ಮನರಂಜನೆ

ಹಾದರಗಾರರ ಎದೆಯಲ್ಲಿ ಆಕಳಿಸಿದ ರಾಕ್ಷಸ!

WhatsApp Group Join Now
Telegram Group Join Now

ಹಾದರಗಾರರ ಎದೆಯಲ್ಲಿ ಆಕಳಿಸಿದ ರಾಕ್ಷಸ!

ಜೀವನದ ಮಾಧುರ್ಯ ತನಗೆ ಏನು ಅಂತ ಅರ್ಥವಾದದ್ದು ಅವನು ಜೊತೆಗಾರನಾದ ಮೇಲೆ!

ಲೋಕದ ದೃಷ್ಟಿಯಲ್ಲಿ ಇದನ್ನು ಹಾದರ ಎನ್ನುತ್ತಾರೆ ಎನ್ನುವ ಸಂಗತಿ ತನಗೆ ಗೊತ್ತು, ಆದರೆ ಮನಸ್ಸು? ಯಾರ ಮನಸ್ಸು ಯಾರಿಗೆ ಯಾವಾಗ ಒಲಿಯುತ್ತದೆ ಎಂದು ಹೇಳುವವರು ಯಾರು? ಇಷ್ಟಪಟ್ಟವರೊಂದಿಗೆ ಮಾತನಾಡುವುದೂ ನಮ್ಮೀ ಭಾಗದಲ್ಲಿ ಹಾದರ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಮನಸ್ಸುಗಳಿಗೆ, ಮನುಷ್ಯನ ಜೀವನಕ್ಕೆ ಸ್ವಾತಂತ್ರ್ಯ ಎಂಬುದು ಇಲ್ಲ. ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಯಾದ ಬದುಕು ನಮ್ಮದು. ಮನಸ್ಸಿಗೆ ಬೆಲೆ ಇಲ್ಲ. ಜೀವನಕ್ಕೆ ಅರ್ಥವಿಲ್ಲ. ಇಂಥಹ ವಾತಾವರಣದಲ್ಲಿ ಇಷ್ಟಪಟ್ಟವನೊಂದಿಗೆ ಒಂದಾಗುವುದು ಎನ್ನುವುದು ಪರಮ ದ್ರೋಹವೇ ನಿಜ. ಆದರೆ ಬದುಕೇನು ಸಾವಿರ ವರ್ಷದ ಪಯಣವಲ್ಲವಲ್ಲ? ಇರುವಷ್ಟು ದಿನ ಅನುಭವಿಸಬೇಕಾದ ಸುಖವನ್ನು ಅನುಭವಿಸಿ ಸಾಯಬೇಕಲ್ಲ. ದುಃಖವನ್ನು ಮತ್ತು ಕಷ್ಟವನ್ನೂ ಸಹ!

