ವಿಶ್ವ

ಭಾರತದಲ್ಲಿ ನಿಜ ಅರ್ಥದ ಪ್ರಜಾಪ್ರಭುತ್ವ ಜಾರಿಯಾಗಿದೆಯಾ, ಜನರು ರಾಜಕೀಯ ಸಾಕ್ಷರರಾಗಿದ್ದಾರೆಯೇ

WhatsApp Group Join Now
Telegram Group Join Now

“ಪ್ರಜಾ ಪ್ರಭುತ್ವ” ಎಂತಹ ಸುಂದರವಾದ ಪರಿಕಲ್ಪನೆ ಅಲ್ಲವೇ? ಪ್ರಜೆಗಳಿಂದ ಪ್ರಜೆಯೊಬ್ಬನನ್ನು ಪ್ರಭು ಮಾಡಿ ಆಡಳಿತ ನಡೆಸುವಿಕೆ! ಅಂದರೆ ಪ್ರಜೆಗಳು ತಮ್ಮನ್ನು ತಾವು ಆಳಿಕೊಳ್ಳುವಿಕೆ. ಪ್ರಜೆಗಳ ಪ್ರಭುತ್ವ. ಆಡಳಿತವು ಯಾವುದೇ ವ್ಯಕ್ತಿ, ಗುಂಪು, ವರ್ಗದ ಅಧೀನದಲ್ಲಿರದೆ ಜನತೆಯ ಅಧಿನದಲ್ಲಿರುವ ಸರ್ಕಾರವನ್ನು ಪ್ರಜಾಪ್ರಭುತ್ವ ಎಂದು ಕರೆಯಲಾಗುತ್ತದೆ. ಈ ಕುರಿತು ಅಬ್ರಾಹಂ ಲಿಂಕನ್ ಅವರು ತುಂಬಾ ಸರಳವಾಗಿ ಅರ್ಥಗರ್ಭಿತವಾಗಿ ಮಾತೊಂದನ್ನು ಹೇಳಿದ್ದಾರೆ, ಅದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವಾಗಿ ರಚಿತವಾದ ಸರ್ಕಾರ ಪ್ರಜಾಪ್ರಭುತ್ವ ಸಕಾರವೆಂದು. ಎಂತಹ ಅದ್ಭುತ ಅಲ್ಲವೇ? ಪುರಾತನ ಕಾಲದಲ್ಲಿ ಈ ಪ್ರಜಾಪ್ರಬುತ್ವದ ಪರಿಕಲ್ಪನೆಯಲ್ಲಿ ಆಡಳಿತ ನಡೆಸುತ್ತಿದ್ದವರು ಗ್ರೀಕ್ ನಗರವಾದ ಅಥೆನ್ಸ್ನಲ್ಲಿಯಂತೆ. ಅಲ್ಲಿ ಪ್ರತ್ಯಕ್ಷ ಪ್ರಜಾ ಪ್ರಭುತ್ವ ಆಡಳಿತ ವ್ಯವಸ್ಥೆ ಇತ್ತಂತೆ. ಆದರೆ ಈ ಪ್ರಜಾಪ್ರಭುತ್ವಕ್ಕೆ ಮಹತ್ವ ಬಂದಿದ್ದು ತೀರಾ ಇತ್ತೀಚೆಗೆ, ಅಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ. ಹದಿನೆಂಟನೆಯ ಶತಮಾನದವರೆಗೆ ಇದರ ಪೂರ್ಣ ಪರಿಕಲ್ಪನೆ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಇಡೀ ವಿಶ್ವದಲ್ಲಿ ಅರಸೊತ್ತಿಗೆ ಮಾದರಿಯ ಆಡಳಿತ ವ್ಯವಸ್ಥೆ ಇತ್ತು. ಹದಿನಾರನೆಯ ಶತಮಾದಿಂದ ಅದು ಕ್ರಮೇಣ ಕ್ಷೀಣಿಸುತ್ತಾ ಬಂದಿತು ಎಂದು ರಾಜ್ಯ ಶಾಸ್ತçಜ್ಞರು ಉಲ್ಲೇಖಿಸುತ್ತಾರೆ.

