ಶಪಥ                               

Jul 21, 2023 - 08:43
 0  22

Google  News WhatsApp Telegram Facebook

ಶಪಥ                               

Janaa Akrosha News Desk.

ಸುಮಧುರವಾದ ಹಾಡನ್ನು ಅಳವಡಿಸಿದ ರಿಂಗ್ ಟೋನ್ ತನ್ನ ಮಾಧುರ್ಯದಲ್ಲಿ ಮೊಳಗಿದಾಗ ಮಂಜು ಎಚ್ಚರಗೊಂಡ.ಮುಂಜಾನೆಯ ನಾಲ್ಕ ಗಂಟೆಯ ಹೊತ್ತಿನ ಅಮಲು ನಿದ್ದೆಯನ್ನು ಜಗತ್ತಿನ ಯಾವ ಜೀವಿಯೂ ಮಿಸ್ ಮಾಡಿಕೊಳ್ಳಲಾರ.ಸಮ್ಮೋಹಿನಿ ನಿದ್ದೆಯನ್ನು ಭಂಗ ಮಾಡಿದ ಪಾಪಿಗೆ ಹಿಡಿ ಶಾಪ ಹಾಕಬೇಕೆಂಬ ಮನಸ್ಸಾಯಿತಾದರೂ ಅದು ತನ್ನ ನಿರೀಕ್ಷಿತ ಮತ್ತು ತಾನೆ ನಿಗದಿಪಡಿಸಿದ ಫೋನ್ ಕಾಲ್ ಅದು.ಮನಸ್ಸು ಉಲ್ಲಸದಿಂದ ಅರಳಿತು.ಬಯಸಿದ ಬಹು ನಿರೀಕ್ಷಿತ ವಸ್ತು ಸುಲಭದಲ್ಲಿ ದೊರೆತಾಗ ಅರಳುತ್ತದಲ್ಲಾ ಮನಸ್ಸು,ಹಾಗೆ ಉಲ್ಲಾಸಗೊಂಡ ಮಂಜು.ಆತುರದಿಂದ ಫೋನ್ ಎತ್ತಿಕೊಂಡು “ಹಲೋ!”ಎಂದರೆ ಆ ಕಡೆಯಿಂದ ಮಲ್ಲು ಗುಪ್ತ ವಾರ್ತೆ ಹೇಳುವ ಪುರಾತನ ಪರಾವರ್ತಿತ ಪ್ರಕ್ರಿಯೆಗೆ ಒಳಪಟ್ಟ ಧ್ವನಿಯೊಂದಿಗೆ”ಮಂಜು,ಮಿಕ ಇವತ್ತು ಸಿಗುತ್ತದೆ,ನೀವು ರೆಡಿಯಾಗಿ.ಮಾಹಿತಿ ಪಕ್ಕಾ ಇದೆ.ಇನ್ನೊಂದು ಗಂಟೆಯಲ್ಲಿ ಬಂದು ಬಿಡಿ!”ಅಂತ ಹೇಳಿ ಫೋನ್ ಕಟ್ ಮಾಡಿದ. 

