ಪ್ರೀತಿಯ ಮೊಗ್ಗು ಅರಳಲೇ ಇಲ್ಲ

Jul 21, 2023 - 13:00
 0  33

Google  News WhatsApp Telegram Facebook

ಪ್ರೀತಿಯ ಮೊಗ್ಗು ಅರಳಲೇ ಇಲ್ಲ

Janaa Akrosha News Desk.

ಕೌಶಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೆ...”ಎನ್ನುವ ಹಾಡು ಮಲ್ಲಯ್ಯನ ದೇವಸ್ಥಾನದ ಕಳಸಕ್ಕೆ ಕಟ್ಟಿದ ಧ್ವನಿವರ್ಧಕದಿಂದ ಎಂ ಎಸ್ ಸುಬ್ಬಲಕ್ಷ್ಮೀಯವರ ಸುಶ್ರಾವ್ಯವಾದ ಕಂಠದಿಂದ ಹೊರಬರುತ್ತಿರುವಂತೆ ಶ್ರಾವಂತಿ ಹಾಸಿಗೆಯಲ್ಲಿ ಎದ್ದು ಕುಳಿತು ಆಕಳಿಸುತ್ತಾ ಮೈ ಮುರಿದಳು.ಸರಿಯಾಗಿ ನಾಲ್ಕು ಗಂಟೆಯ ಹೊತ್ತಿಗೆ ಗುಡಿಯ ಅರ್ಚಕ ಸುಪ್ರಭಾತವನ್ನು ಹಾಕುತ್ತಾನೆ.ಶ್ರಮಿಕ ವರ್ಗದವರು,ಕುಡುಕರು ಪೂಜಾರಿಗೆ ಬೈದರೆ ಸಂಪ್ರದಾಯಸ್ಥರು ಸರಿಯಾಗಿ ಸಮಯಕ್ಕೆ ಎದ್ದು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.ವಿದ್ಯಾರ್ಥಿಗಳು ಸಮಯದಲ್ಲಿ ಎದ್ದು ಅಭ್ಯಾಸಕ್ಕೆ ತೊಡಗಿಕೊಳ್ಳುತ್ತಾರೆ.ಶ್ರಾವಂತಿಗೆ ಓದುವ,ಕಾಲೇಜಿಗೆ ಹೋಗುವ ಯಾವ ಗೊಡವೆಯೂ ಇಲ್ಲವೆಂದರೂ ಆಕೆ ಏಳುವುದು ಹೊತ್ತಿಗೇನೆ.ಅಮ್ಮನ ಜೊತೆಗೆ ಎದ್ದು ಆಕೆಯ ತುಳಸಿಪೂಜೆಯಲ್ಲಿ ಮಗ್ನವಾಗುತ್ತಿದ್ದ ಶ್ರಾವಂತಿಗೆ ಅದು ಅಭ್ಯಾಸವಾಗಿ ಹೋಗಿತ್ತು.ಅಮ್ಮ ಮಂಡಿ ನೋವು ಸೊಂಟ ನೋವು ಇತ್ಯಾದಿ ನೋವುಗಳಿಂದ ಕಳೆದ ವರ್ಷದಿಂದ ನರಳುತ್ತಿದ್ದಳಾದ್ದರಿಂದ ಬೆಳಗಿನ ಪ್ರಾತಕರ್ಮಗಳೆಲ್ಲವೂ ಶ್ರಾವಂತಿಯ ಹೆಗಲಿಗೆ ಬಂದಿದ್ದವು;ಶ್ರಾವಂತಿಗೆ ಹೊತ್ತಿನಲ್ಲಿ ಎದ್ದೇಳುವುದು ಎಂದರೆ ಎಲ್ಲಿಲ್ಲದ ಉತ್ಸಹ,ನಾಲ್ಕು ಗಂಟೆಯ ಹೊತ್ತಿನಲ್ಲಿ ಎದ್ದು ಸ್ನಾನ ಬಿಸಿಬಿಸಿ ಹಬೆಯಾಡುವ ನೀರಿನಿಂದ ಸ್ನಾನ ಮಾಡಿ ದೇವರಿಗೆ ಸುಗಂಧಪೂರಿತ ಅಗರಬತ್ತಿ ಹಚ್ಚಿ ಮನೆಯ ಮುಂದಿನ ಅಂಗಳ ಸಾರಿಸಿ ರಂಗೋಲಿ ಹಾಕಿ ತುಳಸಿ ಕಟ್ಟೆ ಪ್ರದಕ್ಷಿಣೆ ಹಾಕಿ ಅಪ್ಪನಿಗೆ ಬಿಸಿ ಬಿಸಿ ಚಹಾ ಮಾಡಿಟ್ಟರೆ ಸಾಕು;ಏನೋ ನೆಮ್ಮದಿ ಅನ್ನಿಸುತ್ತಿತ್ತು. 

 ತಲೆ ಸ್ನಾನ ಮಾಡಿ ಬಿಚ್ಚು ಹೆರಳಿನಿಂದ ಅಂಗಳಕ್ಕೆ ಕಾಲಿಟ್ಟ ಶ್ರಾವಂತಿ ಹಾಗಷ್ಟೆ ಅರಳಿದ ತಾವರೆಯಂತಿದ್ದಳು.ಕೊಟ್ಯಾನುಕೋಟಿ ಲೇಖಕರು ಹೆಣ್ಣನ್ನು ಹೂವಿಗೂ ಆಕೆಯ ದೇಹವನ್ನು ಬಳಕುವ ಲತೆಗೂ ಹೋಲಿಸಿದ್ದಾರಾದರೂ ಅವರ ಹೋಲಿಕೆ ಎಷ್ಟು ಸತ್ಯವೋ ಗೊತ್ತಿಲ್ಲ;ಶ್ರಾವಂತಿ ಅಪ್ಪಟ ಬಳಕುವ ಲತೆಯಂತಿದ್ದಳು,ಅವಳ ಮುಖ ನಿಜಕ್ಕೂ ಕೆಂದಾವರೆ!ಆಕೆ ಅದೆ ಎಂ ಎಸ್ ಸುಬ್ಬಲಕ್ಷ್ಮೀಯ ಸುಪ್ರಭಾತ ಗುನುಗುತ್ತಾ ರಂಗೋಲಿ ಹಾಕತೊಡಗಿದ್ದಳು. 

