ಧಣಿಯ ಒಡಲ ಸಂಕಟವೂ ಈರನ ಕೂತೂಹಲವೂ

Jul 21, 2023 - 08:26
Jul 21, 2023 - 08:29
 0  18

Google  News WhatsApp Telegram Facebook

ಧಣಿಯ ಒಡಲ ಸಂಕಟವೂ ಈರನ ಕೂತೂಹಲವೂ

Janaa Akrosha News Desk.

ಧಣಿಯ ಒಡಲ ಸಂಕಟವೂ ಈರನ ಕೂತೂಹಲವೂ... 

 

ಅಲೆಲೆ ಇವ್ನೌನ್’ ಅಂತ ಧಣಿ ಅನ್ನುವಷ್ಟರಲ್ಲಿ ಈರ ಬಾಟಲಿ ಸರಾಯಿಯನ್ನು ಮೊಲ ಉದ್ದದ ಗಿಲಾಸಿಗೆ ಸುರಿದು ‘ಹೀ ಹೀ’ಅಂತ ಹಲ್ಲು ಕಿಸಿದು ಕುಳಿತುಕೊಂಡಿದ್ದ.ಧಣಿ ಅತಿಯಾಗಿ ಕುಡುದು ಪರಮಾತ್ಮನ ಹತ್ ಹತ್ತಿರಕ್ಕೆ ಹೋಗಿ ಬಂದರೆ ಮಾತ್ರ ಆತನಿಗೆ ಲಾಭವಾಗುತ್ತಿತ್ತು;ಧಣಿಗೆ ಸರಾಯಿ ಸುರಿಯುವುದರಲ್ಲಿನ ಸುಖ ಅವನೊಬ್ಬನೆ ಬಲ್ಲ. ‘ಮೂರೊತ್ತುಲ್ವಾಳೆನ ತಕಾ ಕುಂತು ರ‍್ತಿಯಲ್ಲಾ,ಹಿಂಗಾದ್ರ ಸಂಸಾರ ಹೆಂಗ್ ಮಾಡಬೇಕು ನಾನು’ಅಂತ ಮನೆಯಲ್ಲಿ ಹೆಂಡತಿ ಸ್ವಾಟಿಗೆ ತಿವಿದು ಹೇಳುವಾಗಲೂ ಅವನು ‘ಹೀ ಹೀ ಹೀ’ಅಂತ ಮುಸಿನೊಳಗೆ ನಕ್ಕು ಕೌದಿಯೊಳಗೆ ಜಾರಿಕೊಳ್ಳುತ್ತಿದ್ದ.ಧಣಿಗೆ ಸರಾಯಿ ಸುರಿಯುವುದರಲ್ಲಿ ದೊರೆಯುವ ಸುಖ ಲೋಕಕ್ಕೆ ಹೇಳಿದರೆಲ್ಲಿ ತಾನು ಸುಖ ವಂಚಿತನಾಗಿ ಬದುಕಬೇಕಾದೀತು ಎನ್ನುವ ದಿಗಿಲಿನಲ್ಲಿರಹಸ್ಯವನ್ನು ಪರಮ ಪುಣ್ಯವೆನ್ನುವಂತೆ ಕಾಪಾಡಿಕೊಂಡಿದ್ದ.ಮನೆಯೊಳಗೆ ಹೆಂಡಿರು ಮಕ್ಕಳು ಹಸಿದು ಕುಳಿತಿದ್ದಾರೆ ಒಂದ್‌ಹತ್ತು ರೂಪಯಿ ಕೊಡು ಗೌಡಾ ಎನ್ನುವ ಅವನ ಶತಮಾನದ ಬೇಡಿಕೆಯನ್ನು ಈಡೇರಿಸದ ಧಣಿ ಸರಾಯಿ ಸುರಿಯುವ ಕಾಯಕಕ್ಕೆ ಹೊಟ್ಟೆ ತುಂಬಾ ನೂರಾರು ರೂಪಾಯಿಯ ಸರಾಯಿ ಕುಡಿಸುತ್ತಿದ್ದ;ಎದೆ ತಿದಿಗಳು ತುಂಬಿ ಹೋಗುವಂತೆ ಬೀಡಿಯ ದಾನ ಮಾಡುತ್ತಿದ್ದ.ಈರನ ಮೂಲಭೂತ ಅಗತ್ಯಗಳನ್ನು ಪೂರೈಸುವವನಾದ ಧಣಿ ಈರನ ಪಾಲಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದ.ಪರಮ ಪಾಮರಳಾದ ಹೆಂಡತಿಗೆ ಈ ರಹಸ್ಯವನ್ನು ಹೇಳಿ ತಾನು ಪರಮ ಸುಖದಿಂದ ಈ ಜನ್ಮದಲ್ಲಿ ವಂಚಿತನಾಗುವುದು ಉಂಟೆ?ಹಿಂಗಾಗಿ ಈರಹೀ ಹೀ ಹೀ’ಎನ್ನುವ ಬಲು ಅಮೂಲ್ಯವಾದ ಉತ್ತರವನ್ನು ಕರಗತ ಮಾಡಿಕೊಂಡಿದ್ದ. 

