ಹಿರಿಯ ಭೂವಿಜ್ಞಾನಿಯ ಕಾನೂನುಬಾಹಿರ ಪುನರ್ ನೇಮಕ ರದ್ದುಪಡಿಸಲು ಆಗ್ರಹ
ಹಿರಿಯ ಭೂವಿಜ್ಞಾನಿಯ ಕಾನೂನುಬಾಹಿರ ಪುನರ್ ನೇಮಕ ರದ್ದುಪಡಿಸಲು ಆಗ್ರಹ
ದೇವದುರ್ಗ: ರಾಯಚೂರು ಗಣಿ & ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಹಿರಿಯ ಭೂವಿಜ್ಞಾನಿ ಶ್ರೀಮತಿ ಪುಷ್ಪಲತಾ ಇವರನ್ನು ಸರ್ಕಾರದ ಆದೇಶ ಉಲ್ಲಂಘಿಸಿ ಅಮಾನತ್ತುಗೊಂಡಿದ್ದ ಹುದ್ದೆ/ಸ್ಥಳದಲ್ಲಿಯೇ ಪುನರ್ ಸ್ಥಾಪಿಸಿದ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಶ್ರೀಮತಿ ಪುಷ್ಪಲತಾ ಇವರು ರಾಯಚೂರು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂವಿಜ್ಞಾನಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ 2018 ರ ಮೇ 24 ರಂದು ಎ.ಸಿ.ಬಿ ದಾಳಿಯಲ್ಲಿ ರೂ. 1,00,000/- ಲಂಚ ಪಡೆಯುವ ಸಂದರ್ಭದಲ್ಲಿ ಸಿಕ್ಕಿ ಬಿದ್ದು ಸೇವೆಯಿಂದ ಅಮಾನತ್ತುಗೊಂಡಿದ್ದರು.
ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ 25-11-2020 ರ ಆದೇಶದ ಪ್ರಕಾರ, ಅಮಾನತ್ತುಗೊಂಡ ಸರಕಾರಿ ನೌಕರನನ್ನು ಅಮಾನತ್ತಿನಿಂದ ತೆರವುಗೊಳಿಸಿದಾಗ ಆತನನ್ನು/ಅವಳನ್ನು ಯಾವ ಹುದ್ದೆ/ಸ್ಥಾನದಿಂದ ಅಮಾನತ್ತುಗೊಳಿಸಲಾಗಿತ್ತೋ ಅದೇ ಹುದ್ದೆ/ಸ್ಥಾನದಲ್ಲಿ ಪುನರ್ ನೇಮಕ ಮಾಡತಕ್ಕದ್ದಲ್ಲ. ಆದರೆ, ನೇಮಕಾತಿ ಪ್ರಾಧಿಕಾರವು ಆರೋಪಿ ಅಧಿಕಾರಿಯ ಅಮಾನತ್ತು ಆದೇಶವನ್ನು ತೆರವುಗೊಳಿಸಿ ಅವರನ್ನು ಸ್ವಲ್ಪ ದಿನ ಬೇರೆ ಕಡೆ ನಿಯುಕ್ತಿಗೊಳಿಸಿ ನಂತರ ಪುನಃ ಅಮಾನತ್ತುಗೊಂಡಿದ್ದ ಸ್ಥಳ/ಹುದ್ದೆಗೆ (ಕ್ರಿಮಿನಲ್ ವಿಚಾರಣೆ ಬಾಕಿ ಇರುವಾಗ) ವರ್ಗಾಯಿಸಿರುವುದು ಸರ್ಕಾರಿ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
ಕ್ರಿಮಿನಲ್ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದಾಗ, ನೌಕರನನ್ನು ಅಮಾನತ್ತಿನಿಂದ ತೆರವುಗೊಳಿಸಲು ಪೊಲೀಸರ/ಲೋಕಾಯುಕ್ತರ ಕಛೇರಿಯ ಸಮ್ಮತಿ ಇಲ್ಲದೆ ಆದೇಶ ಹೊರಡಿಸತಕ್ಕದ್ದಲ್ಲ ಎಂಬ ನಿಯಮವಿದೆ. ಈ ನಿಯಮದಂತೆ, ಪುಷ್ಪಲತಾ ಇವರನ್ನು ಅಮಾನತ್ತಿನಿಂದ ತೆರವುಗೊಳಿಸುವಾಗ ಪೊಲೀಸರ/ಲೋಕಾಯುಕ್ತರ ಕಛೇರಿಯ ಸಮ್ಮತಿ ಪಡೆದಿರುವುದಿಲ್ಲ.
ಆರೋಪಿ ಅಧಿಕಾರಿಯ ವಿರುದ್ಧ ಎ.ಸಿ.ಬಿ ದಾಳಿಗೆ ಸಂಬಂಧಪಟ್ಟ ಕ್ರಿಮಿನಲ್ ವಿಚಾರಣೆ ಬಾಕಿ ಇರುವ ಕಛೇರಿಗೇ ವರ್ಗಾಯಿಸಿರುವುದರಿಂದ, ಆರೋಪಿ ಅಧಿಕಾರಿಯು ತನ್ನ ಅಧಿಕಾರ ಬಳಸಿಕೊಂಡು ತನ್ನ ಮೇಲಿನ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುವುದರಿಂದ ಆರೋಪಿ ಅಧಿಕಾರಿಯ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ತಕ್ಷಣ ರಾಯಚೂರು ಗಣಿ & ಭೂ ವಿಜ್ಞಾನ ಇಲಾಖೆಯಿಂದ ಬಿಡುಗಡೆಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಆಗ್ರಹಿಸಿದ್ದಾರೆ.