ಸಮಯಕ್ಕೆ ಸರಿಯಾಗಿ ತೆರೆಯದ ಶಾಲೆ,ಸೂಗೂರು ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಪರದಾಟ

Jul 8, 2023 - 10:30
 0  111

Google  News WhatsApp Telegram Facebook

Janaa Akrosha News Desk.

ದೃಶ್ಯದಲ್ಲಿ ನೀವು ಕಾಣುತ್ತಿರುವ ಶಾಲೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸೂಗೂರು ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲೆ.ಇಂದು ಶನಿವಾರ,ಶಾಲೆ ಆರಂಭವಾಗುವ ಸಮಯ ಬೆಳಿಗ್ಗೆ ಎಂಟು ಗಂಟೆ. ಎಂಟುವರೆಯಾದರೂ ಯಾವ ಶಿಕ್ಷಕರೂ ಶಾಲೆಗೆ ಬಂದಿಲ್ಲ.ಶಿಕ್ಷಕರೇ ಶಾಲೆಗೆ ಬಂದಿಲ್ಲ ಎಂದ ಮೇಲೆ ಮಕ್ಕಳೇಕೆ ಶಾಲೆಗೆ ಬರುತ್ತವೆ? ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಓದಿಸಬೇಕು ಎನ್ನುವವರ ಮಕ್ಕಳಲ್ಲ.ಮಾನ್ಯ ಸಿದ್ದರಾಮಯ್ಯನವರ ಉಚಿತ ಅಕ್ಕಿಯ ಗಿರಾಕಿಗಳ ಮಕ್ಕಳು. ಕೂಲಿನಾಲಿ ಹೋಗುವ ಬಡಪಾಯಿಗಳು ಮಕ್ಕಳು ಮೈಗಂಟದಿರಲಿ ಎಂದು ಶಾಲೆಗೆ ಕಳುಹಿಸುತ್ತವೆ,ಊಟ ಪಾಠ ಪುಗಸಟ್ಟೆಯಾಗುತ್ತದೆ ಎಂದು.

ಕಾಳಜಿಯುಳ್ಳ ಗ್ರಾಮಸ್ಥರು ಈ ಶಾಲೆಯ ಮುಖ್ಯ ಗುರುಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿದ್ದಾರೆ, ಆತ ಉಡಾಫೆಯ ಉತ್ತರ ನೀಡಿದ್ದಾನೆ. ಸರ್ಕಾರದ ಸಂಬಳದ ಫಿಕ್ಸ್ ಗಿರಾಕಿಯಾದ ಆತನಿಗೆ ಜನರ ಭಯ ಏಕಿರುತ್ತದೆ? ಡ್ಯೂಟಿ ಮಾಡಿದರೂ ಸಂಬಳ ಬರುತ್ತದೆ, ಮಾಡದಿದ್ದರೂ ಫಗಾರ ಬರುತ್ತದೆ. ಕೇಳುವವರು ಕೀಳುವವರು ಯಾರು ಎನ್ನುವ ಧೈರ್ಯ ಅವರಿಗೆ. ಏಕೆಂದರೆ ಅವರು ಈ ದೇಶದ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಅಧ್ಯಯನ ಮಾಡಿದ ಸಂಶೋಧಕರು. ಮೇಲಾಧಿಕಾರಿಗಳು ಹೇಗೆ ಏನು ಎನ್ನುವುದು ಅವರಿಗೆ ಗೊತ್ತಿರುತ್ತದೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಗಳು ನಾಶವಾಗಿ ಬಡವರಿಗೆ ಶಿಕ್ಷಣದ ಹಕ್ಕು ದಕ್ಕದೆ ಹೋಗಿ ಖಾಸಗಿ ಶಾಲಾ ಉದ್ಯಮಿಗಳಿಗೆ ಲಾಭವಾಗಬೇಕು, ಇದು ಇವರ ಇಂಗಿತ.

ನಿಮಗೊಂದು ಸಂಗತಿ ಗೊತ್ತಿರಲಿ: ಗ್ರಾಮೀಣ ಶಾಲೆಗಳಿಗೆ ಶಿಕ್ಷಕರ ಕೊರತೆ ಇದೆ, ಇರುವ ಶಿಕ್ಷಕರು ನೂರಾರು ಕಿಲೋಮೀಟರ್ ದೂರದಲ್ಲಿ ವಾಸವಿದ್ದು ತಾವು ಕರ್ತವ್ಯ ನಿರ್ವಹಿಸುವ ಶಾಲೆಗೆ ಕಾಲಕ್ಷೇಪಕ್ಕೆಂಬಂತೆ ಬರುತ್ತಾರೆ. ನೀವು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಯಿಂದ ಮಗ್ಗಿಯನ್ನು ಅಆಇಈಯನ್ನೂ ತಪ್ಪಿಲ್ಲದೆ ಓದಿಸಲಾರಿರಿ. ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಪದರಚನೆ ಬಾರದಿರುವುದು ಯಾದಗಿರಿ ಜಿಲ್ಲೆಯ ದುರಂತ.

ಸಮಾಜವಾದಿ ಸಿದ್ದರಾಮಯ್ಯನ ಸರ್ಕಾರ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಒತ್ತು ನೀಡುವುದಾಗಿ ಹೇಳಿದ್ದಲ್ಲದೆ ಸಾಕಷ್ಟು ಅನುದಾನವನ್ನೂ ಒದಗಿಸಿದೆ. ಆದರೆ ಸರ್ಕಾರಿ ಶಾಲೆಗಳನ್ನು ನಿರ್ವಹಿಸುವ ಇಲಾಖೆ ಮತ್ತು ಅಧಿಕಾರಿಗಳು ಹಾಗೂ ಶಿಕ್ಷಕ ವರ್ಗ ಈ ರೀತಿಯ ನಿರ್ಲಕ್ಷ್ಯ ಕರ್ತವ್ಯವನ್ನು ನಿರ್ವಹಿಸುತ್ತಿದೆ.

ಸೂಗೂರಿನ ನಾಗರಿಕರ ಪ್ರಶ್ನೆ ಏನೆಂದರೆ ಸಮಯಕ್ಕೆ ಸರಿಯಾಗಿ ಶಾಲೆ ನಡೆಸದ ಶಾಲಾ ಸಿಬ್ಬಂದಿಗಳ ಮೇಲೆ ಯಾದಗಿರಿ ಜಿಲ್ಲಾಡಳಿತ ಮತ್ತು ಸುರಪುರ ತಾಲ್ಲೂಕು ಆಡಳಿತ ಹಾಗೂ ಶಾಸಕರು ಯಾವ ಕ್ರಮವನ್ನು ಕೈಗೊಳ್ಳಲಿದೆ ಎನ್ನುವುದು. ಬರಿ ಇದು ಸುರಪುರ ತಾಲ್ಲೂಕಿನ ಸೂಗೂರು ಗ್ರಾಮದ ಸಮಸ್ಯೆ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಇಂತಹ ಸಮಸ್ಯೆಗಳಿವೆ ಯಾರು ಸರಿಪಡಿಸುತ್ತಾರೆ ಎನ್ನುವುದು ಅನೇಕ ಹೋರಾಟಗಾರರ ಪ್ರಶ್ನೆಯಾಗಿದೆ.

Google  News WhatsApp Telegram Facebook
HTML smaller font

.

.