ವೈಶಿಷ್ಟ್ಯ ಲೇಖನ

ಅಪರಾಧ ತನಿಖಾ ಘಟಕ ( ಸಿ.ಐ.ಡಿ) ಈ ಕುರಿತು ಮಾಹಿತಿ ತುಂಬಾ ಮುಖ್ಯ

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 229/ಪಿಇಓ/73 ದಿನಾಂಕ: 15-04-1974ರ ಪ್ರಕಾರ 1974ರಲ್ಲಿ ತನಿಖಾ ದಳ ಸ್ಥಾಪಿಸಲಾಯಿತು. ಸರ್ಕಾರದ ಆದೇಶ ಪತ್ರ ಸಂಖ್ಯೆ: ಒಇ 127 ಸಿಒಡಿ 08 ದಿನಾಂಕ: 03-06-2009ರಲ್ಲಿ ಅಪರಾಧ ತನಿಖಾ ಘಟಕವೆಂದು ಮರು ನಾಮಾಂಕಿತವಾಯಿತು. ತದನಂತರ ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 04 ಪಿಒಪಿ 2013 ದಿನಾಂಕ: 12-02-2013 ರಲ್ಲಿ ಪುನರಚನೆ ಮಾಡಲಾಯಿತು.

ಕಾನೂನು ಮತ್ತು ತನಿಖೆಯಲ್ಲಿ ವಿಶೇಷ ಜ್ಞಾನದ ಅಗತ್ಯವಿರುವ ಪ್ರಮುಖವಾದ ಗಂಭೀರ ಅಪರಾಧಗಳು, ಆರ್ಥಿಕ ಮತ್ತು ಹಣಕಾಸಿನ ಅಪರಾಧಗಳ ತನಿಖೆಯನ್ನು ನಡೆಸಿ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಗರಿಷ್ಠ ಸಾಧನೆ ಸಾಧಿಸಿ ಸಾರ್ವಜನಿಕರಲ್ಲಿ ಪೊಲೀಸ್ ಆಡಳಿತದಲ್ಲಿ ವಿಶ್ವಾಸ ಹಾಗೂ ನಂಬಿಕೆ ಮೂಡಿಸುವ ಉದ್ದೇಶದಿಂದ ಸರ್ಕಾರವು ಅಪರಾಧ ತನಿಖಾ ವಿಭಾಗವನ್ನು ಸ್ಥಾಪಿಸಿರುತ್ತದೆ.

(i) ಸಂಸ್ಥೆ :

(i)    ಅಪರಾಧ ತನಿಖಾ ವಿಭಾಗವು ಈ ಕೆಳಗಿನ ಶಾಖೆಗಳನ್ನೊಳಗೊಂಡಿದೆ.

 1. ಅಪರಾಧ ತನಿಖಾ ವಿಭಾಗ
 2. ಆರ್ಥಿಕ ಅಪರಾಧಗಳ ಶಾಖೆ
 3. ವಿಶೇಷ ಘಟಕ-ಸಿಐಡಿ-ಅರಣ್ಯ ಘಟಕ

(ii) ಅಪರಾಧ ತನಿಖಾ ವಿಭಾಗದ ಮುಖ್ಯಸ್ಥರು ಪೊಲೀಸ್ ಮಹಾನಿರ್ದೇಶಕರವರ ಶ್ರೇಣಿಯವರಾಗಿರುತ್ತಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು/ಪೊಲೀಸ್ ಮಹಾನಿರೀಕ್ಷಕರು, ಪೊಲೀಸ್ ಉಪಮಹಾನಿರೀಕ್ಷಕರು ಮತ್ತು ಇತರೆ ಶ್ರೇಣಿಯ ಅಧಿಕಾರಿಗಳು ಇವರಿಗೆ ಸಹಾಯಕರಾಗಿರುತ್ತಾರೆ. ಈ ಸಂಸ್ಥೆಯು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು, ಕರ್ನಾಟಕ ರಾಜ್ಯರವರ ಸಮಸ್ತ ಆಡಳಿತಾತ್ಮಕ ನಿಯಂತ್ರಣದಲ್ಲಿರುತ್ತದೆ.

(iii) ಸಿಐಡಿ ಮತ್ತು ಆರ್ಥಿಕ ಅಪರಾಧ ವಿಭಾಗದಲ್ಲಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರುಗಳು/ಪೊಲೀಸ್ ಮಹಾನಿರೀಕ್ಷಕರುಗಳು, ಸಿಐಡಿಗೆ ವಹಿಸಲ್ಪಟ್ಟ ತನಿಖಾ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ಮಾಡಲು, ಸಿಐಡಿಯ ಪೊಲೀಸ್ ಮಹಾನಿರ್ದೇಶಕರಿಗೆ ಸಹಾಯ ಮಾಡುತ್ತಾರೆ ಮತ್ತು ಸಿಐಡಿ ಕಛೇರಿಯ ಆಡಳಿತದ ಮೇಲೆ ನಿಯಂತ್ರಣಾಧಿಕಾರ ಚಲಾಯಿಸುತ್ತಾರೆ. ಅವರು ಡಿಐಜಿ, ಸಿಐಡಿ ಮತ್ತು ಡಿಐಜಿ, ಆರ್ಥಿಕ ಅಪರಾಧರವರ ಕೆಲಸಗಳ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಪ್ರಕರಣಗಳ ತನಿಖೆಯ ಪ್ರಗತಿಯನ್ನು ವಿಮರ್ಶೆ ಮಾಡುವ ಮೂಲಕ ಸಿಐಡಿಯ ವಿವಿಧ ವಿಭಾಗಗಳ ಪ್ರಕರಣಗಳ ತನಿಖೆಯ ಮೇಲೆ ನಿಗಾವಹಿಸುತ್ತಾರೆ. ಪ್ರಧಾನ ಕಚೇರಿಯ ಪರಿಷ್ಕೃತ ಸ್ಥಾಯಿ ಆದೇಶ ಸಂಖ್ಯೆ: 704 ರನ್ವಯ ವಿಶೇಷ ಘಟಕಗಳಾದ:-

೧) ಅಪರಾಧ ತನಿಖಾ ವಿಭಾಗ
೨) ಪೊಲೀಸ್ ಗಣಕ ವಿಭಾಗ
೩) ಅಪರಾಧ ಮತ್ತು ತಾಂತ್ರಿಕ ಸೇವೆಗಳು
೪) ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ
೫) ಅರಣ್ಯ ಘಟಕ
೬) ರಾಜ್ಯ ಅಪರಾಧ ದಾಖಲಾತಿ ವಿಭಾಗ
೭) ಬೆರಳು ಮುದ್ರೆ ಘಟಕ
೮) ವಿಧಿ ವಿಜ್ಞಾನ ಪ್ರಯೋಗಾಲಯ