ಈ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಕೆಲವರು ನೀಡಿದ ವ್ಯಾಖ್ಯಾನಗಳು ಈ ರೀತಿಯಲ್ಲಿವೆ: ಪೆರಿಕ್ಲಿಸ್(ಕ್ರಿ.ಪೂ.430): ನಮ್ಮದು ಪ್ರಜಾಪ್ರಭುತ್ವ ಏಕೆಂದರೆ ಆಡಳಿತ ಕೆಲವೇ ಜನರ ಕೈಯಲ್ಲಿರದೆ ಜನ ಸಾಮಾನ್ಯರ ಕೈಯಲ್ಲಿದೆ.

ಸೀಲಿ: ಪ್ರತಿಯೊಬ್ಬನೂ ಪಾಲ್ಗೊಳ್ಳಲು ಅವಕಾಶ ಇರುವ ಸರ್ಕಾರವೇ ಪ್ರಜಾಪ್ರಭುತ್ವ.

ಲಾರ್ಡ ಬ್ರೈಸ್: ಪ್ರಜಾ ಪ್ರಭುತ್ವ ಎಂದ ಮೆಲೆ ಪ್ರಜೆಗಳ ಇಚ್ಚೆಯಂತೆಯೇ ಎಲ್ಲಾ ಮುಖ್ಯ ವಿಷಯಗಳು ಇತ್ಯರ್ಥವಾಗಬೇಕು.

ಜಾರ್ಜ ಬರ್ನಾಡ್ ಷಾ: ಪ್ರಜಾ ಪ್ರಭುತ್ವ ಎಂದರೆ ಭೇದ ಭಾವವಿಲ್ಲದೆ ಪ್ರತಿಯೊಬ್ಬನ ಹಿತಕ್ಕೆ ಅನುಗುಣವಾದ ಸಮಾಜ ವ್ಯವಸ್ಥೆ. ಶ್ರೀಮಂತ ವರ್ಗದ ವಿಶೇಷ ಹಕ್ಕುಗಳನ್ನು ರಕ್ಷಿಸುವ ಸಮಾಜ ವ್ಯವಸ್ಥೆಯಲ್ಲ.

ಪ್ರಾಜ್ಞ್ಯರು ಬಹು ಅರ್ಥಗರ್ಭಿತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ವ್ಯಾಖ್ಯಾನಗಳನ್ನು ಮಾಡಿದ್ದಾರೆ. ಅದರಲ್ಲಿ ಜಾರ್ಜ ಬರ್ನಾಡ್ ಷಾ ಅವರ ವ್ಯಾಖ್ಯಾನವನ್ನು ಗಮನಿಸುವುದಾದರೆ ಸರ್ಕಾರದಲ್ಲಿ ಯಾವುದೇ ರೀತಿಯ ತಾರತಮ್ಯಗಳು ಇರಬಾರದು ಎನ್ನುವುದು. ಈ ಅರ್ಥದಲ್ಲಿ ಸರ್ಕಾರಗಳು ನಡೆಯುತ್ತಿವೆಯೇ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ.

