ವೈಶಿಷ್ಟ್ಯ ಲೇಖನ

ಸಾಂಸ್ಕೃತಿಕ ನಾಯಕ ಬಸವಣ್ಣನವರು, ಮುಂದೆನಾಗಬೇಕು

WhatsApp Group Join Now
Telegram Group Join Now

ಕನ್ನಡ ನಾಡಿನ ಘನ ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು  ಘೋಷಿಸಬೇಕೆಂದು ಆಶಿಸಿ, ಬರೆದ ಲೇಖನ. 
ಸಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಮಾನತೆ,ಕಾಯಕ,ದಾಸೋಹ,ದಯೆ ಸೇರಿದಂತೆ ಮೊದಲಾದ ವೈಚಾರಿಕತೆಯ ಚಿಂತನೆಗಳು ಅಳವಡಿಸಿಕೊಂಡು ಅದರಂತೆ ಬಾಳಿದವರು, ಸಮರ್ಪಿಸಿಕೊಂಡವರು ಬಸವಣ್ಣನವರು. ಸಮಾನತೆಯ ಉನ್ನತಿಗಾಗಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಟೊಂಕ ಕಟ್ಟಿಕೊಂಡು ಕೆಲಸ ಮಾಡಿ, ಸರ್ವರಿಗೂ ಸಮಬಾಳು ಸಮಪಾಲು ಎನ್ನುವುದನ್ನು ಜಾರಿಗೆ ತಂದು ಬಸವಣ್ಣನವರು ಈ ನಾಡಿನ  ಅಭ್ಯುದಯಕ್ಕಾಗಿ ಹಗಲಿರುಳು ದುಡಿದಿದ್ದಾರೆ.
ಇಂಥ ಸಾವಿರಾರು ಸಮಾಜಿಕ  ಕೆಲಸಗಳನ್ನು ಮಾಡಿ ಈ ನಾಡನ್ನು ಪವಿತ್ರ ಪುಣ್ಯ ನಾಡಾಗಿ ಬಸವಣ್ಣನವರು ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಮರವಾಗಿದೆ. ಇಂತಹ ಅದೆಷ್ಟು ಕೊಡುಗೆಗಳು ನೀಡಿದ ವಿಶ್ವದ ಮೊಟ್ಟಮೊದಲ ಪ್ರಜಾಪ್ರಭುತ್ವವಾದಿ ಅಣ್ಣ ಬಸವಣ್ಣ ಎಂದರೆ ತಪ್ಪಾಗಲಾರದು. ಇನ್ನು ಈ ಕಲ್ಪನೆಯನ್ನು ಕೆಳ ಸಮುದಾಯದಲ್ಲಿ ಮೊದಲು ಆಚರಣೆ ತಂದು ಸಹಕಾರಗೊಳಿಸಿದ ಕೀರ್ತಿ ಮೇಧಾವಿ ಅಣ್ಣ ಬಸವಣ್ಣನವರಿಗೆ ಸಲ್ಲುತ್ತದೆ. ಇಂದಿನ ಸಮಾಜ ಮತ್ತು ಸರ್ಕಾರ ಇದನ್ನು ಮರೆಯುವಂತಿಲ್ಲ.  ಹಾಗಾಗಿ 12ನೇ ಶತಮಾನದ ಸಂದರ್ಭದ ಹಲವು
ಸಂಕೋಲೆಗಳ ಮಧ್ಯೆ, ವೈಚಾರಿಕ ಕ್ರಾಂತಿಯ ಬೀಜವ ಬಿತ್ತಿ, ಆಚಾರ ಕ್ರಾಂತಿಗೆ ಮುನ್ನುಡಿ ಬರೆದು, ವೈಜ್ಞಾನಿಕ ಕ್ರಾಂತಿಗೆ ಕಾರಣೀಭೂತರಾದವರು ಬಸವಣ್ಣನವರು. ಈ ಹಿನ್ನೆಲೆಯಲ್ಲಿ
ಬಸವಣ್ಣನವರ ವಿಚಾರಗಳ ಮೌಲ್ಯಧಾರಿತ ನೀತಿಗಳ  ಸಿದ್ಧಾಂತಗಳನ್ನು  ಇಂದು ನಾವೆಲ್ಲರೂ ಪಾಲಿಸಿಕೊಂಡು ಬರುವುದು ಬಹಳ ಅವಶ್ಯಕತೆ ಇದೆ. ಪ್ರಯುಕ್ತ ನಾವು ಸರ್ಕಾರಕ್ಕೆ ಈ ಲೇಖನದ ಮೂಲಕ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಬೇಕೆಂದು ಆಗ್ರಹಿಸುತ್ತಾ, ಕೆಲ ವಿಚಾರಗಳು ತಮ್ಮೆಲ್ಲರ ಮುಂದೆ  ಪ್ರಸ್ತುತ ಪಡಿಸುತ್ತಿದ್ದೇವೆ.
ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದು ಬದುಕಿನುದ್ದಕ್ಕೂ,
ಬದುಕನ್ನು ಸಮಾಜದ ಉನ್ನತಿಗಾಗಿ ಸಮರ್ಪಿಸಿದ ಸೇವಕ ಬಸವಣ್ಣನವರು. ಅಂದು ಸಮಾಜದಲ್ಲಿ ಬೇರೂರಿದ್ದ ಹತ್ತು ಹಲವು ಸಮಸ್ಯೆಗಳನ್ನು ಕಿತ್ತೆಸೆದು ಸಮಾನತೆಯ ಮಹಾನ್ ಕ್ರಾಂತಿ ಮಾಡಿದ ಮೊಟ್ಟಮೊದಲ ಪರಿವರ್ತಕ ಅಣ್ಣ ಬಸವಣ್ಣ. ನೊಂದು ಬೆಂದವರ ಅನಾಥರ ಸೇವೆಯನ್ನು ಮಾಡಿ ಅಣ್ಣ ಜೀವನ ತ್ಯಾಗ ಮಾಡಿರುವುದು ನಾವೆಲ್ಲರೂ ಕಾಣುತ್ತೇವೆ. ಹೀಗೆ ನುಡಿದಂತೆ ನಡೆಯುವ ಮೂಲಕ ಜಗತ್ತಿನಲ್ಲಿ ಇಲ್ಲಿಯವರೆಗೆ ಎಲ್ಲೂ ನಡೆಯದ ಸ್ವಾಭಿಮಾನದ,ನೈಜತೆಯ – ಸತ್ಯ ಪ್ರತಿಪಾದಿಸುವ ವೈಜ್ಞಾನಿಕ – ವೈಚಾರಿಕ ಕ್ರಾಂತಿ ಈ ನಾಡಿನಲ್ಲಿ ನಡೆದುಹೋಗಿದೆ.ಈ ಕ್ರಾಂತಿಯ ಮೂಲಕ ಸಮಸ್ತ ಮನುಕುಲದ ಹಾಗೂ ಸಕಲ ಜೀವಾತ್ಮರಿಗು ಲೇಸನ್ನು ಬಯಸಿ, ಶ್ರೇಷ್ಠ ಮೌಲ್ಯಾಧಾರಿತ ವಿಚಾರಗಳು ಜಾರಿಗೆ ತಂದಿದ್ದು ಐತಿಹಾಸಿಕವಾಗಿದೆ .ಇದುವೇ ಪರಿರ್ವತೆಯ ಜಗದ ನಿಯಮ, ಇದುವೇ ಸೃಷ್ಟಿಯ ಸಂಕೇತ, ಇದುವೇ ಶರಣರು ಕೊಟ್ಟ ಸಮಾಜಿಕ,  ಧಾರ್ಮಿಕ – ಆಧ್ಯಾತ್ಮಿಕ ಶುಚಿತ್ವದ ಬದಲಾವಣೆಯ ನೀತಿ. ಹೀಗೆ ಪ್ರಜಾಪ್ರಭುತ್ವ ಜಾರಿಗೆ ತಂದು ಅನುಭವ ಮಂಟಪ ಸ್ಥಾಪಿಸಿ,  ವಚನ ಸಾಹಿತ್ಯ ರಚನೆ ಮತ್ತು ಅವುಗಳು ನಮ್ಮನ್ನೇಲ್ಲಾ ಪ್ರೇರೇಪಿಸುವಂತೆ ಕಾಣಿಕೆ ನೀಡಿದ ಕಾಣಿಕ ಮಾಹಾಪುರುಷ. ಸಮಾನತೆ ಮತ್ತು ಸಹೋದರತೆಯ ಸಹಬಾಳ್ವೆ, ವೈಚಾರಿಕ ವೈಜ್ಞಾನಿಕ ತಳಹದಿ ಮೇಲೆ ವಿಚಾರ ಮಂಥನವನ್ನು ಮಾಡಿ ಶರಣ ಧರ್ಮವನ್ನು ವಿಶ್ವ ಧರ್ಮವಾಗಿಸಿದ ಅಪ್ಪ ಬಸವಣ್ಣನವರ ವಿಚಾರಗಳ ಕ್ರಾಂತಿಯ ಮುನ್ನುಡಿಯಿಂದ ಸಾಂಸ್ಕೃತಿಕ ಲೋಕ ಆ ದಿನಗಳಲ್ಲಿ ವೈಭವದಿಂದ ಬೆಳಗಿದೆ.
