ಸಿಟಿ ರವಿಗೆ ಒಲಿಯಲಿದೆಯಾ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ?

Jul 29, 2023 - 12:17
 0  32

Google  News WhatsApp Telegram Facebook

ಸಿಟಿ ರವಿಗೆ ಒಲಿಯಲಿದೆಯಾ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ?

Janaa Akrosha News Desk.

ಜನ ಆಕ್ರೋಶ ಕನ್ನಡ ಪಾಕ್ಷಿಕೆ ಪತ್ರಿಕೆಗೆ ವರದಿಗಾರರಾಗಲಿ, ಚಂದಾದಾರರಾಗಲು, ವರದಿಗಳನ್ನು ಮತ್ತು ಲೇಖನಗಳನ್ನು ಪ್ರಕಟಿಸಲು ಹಾಗೂ ಜಾಹಿರಾತು ನೀಡಲು 9845968164 ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದು.

ಬೆಂಗಳೂರು, ಜು.29 – ಮುಂಬರುವ ಹಲವು ರಾಜ್ಯಗಳ ವಿಧಾನಸಭೆ ಮತ್ತು 2024 ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹಲವು ಪದಾಧಿಕಾರಿಗಳನ್ನು ಬದಲಾವಣೆ ಮಾಡಿದೆ. ಕರ್ನಾಟಕದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಸಿ.ಟಿ.ರವಿ ಅವರಿಗೆ ಕೋಕ್ ನೀಡಲಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ರಾತ್ರಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರುಗಳು ಕರ್ನಾಟಕದ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ಅಧಿಕಾರ ಮುಗಿದಿದ್ದು, ಸದ್ಯದಲ್ಲೇ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ತೆರವಾಗಲಿರುವ ಸ್ಥಾನಕ್ಕೆ ಸಂಘ ಪರಿವಾರದ ನೀಲಿ ಕಂಗಳ ಹುಡುಗನೆಂದೇ ಗುರುತಿಸಿಕೊಂಡಿರುವ ರವಿ ಅವರಿಗೆ ಪಟ್ಟ ಕಟ್ಟಲು ಒಲವು ತೋರಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದರೂ ಬಾರಿ ಹಿಂದುತ್ವ ಹಾಗೂ ಸಂಘ ಪರಿವಾರ ನಿಷ್ಠೆಯುಳ್ಳವರಿಗೆ ಸ್ಥಾನ ಕಲ್ಪಿಸಬೇಕೆಂದು ಆರ್‍ಎಸ್‍ಎಸ್ ನಾಯಕರು ಕಿವಿಮಾತು ಹೇಳಿದ್ದರು. ಚಿಕ್ಕಮಗಳೂರಿನ ಬಾಬಾ ಬುಡನ್‍ಗಿರಿ ವಿವಾದದಿಂದ ರಾಜಕಾರಣಕ್ಕೆ ಮುನ್ನೆಲೆಗೆ ಬಂದ ಸಿ.ಟಿ.ರವಿ ಪ್ರಖರ ಹಿಂದುತ್ವವಾದಿ ಹಾಗೂ ಉತ್ತಮ ವಾಗ್ಮಿಯೂ ಹೌದು.

ನಾಲ್ಕು ಬಾರಿ ಚಿಕ್ಕಮಗಳೂರಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತಮ್ಮಯ್ಯ ಎದುರು ಪರಾಭವಗೊಂಡಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಗೋವಾ, ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿದ್ದರೂ ಅನಂತಕುಮಾರ್ ಅವರಂತೆ ರಾಷ್ಟ್ರಮಟ್ಟದಲ್ಲಿ ವೈಯಕ್ತಿಕ ವರ್ಚಸ್ಸು ಹಾಗೂ ಛಾಪು ಮೂಡಿಸಿಕೊಳ್ಳುವಲ್ಲಿ ವಿಫಲರಾದರು ಎಂಬ ಮಾತುಗಳು ಕೇಳಿಬಂದಿದ್ದವು.

ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಸದ್ಯಕ್ಕೆ ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನಪರಿಷತ್‍ಗೆ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲೂ ಸಾಧ್ಯವಾಗದ ಬಿಜೆಪಿ ಈಗ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ಕೈ ಹಾಕಿದೆ.

ಲಿಂಗಾಯಿತ, ಒಕ್ಕಲಿಗ ಕಾಂಬಿನೇಷನ್ :
ಒಂದು ವೇಳೆ ಸಿ.ಟಿ.ರವಿ ರಾಜ್ಯಾಧ್ಯಕ್ಷರಾಗಿ ನೇಮಕವಾದರೆ ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ಮತ್ತೋರ್ವ ಹಿಂದು ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಮಣೆ ಹಾಕುವ ಸಂಭವ ಹೆಚ್ಚಾಗಿದೆ.ಒಕ್ಕಲಿಗ ಸಮುದಾಯವದವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಲಿಂಗಾಯಿತ ಸಮುದಾಯದಿಂದ ಬಸನಗೌಡ ಪಾಟೀಲ್ ಯತ್ನಾಳ್‍ಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.ವಿಧಾನಸಭೆಯ ಉಪನಾಯಕನಾಗಿ ಮಾಜಿ ಸಚಿವರಾದ ವಿ.ಸುನಿಲ್ ಕುಮಾರ್, ಅರಗ ಜ್ಞಾನೇಂದ್ರ, ಆರ್.ಅಶೋಕ್ ಹೆಸರುಗಳು ಮುಂಚೂಣಿಯಲ್ಲಿವೆ.

ವಿಧಾನಸಭೆಯಲ್ಲಿ ಲಿಂಗಾಯಿತ ಸಮುದಾಯದವರು ಪ್ರತಿಪಕ್ಷದ ನಾಯಕನಾದರೆ ವಿಧಾನಪರಿಷತ್‍ನಲ್ಲಿ ಹಿಂದೂಗಳ ಸಮುದಾಯಕ್ಕೆ ಮಣೆ ಹಾಕುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇದರ ಪ್ರಕಾರವಾಗಿ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಸದಸ್ಯರಾದ ಸಶಿಲ್ ನಮೋಶಿ, ವೈ..ನಾರಾಯಣ ಸ್ವಾಮಿ, ತೇಜಸ್ವಿನಿ ರಮೇಶ್ ಗೌಡ ಮತ್ತಿತರರ ಹೆಸರುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಮುಂದಿನ ವಾರ ರಾಜ್ಯಾಧ್ಯಕ್ಷ ವಿಧಾನಸಭೆಯ ಎರಡು ಸದನಗಳ ನಾಯಕರು ಮತ್ತು ಉಪನಾಯಕರು, ಮುಖ್ಯ ಸಚೇತಕರು ಹಾಗೂ ಪಕ್ಷದಲ್ಲೂ ಪದಾಕಾರಿಗಳನ್ನು ಬದಲಾಯಿಸಿ ಹೊಸಬರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ವಿಧಾನಸಭೆಯಲ್ಲಿ ಸೋತಿರುವ ಮಾಜಿ ಸಚಿವ ವಿ.ಸೋಮಣ್ಣ ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರಿಗೆ ಪಕ್ಷ ಯಾವ ಸ್ಥಾನಮಾನ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

 

Google  News WhatsApp Telegram Facebook
HTML smaller font

.

.