ಸರ್ಕಾರಿ ಶಾಲೆ.
–
ಲೇಖಕರು : ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು,ಹೋರಾಟಗಾರರು.
ಬೀದರ ಜಿಲ್ಲೆ.
******
ಶೈಕ್ಷಣಿಕ ಅಭಿವೃದ್ಧಿ ಎಂದರೆ ಕೇವಲ ಭೌತಿಕ ಅಭಿವೃದ್ಧಿ ರಚನೆಯಲ್ಲ. ಬೌದ್ಧಿಕ ವಿಕಾಸ, ಜೀವನ ಕೌಶಲ್ಯಗಳು, ಮಾನವತೆಯ ಪೋಷಣೆಯೂ ಒಳಗೊಂಡಿವೆ ಎಂದು ಸಾಹಿತಿಗಳು, ಶೈಕ್ಷಣಿಕ ಚಿಂತಕರು ಪ್ರತಿಪಾದಿಸಿರುತ್ತಾರೆ. ಈ ರೀತಿಯ ಅಭಿವೃದ್ಧಿಯ ನೆಲೆಯನ್ನು ಗಟ್ಟಿಗೊಳಿಸಲು ಮಾತೃ ಭಾಷಾ ಕಲಿಕೆಯು ಅತ್ಯಂತ ಮಹತ್ವ ಮತ್ತು ನಿರ್ಣಾಯಕ. ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಕನ್ನಡ ಭಾಷೆ, ಸಂಸ್ಕೃತಿಯ ಉಳಿವು ಎಂಬ ಪೋಷಣೆ ಇಂದಿನ ದಿನಮಾನಗಳಲ್ಲಿ ಹೆಚ್ಚು ಅಗತ್ಯತೆ ಇದೆ ಎಂಬುವುದನ್ನು ಕಾಣುತ್ತೇವೆ.
ನಾಡು, ನುಡಿ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯ ಚರ್ಚೆ ಬಂದಾಗ, ಕನ್ನಡ ಶಾಲೆಗಳ ಉಳಿವಿನ ಹಾಗೂ ಅಭಿವೃದ್ಧಿಯ ಉಪಕ್ರಮಗಳೇ ಪ್ರಮುಖ ನೆಲೆಯಾಗಿ ಅಭಿಪ್ರಾಯಗಳು, ಶಿಫಾರಸುಗಳು ವ್ಯಕ್ತವಾಗಿವೆ. ಜತೆಯಲ್ಲಿ ಭಾಷೆಯನ್ನು ಕಲಿಸುವ ವ್ಯವಸ್ಥೆ ಮತ್ತು ಕಲಿಸುವ ವಿಧಾನದ ಬಗ್ಗೆಯೂ ಆದ್ಯತೆ ಪಡೆದುಕೊಳ್ಳಬೇಕೆಂಬುದು ಬಲವಾದ ಪ್ರತಿಪಾದನೆಯಾಗಿದೆ. ಮತ್ತೆ, ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ಸುಧಾರಣೆಯ ಕೆಲಸಗಳು ಸಾಕಷ್ಟಿವೆ.
ಈ ನಡುವೆ ಕನ್ನಡ ನಾಡಿನಲ್ಲಿ, ಕನ್ನಡ ರಾಜ್ಯ ಭಾಷಾ ಮಾಧ್ಯಮವಾಗಿ ಉಳ್ಳ ಈ ನಮ್ಮ ರಾಜ್ಯದಲ್ಲಿ ಕನ್ನಡ ಉಳಿಸಿ, ಕನ್ನಡ ಶಾಲೆಗಳನ್ನು ಉಳಿಸಿ…ಬೆಳೆಸಿ… ಎನ್ನುವ ಕೂಗು, ಪ್ರತಿಪಾದನೆ ಮಾಡುತ್ತಿದ್ದೇವೆ! ಮಾಡುತ್ತಿರುವುದು ಎಂಥ ವಿಚಿತ್ರ…ವಿಪರ್ಯಾಸದ್ದು! ಅಲ್ಲವೇ? ಒಮ್ಮೆ ನಾವೆಲ್ಲರೂ ಈ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವುದು ಖಂಡಿತವಾಗಿಯೂ ಅವಶ್ಯಕತೆ ಇದೆ.
