ಭ್ರಮೆಯೊಳಗಿನ ತೊಲಳಾಟ 

Jul 18, 2023 - 10:13
 0  34

Google  News WhatsApp Telegram Facebook

ಭ್ರಮೆಯೊಳಗಿನ ತೊಲಳಾಟ 

Janaa Akrosha News Desk.

ಭ್ರಮೆಯೊಳಗಿನ ತೊಲಳಾಟ 

 

ಬದುಕು ಸುಂಟರಗಾಳಿಯೋ,ಸುಂಟರಗಾಳಿಯಲ್ಲಿ ತಾನಿದ್ದೇನೆಯೋ ಎಂದು ಅರಿವಾಗುವಷ್ಟರಲ್ಲಿ ಸುಮತಿಗೆ ಕತ್ತಲ ತೆರೆ ಸರಿಯತೊಡಗಿತ್ತು.ಎಲ್ಲವೂ ಮಾಯೆಯ ಹಾಗೆ,ಎಲ್ಲವೂ ನಶ್ವರದ ಹಾಗೆ,ಎಲ್ಲವೂ ಒಂದು ಭ್ರಾಮಕ ಲೋಕದ ಹಾಗೆ ಕಾಣಿಸತೊಡಗಿತ್ತು.ವಂಚನೆಯ ಇನ್ನೊಂದು ಹೆಸರೇ ಗಂಡಸು ಎನ್ನುವ ಹುಚ್ಚು ಯೋಚನೆ ಆಕೆಗೆ ತುಂಬಾ ಸಲ ಕಾಡಿತ್ತು.ತಾನು ತಪ್ಪು ಮಾಡಿದ್ದೆÃನೆ ಎಂದು ಕೂಡಾ ಆಕೆಗೆ ಅನ್ನಿಸಿತ್ತು.ಪೂಜಾರಿ ತನ್ನ ಅವಶ್ಯಕತೆಯನ್ನು ಅರಿತಿದ್ದ ಎಂದು ಕೂಡಾ ಆಕೆ ಅರಿತಿದ್ದ.ಪೂಜಾರಿ ಅನ್ವೆÃಷಣೆಯಲ್ಲಿ ನಿರತನಾಗುತ್ತಾ ಆಗುತ್ತಾ ಆತ ನಿಶ್ಚಳನಾಗಿದ್ದ.ಆತ ಮಾಯಯ ಪರದೆ ಸರಿಸಿದ್ದ.ಹುಚ್ಚರ ಜಗತ್ತಿನಲ್ಲಿ ಜ್ಞಾನಿಯೇ ಹುಚ್ಚನಾಗುತ್ತಾನೆ.ಎಲ್ಲಾ ಭ್ರಮೆಗಳನ್ನು ತೊರೆದಾದ ಮೇಲೆಯ ಪೂಜಾರಿ ದೂರ ತೀರದ ಯಾನ ಕೈಗೊಂಡಿದ್ದ.ಪೂಜಾರಿ ಸತ್ಯ;ಪೂಜಾರಿ ಅರಿವು,ಪೂಜಾರಿ ಬೆಳಕು.... 

 

ಸುಮತಿ ತನ್ನ ಗತಕಾಲದ ಜೀವನದಲ್ಲಿ ತೇಲಿ ಹೋದಳು: 

 