ಯಾಕೋ ಜೀವನ ನಿಸ್ಸಾರ ಅನ್ನಿಸತೊಡಗಿತ್ತು. ಜೀವನದಿಂದ ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಾವ ಕಾಡತೊಡಗಿತ್ತು. ತನ್ನದು ಪ್ರೇಮರಾಹಿತ್ಯ ಜೀವನವೇನೋ ಎನ್ನುವ ಯೋಚನೆ ಮೂಡುತ್ತಿತ್ತು. ಒಂದೇ ಒಂದು ಸಂತೃಪ್ತಿಯ ದಿನಗಳು ತನಗೆ ಕಾಣಿಸಲಿಲ್ಲ. ಒಂದು ಹೊಗಳಿಕೆ, ಒಂದು ಪ್ರೇಮದ ಮಾತುಗಳು ತನ್ನ ಸ್ಮೃತಿಯೊಳಗೆ ಸೇರಲಿಲ್ಲ. ಮನಸ್ಸು ಖಾಲಿ ಖಾಲಿ ಅನ್ನಿಸುತ್ತಿತ್ತು. ರೊಟ್ಟಿ ಬಡೆಯುವುದು, ಬ್ಯಾಳೆ ಕುದಿಸುವುದು, ಅನ್ನ ಬೇಯಿಸುವುದು ಮತ್ತು ದಗದಕ್ಕೆ(ಕೆಲಸ) ಹೋಗುವುದು ಇಷ್ಟೇ ಜೀವನವಾಗಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿ ತನ್ನನ್ನು ಮದುವೆ ಮಾಡಿಕೊಟ್ಟರು ನಿಜ ತನ್ನ ತವರು ಮನೆಯವರು, ಹುಡುಗನಿಗೆ ಯಾರೂ ಇಲ್ಲ. ಇದ್ದ ನಾಲ್ಕು ಜನ ಅಕ್ಕಂದಿರು ಕೊಟ್ಟ ಮನೆಗೆ ಹೋಗಿದ್ದಾರೆ, ಅವನೀಗ ಒಂಟಿ ಮನುಷ್ಯ, ಖಾಲಿ ಮನೆ, ಹೊಲವಿದೆ, ಮನೆ ಇದೆ ಅಂತ ಹಿರಿಯರು ಅಂದಾಗ ತಾನು ಅದೃಷ್ಟಶಾಲಿ ಎಂದು ಭಾವಿಸಿದ್ದಳು. ಅತ್ತೆಯ ಕಿರಿಕಿರಿ ಇಲ್ಲ. ಮಾವನ ಕಿರಿಕಿರಿ ಇಲ್ಲ. ನಾದಿಯರು, ವಾರಗಿತ್ತಿಯರು ಯಾರ ಕಿರಿಕಿರಿಯೂ ಇಲ್ಲ. ಕೊಟ್ಟ ಗಂಡನ ಮನೆಗೆ ಹೋದವರು ಹಬ್ಬ ಹುಣ್ಣಿಮೆಗೆ ಬರುವವರು. ಅವರು ತಮ್ಮನ ಹಿತ ಕಾಯುತ್ತಾರೆಯೇ ಹೊರತು ತನ್ನನ್ನು ಪೀಡಿಸರು.

“ಇಂಥಹ ಮನೆ ಸಿಗಲು ಅದೃಷ್ಟ ಮಾಡಿರಬೇಕು. ತುಂಬೂ ಕುಟುಂಬವಾದರೆ ಒಂದಿಲ್ಲೊಂದು ಕಿರಿಕಿರಿ ಆ ಮನೆಗೆ ಹೋದ ಸೊಸೆಗೆ ಇರುತ್ತದೆ. ನೋಡ್ತೀವಲ್ಲ? ಅತ್ತೆ ಮಾವ ನೆಗಣ್ಣಿಯರು ಇದ್ದ ಮನೆಯಲ್ಲಿ ಎಷ್ಟೊಂದು ಕಿರಿಕಿರಿ ಜಗಳಗಳು? ಗಂಡ ಪಾಡಿದ್ದರೆ ಪಾಡ, ಅವನೂ ತಾಯಿ ತಂದೆ ಅಕ್ಕತಂಗಿಯರ ಕಡೆಗಾದನೂ ಅಂದರೆ ಆ ಮನೆಯ ಪರಿಸ್ಥಿತಿ ಯಾವ ವೈರಿಗೂ ಬೇಡ. ನರಕವಾಗಿ ಬಿಡುತ್ತದೆ ಜೀವನ” ಅಂತ ಅಪ್ಪ ತನ್ನ ತಾಯಿಯೊಂದಿಗೆ ಮಾತಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡಾಗ ನಿಜಕ್ಕೂ ರೋಮಾಂಚನಗೊಂಡಿದ್ದಳು ತಾನು? ತನ್ನದೊಂದು ಸುಂದರವಾದ ಪುಟ್ಟ ಸಂಸಾರವಾಗಲಿದೆ. ತಾನು ರಾಣಿಯಾದರೆ ತನ್ನ ಗಂಡ ರಾಜ, ತಮ್ಮ ಪುಟ್ಟ ಸಂಸಾರದ ಯಜಮಾನತಿ ತಾನೇ ಎಂದುಕೊಂಡಾಗ ನಿಜಕ್ಕೂ ತನಗೆ ಸಂತೋಷ ಉಕ್ಕಿ ಬರುತ್ತಿದ್ದದ್ದು ಸುಳ್ಳಲ್ಲ. ಮದುವೆ ಮಾಡಿಕೊಡುವಾಗ ತನಗಾದರೂ ಎಷ್ಟಿದ್ದವು ವಯಸ್ಸು? ಕೇವಲ ಹದಿನೈದು. ಅದಾಗ ಯವ್ವನಕ್ಕೆ ಕಾಲಿಡುತ್ತಿದ್ದ ದಿನಗಳು. ತಮ್ಮಂಥಹ ಬಡ ಮತ್ತು ನಿರಕ್ಷರಿ ಕುಟುಂಬಗಳಲ್ಲಿ ಹಿರಿಯರು ಹೆಣ್ಣನ್ನು ಬೇಗ ಮದುವೆ ಮಾಡಿ ಕಳುಹಿಸಿ ಬಿಡುತ್ತಾರೆ. ಕಾಮ ಸುಖದ ಅರಿವು ಮೂಡುವುದರಲ್ಲಿ ಅಥವಾ ದಾಂಪತ್ಯ ಎಂದರೆ ಏನು ಎಂದು ಅರ್ಥವಾಗುವಷ್ಟರಲ್ಲಿ ಮೂರು ನಾಲ್ಕು ಮಕ್ಕಳಾಗಿ ಯವ್ವನ ಮುದಿ ಬಿದ್ದು ಹೋಗಿರುತ್ತದೆ, ಹೆಂಗಸಿನದಲ್ಲ; ಗಂಡಸಿನದು! ಗಂಡಸು ಹೆಂಡತಿಯ ಮೇಲೆ ಆಸಕ್ತಿ ಕಳೆದುಕೊಂಡಿರುತ್ತಾನೆ. ವಿವಾಹೇತರ ಸಂಬಂಧ ಅಥವಾ ಹಾದರಕ್ಕೆ ಇದುವೇ ಕಾರಣವಾ? ಗೊತ್ತಿಲ್ಲ. ಅವನಂತೂ ತನ್ನನ್ನು ಕಾಡತೊಡಗಿದ್ದು ಸುಳ್ಳಲ್ಲ. ತನ್ನಲ್ಲಿ ಹಸಿವು ಜಾಗೃತವಾದದ್ದು ಮತ್ತು ಆ ಹಸಿವಿಗಾಗಿ ಕಾತರಿಸತೊಡಗಿದ್ದು ಸುಳ್ಳಲ್ಲ.