ಇನ್ನು ಈ ನಿಟ್ಟಿನಲ್ಲಿ
ಸರಕಾರಿ ಶಾಲೆಗಳೆಂದರೆ ಬಹುತೇಕ ಜನರು ಇಂದಿನ ದಿನಮಾನಗಳಲ್ಲಿ ಮೂಗು ಮರಿಯುತ್ತಾರೆ. ಸರ್ಕಾರಿ ಶಾಲಾ ಮಕ್ಕಳು ಅಂದರೆ ಅಸಡ್ಡೆಯಾಗಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಕೇವಲ ಸರಕಾರಿ ಶೈಕ್ಷಣಿಕ ಯೋಜನೆಗಳ ಅನುಷ್ಠಾನ, ಕಾಗದಪತ್ರಗಳಿಗೆ ಮಾತ್ರ ಸೀಮಿತ ಎಂಬ ಆಪಾದನೆ ಸಹ ಇದೆ. ಈ ನಡುವೆಯೂ ಕೆಲವು ಕಡೆಗಳಲ್ಲಿ ಸರ್ಕಾರಿ ಶಾಲೆಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿವೆ ಎನ್ನುವುದು ಸಮಾಧಾನ ಪಡುವ ಸಂಗತಿಯಾಗಿದೆ.
ಅಂದಹಾಗೆ ಸರ್ಕಾರಿ ಶಾಲೆಗಳ ಎಲ್ಲಾ ಅಪವಾದಗಳನ್ನು ಹೋಗಲಾಡಿಸಿ, ಶಾಲೆಗಳ ಅಭಿವೃದ್ಧಿಗೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಕಲಿಕಾಸಕ್ತಿ ಹೆಚ್ಚಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಅನುದಾನ ಒದಗಿಸುವ ಕೆಲಸ ನಿರಂತರವಾಗಿ ಮಾಡಬೇಕು. ಮಾಡುವ ಮೂಲಕ ಸರ್ಕಾರಿ ಶಾಲೆಗಳ ಸುಧಾರಣೆಗೆ ಒತ್ತು ನೀಡಿ, ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸ ಮಾಡುವಂತೆ ಯೋಜನೆಗಳು ಹಾಕಿಕೊಳ್ಳಬೇಕು.
ಸರ್ಕಾರಿ ಶಾಲೆಗೆ ಸೇರುವುದರಿಂದ ಆಗುವ ಪ್ರಯೋಜನ ಗಳು ಹೀಗಿವೆ :
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಪ್ರಯೋಜನಗಳು ಗಮನಿಸಿದರೆ ಬಹಳ ಸಂತಸ ಉಂಟಾಗುತ್ತದೆ.
ಸೌಲಭ್ಯಗಳನ್ನು ಗಮನಿಸಿದರೆ ಇದೇ ಶಾಲೆಗೆ ದಾಖಲಿಸಬೇಕೆಂಬ ಹಂಬಲ ಉಂಟಾಗುವುದು ಸಹಜ. ಅಷ್ಟರ ಮಟ್ಟಿಗೆ ಸೌಲಭ್ಯಗಳು ಅಲ್ಲಿವೆ. ಒಬ್ಬ ವಿದ್ಯಾರ್ಥಿ ಆ ಶಾಲೆಗೆ ದಾಖಲಾದ ಕೂಡಲೇ ಉಚಿತ ಪಠ್ಯ ಪುಸ್ತಕಗಳು ಸಿಗುತ್ತವೆ. ಉಚಿತ ಬ್ಯಾಗ್, ಉಚಿತ ಶೂ, ಮಧ್ಯಾಹ್ನದ ಬಿಸಿಯೂಟ, ಹಾಲು, ಬಸ್ಪಾಸ್, ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ಇತ್ಯಾದಿ ಸೌಲಭ್ಯಗಳು ದೊರಕುತ್ತವೆ. ಹಿಂದೆಲ್ಲ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದವು. ಶಾಲೆಗಳಿಗೆ ಹೋಗುವಾಗ ರೊಟ್ಟಿ, ಮುದ್ದೆ ಮಾಡುವ ಮಡಕೆ ತಳದ ಸೀಕು ಇತ್ಯಾದಿ.. ಏನು ಸಿಗುತ್ತದೋ ಅದನ್ನು ತಿಂದು ಸಂಜೆ ವಾಪಸ್ ಮನೆಗೆ ಬಂದಾಗಲೇ ಊಟ ಮಾಡಬೇಕಾಗಿತ್ತು. ನಿಗದಿತ ಸಮಯಕ್ಕೆ ಉಪಹಾರ, ಊಟ ಸಿಗುತ್ತಿರಲಿಲ್ಲ. ಸಮಯ ಆಯಿತೆಂದು ಬಹಳಷ್ಟು ಮಕ್ಕಳು ಊಟೋಪಚಾರವಿಲ್ಲದೇ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಶಾಲೆಯತ್ತ ದೌಡಾಯಿಸುತ್ತಿದ್ದರು. ಇದರಿಂದ ಆಗಿನ ಕಾಲಕ್ಕೆ ಅಪೌಷ್ಟಿಕತೆ ಹೆಚ್ಚಿತ್ತು. ಈಗ ಹಾಲಿನಿಂದ ಹಿಡಿದು ಬಿಸಿಯೂಟದವರೆಗೆ ಶಾಲೆಯಲ್ಲಿಯೇ ಸಿಗುತ್ತಿರುವಾಗ ವಿದ್ಯಾರ್ಥಿಗಳ ಆರೋಗ್ಯವೂ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ವ್ಯಾಸಂಗಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ.
