ಅಧ್ಯಯನ-ಕ್ರೀಡೆಗೆ ಸಮಯ ಮೀಸಲಿರಿಸಲು ವಿದ್ಯಾರ್ಥಿಗಳಿಗೆ ಸಲಹೆ
ಯಾದಗಿರಿ : ಸೆಪ್ಟೆಂಬರ್ 26, : ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಸಮಯ ವ್ಯರ್ಥ ಮಾಡದೇ ಆಟ ಹಾಗೂ ಅಧ್ಯಯನಕ್ಕೆ ಮೀಸಲಿಡಬೇಕು. ಮೊಬೈಲ್, ಟಿ.ವಿ ಮಾಧ್ಯಮದಿಂದ ದೂರವಿರಬೇಕು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ ಅಧಿಕಾರಿ ಲವೀಶ್ ಒರಡಿಯಾ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕರ್ನಾಟಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯಾದಗಿರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯಾದಗಿರಿ ಇವರ ಸಹಯೋಗದಲ್ಲಿ ಯಾದಗಿರಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2024-25 ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ಮನಸ್ಸುಗಳನ್ನು ಒಂದು ಗೂಡಿಸುವ, ಪರಸ್ಪರರಲ್ಲಿ ಸೌಹಾರ್ದತೆ ಮೂಡಿಸುವ ವೇದಿಕೆಗಳಾಗಬೇಕು. ವಿದ್ಯೆಯ ಜತೆ ಜತೆಗೆ ಕ್ರೀಡೆಯ ಅವಶ್ಯಕತೆಯೂ ಇದೆ ಎನ್ನುವ ಮನೋಭಾವ ದೂರವಾಗುತ್ತಿದೆ. ವಿದ್ಯೆ ಮತ್ತು ಕ್ರೀಡೆ ಎರಡೂ ಸಮಾನಾಂತರವಾಗಿ ಚಲಿಸಿದಾಗ ವ್ಯಕ್ತಿ ಭೌತಿಕವಾಗಿ, ಬೌದ್ಧಿಕವಾಗಿ ಅಭಿವೃದ್ಧಿ ಕಾಣುತ್ತಾನೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್ ಕ್ರೀಡಾ ಜ್ಯೋತಿ ಸ್ವಿಕಾರ ಮಾಡಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಟ, ವ್ಯಾಯಾಮ, ನಡಿಗೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಆಟಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಹೆಚ್ಚುವುದರೊಂದಿಗೆ ಕ್ರಿಯಾತ್ಮಕವಾಗಿ ಯೋಚಿಸುವ ಶಕ್ತಿ ದೊರಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು ಬಾವಿ ಹಳ್ಳಿ, ಕ್ರೀಡಾ ಇಲಾಖೆ ಅಧಿಕ್ಷಕ ಗೋವಿಂದಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮೌನೇಶ ಗೋನಾಲ್, ವಡಗೇರಾ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ತಿಪ್ಪಣ್ಣ ನಾಯಕ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅನೀಲ ಕುಮಾರ್, ದೈಹಿಕ ಶಿಕ್ಷಕರಾದ ಸಂಗಮೇಶ ಕೆ. ಬಾಚವಾರ್, ಅಥ್ಲೆಟಿಕ್ಸ್ ತರಬೇತಿದಾರ ದೊಡ್ಡಪ್ಪ ನಾಯಕ ಸೇರಿದಂತೆ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.