ಅಪರಾಧ

ರಾಜಕೀಯ ವರ್ಚಸ್ಸು ತಗ್ಗಿಸಲು ವಿರೋಧಿಗಳಿಂದ ಷಡ್ಯಂತ್ರ: ಕರೆಮ್ಮ ಜಿ. ನಾಯಕ

WhatsApp Group Join Now
Telegram Group Join Now

ದೇವದುರ್ಗ: ಶತಾಯಗಥಾಯ ಶಾಸಕರ ತೇಜೋವದೆ ಮಾಡಬೇಕು ಎನ್ನುವ ಷಡ್ಯಂತ್ರಕ್ಕೆ ಮುಂದಾಗಿರುವ ಕರೆಮ್ಮ ಜಿ ನಾಯಕರ ರಾಜಕೀಯ ವಿರೋಧಿಗಳು ಅವರ ಪುತ್ರನ ಮೇಲೆ ಸತ್ಯವಿಲ್ಲದ ಆರೋಪ ಹೊರೆಸುವ ಮೂಲಕ ಅಪ ಪ್ರಚಾರ ಮಾಡುವ ಕೃತ್ಯಕ್ಕೆ ಕೈ ಹಾಕಿರುವುದು ದೇವದುರ್ಗದಲ್ಲಿ ಈ ತಿಂಗಳು ಕಂಡು ಬಂದಿದೆ. ದೇವದುರ್ಗದ ಪ್ರವಾಸಿ ಮಂದಿರದಲ್ಲಿ ನಡೆದ ಪೋಲಿಸ್ ಪೇದೆಯ ಮೇಲಿನ ಹಲ್ಲೆಯನ್ನು ಅದರ ಪೂರ್ವಾಪರ ಯೋಚನೆ ಮಾಡದೆ ಮತ್ತು ಸತ್ಯಾಸತ್ಯತೆಯನ್ನು ಅರಿಯದೆ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ  ʼತೇಜೋಧೆಯʼ ರಾಜಕೀಯ ವಿರೋಧಿಗಳ ಪ್ರಯತ್ನ ಯಶಸ್ವಿಯಾಗಿರುವುದು ಕಂಡು ಬರುತ್ತಿದೆ. ಈ ಕುರಿತು ಪತ್ರಿಕೆಗೆ ಸ್ಪಷ್ಟೀಕರಣ ನೀಡಿರುವ ಕರೆಮ್ಮ ಜಿ ನಾಯಕ ಈ ಘಟನೆಯ ಹಿಂದೆ ನನ್ನ ರಾಜಕೀಯ ವಿರೋಧಿಗಳ ಮತ್ತು ಕೆಲವು ಹಿತ ಶತೃಗಳ ಕೈವಾಡ ಇದೆ ಎಂದು ಹೇಳಿದ್ದಾರೆ.

ಈ ಕುರಿತು ವರದಿಗಾರರೊಂದಿಗೆ ಮಾತನಾಡಿದ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ “ಚುನಾವಣೆ ಮುಗಿದು ಹೋಯಿತು. ಮತದಾರರು ಅರ್ಹ ಅಭ್ಯರ್ಥಿಗೆ ಆಶಿರ್ವದಿಸಿದ್ದಾರೆ. ಆದರೆ ರಾಜಕೀಯ ವಿರೋಧಿಗಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಪದೇಪದೇ ನನ್ನ ಮೇಲೆ ಇಲ್ಲದ್ದೊಂದು ಆರೋಪ, ಸುಳ್ಳು ಸುದ್ದಿ ಹರಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಜಕೀಯದಿಂದ ಅವರ ಹೆಸರು ಜನರಿಂದ ಮರೆಯಾಗದಿರಲಿ ಎನ್ನುವ ಆತಂಕದ ಭಾಗವಾಗಿ ತಮ್ಮ ಅಸ್ತಿತ್ವ ಸಾಬೀತು ಪಡಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಏನೂ ಇಲ್ಲದ ನನ್ನನ್ನು ನನ್ನ ಹೋರಾಟ ಮನೋಭಾವ, ನನಗಿರುವ ಜನರ ಮೇಲಿನ ಕಾಳಜಿಯನ್ನು ಗುರುತಿಸಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ವಿರೋಧಿಗಳು ಏನೇ ಷಡ್ಯಂತ್ರ ಮಾಡಿದರೂ ಇದು ಜನಕ್ಕೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ಹಿಂದಿನ ಆಡಳಿತಗಾರರ ಆಡಳಿತ ವೈಖರಿಯನ್ನು ಕಂಡು ತಿರಸ್ಕರಿಸಿದ್ದಾರೆ. ಅವರು ಮತ್ತದೇ ಚಾಳಿಯನ್ನು ಮುಂದುವರೆಸಿದ್ದಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ” ಎಂದು ಹೇಳಿದ್ದಾರೆ.