ಇದರ ಜೊತೆಗೆ ಉಚಿತ ಬೈಸಿಕಲ್, ಪ್ರವಾಸ, ಪ್ರತಿಭಾ ಕಾರಂಜಿ, ವಿವಿಧ ವಿದ್ಯಾರ್ಥಿ ವೇತನಗಳು, ಹಾಜರಾತಿ ಶಿಷ್ಯ ವೇತನ, ಹೆಚ್ಚು ಅಂಕ ಪಡೆದ ಟಾಪರ್ಗಳಿಗೆ ಲ್ಯಾಪ್ಟಾಪ್ ವಿತರಣೆ ಇಂತಹ ಅನೇಕ ಯೋಜನೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿವೆ. ವಿದ್ಯಾರ್ಥಿ ವೇತನಗಳು ಮಕ್ಕಳ ಇತರೆ ವೆಚ್ಚಗಳನ್ನು ಸರಿದೂಗಿಸಲು ಸಹಕಾರಿಯಾಗುತ್ತಿವೆ. ವಿಶೇಷವಾಗಿ ಇಂತಹ ಸವಲತ್ತುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು ಹೆಚ್ಚು ಅಂಕಗಳಿಸುವತ್ತ ಇವೆಲ್ಲವೂ ಪೂರಕ ವಾತಾವರಣ ಸೃಷ್ಟಿಸಿವೆ.
ಸರ್ಕಾರಿ ಶಾಲೆಗಳಲ್ಲಿ ದೊರೆಯುವ ವಿಶೇಷ ಸೌಲಭ್ಯಗಳು :
೧. ಉಚಿತವಾದ ಶಿಕ್ಷಣ.
೨. ಪ್ರತಿಭಾವಂತ ಶಿಕ್ಷಕರಿಂದ ಬೋಧನೆ.
೩. ಪೋಷಕರಿಗೆ ಆರ್ಥಿಕ ಹೊರೆ ಇಲ್ಲ.
೪. ಉಚಿತವಾದ ಸಮವಸ್ತ್ರಗಳು.
೫. ಉಚಿತವಾದ ಪಠ್ಯಪುಸ್ತಕಗಳು.
೬. ಉಚಿತವಾದ ಸೈಕಲ್ಗಳು.
೭. ವಾರದ ೫ ದಿನ ಕ್ಷೀರಭಾಗ್ಯ.
೮. ಉತ್ತಮ ಕಂಪನಿಯ ಒಂದು ಜೊತೆ ಶೂ.
೯. ವಿದ್ಯಾರ್ಥಿ ವೇತನ.
೧೦. ವಿಕಲಚೇತನರಿಗೆ ವಿಶೇಷ ಸೌಲಭ್ಯಗಳು.
೧೧. ಗ್ರಂಥಾಲಯ ಸೌಲಭ್ಯ.
೧೨. ಪ್ರಯೋಗಾಲಯ.
೧೪. ಸುಸಜ್ಜಿತ ಕೊಠಡಿಗಳು..
೧೫. ನವೀನ ಶೌಚಾಲಯಗಳು.
೧೬. ಆಟದ ಮೈದಾನ.
೧೭. ಉಚಿತ ಕ್ರೀಡಾ ಸಾಮಗ್ರಿಗಳು.
೧೮. ನಲಿ-ಕಲಿ ಮೂಲಕ ಬೋಧನೆ.