ತನ್ನೆಲ್ಲಾ ಕೆಲಸಗಳ ಮಧ್ಯೆ ಪೂಜಾರಿಯ ಇಂದಿನ ಅಸಹಜ ವರ್ತನೆಯನ್ನು ಸುಮತಿ ಗುರುತಿಸಿದ್ದಳು;ಕೋಡಿ ಯ್ಯಾಕಿಂಗ್ ಮಾಡುತ್ತಿದೆ ಅಂತ ಮನಸ್ಸಿನಲ್ಲೆ ಅಂದುಕೊಂಡಳಾದರೂ ಅದರ ಬಗ್ಗೆ ತೀರಾ ಗಂಭೀರವಾಗಿ ಯೋಚಿಸಲಿಲ್ಲ.ಮಿಷಿನ್ ಹಿಂದೆ ರಾಶಿಗೆ ಹೊರಡಬೇಕಿರುವ ರವಿಗೆ ಅಕಿ ಬುತ್ತಿ ರೆಡಿ ಮಾಡಬೇಕಿತ್ತು.ಪಟಪಟ ಅಂತ ಒಲೆಯ ಮುಂದೆ ಕುಳಿತು ರೊಟ್ಟಿ ಬಡೆಯುವಾಗ ಮನಸ್ಸಿನ ತಂತುಗಳ ಒಳಗಿನ ವಿಲಕ್ಷಣ ತರಂಗಗಳು ತೇಲಿ ಬಂದು ಅನಿರ್ವಚನೀಯ ರೊಮಾಂಚನವನ್ನು ಮೂಡಿಸಿದವು;ರವಿ ತನ್ನ ಮನೆಯೊಳಗಿರದಿದ್ದರೆ ತನ್ನ ಬದುಕು ರಂಗೇರುತ್ತಿರಲಿಲ್ಲ ಎನ್ನುವ ಭಾವ ಮೂಡಿದಾಗ ಪೂಜಾರಿ ನೆನಪಿನಿಂದ ಮರೆಯಾಗಿದ್ದ.ಪೂಜಾರಿ ಪದೇ ಪದೇ ನೆನಪಿನಿಂದ ಮರೆಯಾಗುತ್ತಿದ್ದ.ಪೂಜಾರಿ ಅಸ್ತಿತ್ವ ಕಳೆದುಕೊಂಡರೆ ಎಷ್ಟು ಚೆಂದ ಅಂತ ಆಕೆ ಭಾವಿಸಿಕೊಳ್ಳುತ್ತಿದ್ದಳು.ಪೂಜಾರಿ ದೆವ್ವವಾಗಿದ್ದ;ಪೂಜಾರಿ ಭೂತವಾಗಿದ್ದ;ಪೂಜಾರಿ ಹಾಲಿನೊಳಗಣ ಬೆರೆತ ಹುಳಿಯಾಗಿದ್ದ;ಪಲ್ಯದೊಳಗೆ ಬೆರೆತ ಅತೀ ಹೆಚ್ಚಿನ ಉಪ್ಪಾಗಿದ್ದ!ಆಕೆ ಪಟಪಟ ರೊಟ್ಟಿ ಬಡೆಯುತ್ತಲೇ ನೆನಪುಗಳ ಸಾಗರದೊಳಗೆ ಮುಳುಗಿ ಹೋಗುತ್ತಿದ್ದಳು. 

 

ಪೂಜಾರಿ ವಿಲಕ್ಷಣ ಜೀವಿಯಾಗಿದ್ದ.ಪೂಜಾರಿ ಮಾಯೆಯ ಬೆನ್ನತ್ತಿದ ಲೌಖಿಕ ಸನ್ಯಾಸಿಯಾಗಿದ್ದ.ಪೂಜಾರಿ ನಿರಂತರ ಶಾಂತಿ ಹುಡುಕುವ ತಪಸ್ವಿಯಾಗಿದ್ದ.ಪೂಜಾರಿ ಹೆಣ್ಣುಗಳ ತೋಳಿನಲ್ಲಿ ವಿಲಕ್ಷಣ ಧ್ಯಾನ ಬಯಸುವ ಋಷಿಯಾಗಿದ್ದ.ಪೂಜಾರಿ ಹೆಣ್ಣೆಂಬ ಮೋಹದ ಕಡೆ ಕುರುಡಾಗಿ ಸಾಗಿ ಹೋಗುವ ಚಪಲಿಯಾಗಿದ್ದ.ಸದಾ ಸುಖದ ಅಶಾಂತಿಯಲ್ಲಿ ಆತ ಹೆಣ್ಣಿನ ದೇಹದಲ್ಲಿ ಭ್ರಮೆಯನ್ನು ಹುಡುಕುವ ತತ್ವಜ್ಞಾನಿಯಾಗಿದ್ದ.ಸಂತನಾಗಿದ್ದ.ಸರ್ವಸಂಗ ಪರಿತ್ಯಾಗಿಯಾಗಿದ್ದ.ಸೇದುವ ಬೀಡಿಯ ಹೊಗೆಯಲ್ಲಿ ವಿಲಕ್ಷಣ ಲೋಕ ಹುಡುಕುವ ಹುಚ್ಚನಾಗಿದ್ದ! 