ಫೆಬ್ರವರಿ ಹತ್ತನೇಯ ತಾರೀಖು ದೇವದುರ್ಗ ಪ್ರವಾಸಿ ಮಂದಿರದಲ್ಲಿ ಘಟನೆಯೊಂದು ನಡೆದಿದೆ. ಟ್ರ್ಯಾಕ್ಟರ್ ಮುಖಾಂತರ ಮರಳು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಹಣಮಂತ ಸಿಪಿಸಿ, ಮಹೇಶ ಸಿಪಿಸಿ,  ಮತ್ತೊಬ್ಬ ಹಣಮಂತ ಸಿಪಿಸಿ ಮತ್ತು ಜೀಪ್ ಚಾಲಕ ಗೋಪಾಲಸಿಂಗ್ ತಂಡ ನದಿ ತೀರಕ್ಕೆ ಹೋಗಿ ಟ್ರ್ಯಾಕ್ಟರ್‌ಗಳನ್ನು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಕ್ಷೇತ್ರದಲ್ಲೂ ಜನರು ತಮಗೆ ಉಂಟಾದ ಸಮಸ್ಯೆಗಳಿಗೆ ಶಾಸಕರ ಮೊರೆ ಹೋಗುವ ಸಂಪ್ರದಾಯವಿದೆ. ಹೀಗೆ ಜನರಿಂದ ಸಮಸ್ಯೆಗಳು ಬಂದಾಗ ಸಂಬಂಧಿಸಿದವರನ್ನು ಕರೆದು ಮಾತನಾಡಿ ಬಗೆಹರಿಸಲಾಗುತ್ತದೆ. ದೊಂಡಂಬಳಿ ಗ್ರಾಮದ ಟ್ರ್ಯಾಕ್ಟರ್ ಚಾಲಕರು ಪೋಲಿಸರು ಟ್ರ್ಯಾಕ್ಟರ್‌ಗಳನ್ನು ಹಿಡಿದಾಗ ಅವು ಶಾಸಕರ ಮೊರೆ ಹೋಗಿದ್ದಾರೆ. ಈ ಕುರಿತು ಮಾತನಾಡಲು ಸಿಪಿಸಿ ಹಣಮಂತ ಎನ್ನುವವನನ್ನು  ದೇವದುರ್ಗ ಪ್ರವಾಸೀ ಮಂದಿರಕ್ಕೆ ಕರೆಯಲಾಗಿದೆ. ಅಲ್ಲಿ ಶಾಸಕರ ಪುತ್ರ ಸೇರಿದಂತೆ ಶಾಸಕರ ಆಪ್ತ ಸಹಾಯಕ ಮತ್ತು ಕೆಲವು ಜನ ಕಾರ್ಯಕರ್ತರಿದ್ದಾರೆ. ಬೃಹತ್ ಗಾತ್ರದ ಲಾರಿಗಳನ್ನು ಹಿಡಿಯದೆ ಬರಿ  ಟ್ರ್ಯಾಕ್ಟರ್‌ಗಳನ್ನು ಗುರಿಯಾಗಿಸಿ ದಾಳಿ ಮಾಡುವ ಪೋಲಿಸರ ನಡೆಯ ಕುರಿತು ಚರ್ಚೆಯಾಗಿದೆ. ಇದರಿಂದ ಉದ್ರಿಕ್ತಗೊಂಡ ಟ್ರ್ಯಾಕ್ಟರ್ ಮಾಲೀಕರು ಪೇದೆಯ ಮೇಲೆ ದಾಳಿಗೆ ಮುಂದಾಗಿದ್ದಾರೆ. ಅಲ್ಲಿದ್ದ ಶಾಸಕರ ಪುತ್ರ ಸಂತೋಷ್ ಜಗಳವನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾನೆ. ಪೋಲಿಸ್ ಪೇದೆ ದೃಶ್ಯೀಕರಿಸಿದ ವಿಡಿಯೋದಲ್ಲಿ ಶಾಸಕರ ಪುತ್ರನಾಗಲಿ ಇತರೆ ಯಾರಾದರೂ ದಾಳಿ ಮಾಡಿರುವ ಘಟನೆ ರಿಕಾರ್ಡ ಆಗಿಲ್ಲ. ಪೂರ್ವನಿಯೋಜಿತ ಸಂಚು ಎನ್ನುವಂತೆ ಪೋಲಿಸ್ ಪೇದೆ ಹಣಮಂತ ಅತಿರೇಕದ ಧ್ವನಿಯಲ್ಲಿ ತನ್ನಷ್ಟಕ್ಕೆ ತಾನು ಕೆಲವು ಹಲ್ಲೆಯ ಕುರಿತು ಪದಗಳನ್ನು ಬಳಸಿದ್ದಾನೆ. ಈ ಘಟನೆಯನ್ನು ದೇವದುರ್ಗದ ಪ್ರಮುಖ ವ್ಯಕ್ತಿಯೊಬ್ಬರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ನಂತರ ಇದು ವೈರಲ್ ಆಗಿದೆ. ಬರಿ ವಿಡಿಯೋ ನೋಡಿ ಕೆಲ ಮೂರ್ಖ ಚಾನೆಲ್ಲುಗಳು ಸುದ್ದಿ ಮಾಡಿವೆ. ಇದು ರಾಜಕೀಯ ವಿರೋಧಿಗಳ ಷಡ್ಯಂತ್ರ ಎಂದು ಜನರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ.