ಇವುಗಳಿಗೆ ಸಂಬಂಧಿಸಿದಂತೆ ದ್ವಿತೀಯ ದರ್ಜೆ ಸಹಾಯಕರು / ಬೆರಳಚ್ಚುಗಾರರು ಮತ್ತು ಪ್ರಥಮ ದರ್ಜೆ ಸಹಾಯಕರು / ಶೀಘ್ರಲಿಪಿಗಾರರ ಹುದ್ದೆಗಳ ಜ್ಯೇಷ್ಠತೆ ಹಾಗೂ ಮುಂಬಡ್ತಿಗೆ ಸಂಬಂಧಿಸಿದಂತೆ, ವಲಯ / ಘಟಕಾಧಿಕಾರಿಗಳ ವ್ಯಾಪ್ತಿಗಳನ್ನು ನಿರ್ಧರಿಸುವುದು ಡಿಜಿಪಿ, ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರುರವರ ನಿಯಂತ್ರಣದಲ್ಲಿರುತ್ತದೆ.

(iv) ಉಪ ಪೊಲೀಸ್ ಮಹಾನಿರೀಕ್ಷಕರು, ಸಿಐಡಿರವರು ಸಿಐಡಿ ಶಾಖೆ, ಆರ್ಥಿಕ ಅಪರಾಧ ಶಾಖೆ ಮತ್ತು ಅರಣ್ಯ ಘಟಕದ ಸಾಮಾನ್ಯ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಆರ್ಥಿಕ ಅಪರಾಧ ಶಾಖೆಯ ಉಪ ಪೊಲೀಸ್ ಮಹಾನಿರೀಕ್ಷಕರು ತಮ್ಮ ಶಾಖೆಯಲ್ಲಿನ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗಳ ಮೇಲ್ವಿಚಾರಣೆ ನಡೆಸುತ್ತಾರೆ. ಈ ಇಬ್ಬರೂ ಡಿಐಜಿಪಿಗಳು ತಮ್ಮ ಅಧೀನದಲ್ಲಿನ ವಿಭಾಗಗಳಿಗೆ ಸಂಬಂಧಿಸಿದ ಪೊಲೀಸ್ ಅಧೀಕ್ಷಕರು ಮತ್ತು ಇತರೆ ಅಧಿಕಾರಿಗಳ ಕರ್ತವ್ಯದ ಮೇಲ್ವಿಚಾರಣೆ ಮಾಡಿ, ತನಿಖಾ ಕಾರ್ಯದಲ್ಲಿ ಮಾರ್ಗದರ್ಶನ ನೀಡಿ, ಪ್ರಕರಣಗಳು ಶೀಘ್ರ ಮತ್ತು ನಿಗದಿತ ಸಮಯದಲ್ಲಿ ವಿಲೇವಾರಿಯಾಗುವಂತೆ ಗಮನಹರಿಸುತ್ತಾರೆ.

ಸಿಐಡಿ ಶಾಖೆ

ಈ ಶಾಖೆಯ ಎಡಿಜಿಪಿ/ಐಜಿಪಿ, ಸಿಐಡಿ ಹಾಗೂ ಡಿಐಜಿಪಿ, ಸಿಐಡಿರವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಅಧೀಕ್ಷಕರುಗಳ ಮೇಲುಸ್ತುವಾರಿಯಲ್ಲಿ ಈ ಕೆಳಕಂಡ ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ.

 

ಇಂಟರ್‌ಪೋಲ್‌ ವಿಭಾಗ :

ಈ ವಿಭಾಗವು ಇಂಟರ್‌ಪೋಲ್ ಲಯೇಸನ್ ಅಧಿಕಾರಿಯಾಗಿರುವ ಎಡಿಜಿಪಿ/ಐಜಿಪಿ, ಸಿಐಡಿರವರ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ತಾಂತ್ರಿ ಕಸಹಾಯ ವಿಭಾಗ :

ಈ ವಿಭಾಗವು ಎಡಿಜಿಪಿ/ಐಜಿಪಿ, ಸಿ.ಐ.ಡಿ ರವರ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತದೆ.

1.    ಆಡಳಿತ ವಿಭಾಗ :

ಪೊಲೀಸ್ ಅಧೀಕ್ಷಕರು (ಐಪಿಎಸ್ ದರ್ಜೆಯ ಹುದ್ದೆ) –

(i)    ಆಡಳಿತ :
 • ಜಿಲ್ಲೆಗಳಲ್ಲಿನ ಪೊಲೀಸ್ ಅಧೀಕ್ಷಕರು ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಚಲಾಯಿಸುವ ವಿತ್ತಾಧಿಕಾರ/ಆಡಳಿತಾತ್ಮಕ ಅಧಿಕಾರವನ್ನು ನಿರ್ವಹಿಸುವುದು.
 • ಆಡಳಿತಾಧಿಕಾರಿ ಮತ್ತು ಲಿಪಿಕ ಸಿಬ್ಬಂದಿ ವರ್ಗದ ಕರ್ತವ್ಯದ ಮೇಲ್ವಿಚಾರಣೆ.
 • ವಾಹನ ಸಾರಿಗೆ ವಿಭಾಗದ ಮೇಲ್ವಿಚಾರಣೆ.
 • ಕಟ್ಟಡ ಮತ್ತು ಎಸ್ಟೇಟ್ – ಎಸ್ಟೇಟ್ ಅಧಿಕಾರಿ.
 • ಇತರೆ ದೂರುಗಳು, ಶಾಸಕಾಂಗದ ಕಾರ್ಯಗಳು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ / ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಸಮನ್ವಯ ಇತ್ಯಾದಿ.
 • ಸಹಾಯಕ ಇಂಟರ್‌ಪೋಲ್ ಸಮನ್ವಯ ಅಧಿಕಾರಿಯಾಗಿ ನೇರವಾಗಿ ಎಡಿಜಿಪಿ/ಐಜಿಪಿ ಸಿಐಡಿ ರವರಿಗೆ ವರದಿ ಮಾಡುವುದು.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಯಾವುದೇ ಕರ್ತವ್ಯಗಳು.
 (ii) ಕ್ರಿಮಿನಲ್ ಇಂಟೆಲಿಜೆನ್ಸ್ ಯುನಿಟ್ :

ಕ್ರಮಯೋಗ್ಯ ಅಪರಾಧಗಳ ಕುರಿತು ಮಾಹಿತಿ ಸಂಗ್ರಹಿಸಿ ವಲಯಾಧಿಕಾರಿಗಳಿಗೆ ಸಹಕರಿಸಲು ಅನುಕೂಲವಾಗುವಂತೆ ಪ್ರತಿ ಪೊಲೀಸ್ ವಲಯದಲ್ಲಿ ಅಂದರೆ ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ಧಾರವಾಡ ಮತ್ತು ಮಂಗಳೂರು ಕೇಂದ್ರ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುವುದು. ಈ ಘಟಕಗಳು ಸಂಬಂಧಿಸಿದ ವಲಯಗಳ ಭೌಗೋಳಿಕ ವ್ಯಾಪ್ತಿಗೆ ಸೇರಿದ ಜಿಲ್ಲಾ ಪೊಲೀಸ್ ಘಟಕ ಹಾಗೂ ನಗರ ಪೊಲೀಸ್ ಘಟಕಗಳೊಂದಿಗೆ ಅಪರಾಧ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು.