     ಮಂಜು ನಿಧಿ ದೊರೆತಷ್ಟು ಸಂತಸಗೊಂಡ,ಆತನ ನಿದ್ರೆ ಮಂಪರೆಲ್ಲಾ ಒಂದೇಟಿಗೆ ಆರಿ ಹೋಯಿತು.ತಾನು ಇನ್ನಿಲ್ಲದ ಆವೇಗದಿಂದ ಜಾಗೃತಗೊಂಡ ಮಂಜು ತಾನು ಮಾಡಬೇಕಿರುವ ಸಿದ್ದತೆಯ ಬಗ್ಗೆ ಯೋಚಿಸಿದ.ಗುರುವ ಇನ್ನೂ ಗೊರಕೆ ಹೊಡೆಯುತ್ತಿದ್ದ.ಶಂಕರು ಕೂಡಾ ಹೆಣದಂತೆ ಬಿದ್ದುಕೊಂಡಿದ್ದ.ಭೀಮುವನಲ್ಲಿ ಇನ್ನೂ ರಾತ್ರಿ ಕುಡಿದ ಅಮಲು ಆತನ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಮಲ್ಲು ನೀಡಿದ ಮಾಹಿತಿ ಮತ್ತು ಮಾಹಿತಿಗಾಗಿ ತಾನು ಮಲ್ಲುನನ್ನು ನೇಮಿಸಿದ್ದು ಮತ್ತು ಅದಕ್ಕೆಂದು ತಾನು ಖರ್ಚು ಮಾಡಿದ ಹಣ ಮತ್ತು ಮಲ್ಲು ಈ ಕ್ಷಣ ಒದಗಿಸಿದ ಮಾಹಿತಿ ತನ್ನ ಜೀವನದ ಪ್ರತಿಜ್ಞೆಯೊಂದು ಈಡೇರಲು ಪೂರಕವಾಗಿದೆ.ಎದೆ ಮಟ್ಟ ಇಳಿದ ಗಡ್ಡ ಚೌರ ಕಾಣದೆ ಹತ್ತಿರ ಹತ್ತಿರ ಒಂದುವರೆ ವರ್ಷವಾಗಲಿಕ್ಕೆ ಬಂದಿದೆ.ತಲೆಯ ಮೇಲಿನ ಕೂದಲು ಜಟಾಧಾರಿ ಋಷಿಯ ಕೇಶದಂತೆ ರೂಪುಗೊಂಡಿವೆ.ಇವತ್ತು ಕೆಲಸ ಸಾಧಿಸಿದ್ದೇ ಆದರೆ ಎದೆ ಮಟ್ಟ ಇಳಿದ ಗಡ್ಡ ಮತ್ತು ತಲೆಯ ಜಡೆಗೂ ಮುಕ್ತಿ ಸಿಗಲಿದೆ.ಅವಮಾನ ದ್ವೇಷ ಮತ್ತು ಸಾಮಾಜಿಕ ಕೊಂಕು ನುಡಿಗಳಿಂದ ಘಾಸಿಗೊಂಡ ಹೃದಯದ ಕಾವು ತಣಿಯಲಿದೆ.ಮಂಜು ಗುರುವ ಭೀಮು ಶಂಕರನನ್ನು ಎಬ್ಬಿಸಿದನು.ಅವರಿಗೆ ತಾವು ಮಾಡಬೇಕಿರುವ ಕೆಲಸಗಳ ಬಗ್ಗೆ ವಿವರಿಸಿ ಹೇಳಿದ.ಮಲ್ಲು ನೀಡಬಹುದಾದ ಮಾಹಿತಿಗಾಗಿ ಅವರು ಸಹ ಕಾಯುತ್ತಿದ್ದರು,ಮಾಹಿತಿ ಬಂದಿದೆ ಎಂದ ಕೂಡಲೆ ಸಂತಸಗೊಂಡ ಅವರು.ಸಿದ್ದಗೊಳ್ಳತೊಡಗಿದರು.ಎಲ್ಲರಲ್ಲೂ ಸುಪ್ತವಾಗಿ ಅಡಗಿದ್ದ ರಾಕ್ಷಸತ್ವ ದ್ವೇಷದ ಕುಲುಮೆಯಿಂದ ಜಾಗೃತವಾಯಿತು.ದ್ವೇಷವೇ ರಾಕ್ಷಸತ್ವವನ್ನು ಹುಟ್ಟು ಹಾಕುವ ಕಾರ್ಖಾನೆ ಎಂಬುದು ಸತ್ಯವಾಗಿತ್ತು.ಮತ್ತವರ ಎದೆಗಳಲ್ಲಿ ಕುದಿಯುತ್ತಿದ್ದ ದ್ವೇಷ ಕಲ್ಲನ್ನು ಕರಗಿಸುವ ಲಾವಾರಸದಂತೆ ಅವರ ಇಡೀ ಬದುಕು ಕುದಿಯತೊಡಗಿತ್ತು.ಅವರು ಅವಿಶ್ರಾಂತರಾಗಿದ್ದರು:ಹೀಗ್ಗೆ ಒಂದುವರೆ ವರ್ಷದಿಂದ. 

