ಜಿಲ್ಲೆಯ ನಾಲ್ಕು ತಾಲೂಕುಗಳು ಆನೆಕಾಲು ರೋಗಮುಕ್ತ : ಜಿಲ್ಲಾಧಿಕಾರಿ ಸ್ನೇಹಲ್. ಆರ್ ತಂಬಾಕು ದುಷ್ಪರಿಣಾಮ ಕುರಿತು ಜನಜಾಗೃತಿ ಅಗತ್ಯ : ಜಿಲ್ಲಾಧಿಕಾರಿ

Jul 4, 2023 - 16:20
 0  18

Google  News WhatsApp Telegram Facebook

ಜಿಲ್ಲೆಯ ನಾಲ್ಕು ತಾಲೂಕುಗಳು ಆನೆಕಾಲು ರೋಗಮುಕ್ತ : ಜಿಲ್ಲಾಧಿಕಾರಿ ಸ್ನೇಹಲ್. ಆರ್ ತಂಬಾಕು ದುಷ್ಪರಿಣಾಮ ಕುರಿತು ಜನಜಾಗೃತಿ ಅಗತ್ಯ : ಜಿಲ್ಲಾಧಿಕಾರಿ

Janaa Akrosha News Desk.

ಯಾದಗಿರಿ: ಜುಲೈ, 04  : ಜಿಲ್ಲೆಯ ಯಾದಗಿರಿ, ಗುರುಮಿಠಕಲ್, ಶಹಾಪುರ, ಸುರಪುರ ಈ ನಾಲ್ಕು ತಾಲೂಕುಗಳು ಆನೆಕಾಲು ಮುಕ್ತ ತಾಲೂಕುಗಳಾಗಿ ಘೋಷಣೆಯಾಗಿದ್ದು, ಆದ್ರೂನು  ಹೆಚ್ಚಿನ ಕಾಳಜಿ ವಹಿಸಿ ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವತಿಯಿಂದ  ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಮತ್ತು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-(2003) ಕಾಯ್ದೆಯಡಿ ರಚಿಸಿದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಆನೆಕಾಲು ರೋಗವು  ಇಂದು ಜನತೆಗೆ ಬೆಂಬಿಡದೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಈ ರೋಗದಿಂದ ಮುಕ್ತಿಗೊಳಿಸಲು  ನಿರಂತರ ಪ್ರಯತ್ನ ನಡೆಸಿದ್ದು, ಸಾರ್ವಜನಿಕರು ಜಾಗೃತರಾಗಿ ಆರೋಗ್ಯ ಇಲಾಖೆ  ನೀಡುವ ಮಾತ್ರೆಗಳನ್ನು ಸೇವಿಸುವುದರ ಮೂಲಕ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕೆಂದು  ಅರಿವು ಮೂಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಪ್ರತಿದಿನ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ಮಲೇರಿಯಾ ಜ್ವರದ ಲಕ್ಷಣಗಳು ಹಾಗೂ ಇನ್ನಿತರ ರೋಗಗಳು ಹರಡುವಿಕೆ ಹಾಗೂ ತಡೆಗಟ್ಟುವಿಕೆಯ ವಿಧಾನಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಮತ್ತು ಸ್ವಚ್ಚತಾ  ನೈರ್ಮಲ್ಯದ ಕುರಿತು   ಅರಿವು ಮೂಡಿಸಿ  ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸೊಳ್ಳೆ ಕಡಿತದಿಂದ ವ್ಯಕ್ತಿಯೊಬ್ಬರಿಗೆ ರೋಗ ತಗುಲಿದರೆ ರಾತ್ರಿ ವೇಳೆಯಲ್ಲಿ ಮಾತ್ರ ಈ ರೋಗ ಕಂಡು ಹಿಡಿಯಬಹುದು. ರಾತ್ರಿ 8 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ವ್ಯಕ್ತಿಯ ರಕ್ತಲೇಪನ ಸಂಗ್ರಹಿಸಿ, ಸೂಕ್ಷ್ಮದರ್ಶಕದ ಸಹಾಯದಿಂದ ಪರೀಕ್ಷೆ ಮಾಡಿದಾಗ ಮಾತ್ರ ಈ ರೋಗದ ಸೋಂಕು ತಿಳಿಯುತ್ತದೆ. ಈ ರೋಗದ ಚಿಹ್ನೆಗಳು ಕಾಣಸಿಕೊಂಡ ನಂತರ ರೋಗದ ಚಿಕಿತ್ಸೆ ಕಷ್ಟ ಸಾಧ್ಯ ಎಂದು ಜಿಲ್ಲಾಧಿಕಾರಿ ನುಡಿದರು.

ಸೊಳ್ಳೆಗಳಿಂದ ಹರಡುವ ಮತ್ತು ಇತರೇ ಸಾಂಕ್ರಾಮಿಕ ರೋಗಗಳ ಬಗ್ಗೆ  ಮಾಹಿತಿ  ಕಾರ್ಯಗಾರದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಧಾರ್ಮಿಕ ಸಂಸ್ಥೆಗಳು, ಇನ್ನಿತರ ಸಂಘಗಳು ಭಾಗವಹಿಸಲು ಪ್ರೇರೇಪಿಸಿ, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ರೋಗಿಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ನೀರಿನ ನಲ್ಲಿಗಳು, ಬೋರವೆಲ್, ಬಾವಿಗಳ ಸುತ್ತಮುತ್ತ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು ಮತ್ತು ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದು, ಹಳ್ಳಿಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡುವುದು, ಮೇಲ್ಚಾವಣಿ ತೊಟ್ಟಿ ಮತ್ತು ನೀರು ಸರಬರಾಜು ತೊಟ್ಟಿಗಳನ್ನು ಭದ್ರವಾಗಿ ಮುಚ್ಚುವ ವ್ಯವಸ್ಥೆ ಮಾಡುವುದು, ನೀರು ಸರಬರಾಜು ಪೈಪ್ ಗಳಲ್ಲಿ ಸೋರುವಿಕೆಯನ್ನು ತಡೆಗಟ್ಟಲು ನಿಗಾವಹಿಸುವಂತೆ ಸಂಬಂಧಿಸಿದವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ತಂಬಾಕು ದುಷ್ಪರಿಣಾಮ ಕುರಿತು ಜನಜಾಗೃತಿ ಅಗತ್ಯ;