 ರಂಗೋಲಿಯ ಚಿತ್ತಾರ ಮೂಡಿಸುತ್ತಿದ್ದಂತೆ ಅವಳಿಗೆ ನವಿರಾಗಿ ಅವನ ಮುಖ ರಂಗೋಲಿಯ ಗೆರೆಗಳಲ್ಲಿ ಮೂಡಿದಂತೆ ಭಾಸವಾಯಿತು;ಶ್ರಾವಂತಿ ಒಂದು ಕ್ಷಣ ಬೆಚ್ಚಿ ಬಿದ್ದಳು,ಇತ್ತೀಚೆಗಿನ ಎರಡು ದಿನಗಳಿಂದ ತನ್ನ ಮನಸ್ಸಿಗೆ ಏನಾಗಿದೆ ಎಂದು ತನ್ನನ್ನೆ ಕೇಳಿಕೊಂಡಳು!ರಂಗವಲ್ಲಿಯ ಚಿತ್ತಾರದಲ್ಲಿ ಅವನ ಚಿತ್ರ ಮೂಡಿದಂತೆ,ಅವನ ಹುಸಿ ನಗು ಅರಳಿದಂತೆ,ಅವನ ಕುಡಿನೋಟದ ಮಿಂಚು ಮಿಂಚಿದಂತೆ ಅತ್ಯಂತ ವಾಸ್ತವದ ರೀತಿಯಲ್ಲಿ ಮೂಡುತ್ತಿತ್ತು.ಯಾವುದೋ ಮೋಹನ ರಾಗದ ಸೆಳವಿಗೆ ತಾನು ಬಿದ್ದಿರುವಂತೆ,ಅದು ಲಯವಾಗಿ ಅರಿಯದ ಅಲೆಗಳ ಮೇಲೆ ತೇಲಿಸಿಕೊಂಡು ಹೋಗುತ್ತಿರುವಂತೆ ಅನ್ನಿಸತೊಡಗಿತ್ತು.ಮೋಹನನ ರಾಗ ಅದೆಷ್ಟೊಂದು ಹಿತವಾಗಿತ್ತು ಎಂದು ವಿವರಿಸುವವರು ಯಾರು?ಶ್ರಾವಂತಿ ಪ್ರೇಮಪಾಶದಲ್ಲಿ ಬಿದ್ದಳಾ?ಹಾಗೊಂದು ಸಂದೇಹ ಅವಳನ್ನು ಎಡೆಬಿಡದೆ ಕಾಡತೊಡಗಿತ್ತು. 

 ಬೆಳಗಿನ ಪ್ರಾರ್ವಿಧಿಗಳು ಮುಗಿದ ಮೇಲೆ ಆಕೆಗೊಂದು ಬಹು ಮುಖ್ಯ ಕೆಲಸವಿರುತ್ತಿತ್ತು;ದೂರದ ತಮ್ಮಯ್ಯನ ದನದ ಕೊಟ್ಟಿಗೆಗೆ ಹೋಗಿ ತಮ್ಮಯ್ಯನ ಹೆಂಡತಿ ಗೋವುಗಳಿಂದ ಹಿಂಡಿದ ನೊರೆ ನೊರೆ ಹಾಲನ್ನು ತರುವುದು! ಹಾಲು ತರುವಿಕೆಯ ಹಿಂದೆ ಅವ್ಯಕ್ತ ಧಾವಂತವಿರುವುದೂ ಸುಳ್ಳಲ್ಲ.ಅವನಿರುತ್ತಾನಲ್ಲಿ!ತಪೋನಿರತ ವಿಶ್ವಾಮಿತ್ರನ ಹಾಗೆ,ತನ್ನನ್ನೇ ಧ್ಯೇನಿಸುತ್ತಾ,ತನ್ನೆಡೆಗೆ ಮೋಡುತ್ತಾ,ತನ್ನ ಬರುವಿಗೆ ಕಾತರಿಸುತ್ತಾ,ಕಾಯುತ್ತಾ!ರೋಮಾಂಚನಗೊಳ್ಳುತ್ತಾಳೆ ಶ್ರಾವಂತಿ. 

ಅಪ್ಪ ಕೆಮ್ಮುತ್ತಾ ಎದ್ದು ಹೊರ ಬರುವಷ್ಟರಲ್ಲಿ ಅಮ್ಮ ಬಚ್ಚಲಲ್ಲಿ ಮುಖ ಮಾರ್ಜನ ಮಾಡಿಕೊಳ್ಳುತ್ತಿದ್ದಳು.ಅಪ್ಪ ಮಗಳು ಬಿಡಿಸಿ ರಂಗೋಲಿಯನ್ನು ನಾಜೂಕಾಗಿ ದಾಟುತ್ತಾ, “ನೀನೇ ಮನೆ ಮಾಹಾಲಕ್ಷ್ಮಿಯಮ್ಮಾ,ನೀನು ಬಿಡಿಸುವ ರಂಗೋಲಿ ಯಾವ ಲಕ್ಷ್ಮಿಗೆ ಆಹ್ವಾನ ಕೊಡಲಿಎಂದು ಬಯಲ ಕಡೆ ಹೋದರು. 

 ಏನೇ ಶತಪ್ರಯತ್ನಪಟ್ಟರೂ ನಿದ್ರೆ ಎಂಬುದು ಕಣ್ಣ ಹತ್ತಿರ ಸುಳಿಯದೆ ನಿದ್ರಾದೇವಿ ಪ್ರಶಾಂತನಿಂದ ಇತ್ತೀಚೆಗಿನ ಕೆಲ ದಿನಗಳಿಂದ ದೂರವಾಗಿದ್ದಳು.ಪುಸ್ತಕ ಕೈಯೊಳಗಿಡಿದರೆ ಅದರೊಳಗೆ ಅವಳ ಪ್ರತಿಬಿಂಬ;ಒಟ್ಟಾರೆ ಕಣ್ಣಪಾಪೆಗಳಲ್ಲಿ ಅವಳ ಚಿತ್ರ ಸ್ಥಿರ ಸ್ಥಾಪಿತವಾಗಿ ಬಿಟ್ಟಿತ್ತು.ನಿದ್ರೆ,ಊಟ,ದಾಹಗಳಲ್ಲಿ ವ್ಯತ್ಯಾಸ ಉಂಟಾಗಿತ್ತು.ಬರೀ ಅವಳ ಧ್ಯಾನ,ಬರೀ ಅವಳದೇ ಯೋಚನೆ;ಮನಸ್ಸಿನ ತುಂಬಾ ಅವಳದೆ ಚಿಂತೆ.ಮಾತಿನಲ್ಲಿ,ಹಾಡಿನಲ್ಲಿ ಅಕ್ಷರದಲ್ಲಿ ಅವಳೇ ತುಂಬಿಕೊಂಡಿದ್ದಳು.ಅನ್ನವೂ ಅವಳಾಗಿದ್ದಳು,ಹಸಿವೂ ಅವಳಾಗಿದ್ದಳು;ನಿದ್ರೆಯೂ ಅವಳಾಗಿ ಮನವನ್ನು ಕಾಡತೊಡಗಿದ್ದಳು. 

 ಮಾರ್ಚಿ ಮಾಹೆಯಲ್ಲಿ ಹತ್ತನೆಯ ತರಗತಿಯ ಪರೀಕ್ಷೆಗಳಿದ್ದವು.ಪರೀಕ್ಷಾಪೂರ್ವ ರಜೆ ಘೋಷಣೆಯಾಗಿದ್ದವು.ಓದಬೇಕು ಎಂದರೆ ಪುಸ್ತಕದಲ್ಲೂ ಅವಳೇ ಮೂಡಿ ದಿಗಿಲು ಹುಟ್ಟಿಸಿದ್ದಳು.ಅವಳು ಕಾಡತೊಡಗಿದ್ದಳು:ಸುಂದರ ಸ್ವಪ್ನವಾಗಿ,ಭವ್ಯ ಬದುಕಿನ ಭವಿಷ್ಯವಾಗಿ! 