     ಸುಮಾರು ಒಂದುವರೆ ವರ್ಷಗಳ ಹಿಂದೆಯೇ ಮಂಜು ತನ್ನೆಲ್ಲಾ ಸಾಮಾನುಗಳನ್ನು ಸಿದ್ದಗೊಳಿಸಿಟ್ಟಿದ್ದನು.ತನಗದು ಅಗತ್ಯವಷ್ಟೇ ಅಲ್ಲ ಅದು ಅವಶ್ಯ ಕೂಡಾ ಆಗಿತ್ತು.ನಾಲ್ಕು ವರ್ಷಗಳಿಂದ ಜನ ಮಳೆ ಕಾಣದೆ ಬೇಸತ್ತು ಹೋಗಿದ್ದರು.ಹತ್ತು ರೂಪಾಯಿಗಾಗಿ ಕೆಲವರು ಮಾನ ಮಾರಿಕೊಳ್ಳಲು ಸಿದ್ದರಾಗಿದ್ದರೆ ಕೆಲವರು ಕೊಲೆ ಮಾಡಲು ಕೂಡಾ ಹಿಂಜರಿಯದಂತಹ ಸ್ಥಿತಿಯಲ್ಲಿದ್ದರು.ಮುಗಿಲು ವೀರ್ಯವಿಲ್ಲದ ಗಂಡಸಿನಂತಾದರೆ ಮುಗಿಲನ್ನೇ ನಂಬಿದ ಭೂಮಿ ತಾಯಿ ಬರಡಾಗದೇ ಬಂಜೆಯಾಗದೆ ಏನು ಮಾಡಿಯಾಳು?ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದ ಜನ ತಮ್ಮ ತಮ್ಮ ಬಂಜೆ ಹೊಲಗಳಲ್ಲಿ ಕಣ್ಣೀರ ಮಳೆ ಸುರಿಸುವ ಪ್ರಯತ್ನದಲ್ಲಿದ್ದರು.ಹಸಿವು ಕರುಣೆ ಮಮಕಾರಗಳಿಗೆ ಅರ್ಥ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಅದೊಂದು ದಿನ ಮಠದ ಮುತ್ತ್ಯೆ ಸ್ಪಷ್ಟವಾದ ಶಬ್ದಗಳಿಂದ ಹೇಳಿದ್ದ.ದಿನ ಬೆಳಗೆದ್ದು ತಾನು ಮಸಿಯುವ ಕೊಡಲಿಯನ್ನು ಜನ ವ್ಯಂಗದಿಂದ ನೋಡತೊಡಗಿದ್ದಾಗ ತಾನು ಕೂಡಾ ವೀರ್ಯ ಕಳೆದುಕೊಂಡ ಮುಗಿಲಿನಂತಾದೇನಾ ಎಂಬ ಸಂದೇಹ ತಾಳಿದನು.ಈ ದ್ವೇಷ ಸೇಡಿನ ಬೆಂಕಿಯಲ್ಲಿ ಬೇಯಲಿಕ್ಕೆ ತನಗೇನು ಹುಚ್ಚೇ,ಇವತ್ತಿಗೂ ತನ್ನ ಹೆಂಡತಿ ರತ್ನ:”ಬ್ಯಾಡ್ರೀ,ಆಗಿದ್ದೆಲ್ಲಾ ಆಗಿ ಹೋತು,ಸತ್ತವರು ಮತ್ತೆ ತಿರಿಗಿ ಬರುವುದಿಲ್ಲ.ಕೋಪ ತಾಪಗಳು ಬರೀ ವೈರಿಯನ್ನು ಮಾತ್ರ ಕೊಲ್ಲುವುದಿಲ್ಲ.ಅವುಗಳ ಕಾವು ಮೊದಲು ಅವನ್ನು ಹೊಂದಿರುವವರನ್ನು ಸುಡುತ್ತದೆ.ದಯವಿಟ್ಟು ಎಲ್ಲಾ ಮರೆತು ಬಿಡಿ.ನಡೆದಿದ್ದು ಕೆಟ್ಟ ಕನಸು ಎಂದು ತಿಳುಕೋರಿ.ಬನ್ನಿ ಮತ್ತೆ ನೌಕರಿಗೆ ಜಾಯ್ನ್ ಆಗಿ.ಅಪ್ಪ ಎಲ್ಲಾ ಮಾತಾಡಿದ್ದಾರೆ.ಈ ಸೇಡಿನ ಬೆಂಕಿಯಿಂದ ನಿಮ್ಮನ್ನು ಸುಟ್ಟುಕೊಂಡು ನನ್ನನ್ನು ನನ್ನ ಮಕ್ಕಳನ್ನು ನಾಶ ಮಾಡಬೇಡಿ!”ಎಂದು ದಿನವಿಡೀ ಕಣ್ಣೀರ ಮಳೆ ಸುರಿಸಿ ರೋಧಿಸುವಳು.ಆದರೆ ತಾನು ಶಪಥ ಮಾಡಿಯಾಗಿದೆ.ಹೆಜ್ಜೆ ಹಿಂದಕ್ಕಿಟ್ಟರೆ ರಣ ಹೇಡಿಯಾಗುತ್ತೇನೆ ತಾನು,ಶಪಥ ಮಾಡಿಯಾಗಿದೆ,ಸತ್ತರು ಸರಿಯೇ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ.ಗಂಡಸು ಎಂದು ನಿರೂಪಿಸಬೇಕೆಂದರೆ ತಾನು ತನ್ನ ಶಪಥ ನೆರೆವೇರಿಸಲೇಬೇಕು.ಇಲ್ಲದಿದ್ದರೆ ಹೇಡಿಯಂತೆ ಬದುಕುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಉತ್ತಮ.ಹಾಗಂತ ಕಡಾಕಂಡಿತವಾಗಿ ಹೆಂಡತಿಗೆ ಹೇಳಿಯಾಗಿತ್ತು.ತನಗಾದರೂ ಸುಂದರವಾದ ಬದುಕನ್ನು ಬದುಕುವುದು ಬಿಟ್ಟು ಈ ಕೋಪ ತಾಪದ ಬೆಂಕಿಯಲ್ಲಿ ಬೇಯಲಿಕ್ಕೆ ಹುಚ್ಚೇ.ಅವತ್ತು ಬೇಸಿಗೆಯ ಆ ಭಾನುವಾರ ಮಧ್ಯಾಹ್ನ ಬಿಸಿಲಿಗೆ ಬೇಸತ್ತು ಆಫೀಸ್ ಇಲ್ಲದ ನಿರುಮ್ಮಳತೆಯಲ್ಲಿ ಏರ್ ಕೂಲರ್ನ ತಂಪು ಗಾಳಿಗೆ ಮೈ ಚೆಲ್ಲಿ ಕುಳಿತಿದ್ದಾಗ ಊರಿನಿಂದ ಫೋನ್ ಬಂದಿತ್ತು.ಪೋನ್ ಮಾಡಿದ್ದು ಗುರುವನೆ,ಭಯಾನಕವಾದ ಆ ಸುದ್ದಿ ಹೇಳುವ ಧೈರ್ಯ ಒರಟು ಗುರುವನಿಗಲ್ಲದೆ ಬೇರೆಯವರಿಗೆ ಇರಲಿಕ್ಕೆ ಸಾಧ್ಯವೇ ಇರಲಿಲ್ಲ.”ಅಣ್ಣ ಪಾಪಿಗಳು ಸಂಜಯ್ ಅಣ್ಣನನ್ನು ಮುಗಿಸಿಬಿಟ್ಟರು,ಕೂಡಲೇ ಬಾ!”ಎಂದು ಇನ್ನೊಂದೇ ಒಂದು ಮಾತಾಡದೆ ಫೋನ್ ಕಟ್ಟುಮಾಡಿದ್ದ.ಮಾತಾಡಲಿಕ್ಕೆ ಆಸ್ಪದವಿಲ್ಲದಂತೆ ಅವನ ಧ್ವನಿ ಕಟ್ಟಿತ್ತು.ಸುದ್ದಿ ಕೇಳಿದ ತಕ್ಷಣ ಕ್ಷಣ ಹೊತ್ತು ಅಪ್ರಜ್ಞ ಸ್ಥಿತಿಯಂಥಹದ್ದು ಉಂಟಾಗಿತ್ತು. ಮೆದಳು ಸ್ಥಂಭಿಸಿದಂತೆ,ಬೀಸುವ ಗಾಳಿ ಸ್ತಬ್ದವಾದಂತೆ,ಹರಿಯುವ ನೀರು ಒಮ್ಮಲೇ ನಿಂತಂತೆ,ರತ್ನ ಗಾಭರಿಗೊಂಡು ಹುಚ್ಚಿಯಂತೆ ಕಿರಿಚಿದ್ದಳು:ಏನಾಯಿತು ರೀ ನಿಮಗೆ?ತಡ ಮಾಡಲಿಲ್ಲ ತಾನು,ಸತ್ಯಪುರದ ಹಳ್ಳದ ದಂಡೆಯಲ್ಲಿಗೆ ಗಾಡಿ ಡ್ರೈವ್ ಮಾಡಲಿಕ್ಕೆ ತನಗೆ ತೆಗೆದುಕೊಂಡ ಸಮಯ ಬರೀ ಒಂದು ಗಂಟೆ.ರಕ್ತ ಮಡುವಿನಲ್ಲಿ ಛಿದ್ರ ಛಿದ್ರವಾದ ದೇಹದಲ್ಲಿ ಸುಮಾರು ಅರ್ಧ ಗಂಟೆಯವರೆಗೆ ಜೀವವಿತ್ತಂತೆ.ಹಂತಕರು ತನ್ನಣ್ಣನ ದೇಹವನ್ನು ಮನಸೋ ಇಚ್ಚೆ ಕತ್ತರಿಸಿ ಕೆಸರಿನಲ್ಲಿ ತುಳಿದು ಹೋದಾದ ಮೇಲೆ ದೇಹವನ್ನು ಗುರುತಿಸಿದ್ದು ಆಡು ಕಾಯುವ ಹುಡುಗರಂತೆ.ಕೆಸರಿನಲ್ಲಿ ಹೂತು ಹೋದ ದೇಹವನ್ನು ಹೊರಗೆಳದು ಜೀವವಿರುವುದು ಗುರುತಿಸಿ ಬಾಯಿಗೆ ನೀರು ಬಿಟ್ಟವಂತೆ.ತುಂಬಾ ಚಿತ್ರ ಹಿಂಸೆಯಿಂದ ಕೇವಲ ಕ್ಷುಲಕ ಕಾರಣಕ್ಕೆ ಹತ್ಯೆ ಮಾಡಿದ ಹಂತಕರಿಗೆ ರಾಜಕೀಯ ಹಸಿವು.ತನ್ನಿಂದ ತನ್ನ ಒಡ ಹುಟ್ಟಿದ ಅಣ್ಣನ ಶರೀರ ನೋಡಲಾಗಿರಲಿಲ್ಲ. 