ಅಲ್ಲೆಲೆ ನಿನ್ನೌನು,ನನ್ನ ಕುಡಿಸಿ ಕುಡಿಸಿ ಸಾಯಹೊಡೆಯಬೇಕು ಅಂದುಕೊಂಡಿಯೇನು?”ಅಂತ ಧಣಿ ಅಂದರೆ “ಯಪ್ಪಾ,ನೀ ಸತ್ತ ಮೇಲೆ ನಾನಿರ್ತೀನೇನು?”ಎನ್ನುವ ಜಾಣ್ಮೆಯ ಉತ್ತರವನು ಅವನು ನೀಡುವನು. 

ಇನ್ನೂ ಸೂರ್ಯ ಮುಳಗಲಿಕ್ಕೆ ಹೆಚ್ಚೆಂದರೆ ಒಂದು ತಾಸಿತ್ತೇನೋ,ದಿನವಿಡೀ ಬೆಳಗಿದ ಶಿಶಿರದ ಸೂರ್ಯ ಪಶ್ಚಿಮದಲ್ಲಿ ಇಳಿಮುಖವಾಗಿ ಕೆಂಪಾನ್ನ ಕೆಂಪಗಾಗಿದ್ದ.ಹಕ್ಕಿಗಳು ಮರಗಳಿಗೆ ಹಿಂತಿರುಗಿ ತಮ್ಮ ತಾವನ್ನು ಹುಡುಕಿಕೊಳ್ಳುತ್ತಿರುವಂತೆ ಮೇಯಲಿಕ್ಕೋದ ದನಕರುಗಳು ತಮ್ಮ ತಮ್ಮ ಮನೆಗಳಿಗೆ ಹಿಂದುರುಗುತ್ತಿದ್ದವು’ಕೆಂಪು ಸೂರ್ಯ ತನ್ನ ಪ್ರಖರತೆಯನ್ನು ಕಳೆದುಕೊಂಡ ಪರಿಣಾಮ ಅಗೋಚರ ದಿಕ್ಕುಗಳಿಂದ ಮಬ್ಬು ನಿಧಾನವಾಗಿ ಇಳಿಯತೊಡಗಿತ್ತು.ಮಳೆ ಕಾಣದೆ,ಬೆಳೆ ಕಾಣದೆ ಹಳ್ಳಿಯ ಕೃಷಿ ಕಾರ್ಮಿಕರೆಲ್ಲಾ ಕಂಗಾಲಾಗಿ ದೇಶಾಂತರ ಹೊರಟು ಹೋಗಿ ಹಳ್ಳಿಗಳು ಬಿಕೋ ಎನ್ನುತ್ತಿರುವ ಈ ಸಂದರ್ಭದಲ್ಲಿ ‘ಬಿರುಗಾಳಿಗೆ ಮೋಟು ಮರವೆ ಮಿಂಡ’ ಎನ್ನುವಂತೆ ಊರಿನಲ್ಲಿ ಧಣಿಯಂಥವರು,ಈರನಂಥವರು ಮಾತ್ರವೇ ಉಳಿದಿದ್ದರು. 

ಧಣಿ ಈರ ಮೊಳ ಉದ್ದದ ಗಿಲಾಸಿಗೆ ಸುರಿದ ಹಳದಿ ಬಣ್ಣದ ಅಗ್ಗದ ದ್ರವವನ್ನು ಶತಮಾನಗಳ ದಾಹ ತೀರಿಸಿಕೊಳ್ಳುವವನಂತೆ,ಓಲಂಪಿಕ್ಸ್ ಪಂದ್ಯಾಳಿಗೆ ಸಿದ್ದನಾಗುವ ಕ್ರೀಡಾಪಟುವಿನಂತೆ ವಿಶ್ರಾಮ ಕೊಡದೆ ಒಂದೇ ಗುಟಿಕೆಗೆ ಕುಡಿಯುವುದನ್ನು ನೋಡಿ,ಹಳೆಯ ಎಂದಿನಂತಿನ ಹೊಗಳಿಕೆ ಪದವನು ಬಳಸಿ “ಭಲೇ ಭಲೇ!!ನನ್ನಪ್ಪಾ!ಸುತ್ತೇಳು ಲೋಕದಲಿ ನಿನ್ನಂಥಹ ಶೂರಧೀರರಿಲ್ಲ!”ಎಂದನು.ಈ ಮಾತಿಗೆ ಧಣಿಯ ಕುಂಡಿಯೇನು ಉಬ್ಬುವುದಿಲ್ಲ;ಆದರೂ ಆಂತಂರ್ಯರದಲ್ಲಿ ಹೇಳಲರಿಯದ ಸುಖವನು ಧಣಿ ಅನುಭವಿಸುವನು. 