೧೯. ೧ನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ.
೨೦. ಹೊಸದಾಗಿ ಎಲ್ ಕೆ ಜಿ/ ಯು ಕೆ ಜಿ ಆರಂಭ.
೨೧. ಪ್ರತಿಭಾಕಾರಂಜಿ ಕ್ರೀಡಾಕೂಟ ಆಯೋಜನೆ.
೨೨. ಸಿ ಸಿ ಇ ಮೂಲಕ ಬೋಧನೆ.
೨೩. ಟಿ ಎಲ್ ಎಂ ಮೂಲಕ ಬೋಧನೆ.
೩೪. ಪ್ರೋತ್ಸಾಹ ಪ್ರಶಸ್ತಿ ನೀಡುವ
ಮೂಲಕ ಭಾವಿ ವಿಜ್ಞಾನಿಗಳಿಗೆ ಉತ್ತೇಜನ..
೨೫. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ.
೨೬. ವಿದ್ಯಾರ್ಥಿನಿಯರಿಗೆ ಉಚಿತ ಶುಚಿ ಪ್ಯಾಡ್.
೨೭. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.
೨೮. ರೇಡಿಯೋ ಮೂಲಕ ಚುಕ್ಕಿ ಚಿನ್ನ, ಕೇಳಿ ಕಲಿ ಕಾರ್ಯಕ್ರಮ
೨೯. ಉಚಿತವಾದ ಕಂಪ್ಯೂಟರ್ ಶಿಕ್ಷಣ.
೩೦. ಮೌಲ್ಯಶಿಕ್ಷಣ..
೩೧. ಮಕ್ಕಳಿಂದಲೇ ನಿರ್ಮಿತವಾದ ಸುಂದರ ಕೈ ತೋಟ.
೩೨. ಅಕ್ಷರ ಪೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು.
೩೪. ಶಿಕ್ಷಣ ಕಲಿಕೆಯ ತಪಾಸಣೆಗಾಗಿ ದಕ್ಷ ಅಧಿಕಾರಿ/ ಮಾರ್ಗದರ್ಶಕರು.
೩೫. ಕಾಲ ಕಾಲಕ್ಕೆ ಶಿಕ್ಷಕರಿಗೆ ತರಬೇತಿ.
೩೬. ಮಕ್ಕಳ ಕಲಿಕೆ ಹಾಜರಾತಿ ದಾಖಲಿಸಲು ಸಾಟ್ಸ್ ವ್ಯವಸ್ಥೆ.
೩೭. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ.
೭೮. ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆ.
೩೯. ಸಂಸತ್ ರಚನೆಯ ಮೂಲಕ ಪ್ರಜಾಪ್ರಭುತ್ವ ಪರಿಚಯ
೪೦. ಶಾಲೆ ಉಸ್ತುವಾರಿಗಾಗಿ ಎಸ್ ಡಿ ಎಂ ಸಿ ರಚನೆ.
೪೧. ವಿವಿಧ ಸಂಘಗಳ ರಚನೆಯ ಮೂಲಕ ಮಕ್ಕಳಲ್ಲಿ ಜಾಗೃತಿ.
೪೨. ಶಾಲಾ ವಾರ್ಷಿಕೋತ್ಸವ
೪೩. ನವೋದಯ ಆದರ್ಶ, ಮೊರಾರ್ಜಿ, ಕಸ್ತೂರಿಬಾ, ಕಿತ್ತೂರು ರಾಣಿ ಚೆನ್ನಮ್ಮ , ಇಂದಿರಾ, ಏಕಲವ್ಯ, ವಾಜಪೇಯಿ ಕೆಪಿಎಸ್ ವಸತಿ ಶಾಲೆಗಳು.
೪೪. ಮಕ್ಕಳಿಗೆ ಎಲ್ಲ ರೀತಿಯ ಮೌಲ್ಯಗಳ ಬೆಳವಣಿಗೆಗೆ ಮುಕ್ತ ಅವಕಾಶ.
೪೫. ದೈರ್ಯ, ಆತ್ಮವಿಶ್ವಾಸ, ನಾಯಕತ್ವ, ಕಷ್ಟ ಸಹಿಷ್ಣುತೆ, ಬಡತನ ಸಿರಿತನ ಇತ್ಯಾದಿಗಳ ನೈಜ ಅನುಭವ.
