ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ

Sep 16, 2023 - 13:09
 0  65

Google  News WhatsApp Telegram Facebook

ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ

Janaa Akrosha News Desk.

 ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ

ಲೇಖಕರು - ಸಂಗಮೇಶ ಎನ್ ಜವಾದಿ

ಬರಹಗಾರರು, ಪತ್ರಕರ್ತ, ಪರಿಸರ ಸಂರಕ್ಷಕರು,

ಬೀದರ ಜಿಲ್ಲೆ.

****

 17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾಗವಾಯಿತು. ಈ ವಿಲೀನ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹನೀಯರ ಸಾವು-ನೋವು ಸಂಭವಿಸಿತು. ಹೋರಾಟಗಾರರ ಹೋರಾಟದ ಫಲವಾಗಿ ಹೈದರಾಬಾದ್ ಕರ್ನಾಟಕ ನಿರ್ಮಾಣವಾಯಿತು. ಈಗ ಕಲ್ಯಾಣ ಕರ್ನಾಟಕ ಎಂಬ ಹೆಸರು ಮರು ನಾಮಕರಣಗೊಂಡಿದೆ. ಈ ಕಲ್ಯಾಣ ಕರ್ನಾಟಕ ಎಂಬ ಹೆಸರು ಶರಣ ಪರಂಪರೆಯನ್ನು ಬಿಂಬಿಸುತ್ತದೆ. ಈ ಹೆಸರು ಹೋರಾಟಗಾರರ ತ್ಯಾಗ-ಬಲಿದಾನಕ್ಕೆ ಪೂರಕವಾಗಿದೆ.ಇಂತಹ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಪ್ರಾಂತ್ಯವು ನಿಜಾಮನ ಶೋಷಣೆಗೆ ಗುರಿಯಾಗಿದ್ದು ಈ ನಾಡಿನ ದುರದೃಷ್ಟ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಈ ಪ್ರಾಂತ್ಯದ ಹೊಸ ಹೆಸರಿನಲ್ಲಿರುವ ಕಲ್ಯಾಣ ಎಂಬ ಪದವು 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎಂಬ ಧ್ಯೇಯವನ್ನು ಎತ್ತಿ ಹಿಡಿಯುತ್ತದೆ. ಅಷ್ಟೇ ಅಲ್ಲದೇ ಇದು ಶರಣ ಸಂಸ್ಕೃತಿಯ ಇತಿಹಾಸವನ್ನು ನೆನೆಯುವಂತೆ ಮಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಹೋರಾಟಗಾರರ ಬಲಿದಾನ, ತ್ಯಾಗ ಪ್ರತಿಯೊಬ್ಬರು ನೆನ್ನೆಯಬೇಕಾಗಿದೆ. ವಿಮೋಚನಾ ಸಂಗ್ರಾಮದ ಪ್ರಮುಖರು ಮತ್ತು ತದನಂತರ ಪ್ರದೇಶದ ಏಳಿಗೆಗಾಗಿ ಕಲ್ಯಾಣ ಕರ್ನಾಟಕವೆಂಬ ಉನ್ನತಿಗಾಗಿ ,ಕಲಂ 371 (ಜೆ) ಜಾರಿಗೊಳಿಸಲು ಪ್ರಯತ್ನಿಸಿದ ರಾಜಕೀಯ ಮತ್ತು ಸಾಮಾಜಿಕ ಪ್ರಮುಖ ಮುಖಂಡರ ನಿಸ್ವಾರ್ಥ ಸೇವಾ ಕೆಲಸಗಳನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಾ, ಅವರುಗಳನ್ನು ಹೆಸರಿಸಬೇಕಾಗುತ್ತದೆ ನಮ್ಮೆಲ್ಲರ ಜವಾಬ್ದಾರಿ. ಇದನ್ನು ಗಮನದಲ್ಲಿರಿಸಿ ಹೋರಾಟಗಾರರ ಪಾತ್ರವನ್ನು ಇಲ್ಲಿ ಸಣ್ಣದಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