ಅಂತರ್ಜಾತಿ ವಿವಾಹವನ್ನು ಮಾಡಿ  ಮಾನವರೆಲ್ಲರೂ ದೇವರ ಮಕ್ಕಳು ಎಂಬ ನಿಲುವು ಪ್ರತಿಪಾದಿಸಿ,ಸರ್ವರೂ ಸಮಾನರು ಎಂದು ಜಾಗತಿಕ ಪ್ರಪಂಚಕ್ಕೆ ಬಸವಣ್ಣನವರು ಸಾರಿದಾರೆ. ಹೀಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳುವಂತಾಗಬೇಕೆಂದು ಹೋರಾಟ ಮಾಡಿದ್ದು ಕಾಣುತ್ತೇವೆ. ಇನ್ನು ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡುವ ಮೂಲಕ
ಸಮಾಜವನ್ನು ಸರಿ ದಾರಿಯಲ್ಲಿ ಕೊಂಡ್ಯೊಯುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದಾರೆ. ಅಣ್ಣನವರು ಪ್ರತಿಯೊಬ್ಬರನ್ನು ಸಂಪರ್ಕಿಸಿ ನಿಮ್ಮ ಮನೆಯ ಮಗನೆಂದು ಹೇಳಿಕೊಳ್ಳುತ್ತ ಅವರನ್ನ ಆಲಿಂಗಿಸಿಕೊಂಡು, ಯಾರು ಮಾಡದಂತ ಸಮಾಜಿಕ ಕ್ರಾಂತಿಯನ್ನು  12ನೇ ಶತಮಾನದಲ್ಲಿ ಮಾಡಿ ತೋರಿಸಿದ್ದಾರೆ. ಅವರ ಹಲವು ವಚನಗಳಲ್ಲಿ ನೋಡಬಹುದು.
” ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.”
ಕೂಡಲಸಂಗಮದೇವನ ಸಾಕ್ಷಿಯಾಗಿ ಎನ್ನಬೇಕಾದರೆ ಬಸವಣ್ಣನವರಿಗೆ ಅದೆಂಥ ತ್ಯಾಗದ ಮನೋಭಾವ, ನಾನು ಸಣ್ಣವ,ನಾನು ಅತ್ಯಂತ ಕೆಳ ಸಮಾಜದವ, ನಾನು
ದಾಸ – ದಾಸಿಯ ಮಗ ಎಂದು ಹೇಳುವ ಈ ವಚನ ಅವರ ಎತ್ತರದ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಅಲ್ಲವೇ, ಇನ್ನು ನಾನು ಕೆಳಸ್ತರದ ಜನಾಂಗದಲ್ಲಿ ಹುಟ್ಟಿದ ಮಗ ಎಂದು ಗೌರವದಿಂದ ಹೇಳುವ ಅವರ ಮಾತು ನಿಜಕ್ಕೂ ದೊಡ್ಡದು,ಮಾನವೀಯ ನಡೆಗೆ ಇದು ಸಾಕ್ಷಿಯಾಗಿದೆ.ಇದೆ ತೆರನಾಗಿ ಎಲ್ಲ ಸಮುದಾಯದ ಜನರಲ್ಲಿ ಹೋಗಿ ಅವರೆಲ್ಲರನ್ನೂ ಒಂದಡೆ ಸೇರಿಸುವ ಅವರ ಪ್ರಯತ್ನ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಅವರನ್ನು ಗೌರವದಿಂದ ಕಾಣುವ ಮನೋಧರ್ಮ ಬಸವಣ್ಣನವರದಾಗಿತ್ತು. ನಡೆನುಡಿಗೆ, ಅವರ ಸಿದ್ಧಾಂತಕ್ಕೆ ಎಲ್ಲರು ಮಣಿದು ಒಂದಡೆ ಸೇರಬೇಕೆಂದರೆ ಬಸವಣ್ಣನವರು ಬಹಳಷ್ಟು ಕಷ್ಟಪಟ್ಟಿದ್ದಾರೆ. ಅವರೆಲ್ಲರಿಗೆ ತಿಳಿ ಹೇಳುತ್ತ, ಸಂತೈಸುತ್ತ, ಸಕರಾತ್ಮಕವಾದ ಭಾವನೆಗಳನ್ನ ಜನರಲ್ಲಿ ತುಂಬಿ ಸತ್ಯದ ಕಡೆಗೆ ಅಂದರೆ ಸನ್ಮಾರ್ಗದ ಕಡೆಗೆ ಸೆಳೆದುಕೊಳ್ಳುತ್ತಾರೆ. ಅದಕ್ಕೆ ಅವರ ಈ ವಚನವು ಸಹ ನಮಗೆ ಸಾಕ್ಷಿಕರಿಸುತ್ತೆ.
” ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ. ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ.”
ನಿಮ್ಮ ಶರಣರ ಮನೆಯ ಮಗನು ನಾನಾಗಿದ್ದೇನೆ, ಎಂದು ಈ ವಚನದಲ್ಲಿ ಇಡೀ ಮಾನವ ಸಮಾಜದ ಮಗುವಾಗಿದ್ದೇನೆ ಎಂಬರ್ಥದಲ್ಲಿ ಹೇಳುತ್ತ. ಅವರಲ್ಲಿ ಉತ್ಸಾಹ ಹುರುಪು ತುಂಬಿ, ನವ ಚೈತನ್ಯವನ್ನೆ ಬರುವಂತೆ ಮಾಡುತ್ತಾರೆ ಬಸವಣ್ಣನವರು. ಕೊನೆಯಲ್ಲಿ ಅವರು ತಮ್ಮ ವಚನದ ಮೂಲಕ ಶೋಷಿತ ಸಮುದಾಯಕ್ಕೆ ತಮ್ಮನ್ನು ಅವರೆಲ್ಲ ಅಪ್ಪಿಕೊಳ್ಳಲಿ ಎಂಬ ಮನೋಭಾವದಿಂದ ಅವರಿಗೆ ಈ ರೀತಿಯಾಗಿ ನೀವೆದನೆ ಮಾಡಿಕೊಳ್ಳುತ್ತಾರೆ.
” ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ,  ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.”
 ಈ ರೀತಿಯಾಗಿ ಅಪ್ಪ ಬಸವಣ್ಣನವರು ವಚನ ಚಳುವಳಿಯನ್ನು ಆರಂಭಿಸಿ ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಅಂದು ಅಪ್ಪ ಬಸವಣ್ಣನವರು ಅಸಮಾನತೆಯನ್ನು ಹೋಗಲಾಡಿಸಲು ಅವರ ಪಟ್ಟ ಪರಿಶ್ರಮ ಬಹಳ ದೊಡ್ಡದು.ಅದು ಇಂದಿಗೂ ಯಾರು ಪಟ್ಟಿಲ್ಲಾ ಎನ್ನುವುದು ನಿಮ್ಮ ಗಮನಕ್ಕೆ ಇರಲಿ.
ಇನ್ನು ಒಂದು ಸಂಘಟನೆ, ಒಂದು ಚಳುವಳಿಯನ್ನ ಮಾಡಬೇಕಾದರೆ ಸಣ್ಣ ಕೆಲಸವಲ್ಲವದು, ಅದಕ್ಕೆ ಬೇಕಾದ ತಯಾರಿ, ಸಿದ್ಧಿಗಳನ್ನು ನಾವು ಮಾಡಿಕೊಂಡಿರಬೇಕಾಗುತ್ತದೆ ಎಂಬುದಕ್ಕೆ ಬಸವಣ್ಣನವರೆ ನಮಗೆ ಮಾದರಿ. ಹಾಗಾಗಿ ಅವರು ಬರೆದ ವಚನಗಳನ್ನ ಅರ್ಥ ಮಾಡಿಕೊಂಡು ಹೋದಾಗ ಮಾತ್ರ ನಮ್ಮ ಬದುಕು ಸುಂದರ ಮತ್ತು ನೆಮ್ಮದಿಯದಾಗುತ್ತದೆ. ಪ್ರತಿ ಸಮಾಜಪರ ಹೋರಾಟಗಳು ಇದೆ ರೀತಿಯಲ್ಲಿದ್ದರೆ ನಾವು ಹಮ್ಮಿಕೊಂಡ ಹೋರಾಟ ಸಾರ್ಥಕತೆಯನ್ನ ಪಡೆಯುತ್ತದೆ.
