ರಾಯಬಾಗ: ಗ್ರಾಮೀಣ ಪ್ರದೇಶಗಳು ಸರಾಂಗೀಣವಾಗಿ ಅಭಿವೃದ್ಧಿಗೊಳ್ಳಲಿ ಮತ್ತು ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳು ನಿವಾರಣೆಯಾಗಲಿ ಹಾಗೂ ಬಡ ಕೂಲಿ ಕಾರ್ಮಿಕರಿಗೆ ಖಾತರಿ ಕೂಲಿ ಸಿಗಲಿ ಎನ್ನುವ ಸದ್ದುದ್ದೇಶದಿಂದ ಅನುಷ್ಠಾನಕ್ಕೆ ತರಲಾಗಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಭ್ರಷ್ಟ ಅಧಿಕಾರಿಗಳಿಂದ, ಭ್ರಷ್ಟ ಅನುಷ್ಠಾನಾಧಿಕಾರಿಗಳಿಂದ ಪಟ್ಟಭದ್ರ ಹಿತಾಸಕ್ತಿಗಳು, ದೌರ್ಜನ್ಯ ದಬ್ಬಾಳಿಕೆ ಮಾಡುವ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜಕೀಯ ಪುಡಾರಿಗಳ ಮತ್ತು ಚುನಾಯಿತ ಸದಸ್ಯರಿಗೆ ಲಾಭ ಮಾಡುವ ಉದ್ದೇಶಕ್ಕೆ ಬಳಕೆಯಾಗುತ್ತಿರುವುದಕ್ಕೆ ಸಾಕ್ಷಿಯಾಇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹುಬ್ಬರವಾಡಿ ಗ್ರಾಮ ಪಂಚಾಯತಿಯ ಬೂದಿಹಾಳ ಗ್ರಾಮದಲ್ಲಿ ನಡೆದ ಕಾಮಗಾರಿಯೊಂದು ಸಾಕ್ಷಿ ಹೇಳುತ್ತಿದೆ.
ಬೂದಿಹಾಳ ಗ್ರಾಮದ ಸರಾಕರಿ ಪ್ರೌಢ ಶಾಲೆಯಲ್ಲಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ಕಾಮಗಾರಿಯೊಂದನ್ನು ಅನುಷ್ಠಾನಗೊಳಿಸಲಾಗಿದೆ. ಕೇವಲ ಹಣ ಲೂಟಿ ಮಾಡುವ ಸರ್ಕಾರಿ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುವ ಹಾಗೂ ಸರ್ಕಾರವನ್ನು ವಂಚಿಸುವ ಭಾಗವಾಗಿ ಅನುಷ್ಠಾನಗೊಳಿಸಲಾದ ಈ ಹತ್ತು ಲಕ್ಷ ರೂಪಾಯಿ ವೆಚ್ಚದ ಶೌಚಾಲಯ ಕಾಮಗಾರಿ ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ಒದಗದೆ ಹೋಗಿದೆ. ಕಾಮಗಾರಿಯನ್ನು ಅಂದಾಜು ಪುಸ್ತಕದಂತೆ ನಿರ್ವಹಿಸದೆ ಮನಸೋ ಇಚ್ಚೆ ನಿರ್ವಹಿಸಿ ಕೇವಲ ಹಣ ಲೂಟ್ ಮಾಡುವ ಉದ್ದೇಶದಿಂದ ಅನುಷ್ಠಾನಗೊಳಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕಾಮಗಾರಿಯನ್ನು ಅಪೂರ್ಣವಾಗಿ ಮಾಡಿ ಮುಗಿಸಲಾಗಿದೆ. ಮೂತ್ರ ವಿಸರ್ಜಿಸುವ ಮತ್ತು ಶೌಚ ಮಾಡುವ ಸಿಂಕ್‌ಗಳನ್ನು ಅಳವಡಿಸಿಲ್ಲ. ಶೌಚಾಲಯಕ್ಕೆ ನೀರು ಸರಬುರಾಜಿನ ವ್ಯವಸ್ಥೆ ಮಾಡಿಲ್ಲ. ಹತ್ತು ಲಕ್ಷ ರೂಪಾಯಿಗಳನ್ನು ವ್ಯರ್ಥ ಮಾಡುವ ಮೂಲಕ ಸಚರ್ಕಾರವನ್ನು ಮತ್ತು ಜನರನ್ನು ವಂಚಿಸಲಾಗಿದೆ ಎನ್ನುವ ಆಕ್ರೋಶ ಜನರಿಂದ ವ್ಯಕ್ತವಾಗುತ್ತಿದೆ. ಈ ಕಾಮಗಾರಿಗೆ ಬಳಸಿದ ಜಾಬ್ ಕಾರ್ಡುಎಳನ್ನು ಕೇವಲ ಕೂಲಿ ಹಣ ಲೂಟಿ ಮಾಡಲು ಬಳಸಿಕೊಳ್ಳಲಾಗಿದೆ. ಕಾಮಗಾರಿಗೆ ಬಳಸಿದ ಕಾರ್ಮಿಕರು ಇಲ್ಲಿ ಕೆಲಸ ಮಾಡಿರುವುದನ್ನು ಯಾರೂ ನೋಡಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಹೇಗೆ ಕೂಲಿ ಕಾರ್ಮಿಕರಿಲ್ಲದೆ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ “ಈ ಉದ್ಯೋಗ ಖಾತರಿ ಯೋಜನೆಯನ್ನು ಅಭಿವೃದ್ಧಿ ಅಧಿಕಾರಿಗಳು ತಮಗೆ ಬೇಕಿರುವ ವ್ಯಕ್ತಿಗಳಿಗೆ ನಿರ್ವಹಿಸಲು ನೀಡಿರುತ್ತಾರೆ. ಅವರ ಹತ್ತಿರ ತಮ್ಮ ಆಪ್ತ ಬಳಗದ ಉದ್ಯೋಗ ಚೀಟಿಗಳು ಇರುತ್ತವೆ. ಕೆಲಸ ಓಡಿಸಲು ಆ ಉದ್ಯೋಗ ಚೀಟಿಗಳನ್ನು ಹಾಜರಿಗೆ ಹಾಕುತ್ತಾರೆ. ಕೂಲಿ ಹಣ ಪಾವತಿಯಾದಾಗ ಇದು ನಮ್ಮ ಹಣ, ನೀವು ಇನ್ನೂರು ಮುನ್ನೂರು ಇಟ್ಟುಕೊಂಡು ಹಣ ಡ್ರಾ ಮಾಡಿ ಕೊಡಿ ಎಂದು ಹೇಳಿ ಹಣ ಪಡೆಯುತ್ತಾರೆ, ಇದು ಮೊದಲಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಇಲ್ಲಿ ಇನೊಂದು ವಿಷಯ ಹೇಳಬೇಕು ಎಂದರೆ ಜೀವನದಲ್ಲಿ ಬಿಸಿಲು ನೋಡದ, ಐಷರಾಮಿ ಕಾರುಗಳಲ್ಲಿ ತಿರುಗುವ, ಲೆನಿನ್ ಬಟ್ಟೆ ಧರಿಸುವ ಪ್ರತಿಷ್ಠಿತ ಕುಟುಂಬದ ವ್ಯಕ್ತಿಗಳೂ ತಪ್ಪದೆ ಉದ್ಯೋಗ ಖಾತರಿಯಲ್ಲಿ ಹಾಜರಿ ಹಾಕಿಸಿ ಕೂಲಿ ಹಣ ಪಡೆಯುತ್ತಾರೆ. ಎಷ್ಟೋ ಜನ ಬೊಂಬಾಯಿ ಪುಣೆಗಳಿಗೆ ಹೋದವರ ಉದ್ಯೋಗ ಚೀಟಿಗಳೂ ಸಕ್ರಿಯವಾಗಿ ಕೂಲಿ ಪಾವತಿ ಪಡೆಯುತ್ತಿವೆ. ಇದು ಬಡ ಜನರಿಗಾಗಿ ಮಾಡಿದ ಯೋಜನೆ ಅಲ್ಲ. ಪುಡಾರಿಗಳಿಗೆ, ರಾಜಕೀಯ ಕಾರ್ಯಕರ್ತರಿಗೆ, ಚುನಾಯಿತ ಸದಸ್ಯರಿಗೆ ಮಾಡಿದ ಯೋಜನೆ” ಎಂದು ಸಾರ್ವಜನಿಕರು ಮಾಹಿತಿ ಹಂಚಿಕೊಂಡಿದ್ದಾರೆ.
ಇದೊಂದು ಭ್ರಷ್ಟ ಸರಪಳಿಯಾಗಿದ್ದು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರೆಗೆ ಈ ಭ್ರಷ್ಟಚಾರವನ್ನು ಕಂಡು ಕಾಣದಂತೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹತ್ತು ಲಕ್ಷ ರೂಪಾಯಿಯ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗಿರುವ ಈ ಕಳಪೆ ಕಾಮಗಾರಿಯ ಕುರಿತಂತೆ ಯಾರು ತನಿಖೆ ಮಾಡುತ್ತಾರೆ, ಯಾರ ಮೇಲೆ ಕ್ರಮ ಜರುಗಿಸಲಾಗುತ್ತದೆ ನಾವು ಯಾರ ಮೇಲೆ ದೂರು ನೀಡಬೇಕು ಎಂದು ಜನ ನೋವನ್ನು ತೋಡಿಕೊಂಡರು.
ಇನ್ನು ಮುಂದಾದರೂ ಇಂತಹ ಕಳಪೆ ಮತ್ತು ಭ್ರಷ್ಟ ಆಡಳಿತಕ್ಕೆ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಕಡಿವಾನ ಹಾಕುತ್ತಾರಾ? ಈ ಬೂದಿಹಾಳ ಗ್ರಾಮದ ಮಕ್ಕಳ ಮಲಮೂತ್ರಕ್ಕೆ ಅನಾನುಕೂಲವಾದ ಕಳಪೆ ಕಾಮಗಾರಿಯ ಕುರಿತು ಕ್ರಮ ತೆಗೆದುಕೊಳ್ಳುತ್ತಾರಾ ಎಂದು ಜನ ನಿರೀಕ್ಷಿಸುತ್ತಿದ್ದಾರೆ.
ಸಾಹೇಬರು ಏನು ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.
ಲಕ್ಷ್ಮೀಕಾಂತ ನಾಯಕ