ಅದೊಂದು ದಿನ ಹೊಲದಲ್ಲಿ ಸದಿ(ಕಳೆ) ಕೀಳುವಾಗ ಅವನು ತನ್ನ ಹೊಲದಲ್ಲಿ ಗಳೆ ಹೊಡೆಯುತ್ತಿದ್ದ. ಕೆಲ ತಿಂಗಳುಗಳಿಂದ ಆತ ತನ್ನನ್ನು ವಿಚಿತ್ರವಾಗಿ ನೋಡುತ್ತಿದ್ದ. ಸದೃಢ ಕಾಯ. ಮನುಷ್ಯ ಮೂರು ಹೊತ್ತು ಹೊಲದಲ್ಲಿಯೇ ಇರುವವನು. ಒಕ್ಕಲುತನವನ್ನು ಅವನಷ್ಟು ಶ್ರದ್ಧೆಯಿಂದ ಯಾರಾದರೂ ಮಾಡಿದ್ದನ್ನು ತಾನು ಕಂಡಿರಲಿಲ್ಲ. ಆತ ತನ್ನನ್ನು ನೋಡುವುದು, ಮಾತನಾಡಲು ಪ್ರಯತ್ನಿಸುತ್ತಿರುವುದು ನೋಡಿ ಆತನಿಗೆ ತನ್ನ ಮೇಲೆ ಆಸೆಯಾಗಿದೆ ಎನ್ನುವುದು ತನಗೆ ಸುಲಭಕ್ಕೆ ಅರ್ಥವಾಗಿತ್ತು. ಅವನ ಮನಸ್ಸು ತನ್ನನ್ನು ಸೆಳೆಯಿತು ಎನ್ನುವುದಕ್ಕಿಂತ ಅವನ ದೇಹ ತನ್ನನ್ನು ಸೆಳೆಯಿತು. ಅದೆಷ್ಟೋ ದಿನಗಳಿಂದ ತಾನು ಆ ಸುಖದಿಂದ ವಂಚಿತಳಾಗಿದ್ದಳು. ಗಂಡ ವಿಪರೀತ ಕುಡಿಯಲು ಆರಂಭಿಸಿದ್ದ. ಕುಡಿದು ಗೊರಕೆ ಹೊಡೆಯುತ್ತಾ ಮಲಗುತ್ತಿದ್ದ. ಕೃಶ ಕಾಯನಾದ ಆತನಲ್ಲಿ ಯಾವುದೇ ಕಸುವು ಇರಲಿಲ್ಲ. ಕುಡಿದು ಕುಡಿದು ಇರುವ ಸತುವನ್ನೂ ಕಳೆದುಕೊಂಡಿದ್ದ. ಇಂಥವನಿಗೆ ಅದ್ಹೇಗೆ ನಾಲ್ಕು ಮಕ್ಕಳಾದವು ಎಂದು ಅಚ್ಚರಿ ಮೂಡುತ್ತಿತ್ತು. ಮಕ್ಕಳಾಗಲಿಕ್ಕೆ ಸಮೃದ್ಧ ಲೈಂಗಿಕ ಕ್ರಿಯೆಯ ಅಗತ್ಯವಿಲ್ಲ. ಹನಿ ವೀರ್ಯ ತನ್ನ ಅಂಡಾಣುವನ್ನು ಸೇರಿದರೆ ಸಾಕು ಎಂದು ಯಾರೋ ಹೇಳಿದ್ದರು. ಅದು ನಿಜವಿತ್ತು. ತನಗೆ ಆಸೆಯಾದಾಗ ತನ್ನೊಳಗೆ ಕಾಂಕ್ಷೆಗಳು, ಬಯಕೆಗಳು ಇವೆಯಾ ಇಲ್ಲವೇ ಎನ್ನುವುದನ್ನು ಗಮನಿಸದೆ ಮೈಮೇಲೆ ಬರುತ್ತಿದ್ದ. ನೋಡು ನೋಡುತ್ತಿರುವಂತೆ ಮಗ್ಗಲಾಗುತ್ತಿದ್ದ. ನಂತರ ಗೊರಕೆ! ಮನೆಯ ಜಂತಿಗಳನ್ನು ಲೆಖ್ಖ ಹಾಕುತ್ತಾ ಅದ್ಯಾವುದೋ ಜಾವದಲ್ಲಿ ಮಲಗುತ್ತಿದ್ದೆ. ನಿರಾಶೆಯಿಂದ, ಅಸಂತೃಪ್ತಿಯಿಂದ. ಹೆಣ್ಣಿಗೆ ದೇವರು ಇಷ್ಟೇ ಕೊಟ್ಟಿರಬೇಕು ಎಂದು ಸುಮ್ಮನಾಗುತ್ತಿದ್ದೆ. ಆದರೆ ಹೆಣ್ಣಿಗೂ ಭಾವಸಂತೃಪ್ತಿ ಇದೆ ಎನ್ನುವುದನ್ನು ಅವನು…