ಹೀಗಾಗಿಯೇ ವಿಶ್ವಸಮುದಾಯವು ಇವರನ್ನು ವಿಶ್ವದ ಸಂವಿಧಾನ ಶಿಲ್ಪಿ ಎಂದು ಹೆಮ್ಮೆಯಿಂದ ಕರೆಯುತ್ತಾರೆ.
ಸಮಾನತೆಯ ಹರಿಕಾರ ಬಸವಣ್ಣ: ಬಸವಣ್ಣನವರನ್ನು ವಿಶ್ವವೇ ಒಪ್ಪಿಕೊಂಡರೂ ದೇಶದಲ್ಲಿರುವ ಕೆಲ ಮೂಲಭೂತವಾದಿಗಳು, ಸಂಪ್ರದಾಯವಾದಿಗಳು ಇನ್ನು ಒಪ್ಪಿಕೊಳ್ಳದಿರುವುದು ದುರಂತ. ಸತ್ಯವನ್ನು
ಮರೆಮಾಚಿ ಸುಳ್ಳನ್ನು ವೈಭವಿಕರಿಸುವ ಇಂದಿನ ಕುತಂತ್ರ ವಾದಿಗಳ ಆಟ ಬಸವಣ್ಣನವರ ತತ್ವಗಳ ತಳಹದಿ ಮೇಲೆ ನಡೆಯುವುದಿಲ್ಲ. ಅದಕ್ಕಾಗಿ ಇವರು ಬಸವಣ್ಣನವರ ಆಶಯಗಳ ವಿರುದ್ದವಾಗಿ ಹಾರಾಟ, ಚೀರಾಟ ಮಾಡುತ್ತಿರುವುದು ನಾವೆಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇನ್ನು ಬಸವಣ್ಣನವರು ಅಂದೇ 12ನೇ ಶತಮಾನದಲ್ಲಿ ಜಾತಿಯ ಸಂಕೋಲೆಗಳನ್ನು ಬಿಚ್ಚಿ ಬಿಸಾಡಿ, ಮಾನವರೆಲ್ಲರೂ ಸಮಾನರು ಎಂಬುದು ಸಾರಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದನ್ನು ಹೇಗಾದರೂ ಮಾಡಿ ತಡೆಗಟ್ಟಬೇಕೆಂಬ ಉದ್ದೇಶದಿಂದ ಇಂದಿನ ವೈದಿಕಶಾಹಿಗಳ ಮನಸ್ಥಿತಿ ಬಸವತತ್ವ ವಿರುದ್ಧ ನಿರಂತರವಾಗಿ ಕೆಲಸ ಮಾಡುತ್ತಿರುವುದು ಕಾಣುತ್ತೇವೆ. ಇದು ಹೇಡಿತನದ ಕೆಲಸವಲ್ಲದೇ ಮತ್ತೇನೂ ಇಲ್ಲವೇ ಇಲ್ಲ. ಇನ್ನು ಹೇಳಬೇಕೆಂದರೆ 12ನೇ ಶತಮಾನಕ್ಕಿಂತ ಮೊದಲು ನಾವೆಲ್ಲ ಅಸ್ಪೃಶ್ಯರಾಗಿದ್ದೆವು. ಬಸವಣ್ಣ ಎಲ್ಲರಿಗೂ ಇಷ್ಟಲಿಂಗದೀಕ್ಷೆ ನೀಡಿ ಶ್ರೇಷ್ಠರನ್ನಾಗಿಸಿದರು. ಈ ಬಗ್ಗೆ ಇತಿಹಾಸದಲ್ಲಿಯೂ ಉಲ್ಲೇಖವಿದೆ. ಎಲ್ಲರನ್ನೂ ಅಪ್ಪಿಕೊಂಡು ಲಿಂಗ, ವರ್ಣ, ಜಾತಿ, ವಯೋಭೇದ ಮಾಡದೇ ಎಲ್ಲರನ್ನು ಸಮಾನರಾಗಿ ಕಂಡು, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದರು ಬಸವಣ್ಣನವರು. ಅಲ್ಲದೆ ಇನ್ನೊಂದು ವಿಚಾರ ಈ ಸಮಯದಲ್ಲಿ  ಪ್ರಸ್ತಾಪ ಮಾಡುತ್ತಿರುವೇ ಅದು ಏನೆಂದರೆ ಇಂದಿನ ಲಿಂಗಾಯತರು ಸಹ 12 ಶತಮಾನದಲ್ಲಿ ಕೆಳವರ್ಗದ ಜನರೇ ಆಗಿದ್ದರೂ, ಇವರಾಗಿದ್ದರೂ ಎಂಬ ವಿಷಯ ಇತ್ತೀಚೆಗೆ ಬಳಕಿಗೆ ಬರುತ್ತಿದೆ.