ಈ ವಿಮೋಚನೆಯ ಚಳವಳಿಯಲ್ಲಿ ಸ್ವಾಮಿ ರಮಾನಂದ ತೀರ್ಥರು ಅಹಿಂಸಾತ್ಮಕ ಚಳುವಳಿಯನ್ನು ಸಂಘಟಿಸಿದರು. ಸರದಾರ ವಲ್ಲಭಭಾಯಿ ಪಟೇಲರ ಮುಂದಾಳತ್ವದಲ್ಲಿ ನಡೆದ ಈ ಕ್ರಾಂತಿಗೆ 

ಕರ್ನಾಟಕದ ಗಾಂಧಿ ಎಂದು ಖ್ಯಾತರಾದ ಹರ್ಡೇಕರ ಮಂಜಪ್ಪ ಸಾಮಾಜಿಕ ಏಳಿಗೆಗೆ ಹೆಚ್ಚಿನ ಒತ್ತು ಕೊಟ್ಟರು. 'ಒಂದೇ ಮಾತರಂ' ಚಳವಳಿಗೆ ರಾಮಚಂದ್ರರಾಯರು ಮುಖಂಡರಾದರು. ಮತಾಂಧ ರಜಾಕಾರರ ವಿರುದ್ಧ ಹೋರಾಡುವುದರಲ್ಲಿ ರಾಮಚಂದ್ರ ವೀರಪ್ಪ ಅವರ ಹೆಸರು ಪ್ರಮುಖವಾಗಿ ಎದ್ದು ಕಾಣುತ್ತದೆ. ಇನ್ನು ಈ ಪ್ರದೇಶಗಳಲ್ಲಿ ಹೋರಾಟಕ್ಕೆ ವೇಗ ನೀಡಿದವರಲ್ಲಿ ಶ್ರೀಯುತರಾದ ಮಲ್ಲಪ್ಪನವರು, ಚಂದ್ರಶೇಖರ್ ಪಾಟೀಲ್, ಅನ್ನದಾನಯ್ಯ ಪುರಾಣಿಕ, ಶಿವಮೂರ್ತಿಸ್ವಾಮಿ, ಅಳವಂಡಿ ಪ್ರಭುದಾಸ್ ಪಾಟೀಲರು, ಅನಿರುದ್ಧ ದೇಸಾಯಿ, ಶ್ರೀಪಾದರಾವ್ ಕುಲಕರ್ಣಿ, ಚನ್ನಬಸಪ್ಪ ಕುಳಿಗೆರೆ ಪ್ರಮುಖರು. ಶ್ರೀ ಅಪ್ಪಾರಾವ್ ನಿಜಾಮರ ಕಡೆಯವರ ಗುಂಡಿಗೆ ಬಲಿಯಾಗಿ ಅಮರಾದರು. ರಜಾಕಾರರ ದೌರ್ಜನ್ಯವನ್ನು ಎದುರಿಸಿ ವಿಮೋಚನಾ ಸಂಗ್ರಾಮವನ್ನು ಸಂಘಟಿಸಿ ದವರಲ್ಲಿ ಶರಣಗೌಡ ಇನಾಂದಾರ್ ಅವರ ಹೆಸರು ಮುಂಚೂಣಿಯಲ್ಲಿದ ಕಾರಣದಿಂದ ಇವರನ್ನು ಕಲ್ಯಾಣ ಕರ್ನಾಟಕ ಭಾಗದ ಸರದಾರರು ಎಂದೇ ಸಂಭೋಧಿಸಲಾಗುತ್ತದೆ. 

