ವೈಶಿಷ್ಟ್ಯ ಲೇಖನ

ದಮನಿತರ ದನಿ ಡಾ.ಬಿ.ಆರ್. ಅಂಬೇಡ್ಕರ

WhatsApp Group Join Now
Telegram Group Join Now

ಚಿಂತಕ, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ,ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ,ದೇಶಪ್ರೇಮಿಯಾಗಿ
ತಮ್ಮನ್ನು ತಾವು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ
ಡಾ.ಬಿ.ಆರ್. ಅಂಬೇಡ್ಕರ ಅವರೊಬ್ಬ ಶ್ರೇಷ್ಠ ವಿಚಾರವಾದಿ.
ಅಗಾಧ ಜ್ಞಾನಿ,ಅವರು ರಚಿಸಿದ ಸಂವಿಧಾನ ಭಾರತಕ್ಕಲ್ಲದೇ ಇಡಿ ವಿಶ್ವಕ್ಕೆ ಮಾದರಿ,ಪ್ರೇರಣೆ ಹಾಗೂ ಪ್ರಜಾಪ್ರಭುತ್ವವನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿದ್ದು.
ದೇಶದಲ್ಲಿ ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಪಂ ಸದಸ್ಯರವರೆಗೆ ಆಡಳಿತ ನಡೆಯುತ್ತಿದೆ ಎಂದರೆ ಅದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನದಿಂದ ಎಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಸಾಗಬೇಕಾಗಿದೆ. ಅವರು ಕೈಗೊಂಡ ಹಲವು ಜನಪರ ಕಾಳಜಿ ಕೆಲಸಗಳು ನಮ್ಮಗೆಲ್ಲರಿಗೂ ಆದರ್ಶ.ಅವರ ವೈಚಾರಿಕ ಕ್ರಾಂತಿಯ ಚಳುವಳಿ ಇಂದಿನ ನಾಗರಿಕ ಸಮಾಜಕ್ಕೆ ಪ್ರೇರೇಪಣೆ. ಈ ಎಲ್ಲಾ ಅವರು ಹೋರಾಟಗಳು ಇಂದಿಗೂ – ಎಂದೆಂದಿಗೂ ಮರೆಯಲಾಗದು.ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ಮತ್ತೆ ಕೆಲವರು ಸತ್ತ ನಂತರವೂ ಬದುಕಿರುತ್ತಾರೆ. ಮೊದಲನೆಯದಕ್ಕೆ ಉದಾಹರಣೆ ನೀಡಲು ಈ ಜಗದಲ್ಲಿ ಕೋಟ್ಯಂತರ ಮಂದಿ ಇರಬಹುದು. ಆದರೆ, ಎರಡನೆಯದಕ್ಕೆ ನಿದರ್ಶನ ಕೊಡಲು ಕೋಟಿಗೊಬ್ಬರು ದೊರೆಯುವುದೂ ದುರ್ಲಭ, ಇಂತಹ ಸಾಲಿನಲ್ಲಿ ನಿಲ್ಲುವವರು ಅಂಬೇಡ್ಕರ್ ಜಿ ಯವರು. ಈ ಹಿಂದೆ ಹುಟ್ಟಿರದ, ಬಹುಶಃ ಮುಂದೆಯೂ ಹುಟ್ಟಲು ಸಾಧ್ಯವಿಲ್ಲದ ವಿರಳಾತಿ ವಿರಳ ವ್ಯಕ್ತಿತ್ವದ ಅಪರೂಪದ ವ್ಯಕ್ತಿ ಮತ್ತು
ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ಅಗಾದ ಪಾಂಡಿತ್ಯ ಹಾಗೂ ಗೌರವ ಹೊಂದಿದ್ದ ವ್ಯಕ್ತಿತ್ವವೇ ಡಾ.ಬಿ.ಆರ್. ಅಂಬೇಡ್ಕರ ಅವರದು. ಇವರ ಕಠಿಣ ಪರಿಶ್ರಮ, ಸಾಧನೆ, ತತ್ತ್ವಾದರ್ಶ ಇಂದಿನ ಜನಸಾಮಾನ್ಯರಿಗೆ ಪ್ರೇರೇಪಣೆಯ ಮಾರ್ಗದರ್ಶನ ಎಂಬುದು ನಾವೆಲ್ಲರೂ ಆತ್ಮಸಾಕ್ಷಿಯಿಂದ ಒಪ್ಪಲೇ ಬೇಕು.