2.    ನರಹತ್ಯೆ ಮತ್ತು ಚೌರ‍್ಯ ವಿಭಾಗ :
 • ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ಪ್ರಮುಖವಾದ ಮತ್ತುಎಲ್ಲಾ ಕ್ಲಿಷ್ಟಕರವಾದ ಕೊಲೆ ಮತ್ತು ಲಾಭಕ್ಕಾಗಿ ಕೊಲೆಯಂತಹ ಪ್ರಕರಣಗಳು.
 • ಪೊಲೀಸ್ ಅಭಿರಕ್ಷೆಯಲ್ಲಿನ ಎಲ್ಲಾ ಸಾವಿನ ಪ್ರಕರಣಗಳು.
 • ವೃತ್ತಿಪರ ವಿಷ ಪ್ರಯೋಗ ಪ್ರಕರಣಗಳು.
 • ಸ್ವತ್ತಿನ ಪ್ರಕರಣಗಳು ಅಂದರೆ ದರೋಡೆ, ಲೂಟಿ, ಮನೆ ಕನ್ನ ಕಳವು ಮತ್ತು ಕಳ್ಳತನ (ವಿಶೇಷವಾಗಿ ಅಂತರರಾಜ್ಯ ಅಪರಾಧಿಗಳಿಂದ ಎಸಗಲ್ಪಟ್ಟ ಪ್ರಕರಣಗಳು).
 • ಇತರೆ ಅಪರಾಧಿಕ ಗುಂಪುಗಳ ಪ್ರಕರಣಗಳು.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಯಾವುದೇ ಕರ್ತವ್ಯಗಳು.
3.    ವಿಶೇಷ ವಿಚಾರಣೆಗಳ ವಿಭಾಗ :
 • ವ್ಯಕ್ತಿ ಹಾಗೂ ಸಂಸ್ಥೆಗಳ ಕುರಿತು ಸರ್ಕಾರ ಅಥವಾ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಸಿಐಡಿಗೆ ವಹಿಸುವ ಪ್ರಕರಣಗಳ ಗೌಪ್ಯ ವಿಚಾರಣೆಗಳು
 • ನರಹತ್ಯೆ, ಚೌ್ರ‍್ಯ, ಸ್ಥಳೀಯ ಮತ್ತು ವಿಶೇಷ ಕಾಯ್ದೆಗಳಿಂದ ಹೊರತಾದ ಐಪಿಸಿ ಪ್ರಕರಣಗಳು.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಯಾವುದೇ ಕರ್ತವ್ಯಗಳು.
4.    ಮಾನವಕಳ್ಳಸಾಗಾಣಿಕೆ ವಿರೋಧಿ ಘಟಕ :
 • ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 154 ಪಿಸಿಸಿ 2007, ದಿನಾಂಕ: 10.02.2013 ರನ್ವಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವೆಗಳು ರವರನ್ನು ಮಾನವ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತಹ ಪ್ರಕರಣಗಳು, ಜಿಲ್ಲೆ / ಕಮಿಷನರೇಟ್‌ಗಳಲ್ಲಿನ ಮಾನವ ಕಳ್ಳ ಸಾಗಾಣಿಕೆ ಘಟಕಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ, ವಿಶ್ವಸಂಸ್ಥೆ, ಸರ್ಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯಗಳು ಗೊತ್ತುಪಡಿಸಿದಂತಹ ಕರಾರುಗಳ ಪ್ರಕಾರ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿರುತ್ತದೆ.
 • ಎಲ್ಲಾ ಅಭಿರಕ್ಷೆಯಲ್ಲಿನ ಅತ್ಯಾಚಾರ.
 • ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು.
 • ಲಿಂಗ ಸಂವೇದನಾಶೀಲತೆಯ ಕುರಿತು ಪರಿಣತಿಯನ್ನು ಅಭಿವೃದ್ಧಿಪಡಿಸುವುದು ಮತ್ತು   ತರಬೇತಿ   ಆಯೋಜಿಸುವುದು.
 • ನಾಪತ್ತೆಯಾದ ವ್ಯಕ್ತಿಗಳ/ಪತ್ತೆ ಹಚ್ಚಲಾಗದ ಶವಗಳ ವಿವರಗಳ ಬ್ಯೂರೋ.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಯಾವುದೇ ಕರ್ತವ್ಯಗಳು.

ಆರ್ಥಿಕ ಅಪರಾಧಗಳ ಶಾಖೆ

ಆರ್ಥಿಕ ಅಪರಾಧಗಳ ಶಾಖೆಯು ಎಡಿಜಿಪಿ/ಐಜಿಪಿ, ಆರ್ಥಿಕ ಅಪರಾಧಗಳು ಮತ್ತು ಡಿಐಜಿಪಿ, ಆರ್ಥಿಕ ಅಪರಾಧಗಳು ರವರ ಮೇಲ್ವಿಚಾರಣೆಯಲ್ಲಿ ಈ ಕೆಳಕಂಡ ವಿಭಾಗಗಳನ್ನು ಒಳಗೊಂಡಿರುತ್ತದೆ.