ಧಣಿ ಇವತ್ತು ಮುಂಜಾನೆಯಿಂದಲೇ ತೀರ್ಥ ಸಮಾರಾಧನೆ ಪ್ರಾರಂಭಿಸಿದ್ದನು;ಹೆಚ್ಚು ಕಡಿಮೆ ಇದು ಆತನ ದಿನಂಪ್ರತಿಯ ಕಾಯಕವೇ ಆಗಿತ್ತು.ಆಗೊಮ್ಮೆ ಹೀಗೊಮ್ಮೆ ಹಬ್ಬ ಹರಿದಿನಗಳಲ್ಲಿಕಾಯಕಕ್ಕೆ ಮನೆಯ ಹೆಂಡಿರು ಮಕ್ಕಳು ಅಡ್ಡಿಪಡಿಸುವುದಂತೂ ಇತ್ತು.ಹೆಂಡಿರು ಮಕ್ಕಳ ಮಾತು ಕೇಳಿಕ್ಕೇನು ಆತ ಹೇಡಿಯೇ?ಮನೆಗೆ ಬಂದ ನೆಂಟರಿಗೆ ಧಣಿ ಹೆದರುವುದುಂಟು;ಅದೊಂದು ಈ ಲೋಕದ ವಿಶ್ಮಯ.ಕುಡಿಯುತ್ತಾ ಕುಡಿಯುತ್ತಾ ಪಿತ್ರಾರ್ಜಿತ ಆಸ್ತಿಯ ಕೆಲವೊಂದು ಹೊಲಗಳನ್ನು ಆತ ಕರಗಿದ್ದನು.ಅದೊಂದು ಮಹಾ ಸಾಧನೆಯಾಗಿ ಧಣಿ ಎಂಬ ಬಿರುದು ಧರಿಸಿದ್ದನು.ಕುಡಿಯದಿದ್ದರೆಲ್ಲಿ ತಾನು ಧಣಿಯ ಪಟ್ಟವನ್ನು ಕಳೆದುಕೊಂಡೇನು ಮತ್ತು ಸಣ್ಣ ವಯಸ್ಸಿನ ಹೆಂಡತಿಯ ಬಾಯಿಯಿಂದ ಬರುವ ಬ್ರಹ್ಮಾಸ್ತ್ರಗಳಿಗೆ ಬಲಿಯಾದೇನು ಎನ್ನುವ ಆತಂಕವನ್ನು ಆತ ಒಳಗೊಳಗೆ ಅನುಭವಿಸುತ್ತಿದ್ದದ್ದನ್ನು ಇವತ್ತಿನವರೆಗೂ ಈರನಿಗೂ ಹೇಳಿರಲಿಲ್ಲ.ಈರ ಪ್ರತಿದಿನವೂ ಧಣಿಯ ಕುಡಿತದ ಹಿಂದಿರುವ ರಹಸ್ಯವನ್ನು ಕಂಡುಹಿಡಿಯುವ ಹಿನ್ನೆಲೆಯಲ್ಲಿ ಪ್ರಶ್ನೆಗಳನ್ನು ಹಾಕುತ್ತಲೇ ಇದ್ದ.ಆ ರಹಸ್ಯ ಇನ್ನೇನು ಹೊರ ಬಂತು ಎನ್ನುವಷ್ಟರಲ್ಲಿ ಧಣಿ ಪರಮಾತ್ಮನ ಹತ್ತಿರಕ್ಕೆ ಹೋಗಿ ಗೊರಕೆಯ ಢಮರುಗ ನಾದ ಪ್ರಾರಂಭಿಸಿ ಬಿಡುತ್ತಿದ್ದ.ಸುಮಾರು ವರ್ಷಗಳಿಂದ ಈರ ನಿರಾಶೆಯನ್ನು ಅನುಭವಿಸುತ್ತಾ ಮನೆಯ ಕಡೆಗೆ ತೆರಳುತ್ತಿದ್ದ.ಇವತ್ತೂ ಈರ- 

ಅಲ್ಲೆಪ್ಪಾ,ನೀ ಹಿಂಗ್ಯಾಕ ಕುಡಿತಿದಿ,ಬಂಗಾರದಂತ ಹೆಂಡ್ತಿ ಆಳ;ಬಂಗಾರದಂತಹ ಮಕ್ಕಳಾರ,ಬಂಗಾರದಂತಹ ಸಂಸಾರ ಆದ,ಬಂಗಾರದಂತಹ ಆಸ್ತಿ ಆದ,ನೀವು ಯಾವ ದುಃಖ ಮರಿಲಿಕ್ಕೆ ಕುಡಿಬೇಕೆಪ್ಪೊ ಧಣಿ?” ಅಂತ ರಾಗವಾಗಿ ಕೇಳಿದನು,ಧಣಿಗಿನ್ನೂ ಅರಿವಿತ್ತು;ದಿನಂಪ್ರತಿಯ ಅಳತೆಯ ಕ್ರಮಸಂಖ್ಯೆಯಲ್ಲಿ ಧಣಿ ಕುಡಿದಿರಲಿಲ್ಲವಾದ್ದರಿಂದ-“ನಿಮ್ಮೌವ್ನ,ಅದ್ನೆಲ್ಲಾ ನೀನು ಕೇಳಬಾರದು,ನಾನು ಹೇಳಬಾರದು!ಸುಮ್ನೆ ಮುಚ್ಕೊಂಡು ಕುಡಿ!”ಎಂದು ಗದರಿದನು. 