ಅದು ಎನೇ ಇರಲಿ, ಸಧ್ಯ ನಮಗೆ ಬಸವಣ್ಣ ನವರು ಕೊಟ್ಟ ಕಾಯಕದ ಗುಣಗಳನ್ನು ಅರಿತು  ಅವುಗಳನ್ನು ಅಳವಡಿಸಿಕೊಂಡು ಹೆಜ್ಜೆ ಹಾಕುವುದು ಉತ್ತಮ ಮಾರ್ಗವಾಗಿದೆ. ಮೇಲು ಕೀಳು ಎಂಬ ಭಾವನೆ ತೊಡೆದು ಹಾಕಿ, ಸರ್ವರಿಗೂ ಸಮಪಾಲು, ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಇವು ಬಸವತತ್ವದ ಅನುಷ್ಠಾನದಿಂದ ಮಾತ್ರ ಸಾಧ್ಯವಾಗುತ್ತದೆ.ನಮ್ಮ ಶರಣರು ಹನ್ನೆರಡನೇ ಶತಮಾನದಲ್ಲಿ ಬದುಕಿನ ಸಂಕಷ್ಟಗಳಿಗೆ ಮಾನವೀಯ ನೆಲೆಯಲ್ಲಿ ಪರಿಹಾರಗಳನ್ನು ಸೂಚಿಸಿದ್ದಾರೆ. ಬನ್ನಿ ನಾವೆಲ್ಲರೂ ಜೊತೆಯಾಗಿ ಮತ್ತೆ ಶರಣರ ವೈಚಾರಿಕ ವಿಚಾರಗಳನ್ನು  ಜಾರಿಗೆ ತಂದು. ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆದು, ಸಮಾಜದಲ್ಲಿ ಬೇರೂರಿದ ಅಂಧ ಆಚರಣೆಗಳನ್ನು ಬದಿಗೊತ್ತಿ, ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ.
ಕೇಂದ್ರ ಸರ್ಕಾರಕ್ಕೆ ಒಕ್ಕೂರಿನ ಆಗ್ರಹ :
ಬಸವಣ್ಣನವರನ್ನು ದೇಶದ  ಸಾಂಸ್ಕೃತಿಕ ನಾಯಕರೆಂದು ಜನಸಾಮಾನ್ಯರು ಒಪ್ಪಿ, ಅದರಂತೆ ಕರೆಯುವುದುಂಟು. ಅದಕ್ಕಾಗಿಯೇ  ಕೇಂದ್ರ ಸರ್ಕಾರವು ಬಸವಣ್ಣನವರನ್ನು ಭಾರತದ ಸಾಂಸ್ಕೃತಿಕ ನಾಯಕನೆಂದು ಘೋಸಿಸಬೇಕೆಂದು  ಒತ್ತಾಯಿಸುತ್ತೇವೆ.ಅಲ್ಲದೆ ಕೇಂದ್ರ ಸರ್ಕಾರದಿಂದ ಬಸವಣ್ಣನವರ ಜಯಂತಿ ಆಚರಣೆ ಮಾಡಲೇಬೇಕು.ಬಸವಣ್ಣನವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಬೇಕು ಮತ್ತು  ದೇಶದ ಎಲ್ಲಾ ಇನ್ನಿತರ ರಾಜ್ಯ ಸರಕಾರಗಳು ಸಹ ಬಸವ ಜಯಂತಿ ಆಚರಣೆ ಮಾಡಬೇಕು.