 

1.    ಸೈಬರ್‌ ಅಪರಾಧ ವಿಭಾಗ (ಐಪಿಎಸ್ ದರ್ಜೆಯ ಹುದ್ದೆ) :
 • ಸೈಬರ್ ಅಪರಾಧ ಪೊಲೀಸ್ ಠಾಣೆ -ಮಾಹಿತಿ ತಂತ್ರಜ್ಞಾನ ಅಧಿನಿಯಮದಡಿಯ ಪ್ರಕರಣಗಳ ತನಿಖೆ ನಡೆಸುವುದು.
 • ಇಂಟರ್‌ನೆಟ್ / ಟೆಲಿಕಾಂ ಸೇವಾ ಪೂರೈಕೆದಾರರೊಡನೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುವುದು.
 • ಸೈಬರ್ ಫೊರೆನ್ಸಿಕ್ ವಿಭಾಗ – ಈ ವಿಭಾಗವು ಡಿ.ಜಿ.ಪಿ, ಸಿಐಡಿ ರವರ ನೇರ ಉಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುವುದು. ಈ ಘಟಕಕ್ಕೆ ಸಿಐಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರಲ್ಲಿ ತರಬೇತಿ ಹೊಂದಿದ ಹಾಗೂ ಅಧಿಕೃತ ಪ್ರಮಾಣ ಪತ್ರ ಪಡೆದಿರುವ (Trained & Certified) ಡಿವೈಎಸ್‌ಪಿ/ಪಿಐ/ಪಿಎಸ್‌ಐ ಗಳನ್ನು ಕೆಲಸ ನಿರ್ವಹಿಸಲು ನಿಯೋಜಿಸುವುದು.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಕರ್ತವ್ಯಗಳು
2.    ಆರ್ಥಿಕ ಅಪರಾಧಗಳ ವಿಭಾಗ :
 • ವಂಚನೆ ಮತ್ತು ಹಣ ದುರ್ಬಳಕೆ ಪ್ರಕರಣಗಳ ತನಿಖೆ ಹಾಗೂ ವಿಚಾರಣೆ (ಬ್ಯಾಂಕಿಂಗ್ ವಲಯವನ್ನು ಹೊರತುಪಡಿಸಿ).
 • ಸಹಕಾರಿ ಸಂಘ ಸಂಸ್ಥೆಗಳನ್ನು ಒಳಗೊಂಡಂತಹ ವಂಚನೆಗಳು.
 • ಮೋಸ ಮತ್ತು ನಕಲಿ ದಾಖಲೆ/ಸಹಿ ಸೃಜನೆ.
 • ನಂಬಿಕೆ ದ್ರೋಹದ ಪ್ರಕರಣಗಳು.
 • ಸರ್ಕಾರ ಮತ್ತು ಇತರೆ ಸಂಸ್ಥೆಗಳಿಗೆ ಸೇರಿದ ಹಣದ ದುರ್ಬಳಕೆ.
 • ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಯಾವುದೇ ಕರ್ತವ್ಯಗಳು.
3.    ಫೈನಾನ್ಷಿಯಲ್ ಇಂಟೆಲಿಜೆನ್ಸ್‌ ವಿಭಾಗ :
 • ಸರ್ಕಾರ ಮತ್ತು ಸರ್ಕಾರೇತರ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತಹ ಒಂದು ಕೋಟಿ ರೂಪಾಯಿಗೆ ಮೀರಿದಂತಹ ಎಲ್ಲಾ ವಂಚನೆ ಮತ್ತು ಅವ್ಯವಹಾರಗಳ ತನಿಖೆ.
 • ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನೀಸ್.
 • ಭಾರತೀಯ ರಿಜರ್ವ್ ಬ್ಯಾಂಕ್, ಜಾರಿ ನಿರ್ದೇಶನಾಲಯ, ಡಿಆರ್‌ಐ ಸಂಸ್ಥೆಗಳೊಂದಿಗೆ ಮತ್ತು ಕಂಪೆನಿ ಕಾಯ್ದೆಗೆ ಸಂಬಂಧಿಸಿದಂತಹ ಪ್ರಕರಣಗಳಿಗೆ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುವುದು.
 • ಕಂಪನಿ ಕಾನೂನುಗಳಡಿಯಲ್ಲಿ ಜಾರಿ ನಿರ್ದೇಶನಾಲಯ ಡಿಆರ್‌ಐಗಳ ಪ್ರಕರಣಗಳು.
 • ಕಾಫಿಪೋಸಾ (COFEPOSA), ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಮತ್ತು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (PMLA) ಕಾಯ್ದೆಗೆ ಸಂಬಂಧಿಸಿದ ವಿಷಯಗಳು.
 • ಆರ್ಥಿಕ ಅಪರಾಧಗಳ ನಡೆಯುವ ಸಾಧ್ಯತೆಯ ಬಗ್ಗೆ ಮುಂಗಡ ಮಾಹಿತಿ ಸಂಗ್ರಹಿಸಿ, ಸಂಬಂಧಿಸಿದ ಘಟಕಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದು.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಯಾವುದೇ ಕರ್ತವ್ಯಗಳು.
4.    ಖೋಟಾನೋಟು, ಆಯುಧ, ಮಾದಕವಸ್ತು ಮತ್ತು ಶಿಲ್ಪ ವಿಭಾಗ :