ನೀವು ಇಲಾಖೆಯೊಂದಕ್ಕೆ ಸಕಾರದ ಯಾವುದೋ ಒಂದು ಸೌಲಭ್ಯ ಪಡೆಯಲಿಕ್ಕೆ ಅರ್ಜಿ ಹಾಕುತ್ತೀರಿ. ಇಲಾಖೆ ಅರ್ಜಿಗಳನ್ನು ಸಂಗ್ರಹಿಸುತ್ತದೆ. ಇನ್ನೇನು ನಿಮಗೆ ಪದ್ದತಿಯಂತೆ ಔಲಭ್ಯ ದೊರೆಯಲಿದೆ ಎನ್ನುವ ಭರವಸೆಯಲ್ಲಿರುತ್ತೀರಿ. ನಿಮ್ಮದೆ ಊರಿನ ನಿಮ್ಮ ಮನೆಯ ಬಾಜಿನವನೂ ಅದೇ ಸೌಲಭ್ಯಕ್ಕೆ ಅರ್ಜಿ ಹಾಕಿರುತ್ತಾನೆ. ನೋಡುನೋಡುತ್ತಿರುವಂತೆ ಫಲಾನುಭವಿಗಳ ಪಟ್ಟಿಯಲ್ಲಿ ಅವನ ಹೆಸರಿದ್ದು ಆ ಸೌಲಭ್ಯ ಅವನಿಗೆ ಮಂಜೂರಿಯಾಗಿರುತ್ತದೆ. ನೀವು ಅಚ್ಚರಿಗೆ ಒಳಗಾಗುತ್ತೀರಿ. ನಿಮ್ಮಲ್ಲಿರುವ ತಪ್ಪು ಏನೆಂದು ನಿಮಗೆ ಅರ್ಥವೇ ಆಗುವುದಿಲ್ಲ. ಸೂಕ್ತ ದಾಖಲಾತಿಗಳನ್ನು ನಿಯಮಾನುಸಾರ ಸಲ್ಲಿಸಿರುತ್ತೀರಿ. ಹಾಗೆ ನೋಡಿದರೆ ನಿಮ್ಮ ಮನೆಯ ಬಾಜಿನವನೇ ಆ ಸೌಲಭ್ಯಕ್ಕೆ ಅನರ್ಹ. ಅರ್ಹ ಅಭ್ಯರ್ಥಿಯಾದ ನಿಮಗೆ ಆ ಸೌಲಭ್ಯ ದೊರೆಯದೆ ಅನರ್ಹ ಅಭ್ಯರ್ಥಿಗೆ ಸೌಲಭ್ಯ ಮಂಜೂರಿಯಾಗಿರುವುದು ನಿಮಗೆ ಅರ್ಥವಾಗದೆ ಹೋಗುತ್ತದೆ. ಏಕೆ ಮತ್ತು ಹೇಗೆ ಎನ್ನುವ ಪ್ರಶ್ನೆಗಳಷ್ಟೇ ನಿಮ್ಮ ತಲೆಯೊಳಗೆ ಮತ್ತು ಮನದೊಳಗೆ ಉಳಿಯುತ್ತವೆ.
ನೀವು ಅರ್ಹ ವ್ಯಕ್ತಿಯೇ ಆಗಿರಿ ಅಥವಾ ಅನರ್ಹ ವ್ಯಕ್ತಿಯೆ ಆಗಿರಿ. ಆದರೆ ನಿಮ್ಮಲ್ಲೊಂದು ಪ್ರಮುಖವಾದ ಅರ್ಹತೆ ಇರಬೇಕು ಎನ್ನುವ ಸಂಗತಿ ನಿಮಗೆ ತಿಳಿದಿರಬೇಕು.