ಹೊಲದಲ್ಲಿ ತಾನೊಬ್ಬಳೆ ಇದ್ದಳು. ಅವನು ತನ್ನ ಕಡೆಯೇ ನೋಡುತ್ತಾ ಗಳೆ ಹೊಡೆಯುತ್ತಿದ್ದ. ತಾನು ಕೇಳಿಸಿಕೊಳ್ಳಲಿ ಎಂದು “ಈ ಎತ್ತು ನನಗೆ ಬಹಳ ಇಷ್ಟ” ಎನ್ನುತ್ತಿದ್ದ. ಅದನ್ನು ತನ್ನ ಕುರಿತೇ ಅನ್ನುತ್ತಿದ್ದಾನೆ ಎನ್ನುವುದು ತನಗೆ ಅರ್ಥವಾಗುತ್ತಿತ್ತು. ನಿಧಾನವಾಗಿ ಬಯಕೆ ಕೆರಳತೊಡಗಿತ್ತು. ಅವನು ಬರಬಾರದೆ ಎನ್ನುತ್ತಿತ್ತು ಮನಸ್ಸು. ಬಂದೇಬಿಟ್ಟನಲ್ಲ! ಕೈಕಾಲು ತರತರ ನಡುಗತೊಡಗಿದವು. ಮುಂದೆ ಏನೂ ಮಾತನಾಡಲಿಲ್ಲ. ತಮ್ಮಿಬ್ಬರ ದೇಹಗಳು ಮಾತಾಡಿದವು. ಸಮರ್ಥ ಗಂಡಸೊಬ್ಬ ಹೇಗಿರುತ್ತಾನೆ ಎಂದು ಅರ್ಥವಾದ ದಿನವದು. ಮೊಟ್ಟ ಮೊದಲ ಬಾರಿಗೆ ಜೀವನದ ಮಾಧುರ್ಯ ಎಂದರೆ ಏನೆಂದು ಅರ್ಥವಾಗಿತ್ತು. ಮುಗಿದಾಗ ಇಬ್ಬರೂ ಬೆವರು ಬೆವರಾಗಿದ್ದೇವು. ಅದು ಮುಂಗಾರಿನ ಒಂದು ಮಧ್ಯಾಹ್ನ. ಹಿತವಾದ ತಂಪು ಗಾಳಿ ಬೀಸುತ್ತಿತ್ತು. ಬೇವಿನ ಮರದ ಅಡಿಯಲ್ಲಿ ಸಿಹಿಯಾದ ನೆರಳಿತ್ತು. ಹೊಲದ ಬದುಗಳು ಕಸಕಡ್ಡಿಗಳಿಂದ ಬೇಲಿ ನಿರ್ಮಿಸಿಕೊಂಡಿದ್ದ ಕಾರಣ ತಾವು ಯಾರಿಗೂ ಕಾಣಿಸುವ ಸಾಧ್ಯತೆಗಳು ಇರಲಿಲ್ಲ. ಗಂಡ ಎಂಬುವವನು ಮಧ್ಯಾಹ್ನವೇ ಕುಡಿದು ಹಣಮಂದೇರು ಕಟ್ಟೆಗೆ ಮಲಗಿರುತ್ತಾನೆ ಎನ್ನುವುದು ತನಗೆ ಗೊತ್ತು. ನಂತರ ಮನಸ್ಸು ಬಿಚ್ಚಿ ದಾರಾಳವಾಗಿ ಮಾತನಾಡಿದೇವು. ಜನ್ಮಾಂತರಗಳಿಂದ ತಡೆಹಿಡಿದ ಮಾತುಗಳು ಅವಾಗಿದ್ದವು. ಮನಸ್ಸು ಉಲ್ಲಾಸದಿಂದ ಅರಳಿತ್ತು, ಹೂವಿನಂತೆ. ಸಂತೃಪ್ತವಾದ ದಿನವದು.