ಖೋಟಾ ನೋಟು,

 • ಖೋಟಾ ನಾಣ್ಯ
 • ಸರ್ಕಾರದ ಆಯುಧ ಮತ್ತು ಮದ್ದುಗುಂಡುಗಳ ಕಳವು ಮತ್ತು ಆಯುಧಗಳ ಅಕ್ರಮ ಮಾರಾಟ.
 • ಆಯುಧ / ಸ್ಫೋಟಕ ವಸ್ತುಗಳ ಅಕ್ರಮ ತಯಾರಿಕೆ ಮತ್ತು ಮಾರಾಟ.
 • ಮಾದಕ ದ್ರವ್ಯಗಳ ಹಾಗೂ ಮತ್ತು ಬರಿಸುವ ವಸ್ತುಗಳ ಕಳ್ಳ ಸಾಗಾಣಿಕೆ.
 • ಮಾದಕ ದ್ರವ್ಯ ಘಟಕ, ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಇವುಗಳ ಉಸ್ತುವಾರಿ ಮತ್ತು ಮೇಲ್ವಿಚಾರಣೆ.
 • ಕೃತಿ ಚೌ್ರ‍್ಯ ಕಾಯ್ದೆಯಡಿಯಲ್ಲಿ ಬರುವ ಸಂಗೀತ/ವಿಡಿಯೋ/ಪುಸ್ತಕ/ ಗಣಕಯಂತ್ರ/ಮೊಬೈಲ್ ಹಾರ್ಡ್‌ವೇರ್ ಮತ್ತು ಸಾಫ್ಟ್ ವೇರ್ ಇತ್ಯಾದಿಗಳನ್ನು ನಕಲು ಮಾಡುವುದರ ವಿರುದ್ದದ ಪ್ರಕರಣಗಳು.
 • ಶಿಲ್ಪ ಕಳವು ಪ್ರಕರಣಗಳು- Antiquities & Art Treasures Act, 1972ರ ಅಡಿ.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರೆ ಯಾವುದೇ ಕರ್ತವ್ಯಗಳು.
5.    ಸೈಬರ್‌ ತರಬೇತಿ ಮತ್ತು ಸಂಶೋಧನಾ ವಿಭಾಗ :
 • ರಾಜ್ಯಾದ್ಯಂತ ಪೊಲೀಸ್ ಘಟಕಗಳಿಗೆ ಸೈಬರ್ ಅಪರಾಧಗಳ ತನಿಖೆಗೆ ಸಂಬಂಧಿಸಿದ ತರಬೇತಿ ನೀಡುವುದು.
 • ಸಿಐಡಿ ಘಟಕದ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುವುದು.
 • ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಘಟಕದ (CCPWC)ಉಸ್ತುವಾರಿ.
 • ಸೈಬರ್ ಕ್ರೈಂ ವಿಭಾಗದ ಸಹಯೋಗದೊಂದಿಗೆ ರಾಷ್ಟ್ರೀಯ ಸೈಬರ್ ಅಪರಾಧಗಳ ಬಗ್ಗೆ ಸಮನ್ವಯ ಸಾಧಿಸುವುದು.
 • ರಾಜ್ಯದಲ್ಲಿರುವ ಎಲ್ಲಾ CEN (Cyber, Economic and Narcotic Offences) ಪೊಲೀಸ್ ಠಾಣೆಗಳ ಸಾಮರ್ಥ್ಯ ವೃದ್ಧಿಸುವುದು ಮತ್ತು ತನಿಖೆಯಲ್ಲಿ ತಾಂತ್ರಿಕ ಸಹಕಾರ ನೀಡುವುದು.
 • ಸಿ.ಐ.ಡಿ ಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು.
 • ಮೇಲಾಧಿಕಾರಿಗಳು ವಹಿಸಿದ ಇನ್ನಿತರ ಯಾವುದೇ ಕರ್ತವ್ಯಗಳು.
ಸಿಐಡಿ ಘಟಕಕ್ಕೆ  ಪ್ರಕರಣಗಳನ್ನು ವರ್ಗಾಯಿಸುವ ಮತ್ತು ವಿಭಾಗಕ್ಕೆ ಮರು ಹಂಚಿಕೆ ಮಾಡುವ ವಿವೇಚನಾಧಿಕಾರ :

ಕರ್ನಾಟಕ ಸರ್ಕಾರ, ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ ಹಾಗೂ ಸರ್ವೋಚ್ಛ /ಉಚ್ಛ ನ್ಯಾಯಾಲಯಗಳು ವಹಿಸಿದ ಪ್ರಕರಣಗಳ ತನಿಖೆಯನ್ನು ಮಾತ್ರ ಸಿಐಡಿಯು ಮಾಡತಕ್ಕದ್ದು. ಪೊಲೀಸ್ ಅಭಿರಕ್ಷೆಯೊಳಗಿನ ಮರಣ ಪ್ರಕರಣಗಳ ತನಿಖೆಯನ್ನು ಯಾವುದೇ ಆದೇಶವಿಲ್ಲದೆ ಸಿಐಡಿಗೆ ತೆಗೆದುಕೊಳ್ಳಲಾಗುತ್ತದೆ.

ತನಿಖೆಯು ಒಂದಕ್ಕಿಂತ ಹೆಚ್ಚಿನ ವಿಭಾಗಗಳ ವ್ಯಾಪ್ತಿಗೆ ಬರುವ ಪ್ರಕರಣಗಳನ್ನು ಯಾವುದೇ ನಿರ್ದಿಷ್ಟ ವಿಭಾಗಕ್ಕೆ ಮರು ಹಂಚಿಕೆ ಮಾಡಲು ಸಿ.ಐ.ಡಿ. ಮಹಾನಿರ್ದೇಶಕರಿಗೆ ಸಂಪೂರ್ಣ ವಿವೇಚನಾಧಿಕಾರವಿರುತ್ತದೆ. ಸಿಐಡಿಯ ಮಹಾನಿರೀಕ್ಷಕರು ಮತ್ತು ಉಪ ಮಹಾನಿರೀಕ್ಷಕರಿಗೂ ಸಹ ಅದೇ ರೀತಿಯ ಅಧಿಕಾರವಿರುತ್ತದೆ.

(ii) ಪೊಲೀಸ್ ಅಧೀಕ್ಷಕರ ಮತ್ತು ಇತರೆ ಅಧಿಕಾರಿಗಳ ಕರ್ತವ್ಯಗಳು
ಪೊಲೀಸ್ ಅಧೀಕ್ಷಕರು :

ಒಂದು ವಿಭಾಗದ ಪ್ರಭಾರದಲ್ಲಿರುವ ಪೊಲೀಸ್ ಅಧೀಕ್ಷಕರು ಆ ವಿಭಾಗದ ಸರಿಯಾದ ಮತ್ತು ಪರಿಣಾಮಕಾರಿಯಾದ ಕಾರ್ಯ ನಿರ್ವಹಣೆಗೆ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ದಾಖಲೆಗಳನ್ನು ಮತ್ತು ದಸ್ತಾವೇಜುಗಳನ್ನು ಕಾಲಕಾಲಕ್ಕೆ ಪರಿಷ್ಕರಣೆ ಆಗುವಂತೆ ಅವರು ನೋಡಿಕೊಳ್ಳುತ್ತಾರೆ. ತನಿಖೆಯ ಪ್ರಗತಿಯ ಮೇಲ್ವಿಚಾರಣೆಯನ್ನು ಸ್ವತಃ ಮಾಡುತ್ತಾ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಾರೆ ಮತ್ತು ತಮ್ಮ ಮೇಲಾಧಿಕಾರಿಗಳಿಗೆ ಎಲ್ಲಾ ನಿಗದಿತ ವರದಿಗಳನ್ನು ಕಳುಹಿಸುತ್ತಾರೆ. ಮುಖ್ಯ ಪ್ರಕರಣಗಳಲ್ಲಿ ಸ್ವತಃ ತಾವೇ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾರೆ. ತಮ್ಮ ವಿಭಾಗಕ್ಕೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ವಿಚಾರಣೆಗಳಲ್ಲಿ ಸತ್ರ ನ್ಯಾಯಾಲಯಕ್ಕೆ ಅವರು ಹಾಜರಾಗತಕ್ಕದ್ದು.