     ಅತ್ತಿಗೆ ಮತ್ತು ಮಕ್ಕಳ ರೋಧನ ನೋಡುವಂತಿರಲಿಲ್ಲ. ಮರು ದಿನ ಪೋಸ್ಟಮಾರ್ಟಂ ಆಗಿ ಬಳಿ ಬಟ್ಟೆಯಲ್ಲಿ ಮುರಿದ ಎಲುಬುಗಳ ದೇಹ ಸುತ್ತಿಕೊಂಡು ಬಂದು ಅಗಸಿ ಬಾಗಿಲಲ್ಲಿ ಇಟ್ಟಾಗ ಇಡೀ ಊರ ಕಣ್ಣೀರು ಇಟ್ಟಿತ್ತು.ಸಂಜಯ್ ಇಡೀ ಊರಿನ ಮಗನಾಗಿದ್ದ.ಬಡವರ ಬಂಧುವಾಗಿದ್ದ,ತುತ್ತು ಅನ್ನವನ್ನು ಹಂಚಿಕೊಂಡೇ ತಿನ್ನ ಬೇಕೆಂಬ ಗುಣ ಹೊಂದಿದ್ದ ತನ್ನಣ್ಣ ಪ್ರೀತಿಯ ಪ್ರತಿ ರೂಪವಾಗಿದ್ದ.ಅನ್ಯಾಯವನ್ನು ಸಹಿಸದ ರಾಜಕಾರಣದ ಧನ ಪಿಶಾಚಿಗಳ ಪಾಲಿನ ಯಮನಾಗಿದ್ದ ಅಣ್ಣ ಬೋಗಸ್ ಬಿಲ್ಲು ಕಳಪೆ ಕಾಮಗಾರಿಗಳನ್ನು ಸಹಿಸುತ್ತಿರಲಿಲ್ಲ.ಊರ ಉಸಾಬರಿ ನಮಗೇಕಣ್ಣ ಅಂತ ತಾನು ಹಾಗಾಗ ಹೇಳುತ್ತಿದ್ದ ಮಾತಿಗೆ ವಿದ್ಯಾವಂತ ನಿರಾಸಕ್ತರಿಂದಾಗಿಯೆ ದೇಶ ಹಿಂದೆ ಉಳಿದಿದೆ ಎಂದು ಬೈಯ್ಯುತ್ತಿದ್ದ. 