 ಪ್ರಶಾಂತ ನಾಲ್ಕು ಗಂಟೆಗೆ ಎದ್ದು ಕುಳಿತು ಪುಸ್ತಕ ಹಿಡಿದಿದ್ದನು.ಗುಡಿ ಅಂಗಳದಲ್ಲಿ ಜನವಿನ್ನೂ ಮಲಗಿಯೇ ಇದ್ದರು.ಬೆಳಗಿನ ಆರು ಗಂಟೆಯ ಸಮಯ,ಮೂಡಣ ರವಿ ನಿಧಾನವಾಗಿ ತಾಯ ಗರ್ಭದಿಂದ ಹೊರ ಬರತೊಡಗಿದ್ದನು;ರವಿ ಹೊರಬರುವುದು ಮುಖ್ಯವಲ್ಲ ಪ್ರಶಾಂತನಿಗೆ;ತನ್ನ ಮನದೊಡತಿ,ತನ್ನ ಸ್ವಪ್ನ ಸುಂದರಿ,ತನ್ನನ್ನು ಅನುಕ್ಷನವೂ ಕಾಡುತ್ತಿರುವ ಪ್ರೇಮ ದೇವತೆ ಶ್ರಾವಂತಿ ಬರುವುದು ಮುಖ್ಯ.ಅವಳ ಕೆಂದಾವರೆಯ ಮೊಗವ ನೋಡುವುದು ಮುಖ್ಯ,ಅವಳ ಓರೆನೋಟ ನೋಡುವುದು ಮುಖ್ಯ; ನೋಟದಿ ರೋಮಾಂಚಕತೆ ಅನುಭವಿಸುವುದು ಮುಖ್ಯ.ಅವನು ಕಾದು ಕುಳಿತನು.ಇನ್ನೇನು ಅವಳು ಬರುವ ಹೊತ್ತು.ಪ್ರಶಾಂತ ತನ್ನ ಇಡೀ ದೇಹವನ್ನು ಕಣ್ಣಾಗಿಸಿಕೊಂಡನು. 

 ಅದು ಶಿಶಿರ ಆರಂಭವಾಗುವ ಕಾಲ,ಮರಗಳು ಎಲೆ ಉದುರಿಸಿ ಚಿಗರತೊಡಗಿದ್ದವು.ಉಗಾದಿಗಿನ್ನೂ ಏಳೆಂಟು ದಿನಗಳಿದ್ದವು.ರೈತರು,ರೈತಾಪಿ ಕೃಷಿ ಕಾರ್ಮಿಕರು ವಿಶ್ರಮಿಸುವ ಕಾಲ.ಸೂರ್ಯ ಕಡುಕೆಂಡ ಸುರಿಯುತ್ತಾನೆ.ಎಲ್ಲೊ ಮಾಮರದಲ್ಲಿ ಚಿಗುರು ಮೂಡಿ ಮರ ನವ ಜವ್ವನೆಯಂತೆ ಕಂಗೋಳಿಸುವುದು.ಅದರೊಳಗೆ ಅಡಗಿದ ಕೋಗಿಲೆ ಪ್ರೇಮಗೀತೆ ಹಾಡುವುದು. ಸಂದರ್ಭದಲ್ಲೇ ಅದೊಂದು ದಿನ ವಿಪರೀತ ಸಂಕೋಚ ಜೀವಿ ಪ್ರಶಾಂತ ಬೀದಿ ನೆಲ್ಲಿಗೆ ನೀರು ಹಿಡಿಯಲೆಂದು ಬಂದಿದ್ದ.ಸಾಮಾನ್ಯವಾಗಿ ಅವನ ತಾಯಿ ತಂಗಿಯರು ನೀರು ಹಿಡಿಯುವ ಕೆಲಸ ಮಾಡುತ್ತಿದ್ದರಾದರೂ ಅದೇಕೊ ಅವನ ತಾಯಿಮಗಾ,ಒಂದೆರಡು ಕೊಡ ನೀರು ತಂದಾ ಹಾಕುಎಂದು ಅಂದಿದ್ದಳು.ಅಮ್ಮನೆಂದರೆ ಬಲು ಪ್ರೀತಿ ಅವನಿಗೆ;ಅಮ್ಮನ ಮಾತು ಮೀರದೆ ಬೀದಿಯ ನಲ್ಲಿಗೆ ಕೊಡ ಹಿಡುದು ಬಂದವನಿಗೆ ಅಚ್ಚರಿ ಕಾದಿತ್ತು.ಇಡೀ ನಲ್ಲಿಯನ್ನು ಹೆಂಗಸರು ಆಕ್ರಮಿಸಿಕೊಂಡಿದ್ದರು.ತುಂಬಾ ನಾಚಿಕೆಯ ಸ್ವಭಾವದವನಾದ ಪ್ರಶಾಂತ ಮೂಕ ಪ್ರೇಕ್ಷಕನ ಹಾಗೆ ನಿಂತೇ ಇದ್ದ.ಯಾರೂ ಅವನಿಗೆ ನೀರು ಹಿಡಿಯಲು ಆಸ್ಪದ ನೀಡಲಿಲ್ಲ.ತನ್ನ ಸರದಿಗಾಗಿ ಕಾದಿದ್ದವನಿಗೆ ಯಾರೂ ನೀರು ಹಿಡಿಯುವ ಅವಕಾಶ ನೀಡಲಿಲ್ಲ. ಮಧ್ಯೆ ನಾಲ್ಕೈದು ಕೊಡ ನೀರು ಸುರಿದು ಬಂದಿದ್ದ ಶ್ರಾವಂತಿ ಪ್ರಶಾಂತನ ಅವಸ್ಥೆ ಕಂಡು ಕನಿಕರಗೊಂಡಳು.ಅವಳೇ ಜೋರು ಧ್ವನಿ ಮಾಡಿ ಪ್ರಶಾಂತನಿಗೆ ನೀರು ಹಿಡಿದುಕೊಟ್ಟಿದ್ದಳು.ಹಾಗೆ ನೀರು ಹಿಡಿದುಕೊಟ್ಟ ಶ್ರಾವಂತಿಗೆ ಒಂದು ಧನ್ಯವಾದ ಹೇಳದೆ ಪ್ರಶಾಂತ ಮನೆಯ ಕಡೆ ನಡೆದಿದ್ದ.ಶ್ರಾವಂತಿ ಲಾವಣ್ಯವಾಗಿ ಮೂಗು ಮುರಿದಿದ್ದಳು.ಆಕೆ ಮೂಗು ಮುರಿಯುವ ವೈಯ್ಯಾರ ಕಂಡು ಪ್ರಶಾಂತ ರೋಮಾಂಚಿತಗೊಂಡಿದ್ದನು.ಅಂದಿನಿಂದ ಪ್ರಶಾಂತ ತನ್ನ ಮನೆಗೆ ನೀರು ತರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದ.ಬಹುಶಃ ಅವನ ಎದೆಯೊಳಗೆ ಪ್ರೇಮ ಅಂದಿನಿಂದ ಮೊದಲಾಗಿರಬೇಕು.ಶ್ರಾವಂತಿಯೂ ಕೂಡಾ ನೀರು ತರುವ ಹೊತ್ತೂ ತನ್ನ ಗಮನವನ್ನೆಲ್ಲಾ ಅವನ ಮೇಲೆಯೇ ಇಟ್ಟಿರುತ್ತಿದ್ದಳು;ಪ್ರಶಾಂತ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದನು. 

