ಸ್ಥಳೀಯ

ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಒಂದು ಜಿಲ್ಲೆ-ಒಂದು ತಾಣ ವಿನೂತನ ಯೋಜನೆಗೆ ಯಾದಗಿರಿ ಕೋಟೆ ಆಯ್ಕೆ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

WhatsApp Group Join Now
Telegram Group Join Now

ಯಾದಗಿರಿ : ಜುಲೈ 18, : ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸರ್ಕಾರ ಒಂದು ಜಿಲ್ಲೆ- ಒಂದು ತಾಣ ಎಂಬ ವಿನೂತನ ಯೋಜನೆ ರೂಪಿಸಿದ್ದು, ಈ ಯೋಜನೆಗೆ ಯಾದಗಿರಿ ನಗರದ   ಕೋಟೆಯು ಆಯ್ಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ  ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.

 

ಈ ಕೋಟೆಯು ಕಲ್ಯಾಣ ಕರ್ನಾಟಕಕ್ಕೆ ಪ್ರಮುಖ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ.  ಪ್ರವಾಸಿತಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಪ್ರವಾಸಿಗರನ್ನು  ಸೆಳೆಯಬಹುದಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಅಭಿವೃದ್ದಿಯಾದರೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರದ ಕೋಟೆಯ ಸೌಂದರ್ಯೀಕರಣ ಮಾಡುವುದರ ಮೂಲಕ ಸ್ಥಳಿಯರಿಗೆ ಉದ್ಯೋಗವಕಾಶ, ಹೆಚ್ಚಿನ ವ್ಯಾಪಾರ ವಹಿವಾಟು ಹೆಚ್ಚಳವಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ಹೃದಯದಂತಿರುವ ನಗರದ ಕೋಟೆ ಮತ್ತು ಲುಂಬಿನಿ ವನದ ಹಾಗೂ ವಿವಿಧ ಪ್ರವಾಸಿ ತಾಣಗಳು ಹೆಚ್ಚಿನ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕ್ರಿಯಾ ಯೋಜನೆ ಪ್ರಸ್ತಾವನೆಯನ್ನು ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಯಾದಗಿರಿ ಕೋಟೆಯ ವಿಶೇಷತೆ : ಯಾದಗಿರಿ ಕೋಟೆಯು  ಭೀಮಾ ನದಿಯಿಂದ 2 ಕಿ.ಮೀ ಅಂತರದಲ್ಲಿದೆ. ಪ್ರಾಚೀನ ಶಾಸನಗಳಲ್ಲಿ ‘ಏತಗಿರಿ’ ಎಂದೇ ಉಲ್ಲೇಖಿತಗೊಂಡಿರುವ ಯಾದಗಿರಿ ಜಿಲ್ಲೆಯು ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಸ್ವಲ್ಪ ಕಾಲ ರಾಜಧಾನಿ ಪಟ್ಟಣವಾಗಿತ್ತು. ಐತಿಹಾಸಿಕವಾಗಿ ಹಾಗೂ ಭೌಗೋಳಿಕವಾಗಿ ಮಹತ್ವವಾದ ಸ್ಥಳ ಕಲ್ಯಾಣಿ ಚಾಲುಕ್ಯರು ನಿರ್ಮಿಸಿದ ಗಿರಿಯ ಮೇಲಿರುವ ಮೂರು ಸುತ್ತಿನ ಕೋಟೆಯು ಮುಂದೆ ಅನೇಕ ರಾಜರ ಆಡಳಿತದಲ್ಲಿ ಬಲಗೊಂಡಿದೆ. ಎತ್ತರವಾದ ಗಿರಿಯ ಮೇಲಿರುವ ಕೋಟೆಯಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ಶ್ರೀ ಭುವನೇಶ್ವರಿ ದೇವಸ್ಥಾನ, ಉತ್ತರ ದಿಕ್ಕಿನ ಕೋಟೆಯ ಸುಸಜ್ಜಿತ ಮುಖ್ಯ ದ್ವಾರ, ವಾಯುವ್ಯ ದಿಕ್ಕಿನ ಕೋಟೆಯ ಸುಸಜ್ಜಿತ ಹೆಬ್ಬಾಗಿಲು, ಕೋಟೆಯಲ್ಲಿನ

ನೀರಿನ ಸಂಗ್ರಹಣದ ದೋಣಿ, ರಾಮತೀರ್ಥ ಭಾವಿ, ಗಣಪತಿ ದೇವಸ್ಥಾನ, ಕೋಟೆಯ ಮೇಲಿರುವ ಬೃಹತ್ ತೋಪಿನ ಬುರಜು, ಶ್ರೀ ರಾಮ-ಲಕ್ಷö್ಮಣ ಮತ್ತು ಹನುಮಾನ ಉಬ್ಬು ಶಿಲಾ ಮೂರ್ತಿಗಳು, ಮಲ್ಲಯ್ಯನ ಪಾದಗಳು, ಮದ್ದಿನ ಸಂಗ್ರಹದ ಶೀಲಾ ಭಾವಿ, ಬೆಟ್ಟದ ಮೇಲಿನಿಂದ ಈಶಾನ್ಯ ದಿಕ್ಕಿಗೆ ಹಿರಿ ಕೆರೆ ಮತ್ತು ಅರಮನೆಯ ಅವಶೇಷಗಳು, 3 ಜನ ಜೈನ ಬಸದಿಯ ತೀರ್ಥಂಕರ ಇವೆ. ಇಷ್ಟೊಂದು ಎತ್ತರವಾದ ಬೆಟ್ಟದ ಮೇಲಿರುವ ಅಕ್ಕ-ತಂಗಿಯರ ಬಾವಿಯಲ್ಲಿ ಎಲ್ಲಾ ಕಾಲದಲ್ಲೂ ನೀರಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಕಟ್ಟಿಮನಿ, ನಗರಸಭೆಯ ಪೌರಾಯುಕ್ತ ಲಕ್ಷೀಕಾಂತ ಡಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಭಿಮನ್ಯು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ಅಧಿಕಾರಿ ಕೆ ಶಿವರಾಜ್, ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಪರಮೇಶ್ವರ, ಶ್ರಾವಣಕುಮಾರ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

ನಿಮ್ಮ ಸಹಾಯವಿಲ್ಲದೆ ಏನನ್ನೂ ಮಾಡಲು ಆಗದು, ನಿಮಗನ್ನಿಸಿದಷ್ಟು ಸಹಾಯ ಮಾಡಿ.
WhatsApp Group Join Now
Telegram Group Join Now

Related Posts