ಯಾವನೋ ಮೂರ್ಖ ಯಾವುದೋ ಒಂದು ತನ್ನ ಥಿಯರಿ ಪ್ರತಿಪಾದಿಸುತ್ತಾನೆ. ಅವನ ಮುಂದೆ ಜನರ ತೆರಿಗೆಯ ಹಣವಿರುತ್ತದೆ. ಅದನ್ನು ಜನಕ್ಕಾಗಿ ಖರ್ಚು ಮಾಡಬೇಕಿರುತ್ತದೆ. ಏನು ಮಾಡುವುದು? ಯೋಚಿಸುತ್ತಾರೆ, ಈಗ ತುರ್ತಾಗಿ ಕಣ್ಮುಂದೆ ಇರುವ ಹಣವನ್ನು ಸ್ವಾಹ ಮಾಡಬೇಕಾಗಿದೆ. ನಂಗೊಂದಿಷ್ಟು, ಅವರಿಗೊಂದಿಷ್ಟು, ಮತ್ತೊಬ್ಬರಿಗೊಂದಿಷ್ಟು. ಇಂತಹ ಯೋಚನೆಗಳ ಪರಿಣಾಮವೇ ವ್ಯರ್ಥ ಕಾಮಗಾರಿಗಳು!
ಈ ಚಿತ್ರದಲ್ಲಿರುವ ಜಾಲಿ ಕಂಠಿಯನ್ನು ಸೂಕ್ಷ್ಮವಾಗಿ ನೀವು ಪರಿಶೀಲಿಸಿದ್ದೇ ಆದರೆ ಸರ್ಕಾರದ ಹಣ ಹೇಗೆ ವ್ಯರ್ಥವಾಗಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಏಕಾಗಿ ಇದು? ಇದರ ಪ್ರಯೋಜನೆ ಏನು? ಯಾವ ಧೈರ್ಯದಿಂದ ಈ ದೇಶದಲ್ಲಿ ಜನರ ತೆರಿಗೆಯ ಹಣವನ್ನು ವ್ಯರ್ಥವಾಗಿ ಪೋಲು ಮಾಡಲಾಗುತ್ತಿದೆ? ಇದಕ್ಕೆ ಯಾವ ಶಿಕ್ಷೆಯೂ ಇಲ್ಲವೇ ಎನ್ನುವಂತಹ ಪ್ರಶ್ನೆಗಳು ನಮ್ಮ ಮುಂದೆ ಸಿಡಿದು ನಿಂತ ಘಟಸರ್ಪದಂತೆ ಕಣ್ಣ ಮುಂದೆ ನಿಲ್ಲುತ್ತವೆ.
ಇದು ದೇವದುರ್ಗ ಎಪಿಎಂಸಿ ಆವರಣದಲ್ಲಿರುವ ಒಂದು ಗೋದಾಮು. ಕೋಟಿಗಳ ಲೆಖ್ಖದಲ್ಲಿ ಈ ಗೋದಾಮನ್ನು ನಿರ್ಮಿಸಿರಬಹುದು. ಇದಕ್ಕೆ ವಿದ್ಯುತ್ ಸೌಕರ್ಯ ಮತ್ತು ಒಳ್ಳೆಯ ಕಂಪನಿಯ ಜನರೇಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಜಾಲಿಯ ಹಿಂದೆ ಜೆಸ್ಕಾಂನ ವಿದ್ಯುತ್ ಪರಿವರ್ತಕ ಅಳವಡಿಸಿದ ಕಂಬ ಅಥವಾ ಡಿಪಿ ನಿಮಗೆ ಕಾಣಿಸುತ್ತಿರಬಹುದು. ಅದರ ಪಕ್ಕದಲ್ಲಿ ಜನರೇಟರ್ ಇದೆ. ಇವು ಒಂದು ದಿನವೂ ಕಾರ್ಯನಿರ್ವಹಿಸಿದಂತೆ ಕಂಡು ಬರುವುದಿಲ್ಲ. ಉಪಯೋಗವಿಲ್ಲದ ಕಾಮಗಾರಿಗೆ ಜನರ ತೆರಿಗೆ ಹಣ ಹಾಳು ಮಾಡುವುದು ಯಾವ ನ್ಯಾಯ ಎನ್ನುವುದು ನಮ್ಮ ಪ್ರಶ್ನೆ.
