ಬೇಸಿಗೆ ಬಿಸಿಗೆ ಬತ್ತಿ ಹೋದ ಮುದಿ ಸೂಳೆಯಂತಹ ನದಿಯ ಒಡಲಲ್ಲಿ ಮಲಗಿ ಭಾಸ್ಕರ ಅವಳ ನೆನಪಿನಲ್ಲಿ ತೇಲಿ ಹೋದ ಸಂದರ್ಭ…!
ಅದಾಗಲೇ ಸೂರ್ಯ ತಾಯ ಗರ್ಭ ಸೇರುವ ಸಿದ್ದತೆಯಲ್ಲಿದ್ದ. ಹಕ್ಕಿಗಳು ಗೂಡು ಸೇರುವ ಸಮಯ. ವಿಶಾಲವಾಗಿ ಹರಡಿದ ಮರಳ ತೀರದ ಆ ನದಿ ಕ್ಷಯ ಪೀಡಿತ ರೋಗಿಯಂತೆ ಮಲಗಿಕೊಂಡಿತ್ತು. ಬೇಸಿಗೆಯ ಕಾಲ, ನದಿಯಲ್ಲಿ ಅಲ್ಲಲ್ಲಿ ನಿಂತ ನೀರು. ಒಂದೊಮ್ಮೆ ಜವ್ವನೆಯಾಗುವ ಈ ನದಿ ಬೇಸಿಗೆಯಲ್ಲಿ ಕೃಶಗೊಂಡ ಮುದುಕಿ. ಆ ನೀರನ್ನು ಸೋಕಿ ಬರುವ ತಂಗಾಳಿ ಹಿತವಾಗಿತ್ತು. ನದಿ ತೀರದ ಹೆಬ್ಬಿ ಗಿಡಗಳು ಒಣಗಿ ಹೋಗಿದ್ದವು. ನದಿ ಪಾತ್ರ ಹಸಿರು ರಹಿತವಾಗಿತ್ತು. ಬಹುಶಃ ತನ್ನ ಬದುಕು ಕೂಡಾ ಈ ನದಿಯಂತಾಗಿದೆ ಎನ್ನುವ ಭಾವ ಮೂಡಿ ಭಾಸ್ಕರನ ಕಣ್ಣುಗಳು ತೇವವಾದವು. ಮರಳ ಹಾಸಿನ ಮೇಲೆ ಮೈ ಚೆಲ್ಲಿದವನಿಗೆ ಬದುಕೆಂಬುದು ಏಕೆ ಕತ್ತಲಾಯಿತು ಎನ್ನುವ ಪ್ರಶ್ನೆ ಮೂಡಿತು. ಕಿಸೆಯಿಂದ ಸಿಗರೇಟು ಪ್ಯಾಕು ತೆಗೆದು ಅದರಿಂದೊಂದು ಸಿಗರೇಟು ಹೊರ ತೆಗೆದು ತುಟಿಗಿಟ್ಟುಕೊಂಡ. ನಂತರ ಆಲೋಚನೆಯಲ್ಲಿ ಮುಳುಗಿಹೋದ.