ಇನ್ನು ನಿಜಾಮರ ಕ್ರೂರತನವನ್ನು ವಿರೋಧಿಸಿ ಪ್ರಾಣತೆತ್ತವರಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹೋರಾಟಗಾರರು ಸಾವಿರಾರು ಜನರು ಆಗಿದ್ದಾರೆ.ಕೆಳಕ್ಕೆ ಬಿದ್ದರೂ ಉಸಿರಿರುವ ತನಕ ಹೋರಾಡಿದ್ದಾರೆ. ಅವರ ಹೋರಾಟದ ಇತಿಹಾಸ ರೋಚಕವಾದುದು. ಮೈನವಿರೇಳಿಸುವಂತಹದು.ಅಂತೆಯೇ 371-ಜೆ ತಿದ್ದುಪಡಿಗಾಗಿ ಹೋರಾಡಿದ ಲಿಂಗೈಕ್ಯ ವೈಜನಾಥ ಪಾಟೀಲ ರವರ ಹೋರಾಟ ಸಹ ಸ್ಮರಣೀಯವಾದದ್ದು.

ಹಾಗಾಗಿಯೇ 

ಇವರೆಲ್ಲರ ಹೋರಾಟದ ಚಿತ್ರಣವು ನಮ್ಮಲ್ಲಿ ದೇಶಾಭಿಮಾನವನ್ನು ಉಕ್ಕಿಸುತ್ತದೆ. ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಧೈರ್ಯ ಉತ್ಸಾಹಗಳನ್ನು ತುಂಬಿ ನಮ್ಮಲ್ಲೂ ಹೋರಾಟದ ಕೆಚ್ಚು ಮೂಡುವಂತೆ ಮಾಡುತ್ತದೆ. ಅವರೆಲ್ಲಾ ಉದಾತ್ತತೆಯಿಂದ ತಮ್ಮದೆಲ್ಲವನ್ನೂ ತೊರೆದು ವಿರಕ್ತಿ ಮತ್ತು ಕರುಣೆಯ ಹಿರಿ ನಿಯಮಗಳಿಗನುಸಾರವಾಗಿ ಹೋರಾಟ ನಡೆಸಿದ್ದು ಕಾಣುತ್ತೇವೆ. ವಿಮೋಚನೆಯ ನಂತರ ಎಲ್ಲರೊಂದಿಗೆ ದ್ವೇಷ ಮತ್ತು ಶತೃತ್ವಗಳಿಲ್ಲದೆ ಸೌಹಾರ್ದತೆಯಿಂದ ಪ್ರೀತಿ ಮತ್ತು ಶಾಂತಿಯಿಂದ ಬಾಳುವ ನೀತಿಯನ್ನು ಹೋರಾಟಗಾರರು ಅನುಸರಿಸುವುದು ಎದ್ದು ಕಾಣುತ್ತದೆ.ಅದಕ್ಕಾಗಿ ಈ ನೆಲ ಭಾವೈಕ್ಯತೆಯ ಬೀಡಾಗಿದೆ ಸೌಹಾರ್ದತೆಯ ತಾಣವಾಗಿದೆ, ಸೋದರತ್ವದ ಮೂಲ ಮಂತ್ರವಾಗಿದೆ.ಅದಕ್ಕಾಗಿಯೇ ಹೋರಾಟಗಾರನ್ನೆಲ್ಲ ಕೃತಜ್ಞತೆಯಿಂದ ಸ್ಮರಿಸುವುದು ಈ ಭಾಗದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. 