“ಶಾಸಕರ ಪುತ್ರ ಬಹಳ ಸಂಭಾವಿತ ವ್ಯಕ್ತಿ. ಆತ ಯಾರ ಮೇಲಾದರೂ ಹಲ್ಲೆ ಮಾಡುತ್ತಾನೆ ಎಂದರೆ ನಂಬದಿರುವ ವಿಷಯ. ಶಾಸಕರು ಜನಾನುರಾಗಿಗಳಾಗಿದ್ದಾರೆ. ಜನರ ಜೊತೆ ಮುಕ್ತವಾಗಿ ಸ್ಪಂದಿಸುತ್ತಿದ್ದಾರೆ. ಈ ಕಾರಣದಿಂದ ಅವರ ಖ್ಯಾತಿ ಹೆಚ್ಚಾಗುತ್ತಿದೆ.ಇದು ರಾಜಕೀಯ ವಿರೋಧಿಗಳಲ್ಲಿ ಆತಂಕ ಮೂಡಿಸಿದೆ. ಸಂತೋಷ್ ತಾಯಿಗೆ ಸಹಾಯಕನಾಗಿ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದಾನೆ. ಪ್ರತಿ ಕಾರ್ಯಕರ್ತರ ಜೊತೆಗೆ ಮುಕ್ತವಾಗಿ ಸ್ನೇಹವನ್ನು ಹೊಂದಿದ್ದಾನೆ. ಕಾರ್ಯಕರ್ತರು ತರುವ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಶಾಸಕರಿಗೆ ತಲುಪಿಸುತ್ತಾನೆ. ಇದರಿಂದಾಗಿ ಪ್ರತಿಯೊಬ್ಬರಿಗೂ ಅಧಿಕಾರ ಮತ್ತು ಅಧಿಕಾರದ ಪ್ರಯೋಜನೆಗಳು ತಲುಪುತ್ತಿವೆ. ಇದರಿಂದ ಶಾಸಕರ ಪುತ್ರರಾದ ಸಂತೋಷರ ಸಾಮಾಜಿಕ ಮನೋಭಾವ ಒಂದು ವಿಶಿಷ್ಟ ವ್ಯಕ್ತಿತ್ವದ ಅನಾವರಣಕ್ಕೆ ಕಾರಣವಾಗುತ್ತಿದೆ. ಇದರಿಂದ ಭಯಗೊಂಡಿರುವ ಕೆಲವರು ಸಸಿಯನ್ನು ಮೊಳಕೆಯಲ್ಲೇ ಚಿವುಟಬೇಕು ಎನ್ನುವ ಯೋಜನೆ ರೂಪಿಸಿದ್ದಾರೆ. ಐಬಿಯಲ್ಲಿ ನಡೆದ ಘಟನೆಯಲ್ಲಿ ಸಂತೋಷ್ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆಯೇ ಹೊರತು ಅವರು ಹಲ್ಲೆ ಮಾಡಿಲ್ಲ. ಈ ವಿಷಯ ಸಮಗ್ರವಾಗಿ ತನಿಖೆಯಾಗಬೇಕು. ಆಗ ಸತ್ಯ ಹೊರ ಬರುತ್ತದೆ” ಎನ್ನುತ್ತಾರೆ ದೇವದುರ್ಗದ ನಿವಾಸಿಯೊಬ್ಬರು.