ಸರ್ಕಾರ ಇಂತಹ ಸೌಲಭ್ಯಗಳಿಗಾಗಿ ಇಂತಹ ಅಭ್ಯರ್ಥಿಗಳಿಂದ ಹೀಗೀಗೆ ಎಂದು ಅರ್ಜಿ ಕರೆಯುತ್ತದೆ. ಇಲಾಖೆ ಅರ್ಜಿಗಳನ್ನು ಸಂಗ್ರಹಿಸುತ್ತದೆ. ಅದರ ಅಂತಿಮ ಆಯ್ಕೆ ಪಟ್ಟಿಗಾಗಿ ಜನ ಪ್ರತಿನಿಧಿಯ ಮೇಜಿಗೆ ಕಳುಹಿಸುತ್ತದೆ. ಅಲ್ಲಿ ನಿರ್ಧಾರವಾಗುತ್ತದೆ; ಯಾರನ್ನು ಆಯ್ಕೆ ಮಡಬೇಕು ಯಾರನ್ನು ಕೈಬಿಡಬೇಕು ಎನ್ನುವುದು. ಅಲ್ಲಿ ಎಂದರೆ ಶಾಸಕನಾಗಿರಬಹುದು, ಸಂಸದನಾಗಿರಬಹುದು, ಮಂತ್ರಿಯಾಗಿರಬಹುದು ಅಥವಾ ನಿಮ್ಮೂರಿನ ಒಬ್ಬ ಪುಡಾರಿಯಾಗಿರಬಹುದು. ಯಾರು ಯಾವ ಕಡೆಯವರು ಎನ್ನುವ ಆಧಾರದ ಮೇಲೆ ಸಕಾರಿ ಯೋಜನೆಗಳು ಮತ್ತು ಅದರ ಫಲಾನುಭವಿಗಳ ಪಟ್ಟಿ ನಿರ್ಧಾರವಾಗುತ್ತದೆ. ಜನಪ್ರತಿನಿಧಿಯ ಪರಿಶೀಲನೆಗಾಗಿ ಕಳುಹಿಸುವ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ತಕ್ಷಣ ಆ ಆ ಊರಿನ ತಮ್ಮ ಕಾರ್ಯಕರ್ತರಿಗೆ ಮಾಹಿತಿ ಹೋಗುತ್ತದೆ. ಅವರು ನೀಡುವ ಮಾಹಿತಿಯ ಮೇಲೆ ಪಟ್ಟಿ ನಿರ್ಧಾರವಾಗುತ್ತದೆ. ಇದು ಅಂತಿಮ ಸತ್ಯ. ಇದನ್ನು ಪ್ರಜಾಪ್ರಭುತ್ವ ಮತ್ತು ಪ್ರಜೆಗಳಿಗಾಗಿ ಇರುವ ಸರ್ಕಾರ ಹಾಗೂ ಪ್ರಜೆಗಳ ಸಹಭಾಗಿತ್ವದ ಆಡಳಿತ ವ್ಯವಸ್ಥೆ ಎಂದು ಕರೆಯುವುದು ಹೇಗೆ ಎನ್ನುವುದು ಇಲ್ಲಿರುವ ಪ್ರಶ್ನೆ. “ಅರೆ! ನವು ಸುಮ್ಮನೆ ಕುಳಿತಿರಲಿಲ್ಲವೇ ಅವರ ಆಡಳಿತವಿದ್ದಾಗ? ಒಂದೇಒಂದು ರೂಪಾಯಿಯ ಪ್ರಯೋಜನೆಯೂ ಆ ಸುದೀರ್ಘಾವಧಿಯಲ್ಲಿ ನಮಗೆ ದೊರೆಯದೇ ಹೋಯಿತು. ಯಾರೂ ಹಚ್ಚಿಕೊಳ್ಳಲಿಲ್ಲ ನಮ್ಮನ್ನು” ಎನ್ನುವ ಉತ್ತರ ಈಗ ಇರುವವರಿಂದ ನಮಗೆ ಸಿಗುತ್ತದೆ. ಇದನ್ನು ಪಕ್ಷಪಾತ ಮತ್ತು ದ್ವೇಷ ರಾಜಕೀಯ ಅಥವಾ ಆಡಳಿತ ವ್ಯವಸ್ಥೆ ಎನ್ನದೆ ಏನನ್ನಬೇಕು? ಇದಾ ಸಂವಿಧಾನಬದ್ಧ ಆಡಳಿತ? ಇದು ಏಕೆ ಮತ್ತು ಹೇಗೆ ಸಾಧ್ಯವಾಗುತ್ತಿದೆ ಎಂದರೆ ದುರ್ಬಲ ಕಾರ್ಯಾಂಗದಿಂದ! ಅಂದರೆ ಆಡಳಿತ ಸೇವೆಯಲ್ಲಿರುವ ಜನ ಯಾವುದೋ ಒಂದು ಕಾರಣಕ್ಕೆ ರಾಜಕಾರಣಿಗಳಿಗೆ ಗುಲಾಮರಾಗಿರುವುದಿಂದ ಸಾಧ್ಯವಾಗುತ್ತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದರೆ ಯಾವುದೇ ಆದರ್ಶಗಳಿಲ್ಲದೆ ಕೇವಲ ಹಣಕ್ಕಾಗಿ ಓದಿಕೊಂಡು ಐಎಎಸ್ ಐಪಿಎಸ್ ಪಾಸು ಮಾಡಿ ಅಧಿಕಾರ ಹಿಡಿಯುವ ಸ್ವಾರ್ಥಪರರಿಂದ ಸಾಧ್ಯವಾಗುತ್ತಿದೆ. ಕೋಟಿಕೋಟಿ ಖರ್ಚು ಮಾಡಿ ಹುದ್ದೆ ಅಲಂಕರಿಸುವುದು ಕೋಟಿಕೋಟಿಗಳ ಲೆಖ್ಖದಲ್ಲಿ ಕೊಳ್ಳೆ ಹೊಡೆಯಬೇಕು ಎನ್ನುವ ಸರ್ಕಾರಿ ನೌಕರರ ದುರಾಸೆಯಿಂದ ಇದು ಸಾಧ್ಯವಾಗುತ್ತಿದೆ.