ಜೀವನದ ಮಾಧುರ್ಯ ತೋರಿಸಿಕೊಟ್ಟವನು ಅವನು! ತೊಗಲಿನ ತೆವಲು ಬಲು ಕೆಟ್ಟದ್ದು. ಅದು ಅಪರಾಧಗಳಿಗೆ ಕಾರಣವಾಗುತ್ತದೆ ಎನ್ನುವುದು ತನಗಾದರೂ ಹೇಗೆ ತಿಳಿಯಬೇಕು. ಕಣ್ಮುಚ್ಚಿ ಹಾಲು ಕುಡಿದರೆ ಯಾರಿಗೂ ಕಾಣಿಸದು ಎನ್ನುವ ಬೆಕ್ಕಿನ ಯೋಚನೆಯಂತೆ ಕಾಮದ ಹೇಸಿಗೆಯಲ್ಲಿ ಮುಳುಗಿದ ನಾವು ರಾಕ್ಷಸರಾಗಲಿದ್ದೇವೆ ಎನ್ನುವುದು ತಮ್ಮ ಅರಿವೆಗೆ ಬರಲೇ ಇಲ್ಲ.

ಶಾರದ ಬಹಳ ದೀರ್ಘವಾದ ಯೋಚನೆಯಲ್ಲಿದ್ದಳು.

+++++++++++

ಬಹಳ ಕಾಡತೊಡಗಿದ್ದಳು ಅವಳು!