 

ಪೂಜಾರಿಗೆ ತಾನು ಮೊದಲ ಹೆಂಡತಿಯಾಗಿದ್ದಳು.ಪೂಜಾರಿ ಅತೀ ಬೇಗನೆ ತನ್ನ ದೇಹ ನಿರ್ಮೋಹವಾಗಿತ್ತು.ಪೂಜಾರಿ ತನ್ನಿಂದ ವಿಮುಖನಾಗಿದ್ದ.ಪೂಜಾರಿ ಆಸಕ್ತಿ ಕಳೆದುಕೊಳ್ಳುವಷ್ಟರಲ್ಲಿ ತನಗೆ ಮೂರು ಮಕ್ಕಳು;ಗಂಡನ ಮನೆ ಸೇರದೆ ಮೂರು ಮಕ್ಕಳ ತಾಯಿಯಾಗಿ ತಾನು ತವರಿನಲ್ಲೇ ಉಳಿದಳು.ಪೂಜಾರಿ ದೂರವಾಗಿದ್ದ:ಹೂವಿನಿಂದ ಹೂವಿಗೆ ಹಾರುವ ದುಂಬಿಯಂತೆ!ಪೂಜಾರಿ ತನ್ನ ಊರಿನಲ್ಲಿ ಮತ್ತೊಂದು ತೋಳು ಸೇರಿದ್ದ.ಪೂಜಾರಿ ಯಾವುದೇ ಅರ್ಹತೆಯಿಲ್ಲದ ತನ್ನ ಸೌಂದರ್ಯದಲ್ಲಿ ಒಂದಂಶವೂ ಇಲ್ಲದ ಹೆಣ್ಣಿನಲ್ಲಿ ಅನುರಕ್ತನಾಗಿದ್ದ.ಪೂಜಾರಿ ಇನ್ನೊಂದು ಮಡಿಲಿನಲ್ಲಿ ಈಜುತ್ತಾ ತನ್ನಿಂದ ದೂರವಾಗಿದ್ದ.ಆಗ ಮೂಡಿತ್ತಾ ರೊಚ್ಚು? 

 

ಸುಮತಿ ಯೋಚಿಸತೊಡಗಿದಳು. 

 

ಸುಮತಿಯ ಬದುಕಿ ಇದ್ದಕ್ಕಿದ್ದಂತೆ ಗ್ರಹಣಕ್ಕೊಳಗಾಗಿತ್ತು.ಸೂರ್ಯ ಮರೆಯಾದ ಹಾಗೆ ಆಕೆಯ ಬದುಕು ಅಂಧಕಾರಕ್ಕೆ ಈಡಾಗಿತ್ತು.ಮೂರು ಮಕ್ಕಳೊಂದಿಗೆ ಗಂಡನಿಲ್ಲದೆ ಬದುಕು ಸಾಗಿತ್ತಾದರೂ ಆಕೆಯ ಜೀವನ ನಾಮಫಲಕವಿಲ್ಲದ ಬಸ್ಸಿನಂತಾಗಿತ್ತು.ಸೌಂದರ್ಯದಲ್ಲಿ ಸುಮತಿಗಿಂತ ಯಾವ ಅರ್ಥದಲ್ಲೂ ಸಾಟಿ ಇಲ್ಲದ ಹೆಣ್ಣನ್ನು ಪೂಜಾರಿ ಮದುವೆಯಾಗಿದ್ದ.ಆಕೆಯ ಅಹಂಗೆ ಭಾರೀ ಪೆಟ್ಟು ಬಿದ್ದಿತ್ತು.ಹಣದ ತೊಂದರೆ ಏನೂ ಇರಲಿಲ್ಲ.ಪೂಜಾರಿ ಆರ್ಥಿಕವಾಗಿ ಆಕೆಯನ್ನು ಚೆನ್ನಾಗಿಯೇ ಇಟ್ಟಿದ್ದ.ಉಣ್ಣಲಿಕ್ಕೆ ತಿನ್ನಲಿಕ್ಕೆ,ಬಟ್ಟೆ ಬರೆ,ಬಂಗಾರ ಸಮೃದ್ಧವಾಗಿ ಕೊಡಮಾಡಿದ್ದ.ಧವಸ ದಾನ್ಯದ ಕೊರತೆ ಮಾಡಿರಲಿಲ್ಲ.ಹಾಲು ಮೊಸರು ತುಪ್ಪ ಸಮೃದ್ಧವಾಗಿತ್ತು.ಬದುಕಿಗೆ ಆರ್ಥಿಕ ಭದ್ರತೆಯನ್ನು ಪೂಜಾರಿ ಚೆನ್ನಾಗಿಯೇ ಒದಗಿಸಿದ್ದ.ಆದೆರೆ ಪೂಜಾರಿ ಸುಮತಿಯ ಗಾಜಿನಂತಹ ಮನಸ್ಸನ್ನು ಒಡೆದು ಛಿದ್ರ ಛಿದ್ರ ಮಾಡಿದ್ದ.ಸುಮತಿ ಮಾನಸಿಕವಾಗಿ ಸತ್ತು ಹೋಗಿದ್ದಳು.ಪೂಜಾರಿ ತನ್ನ ತಿರಸ್ಕಾರಕ್ಕೆ ಕಾರಣ ಹೇಳದೆ ನರಕ ಸೃಷ್ಟಿಸಿದ್ದ.ಆಕೆ ದಿನ ದಿನ ನೋವಿನ ಹಿಂಸೆಯಲ್ಲಿ ಬೆಂದು ಹೋಗತೊಡಗಿದ್ದಳು. 