 ಇದೆಲ್ಲವೂ ನಡೆದು ತಿಂಗಳುಗಳೇ ಕಳೆದಿದ್ದವು;ಅವರ ಪ್ರೇಮಕ್ಕೆ ಮಾತು ಬಂದಿರಲಿಲ್ಲ.ಅವಳೇ ಮೊದಲು ಮಾತನಾಡಿಸಲಿ ಎಂದು ಇವನು,ಇವನೇ ಮೊದಲು ಮಾತನಾಡಿಸಲಿ ಎಂದು ಅವಳು ಇಬ್ಬರೂ ಕಾಯ್ದದ್ದೇ ಬಂತು;ಅವರ ಪ್ರೇಮಕ್ಕೆ ಮಾತು ಬರಲಿಲ್ಲ.ಅದೊಂದು ದಿನ ಪ್ರಶಾಂತ ತನ್ನ ಆತ್ಮೀಯ ಗೆಳೆಯ ಶಶಾಂಕನಿಗೆ ತನ್ನ ಪ್ರೀತಿಯ ವಿಷಯ ಹೇಳಿಕೊಂಡನು.ತಾನು ಅವಳಿಲ್ಲದೆ ಬದುಕಿರಲಾರ ಎಂದು ಹೇಳಿಕೊಂಡನು.ಹೀಗೆ ಹೇಳುವ ಸಂದರ್ಭದಲ್ಲಿ ಅವನ ಕಣ್ಣಾಲಿಗಳು ತುಂಬಿ ಬಂದಿದ್ದವು.ಇವನ ಗಾಢವಾದ ಪ್ರೇಮ ಕಂಡು ಶಶಾಂಕ ಅಚ್ಚರಿಗೊಂಡಿದ್ದ.ಪ್ರೇಮ ಎನ್ನುವುದು ಅಶ್ಲೀಲ ಅರ್ಥ ಪಡೆದುಕೊಂಡಿರುವ ಕಾಲದಲ್ಲಿ ನಿಜಕ್ಕೂ ಒಬ್ಬರಿಗೊಬ್ಬರು ಮಾತನಾಡದೆ ಪರಸ್ಪರ ಗಾಢ ಪ್ರೇಮವನ್ನು ಹೊಂದಿರುವುದು ಅವನಿಗೆ ಆದರ್ಶವಾಗಿ ಕಂಡಿತ್ತು.ಪ್ರಶಾಂತ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಶಶಾಂಕ ಗೆಳೆಯನಿಗೆ ರೀತಿ ಹೇಳಿದ್ದ. 

 ನೋಡು ಪ್ರಶಾಂತ್,ಪ್ರೀತಿ ಪ್ರೇಮದ ವಿಷಯದಲ್ಲಿ ಮೊದಲ ಹೆಜ್ಜೆ ಇಡಬೇಕಾದದ್ದು ಗಂಡೇ,ನಿನ್ನ ಪ್ರೀತಿಯನ್ನು ಅಭಿವ್ಯಕ್ತಪಡಿಸುವುದರಲ್ಲಿ ಹಿಂಜರಿಕೆ ಏಕೆ?ನೀನು ತಪ್ಪು ಮಾಡುತ್ತಿಲ್ಲ.ತಪ್ಪು ಮಾಡಲು ಹೆದರಬೇಕು.ಪ್ರಾಮಾಣಿಕವಾಗಿ ನೀನವಳನ್ನು ಪ್ರೀತಿಸುತ್ತಿರುವೆ,ಅವಳಿಲ್ಲದೆ ಬದುಕಲಾರೆ ಎಂದೂ ಹೇಳುತ್ತಿರುವೆ.ಅಂದರೆ ಪ್ರೀತಿ ನಿನ್ನ ಮರ್ಮದವರೆಗೆ ಸಾಗಿ ಹೋಗಿದೆ.ನಿನ್ನ ತುಂಬಿ ಬರುತ್ತಿರುವ ಕಣ್ಣುಗಳನ್ನು ನೋಡಿದರೆ ನೀನು ನಿನ್ನದೆ ಹಿಡಿತದಿಂದ ದೂರವಾಗಿರುವೆ.ಪ್ರೀತಿಯ ಹುಚ್ಚನಾಗಿರುವೆ.ತಡಮಾಡಬೇಡ,ನಾಳೆ ಹಾಲು ತರಲು ಬರುತ್ತಾಳಲ್ಲಾ,ಆಗ ಮಾತನಾಡಿಸು.ಆಕೆಯನ್ನು ಮಾತಾಡಿಸುವುದರಲ್ಲಿ ತಪ್ಪೇನೂ ಇಲ್ಲ.ಅವಳೂ ನಿನ್ನನ್ನು ಪ್ರೀತಿಸುತ್ತಿದ್ದಾಳಲ್ಲ,ಏನೂ ಅವಘಡ ಸಂಭವಿಸುವುದಿಲ್ಲ.ಇನ್ನು ನಿನ್ನ ಹಿಂಜರಿಕೆ ನಾಚಿಕೆ ಭಯಗಳನ್ನು ಬಿಟ್ಟು ಬಿಡು.ಪ್ರೀತಿಗೆ ಅವು ಶೋಭೆಯಲ್ಲ.ಅವುಗಳಿರುವ ಯಾವ ಪ್ರೀತಿಯೂ ಗೆಲ್ಲುವುದಿಲ್ಲ.ಏನೇ ಆದರೂ ಜೊತೆಗೆ ನಾನಿದ್ದೇನೆ ಗೆಳೆಯ!”ಎಂದಿದ್ದನು. ಮಧ್ಯಾಹ್ನ ಪ್ರಶಾಂತ ಬೆವೆತು ಹೋಗಿದ್ದನು.ವಿಶಾಲವಾಗಿ ಹರಡಿದ್ದ ಹುಣಸೆ ಮರದ ಅಡಿಯಲ್ಲಿ ಅವರಿಬ್ಬರೂ ಕುಳಿತ್ತಿದ್ದರು.ಗಿಡದ ನೆರಳಿನ ಆಚೆ ಬಿಸಿಲು ಪ್ರಖರವಾಗಿತ್ತು.ಎಲ್ಲಿಂದಲೋ ಕೋಗಿಲೆಯ ಹಾಡು ಕೇಳಿ ಬರುತ್ತಿತ್ತು.ಉಳಿದಂತೆ ವಾತಾವರಣ ನಿಶ್ಯಬ್ದದಿಂದ ಕೂಡಿತ್ತು. 