ಅವಳ ದೇಹದ ಮೈಮಾಟ ತನ್ನನ್ನು ಹುಚ್ಚನನ್ನಾಗಿಸಿದ್ದು ಸುಳ್ಳಲ್ಲ. ಅರೆ ಬಾಜು ಹೊಲದವಳು! ಒಂದುಸಲ ಕೂಡಾ ತಿರುಗಿ ನೋಡುತ್ತಿರಲಿಲ್ಲ. ತಾನಾಗಿಯೇ ಒಂದು ಬಾಳುವಸ್ಥೆ ಹೆಂಗಸನ್ನು ಮಾತಾಡಿಸುವುದು ಹೇಗೆ? ಯೋಚಿಸುತ್ತಿದ್ದ ಅವನು. ನಿಜಕ್ಕೂ ಅವನೊಳಗಿನ ಕಾಮರಾಜ ಜಾಗೃತಗೊಂಡಿದ್ದ. ಕಡೆದಿಟ್ಟಂತಹ ನೀಲ ವರ್ಣದ ಅವಳ ದೇಹವನ್ನು ನೋಡಿದಾಗ ಭಾವನೆಗಳ ಹುಚ್ಚು ಸಂತೆ ತಲೆಯಲ್ಲಿ ನೆರೆಯುತ್ತಿತ್ತು. ಅವಳ ನೆನಹುನಲ್ಲಿ ಸಾಲು ಸಾಲು ಬೀಡಿಗಳನ್ನು ಸುಡುತ್ತಿದ್ದ. ಯಾವಾಗ ಒಬ್ಬಂಟಿಯಾಗಿ ಸಿಗುತ್ತಾಳೆ ಎಂದು ಕಾಯುತ್ತಿದ್ದ. ಬೇಕಂತಲೇ ಹೊಲದಲ್ಲಿ ಸಾಯಂಕಾಲದ ತನಕ ಇರುತ್ತಿದ್ದ. ಅವಳ ಜೊತೆಗೆ ಕುಡುಕನಿರುತ್ತಿದ್ದ, ಅವಳ ಗಂಡ. ಮಾಡವನಲ್ಲ ಕಿಸಿಯುವವನಲ್ಲ. ಬೇನಿ ಗಿಡಕ್ಕೆ ಮಲಗಿ ಬೀಡಿ ಸುಡುತ್ತಿದ್ದ. ಮುಂಜಾನೆ ಹೆಂಡತಿಯೊಂದಿಗೆ ಹೊಲಕ್ಕೆ ಬಂದು ಸಾಯಂಕಾಲದ ತನಕ ಜೊತೆಗೆ ಇರುತ್ತಿದ್ದ. ಸದಿ ಕೀಳುವ ಕೆಲಸವನ್ನು ಅವನ ಹೆಂಡತಿಯೇ ಮಾಡುತ್ತಿದ್ದಳು. ಸಾಯಂಕಾಲ ಒಂದಿಷ್ಟು ದನಗಳಿಗೆ ಮೇವು ಮಾಡಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಇಬ್ಬರೂ ಮನೆ ಸೇರುತ್ತಿದ್ದರು. ಅವರ ಮನೆ ಏನೂ ದೂರವಿಲ್ಲ. ಹತ್ತಿರವೇ. ಆದರೂ ಅವರಿಗೂ ನಮಗೂ ಅಷ್ಟಕ್ಕಷ್ಟೆ ಎಂದು ಆತ ಯೋಚಿಸುತ್ತಿದ್ದ. ಈತನ ಹೆಸರು ಹಣಮಂತ್ರಾಯ ಎಂದಿಟ್ಟುಕೊಳ್ಳೋಣ.