ಅಂದಹಾಗೆ ಕಲ್ಯಾಣ ಕರ್ನಾಟಕ ಪ್ರದೇಶ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಮತ್ತು ಚಾರಿತ್ರಿಕವಾಗಿ ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖವಾದ ಭೂ ಪ್ರದೇಶ ಹೊಂದಿದೆ. ಈ ಪ್ರದೇಶಕ್ಕೆ ನೈಸರ್ಗಿಕವಾಗಿ ಉತ್ತಮ ಕ್ಷಮತೆಯಿದೆ.ಉತ್ತಮ ಭವಿಷ್ಯವಿದೆ. ಉತ್ತಮ ನೀರಾವರಿ ಸೌಕರ್ಯವನ್ನು ಒದಗಿಸಿದರೆ ಕೃಷಿರಂಗದಲ್ಲಿ ಉತ್ತಮ ಸಾಧನೆಯನ್ನು ಈ ಪ್ರದೇಶದಿಂದ ನಿರೀಕ್ಷಿಸಬಹುದು.ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದ ಈ ಪ್ರದೇಶ ಹಿಂದುಳಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಈ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಮತ್ತು ಹೆಚ್ಚಿನ ಆರ್ಥಿಕ ನೆರವು ಅವಶ್ಯ ಹಾಗೂ ಅಗತ್ಯವಾಗಿತ್ತು. ಅಂತೆಯೇ ಇದನ್ನು ನಿವಾರಿಸುವ ಉದ್ದೇಶದಿಂದ 2013ರಲ್ಲಿ ಆರ್ಟಿಕಲ್ 371 (ಜೆ) ಯಲ್ಲಿ ಒಳಪಡಿಸಿ ವಿಶೇಷ ಸ್ಥಾನಮಾನವನ್ನು ಘೋಷಿಸಿ ನೀಡಲಾಯಿತು. ಅದರನ್ವಯ ಕೆ.ಕ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. ವಿಶೇಷ ಸ್ಥಾನಮಾನ ಅನ್ವಯ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮತ್ತು ಪ್ರದೇಶದ ಜನರಿಗೆ ಉದ್ಯೋಗಗಳಲ್ಲಿ ಕಾದಿರಿಸುವಿಕೆ ಸವಲತ್ತು ಸದರಿ ಪ್ರಾಧಿಕಾರದಲ್ಲಿ ನೀಡಲಾಗಿದೆ ಎಂದು ಹೇಳಲಾಯಿತು ಹಾಗೂ ಹೇಳಲಾಗುತ್ತಿದೆ. ಜೊತೆಗೆ ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸಲು ಈ ಪ್ರದೇಶಕ್ಕೆ 'ಕಲ್ಯಾಣ ಕರ್ನಾಟಕ' ಎಂದು ಮರುನಾಮಕರಣ ಸಹ ಆಗಿದೆ.

ಆದರೆ ಅಭಿವೃದ್ಧಿ ಕೆಲಸಗಳು ಬಲು ದೂರು ಎನ್ನುವ ಮಾತುಗಳು ಅಲ್ಲಲ್ಲಿ ಸಧ್ಯ ಕೇಳಿ ಬರುತ್ತಿವೆ.

ಇದನ್ನು ಅರಿತು,ಜನಪ್ರತಿನಿಧಿಗಳು ಅಭಿವೃದ್ಧಿ ಕಡೆ ಗಮನ ಹರಿಸುವುದು ಅವಶ್ಯಕವಾಗಿದೆ.

ಅದಕ್ಕಾಗಿಯೇ ಗ್ರಾಮೀಣ ಅಭಿವೃದ್ಧಿ, ಅನುದಾನ ಮತ್ತು ವಿದ್ಯಾಭ್ಯಾಸ ಮತ್ತು ಉದ್ಯೋಗಗಳಲ್ಲಿ ಕಾಯ್ದಿರಿಸುವಿಕೆಗೆ ಹೆಚ್ಚು ಒತ್ತು ಕೊಟ್ಟು, ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು. ಆಗ ಮಾತ್ರ ಉದ್ದೇಶ ಆಸೆ ಈಡೇರಿದಂತಾಗುತ್ತದೆ. ಹಾಗೆಯೇ ಬಸವಣ್ಣನವರ 'ಅನುಭವ ಮಂಟಪ' ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಕಲ್ಯಾಣ ನಾಡಿನಲ್ಲಿ ಇತ್ತು ಎಂಬುವುದನ್ನು ಮರೆಯದೇ, ಇಂತಹ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ,ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಧಾನ್ಯತೆಯ ನಾಡು 

