರಿತು ತುಂಬಾ ವಿಡಿಯೋಗಳು ದೊರೆಯುತ್ತವೆ.the story of My life ಆಕೆಯ ಚೀವನ ಚರಿತ್ರೆಯನ್ನು ಆಧರಿಸಿ ರೂಪಿಸಿದ ಸಿನೆಮಾ. ಮತ್ತು the story of my life ಆಕೆಯ ಜನಪ್ರಿಯ ಪುಸ್ತಕ.ಒಬ್ಬ ಅಂಧ ಮತ್ತು ಕಿವುಡು ಹುಡುಗಿ ಬರೀ ಸ್ಪರ್ಷ ಮಾತ್ರದಿಂದ ಬಿಎ ಡಿಗ್ರಿ ಪಡೆದು ಹನ್ನೆರಡು ಶ್ರೇಷ್ಠ ಗ್ರಂಥ ಬರೆಯುತ್ತಾಳೆ ಮತ್ತು ಜಗತ್ತಿಗೆ ಆದರ್ಶವಾಗುತ್ತಾಳೆ ಎಂದರೆ ಸುಮ್ಮನೆ ಮಾತಲ್ಲ.ಹೆಲೆನ್ ಕೆಲ್ಲರ್ ಜೀವನ ಆಧರಿಸಿ ಅಮಿತಾಭ್ ರಾಣಿ ಮುಖರ್ಜಿ ನಟಿಸಿ ನಿರ್ಮಿಸಿದ ಚಿತ್ರವೊಂದಿದೆ.ಅದೇ block!ಬಿಡುವಿದ್ದಾಗ ಒಮ್ಮೆ ನೋಡಿ. 

 

ಏಳು ವರ್ಷದ ಈ ಕಿವುಡು ಮತ್ತು ಕುರುಡು ಬಾಲಕಿಗೆ ಕಲಿಯುವ ಆಸಕ್ತಿ ಹೇಗೆ ಹುಟ್ಟಿಕೊಂಡಿತು ಎಂದರೆ ಟೀಚರ್ ಆನ್ ಸುಲ್ಲಿವನ್ ಬೇಸತ್ತು ಹೋಗುತ್ತಿದ್ದರು.ಕೆಲ್ಲರ್ ಆಕೆಗೆ ತುಂಬಾ ಪೀಡಿಸುತ್ತಿದ್ದಳು.ಅಂದಹಾಗೆ ಈ ಟೀಚರ್ ಆನ್ ಸುಲ್ಲಿವನ್ ಸ್ವತಃ ಕಿವುಡಿಯಾಗಿದ್ದಳು.1886ರಲ್ಲಿ ಕೆಲ್ಲರ್‌ಳ ತಾಯಿ ಚಾರ್ಲ್ಸ್ ಡಿಕನ್ಸ್ ಅವರ ಅಮೆರಿಕನ್ ನೋಟ್ಸ್‌ನಲ್ಲಿ ಉಲ್ಲೇಖಿತವಾದ ‘ಲಾರಾ ಬ್ರಿಡ್ಜ್ ಮನ್ಎಂಬಾಕೆಯ ಶಿಕ್ಷಣದ ಕುರಿತು ಉತ್ತೇಜಿತಗೊಂಡು ತಮ್ಮ ಮಗಳನ್ನು ಡಾಕ್ಟರ್‌ ಜೆ.ಜುಲಿಯನ್ ಚಿಗೋಲ್ಮ್ ಹತ್ತಿರ ಕರೆದೊಯ್ದಾಗ ಡಾಕ್ಟರ್ ಜುಲಿಯನ್ ಅಂದಿನ ದಿನಗಳಲ್ಲಿ ಕಿವುಡ ಮಕ್ಕಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಅಲೆಗ್ಸಾಂಡರ್ ಗ್ರಹಾಂ ಬೆಲ್‌ರ ಬಳಿಗೆ ಕಳಿಸಿದರು.ಅಲೆಗ್ಸಾಂಡರ್ ಪೆರ್ಕಿನ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್‌ಗೆ ಕಳಿಸಿಕೊಟ್ಟರು.ಆ ಇನ್ಸ್ಟಿಟ್ಯೂಟ್‌ನ ನಿರ್ದೇಶಕರಾದ ಮೈಕಲ್ ಆಂಗಾನಿಸ್ ತಮ್ಮ ಹಳೆಯ ವಿದ್ಯಾರ್ಥಿಯಾದ ಕಿವುಡು ಇಪ್ಪತ್ತು ವರ್ಷದ ಆನ್ ಸುಲ್ಲಿವನ್‌ಳನ್ನು ಸೂಚಿಸಿದರು,ಸ್ನೇಹಿತರೆ ಅಂದು ಜೊತೆಗೂಡಿದ ಕೆಲ್ಲರ್ ಮತ್ತು ಆನ್ ಸುಲ್ಲಿವನ್ ಸರಾಸರಿ ನಲವತ್ತೊಂತ್ತು ವರ್ಷಗಳ ಸುದೀರ್ಘವಾದ ಜೀವಿತಾವಧಿಯನ್ನು ಜೊತೆಯಾಗಿ ಕಳೆದರು.ಜೀವಿತಾವಧಿಯ ಒಂದು ಪ್ರಮುಖ ಘಟ್ಟ ಎಂದರೆ ಕೆಲ್ಲರ್ 1900ರಲ್ಲಿ ರಾಡ್ ಕ್ಲಿಪ್ ಕಾಲೇಜು ಸೇರಿ 1904ರಲ್ಲಿ  ಕಲಾ ವಿಭಾಗದಲ್ಲಿ ಪದವಿ ಪಡೆಯುತ್ತಾಳೆ.ಜೀವನವನ್ನು ಒಂದು ತಪ್ಪಸ್ಸಿನಂತೆ ಸಾಗಿಸಿದ ಈ ಮಹಾನ್ ಸಾಧಕಿ ನಮ್ಮ ಜಡವನ್ನು ತೊಡೆದು ಹಾಕದೆ ಇರುತ್ತಾಳೆಯೇ? 