ಹಾಗೂ ವಿಶ್ವದ ಎಲ್ಲಾ ಭಾಷೆಗಳಿಗೂ ವಚನ ಸಾಹಿತ್ಯ ತುರ್ಜಮೆಯ ಮಾಡಬೇಕು. ಶರಣರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳು ಆರಂಭಿಸಬೇಕು.
ಬಸವಕಲ್ಯಾಣ ಮತ್ತು ಕೊಡಲಸಂಗಮ ಅಭಿವೃದ್ಧಿಗೆ (ರೂ 2000 ಕೋಟಿಕ್ಕಿಂತಲೂ ಅಧಿಕ ) ಅನುದಾನ ಬಿಡುಗಡೆ ಮಾಡಬೇಕು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿತಾಣವಾಗಿ ಈ ಸ್ಥಳಗಳು ಅಭಿವೃದ್ಧಿ ಮಾಡಲೇಬೇಕು ಎಂಬುವುದೆ ಇಡಿ ಬಸವಾಭಿಮಾನಿಗಳ ಒಕ್ಕೊರಲಿನ ಆಗ್ರಹವಾಗಿದೆ.
ಆಶಯ ನುಡಿ : ಯಾವುದೇ ಒಂದು ಜನಾಂಗದ ಸೊತ್ತಾಗಿರದೆ, ಸಕಲ ಜೀವರಾಶಿಗಳ ಜೀವಾಳವಾಗಿದ್ದ
ಅಣ್ಣ ಬಸವಣ್ಣನವರು ವಿಶ್ವದ ಮೊದಲ ವೈಚಾರಿಕ ಪ್ರಜ್ಞೆಯ ಮಾಹಾನ ನಾಯಕ, ಮೌಲ್ಯಾಧಾರಿತ ವಿಚಾರವಾದಿ ಪ್ರತಿಪಾದಕ, ಜಾಗತಿಕ ಸಮುದಾಯದಕ್ಕೆ  ಸೌಹಾರ್ದತೆ, ಸಮಾನತೆ ಸಾರಿದ ಭಾವೈಕ್ಯತೆಯ ಮಾಹಾಸಂತ. ಶೋಷಿತ ವರ್ಗದವರನ್ನು, ನಿರ್ದೋಷಿಗಳನ್ನು ಸಂರಕ್ಷಣೆ ಮಾಡಿದ ಸಮತಾವಾದಿ. ವಚನಗಳು ಕನ್ನಡದಲ್ಲಿ ರಚನೆ ಮಾಡಿ, ಕನ್ನಡ ಭಾಷೆಯನ್ನು  ಶ್ರೀಮಂತಗೊಳಿಸಿದಾರೆ. ವಿಶೇಷವಾಗಿ ಹೇಳಬೇಕೆಂದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಪ್ರಮುಖ ಕಾರಣ ವಚನ ಸಾಹಿತ್ಯ ಎಂದರೆ ತಪ್ಪಾಗಲಾರದು. ಹಾಗಾಗಿಯೇ ಬಸವಾದಿ ಶಿವಶರಣರು ಕರ್ನಾಟಕ ಸೇರಿದಂತೆ ಭಾರತದ  ಸಾಂಸ್ಕೃತಿಕ ನಾಯಕ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಮೂಲಕ ದೇಶದ ಕೀರ್ತಿಯನ್ನು ಬಸವಣ್ಣನವರು ಜಾಗತಿಕ ಮಟ್ಟದಲ್ಲಿ ಪಸರಿಸಿದಾರೆ. ಅದಕ್ಕಾಗಿಯೇ ಜಾಗತಿಕ ಸಮುದಾಯವು ಬಸವಣ್ಣನವರನ್ನು ವಿಶ್ವದ ಸಾಂಸ್ಕೃತಿಕ ನಾಯಕರೆಂದು ಎಂದು ಪರಿಗಣಿಸಿ, ಕರೆಯುತ್ತಾರೆ.
ಸರಕಾರಕ್ಕೆ ಅಭಿನಂದನೆಗಳು :
ಬಸವಣ್ಣನವರು ಮಾಡಿದ ಸಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕರೆಂದು ಘೋಷಿಸಣೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ, ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುತ್ತೇವೆ. ಈ ನಿಟ್ಟಿನಲ್ಲಿ ಬಸವಣ್ಣನವರ ಧ್ಯೇಯ, ಉದ್ದೇಶಗಳು, ತತ್ವಾದರ್ಶಗಳು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಸರ್ಕಾರ ಆದಷ್ಟು ಬೇಗ ಮಾಡಬೇಕಾಗಿದೆ.