 

ಸುಮತಿ ವ್ಯಗ್ರಳಾದಳು;ಬದುಕಬೇಕು ತಾನು ಎಂದಳು?ತಿರಸ್ಕಾರದ ಏಟಿಗೆ ಛಿದ್ರಗೊಂಡ ಮನಸ್ಸಿನ ಕನ್ನಡಿಯನ್ನು ಮತ್ತೆ ಜೋಡಿಸುವ ನಿರ್ಧಾರ ಮಾಡಿದಳು.ಆಕೆ ಆ ಕುರಿತು ಯೋಚಿಸತೊಡಗಿದಾಗ.... 

ಪೂಜಾರಿ ಅವಕಾಶ ಒದಗಿಸಿದನಾ?ತುಂಬಾ ವರ್ಷಗಳ ನಂತರ ಆ ಅಂಶ ಆಕೆಯ ಗಮನಕ್ಕೆ ಬಂದಿತ್ತು;ಆದರೆ ಕಾಲ ಮಿಂಚಿ ಹೋಗಿತ್ತು.ಸುಮುತಿಯ ಛಿದ್ರಗೊಂಡ ಮನಸ್ಸಿನ ಕನ್ನಡಿಯಲ್ಲಿ ಚಂದಿರ ಮೂಡಿದ್ದ.ಬೆಳದಿಂಗಳು ಬದುಕನ್ನು ವ್ಯಾಪಿಸಿತ್ತು.ಆಳು ಚಂದಿರನಾಗಿದ್ದ.ಸುಮತಿಯ ಸೌಂದರ್ಯಕ್ಕೆ ಅರ್ಥ ಮೂಡಿಸಿದ್ದ.ಸುಮತಿಯ ಅಸಮಾಧಾನಕ್ಕೆ ಉತ್ತರವಾಗಿದ್ದ.ಸುಮತಿಯ ಅತೃಪ್ತಿಗೆ ಆತ ಆತ ತೃಪ್ತಿ ಒದಗಿಸಿದ್ದ. 