ಹಣಮಂತ್ರಾಯ ಹೆಂಡತಿ ಮಕ್ಕಳಿರುವವನು. ಅವನದೂ ಸುಖವಾದ ಸಂಸಾರ. ಒಕ್ಕಲುತನದ ಮನೆ. ಕೃಷಿಯನ್ನು ನಂಬಿ ಬದುಕುವ ಸಂಸಾರ. ಭೂಮಿತಾಯಿ ಯಾವತ್ತಿಗೂ ಯಾರಿಗೂ ಉಪವಾಸ ಹಾಕಿದವಳಲ್ಲ ಎನ್ನುವುದು ನಿಜವಾದ ರೈತನಿಗೆ ಗೊತ್ತಿರುವ ಸಂಗತಿ. ಹಳ್ಳಿಗಳು ಇರುವ ಅಲ್ಪಸ್ವಲ್ಪ ಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡಿರುತ್ತವೆ. ಹಳ್ಳಿಗಳು ಈಗ ದುರಂತಗಳಾಗಿ ಬದಲಾಗಿವೆ. ಈ ಕೆಟ್ಟ ಸರ್ಕಾರಗಳ ಕಾರಣದಿಂದ ಹಳ್ಳಿಗಳು ಕುಡಿತದ ವ್ಯಸನಕ್ಕೆ ಬಲಿಯಾಗಿವೆ. ಅಕ್ರಮ ಮದ್ಯ ಮಾರಾಟ ಹಳ್ಳಿಗಳ ನೆಮ್ಮದಿಯನ್ನು ಬಲಿ ಪಡೆದುಕೊಂಡಿದೆ. ಕುಡಿತ ಹಾದರಕ್ಕೂ ದಾರಿ ಮಾಡಿಕೊಟ್ಟಿದೆ. ಸದ್ಯಕ್ಕೆ ಹಳ್ಳಿಗಳು ಕುಡಿತ, ಹಾದರ, ಜೂಜು ಈ ಮೂರುಗಳಿಂದ ಸಮೃದ್ಧವಾಗಿವೆ. ಹನಮಂತ್ರಾಯನದು ಸುಂದರವಾದ ಕುಟುಂಬ. ಯಾವುದಕ್ಕೂ ಕೊರತೆ ಇರಲಿಲ್ಲ. ಬಿತ್ತು ಬೆಳೆ ಚೆನ್ನಾಗಿತ್ತು. ಹೆಂಡತಿಯೂ ಮಕ್ಕಳೂ ಚೆನ್ನಾಗಿಯೇ ಇದ್ದಾರೆ. ಆದರೆ ಹಾದರದ ಮನಸ್ಸು?

ಅದು ಪರಸ್ತ್ರೀಯ ಮೇಲೆ ನಾಟಿಕೊಂಡಿದೆ. ರಾಮನು ಹುಟ್ಟಿದ ನಾಡಿನಲ್ಲಿ ರಾಮನ ವ್ಯಕ್ತಿತ್ವ ಜನರಲ್ಲಿ ಮೂಡದಿರುವುದೊಂದು ದುರದೃಷ್ಟಕರ. ಅವನು ಆಕೆಗಾಗಿ ಚಡಪಡಿಸತೊಡಗಿದ. ಅವಳನ್ನು ಖೆಡ್ಡಾಕ್ಕೆ ಕೆಡವಲು ನಾನಾ ಯೋಜನೆಗಳನ್ನು ರೂಪಿಸುತ್ತಿದ್ದ. ಅವೆಲ್ಲವೂ ವಿಫಲವಾಗುತ್ತಿದ್ದವು. ಈ ಕುರಿತು ತನ್ನ ಆಪ್ತರೊಂದಿಗೂ ಚರ್ಚಿಸಿದ್ದ. “ಬ್ಯಾಡ ಬಿಡಲೇ ಕೋಡಿ, ಇನ್ನೊಬ್ಬರ ಮನೆಯನ್ನು ಏಕೆ ಹಾಳು ಮಾಡಬೇಕು” ಎಂದು ಉತ್ತಮ ಗೆಳೆಯರು ಸಲಹೆ ಕೊಡುತ್ತಿದ್ದರು. ಆದರೆ ರೊಚ್ಚಿಗೆದ್ದ ಮನಸ್ಸಿಗೆ ಬುದ್ದಿ ಮಾತು ನಾಟೀತೆ? ಆತ ಅವಿರತ ಪ್ರಯತ್ನವನ್ನು ಮುಂದುವರೆಸಿದ್ದ.