ಜಿಲ್ಲೆಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳನ್ನು ಮುಂದಿನ ದಿನಗಳಲ್ಲಿ ತಂಬಾಕು ಮುಕ್ತ ಎಂದು ಘೋಷಿಸಲು ಕ್ರಮವಹಿಸಬೇಕು ಮತ್ತು ಶಾಲೆಯ ಪಕ್ಕದಲ್ಲಿ 100 ಮೀಟರ್ ಒಳಗೆ ಅಂಗಡಿಗಳಲ್ಲಿ ತಂಬಾಕು ಮಾರುತ್ತಿರುವುದು ಕಂಡು ಬಂದರೆ ಅಂತಹ ಅಂಗಡಿಗಳ ಪರವಾನಿಗೆ ತಕ್ಷಣ ರದ್ದುಗೊಳಿಸಿ ಎಂದು ಅಧಿಕಾರಿಗಳಿಗೆ  ಜಿಲ್ಲಾಧಿಕಾರಿ ಸೂಚಿಸಿದರು.

ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿತುಕೊಂಡು ಸಾಮಾನ್ಯರಿಗೆ ಅರಿವು ಮೂಡಿಸಬೇಕು,  ಮಾನವಾಭಿವೃದ್ಧಿಗೆ ದೊಡ್ಡ ಕಂಟಕವಾಗಿರುವ ಈ ಪಿಡುಗನ್ನು  ನಿರ್ಮೂಲನೆ ಮಾಡಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ  ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲೆಯ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಎಲ್ಲಾ ತಾಲೂಕು ಬಸ್ ನಿಲ್ದಾಣಗಳಲ್ಲಿ ಇರುವ ಅಂಗಡಿಗಳಲ್ಲಿ ತಂಬಾಕು ಪದಾರ್ಥಗಳು ಮಾರಾಟ ಮಾಡದಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳು ಬರುತ್ತವೆ. ಭವಿಷ್ಯದ ನಾಗರಿಕರಾಗುವ ಮಕ್ಕಳನ್ನು ತಂಬಾಕು ಸೇವನೆ ನಿಯಂತ್ರಣ ರಾಯಭಾರಿಯಾಗಿ ಮತ್ತು ಸಮನ್ವಯಕಾರರಾಗಿ ಬಳಸಿಕೊಳ್ಳಬೇಕು. ಈಗಿನಿಂದಲೇ ತಂಬಾಕು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಪ್ರಭಾವಗೊಳಿಸಿದ್ದಲ್ಲಿ ಸಮಾಜದ ಮತ್ತು ಮುಂದಿನ ಪೀಳಿಗೆಯ ಸ್ವಾಸ್ಥ್ಯ ಕಾಪಾಡಲು ನೆರವಾಗಲಿದೆ ಎಂದರು.

ನಗರಸಭೆ ಮತ್ತು ಪುರಸಭೆ ವತಿಯಿಂದ ಕಸ ವಿಲೇವಾರಿ ಮಾಡುವ ವಾಹನಗಳ ಮೂಲಕ ತಂಬಾಕು ಸೇವನೆಯ ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಈಗಾಗಲೇ ಅರಿವು ಮೂಡಿಸುತ್ತಿದ್ದು ಇನ್ನೂ ಹೆಚ್ಚಿನ ಜಾಗೃತಿಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಪೋಸ್ಟರ್‌ ಬಿಡುಗಡೆ: ತಂಬಾಕು ನಿಯಂತ್ರಣ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲು ಹಾಕಲಾಗಿರುವ ಪೋಸ್ಟರ್‌, ಕರಪತ್ರ, ಬ್ಯಾನರ್‌ ಇತ್ಯಾದಿಗಳನ್ನು ಜಿಲ್ಲಾಧಿಕಾರಿ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ,  ಆರ್ಸಿಹೆಚ್ಓ ಡಾ. ಮಲ್ಲಪ್ಪ,  ಮಲೇರಿಯಾ ಅಧಿಕಾರಿ ಡಾ.ಲಕ್ಷ್ಮೀಕಾಂತ ಒಂಟೀಪೀರ, ಜಿಲ್ಲಾ ಸರ್ವೆಕ್ಷಣ ಅಧಿಕಾರಿ ಡಾ.ಸಾಜಿಧ್, ಯಾದಗಿರಿ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ತಂಬಾಕು ನಿಯಂತ್ರಣ ಜಿಲ್ಲಾ ಸಲಹೆಗಾರ್ತಿ ಮಹಾಲಕ್ಷ್ಮೀ ಸಜ್ಜನ್,  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಮರಿಸ್ವಾಮಿ, ಡಿಡಿಪಿಐ ಮಂಜುನಾಥ, ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Google  News WhatsApp Telegram Facebook
HTML smaller font

.

.