ಸೂರ್ಯ ತಾಯ ಗರ್ಭ ಸೇರಿದಂತೆ ಕತ್ತಲು ತನ್ನ ಪ್ರಾಬಲ್ಯ ತೋರಿಸುತ್ತಿರುವಂತೆ,ರೈತನ ಕಡು ಮೂರ್ಖತನ ಮತ್ತು ದುರಾಸೆಯ ಪ್ರತಿಕೂಲಕ್ಕೆ ಭೂ ತಾಯಿ ಭತ್ತದ ಗದ್ದೆಯಾಗಿ ಬದಲಾದ ಪರಿಣಾಮ ಕಲಿಯುಗದ ರಕ್ತಬೀಜಾಸುರನ ಸಂತತಿಯಂಥಹ ಸೊಳ್ಳೆಗಳ ಹಿಂಡು ಝೀಗುಟ್ಟುವ ನಿನಾದದಲಿ ಧಾವಿಸಿ ಬರುತ್ತಿರುವಂತೆ ಧಣಿಯ ಮನೆ ಆಳು ಫೀರ(ಸ್ವಜಾತಿಯವನು) “ಕಾಕ,ಇನ್ನು ಎಷ್ಟೊತ್ತಪಾ?ನಡಿ ಮನಿಗೆ”ಎಂದು ಕಂಕುಳಳೊಗೆ ಕೈ ಹಾಕಿ ಮೆಲಕ್ಕೆಬ್ಬಿಸುತ್ತಿರುವಂತೆ ಈ ಕಥೆಯ ಒಂದನೆ ಅಂಕ ಮುಕ್ತಾಯವಾಯಿತು. 

 

“ಶತಮಾನಗಳ ಹಿಂದೆ ಅಣ್ಣ ಬಸವಣ್ಣ ಕ್ರಾಂತಿ ಮಾಡದಿದ್ದರೆ ಇವತ್ತು ಲಿಂಗಾಯತರು ಎಲ್ಲಿರುತ್ತಿದ್ದರು?ಜಾತಿ ವ್ಯವಸ್ಥೆಯ ವಿರುದ್ಧ ಅವನು ಸಿಡಿದೆದ್ದು ಇಡೀ ಸಮಾವನ್ನು ಸಮ ಸಮಾಜ ಮಾಡಬೇಕು ಎಂದು ಯೋಚಿಸಿದಾಗಲೇ ಲಿಂಗಾಯತರು ಹುಟ್ಟಿಕೊಂಡಿದ್ದು!ಲಿಂಗ ಧರಿಸಿದವರು ಮಾತ್ರ ಪರಿಶುದ್ಧರು;ಲಿಂಗವಿಲ್ಲದವರು ಅಶುದ್ಧರು,ಅಸ್ತೃಶ್ಯರು ಎನ್ನುವ ಪರಿಕಲ್ಪನೆ ಇರುವ ಆ ಕಾಲದಲ್ಲಿ ಎಲ್ಲಾ ಜಾತಿಯವರನ್ನು ಶೂದ್ರರನ್ನು ಕರೆ ಕರೆದು ಅಣ್ಣ ಲಿಂಗ ಧಾರಣೆ ಮಾಡಿದರು;ಕಮ್ಮಾರನು ಲಿಂಗಾಯತನಾದ,ಚಮ್ಮಾರನು ಲಿಂಗಾಯತನಾದ!ಸಮಾಜದ ಎಲ್ಲಾ ಕೀಳು ವರ್ಗಗಳು ಲಿಂಗ ಧಾರಣೆ ಮಾಡಿಕೊಂಡು ಲಿಂಗಾಯತರಾದರು.ಆದರೆ ದುರದೃಷ್ಟವೇನೆಂದರೆ ಇಂದಿನ ಲಿಂಗಾಯತರು ಅಸ್ಪೃಶ್ಯತೆಯನ್ನು ಆಚರಿಸುತ್ತಾ ಬಸವತತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ,ಇದು ಸರಿಯಲ್ಲ!ನಾವಿದನ್ನು ತೀವ್ರವಾಗಿ ಖಂಡಿಸಬೇಕು.ಇಲ್ಯಾರೂ ಮೇಲಲ್ಲ;ಇಲ್ಯಾರೂ ಕೀಳಲ್ಲ!”ಎಂದು ಬಸವರುದ್ರ ಮಾಹಾಜ್ಞಾನಿಗಳು ಮಾತನಾಡಿ ಮಾತು ಮುಗಿಸಿದಾಗ ಅಲ್ಲಿ ಸೇರಿದಂತಹ ಕೆಳ ವರ್ಗದ ಅಸ್ಪೃಶ್ಯ ಜನ ವೇದಿಕೆ ನಡುಗಿ ಕುಸಿದು ಬೀಳುವಂತೆ ಕರಾಡತನ ಮಾಡಿದರು.ಇಷ್ಟು ಮಾತಾಡುವಷ್ಟರಲ್ಲಿ ಅವರ ಮೂತ್ರಕೋಶ ತುಂಬಿಕೊಂಡಿದ್ದು ಧೋತರದಲ್ಲಿಯೇ ಹೋಗುವ ಸ್ಥಿತಿಗೆ ಬಂದಿತ್ತು.ನೆರೆದಂತಹ ಜನಗಳು ಭೇಶ್ ಭೇಶ್ ಎನ್ನುತ್ತಿರುವಂತೆ ಅವರು ಅವಸರದಿ ವೇದಿಕೆ ಬಿಟ್ಟಿಳಿದು ಓಡಿ ಹೋದರು.ವೇದಿಕೆಯ ಮೇಲಿರುವ ಗಣ್ಯರಿಗೆ ಜ್ಞಾನಿಗಳ ಅವಸರದ ಮರ್ಮ ಅರ್ಥವಾಯಿತು.ಅನೇಕ ವೇದಿಕೆಗಳಲ್ಲಿ ಅವರು ಜ್ಞಾನಿಗಳ ಅವಸರವನ್ನು ಅರ್ಥ ಮಾಡಿಕೊಂಡಿದ್ದರು.ಜ್ಞಾನಿಗಳನ್ನು ಅರ‍್ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.ಇದಾದ ಮೇಲೆ ಮಹಿಳಾ ಭಾಷಣಕಾರರೊಬ್ಬರಿಗೆ ಮಾತಾಡುವ ಅವಕಾಶ ಲಭ್ಯವಾಯಿತು(ವೇದಿಕೆಗಳನ್ನು ಹುಟ್ಟು ಹಾಕುವುದೇಯಮ್ಮ).ಆಕೆ ಮಾತನ್ನಾಡುತ್ತಾ- 