ಸಿರಿ ಎಲ್ಲಾ ಅರ್ಥದಲ್ಲೂ ಅವನ ಬಾಳಲ್ಲಿ ಸಿರಿಯಾಗಿ ಬಂದಿದ್ದಳು. ಅವಳ ಸಾನಿಧ್ಯ ಸಿಹಿ ಜೇನಾಗಿತ್ತು. ನೀಳ ಜಡೆಯ ಸುಕೋಮಲ ದೇಹ ಸಿರಿಯ ಸಿರಿ ದೇವರು ವಿಶೇಷ ಕಾಳಜಿಯಿಂದ ಸೃಷ್ಟಿಸಿದ ಬೊಂಬೆಯಂತಿದ್ದಳು. ಹೈಸ್ಕೂಲಿನ ಅಂಗಳದಲ್ಲಿ ನವಿಲ ಹೆಜ್ಜೆ ಹಾಕುತ್ತಿದ್ದ ಸಿರಿ ಎಲ್ಲರ ಅಚ್ಚುಮೆಚ್ಚಿನ ಹುಡುಗಿಯಾಗಿದ್ದಳು. ಜಾಣೆ ಕೂಡಾ. ಅಪ್ಪಟ ವಾಚಾಳಿಯಾಗಿದ್ದ ಅವಳು ಸ್ಪುಟವಾಗಿ ಮಾತನಾಡುತ್ತಿದ್ದಳು. ಅವಳ ಕಣ್ಣಿನಲ್ಲಿ ವಿಶೇಷವಾದ ಮಿಂಚಿತ್ತು. ಕಣ್ಣುಗಳು ಸದಾ ನಕ್ಷತ್ರದಂತೆ ಹೊಳೆಯುತ್ತಿದ್ದವು. ಕಾಡು ಮಲ್ಲಿಗೆಯಂತಹ ಸಿರಿ ಪುನುಗನ ಬೆಕ್ಕಿನ ಘಮ ಹೊಂದಿದ್ದಳು. ಅದೊಂದು ದಿನ ಕ್ಲಾಸ್ ಮುಗಿದಾದ ಮೇಲೆ ಗೆಳತಿಯರ ಜೊತೆಗೆ ಹರಟೆ ಹೊಡೆಯುತ್ತಾ ಮೈಮರೆತು ಬರುತ್ತಿದ್ದಾಗ ಪರಸ್ಪರ ಡಿಕ್ಕಿಯಾಗಿ ಅವಳು ಸೋಕಿದ್ದಳು. ಅವಳ ಆ ಸ್ಪರ್ಶ ಜನ್ಮ ಜನ್ಮಕ್ಕೂ ಮರೆಯದಂತಹದು. ಸಿರಿ ತನ್ನ ಕೋಗಿಲೆಯ ಧ್ವನಿಯಲ್ಲಿ “ಕ್ಷಮಿಸಿ” ಎಂದಿದ್ದಳು. ಅದೊಂದು ಅನೂಹ್ಯ ಮತ್ತು ಆಕಸ್ಮಿಕ ಘಟನೆಯಾಗಿತ್ತು. ತಾನು ರೋಮಾಂಚನಗೊಂಡಿದ್ದ. ಅದೇಕೋ ಇವಳೇ ನನ್ನ ಜನ್ಮದ ಜೊತೆಗಾತಿ ಎನ್ನುವ ಭಾವ ಮೂಡಿತ್ತು. ಅದಾದ ನಂತರ ಸಿರಿ ಕನಸು ಮನಸಿನಲ್ಲಿ ಕಾಡತೊಡಗಿದ್ದಳು. ನಿದ್ರಾಹಾರಗಳು ಮರೆಯಾಗಿ ಹೋಗಿದ್ದವು. ಪದೇಪದೇ ಕನ್ನಡಿಯ ಮುಂದೆ ನಿಲ್ಲುವ ಹಂಬಲ, ಅವಳ ನೋಡುವ ಕಾತರ.
ಸಿರಿ ಕಣ್ಣ ತುಂಬಿ ಬಿಟ್ಟಳು, ಮನಸ್ಸಿನಲ್ಲಿ ಅವಳ ಹೊರತು ಬೇರೆ ವಿಚಾರವಿಲ್ಲ. ಸಿರಿಯನ್ನು ಸೇರುವುದು ಯಾವಾಗ ಎನ್ನುವ ವಿಲಕ್ಷಣ ಆಸೆ ಮೊಳಕೆಯಾಗಿ ಮೂಡಿತು. ನಂತರ ಅದು ಮರವಾಯಿತು. ಸಿರಿಯನ್ನು ಮಾತಾಡಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಕಾಲ ಜಡವಾಗಿ ಕಳೆಯತೊಡಗಿತು. ಮೌನನಾದೆ, ಮಾತುಗಾರನಾದೆ. ಕವಿಯಾಗಿ ಹಾಡುಗಾರನಾದೆ. ಸಿರಿಗಾಗಿ ಕವಿತೆಗಳನ್ನು ಬರೆಯತೊಡಗಿದೆ. ತನ್ನದೆಲ್ಲಾ ಒನ್ ಸೈಡ್ ಲವ್, ಸಿರಿಗೆ ಇದ್ಯಾವುದೂ ಗೊತ್ತಿರಲಿಲ್ಲ. ಸಿರಿಯದು ತನ್ನದು ಒಂದೇ ಗಲ್ಲಿ. ಆದರೆ ಸಿರಿ ಕಾಣಿಸುವುದು ಅಪರುಪವಾಗಿತ್ತು. ಅವಳು ಮನೆಯಿಂದ ಆಚೆ ಬರುತ್ತಿರಲಿಲ್ಲ. ಸಿರಿ ಹೊರ ಬರುವ ಸಮಯಗಳನ್ನು ನಿರೀಕ್ಷಿಸತೊಡಗಿದೆ.