ಜಗತ್ತಿನಲ್ಲಿ ಎಲ್ಲಿ ಹುಡುಕಿದರು ಸೀಗುವುದಿಲ್ಲ. ಕಾರಣ ಈ ನೆಲ ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಅಭಿವೃದ್ಧಿ ಚಟುವಟಿಕೆಗಳ ದೃಷ್ಟಿಯಿಂದ ಬಹಳ ಹಿಂದುಳಿದಿದೆ. ಇದನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಾಗಿದೆ. ಹಾಗೆಯೇ 

ರಾಜಕೀಯ ಪೈಪೋಟಿ ಬಿಟ್ಟು ,ಒಗ್ಗಟ್ಟಿನಿಂದ ಅಭಿವೃದ್ಧಿ ಆಶಯಗಳನ್ನು ಈಡೇರಿಸುವುದು ಪ್ರದೇಶದ ದೃಷ್ಟಿಯಿಂದ ಮುಖ್ಯವಾಗಿದೆ. ರಾಜಕೀಯ ನಾಯಕರು ತಮ್ಮ ಸ್ವ ಪ್ರತಿಷ್ಠೆ ,ಸ್ವಾರ್ಥವನ್ನು ಬದಿಗೊತ್ತಿ, 

ಅಭಿವೃದ್ಧಿಗಾಗಿ ದುಡಿಯಲು

ಮುಂದಾಗಬೇಕು. 17 ಸೆಪ್ಟೆಂಬರ್ ಮತ್ತೆ ಬಂತು, ಆದರೆ ಅಭಿವೃದ್ಧಿ ಮಾತಂತೂ ಬಹಳ ದೂರವೇ ದೂರ ಎನ್ನುವ ಮಾತುಗಳು ಹೋಗಲಾಡಿಸಬೇಕು.ಹೋಗಲಾಡಿಸುವ ನಿಟ್ಟಿನಲ್ಲಿ ಸರ್ವರೂ ಈ ಭಾಗದ ಸಮಗ್ರ, ಸಂಪೂರ್ಣ ವಿಕಾಸಕ್ಕಾಗಿ,ವಿಶೇಷವಾಗಿ ರಾಜಕೀಯ ಪ್ರತಿನಿಧಿಗಳು ಒಗ್ಗಟ್ಟಿನಿಂದ ಶ್ರಮಿಸಲು ಕಟ್ಟಿ ಬದ್ಧರಾಗಬೇಕು. ಕಟ್ಟಿ ಬದ್ಧರಾಗುವ ಮೂಲ ಕಲ್ಯಾಣ ಕರ್ನಾಟಕವು ವಿಶ್ವ ಭೂಪಟದಲ್ಲಿ ಐತಿಹಾಸಿಕ ಸುವಾರ್ಣಾಕ್ಷರದ ಚರಿತ್ರೆಯಲ್ಲಿ

ಬರೆದಿಡುವಂತೆ ಕೆಲಸ - ಕೈಂಕರ್ಯಗಳು ಆಗಬೇಕೆಂದು ಆಶಿಸುತ್ತೇವೆ.

ಕೊನೆಯ ನುಡಿ: ಭಾವೈಕ್ಯತೆ , ಸೌಹಾರ್ದತೆಯ ಕಲ್ಯಾಣ ಕರ್ನಾಟಕಕ್ಕಾಗಿ ಹೋರಾಡಿ ಮಡಿದ ಪ್ರಾತಃಸ್ಮರಣೀಯರು ಹಾಗೂ ಪುಣ್ಯಪುರುಷರನ್ನು ಭಕ್ತಿ ಭಾವ ಗೌರವಗಳಿಂದ ನೆನೆಯೋಣ.

 

****

ಲೇಖಕರು - ಸಂಗಮೇಶ ಎನ್ ಜವಾದಿ

ಬರಹಗಾರರು, ಪತ್ರಕರ್ತ, ಪರಿಸರ ಸಂರಕ್ಷಕರು,

ಬೀದರ ಜಿಲ್ಲೆ.

-----

Google  News WhatsApp Telegram Facebook
HTML smaller font

.

.