ಯಾರಾದರೂ ನೋಡಿದರೆ ಏನು ಗತಿ?ಅವಳ ಅಪ್ಪನಿಗೆ ಹೇಳಿದರೆ ಅವಳ ಗತಿ ಏನು?ಅವಳ ಅಪ್ಪ ಅವಳಿಗೆ ಹೊಡೆದರೆ,ಅವಳು ನನ್ನ ಮೇಲೆ ಮುನಿಸಿಕೊಂಡರೆ?ನಾಳೆಯಿಂದ ಅವಳು ನನ್ನ ಕಡೆ ತಿರುಗಿ ನೋಡದಿದ್ದರೆ?ಅವಳ ನೋಟವಿಲ್ಲದೆ ಬದುಕಿರಬಲ್ಲನೇ?”ಎಂಬಿತ್ಯಾದಿ ಸಾವಿರ ಸಂದೇಹದ ಪ್ರಶ್ನೆಗಳನ್ನು ಪ್ರಶಾಂತ ಶಶಾಂಕನಿಗೆ ಕೇಳಿದನು. 

 ಇವೆಲ್ಲಾ ಪ್ರಶ್ನೆಗಳನ್ನು ಬಿಟ್ಟು ಮೊದಲು ನಿನ್ನ ಪ್ರೀತಿಯನ್ನು ಅಭಿವ್ಯಕ್ತಿಸು,ುಂದೇನಾಗುತ್ತದೋ ನೋಡೋಣಎಂದು ಶಶಾಂಕ ಮಾತು ಮುಗಿಸಿದ್ದನು. 

 ತುಂಬಾ ಯೋಚಿಸಿಯಾದ ಮೇಲೆ ಪ್ರಶಾಂತ ಒಂದು ನಿರ್ಣಯಕ್ಕೆ ಬಂದನು.ತನ್ನ ಪ್ರೀತಿಯನ್ನು ಪತ್ರದ ಮೂಲಕ ತಿಳಿಸುವುದು ಎಂದು!ನಿಜಕ್ಕೂ ಆಲೋಚನೆಯೇ ಸರಿ ಅನ್ನಿಸಿತ್ತು.ಮೊದಲ ಪ್ರೇಮದ ಮೊದಲ ಮಾತು ಭಯದಿಂದ ತೊದಲಿದರೆ ಅವಳೇನಾದರೂ ಅಂದುಕೊಂಡರೆ ಎನ್ನುವ ಆಲೋಚನೆಯೇ ಅವನಿಗೆ ಪತ್ರ ಬರೆಯಲು ಪ್ರೇರೇಪಿಸಿತ್ತು.ದಿನಂಪ್ರತಿ ಹಾಲಿಗೆಂದು ಬರುವ ಅವಳಿಗೆ ಗುಡಿ ಮಗ್ಗಲಲ್ಲಿ ನಿಂತು ಕೊಟ್ಟು ತಿರುಗಿ ನೋಡದೆ ಬಂದರೆ ನಂತರ ಅವಳಿಂದ ಉತ್ತರ ಬಂದೀತು! ತನ್ನ ಮೊದಲ ಪ್ರೇಮಪತ್ರಕ್ಕೆ ಉತ್ತರ ಬಂದ ಮೊದಲ ದಿನವೇ ತನ್ನ ಜೀವನದ ಭವ್ಯ ದಿನಬಾಗಲಿದೆ.ಹಾಗೆಂದು ಯೋಚಿಸಿ ಅವನು ಪ್ರೇಮ ಪತ್ರವನ್ನು ಅತ್ಯಂತ ಶ್ರದ್ಧೆಯಿಂದ ಬರೆದನು: 

 ಒಲವಿನ ಗೆಳತಿ, 

ನಿನಗಿದೋ ನನ್ನ ಹೃದಯದ ಪ್ರೇಮ ನಮನಗಳು.ನಿನ್ನ ಕರುಣೆಯ ಅನಾವರಣದಲಿ ತಾಯಿಯಾಗಿ ಹೃದಯ ಸೇರಿದೆ.ನಿನ್ನ ಪ್ರೆಮದ ಕುಡಿನೋಟ ಬೀರಿ ಪ್ರೇಮ ಸಖಿಯಾಗಿ ಹೃದಯ ಗರ್ಭದ ಪ್ರೇಮ ಸಿಂಹಾಸನವ ಸೇರಿದೆ.ನನ್ನ ಧಮನಿ ಧಮನಿಯೊಳಗೆ ರಕ್ತವಾಗಿ ನೆಲಸಿದೆ.ನನ್ನ ಪ್ರತಿ ಶ್ವಾಸ ನಿಶ್ವಾಸದ ತುಂಬಾ ನಿನ್ನ ಹೆಸರ ಸೇರಿಸಿದೆ.ನೀನಿಲ್ಲದೆ ಇರಲಾರೆ ಒಂದುಕ್ಷಣ,ನನ್ನಿಡೀ ಬದುಕು ಜೀವನ ನಿನಗೆ ಸಮರ್ಪಣೆ. 

ನಿನ್ನ ನೆನಪೇ ನನಗೆ ಉಸಿರು 

ನಿನ್ನ ನೆನಪೇ ನನಗೆ ಹಸಿರು 

ನಿನ್ನ ನೆನಪೇ ನನಗೆ ಊಟ 

ನಿನ್ನ ನೆನಪೇ ನನಗೆ ನೀರು 

ಕನಸಲ್ಲೂ ಕಾಡುತ್ತಿರುವೆ,ನೆನಸಲ್ಲೂ ನೆಲಸಿರುವೆ,ನನ್ನ ಪ್ರತಿ ಹೃದಯ ಬಡಿತವೂ ಹೇಳುತ್ತಿದೆ ನಿನ್ನ ಹೆಸರು.ನಿನ್ನ ಸ್ಮರಿಸದ ಕ್ಷಣ ನನಗೊಂದು ಯುಗ.ನೀನಿಲ್ಲದೆ ಬದುಕಿರಲಾರೆ ನಲ್ಲೆ,ನನ್ನ ಪ್ರಾಣವೆಲ್ಲವೂ ನಿನ್ನಲ್ಲೆ. 

ಕಾಣುವ ಪ್ರತಿ ದೃಶ್ಯದಲಿ ನೀನಿರುವೆ 

ಕೇಳುವ ಪ್ರತಿ ಧ್ವನಿಯಲಿ ನೀನಿರುವೆ 

ಸ್ಪರ್ಷದಲಿ ನೀನಿರುವೆ 

ಕಣ್ಣಪಾಪೆಗೆ ಅಡ್ಡವಾಗಿರುವ ನಿನ್ನ ಚಿತ್ರದಿಂದ 

ನಾನು ಹೇಗೆ ಕಾಣಲಿ ಜಗವಾ? 