ಸಿರಿ ಬೆಳಿಗ್ಗೆ ಹಾಲಿಗೆ ಬರುವವಳು. ಸಿರಿ ಬೆಳಿಗ್ಗೆ ನೀರಿಗೆ ಬರುವವಳು. ಇವೆರಡೂ ಅಮೃತ ಗಳಿಗೆಗಳಾದವು ತನ್ನ ಪಾಲಿಗೆ. ದಿನಕ್ಕೊಮ್ಮೆಯಾದರೂ ಅವಳನ್ನು ಕಾಣುವುದು ವಿಲಕ್ಷಣ ಆನಂದ ನೀಡತೊಡಗಿತು. ಓದುವುದನ್ನು ಬಿಟ್ಟು ಕವಿತೆಗಳನ್ನು ಬರೆಯಲು ಆರಂಭಿಸಿದೆ. ಸಿರಿಗೆ ಆ ಕವಿತೆಗಳು ಮುಟ್ಟಲಿಲ್ಲ.
“ಅದರಲ್ಲೇನಿದೆ ಸೌಂದರ್ಯ? ಸೊಳಕು ನಾಯಿ! ಏಕಿಷ್ಟೊಂದು ಭಾವುಕ ಮತ್ತು ಹುಚ್ಚನಾಗಿರುವೆ?” ಎಂದ ಗೆಳೆಯ. “ತಿಳಿಯದು, ಆದರೆ ನನ್ನ ಕನಸು ಮತ್ತು ಮನಸ್ಸಿನಲ್ಲಿ ಅವಳ ಹೊರತು, ಅವಳ ಮುಖದ ಹೊರತು ಬೇರೇನೂ ಇಲ್ಲ. ಅವಳು ಕಾಣಿಸದ ದಿನ ಹುಚ್ಚನಾಗುತ್ತೇನೆ” ಎಂದೆ. ಅವನು ನನ್ನನ್ನು ಹುಚ್ಚನನ್ನು ನೋಡಿದಂತೆ ನೋಡಿದ. ಪ್ರೀತಿಗೆ ಸೌಂದರ್ಯದ ಅಗತ್ಯವಿಲ್ಲ ಎಂದು ಅವನಿಗೆ ಗೊತ್ತಿಲ್ಲ. ಕಾಮ ಬಾಹ್ಯ ಸೌಂದರ್ಯವನ್ನು ಬೇಡುತ್ತದೆ. ಪ್ರೀತಿ ಎಂದರೆ ದೇವರ ವಿಶೇಷವಾದ ಔಷಧಿ ಎನ್ನುವುದು ನಿಜವಾದ ಪ್ರೇಮಿಗಳಿಗೆ ಮಾತ್ರ ಗೊತ್ತು. ಪ್ರೀತಿಯ ಸವಿ ನನ್ನೊಳಗೆ ವ್ಯಾಪಿಸಿತ್ತು. “ಅವಳಿಲ್ಲದೆ ನಾನಿಲ್ಲ” ಎಂದೆ. ಅವನಿಗೆ ಅರ್ಥವಾಗಿರಬೇಕು, “ಮತ್ತೇಕೆ ತಡ, ಮಾತಾಡಿಸು” ಎಂದ.