೪೬. ಸರ್ಕಾರಿ ವೃತ್ತಿಯಲ್ಲಿ ಕನ್ನಡ ಮಾಧ್ಯಮ, ಗ್ರಾಮಾಂತರ ಕೋಟಾ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಲಭ್ಯವಿವೆ ಎನ್ನುವುದು ಪೋಷಕರು ಮರೆಯಬಾರದು.
ಮಾತೃಭಾಷೆಯಲ್ಲಿ ಕಲಿಕೆ :
ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಉತ್ತಮವಾಗಿವೆ ಎಂದು ಹೇಳುವುದು ಕೇವಲ ಪ್ರಚಾರಕ್ಕಾಗಿ. ವಾಸ್ತವದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.ಸಾರ್ವಜನಿಕರು ವಿಶೇಷವಾಗಿ ಪೋಷಕರು ಈ ನಿಟ್ಟಿನಲ್ಲಿ ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕಿದೆ. ಉಳಿದೆಡೆ ಸಮಾಜವು ತನ್ನ ಜವಾಬ್ದಾರಿ ಅರಿತು ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಜಾಗತಿಕ ಸ್ಪರ್ಧೆ ಹಾಗೂ ಉದ್ಯೋಗ ಎಂಬ ಚಿಂತೆಯಲ್ಲಿಯೇ ಪಾಲಕರು ಇಂಗ್ಲಿಷ್ ಮಾಧ್ಯಮ ಹಾಗೂ ಖಾಸಗಿ ಶಾಲೆಗಳ ಗೀಳು ಹೆಚ್ಚಿಸಿಕೊಂಡಿದ್ದಾರೆ. ಆದರೆ, ಯಾವುದೇ ವ್ಯಕ್ತಿಗೆ ಅಷ್ಟೊಂದು ಇಂಗ್ಲಿಷ್ ಅನಿವಾರ್ಯವಿಲ್ಲ. ಸಾಮಾನ್ಯ ಸಂವಹನಕ್ಕೆ ಕೇವಲ ೩೦೦ ಶಬ್ಧಗಳು ಸಾಕಾಗುತ್ತವೆ. ವೈಜ್ಞಾನಿಕ ಅಥವಾ ತಾಂತ್ರಿಕ ಸಂವಹನಗಳಿಗೆ ಸುಮಾರು ೩ ಸಾವಿರ ಇಂಗ್ಲಿಷ್ ಶಬ್ದಗಳ ಪರಿಚಯವಿದ್ದರೆ ಸಾಕು. ಈ ಹಿನ್ನೆಲೆಯಲ್ಲಿ ೬ ನೇ ತರಗತಿಯವರೆಗೆ ಇಂಗ್ಲಿಷ್ ಶಿಕ್ಷಣದ ಅನಿವಾರ್ಯತೆ ಹಾಗೂ ಅವಶ್ಯಕತೆ ಖಂಡಿತವಾಗಿಯೂ ಇಲ್ಲವೇ ಇಲ್ಲ. ಕಾರಣ ಪೋಷಕರು ಆಂಗ್ಲ ಭಾಷೆಯ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಆತ್ಮಸಾಕ್ಷಿಯಾಗಿ ಸಂಕಲ್ಪ ಮಾಡಬೇಕು. ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಮಾತ್ರ ಮಕ್ಕಳು ಅತ್ಯಂತ ಪರಿಣಾಮಕಾರಿಯಾಗಿ ಅವರ ಮುಂದಿನ ಜೀವನ ಯಶಸ್ವಿಯಾಗಿ ರೂಪಿಸಿಕೊಳ್ಳುತ್ತಾರೆ ಎನ್ನುವುದು ಅಷ್ಟೇ ಸತ್ಯವಾದ ವಿಚಾರವಾಗಿದೆ.
ಆಶಯ ನುಡಿ: ಕರ್ನಾಟಕ ಸರ್ಕಾರ ಆದಷ್ಟು ಬೇಗ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರಿಗೆ /ಓದಿದವರಿಗೆ ಶೇಕಡಾ ೭ ರಷ್ಟು ಮೀಸಲಾತಿ ನೀಡಬೇಕು. ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಈ ಮೂಲಕ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ/ಬೆಳವಣಿಗೆಗೆ ಸಹಕಾರಿಯಾಗಲಿದೆ.
*****
ಲೇಖಕರು : ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು,ಹೋರಾಟಗಾರರು.
ಬೀದರ ಜಿಲ್ಲೆ.