 

ಅದೊಂದು ರಾತ್ರಿ.ಅಮಾವಾಸ್ಯೆ ಹರಡಿದ ರಾತ್ರಿ,ಕತ್ತಲು ತುಂಬಿದ ರಾತ್ರಿ.ಜಗತ್ತಿನ ಅಸಂಖ್ಯಾತ ಅತೃಪ್ತ ಕನಸುಗಳ ಒಂದು ಕಡೆ ಸಂಗಮವಾದಂತೆ ನಕ್ಷತ್ರಗಳು ಭಾನ ತುಂಬಾ ಹರಡಿದ್ದವು.ನಕ್ಷತ್ರಗಳ ಬೆಳಕಿನಲ್ಲಿ ಜೋಳದ ಹೊಲದ ಮೆಟ್ಟಿನ ಮೇಲೆ ಅವರಿಬ್ಬರು ಅಂಗಾತವಾಗಿದ್ದರು.ಆಕೆಯ ಕನಸುಗಳು ಛಿದ್ರಗೊಂಡಿದ್ದವು.ಆತ ಕನಸುಗಳನ್ನು ಜೋಡಿಸುತ್ತಿದ್ದ.ಆಕೆ ಸಂತೃಪ್ತಳಾಗುತ್ತಿದ್ದಳು.ಆತ ಮನಸ್ಸಿನ ಊರುಗೋಲಾಗುವ ಭರವಸೆ ಮೂಡಿಸುತ್ತಿದ್ದ.ಆಕೆಯ ಮುಖ ಪ್ರಸನ್ನವಾಗುತ್ತಿತ್ತು.ಚುಕ್ಕಿಯೊಂದು ಮಿನುಗಿದಾಗೊಮ್ಮೆ ಆಕೆ ಕಿಸಕ್ಕನೆ ನಗುತ್ತಿದ್ದಳು;ಆತ ಕಚಗುಳಿ ಇಡುತ್ತಿದ್ದ. 

 

ತಪ್ಪಲ್ಲವಾ ಇದು?”ಆತ ಕೇಳುತ್ತಿದ್ದ. 

 

ತಪ್ಪಲ್ಲವಾ ಪೂಜಾರಿ ಮಾಡಿದ್ದು?” 

 

ಹೆಣ್ಣಿನ ಮನಸ್ಸಿನ್ನು ಮುರಿಯುವ,ಹೆಣ್ಣಿನ ಭಾವನೆಗಳನ್ನು ಸಾಯುಸುವ,ಹೆಣ್ಣಿನ ಸೌಂದರ್ಯವನ್ನು ತಿರಸ್ಕರಿಸುವ ಹಕ್ಕನ್ನು ಪೂಜಾರಿಗೆ ಕೊಟ್ಟವರು ಯಾರು?ದೇಹದ ಅಸ್ತಿತ್ವತ್ವ ಇರುವಂತೆಯೇ ಆಕೆಯ ಕನಸುಗಳನ್ನು ಕಿತ್ತುಕೊಳ್ಳುವ ಹಕ್ಕನ್ನು ಪೂಜಾರಿಗೆ ಕೊಟ್ಟವರು ಯಾರು?ಸುಖವೆಂದರೆ ಹಣವಾ?ಸುಖವೆಂದರೆ ಅನ್ನವಾ? ಸುಖವೆಂದರೆ ಬಂಗಾರವಾ?ಸುಖವೆಂದರೆ ಆಸ್ತಿಯಾ?ಏನು ಸುಖವೆಂದರೆ?ಜೀವದ ಸಂತೃಪ್ತಿ,ಮನಸ್ಸಿನ ನಿರಾಳತೆ ಯಾವುದರಿಂದ ಪ್ರಾಪ್ತವಾಗುತ್ತದೆ?ಲೌಖಿಕ ಬದುಕಿನ ಮುಖವಾಡ,ಲೌಖಿಕ ಬದುಕಿನ ವೇಷ,ಲೌಖಿಕ ಬದುಕಿನ ಸಂಕೋಲೆಗಳನ್ನು ಕಳಚಿ ಉಓಚಿಸಿದಾಗ ಏನು ನಾನು-ನೀನು?ನಾನಾಗಿ ಬದುಕುವ ಅರ್ಹತೆಯೂ ನನಗಿಲ್ಲವಾ?ಶರೀರ ಮನಸ್ಸು ಬೆಸುಗೆ ಕಾಮ ಮೋಹ ಮತ್ತು ನಾನು,ಇವೆಲ್ಲವುಗಳೊಂದಿಗೆ ನಾನಾಗಬಯಸುತ್ತೇನೆ.ಪೂಜಾರಿ ಹುಡುಕುತ್ತಾನೆ,ಪೂಜಾರಿ ಕೊಲ್ಲುತ್ತಾನೆ,ಪೂಜಾರಿ ಚಿನ್ನದ ಪಂಜರ ಹೆಣೆಯುತ್ತಾನೆ!ಸರೀನಾ? 