“ಎಲ್ಲಿ ಹೆಣ್ಣಿಗೆ ಈ ಸಮಾಜ ಮುಕ್ತ ಸ್ವಾತಂತ್ರ್ಯವನ್ನು ಕೊಡುವುದಿಲ್ಲವೋ ಅಲ್ಲಿಯವರೆಗೆ ಈ ಸಮಾಜ ಏಳಿಗೆಯನ್ನು ಕಾಣುವುದಿಲ್ಲ.ಪುರುಷರು ಹೆಣ್ಣಿಗೆ ಸ್ವಾತಂತ್ರ್ಯ ನೀಡುವವರೆಗೆ ನಾವ್ಯಾಕೆ ಕಾಯಬೇಕು?ಇವತ್ತಿನ ಮಹಿಳೆ ಬುದ್ದಿವಂತಳಿದ್ದಾಳೆ;ಆಕೆ ಟಿವಿ ನೋಡುತ್ತಾ ಎಲ್ಲವನ್ನೂ ಕಲೆತುಕೊಂಡಿದ್ದಾಳೆ.ಈ ಬುದ್ದಿವಂತ ಮಹಿಳೆ ಗಂಡಸಿನ ದಾಸ್ಯದಿಂದ ಹೊರಬರಬೇಕು;ಸಂಪ್ರದಾಯದ ಬೇಲಿಯನ್ನು ಆಕೆ ಹಾರಬೇಕು;ಪಾತಿವ್ರತ್ಯ ಎನ್ನುವ ಸಂಕೋಲೆಯಿಂದ ಆಕೆ ಮುಕ್ತಳಾಗಬೇಕು;ಗಂಡು ಹಲವಾರು ಮಹಿಳೆಯರನ್ನು ಹೊಂದಬಹದುದಾರೆ ಹೆಣ್ಣೇಕೆ ಹೊಂದಬಾರದು?”ಎನ್ನುವ ಪ್ರಶ್ನೆಯೊಂದಿಗೆ ಆಕೆ ಮಾತು ಮುಗಿಸಿದಳು.ಅತ್ತ ಅವಸರಕ್ಕೆ ಹೊರಟು ಹೋಗಿದ್ದ ಜ್ಞಾನಿಗಳ ಅವಸರವೂ ಮುಗಿದಿತ್ತು.ಎಲ್ಲರೂ ಪರಸ್ಪರ ತಾವು ಮಾತಾಡಿರುವದರ ವಿಚಾರದ ಘನತೆಯ ಕುರಿತು ಭಲೆ ಭಲೆ ಎನ್ನುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಕಾರ್ಯಕ್ರಮವನ್ನು ಮುಗಿಸಿದರು.ಬಂದಂಥಹ ಮಂದಿ ನಾನಾ ಮಾತಾಡುತ್ತಾ ತಮ್ಮ ಮನೆಯ ಕಡೆಗೆ ಸಾಗುವುದರ ಮೂಲಕ ಈ ಕಥೆಯ ಎರಡನೇಯ ಅಂಕವೂ ಸಮಾಪ್ತಿಯಾಗುವುದು. 

 