ಸಮಸ್ಯೆ ಬಂದಿರುವುದೇ ಮಾತಾಡಿಸುವುದರಲ್ಲಿ. ಹೇಗೆ ಮಾತಾಡಿಸಲಿ? ಅವಳಿಗೆ ನಾನು ಇಷ್ಟವಾಗದೆ ತಿರಸ್ಕರಿಸಿದರೆ ಎನ್ನುವ ಭಯ ಕಾಡತೊಡಗಿತು. ತಿರಸ್ಕಾರವನ್ನು ಭರಿಸಬಲ್ಲೆನೆ ನಾನು ಎನ್ನುವ ಸಂದೇಹ ಮೂಡಿತು. ಉಹುಂ ಅಂದಾಗ ನನ್ನ ಎದೆಯ ಗತಿ ಏನಾಗಲಿದೆ? ಬಹು ವಿಧವಾದ ಚಿಂತೆಗಳು ನನ್ನನ್ನು ಆವರಿಸಿದವು. ತನ್ನದೂ ಇನ್ನೂ ಪ್ರಬುದ್ಧ ವಯಸ್ಸಲ್ಲ. ತಾನು ಮಾತುಗಾರನಲ್ಲ. ತಾನೊಬ್ಬ ಅಂತರ್ಮುಖಿ. ಮೌನದ ಹಿತದೊಳಗೆ ಕಾಲಕ್ಷೇಪ ಮಾಡುವ ಭಾವುಕ ಜೀವಿ. ಹೇಗೆ ನನ್ನ ಪ್ರೀತಿಯನ್ನು ಅಭಿವ್ಯಕ್ತಿಸಲಿ? ಪತ್ರ ಬರೆಯಲೇ? ಬರೆದರೆ ಅದನ್ನು ಅವಳಿಗೆ ತಲುಪಿಸುವುದು ಹೇಗೆ? ಅದನ್ನು ಅವಳು ಅವರ ಹಿರಿಯರಿಗೆ ಕೊಟ್ಟರೆ ಹೇಗೆ? ಇದಾದ ಮೇಲೆ ಏನಾಗಲಿದೆ? ತನ್ನದು ಬಡ ಮತ್ತು ಕೆಳ ಜಾತಿಯ ಕುಟುಂಬ. ಅಪ್ಪ ಅಮ್ಮನಿಗೆ ಕಷ್ಟವಾದರೆ ಹೇಗೆ? ಅಪ್ಪ ಅಮ್ಮನಿಗೆ ನನ್ನೀ ಪ್ರಯತ್ನ ತಿಳಿದು ಅವರು ಏನು ಮಾಡಲಿದ್ದಾರೆ? ಹೊಡೆಯುತ್ತಾರಾ? ಬಯ್ಯುತ್ತಾರಾ? ನಂತರ? ಯೋಚನೆಗಳು ಜೇನು ನೊಣಗಳಾಗಿ ಮೆದುಳನ್ನು ಆಕ್ರಮಿಸುವವು.
ಪ್ರೀತಿ ಹೇಡಿಗೆ ಸಲ್ಲದ ಸಂಗತಿ!
ಸಿಗರೇಟು ಬೆರಳುಗಳನ್ನು ಸುಟ್ಟಾಗ ಭಾಸ್ಕರ್ ಇಹಕ್ಕೆ ಬಂದ. ಅದಾಗಲೇ ಸೂರ್ಯ ಮುಳುಗಿ ಕತ್ತಲು ಆವರಿಸಲು ಆರಂಭಿಸಿತ್ತು. ಸಾಯಂಕಾಲದ ಕತ್ತಲಿಗೆ ಜಾಗೃತವಾಗುವ ನಿಶಾಚರಗಳು ವಿಕೃತ ಧ್ವನಿಯನ್ನು ಹೊರಡಿಸಲು ಆರಂಭಿಸಿದ್ದವು. ಅದೆಲ್ಲೋ ಕುಳಿತ ಕಪ್ಪೆಯ ಗುಟುರು ಧ್ವನಿ ಆ ನಿಶ್ಯಬ್ದದಲ್ಲಿ ವಿಕಾರವಾಗಿ ಪ್ರತಿಧ್ವನಿಸುತ್ತಿತ್ತು.
ಮತ್ತೆ ಸಿರಿಯ ನೆನಪುಗಳು ಭಾಸ್ಕರನನ್ನು ಆವರಿಸತೊಡಗಿದವು. ಅವನು ಬರೆದ ಮೊದಲ ಪ್ರೇಮ ಪತ್ರ ಅವಳ ಕೈ ಸೇರಿದಾಗ…
(ಮುಂದುವರೆಯುವುದು)
ಲಕ್ಷ್ಮೀಕಾಂತ ನಾಯಕ