ನಮ್ಮ ನಡುವೆ ಇದ್ದ ಓರ್ವ ವ್ಯಕ್ತಿ ಸರ್ವಮಾನ್ಯ ಮಹಾನ್‌ ಶಕ್ತಿಯಾಗಿ ಬೆಳೆದು, ಒಂದು ಸಂಸ್ಥೆಯಾಗಿ ರೂಪುಗೊಂಡು ಕೋಟ್ಯಂತರ ಜನರ ಹೃದಯ ಕಮಲಗಳಲ್ಲಿ ಬಲಿಷ್ಠವಾಗಿ ಬೇರೂರಿದ್ದಾರೆ ಎಂಬುದಕ್ಕೆ ಅತ್ಯುತ್ತಮ ಪ್ರತಿಮಾತ್ಮಕ ಘನ ವ್ಯಕ್ತಿತ್ವದ ಅಂಬೇಡ್ಕರ್‌ ರವರೇ ಸಾಕ್ಷಿ. ಬಡತನವನ್ನು ಸಹಿಸಬಹುದು. ಆದರೆ, ಸ್ವಾಭಿಮಾನವನ್ನೇ ಕೆಣಕುವ ಅಸ್ಪೃಶ್ಯತಾ ಪದ್ಧತಿಯನ್ನು ಸಹಿಸಲಾಗದು. ಜಾತಿ ವ್ಯವಸ್ಥೆಯ ಈ ಅನಿಷ್ಠವನ್ನು ದೂರಮಾಡಲು ಡಾ. ಅಂಬೇಡ್ಕರ್‌ ಅವರು ನಡೆಸಿದ ಹೋರಾಟಗಳು ವರ್ಣಿಸಲು ಅಸಾಧ್ಯವಾದುದು.ಕೆಳ ಜಾತಿಯ ಮಕ್ಕಳು ಶಾಲೆಯಲ್ಲಿ ಎಲ್ಲರೊಡನೆ ಸರಿಸಮನಾಗಿ ಕೂರುವಂತಿರಲಿಲ್ಲ. ಅಷ್ಟೇ ಏಕೆ ? ಎತ್ತಿನ ಗಾಡಿಯನ್ನು ಏರುವಂತಿರಲಿಲ್ಲ. ಎತ್ತಿನಗಾಡಿಯನ್ನು ಏರಿದರೆ ಎತ್ತುಗಳಿಗೇ ಮೈಲಿಗೆಯಾಗುತ್ತದೆ ಎಂಬ ಅರ್ಥಹೀನ ಹಾಗೂ ಅಮಾನವೀಯ ಸಂಸ್ಕೃತಿ. ಇಂಥ ಅಪಮಾನ ಎದುರಿಸುವ ಎದೆಗಾರಿಕೆ ಅಂಬೇಡ್ಕರ್‌ ಅವರಲ್ಲಿ ಚಿಗುರಿದ್ದು ನಮ್ಮ ಭಾರತ ದೇಶದ ಭಾಗ್ಯ ಶರಣರೆ. ಅವರು ತೋರಿದ ಸಾಮಾಜಿಕ ಮಾರ್ಗದರ್ಶನಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಸಹಕಾರಿಯಾಗುತ್ತವೆ. ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ರವರ ಈ ಹೆಸರೇ ಕೋಟ್ಯಂತರ ಜನರಿಗೆ ಸ್ಪೂರ್ತಿ, ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕರಾಗಿ ಕಂಗೊಳಿಸಿದ ಮಾಹಾ ಚೈತನ್ಯ ಮೂರ್ತಿ ಸ್ನೇಹಿತರೇ.
ಇಂಥ ವಾತಾವರಣದಲ್ಲಿ ಜನಿಸಿದ ಯುವ ತರುಣ ತನ್ನ ಪ್ರತಿಭೆಯಿಂದಲೇ ವಿದೇಶದಲ್ಲಿ ವ್ಯಾಸಂಗ ಮಾಡಿ. ಆ ಸಂದರ್ಭದಲ್ಲಿ ಅಲ್ಲಿಯೇ ದುಡಿಮೆಗೆ ವಿಫುಲ ಅವಕಾಶಗಳು ದೊರೆತರೂ, ಅವೆಲ್ಲವನ್ನೂ ನಿರಾಕರಿಸಿ, ಸ್ವದೇಶಕ್ಕೆ ಮರಳಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ಸಮಾಜದ ಅವಕೃಪೆಗೆ ತುತ್ತಾಗಿದ್ದ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಡಲು ಸುಧಾರಣೆ – ಅಭಿವೃದ್ಧಿಯೆಂಬ ಸಮಾಜಿಕ ಕಳಕಳಿಯ ಚಕ್ರವನ್ನು ಪ್ರಯೋಗಿಸಿದರು. ಅನ್ನಕ್ಕೆ ಜಾತಿ ಇಲ್ಲ. ಅಂತೆಯೇ, ಪ್ರತಿಭೆಗೂ ಜಾತಿ ಇಲ್ಲ ಎಂಬುವುದನ್ನು ಜಗತ್ತಿಗೆ ಸಾರಿ ಹೇಳಿದರು. ಸಾಮಾಜಿಕ ತಾರತಮ್ಯ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಡಾ. ಅಂಬೇಡ್ಕರ್‌ ವೇದವಾಕ್ಯವಾಗಿತ್ತು. ಇಂತಹ ಅನೇಕ ಕ್ರಾಂತಿಕಾರಿ ತಮ್ಮ ಬದುಕಿನ ಹೋರಾಟದ ಮೂಲಕ ಬಡವರ – ನೊಂದವರ ಕಣ್ಣಿರಿನ ಹನಿಯನ್ನು ಒರೆಸಿದ ಕೀರ್ತಿ ಮೇಧಾವಿ ಪುರುಷ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ.