ಅಂದಿಗೂ ಇಂದಿಗೂ ಹೋಲಿಸಲಾಗಿ ಇವತ್ತಿನ ಕಾಲ ತುಂಬಾ ಅದ್ಬುತವಾದದ್ದು ಜ್ಞಾನಿಗಳೆ,ಅಂದಿನ ಮಹಿಳೆಗೆ ಸ್ವಾತಂತ್ರ್ಯ ಎನ್ನುವುದೇ ಇರಲಿಲ್ಲ.ಈ ಮದುವೆಯ ವಿಷಯಕ್ಕೆ ಬಂದರೆ ಹೆಣ್ಣು ಅಪ್ಪ ನಿರ್ಧರಿಸಿದ ವರನನ್ನು ಕಣ್ಣು ಎತ್ತಿ ನೋಡುವುದೆ ತಪ್ಪಾಗುತ್ತಿತ್ತು.ಒಂದು ಮಕ್ಳು ಎರಡು ಮಕ್ಳು ಆಗುವವರೆಗೆ ಅಂದಿನ ಮಹಿಳೆ ಗಂಡನ ಮುಖವನ್ನೇ ನೋಡಿರುತ್ತಿರಲಿಲ್ಲ!ಗಂಡನ ಆಯ್ಕೆ ವಿಷಯ ಬಂದಾಗ ಹೆಣ್ಣು ಕನಿಷ್ಠ ತನಗೆ ಗಂಡನಾಗುವವನು ಹೇಗಿದ್ದಾನೆ ಎಂದು ತಿಳಿದುಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ.ಹನ್ನೆರಡು ವರ್ಷದ ಎಳೆಮಗು ನಾನು ಮದುವೆಯಾದಾಗ!ಅಂಗಳದಲ್ಲಿ ಕುಂಟೆಬಿಲ್ಲೆ ಆಡುತ್ತಿರುವ ಮಗುವಿಗೆ ನಾಳೆ ನಿನಗೆ ಮದುವೆ ಎಂದು ಹೇಳಿದರೆ ಹೇಗಿರುತ್ತದೆ ನೀವೆ ಊಹಿಸಿ ಜ್ಞಾನಿಗಳೆ?ಜೀವ ಝಲ್ ಎಂದು ಹೋಗಿತ್ತು.ಮದುವೆ ಯಾರೊಂದಿಗೆ,ಆತ ಹೇಗಿದ್ದಾನೆ ಎನ್ನುವುದು ನನಗೂ ಸೇರಿದಂತೆ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ.ಅದು ಅಪ್ಪನ ಆಯ್ಕೆ;ಅಪ್ಪನ ಆಯ್ಕೆಗೆ ದುಸರಾ ಮಾತು ಆಡುವಂತಿರಲಿಲ್ಲ.ಕೊನೆಗೆ ನಾನು ಮದುವೆಯಾದದ್ದು ನನಗಿಂತಲೂ ಇಪ್ಪತ್ತು ವರ್ಷ ದೊಡ್ಡವನಿರುವ ಕುಡುಕನನ್ನು!ಅಂಗಳದಲ್ಲಿ ಆಡುತ್ತಿರುವ ಮಗುವಿಗೆ ಲೈಂಗಿಕ ಜ್ಞಾನದ ಅರಿವು, ಸಂಸಾರ ನಿರ್ವಹಣೆಯ ಯಾವ ತಿಳುವಳಿಕೆಯೂ ಇರಲಿಲ್ಲ.ಕುತ್ತಿಗೆಗೆ ಹಗ್ಗ ಬಿಗಿದ ವಾತಾವರಣ!ದೊಡ್ಡ ಸಂಸಾರ,ಗಢವನಂತಹ ಗಂಡ,ರಾತ್ರಿ ಹಿಂಸ್ರ ಪಶುವಿನಂತೆ ಬಳಸಿಕೊಳ್ಳುವ ಗಂಡ,ಹೆಣ್ಣಿನ ಮೃದು ಮನಸ್ಸಿನ ಯಾವೊಂದೂ ಭಾವವೂ ಅರಿಯದ ಆ ವಾತಾವರಣದಲ್ಲಿ ನಾನು ಬದುಕಿದ್ದೊಂದು ದೊಡ್ಡ ಸಾಧನೆ.ಅಳು ಕೇಳುವವರಿಲ್ಲ-ನಗು ಕೇಳುವವರಿಲ್ಲ.”ಎಂದು ಆಕೆ ತನ್ನ ಮನದ ಅಳಲನ್ನು ತೋಡಿಕೊಂಡಳು.ಬಸ್ಸು ನಿಧಾನವಾಗಿ ಸಾಗುತ್ತಿತ್ತು.ಹಳ್ಳಿಯ ಆ ಕೆಟ್ಟ ರಸ್ತೆಯಲ್ಲಿ ಬಸ್ಸು ಸಾಗುವ ವೇಗಕ್ಕಿಂತ ಕಾಲು ನಡಿಗೆಯ ವೇಗವೇ ಬಸ್ಸಿಗಿಂತ ಸ್ಪೀಡು ಎನ್ನುವಂತಿತ್ತು.ದಿನಂಪ್ರತಿ ವೇದಿಗಳಿಗೆ ಹೋಗುವುದು,ತಲಾ ಒಂದಿಷ್ಟು ಮಾತುಗಳನ್ನಾಡುವುದು,ಆ ಮೂಲಕ ಸಮಾಜವನ್ನು ಜನರನ್ನು ಉದ್ದರಿಸಿದ ಭಾವವನ್ನು ತಾವು ತಾವೇ ಊಹಿಸಿಕೊಂಡು ಭೇಷ್ ಎಂದುಕೊಳ್ಳುವುದು ಬಲು ಸಂತೊಷದ ವಿಷಯವಾಗಿತ್ತು. 

ಹೌದೆಮ್ಮಾ,ಹೌದು!ಕಷ್ಟದೊಳಗೆ ಈಸಿರುವುದರಿಂದಲೇ ನಿಮಗಿಂಥಹ ಧೈರ್ಯ,ಜಾಣ್ಮೆ ಬಂದಿದೆ.ನಿಮ್ಮಷ್ಟು ಜೀವನ ಅನುಭವ ಯಾರಿಗೂ ಇಲ್ಲ.ನೀವು ಈ ಶತಮಾನದ ಆದರ್ಶ ನಾರಿ.ನಿಮ್ಮ ಮಾತು,ನಿಮ್ಮಅನುಭವದ ಮಾತುಗಳು ಅಮೃತಕ್ಕೆ ಸಮಾನ.ನೀವು ಅಪರೂಪದ ವ್ಯಕ್ತಿತ್ವ ಇರುವ ಗಟ್ಟಿ ಹೆಣ್ಣು ಮಗಳು”ಎಂದು ಜ್ಞಾನಿಗಳು ಹೇಳುವ ಹೊತ್ತಿಗೆ ಬಸ್ಸು ಊರು ತಲುಪಿತ್ತು. 

