ಕೊಪ್ಪಳಕ್ಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾನೂನು ಕಾಲೇಜು ಮಂಜೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ
ಕೊಪ್ಪಳ: ಕೊಪ್ಪಳಕ್ಕೆ ಸರ್ಕಾರಿ ಅತ್ಯಧುನಿಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಮಹಾವಿದ್ಯಾಲಯ ಮಂಜೂರು ಮಾಡಲು ಮಂಗಳವಾರ ತಾಲೂಕಿನ ಬಸಾಪುರ ಹತ್ತಿರದ ಎಂ.ಎಸ್.ಪಿ.ಎಲ್. ಏರ್ ಸ್ಟ್ರಿಪ್ ನಲ್ಲಿ ತುಂಗಭದ್ರಾ ಡ್ಯಾಮಿನ 19ನೇ ಗೇಟ್ ದುರ್ಘಟನೆ ಪರಿಶೀಲಿಸಲು ಹೊರಟ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟ ಮತ್ತು ಕೊಳಚೆ ನಿರ್ಮೂಲನಾ ವೇದಿಕೆಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಮನವಿಯಲ್ಲಿ ಕರ್ನಾಟಕದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲೇ ಅತ್ಯಂತ ಕಡೆಗಣಿಸಿರುವ ಕೊಪ್ಪಳ ಜಿಲ್ಲೆಗೆ ನೂತನ ಸರ್ಕಾರಿ ಅತ್ಯಾಧುನಿಕ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಕಾಲೇಜು ಮಂಜೂರು ಮಾಡುವ ಮೂಲಕ ಜಿಲ್ಲೆಯಲ್ಲಿ ಜನರು ಆರೋಗ್ಯ ಮತ್ತು ಕಾನೂನಾತ್ಮಕ ಶಿಕ್ಷಣದೊಂದಿಗೆ ಮುಂದುವರೆಯಲು ಅನುಕೂಲವಾಗುತ್ತದೆ. ದಯವಿಟ್ಟು ತಮ್ಮ ಅವಧಿಯಲ್ಲಿ ಪ್ರತಿಯೊಬ್ಬ ನಾಗರಿಕರು ನೆನಪಿಡುವಂತಹ ಪುರಾತನ ಕಾಲದಿಂದ ನಡೆದು ಬಂದಂತಹ ಗಿಡಮೂಲಿಕೆಯ ಮುಂದುವರೆದ ಅತ್ಯಾಧುನಿಕ ಆಯುರ್ವೇದಿಕ್ ಚಿಕಿತ್ಸಾ ಪದ್ದತಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಕಾಲೇಜನ್ನು ತಕ್ಷಣ ಮಂಜೂರು ಮಾಡುತ್ತಿರೆಂದು ಬಹುನಿರೀಕ್ಷೆಯಿಂದ ಈ ಭಾಗದ ಜನರ ಪರವಾಗಿ ಕೋರುತ್ತೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹಾಗೂ ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಾಫರ್ ಕುರಿ. ಜಿಲ್ಲಾ ಸಹ ಕಾರ್ಯದರ್ಶಿ ಮೌಲಾ ಹುಸೇನ್ ಹಣಗಿ. ನಾಗರಾಜ್ ಯಾದವ್. ಅಖಿಲ ಭಾರತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ರೇಣುಕಾ ನೆಲವಡಿ ಮುಂತಾದವರು ಮನವಿಯಲ್ಲಿ ಕೋರಿದ್ದಾರೆ.