ಶಹಾಪೂರು: ತಾಲ್ಲೂಕಿನ ಹೋತಪೇಠ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಪ್ರದೀಪ್ ಅಣಬಿ ಇಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಅವರಿಗೆ ದೂರನ್ನು ಸಲ್ಲಿಸಿದರು. ಪ್ರದೀಪ್ ಅಣಬಿ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷರಾಗಿದ್ದು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯವರ ಕಛೇರಿಯಲ್ಲಿ ತಮ್ಮ ಸಹಚರರೊಂದಿಗೆ ದೂರನ್ನು ಸಲ್ಲಿಸಿದರು.
ಪಂಚಾಯತಿಯ 2023-24, 2024-25ರ ಉದ್ಯೋಗ ಖಾತರಿ ಕ್ರಿಯಾಯೋಜನೆಯಲ್ಲಿ ಅಳವಡಿಸಲಾಗಿರುವ ಕಾಮಗಾರಿಗಳನ್ನು ಗ್ರಾಮ ಪಂಚಾತಿಯ ಅಭಿವೃದ್ಧಿ ಅಧಿಕಾರಿಗಳು ಉದ್ಯೋಗ ಖಾತರಿ ಯೋಜನೆಯ ನಿಯಮಗಳನ್ನು ಪಾಲಿಸದೆ ಮನ ಬಂದಂತೆ ಅನುದಾನವನ್ನು ವ್ಯಯಿಸುವುದರ ಮೂಲಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ದುರುಪಗೊಳಿಸಿದ್ದಾರೆ. ಇದರಿಂದ ಉದ್ದೇಶಿತ ಕಾಮಗಾರಿಗಳು ಸಕ್ರಮವಾಗಿ ಅನುಷ್ಠಾನಗೊಳ್ಳದೆ ಕಳಪೆ ಕಾಮಗಾರಿಗಳು ಮತ್ತು ಕೆಲವೊಂದು ಕಡೆ ಕಾಮಗಾರಿ ಮಾಡದೇ ಹಣ ಪಾವತಿಸುವ ಮೂಲಕ ಸರ್ಕಾರವನ್ನು ಸರ್ಕಾರಿ ನೌಕರರೇ ಏಮಾರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಲ್ಲೊಂದು ಅಚ್ಚರಿಯ ಘಟನೆಯನ್ನು ದೂರಿನ ಪತ್ರದಲ್ಲಿ ಉಲ್ಲೇಖಿಸಿರುವ ಪ್ರದೀಪ್ ಅಣಬಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕಾಗಿ ಅಳವಡಿಸಲಾಗಿರುವ ನಾಮಫಲಕದಲ್ಲಿ ಎಡ ಬದಿ ಮತ್ತು ಬಲ ಬದಿ ಎರಡು ಪ್ರತ್ಯೇಕವಾದ ಕಾಮಗಾರಿಗಳ ಕಾಮಗಾರಿ ಕೋಡನ್ನು ಬರೆಯಲಾಗಿದೆ. ಇದು ಭ್ರಷ್ಟ ಪಿಡಿಓ ಮತ್ತು ಭ್ರಷ್ಟ ಗ್ರಾಮ ಪಂಚಾಯತಿ ಆಡಳಿತ ಹಾಗೂ ತಾಲ್ಲೂಕು ಆಡಳಿತದ ಧ್ಯೋತಕವಾಗಿದೆ ಎಂದಿದ್ದಾರೆ.
ದೂರಿನಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ ಇವರು ಹೋತಪೇಠ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿ ಈ ಭಾರಿ ಪ್ರಮಾಣದಲ್ಲಿ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಭ್ರಷ್ಟಾಚಾರದೊಳಗೆ ಭಾಗಿಯಾಗಿರುವ ಸರ್ಕಾರಿ ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಸದ್ಯ ಹೋತಪೇಠ ಗ್ರಾಮ ಪಂಚಾಯತಿಗೆ ನೀಯೋಜಿಸಲಾಗಿರುವ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಕೋರಲಾಗಿದೆ.
ಈ ಸಂದರ್ಭದಲ್ಲಿ ಬಸ್ಸು, ಬೋಜಪ್ಪ ಮುಂಡಾಸಾ, ಅಂಬ್ರೇಶ್ ಶಿರವಾಳ ಮತ್ತಿತತರರು ಇದ್ದರು.