 

ಕಾಟಿಗರ ಡೇಗ ಹೆಂಡಿ ಕಸ ಬಳಿದು ದನದ ಕೊಟ್ಟಿಗೆಯನ್ನು ಸ್ವಚ್ಛ ಕನ್ನಡಿಯಂತೆ ಪಳಪಳ ಮಾಡುವ ಹೊತ್ತಿಗೆ ಅಮ್ಮನವರ ಮನೆಯಲ್ಲಿ ಉಪ್ಪಿಟ್ಟಿನ ವಾಸನೆ ಬರತೊಡಗಿತ್ತು.ದನದ ಕೊಟ್ಟಿಗೆಯ ಹೊರತು ಮನೆಯ ಯಾವೊಂದೂ ಕೋಣೆಗಳನ್ನು ನೋಡದ ಅವನಿಗೆ ಪಡಸಾಲೆಯ ಗೋಡೆ,ಮತ್ತದಕ್ಕೆ ತೂಗು ಹಾಕಿದ ಜಗಜ್ಯೋತಿ ಬಸವೇಶ್ವರರ ಫೋಟೋ ಮಾತ್ರವೆ ಕಾಣಿಸುತ್ತಿತ್ತು.ದನದ ಕೊಟ್ಟಿಗೆಯಲ್ಲಿ ನಿಂತೇ ಅಮ್ಮ ಕೆಲಸ ಮುಗಿತು ನೋಡ್ರಿ ಎಂದು ಇವನು ದಿನಂಪ್ರತಿ ಅನ್ನುವನು;ಅಮ್ಮನವರ ಮನೆಯ ಇತರೆ ಸದಸ್ಯರು,ಸ್ವಜಾತಿ ಆಳುಗಳು ಪಡಸಾಲೆಯ ಮೇಲಿನಿಂದ ತಗ್ಗಿನಲ್ಲಿರುವ ಕೊಟ್ಟಿಗೆಯೊಳಗೆ ನಿಂತಿರುವ ಡೇಗನಿಗೆ ಅವರು ಒಂದಿಷ್ಟು ತಂಗಳು ಹಾಕುವರು.ಆದರೆ ಡೇಗನಿಗೆ ಬಲು ವಿಚಿತ್ರ ಎನ್ನಿಸುತ್ತಿದ್ದದ್ದು ತನ್ನದೇ ಜಾತಿಯ ಪ್ಯಾಂಟು ಧರಿಸಿದ ಜನ ಬಂದಾಗ ಅಮ್ಮನವರು ಮನೆಯೊಳಕ್ಕೆ ಕರೆದುಕೊಳ್ಳುವುದು,ತನ್ನದು ಜಾತಿ ವಿರುದ್ಧದ,ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಎನ್ನುವುದನ್ನು ಕೇಳಿದಾಗ! 

ಅಮ್ಮ ದಿನಂಪ್ರತಿ ತಾಸಿಗೂ ಹೆಚ್ಚು ಪೂಜೆ ಮಾಡುತ್ತಿರುವುದನ್ನು ಡೇಗ ಘಂಟೆಯ ಸದ್ದಿನ ಮೂಲಕ ಕಾಣುವನು,ತಿಂಗಳಲ್ಲಿ ಒಂದೆರುಡು ಬಾರಿ ಶ್ರೀಶೈಲ ಮಲ್ಲಿಕಾರ್ಜುನ,ತಿರುಪತಿಯ ಎಂಕಟರಮಣ ಯಾತ್ರೆಗಳನ್ನು ಹೊರಡುವಳು.ಆಗ ಮನೆ ಬಿಕೋ ಎನ್ನುವುದು.ತಾನು ದನದ ಕೊಟ್ಟಿಗೆಯನ್ನು ಬಳೆದು ಸ್ವಚ್ಛ ಮಾಡಿ ಮನೆಗೆ ಹೋಗುವನು. 

ಅಮ್ಮ ತುಂಬಾ ಸಲ ಹೇಳುತ್ತಿದ್ದರು:ಮನೆ ಸ್ವಚ್ಛವಾಗಿರದಿದ್ದರೆ ನಡೆಯುತ್ತದೆ,ಕೊಟ್ಟಿಗೆ ಸ್ವಚ್ಛವಾಗಿರಬೇಕು;ಅದು ಮುಖ್ಯವಾದದ್ದು! ಎಂದು ಅವರು ಅನ್ನುತ್ತಿದ್ದರು.ತಮ್ಮ ಮನೆಗಳೆ ಸ್ವಚ್ಛವಾಗಿರದ ಹೊತ್ತಲ್ಲಿ ದನದ ಕೊಟ್ಟಿಗೆಗಳು ಸ್ವಚ್ಛವಾಗಿರಬೇಕು ಎನ್ನುವ ಅಮ್ಮನವರ ಮಾತು ಅವನಿಗೆ ಸೋಜಿಗವನು ಉಂಟು ಮಾಡುತ್ತಿತ್ತು! 