     ಗುಂಡಿಯಲ್ಲಿ ಹೆಣವಿಡುವ ಮುನ್ನ ಸಂಸ್ಕಾರದ ವಿಧಿವಿಧಾನಗಳ ಪ್ರಕಾರ ಕೆಲವು ಜನ ಅತ್ತಿಗೆಯ ತಾಳಿಗೆ ಕೈ ಹಾಕಿದರು.ಆಗಲೇ ತಾನು ಪ್ರತಿಜ್ಞೆ ಮಾಡಿದ್ದೆ.”ಅಕ್ಕ ನಿನ್ನ ಗಂಡ ನನ್ನ ಅಣ್ಣನ ಸಾವಿಗೆ ಕಾರಣರಾದವರ ಜೀವ ತೆಗೆಯುವವರೆಗೆ ನೀನು ತಾಳಿ ತೆಗೆಯಬೇಡ ಮತ್ತು ನಾನು ನನ್ನ ದೇಹದ ಕೂದಲು ತೆಗೆಯುವುದಿಲ್ಲ!”ಗಂಡ ಸತ್ತರೂ ವೈರಿಯ ಸಾವಿನ ದಾರಿ ನೋಡುತ್ತಾ ಅತ್ತಿಗೆ ಇನ್ನೂ ಮುತ್ತೈದೆಯಾಗಿಯೇ ಇದ್ದಾಳೆ,ತನ್ನ ಗಡ್ಡ ಮತ್ತು ತಲೆ ಕೂದಲಗಳು ಮಿತಿ ಮೀರಿ ಬೆಳೆದಿವೆ... 