ಅಂದಹಾಗೆ ಅಂಬೇಡ್ಕರ್ ಸ್ಮೃತಿ ಎಂದರೆ ಭಾರತದ ಸಂವಿಧಾನ. ಇದು ಮಾನವೀಯ ಮೌಲ್ಯದಿಂದ ಕೂಡಿದೆ. ಸಮಾನತೆ, ಪ್ರಜಾತಂತ್ರ, ಒಕ್ಕೂಟ ವ್ಯವಸ್ಥೆಯಿದೆ. ಇದರ ಆಧಾರದ ಮೇಲೆ ನಮ್ಮ ಆಡಳಿತ ಮತ್ತು ಜೀವನ ಮಾರ್ಗ ಕಂಡುಕೊಳ್ಳುವುದರಿಂದ ಶೋಷಣೆ, ದಾರಿದ್ರ್ಯ, ಅಸಮಾನತೆ ಇತ್ಯಾದಿ ನಿವಾರಿಸಬಹುದು. ನಮ್ಮ ದೇಶವನ್ನು ಒಗ್ಗಟ್ಟಾಗಿ ಮುಂದುವರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ,ಅಂಬೇಡ್ಕರ್ ಅವರ ಚಿಂತನೆಗಳು, ವಿಚಾರಧಾರೆಗಳನ್ನು ಯುವ ಜನರಿಗೆ ಮುಟ್ಟಿಸುವ ದಿಸೆಯಲ್ಲಿ ಅವರು ಜೀವನ ಪ್ರಯೋಗ ಹೆಚ್ಚು ಪ್ರಭಾವಶಾಲಿ ಹಾಗೆ ಅಂಬೇಡ್ಕರ್ ರವರು
ಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿ ಇವೇ ಅನ್ನುವದನ್ನು ಮರೆಯಬಾರದು. ಹಾಗಾಗಿ ಅವರ ವಿಚಾರಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕುವುದು ಒಳ್ಳೆಯದು ಹಾಗೆ ನಾಡಿಗೆ – ದೇಶಕ್ಕೆ ಮಾದರಿಯಾಗುವ ಮೂಲಕ ಪ್ರೇರಣೆ ಕೆಲಸ ಮಾಡಿ,ಅಂಬೇಡ್ಕರ್ ರವರ ಗೌರವವನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ಅವರ ಆಶಯದಂತೆ ಬದುಕುವುದು ಸರ್ವರೂ ಕಲಿಯಬೇಕು.