ಪ್ರಿಯ ಸಖಿ, 

ನಿನ್ನ ಕಣ್ಣೊಳಗೆ ಕಣ್ಣಿಟ್ಟು ಮಾತನಾಡುವ ಧೈರ್ಯ ನನಗಿಲ್ಲ.ಕಾರಣವಿಷ್ಟೆ;ನಿನ್ನ ತಿರಸ್ಕಾರದ ಭಯ. ಪ್ರೇಮದ ಓಲೆಯನು ನನ್ನೆಲ್ಲಾ ಗೌರವವನು ಸಮರ್ಪಿಸಿ ಬರೆದಿರುವೆ.ನಿನ್ನ ಉತ್ತರದಲಿ ನನ್ನ ಜೀವವಿದೆ ಮರೆಯದಿರು! 

                                                                ಇಂತಿ ಪ್ರಶಾಂತ 

ಪತ್ರ ಬರೆದಾದ ಮೇಲೆ ಏನೋ ಎದೆಭಾರ ಕಡಿಮೆಯಾದ ಭಾವದಲ್ಲಿ ಪ್ರಶಾಂತ ಒಂದು  ನಿಡಿದಾದ ನಿಟ್ಟುಸಿರನ್ನು ಹೊರ ಹಾಕಿದ; ನಿಟ್ಟುಸಿರು ಬೆಚ್ಚಗಿತ್ತು. 

 ಇನ್ನೇನು ಬೆಳಗಿನ ಆರು ಗಂಟೆಯ ಸಮಯ;ಕೈಯಲ್ಲಿ ಪುಸ್ತಕ ಹಿಡಿದು ಆಂಜನೇಯನ ದೇವಸ್ಥಾನದ ಕಟ್ಟೆಗೆ ಪ್ರಶಾಂತ ಅವಳ ದಾರಿ ನಿರೀಕ್ಷಿಸಿ ಕುಳಿತುಕೊಂಡಿದ್ದ.ಅವಳಿನ್ನೇನು ಬರುತ್ತಾಳೆ.ಮಡಚಿದ ಪುಸ್ತಕದಲ್ಲಿ ಪ್ರೇಮಪತ್ರವಿತ್ತು.ದೇವಸ್ಥಾನದ ಕಟ್ಟೆಯ ಪಕ್ಕದಲ್ಲಿ ತಮ್ಮಯ್ಯನ ದನದ ಕೊಟ್ಟಿಗೆಗೆ ಹಾದು ಹೋಗುವ ದಾರಿ ಇತ್ತು;ಆಕೆ ಬಳಕುವ ಬಳ್ಳಿಯ ಹಾಗೆ ಅಪ್ಪಟ ಲತಾಂಗಿಯಂತೆ ಇನ್ನೇನು ನಡೆದು ಬರುತ್ತಾಳೆ.ಚಿತ್ರದ ಸೀರೆ ಉಟ್ಟಿರುವ ಆಕೆ ಸುಂದರವಾದ ಚಿಟ್ಟೆಯಂತೆ ಕಾಣಿಸುತ್ತಾಳೆ.ಕಟ್ಟೆಗೆ ತೀರ ಹತ್ತಿರದಲ್ಲಿ ದಾರಿ ಇರುವುದರಿಂದ ಒಂದು ಸುಮಧುರ ಹೂವಿನ ಹಾಗೆ ಘಮ ಸೂಸುತ್ತಾ ನಡೆದು ಹೋಗುತ್ತಾಳೆ.ಆಕೆ ಹಾದಿ ಕ್ರಮಿಸಿದ ತುಂಬಾ ಹೊತ್ತಿನವರೆಗೆ ಪರಿಸರ ಹೂವಿನ ಘಮವನ್ನು ಹಿಡಿದಿಟ್ಟುಕೊಂಡಿರುತ್ತದೆ!ನನ್ನವಳು ಹಾದು ಹೋದ ಸಾಕ್ಷಿಗೆ ಹೆಜ್ಜೆ ಗುರುತು ಹುಡಕಬೇಕಿಲ್ಲ;ಆಕೆಯ ಪರಿಮಳದ ಕಂಪೇ ಸಾಕ್ಷಿ.ಅವಳ ಕಾಲ್ಗೆಜ್ಜೆಯ ಸದ್ದೇ ಸಾಕ್ಷಿ,ಹೃದಯ ಬಡಿತದ ಲಯಕ್ಕೆ ತಕ್ಕಂತಿರುವ ಅವಳ ಕಾಲ್ಗೆಜ್ಜೆಯ ಸದ್ದು ಒಂದು ಸೋಜಿಗ. 

 ಪ್ರಶಾಂತ ಅವಳನ್ನು ಧ್ಯೇನಿಸುತ್ತಾ ಕುಳಿತಿರುವಂತೆ ಕಾಲ್ಗೆಜ್ಜೆಯ ಸದ್ದು ಕೇಳಿ ಬಂದಿತು;ಶ್ರಾವಂತಿ ವೈಯ್ಯಾರದಿಂದ ನಡೆದು ಬರುತ್ತಿದ್ದಳು,ಅವಳು ಹತ್ತಿರ ಬರುತ್ತಿರುವಂತೆ ಪ್ರಶಾಂತನ ಎದೆ ಬಡಿತ ಜಾಸ್ತಿಯಾಯಿತು;ಏನೋ ಕಂಪನ;ತನ್ನನ್ನು ತಾನು ಮೈ ಮರೆತ ಭಾವ.ಪ್ರಶಾಂತ ಭಾವಲೋಕದಲ್ಲಿ ತೇಲಿ ಹೋದನು.ಸಾಕ್ಷಾತ್ ರತಿ ದೇವಿಯೇ ಧರೆಗಿಳುದು ಬಂದಂತಹ ಪ್ರತಿರೂಪ ಶ್ರಾವಂತಿ,ಅವಳ ಬಿಚ್ಚು ಹೆರಳು, ಹೆರಳಿಗೆ ಸಿಕ್ಕಿಸಿಕೊಂಡ ಗುಲಾಬಿ ಹೂ,ಹಣೆಯ ಭ್ರೂಮಧ್ಯೆದಲ್ಲಿ ಮಟ್ಟಸವಾಗಿ ಇಟ್ಟುಕೊಂಡ ಕೆಂಪು ಬಿಂದಿ,ಕೈತುಂಬಾ ಬಳೆಗಳು,ಚಿತ್ತಾರದ ಹಸಿರು ಸೀರೆ,ಅಳೆದು ಕಡಿದು ರೂಪಿಸಿದ ವಿಶ್ವಕರ್ಮನ ಶಿಲ್ಪದ ಗೊಂಬೆಯಂತಿರುವ ಅವಳು ಬೇಲೂರ ಶಿಲಾ ಬಾಲಿಕೆಯರ ಕೆತ್ತನೆಗೆ ಜಕಣಾಚಾರ್ಯರಿಗೆ ಸ್ಪೂರ್ತಿಯಂತಿದ್ದಳು... 