ಅದೊಂದು ದಿನ, ಮುಂಗಾರಿನ ಒಂದು ದಿನ, ಆ ಸುದಿನ ಬಂದೇ ಬಿಟ್ಟಿತು. ಆತ ಅಂದಾಜಿಸಿದ್ದು ಸರಿ ಇತ್ತು. ಹಣಮಂದೇರು ಕಟ್ಟೆಗೆ ಮಲಗಿದವರು ಯಾರು ಎಂದು ನೋಡಲಾಗಿ ಶಿವರಾಯ ಫುಲ್ ಟೈಟಾಗಿ ಮಲಗಿದ್ದನ್ನು ಕಂಡಿದ್ದ. ಶಾರದಾ ಎಲ್ಲಿರುತ್ತಾಳೆ ಈಗ? ಹೊಲದಲ್ಲಿ! ತಾನು ತಡಮಾಡಬಾರದು ಎಂದು ಗೂಟಕ್ಕೆ ಕಟ್ಟಿದ ಎತ್ತುಗಳನ್ನು ಬಿಚ್ಚಿದ. ಶೆಂಗಾ ತೆಗೆದು ತೆರವಾಗಿದ್ದ ಹೊಲದಲ್ಲಿ ಗಳೆ ಹೊಡೆಯುವುದು ಬಾಕಿ ಇತ್ತು. ಇಲ್ಲಿ ಆತನನ್ನು ಉತ್ಸುಕನನ್ನಾಗಿ ಮಾಡಿದ ಸಂಗತಿಯೊಂದಿದೆ. ನಿನ್ನೆ ಬೆಳಿಗ್ಗೆ ಆಕೆಯನ್ನು ನೋಡಲು ಆಕೆಯ ಮನೆಯ ಮುಂದೆ ಹೋದಾಗ ವಾರಿಗೆ ಗಣ್ಣಿನಿಂದ ನೋಡಿ ಮುಗುಳು ನಕ್ಕಿದ್ದಳು. ಅಂದರೆ ಆಕೆಗೂ ತನ್ನ ಮೇಲೆ ಆಸೆ ಇದೆ ಅಂದಂತಾಯಿತು. ಆಕೆ ವಾರಿಗೆ ಗಣ್ಣಿನಿಂದ ನೋಡಿದಾಗ ಈ ಕೋಳಿ ತನ್ನ ವಶವಾಗಲಿಕ್ಕೆ ಇನ್ನು ತುಂಬಾ ದಿನಗಳು ಬೇಕಿಲ್ಲ ಎಂದು ಯೋಚಿಸಿ ರೋಮಾಂಚನಗೊಂಡಿದ್ದ. ಸದ್ಯ ಇವತ್ತು ಆ ಆಸೆ ಕೈಗೂಡುವುದರಲ್ಲಿತ್ತು, ಮತ್ತು ಕೈಗೂಡಿತು ಕೂಡಾ.

ಅವತ್ತು ಮೊಟ್ಟ ಮೊದಲ ಸಲ ಶಾರದಾ ಮತ್ತು ಹಣಮಂತ್ರಾಯ ದೈಹಿಕವಾಗಿ ಮಾನಸಿಕವಾಗಿ ಒಂದಾದರು.

ಈ ಸಂಗತಿ ಶಿವರಾಯನ ಕಿವಿಗೆ ಬೀಳುವುದು ತಡವಾಗಲಿಲ್ಲ. ಯಾವಾಗ ತಮ್ಮಿಬ್ಬರ ಹಾದರದ ಕಥೆ ಶಿವರಾಯನ ಕಿವಿಗೆ ಬಿದ್ದಿದೆ ಎನ್ನುವುದು ಶಾರದಾ ಮತ್ತು ಹಣಮಂತ್ರಾಯನ ಮನಸ್ಸಿನಲ್ಲಿ ಮೂಡಿತೋ ಅವರಿಬ್ಬರಲ್ಲಿ ರಾಕ್ಷಸ ಜಾಗೃತನಾದ.

ಸಬ್ ಇನ್ಸಪೆಕ್ಟರ್ ರಾಘವೇಂದ್ರ ಪತ್ರಕರ್ತ ಪ್ರವೀಣನಿಗೆ ಶಿವರಾಯನ ಕೊಲೆಯ ಹಿಂದಿನ ಮೊಟಿವ್ ವಿವರಿಸುತ್ತಿದ್ದರೆ ಆತ ಮೈಯೆಲ್ಲಾ ಕಿವಿಯಾಗಿಸಿಕೊಂಡು ಕೇಳುತ್ತಿದ್ದ.

(ಮುಂದುವರೆಯುತ್ತದೆ)

ಲಕ್ಷ್ಮೀಕಾಂತ ನಾಯಕ

WhatsApp Group Join Now
Telegram Group Join Now

Related Posts