 

ಹೆಲೆನ್ ಕೆಲ್ಲರ್ ನಂತರದ ದಿನಗಳಲ್ಲಿ ಅದ್ಹೇಗೆ ಆಕ್ಟಿವ್ ಆಗಿ ಹೋದಳು ಎಂದರೆ ಆಕೆ ತನ್ನ ಜೀವನವನ್ನು ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿಕೊಂಡಳು.ಅಂಗವೈಕಲ್ಯ ಕುರುಡು,ಕಿವುಡು ಮಕ್ಕಳಿಗೆ ಸ್ಪೂರ್ತಿಯಾಗುವಂತಹ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು.ತುಟಿಗಳ ಕದಲಿಕೆಗಳಿಂದ ಬೇರೆಯವರ ಮಾತು ಅರಿಯುತ್ತಿದ್ದ ಈ ಸಾಧಕಿ ತಾನೂ ತುಟಿಗಳನ್ನು ಕದಲಿಸುವುದರ ಮೂಲಕ ಮಾತು ಕಲಿತಳು.ಮಾತು ಕಲಿತಾದ ಮೇಲೆ ಆಕೆ ಸುಮ್ಮನಿರಲಿಲ್ಲ.ಸರಾಸರಿ ಅರವತ್ತು ದೇಶಗಳಿಗೆ ಭೇಟಿ ನೀಡಿ ಅಂಗವಿಕಲ ಮತ್ತು ಶೋಷಿತ ಜನರ ಹಕ್ಕುಗಳಿಗಾಗಿ ಹೋರಾಡಿದಳು.ಸುಮಾರು ಹನ್ನೆರಡು ಶ್ರೇಷ್ಠ ಗ್ರಂಥಗಳನ್ನು ಬರೆದು ಲೇಖಕಿಯಾದ ಕೆಲ್ಲರ್ ಅಮೇರಿಕಾದ ಸೆನೆಟ್‌ನ್ನೂ ಪ್ರವೇಶಿಸಿದರು.ರಾಜಕಾರಣಿಯಾಗಿಯೂ ಅಧಿಕಾರ ಹೊಂದಿದ ಆಕೆ ಅದ್ಬುತವಾಗಿ ಕೆಲಸ ಮಾಡಿದರು.ನೆನಪಿರಲಿ:ಬರಹಗಾರ್ತಿ,ರಾಜಕೀಯ ಕಾರ್ಯಕರ್ತೆ,ಉಪನ್ಯಾಸಕಿ,ಸಾಮಾಜಿಕ ಕಾರ್ಯಕರ್ತೆ,ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಶ್ರಮಿಸಿ ಮಾನವತಾವಾದಿ ಎಂದು ಖ್ಯಾತಿ ಗಳಿಸಿದರು. 

 

ಪ್ರಪಂಚ ಅರಿಯುವ ಮುನ್ನ ಶೈಶವಾವಸ್ಥೆಯಲ್ಲಿ ಕಣ್ಣು,ಕಿವಿ ಕಳೆದುಕೊಂಡ ಮಗು ಕೇವಲ ಸ್ಪರ್ಷಜ್ಞಾನದ ಮುಖಾಂತರ ತನ್ನನ್ನು ಇಡೀ ಪ್ರಪಂಚವೇ ನೋಡುವಂತೆ ಮಾಡುತ್ತದಲ್ಲಾ,ಇದೇನು ಕಡಿಮೆ ಸಾಧನೆಯಾ?king(1891),the story of my life 1903),the world I love in(1908),my religion (1927)ಆಕೆ ಬರೆದ ಪುಸ್ತಕಗಳು. 

 

ಈ ಕಥೆ ಓದಿದ ಮೇಲೂ ನಿಮ್ಮಲ್ಲಿ ಇನ್ನೂ ನೆಪಗಳಿದ್ದರೆ,I can't,ನೀವು ಮನುಷ್ಯರಲ್ಲ!ನನ್ನೂ ಸೇರಿ... 

 

                                    ಲಕ್ಷ್ಮೀಕಾಂತ ನಾಯಕ

 

Google  News WhatsApp Telegram Facebook
HTML smaller font

.

.