ಪೊಲೀಸ್ ಉಪಾಧೀಕ್ಷಕರು :

ಪೊಲೀಸ್ ಉಪಾಧೀಕ್ಷಕ /ಡಿಟೆಕ್ಟಿವ್ ಪೊಲೀಸ್ ಉಪಾಧೀಕ್ಷಕ/ ಸಹಾಯಕ ಪೊಲೀಸ್ ಅಧೀಕ್ಷಕ: ಇವರು ಪೊಲೀಸ್ ಅಧೀಕ್ಷಕರಿಗೆ ತಮ್ಮ ವಿಭಾಗದ ಕಛೇರಿ ಮತ್ತು ತನಿಖಾ ಕಾರ್ಯದಲ್ಲಿ ಸಹಾಯ ಮಾಡುತ್ತಾರೆ. ಇವರು ತಮಗೆ ವಹಿಸಿದ ಪ್ರಕರಣಗಳ ತನಿಖೆಯನ್ನು ನಿರ್ವಹಿಸುವುದರೊಂದಿಗೆ, ತಮ್ಮ ಅಧೀನದಲ್ಲಿನ ಅಧಿಕಾರಿ/ ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಮೇಲ್ವಿಚಾರಣೆ ಮಾಡುತ್ತಾರೆ. ಹಿರಿಯ ಅಧಿಕಾರಿಗಳು ಆಥವಾ ವಿಭಾಗದ ಪೊಲೀಸ್‌ ಅಧೀಕ್ಷಕರರವರ ಆದೇಶದ ಮೇರೆಗೆ ತಮ್ಮ ವಿಭಾಗಕ್ಕೆ ಸಂಬಂಧಪಟ್ಟ ಪ್ರಮುಖ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗತಕ್ಕದ್ದು.

 ಪೊಲೀಸ್ ನಿರೀಕ್ಷಕರು/ಡಿಟೆಕ್ಟಿವ್ ನಿರೀಕ್ಷಕರು :

ಪೊಲೀಸ್ ನಿರೀಕ್ಷಕರು/ಡಿಟೆಕ್ಟಿವ್ ನಿರೀಕ್ಷಕರು:ಇವರು ಪೊಲೀಸ್ ಅಧೀಕ್ಷಕರಿಗೆ ತಮ್ಮ ವಿಭಾಗದ ಕಛೇರಿ ಮತ್ತು ತನಿಖಾ  ಕಾರ್ಯದಲ್ಲಿ ಸಹಾಯ ಮಾಡುತ್ತಾರೆ. ಇವರು ತಮಗೆ ವಹಿಸಿದ ಪ್ರಕರಣಗಳ ತನಿಖೆಯನ್ನು ನಿರ್ವಹಿಸುವುದರೊಂದಿಗೆ, ತಮ್ಮ ಅಧೀನದಲ್ಲಿನ ಅಧಿಕಾರಿ/ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಮೇಲ್ವಿಚಾರಣೆ ಮಾಡುತ್ತಾರೆ.  ತಮ್ಮ ವಿಭಾಗಕ್ಕೆ ಸಂಬಂಧಪಟ್ಟ ಪ್ರಮುಖ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗತಕ್ಕದ್ದು.

ಡಿಟೆಕ್ಟಿವ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ :

ವೃಂದ ಮತ್ತು ನೇಮಕಾತಿ ನಿಯಮದಂತೆ ಡಿಟೆಕ್ಟಿವ್ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲಾಗುವುದು. ಇವರು ಸಿ.ಐ.ಡಿ ಕಛೇರಿಗೆ ಮಾತ್ರ ಸೀಮಿತವಾಗಿರುತ್ತಾರೆ. ಇವರು ಸ್ನಾತಕೋತ್ತರ ಪದವೀಧರರಾಗಿರುತ್ತಾರೆ. ಇವರುಗಳು ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆ (ಸಿ.ಡಿ.ಟಿ.ಐ), ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಮತ್ತು ರಾಷ್ಟೀಯ ತನಿಖಾ ದಳ (ಎನ್.ಐ.ಎ) ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಹೊಂದಿರುತ್ತಾರೆ.

ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್/ಮುಖ್ಯ ಕಾನ್‌ಸ್ಟೇಬಲ್/ಪೊಲೀಸ್ ಕಾನ್‌ಸ್ಟೇಬಲ್

ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಮತ್ತು ಇತರೆ ಶ್ರೇಣಿಯ ಸಿಬ್ಬಂದಿಯನ್ನು ಆಯ್ಕೆಗೆ ಪರಿಗಣಿಸುವಾಗ ಈ ಕೆಳಕಂಡ ಸಾಮಾನ್ಯ ನಿಯಮಗಳನ್ನು ಅನುಸರಿಸತಕ್ಕದ್ದು:
ಸಿ.ಐ.ಡಿ ಕಛೇರಿಗೆ ನಿಯುಕ್ತರಾಗಲು ಅರ್ಹರಾದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್/ಮುಖ್ಯ ಕಾನ್‌ಸ್ಟೇಬಲ್/ಪೊಲೀಸ್ ಕಾನ್‌ಸ್ಟೇಬಲ್‌ಗಳ ಮನವಿಗಳನ್ನು ಡಿಐಜಿಪಿ, ಸಿಐಡಿ ಅಥವಾ ಪೊಲೀಸ್ ಅಧೀಕ್ಷಕರುಗಳು ತರಿಸಿಕೊಳ್ಳುತ್ತಾರೆ. ತನಿಖೆ ಮತ್ತು ಪತ್ತೆ ಕಾರ್ಯದಲ್ಲಿ ಪದಕಗಳನ್ನು ಪಡೆದವರಿಗೆ ಆದ್ಯತೆಯನ್ನು ನೀಡಲಾಗುತ್ತದೆ.