ಹಾಗೇನೆ ಈ ದೇವದುರ್ಗ ಎಪಿಎಂಸಿಗೆ ರಸ್ತೆ, ಶೌಚಾಲಯ, ಒಳ ಚರಂಡಿ ವ್ಯವಸ್ಥೆ ಎಂದು ಕೋಟ್ಯಾಂತರ ರೂಪಾಯಿ ವಿನಿಯೋಗಿಸಲಾಗಿದೆ. ಎಲ್ಲವೂ ಕಳಪೆ ಕಾಮಗಾರಿಗಳು. ಈ ಕಾಮಗಾರಿಗಳನ್ನು ಕೈಗೊಂಡು ಎರಡ್ಮೂರು ವರ್ಷಗಳು ಆಗಿಲ್ಲ. ಅವೆಲ್ಲವೂ ಹದಗೆಟ್ಟು ಹೋಗಿವೆ. ಏಕೆ ಇದೆಲ್ಲ? ಇದನ್ನು ಅಭಿವೃದ್ಧಿ ಎನ್ನಲಾಗುತ್ತದೆಯೇ? ಬಹುಶಃ ಇದು ಶಿವನಗೌಡ ನಾಯಕ ಆಡಳಿತದಲ್ಲಿದ್ದಾಗ ಕೈಗೊಂಡ ಕಾಮಗಾರಿಗಳು. ಈ ಕಾಮಗಾರಿಗಳು ಕೇವಲ ಕಿಕ್ ಬ್ಯಾಕ್ ಕಾರಣಕ್ಕೆ ಕೈಗೊಂಡ ಕಾಮಗಾರಿಗಳಂತೆ ಕಡುಬರುತ್ತವೆ. ಹಾಗಂತ ಜನರೂ ಕೂಡಾ ಅನ್ನುತ್ತಿದ್ದಾರೆ. ಏಕೆ ಜನರನ್ನು ಮೂರ್ಖರನ್ನಾಗಿಸುತ್ತಿದ್ದೀರಿ ಎನ್ನುವುದು ಜನ ಆಕ್ರೋಶ ಪತ್ರಿಕೆಯ ಪ್ರಶ್ನೆ.
ದೇವದುರ್ಗ ತಾಲ್ಲೂಕಿನ ಪತ್ರಕರ್ತರು, ಹೋರಾಟಗಾರರು ಮತ್ತು ಸಂಘಟನೆಗಳು ಈ ಬಗ್ಗೆ ಗಮನಹರಿಸಿ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಎನ್ನುವುದು ಜನ ಆಕ್ರೋಶ ಪತ್ರಿಕೆಯ ವಿನಂತಿ.
ದಯವಿಟ್ಟು ಜನರಿಗೆ ಉಪಯೋಗವಾಗದ ಕೆಲಸಗಳನ್ನು ಸರ್ಕಾರ ಕ್ರಿಯಾಯೋಜನೆಯಲ್ಲಿ ಅಳವಡಿಸಬಾರದು. ಜನರ ಅಭಿಪ್ರಾಯ ಪಡೆದು ಅನುದಾನ ವಿನಿಯೋಗ ಆಗಬೇಕು. ಜನರು ಎಂದರೆ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲ. ಸಾಮಾನ್ಯ ಜನರ ಸಮ್ಮುಖದಲ್ಲಿ ವಿಷಯಗಳು ಚರ್ಚೆಗೆ ಒಳಪಡಿಸಿ ಕ್ರಿಯಾಯೋಜನೆಗಳು ರೂಪುಗೊಳ್ಳಬೇಕು. ರಾಜಕಾರಣ ಒಂದು ಉದ್ಯಮವಾಗಬಾರದು. ಅಂತಹ ರಾಜಕಾರಣಿಗಳಿಗೆ ಜನ ಚಪ್ಪಲಿ ಸೇವೆ ಮಾಡಬೇಕು ಎಂದು ಹೆಸರು ಹೇಳಲು ಇಚ್ಚಿಸದ ಹೋರಾಟಗಾರರೊಬ್ಬರ ಹೇಳಿಕೆ.
ಅದೇನು ಸರ್ಕಾರವೋ ಅದೇನು ಐಎಎಸ್ ಐಪಿಎಸ್ ಅಧಿಕಾರಿಗಳೋ ಎಂದು ಜನ ಕಪಸಹಿತ ಉಗುಳನ್ನು ಉಗಿಯುತ್ತಿದ್ದಾರೆ.
ಲಕ್ಷ್ಮೀಕಾಂತ ನಾಯಕ