ಯಾದಗಿರಿ: ಜುಲೈ, 15 : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುವಂತಹ ಗ್ರಾಮಗಳ ಪಟ್ಟಿಯನ್ನು ಇಟ್ಟುಕೊಂಡು ತಕ್ಷಣ ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿ ಸೂಕ್ತ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅಸ್ಪೃಶ್ಯತೆ ಆಚರಣೆ ಜಾರಿಯಲ್ಲಿ ಇರುವಂತಹ ಹಳ್ಳಿಗಳಲ್ಲಿ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಜಾತಿ, ಅನುಸೂಚಿತ ಪಂಗಡ( ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಸ್ಮಶಾನಭೂಮಿ ಅವಶ್ಯಕತೆ ಇರುವಲ್ಲಿ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಜನಸಂಖ್ಯೆ ಆಧಾರದ ಮೇಲೆ ಸ್ಮಶಾನಭೂಮಿ ಒದಗಿಸುವ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದ ಅವರು ವಿವಿಧ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.
ಯಾದಗಿರಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ 2024ರ ಜನವರಿ 1 ರಿಂದ ಜುಲೈ 14ರ ವರೆಗಿನ ಅವಧಿಯಲ್ಲಿ ನೊಂದ ಸಂತ್ರಸ್ತರಿಗೆ ಒಟ್ಟು 54.86 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಜಿಲ್ಲಾಡಳಿತದಿಂದ ವಿತರಿಸಲಾಗಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ಪರಿಹಾರ ವಿತರಿಸಲು ಒಟ್ಟು 99.86 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ. ಬಾಕಿ ಉಳಿದ 45 ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಭೂ ಒಡೆತನ ಯೋಜನೆ, ಈ ಜನಾಂಗಕ್ಕಾಗಿ ಸಾರ್ವಜನಿಕ ಸ್ಮಶಾನಭೂಮಿ ಸೌಲಭ್ಯ ಗುರುತಿಸುವ ಜೊತೆಗೆ ಪ್ರಸ್ತಾವನೆ ಸಲ್ಲಿಸಲು, ವಿವಿಧ ನಿಗಮಗಳ ವ್ಯಾಪ್ತಿಯಲ್ಲಿ ಈ ಜನಾಂಗಕ್ಕಾಗಿ ನೀಡಲಾಗುವ ಸಾಲಕ್ಕಾಗಿ ಅನಗತ್ಯ ದಾಖಲಾತಿ ಕೇಳದಂತೆ ಹಾಗೂ ಸ್ಮಶಾನ ಭೂಮಿ ಒತ್ತುವರಿಯಾಗಿರುವ ಬಗ್ಗೆ ಪರಿಶೀಲಿಸಿ ತಕ್ಷಣ ತೆರವು ಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್ ಪಿ, ಡಿವೈಎಸ್ಪಿಗಳಾದ ಅರುಣಕುಮಾರ ಕೋಳೂರು, ಜಾವೀದ್ ಇನಾಂದಾರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕು. ಸರೋಜಾ ಜಿ ಟಿ, ದೌರ್ಜನ್ಯ ಸಮಿತಿಯ ಸದಸ್ಯರಾದ ಮರೆಪ್ಪ ಚಟ್ಟೆರಕಾರ, ಮಲ್ಲಪ್ಪ ಗೋಗಿ ,ನಿಂಗಪ್ಪ ದೇವಳಗುಡ್ಡ, ದಿನೇಶಕುಮಾರ, ರವಿಕುಮಾರ ಯಕ್ಷಂತಿ, ಸರಕಾರಿ ಅಭಿಯೋಜಕರಾದ ವಿಶ್ವನಾಥ ಉಬಾಳೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.