ರವಿ ಮೌನವಾದ.ಅದಾದ ನಂತರ ಆ ರಾತ್ರಿಗಳು ಮತ್ತೆ ಮತ್ತೆ ಪುನಾರಾವರ್ತನೆಯಾದವು.ನಿಟ್ಟುಸಿರಿಗೆ ಲೆಖ್ಖವಿಲ್ಲದಾಯಿತು.ಬೆವರು ಹೊಳೆಯಾಗಿ ಹರಿಯುತು.ಎಲ್ಲಿಯವರೆಗೆ? 

 

ನಗ್ಮಾ ಗಾಭರಿಗೊಂಡು ತಾಯಿಯನ್ನು ಕೂಗಿದಳು. “ಅವ್ವಾ,ಅಪ್ಪ ಹೆಂಗೆಂಗೋ ಮಾಡುತ್ತಿದ್ದಾನೆ ಬಾ ಇಲ್ಲಿ!!”ಸುಮತಿ ಅಡುಗೆ ಮನೆಯಿಂದ ಓಡಿ ಬಂದಳು.ಪೂಜಾರಿ ಶೂನ್ಯದಲ್ಲಿ ದೃಷ್ಟಿ ಇಟ್ಟು ನಗುತ್ತಿದ್ದ.ಆತನ ನಗು ಅಲೆಅಲೆಯಾಗಿತ್ತು.ಆತನ ಮುಖ ಪ್ರಸನ್ನವಾಗಿತ್ತು.ಆತ ಎಲ್ಲವನ್ನೂ ತೊರೆದವನ ಹಾಗೆ ಕಾಣಿಸುತ್ತಿದ್ದ.ಆತನ ಮುಖ ಬೆಳದಿಂಗಳಾಗಿತ್ತು. 

 

“ಎಲ್ಲವೂ ಭ್ರಮೆ,ಎಲ್ಲವೂ...ನೀನು,ನಾನು! ಸೌಂದೆರ್ಯ.ಮಾತುಗಳು,ಮೌನಗಳು,ಬದುಕು,ನಗು ಅಳುಗಳು,ಸುಖ ದುಃಖಗಳು,ಬಾಂಧವ್ಯ,ಸ್ನೇಹ ಪ್ರೀತಿಗಳು,ಹಣ ಆಸ್ತಿ ಸಂಪತ್ತು-ಎಲ್ಲವೂ ಭ್ರಮೆಗಳು.ನಮ್ಮ ಇರುವೂ ಭ್ರಮೆ!ಸಂಸಾರವೂ ಭ್ರಮೆ!ಎಲ್ಲವೂ ಭ್ರಮೆ,ಭ್ರಮೆ,ಭ್ರಮೆ....!”ಆತ ಗಹಗಹಿಸಿ ನಗತೊಡಗಿದ.ನಗು ಅಲೆಅಲೆಯಾಗಿ ಪರಿಸರವನ್ನು ವ್ಯಾಪಿಸತೊಡಗಿದಂತೆ... 

 

ಸಮಾಜ ಪೂಜಾರಿಗೆ ಹುಚ್ಚು ಹಿಡಿದಿದೆ ಎಂದಿತು.ಪೂಜಾರಿಗೆ ಹುಚ್ಚು ಹಿಡಿದ ನಂತರ ಆತ ಬಹಳ ದಿನ ಬದುಕಲಿಲ್ಲ.ಪೂಜಾರಿ ಸತ್ತ ಮೇಲೆ ಕನಸು ಜೋಡಿಸಿದ ರವಿ ಮತ್ತೊಂದು ದೇಹ ಹುಡುಕಿದ್ದ.ನಗ್ಮಾ ಬಸುರಿಯಾಗಿದ್ದಳು. 

 

                                                                             .                    ಲಕ್ಷ್ಮೀಕಾಂತ ನಾಯಕ 

 

Google  News WhatsApp Telegram Facebook
HTML smaller font

.

.