 

     ಗುರುವ ಶಂಕರು ಭೀಮು ತಮ್ಮ ತಮ್ಮ ಆಯುದ್ಧಗಳನ್ನು ಸೂಕ್ತ ಸ್ಥಳಗಳಲ್ಲಿ ಅಡಗಿಸಿಟ್ಟುಕೊಂಡರು ಇನ್ನೂ ಸಮಯ ನಾಲ್ಕು ಗಂಟೆ.ಮಂಜು ನಿನ್ನೆಯೇ ಎಲ್ಲಾ ಬೈಕುಗಳಿಗೆ ಟ್ಯಾಂಕ್ ತುಂಬಾ ಪೆಟ್ರೋಲ್ ತುಂಬಿಸಿದ್ದನು.ಅವರು ತಮ್ಮ ಬೈಕುಗಳನ್ನು ತುಸು ದೂರ ತಳ್ಳಿಕೊಂಡೇ ಹೋದರು.ಏಕೆಂದರೆ ನಿಶ್ಯಬ್ದದ ಇನ್ನೂ ಸೂರ್ಯ ಮೂಡದ ಕತ್ತಲಿರಯವ ಆ ಹೊತ್ತಿನಲ್ಲಿ ಬೈಕುಗಳು ಶಬ್ದ ಮಾಡಿದರೆ ಮತ್ತು ತಮ್ಮ ಮೇಲೆ ನಿಗಾ ಇಟ್ಟಿರಬಹುದಾದ ತಮ್ಮ ಶತೃಗಳ ಕಡೆಯ ಮಾಹಿತಿದಾರರು ಎಚ್ಚರಗೊಂಡರೆ?ತುಸು ದೂರ ಬಂದು ತಮ್ಮ ತಮ್ಮ ವಾಹನಗಳನ್ನು ಸ್ಟಾರ್ಟ್ ಮಾಡಿಕೊಂಡು ಅವರು ತುಂಬಾ ವೇಗದಿಂದ ಚಲಿಸಿದರು. 

     ಅಣ್ಣನ ಕೊಲೆಗೆ ಬರಗಾಲವೂ ಒಂದು ಪರೋಕ್ಷ ಕಾರಣ.ಜನಗಳಿಗೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ಕಿತ್ತು ತಿನ್ನುವ ವಾತಾವರಣ ನಿರ್ಮಾಣವಾಗಿತ್ತು.ತೀರಾ ಬಡ ಜನಗಳು ಬೆಂಗಳೂರು ಪೂನಾ ಎಂಬ ಮಾಹಾ ನಗರಗಳ ಕಡೆಗೆ ಗುಳೇ ಹೊರಟಿದ್ದರು.ಮಾಹಾತ್ಮಾಗಾಂಧೀ ಉದ್ಯೋಗ ಖಾತ್ರಿ ಯೋಜನೆಯನ್ನು ಜನಗಳು ಮಹಾ ನಗರಗಳಿಗೆ ಒಲಸೆ ಹೋಗಬಾರದು ಎಂಬ ಕಾರಣದಿಂದ ಸರಕಾರ ಅನುಷ್ಠಾನಗೊಳಿಸಿತ್ತು.ಆದರೆ ಊರಿನ ರಕ್ಕಸನೆಂದೇ ಖ್ಯಾತಿ ಗಳಿಸಿದ್ದ ಬಾಲಪ್ಪ ಬಡವರ ಜಾಬ್ ಕಾರ್ಡುಗಳನ್ನು ವಶಕ್ಕೆ ಪಡೆದು ಗ್ರಾಮಪಂಚಾಯತಿ ಸಿಬ್ಬಂದಿಯನ್ನು ಹೆದರಿಸಿ ಬಡವರ ಹಣ ಲೂಟಿ ಮಾಡತೊಡಗಿದ್ದ.ಬಡವರು ಆಕ್ರೋಶಗೊಂಡಿದ್ದರು ನಿಜ;ಆದರೆ ನ್ಯಾಯ ದೊರಕಿಸಿಕೊಡುವವರು ಯಾರು?ಜನ ಅಣ್ಣನ ಹತ್ತಿರ ಬಂದಾಗ ಬಾಲಪ್ಪನೊಂದಿಗೆ ಜಗಳವಾಗಿತ್ತು. 