 ಇವನು ಭಾವಲೋಕದಲ್ಲಿ ತೇಲಿರುವಂತೆ,ಶ್ರಾವಂತಿ ಅಲ್ಲಿಂದ ಸಾಗಿ ಮುಂದೆ ಹೋದಳು.ಪತ್ರ ಕೊಡುವುದು ಇವತ್ತೂ ಸಾಧ್ಯವಾಗಲಿಲ್ಲ. 

 ಏನಾಗಿದೆ ಅವನಿಗೆ?ಏನಾಗಿದೆ ತನಗೆ?ಯಾಕೆ ತಾವಿಬ್ಬರೂ ಮಾತಾಡುತ್ತಿಲ್ಲ?ಶ್ರಾವಂತಿ ಅದೊಂದು ಮಧ್ಯಾಹ್ನ ಯೋಚಿಸತೊಡಗಿದ್ದಳು.ಅವಳ ಮನಸ್ಸೂ ಇತ್ತೀಚೆಗೆ ಕಲ್ಪನಾವಿಲಾಸದಲ್ಲಿ ಆಕೆಯನ್ನು ತೇಲಿಸತೊಡಗಿತ್ತು.ಮೊಟ್ಟಮೊದಲ ಪ್ರೇಮ ಹೂವಾಗಿ ಹೃದಯ ತೋಟದಲ್ಲಿ ಅರಳಿತ್ತು.ಮನಸ್ಸು ಒಮ್ಮೆ ಹಗುರವಾದಂತೆ ಇನ್ನೊಮ್ಮೆ ಹೃದಯ ಭಾರವಾದಂತೆ ಭಾಸವಾಗತೊಡಗಿತ್ತು.ತನ್ನ ದೈನಂದಿನ ಬದುಕೂ ಏರುಪಾರಾದಂತೆ ಅನ್ನಿಸತೊಡಗಿತ್ತು;ಆಕೆ ಎಷ್ಟೋ ಸಲ ಮನೆಯಲ್ಲಿ ನೀರಿದ್ದರೂ ಕೊಡಗಳನ್ನು ಬಚ್ಚಲಿಗೆ ಸುರಿದು ಬೀದಿ ನಲ್ಲಿಗೆ ನೀರು ತರಲು ಬರುತ್ತಿದ್ದಳು.ಅವನನ್ನು ಕಾಣುವ ಹಂಬಲ ಆಕೆಯಲ್ಲಿ ಪ್ರತೀಕ್ಷಣವೂ ಹೆಚ್ಚಾಗುತ್ತಿತ್ತು.ಕನಸಿನಲ್ಲಿ ಅವನು ರಾಜಕುಮಾರನಾಗಿ ಕುದುರೆ ಏರಿ ಬಂದು ತನ್ನನ್ನು ಕರೆಯುತ್ತಿರುವಂತೆ ಅನ್ನಿಸುತ್ತಿತ್ತು.ತಾವಿಬ್ಬರೂ ದೂರದ ಲೋಕವೊಂದಕ್ಕೆ ಹೋದಂತೆ,ಅಲ್ಲಿ ಬಗೆಬಗೆಯ ಹೂವುಗಳಿರುವ ತೋಟದಲ್ಲಿ ಸುಂದರವಾದ ಕುಟೀರದೋಪಾದಿಯಲ್ಲಿ ಮನೆಯೊಂದನ್ನು ಕಟ್ಟಿಕೊಂಡಂತೆ,ಹೂವುಗಳ ಮಧ್ಯೆ,ಚಿಟ್ಟೆಗಳ ಮಧ್ಯೆ ದಿನವಿಡೀ ಪ್ರೇಮ ಸರಸ ಸಲ್ಲಾಪಗಳಲ್ಲಿ ಜೀವನ ಸಾಗಿಸುತ್ತಿರುವಂತೆ ಕನಸುಗಳು ಕಾಣತೊಡಗಿದ್ದವು. 

 ತಾವಿಬ್ಬರೂ ಹತ್ತಿರವಾಗುವುದು ಹೇಗೆ?ಲಜ್ಜೆ ಮರೆತು ತಾನೇ ಆತನನ್ನು ಮಾತನಾಡಿಸಿ ಬಿಡಲೇ?ಶ್ರಾವಂತಿ ಹಾಗೊಂದು ನಿರ್ಧಾರಕ್ಕೆ ದಿನಕ್ಕೊಮ್ಮೆಯಾದರೂ ಬರುತ್ತಿದ್ದಳು. ಉಗಾದಿಯ ಹೊಸ ವರ್ಷ ಆರಂಭವಾಗುವುದರೊಂದಿಗೆ ತಮ್ಮ ಪ್ರೇಮವೂ ಹೊಸ ವರ್ಷದಲ್ಲಿ ನವ ಉಲ್ಲಾಸದೊಂದಿಗೆ ಸಾಗಬೇಕು,ತಾವಿಬ್ಬರೂ ಉಗಾದಿಯ ಹೊತ್ತಿಗೆ ಒಂದಾಗಲೇಬೇಕು ಎಂದುಕೊಂಡಳು ಶ್ರಾವಂತಿ. 

ಹೀಗೆ ಮೂಡಿಯಾಗಿ,ಏಕಾಗ್ರರಹಿತಳಾಗಿ,ಏಕಾಗ್ರಸಹಿತವಾಗಿ ಕುಳಿತಿರುತ್ತಿದ್ದ ಮಗಳ ವರ್ತನೆಯನ್ನು ದಂಪತಿಗಳಿಬ್ಬರೂ ಗಮನಿಸಿದ್ದರು;ತಮ್ಮ ಮಗಳಿಗೆ ಏನೋ ಆಗಿದೆ ಎಂದು ಅವರು ನಿರ್ಧರಿಸುತ್ತಿರುವಂತೆ ಇನ್ನೂ ಹತ್ತಿರವಾಗದ ಪ್ರಶಾಂತ ಶ್ರಾವಂತಿಯ ಪ್ರೇಮ ಊರ ತುಂಬಾ ಘಮಘಮಿಸತೊಡಗಿತ್ತು.ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಿಯಲ್ಲಿ ಇವರಿಬ್ಬರ ಪ್ರೀತಿ ನಾನಾ ಅರ್ಥ ಪಡೆದು ಕಂಪು ಸೂಸತೊಡಗಿತ್ತು.ಇದರ ಪರಿಣಾಮ ಏನಾಯಿತು ಎಂದರೆ... 