(iii) ಸಿ.ಐ.ಡಿ.ಗೆ ಸೇರಿದ ಇತರೆ ಅಧಿಕಾರಿಗಳ ಕರ್ತವ್ಯಗಳು : 
(1) ಕಾನೂನು ಸಲಹೆಗಾರರು :
ಇವರನ್ನು ಅಭಿಯೋಗ ನಿರ್ದೇಶಕರು, ಅಪರಾಧ ತನಿಖಾ ದಳದ ಕಾನೂನು ಸಲಹೆಗಾರರನ್ನಾಗಿ ನೇಮಿಸುತ್ತಾರೆ. ಎಲ್ಲಾ ತನಿಖಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಮಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ಕುರಿತು ಚರ್ಚಿಸುತ್ತಾರೆ ಮತ್ತು ಅವುಗಳು ವಿಲೇವಾರಿ ಆಗುವವರೆಗೂ ಕಾನೂನಿನ ಅಂಶಗಳ ಬಗ್ಗೆ ಅವರ ಸಲಹೆ ಪಡೆಯುತ್ತಾರೆ. ಕಾನೂನು ಸಲಹೆಗಾರರು ಮೇಲಾಧಿಕಾರಿಗಳು ಕೋರಿದ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಅವರುಗಳಿಗೆ ಸಲ್ಲಿಸುತ್ತಾರೆ.
(2) ಲೆಕ್ಕ ಪರಿಶೋಧಕರು :

ವಂಚನೆ, ಹಣ ದುರುಪಯೋಗ ಮತ್ತು ಇತರೆ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಿಗೆ ಸಹಾಯ ಮಾಡಲು ಹಿರಿಯ ಮತ್ತು ಕಿರಿಯ ಲೆಕ್ಕ ಪರಿಶೋಧಕರನ್ನು ರಾಜ್ಯ ಲೆಕ್ಕ ಪತ್ರ ಇಲಾಖೆಯಿಂದ ಸಿಐಡಿಗೆ ನೇಮಿಸಿರುತ್ತಾರೆ. ಇವರು ತನಿಖಾಧಿಕಾರಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಲೆಕ್ಕ ಪರಿಶೋಧನೆ ಕುರಿತು ಸಲಹೆಯನ್ನು ನೀಡುತ್ತಾರೆ.

(3) ಲಿಪಿಕ ಸಿಬ್ಬಂದಿ :

ಲಿಪಿಕ ಸಿಬ್ಬಂದಿಯವರು ಪೊಲೀಸ್ ಉಪ ಮಹಾ ನಿರೀಕ್ಷಕರು, ಸಿಐಡಿ ರವರ ಸಂಪೂರ್ಣ ನಿಯಂತ್ರಣದಲ್ಲಿರುತ್ತಾರೆ ಮತ್ತು ಅವರ ಕೆಲಸವನ್ನು ಆಡಳಿತಾಧಿಕಾರಿಯವರು ಮೇಲ್ವಿಚಾರಣೆ ಮಾಡುತ್ತಾರೆ. ಪೊಲೀಸ್ ಉಪ ಮಹಾ ನಿರೀಕ್ಷಕರು, ಸಿಐಡಿ ರವರು ಶಾಖಾಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು ಮತ್ತು ದಲಾಯತ್‌ಗಳ ಹಂಚಿಕೆ ಹಾಗೂ ಸ್ಥಳ ನಿಯುಕ್ತಿಗೊಳಿಸುವ ಕೆಲಸ ಮಾಡುತ್ತಾರೆ.

ಎಂಓಬಿ ಕಾರ್ಡ್ಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದು :

ಪ್ರಧಾನ ಕಛೇರಿಯ ಆದೇಶ ಸಂಖ್ಯೆ: ಅಪರಾಧ-3/22/2021, ದಿನಾಂಕ:17.02.2022 ರಂತೆ ಪೊಲೀಸ್ ಅಯುಕ್ತರು, ವಲಯ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು (ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್ ಮತ್ತು ರೈಲ್ವೇಸ್ ಒಳಗೊಂಡಂತೆ) ಸಿಐಡಿ ಹಾಗೂ ಸಿಐಡಿ ಅರಣ್ಯ ಘಟಕದ ತನಿಖಾಧಿಕಾರಿಗಳಿಂದ ಪತ್ತೆ ಹಚ್ಚಲಾಗುವ ಮತ್ತು ದಸ್ತಗಿರಿ ಮಾಡಲಾದ ಆರೋಪಿಗಳ ಎಂಓಬಿ ಕಾರ್ಡ್ಗಳನ್ನು ಸಿಐಡಿಯಿಂದ ಪಡೆದುಕೊಂಡು, ಸದರಿ ಮಾಹಿತಿಯನ್ನು ಪೊಲೀಸ್ ಐಟಿ ತಂತ್ರಾಂಶ ಹಾಗೂ ಎಎಫ್‌ಐಎಸ್ (ಸ್ವಯಂಚಾಲಿತ ಬೆರಳು ಮುದ್ರೆ ಗುರುತಿಸುವ ಪದ್ಧತಿ) ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದು.  ಸದರಿ ಆದೇಶವು ಸಿಐಡಿ  ಅರಣ್ಯ ಘಟಕವು ತೆರೆಯುವ ಎಂಓಬಿ ಕಾರ್ಡ್ಗಳಿಗೂ ಅನ್ವಯಿಸುತ್ತದೆ.

(iv) ಸಿಐಡಿ-ಅರಣ್ಯ ಘಟಕ :

ಪ್ರಸ್ತುತ ಅಸ್ತಿತ್ವದಲ್ಲಿರುವ ಬೆಲೆ ಬಾಳುವ ಅರಣ್ಯ ಉತ್ಪನ್ನಗಳನ್ನು ರಕ್ಷಿಸುವ, ವನ್ಯಜೀವಿಗಳ ಸಂರಕ್ಷಣೆ ದೃಷ್ಠಿಯಿಂದ, ಕಳ್ಳಸಾಗಾಣಿಕೆ ಮತ್ತು ವನ್ಯಜೀವಿ ಬೇಟೆ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವ ಉದ್ದೇಶದಿಂದ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳ ಕಳ್ಳ ಸಾಗಣೆಯನ್ನು ನಿಯಂತ್ರಿಸಲು ಸಿ.ಐ.ಡಿ. ಅರಣ್ಯ ಘಟಕವನ್ನು ಅಂದಿನ ಮೈಸೂರು ಸರ್ಕಾರವು ತನ್ನ ಆದೇಶ ಸಂಖ್ಯೆ : ಹೆಚ್.ಡಿ.221. ಪಿ.ಇ.ಜಿ. 72 ಬೆಂಗಳೂರು ದಿನಾಂಕ 15.12.1972 ರ ಮೂಲಕ ಸೃಜಿಸಲಾಯಿತು. ಸಿಐಡಿ ಅರಣ್ಯ ಘಟಕದ ಕಾರ್ಯ ಸ್ವರೂಪ ಮತ್ತು ಪ್ರಸ್ತುತ ವೃಂದ ಬಲವು ಈ ಕೆಳಕಂಡ ಸರ್ಕಾರಿ ಆದೇಶಗಳನ್ವಯ ಸೃಜನೆಯಾಗಿದೆ:

1)    ಸಂಖ್ಯೆ: ಹೆಚ್‌ಡಿ/164/ಪಿಇಜಿ/73, ದಿನಾಂಕ:24.09.1974.