     ಕೂಲಿ ಇಲ್ಲದೇ ತುತ್ತು ಕೂಳಿಗೆ ಜನ ಏನು ಬೇಕಾದರೂ ಮಾಡಲು ಸಿದ್ದರಾಗಿರುವ ಕಾಲದಲ್ಲಿ ನದಿ ತೀರದ ಮರಳಿಗೆ ಬಂಗಾರದ ಬೆಲೆ ಬಂದಿತ್ತು.ನಗರ ಪ್ರದೇಶಗಳ ಕಟ್ಟಡ ಕಾಮಗಾರಿಗೆ ಲಾರಿಗಟ್ಟಲೇ ಮರಳು ಸಾಗಾಣಿಕೆ ತನ್ನ ಗ್ರಾಮದಿಂದ ನಡೆಯುತ್ತಿದ್ದಾಗ ಅಣ್ಣನಿಗೆ ತುಸು ನೆಮ್ಮದಿ ದೊರಕಿತು.ಜನಗಳಿಗೆ ಸಮೃದ್ಧ ಕೂಲಿ ದೊರಕತೊಡಗಿತ್ತು.ಟ್ರ್ಯಾಕ್ಟರ್ಗಳಿಗೆ ಕೆಲಸ ದೊರೆತು ಊರು ನೆಮ್ಮದಿಯಿಂದ ಇದೆ ಎನ್ನುವಾಗ ಬಾಲಪ್ಪ ಮತ್ತೆ ಬಡವರ ಹೊಟ್ಟೆಯ ಮೇಲೆ ಮಣ್ಣು ಹಾಕುವ ಕೆಲಸ ಮಾಡಿದ.ಪ್ರಭಾವಿ ಗುತ್ತಿಗೆದಾರರ ಗುಂಪು ಮಾಡಿ ಜೆಸಿಬಿ ಯಂತ್ರಗಳಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಪ್ರಾರಂಭಿಸಿದಾಗ ಮತ್ತೆ ಬಾಲಪ್ಪನಿಗೂ ಅಣ್ಣನಿಗೂ ಘರ್ಷಣೆ ಉಂಟಾಗಿತ್ತು. 

     ಬಹುಶಃ ಬಾಲಪ್ಪ ಅಣ್ಣನಿಂದ ತನಗೆ ಉಳಿಗಾಲವಿಲ್ಲ ಅಂತ ನಿರ್ಧರಿಸಿ ಬಿಟ್ಟನೇನೋ? 