 ಅಂದು ಉಗಾದಿ;ಹೊಸ ವರ್ಷ!ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬ ಮನೆಮನೆಗಳನ್ನು ತಳಿರುತೋರಣಗಳಿಂದ ಶೃಂಗರಿಸಲ್ಪಡುವುದು,ಹೊಸ ಬಟ್ಟೆ,ಹೊಸ ಸಿಹಿ ಅಡುಗೆಯಿಂದ ಗ್ರಾಮೀಣರು ಬೇವುಬೆಲ್ಲವನ್ನು ಹಂಚಿಕೊಳ್ಳುತ್ತಾ ಸಂಭ್ರಮಪಡುವರು.ಅಂದು ಪ್ರಶಾಂತ ತಾನು ಬರೆದ ಪ್ರೇಮಪತ್ರವನ್ನು ತನ್ನ ಪ್ರಿಯತಮೆಗೆ ತಲಿಪಿಸುವ ನಿರ್ಧಾರ ಮಾಡಿದ್ದನು.ಅದಕ್ಕೆಂದು ಒಬ್ಬ ಹುಡುಗನನ್ನು ಸಿದ್ದ ಮಾಡಿದ್ದನು.ಇನ್ನೇನು ಮಧ್ಯಾಹ್ನದ ಹೊತ್ತಿಗೆ ಹುಡುಗ ತನ್ನ ಪತ್ರವನ್ನು ಆಕೆ ತಲುಪಿಸುತ್ತಾನೆ ಎನ್ನುವ ಖುಷಿ ಆತನಲ್ಲಿ ಮೂಡಿತ್ತು.ಬರೆದಿಟ್ಟ ಪತ್ರವನ್ನು ಆತ ತನ್ನ ಮನೆಯ ಮುಂದಿನ ತಾನು ಎಂದಿನಂತೆ ಕುಳಿತು ವ್ಯಾಸಂಗ ಮಾಡುತ್ತಿದ್ದ ಕಟ್ಟೆಯ ಮೇಲೆ ಇಟ್ಟು ಯಾವುದೋ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದನು.ಸಮಯ ಮಧ್ಯಾಹ್ನದ ಒಂದು ಗಂಟೆಯಾಗಲಿಕ್ಕೆ ಇನ್ನೂ ಅರ್ಧ ತಾಸಿತ್ತು. 

 ಅದ್ಯಾವಾಗ ಬಾನಿನಲ್ಲಿ ಮೋಡಗಳು ದಟ್ಟೈಸಿದವೋ ಕಾಣೆ,ಹೊಸ ವರ್ಷದಂದು ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಪ್ರಾರಂಭವಾಯಿತು.ಊರಿನ ಕೊಳೆ ಎಲ್ಲವನ್ನೂ ತೊಳೆದು ಹಾಕುವಂತೆ ಸುರಿದ ಮಳೆ ನಿರಂತರ ಒಂದು ಗಂಟೆಗಳ ಕಾಲ ಸುರಿಯಿತು.ಮಳೆ ನಿಂತ ಮೇಲೆ ನೆನಪಾಯಿತು;ತಾನು ಬರೆದ ಪ್ರೇಮಪತ್ರ ಮನೆಯ ಹೊರಗಡೆ ಇಟ್ಟು ಬಂದಿದ್ದೇನೆ ಎಂದು! ಮನೆಗೆ ಹೋಗಿ ನೋಡಲಾಗಿ ಪತ್ರ ತೋಯ್ದು ಹರಿದು ಹೋಗಿತ್ತು.ಆತ ಅದರಲ್ಲಿ ಬರೆದ ನೀಲಿ ಬಣ್ಣದ ಇಂಕು ಕರಗಿ ಅಕ್ಷರಗಳನ್ನು ಅಳಸಿ ಹಾಕಿತ್ತು,ಛೆ,ಎಂದುಕೊಳ್ಳುವಷ್ಟರಲ್ಲಿ ಹುಡುಗ ಬಂದು ಪ್ರಶಾಂತನಿಗೆ ಹೇಳಿತು:ಅಣ್ಣ,ಅಕ್ಕಂಗೆ ಅವರ ಮನೆಯಲ್ಲಿ ತುಂಬಾ ಹೊಡೆದಿದ್ದಾರೆ,ಅಕ್ಕ ಅಳುತ್ತಿತ್ತು ಎಂದನು.ಅದೇಕೆ ಎಂದು ಪ್ರಶಾಂತನಿಗೆ ಅರ್ಥವಾಗಿ ಕಣ್ಣಿನಲ್ಲಿ ನೀರು ಬಂದವು;ತನ್ನ ಪ್ರೀತಿ ಸತ್ತಂತೆ ಅಂತ ಯಾಕೋ ಅವನ ಹೃದಯ ಹೇಳಿತು. 

ಅಂದೇ ಉಗಾದಿಯ ದಿನ,ಪ್ರೇಮ ಪತ್ರ ಮನೆಯ ಹಿರಿಯರಿಗೆ ಸಿಕ್ಕು,ಇನ್ನೇನು ತನಗೆ ಏನೋ ಆಗಲಿದೆ ಎಂದು ಭಾವಿಸಿದ ಶ್ರಾವಂತಿಯ ಓರಿಗೆಯ,ಶ್ರಾವಂತಿಯ ಗೆಳತಿ ಪಕ್ಕದ ಊರಿನ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಆಕೆಯ ಓರಿಗೆಯ ಹುಡುಗಿಯರ ಎದೆ ನಡುಗಿಸಿತ್ತು ಸುದ್ದಿ! 

 ಬಿಸಿಲ ಧಗೆಯ ಒಂದು ದಿನ ಇನ್ನೊಂದು ಪುಟದಲ್ಲಿ ಸುಂದರ ರಂಗೋಲಿ ಚಿತ್ರ ಬರೆದ ಪತ್ರವೊಂದು ಪ್ರಶಾಂತನಿಗೆ ತಲುಪಿತು. “ನೀನು ಕೀಳು ಜಾತಿಯವನಂತೆ,ಿನ್ನ ಜೊತೆ ಸೇರಿದರೆ ತಾವು ವಿಷ ಕುಡಿದು ಸಾಯುತ್ತಾರಂತೆ,ಅವರ ಮಾನ ಮರ್ಯಾದೆ ಹೋಗುತ್ತದೆಯಂತೆ,ದಯವಿಟ್ಟು ಜನ್ಮದಲ್ಲಿ ನನ್ನ ಕಡೆ ತಿರುಗಿ ನೋಡಬ್ಯಾಡ. ನೋಟ ಸಹಿಸುವ ಶಕ್ತಿ ನನಗಿಲ್ಲ.”ಎಂದು ಬರೆದಿತ್ತು. 

 ಹಳ್ಳದ ಮರಳಿನಲ್ಲಿ ನಿತ್ರಾಣಗೊಂಡ ದೇಹದಿಂದ ಅಂಗಾತ ಮಲಗಿದ್ದ ಪ್ರಶಾಂತ ಅಳುತ್ತಿದ್ದ.ಪ್ರೀತಿ ಚಿಗುರುವ ಮುನ್ನ ಸತ್ತು ಹೋಗಿತ್ತು! 

                                                                                          ಲಕ್ಷ್ಮೀಕಾಂತ ನಾಯಕ 9845968164 

 

                                                                                            

Google  News WhatsApp Telegram Facebook
HTML smaller font

.

.