"ನಾಗರಿಕರ ಗೌರವಯುತ ಜೀವನಕ್ಕಾಗಿ ನ್ಯಾಯವಾದಿಗಳು ನೆರವಾಗಿ"    - ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಕೆ.ಎನ್ ಫಣೀಂದ್ರ

Nov 20, 2023 - 17:19
 0  10

Google  News WhatsApp Telegram Facebook

"ನಾಗರಿಕರ ಗೌರವಯುತ ಜೀವನಕ್ಕಾಗಿ ನ್ಯಾಯವಾದಿಗಳು ನೆರವಾಗಿ"    - ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಕೆ.ಎನ್ ಫಣೀಂದ್ರ

Janaa Akrosha News Desk.

"ನಾಗರಿಕರ ಗೌರವಯುತ ಜೀವನಕ್ಕಾಗಿ ನ್ಯಾಯವಾದಿಗಳು ನೆರವಾಗಿ"
   - ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಕೆ.ಎನ್ ಫಣೀಂದ್ರ


ಯಾದಗಿರಿ : ನವೆಂಬರ್.20 :    ಶಾಸಕಾಂಗ ಹಾಗೂ ಕಾರ್ಯಾಂಗಳಲ್ಲಿ ಆಗುವಂತಹ ಲೋಪಗಳನ್ನು ತಿದ್ದುವ ಕಾರ್ಯ ನ್ಯಾಯವಾದಿಗಳು ಮಾಡಬಹುದಾಗಿದ್ದು, ಈ ದಿಸೆಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಕರ್ತವ್ಯ ನಿಭಾಯಿಸುವಂತೆ ರಾಜ್ಯದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಲಹೆ ನೀಡಿದ್ದಾರೆ.

 ಬಾರ್ ಅಸೋಸಿಯೇಷನ್ ವತಿಯಿಂದ  ನಗರದ ಜಿಲ್ಲಾ  ನ್ಯಾಯಾಲಯ  ಪಾಡಿಗೆ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದ್ದ, ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತ ದಲ್ಲಿ ನ್ಯಾಯವಾದಿಗಳ ಪಾತ್ರ ವಿಷಯದ ಬಗ್ಗೆ ನ್ಯಾಯವಾದಿಗಳೊಂದಿಗೆ ಸಮಾಲೋಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ನ್ಯಾಯವಾದಿಗಳ ಸಮುದಾಯವು ಉತ್ಕೃಷ್ಟವಾಗಿದೆ. ದೇಶ, ರಾಷ್ಟ್ರ ಕಟ್ಟಲು ತನು, ಮನ, ಧನ ತ್ಯಾಗ ಮಾಡಿದ ಸಮುದಾಯ ಇದಾಗಿದ್ದು, ಸಮಾಜದ ನಿರ್ಮಾತೃ ಸಹ ಆಗಿದ್ದಾರೆ.  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜವಾಹರಲಾಲ್ ನೆಹರು, ಸರ್ದಾರ್  ವಲ್ಲಭಭಾಯಿ ಪಟೇಲ್, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನ್ಯಾಯವಾದಿಗಳಾಗಿ, ರಾಜಕೀಯ ಮುತ್ಸದ್ಧಿಗಳಾಗಿ,ಸ್ವಾತಂತ್ರ್ಯ ಹೋರಾಟಗಾರ ನಾಯಕರಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅದರಂತೆ ಶ್ರೇಷ್ಠ ಸಂವಿಧಾನ ರಚಿಸಿ ಜನರಿಗೆ ಅಡಿಪಾಯ ಹಾಕಿಕೊಟ್ಟಿದ್ದು, ಅಂತಹ ಸಮುದಾಯಕ್ಕೆ ಸೇರಿದ  ನ್ಯಾಯವಾದಿಗಳು ಸಮಾಜದ,  ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಅವರು ಸಲಹೆ ನೀಡಿದರು.

ನ್ಯಾಯವಾದಿಗಳು ಇಂದಿನ ತಾಂತ್ರಿಕ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಸವಾಲನ್ನು ಎದುರಿಸಲು ಸಿದ್ಧತೆಯಲ್ಲಿರಬೇಕು. ಪ್ರತಿ ಕ್ಷೇತ್ರದ ಜ್ಞಾನ ಹೊಂದಿ ಜನರಿಗೂ ತಿಳಿಹೇಳಿ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು. ಸಾಮಾಜಿಕ ಕಾಯಿಲೆ ನಿವಾರಣೆಗೆ ಶ್ರಮಿಸಬೇಕು. ನಾಗರಿಕರ ದೇಹ ರಕ್ಷಣಾ ಕಾಯ್ದೆಯಡಿ ಅವರಿಗೆ ಚ್ಯುತಿ ಬಾರದಂತೆ ನ್ಯಾಯ ಒದಗಿಸಬೇಕು. ಮಾನಸಿಕ-ಶಾರೀರಿಕ ತೊಂದರೆಗಳಿಗೆ ಒಳಗಾಗುವ ಕಕ್ಷಿದಾರರಿಗೆ ಕಾನೂನು ಅನ್ವಯ ನ್ಯಾಯ ಒದಗಿಸಬೇಕು. ಅದರಂತೆ ಭಾರತೀಯ ನಾಗರಿಕರಿಗೆ ಹುಟ್ಟುವ ಮುಂಚೆ ಹಾಗೂ ಸಾವಿನ ನಂತರವೂ ಕಾನೂನುಗಳು ಅನ್ವಯವಾಗುತ್ತಿದ್ದು, ಅವರ ಆಸ್ತಿ ಪಾಸ್ತಿ ರಕ್ಷಣೆ, ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ, ಉತ್ತಮವಾದ ಜೀವನದ ಹಕ್ಕು ಮತ್ತು ಗೌರವಯುತ ಜೀವನದ ಹಕ್ಕನ್ನು ಕಾನೂನುಗಳ ಮೂಲಕ ದೊರಕಿಸಲು ನ್ಯಾಯವಾದಿಗಳು ಪ್ರಯತ್ನಿಸುವಂತೆ ಅವರು ಸಲಹೆ ನೀಡಿದರು.