     ಬೈಕುಗಳನ್ನು ಊರ ಹೊರಗೆ ಪಾರ್ಕ ಮಾಡಿದರು.ಮಲ್ಲು ಕೊಟ್ಟ ಮಾಹಿತಿಯಲ್ಲಿ ಯಾವದೇ ಅನುಮಾನವಿಲ್ಲ.ಆತ ತನ್ನ ಬಾತ್ಮೀದಾರ.ಆದರೆ ಊರು ಪ್ರವೇಶಿಸಬೇಕು ಎಂದರೆ ಕತ್ತಲಿರಬೇಕು.ಹೀಗೆ ಯೋಚಿಸಿ ಮಂಜು ಊರಿನ ಟ್ರಾನ್ಸಫಾರ್ಮರ್ನ ಪ್ಯೂಸ್ ತೆಗೆದರು.ಊರು ತಾವಂದುಕೊಂಡಂತೆ ಕತ್ತಲಾಯಿತು.ಇನ್ನು ತಡ ಮಾಡುವಂತಿರಲಿಲ್ಲ.ಅದಾಗಲೇ ಸಮಯ ನಾಲ್ಕು ಗಂಟೆ.ಚಳಿಗಾಲದ ಸಂದರ್ಭವಾಗಿದ್ದರಿಂದ ಬೇಗ ಸೂರ್ಯ ಮೂಡುವುದಿಲ್ಲ.ಸೂರ್ಯ ಕಣ್ಣು ತೆರೆದಾಗ ಆತನ ಕಿರನಗಳೆಂಬ ಕಣ್ಣುಗಳಿಗೆ ಬಾಲಪ್ಪನ ಛದ್ರಗೊಂಡ ಮೃತ ದೇಹ ಕಾಣಿಸಬೇಕು.ಅಂತಿಮವಾಗಿ ಬಾಲಪ್ಪನ ಕತ್ತನ್ನು ತನ್ನ ಹರಿತ ಕೊಡಲಿಯಿಂದ ಕತ್ತರಿಸಬೇಕು.ಪ್ರಾಣ ಹೋಗುವಾಗ ವಿಲವಿಲ ಒದ್ದಾಡುವ ಬಾಲಪ್ಪನ ದೇಹವನ್ನು ತಾನು ನೋಡಬೇಕು. 

     ಮನೆಯ ಮಾಳಿಗೆಯ ಮೇಲೆ ಯಾವ ಅಪಾಯದ ಆತಂಕವೂ ಇಲ್ಲದೇ ಸಂಜಯ್ ನ ಕೊಲೆಯ ನಂತರ ಕಾನೂನಿನ ಕೈಗಳಿಗೆ ಸಿಗದೆ ತಪ್ಪಿಸಿ ತಲೆ ಮರೆಸಿಕೊಂಡಿದ್ದ ಬಾಲಪ್ಪ ನಿನ್ನೆ ಕಂಠ ಪೂರ್ತಿ ಕುಡಿದಿದ್ದ.ಅಪರಾಧಿಗಳು ಮತ್ತು ಅಪರಾಧ ಪ್ರವೃತ್ತಿಯ ಜನ ಮತ್ತಿಗೆ ಅಭ್ಯಾಸವಾಗದೇ ಇರಲಾರರೇನೋ!ಸುಖ ನಿದ್ರೆಯಲ್ಲಿದ್ದ ಬಾಲಪ್ಪ ಕಣ್ಣು ತೆರೆಯುವ ಮುನ್ನವೇ ಮಂಜು ಬೀಸಿದ ಕೊಡಲಿ ಏಟಿಗೆ ಕತ್ತು ಕತ್ತರಿಸಿ ಹೋಯಿತು.ಆಮೇಲೆ ಗುರುವ ಭೀಮು ಶಂಕ್ರು ತಲಾ ಒಂದೊಂದು ಏಟು ಹಾಕಿದರು.ಊರನ್ನು ಹೊಲೆಗೇರಿ ಮಾಡುತ್ತೇನೆ ಎಂದು ಶಪಥ ಮಾಡಿದ್ದ ಬಾಲಪ್ಪ ಬಡವರ ಶಾಪಕ್ಕೆ ಗುರಿಯಾದ. 

     ಊರು ದಾಟಿ ತಮ್ಮ ತಮ್ಮ ಬೈಕುಗಳ ಮೇಲೆ ಹತ್ತಿದ ಮೇಲೆ ಮಂಜು ಮನಸಾರೆ ನಕ್ಕ.ಆತನೊಂದಿಗೆ ಆ ಮೂವರು ನಗತೊಡದಿದರು.ಆ ನಗು ಹೇಗಿತ್ತೆಂದರೆ ಮೋಡಗಟ್ಟಿದ ಮತ್ತು ಮೋಡದಿಂದ ಕತ್ತಲಾವರಿಸಿದ ಪ್ರಪಂಚವೂ ನಡುಗಿ ಹೋಗುವಂತೆ ಗುಡುಗು ಗುಡುಗರಿಸುತ್ತದಲ್ಲ ಹಾಗಿತ್ತು! 

 

                                                                           ಲಕ್ಷ್ಮೀಕಾಂತ ನಾಯಕ

Google  News WhatsApp Telegram Facebook
HTML smaller font

.

.