ಮುಂದೆನಾಗಬೇಕು: ಸಮಗ್ರವಾಗಿ ಬಸವಾದಿ ಶಿವಶರಣರ ವಚನ ಸಾಹಿತ್ಯ ವಿಶ್ವದ ಎಲ್ಲಾ ಭಾಷೆಗಳಿಗೂ ಭಾಷಾಂತರ ಆಗುವಂಥ ಕೆಲಸ ಮೊಟ್ಟ ಮೊದಲಾಗಬೇಕು. ದೇಶದ ಎಲ್ಲಾ ರಾಜ್ಯಗಳು ಜೊತೆಗೆ ಕೇಂದ್ರ ಸರ್ಕಾರವು ಬಸವ ಜಯಂತಿ ಆಚರಣೆ ಮಾಡುವ ಮೂಲಕ ಬಸವಣ್ಣನವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳು ಆರಂಭಿಸಬೇಕು ಹಾಗೂ ಪ್ರಶಸ್ತಿ ಪ್ರಧಾನ ಮಾಡಬೇಕು.
ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟಗಳಲ್ಲಿ ಬಸವಣ್ಣನವರ ಕುರಿತು ವಿಚಾರಗೋಷ್ಠಿಗಳು, ಚಿಂತನಾ ಗೋಷ್ಠಿಗಳು, ಚರ್ಚಾ ಗೋಷ್ಠಿಗಳು ಹಮ್ಮಿಕೊಳ್ಳಬೇಕು.
ಕೂಡಲಸಂಗಮ ಮತ್ತು ಬಸವಕಲ್ಯಾಣ ಪವಿತ್ರ ಈ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರವಾಸೋದ್ಯಮ ಕ್ಕೆ ಹೆಚ್ಚಿನ ಒತ್ತು ಕೊಡುವಂತೆ ಕೆಲಸ ಮಾಡಬೇಕು.
ಶರಣರ ಗುಹೆಗಳನ್ನು ಸಂಪೂರ್ಣವಾಗಿ ನವೀಕರಿಸುವ ಕೆಲಸ ಆಗಬೇಕು. ರೈಲು ನಿಲ್ದಾಣ, ವಿಮಾನ ನಿಲ್ದಾಣದ ವ್ಯವಸ್ಥೆ ಮಾಡಬೇಕು. ಸುಧಾರಿತವಾದ ಯಾತ್ರ ನಿವಾಸಗಳು ಕೂಡಲಸಂಗಮ ಮತ್ತು ಬಸವ ಕಲ್ಯಾಣದಲ್ಲಿ ಆದಷ್ಟು ಬೇಗನೆ ನಿರ್ಮಾಣ ಮಾಡುವಂತ ಕೆಲಸ ಆಗಬೇಕು. ಒಂದನೇ ತರಗತಿಯಿಂದ ಪಿ ಎಚ್ ಡಿ ವರೆಗೂ ಅಧ್ಯಯನದಲ್ಲಿ ಬಸವಣ್ಣನವರ ಹಾಗೂ ಸಮಕಾಲೀನ ಶರಣರ ಜೀವನ ಸಂದೇಶದ ಪಾಠಗಳು ಅಳವಡಿಸಿಕೊಳ್ಳುವಂತ ಕೆಲಸ ಮಾಡಬೇಕು. ರಾಷ್ಟ್ರಮಟ್ಟದಲ್ಲಿ ಬಸಣ್ಣನವರ ತತ್ವ ಪ್ರಸಾರಗೈಯಲು ಒಂದು ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬೇಕಾಗಿದೆ. ಹೀಗೆ ನೂರಾರು ಕೆಲಸಗಳು ಮಾಡುವ ಮೂಲಕ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಣೆ ಮಾಡಿರುವುದು ಸಾರ್ಥಕ ಆಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವಾಗಿ ಯೋಜನೆಗಳನ್ನು ಹಮ್ಮಿಕೊಂಡು ಜಾರಿಗೆ ತರುವ ಕೆಲಸ ಮಾಡಲೆಂದು ಆಶಿಸುತ್ತೇವೆ.
                                                                                                                                  ಸಂಗಮೇಶ ಎನ್. ಜವಾದಿ
WhatsApp Group Join Now
Telegram Group Join Now

Related Posts