2)    ಸಂಖ್ಯೆ: ಹೆಚ್.ಡಿ.48.ಪಿಎ.ಜಿ.80: ದಿನಾಂಕ 02.04.1980.

3)    ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ಹೆಚ್.ಡಿ.57. ಪಿ.ಇ.ಜಿ. 80 ದಿನಾಂಕ: 07.10.1980.

4)   ಸರ್ಕಾರದ ಆದೇಶ ಸಂಖ್ಯೆ: ಹೆಚ್.ಡಿ. 57ನೇ: ಪಿ.ಇ.ಜಿ. 80 ದಿನಾಂಕ: 27.03.1983, (ಚೆಕ್‌ಪೋಸ್ಟ್ ಗಳಿಗೆ ಕೆ.ಎಸ್.ಆರ್.ಪಿ ತುಕಡಿ ಒದಗಿಸುವ ಬಗ್ಗೆ)

5)    ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ / 253/ ಪಿಓಪಿ / 92, ದಿನಾಂಕ:16.12.1992.

6)    ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ / 172 /ಪಿಓಪಿ /97 (4), ದಿನಾಂಕ:03.02.1998.

7)  ತರುವಾಯ ಈ ಘಟಕವನ್ನು ಸರ್ಕಾರದ ಆದೇಶ ಸಂಖ್ಯೆ: ಹೆಚ್.ಡಿ. 107 ಪಿ.ಒ.ಪಿ. 2021 ದಿನಾಂಕ 12.08.2021 ಮತ್ತು 25.08.2021 ರಲ್ಲಿ, ಸಿಐಡಿ ಅರಣ್ಯ ಘಟಕದ ಕಾರ್ಯವ್ಯಾಪ್ತಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಹಾಗೂ ಅರಣ್ಯಘಟಕವು ಸಿಐಡಿಯ ಒಂದು ಭಾಗವಾಗಿರುವುದರಿಂದ ಸಿಐಡಿಯ ಕಾನೂನು ಸಲಹೆಗಾರರ ಸೇವೆ ಬಳಸಿಕೊಳ್ಳಲು ಆದೇಶಿಸಲಾಯಿತು ಮತ್ತು ಪೊಲೀಸ್ ಮಹಾ ನಿರೀಕ್ಷಕರ ಅಧಿಕಾರ ವ್ಯಾಪ್ತಿಗೆ ತರಲಾಯಿತು. ಅವರು ಪೊಲೀಸ್ ಮಹಾನಿರ್ದೇಶಕರು, ಸಿ.ಐ.ಡಿ. ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು ರವರ ಮೇಲ್ವಿಚಾರಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
(i) ಕರ್ತವ್ಯಗಳು :

ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರು, ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ, ವಿಶೇಷವಾಗಿ ಶ್ರೀಗಂಧ/ಬೀಟೆ/ತೇಗದ ಮರಗಳ ಮತ್ತು ಇತರೆ ಬೆಲೆಬಾಳುವ ಅರಣ್ಯ ಉತ್ಪ್ಪನ್ನಗಳ ಕಳ್ಳಸಾಗಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇತರೆ ಇಲಾಖೆಗಳೊಂದಿಗೆ ಸಮನ್ವಯವನ್ನು ಸಾಧಿಸುತ್ತಾರೆ. ಜೊತೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರಡಿಯ ಅಪರಾಧಗಳ ತನಿಖಾ ಕಾರ್ಯದ ಮೇಲ್ವಿಚಾರಣೆಯನ್ನೂ ಸಹ ಮಾಡುತ್ತಾರೆ.

ಸರ್ಕಾರ, ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ಹಾಗೂ ಪೊಲೀಸ್ ಮಹಾನಿರ್ದೇಶಕರು, ಸಿಐಡಿ, ಬೆಂಗಳೂರುರವರು, ಅರಣ್ಯ ಅಪರಾಧ ಕಾಯ್ದೆಗಳು ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಗಳಿಗೆ ಸಂಬಂಧಿಸಿದಂತೆ ವಹಿಸಿದ ಪ್ರಕರಣಗಳ ತನಿಖೆಯನ್ನು ಅರಣ್ಯ ಘಟಕವು ಕೈಗೊಳ್ಳುತ್ತದೆ.

(ii) ದಳಗಳು :

ರಾಜ್ಯಾದ್ಯಂತ ಇರುವ 18 ಅರಣ್ಯ ಸಂಚಾರಿ ದಳಗಳ ಮುಖ್ಯ ಕರ್ತವ್ಯವು ಅರಣ್ಯ ಅಪರಾಧಗಳ/ಅಪರಾಧಿಗಳ ಕುರಿತು ಗುಪ್ತ ಮಾಹಿತಿ ಸಂಗ್ರಹಿಸಿ, ಅಪರಾಧಿಗಳ ವಿರುದ್ಧ ವಿವಿಧ ಅರಣ್ಯ ಕಾಯ್ದೆಗಳನ್ವಯ ಪರಿಣಾಮಕಾರಿ ಕ್ರಮ ಜರುಗಿಸಿ, ಅಮೂಲ್ಯ ಅರಣ್ಯ ಉತ್ಪನ್ನಗಳ ಕಳವು ಮತ್ತು ಕಳ್ಳಸಾಗಣೆಯನ್ನು ನಿಯಂತ್ರಿಸುವುದಾಗಿದೆ. ಅಲ್ಲದೇ, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.

ಅರಣ್ಯ ಸಂಚಾರಿ ದಳಗಳು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳೊಡನೆ ನಿಕಟ ಸಮನ್ವಯ ಹೊಂದಿ, ತಮ್ಮ ವ್ಯಾಪ್ತಿಯೊಳಗಿನ ಅರಣ್ಯ ಚೆಕ್ ಪೋಸ್ಟ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ದಾಖಲೆಗಳನ್ನು ಪರಿಶೀಲಿಸುವುದು. ದಾಖಲಾತಿಗಳಲ್ಲಿ ಲೋಪದೋಷ ಕಂಡುಬಂದಲ್ಲಿ ಅರಣ್ಯ ಘಟಕದ ಮೇಲಾಧಿಕಾರಿಗಳ ಮೂಲಕ ಸಂಬಂಧಿಸಿದ ಅರಣ್ಯ ಸಂರಕ್ಷಣಾಧಿಕಾರಿ/ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ನೀಡುವುದು.

ಐಜಿಪಿ, ಅರಣ್ಯ ಘಟಕರವರು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ, ವರದಿಯನ್ನು ಡಿಜಿಪಿ, ಸಿಐಡಿ ರವರಿಗೆ ಸಲ್ಲಿಸುವುದು.

WhatsApp Group Join Now
Telegram Group Join Now

Related Posts