ಆ ಸೋಜಿಗ ನಿವಾರಣೆಯಾದದ್ದು ಮುಂದೊಂದು ದಿನ,ಮಟಮಟ ಮಧ್ಯಾಹ್ನದಲಿ. 

ಅವತ್ತು ಹೊಲಕ್ಕೆ ನೀರು ಬಿಡುವ ಕೆಲಸ ಬೇಗ ಮುಗಿದಿತ್ತು.ಧಣಿಗಳು ಹೊಲದ ಬದುವಿಗಿರುವ ಬೇವಿನ ಮರದ ಕೆಳಗೆ ಪಟ್ಟಾಂಗ ಹೂಡಿದ್ದರು.ಅವರ ಮುಂದೆ ಈರ ಇದ್ದ.ಈರ ಇದ್ದನೆಂದರೆ ಅವರ ಸಮಾರಾಧನೆ ನಡೆದಿರುತ್ತದೆಂದೇ ಅರ್ಥ!ಹಾಗೆ ನಡೆದಿತ್ತೂ ಕೂಡಾ!ಡೇಗ ನೀರು ಬಿಡುವುದು ಮುಗಿಯಿತು ಧಣಿ ಎಂದಾಗ ಧಣಿ ಅಮಲಿನಲ್ಲಿಯೇ ಮನೆಗೆ ಹೋಗು ಎಂದಿದ್ದರು.ಡೇಗ ಮನೆಯ ಕಡೆಗೆ ಹೊರಟಿದ್ದ. 

ಶಿಶಿರದ ಬಿಸಿಲಿನ ಬಗ್ಗೆ ಹೇಳುವುದೇನಿದೆ?ಸೂರ್ಯ ನಡು ನೆತ್ತಿಯ ಮೇಲೆ ನಿಂತು ಬೆಂಕಿ ಕಾರುತ್ತಿದ್ದ.ಉಗಾದಿಯ ಆರಂಭದ ದಿನಗಳಲ್ಲಿ ಎಲ್ಲಾ ವರ್ಗದ ಜನಗಳೂ ವಿಶ್ರಮಿಸಬೇಕಿರುವ ಕಾಲವದು.ಉಗಾದಿಗೆ ಆಡಲಿರುವ ಬಯಲಾಟದಲ್ಲಿ ತಾನೊಂದು ಪಾತ್ರ ಮಾಡಲಿರುವ ಡೇಗ ಮಾಸ್ತರರು ಹೇಳಿಕೊಟ್ಟ ಡೈಲಾಗನ್ನು ತಾರಕ ಸ್ವರದಲ್ಲಿ ಪ್ರಾಕ್ಟಿಸು ಮಾಡುತ್ತಾ ಮನೆಯ ಕಡೆಗೆ ಹೊರಟ;ಬಲೆಲೇ ಸಾರಥಿ,ನಾನುದಾರೆಂದರೆ,ಅಥಳ ಸುಥಳ ಪಾತಾಳಗಳ ಏಳು ಲೋಕದ ಒಡೆಯನಾದ ನಾನು.... 

ಊರು ಹತ್ತಿರ ಬರುವಂತೆ ಮಾತು ನಿಲ್ಲಿಸಿದ;ಮೌನದ ಹೆಜ್ಜೆಗಳನು ಧಣಿಯ ಮನೆಯ ಕಡೆಗೆ ಹಾಕುತ್ತಿರುವಂತೆ ದನದ ಕೊಟ್ಟಿಗೆಯಲಿ ಗುಸುಗುಸು ಪಿಸುಪಿಸು ಮಾತುಗಳು ಕೇಳಿದವು;ಕೂತೂಹಲಗೊಂಡು ಇಣಿಕಿ ನೋಡಲಾಗಿ... 

***** 

 

ಧಣಿ ಚಿತ್ತಾಗುವಂತೆ ಅವತ್ತಿನ ಕೋಟಾ ಮುಗಿಸಿದ್ದರು;ಯಾಕೋ ಪರಮಾತ್ಮ ದರ್ಶನವಾಗಲಿಲ್ಲ.ಬ್ರಹ್ಮ ರಹಸ್ಯಕ್ಕಾಗಿ ಹಾತೊರೆಯುತ್ತಿದ್ದ ಈರ ಎಂದಿನಂತೆ ಅದೇ ಪ್ರಶ್ನೆ ಹಾಕಿದ;ಈ ಸಲ ಧಣಿಯ ಬಾಯಿಯಲ್ಲಿ ಮಾತು ನಿಲ್ಲಲಿಲ್ಲ:ನಿಮ್ ಗೌಡ್ತಿಗೆ ಗಂಡ ನಾನಲ್ಲಲೆ,ಆ ಫಕೀರ ಎಂದುಬಿಟ್ಟ! 

ಡೇಗನು,ಈರನು ಈವತ್ತಿಗೂ ಈ ಸತ್ಯದ ಅಜೀರ್ಣಕ್ಕೆ ಒಳಗಾಗಿ ನಾನಾ ಸಂಕಟಗಳಿಂದ ಬಳಲುತ್ತಿದ್ದಾರೆ! 

 

                                              ಲಕ್ಷ್ಮೀಕಾಂತ ನಾಯಕ 

Google  News WhatsApp Telegram Facebook
HTML smaller font

.

.