ನ್ಯಾಯವಾದಿಗಳು ದುರ್ಬಲರ ಮತ್ತು ಜನರ ಒಳ್ಳೆಯ ಜೀವನಕ್ಕೆ ವಿವಿಧ ಕಾನೂನು ನಿಯಮಾವಳಿಗಳ ಅನ್ವಯ ಸಿಗುವ ಸವಲತ್ತುಗಳು ಸರಿಯಾಗಿ ದೊರಕಿಸಲು ಪ್ರಯತ್ನಿಸಬೇಕು. ಒಳ್ಳೆಯ ಆಡಳಿತ ನಿರ್ವಹಣೆಯಲ್ಲಿ ಲೋಪ ಕಂಡು ಬಂದಾಗ ತಿದ್ದುವ ಕಾರ್ಯವನ್ನು ಮಾಡಬೇಕು. ಅದೇ ರೀತಿ  ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯು ಲೋಕಾಯುಕ್ತ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ ಉತ್ತಮ ಆಡಳಿತ ವೈವಸ್ಥೆಗೆ ಕೊಡುಗೆ ನೀಡಲು ಸಹ ಸಾಧ್ಯವಿದ್ದು, ನ್ಯಾಯವಾದಿಗಳು ಈ ದಿಸೆಯಲ್ಲಿ ಚಿಂತನೆ ನಡೆಸುವಂತೆ ಅವರು ತಿಳಿ ಹೇಳಿದರು.

ಸಾರ್ವಜನಿಕ ಆಡಳಿತ , ಶಾಸಕಾಂಗ, ಕಾರ್ಯಾಂಗದಲ್ಲಿ ವಕೀಲರ ಪಾತ್ರ ಅಪಾರವಾಗಿದೆ.  ಕಾನೂನಿನ ರಕ್ಷಣೆ ಜವಾಬ್ದಾರಿ  ತಮ್ಮ ಮೇಲಿದ್ದು, ಸರಿಯಾದ ಸಮರ್ಪಕ ರೀತಿಯಲ್ಲಿ ಸವಲತ್ತು ಕಲ್ಪಿಸದ ಸಂದರ್ಭದಲ್ಲಿ ನ್ಯಾಯವಾದಿಗಳು ಮುಂದೆ ಬಂದು ಸಮಸ್ಯೆ ಪರಿಹರಿಸಬೇಕು. ಕಾನೂನಿನ ಅನ್ವಯ ಸಮಯೋಚಿತವಾಗಿ ಸವಲತ್ತು ಅರ್ಹರಿಗೆ ದೊರೆಯದಿದ್ದಲ್ಲಿ  ನ್ಯಾಯವಾದಿಗಳು ಪರಿಹಾರ ಕಲ್ಪಿಸಬಹುದಾಗಿದ್ದು, ಇತ್ತೀಚಿಗೆ ಲೋಕ್ ಅದಾಲತ್ ಮೂಲಕ ವಕೀಲರ ಸಹಕಾರದೊಂದಿಗೆ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಕಾರ್ಯಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಆಧಾರ ಸ್ತಂಭ ನ್ಯಾಯಾಂಗ ಆಗಿರುವುದರಿಂದ ನ್ಯಾಯವಾದಿಗಳು ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವಂತೆ ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸಿ.ಎಸ್. ಮಾಲಿ ಪಾಟೀಲ್ ನ್ಯಾಯವಾದಿಗಳ ಪರವಾಗಿ ಮಾತನಾಡಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಮತ್ತು ಸುರಪುರ ನ್ಯಾಯಾಲಯ ಕಟ್ಟಡಕ್ಕೆ ಸೂಕ್ತ ಅನುದಾನ ಒದಗಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮನವಿ ಮಾಡಿದರು. ನ್ಯಾಯವಾದಿ ಮಾರುತಿ ಈಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ಶ್ರೀ ಶಶಿಕಾಂತ ಭಾವಿಕಟ್ಟಿ,   ಉಪ ನಿಬಂಧಕರು ಚನ್ನಕೇಶವ ರೆಡ್ಡಿ ಎಂ.ವಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಜಯಂತಕುಮಾರ್,  ಮಾನ್ಯ ಉಪ ಲೋಕಾಯುಕ್ತರ ಆಪ್ತಕಾರ್ಯದರ್ಶಿ ಕಿರಣ ಪ್ರಲ್ಹಾದ್ ರಾವ್ ಮುತಾಲಿಕ್ ಪಾಟೀಲ್,  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ. ರವೀಂದ್ರ ಎಲ್. ಹೊನೋಲೆ. ಯಾದಗಿರಿ ಲೋಕಾಯುಕ್ತ ಡಿ ಎಸ್ ಪಿ ಹನುಮಂತರಾಯ, ಇತರರು ಉಪಸ್ಥಿತರಿದ್ದರು.

Google  News WhatsApp Telegram Facebook
HTML smaller font

.

.