ಚುನಾವಣಾ ಪೂರ್ವ ಹಾಲಿ ಶಾಸಕರಾದ ಕರೆಮ್ಮ ಜಿ ನಾಯಕರು ಕ್ಷೇತ್ರದ ಜನರಿಗೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇನೆ ಎಂದು ಮಾತು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯ ಮೇಲೆ ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಿ ಎಂದು ಒತ್ತಡ ಹೇರಿದ್ದರು. ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಇಸ್ಪೀಟು, ಅಕ್ರಮ ಸರಾಯಿ ಮಾರಾಟದ ಹಾವಳಿ ಮಿತಿ ಮೀರಿತ್ತು. ಅವುಗಳನ್ನು ನಿಯಂತ್ರಿಸಬೇಕು ಎಂದು ಅವರು ದೇವದುರ್ಗದ ಠಾಣೆಯ ಮೇಲೆ ಒತ್ತಡ ಹೇರಿದ್ದರು. ಆದಾಯದ ಮೂಲಗಳಾದ ಈ ಮೇಲಿನ ದಂದೆಗಳ ನಿಯಂತ್ರಣದಿಂದ ಸೈಡ್ ಇನ್ಕಂ ನಷ್ಟ ಹೊಂದುವ ಅಪಾಯ ಇರುವುದರಿಂದ ಶಾಸಕರು ಪೋಲಿಸ್ ಇಲಾಖೆಯ ತಂಟೆಗೆ ಬರದಿರುವಂತೆ ನೋಡಿಕೊಳ್ಳಲು ಶಾಸಕರ ಮೇಲೆ ಮತ್ತು ಶಾಸಕರ ಪುತ್ರನ ಮೇಲೆ ಷಡ್ಯಂತ್ರ ರೂಪಿಸಿ ಈ ಆರೋಪ ಹೊರೆಸಿದ್ದಾರೆ ಎಂದು ಜನರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಕರು ಈ ಅಭಿಪ್ರಾಯವನ್ನು ಸತ್ಯ ಎಂದು ದೃಢೀಕರಿಸಿದ್ದಾರೆ. ಪೋಲಿಸ್ ಇಲಾಖೆಗೂ ಶಾಸಕರಿಗೂ ಸಮನ್ವಯದ ಕೊರತೆ ಇದೆ ಎಂದು ಇನ್ನೂ ಕೆಲವು ಜನರು ಹೇಳುತ್ತಿದ್ದಾರೆ. ಈ ಹಿಂದೆ ದೆವದುರ್ಗದ ಪಿಐ ಆಗಿದ್ದ ಹೊಸಕೇರಪ್ಪ ಪ್ರೊಟೋಕಾಲ್ ಉಲ್ಲಂಘಿಸಿದ್ದಾಗ ಶಾಸಕರು ಹಕ್ಕುಚ್ಯುತಿ ಮಂಡನೆ ಮಾಡಿದ್ದರು. ಪ್ರಸ್ತುತ ಈಗ ಪಿಐ ಆಗಿ ಬಂದಿರುವ ಅಶೋಕ ಸಲದಗಿಯೂ ಶಾಸಕರೊಂದಿಗೆ ಸಮನ್ವಯ ಸಾಧಿಸಲು ವಿಫಲರಾಗಿದ್ದು ಶೀಥಲ ಸಮರ ಜಾರಿಯಲ್ಲಿಟ್ಟಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಒಟ್ಟಾರೆ ಒಬ್ಬ ಸಾಮಾಜಿಕ ಕಾಳಜಿ ಇರುವ ಜನ ಸೇವೆಯ ಗುರಿಯನ್ನು ಹೊಂದಿರುವ ಸಮಾಜ ಸೇವಕಿ ಹಾಗೂ ಕುಟುಂಬದ ಮೇಲೆ ಅಪಪ್ರಚಾರ ಮಾಡುವ ಕೆಲಸ ರಾಜಕೀಯ ಕಾರಣಕ್ಕಾಗಿ ಅವ್ಯಾಹತವಾಗಿ ನಡೆದಿದೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

ಲಕ್ಷ್ಮೀಕಾಂತ ನಾಯಕ

 

WhatsApp Group Join Now
Telegram Group Join Now

Related Posts