ಗೌರವ ನುಡಿ: ಅಂಬೇಡ್ಕರ್‌ ಒಬ್ಬ ರಾಜಕೀಯ ಮುತ್ಸದ್ದಿ, ಸಾಂವಿಧಾನಿಕ ವಿದ್ವಾಂಸ ಮತ್ತು ಬರಹಗಾರರು ಎಂಬುದು ಒಂದು ಕಡೆ.ಇನ್ನೊಂದು ಕಡೆಯಲ್ಲಿ ಶತಮಾನಗಳಿಂದಲೂ ತಾರತಮ್ಯವನ್ನೆದುರಿಸಿದ ದಲಿತ ಸಮಾಜಕ್ಕೆ ಸಮಾನತೆಯ ಭಾಗ್ಯವನ್ನು ಕರುಣಿಸಿದರು. ಅಲ್ಲದೆ ಸರ್ವರಿಗೂ ದೇಶ ಪ್ರೇಮದ ಜೊತೆಗೆ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿ,ರಾಜಕೀಯ ಮುತ್ಸದ್ದಿತನವನ್ನು ತೋರಿದರು ಎನ್ನುವ ವಾಸ್ತವವನ್ನು ನಾವು ಗುರುತಿಸಲೇಬೇಕು,ಆದ್ದರಿಂದಲೇ ಇಂದು
ಇಡೀ ವಿಶ್ವದಲ್ಲೇ ಅತ್ಯುತ್ಕೃಷ್ಟ ಲಿಖಿತ ಸಂವಿಧಾನವನ್ನು ನಮ್ಮ ಭಾರತ ಹೊಂದಿದೆ ಎಂದರೆ ಅದಕ್ಕೆ ಪ್ರಧಾನ ಗೌರವ ಶಿಲ್ಪಿ, ಸೃಜನಶೀಲ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ ಎಂದೇ ಹೆಸರಾಗಿದ್ದ ಡಾ ಅಂಬೇಡ್ಕರ್‌ ಅವರು ಪ್ರಮುಖ ಕಾರಣ ಎನ್ನುವದಂತು ದಿಟ್ಟ.
ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ 12ನೇ ಶತಮಾನದ ಬಸವಾದಿ ಪ್ರಮಥರು ಹೇಳಿದ ಮಾತನ್ನು ಈ ಸಮಾಜದಲ್ಲಿ ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ರವರ ಕೊಡುಗೆ ಅಪಾರ.ಹೀಗಾಗಿ ಅವರ ಸಮ-ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಮಾದರಿ ಮತ್ತು ಅನುಕರಿಸುತ್ತಿವೆ. ಆದಕಾರಣ ಇಂದಿನ ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತತ್ವದ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ನಾವೆಲ್ಲರೂ ಅಳವಡಿಸಿಕೊಂಡಲ್ಲಿ ಅವರು ಕಂಡ ನಿಜವಾದ ದೇಶ ಪ್ರೇಮ ಮತ್ತು ಸಂವಿಧಾನದ ಆಶಯವನ್ನು
ಸಾಮಾಜಿಕ ಪ್ರಜಾಪ್ರಭುತ್ವ
ರಾಷ್ಟ್ರದ ಕನಸನ್ನು ನಾವುಗಳು ನನಸಾಗಿಸಬಹುದು.

ಅಂಬೇಡ್ಕರ ರವರಿಗೆ ಗೌರವ ನಮನಗಳು:
ಮನುಸ್ಮೃತಿ ಬದಿಗಿಟ್ಟು ಅಂಬೇಡ್ಕರ್ ಸ್ಮೃತಿ ಆಧಾರದ ಮೇಲೆ ಆಡಳಿತ ಮತ್ತು ಜೀವನ ನಡೆಸುವ ಸಂಕಲ್ಪ ತೊಟ್ಟಾಗ ಮಾತ್ರ ಈ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಎನ್ನುವುದನ್ನು ನಾವೆಲ್ಲರೂ ಮನಗಂಡು ನಡೆಯಬೇಕು.ಅಂದಗಾಲೇ ನಾವೆಲ್ಲರೂ ಅಂಬೇಡ್ಕರ್ ರವರ ಜಯಂತಿ ಆಚರಣೆ ಮಾಡಿದ್ದು ಸಾರ್ಥಕ ಆಗಲಿದೆ.ಅಂದಹಾಗೇ ಒಂದು ದಿನ ಅಂಬೇಡ್ಕರ್ ಜಿ ಯವರ ಜಯಂತಿ ಆಚರಣೆ ಮಾಡಿ ಕೈಬಿಡುವುದು (ಬಿಟ್ಟು ಬಿಡುವುದು) ಸರಿಯಲ್ಲ. ವರ್ಷವಿಡೀ ನಾವೆಲ್ಲರೂ ಅಂಬೇಡ್ಕರ್ ಅವರ ತತ್ವಗಳನ್ನು ನೆನೆಸಿಕೊಂಡು ಅವರ ದಾರಿಯಲ್ಲಿ ನಡೆದಾಗ ಮಾತ್ರ ಜನ್ಮಪಾವನ ಆಗುತ್ತದೆ.
ಅವರ 133 ನೇ ಜಯಂತಿ ಈ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಗೌರವ ನಮನಗಳು ಸಲ್ಲಿಸುತ್ತೇವೆ.

———-
ಲೇಖಕರು : ಶರಣ ಸಂಗಮೇಶ ಎನ್ ಜವಾದಿ.
ಬರಹಗಾರರು ,ಪತ್ರಕರ್ತರು, ಚಿಂತಕರು, ಹೋರಾಟಗಾರರು.
*****
ಲೇಖಕರ, ವಿಳಾಸ : – ನಂ -3/135,ರಾಜ್ ಖಾನಾವಳಿ,ಆರ್ಯ ಸಮಾಜದ ಹತ್ತಿರ, ಚಿಟಗುಪ್ಪಾ ಬೀದರ್ ಜಿಲ್ಲೆ.
ಪೀನ್ ಕೋಡ್ – 585412.
9663809340.

WhatsApp Group Join Now
Telegram Group Join Now

Related Posts