ಒಬ್ಬ ಸಾಮಾನ್ಯ ಪ್ರಜೆಯ ಹಿಂದೆ ಯಾರಿರುತ್ತಾರೆ ಹೇಳಿ? ಅವನು ಶ್ರೀಸಾಮಾನ್ಯ. ಅವನಿಗೆ ತನ್ನ ನಿತ್ಯದ ಬದುಕು ಮುಖ್ಯ. ದಿನಂಪ್ರತಿ ಬೆಳಗಿನಿಂದ ಆರಂಭವಾಗುವ ಅವನ ಬದುಕು ಸಂಸಾರ ತಾಪತ್ರಯಗಳ ಜಂಜಾಟದಲ್ಲಿ ರಾತ್ರಿ ನಿದ್ರೆ ಬರುವವರೆಗೆ ಸಾಗಿರುತ್ತದೆ. ತಲೆಗಾದರೆ ಕಾಲಿಗೆ ಆಗದ ಕೌದಿಯೊಳಗೆ ತಾಪತ್ರಯ ಪಡುತ್ತಾನೆ ಅವನು. ಅವನ್ಯಾವ ರಾಜಕಾರಣಿಯ ಮರ್ಜಿ ಕಾಯಬೇಕು? ಇವನು ಮೂರನೆಯ ಪ್ರಪಂಚಕ್ಕೆ ಕಾಣಿಸದ ವ್ಯಕ್ತಿ. ಈ ವ್ಯಕ್ತಿಗೆ ತನ್ನ ಕ್ಷೇತ್ರದ ಶಾಸಕ ಯಾರು ರಾಜ್ಯದ ಮುಖ್ಯಮಂತ್ರಿ ಯಾರು ಈ ದೇಶದ ಪ್ರಧಾನಮಂತ್ರಿ ಯಾರು ಎನ್ನುವ ಸಂಗತಿಗಳು ಬಹುಪಾಲು ಗೊತ್ತಿರುವುದಿಲ್ಲ. ಚುನಾವಣೆ ಸಮಯದಲ್ಲಿ ಯಾರೋ ಮುದ್ರಿಸಿದ ಕರಪತ್ರವೊಂದನ್ನು ತಂದುಕೊಡುತ್ತಾ ಇದಕ್ಕೆ ಗುದ್ದಬೇಕು ಎಂದು ಹೇಳುತ್ತಾ ಆ ಕುಟುಂಬದ ತಲೆಗಳ ಲೆಖ್ಖ ಹಾಕಿ ಇಂತಿಷ್ಟು ಎಂದು ಹಣ ನೀಡಿರುತ್ತಾರೆ. ಆತ ಎಲ್ಲರಿಂದಲೂ ಹಣ ಪಡೆಯುತ್ತಾನೆ. ಎನನ್ನೂ ತಲೆ ಕೆಡಿಸಿಕೊಳ್ಳದ ಆತನ ಮನೆಗೆ ಎಲ್ಲರೂ ಎಲ್ಲಾ ಪಕ್ಷದವರೂ ಬರುತ್ತಾರೆ. ಆತ ತನ್ನೊಳಗೇ ನಿರ್ಧರಿಸಿಕೊಂಡು ಆತನ ಮನಸ್ಸಿನ ನ್ಯಾಯದ ಪರಿಮಿತಿಯಲ್ಲಿ ತನ್ನ ಕುಟುಂಬದ ಮತಗಳನ್ನು ಎಲ್ಲಾ ಅಭ್ಯರ್ಥಿಗಳಿಗೆ ಹಂಚುತ್ತಾನೆ, ನಿಜ ಹಂಚುತ್ತಾನೆ. “ಯಾರಿಗಾಕಿದೆಪಾ ಓಟು” ಎಂದು ತೀರಾ ಆತ್ಮೀಯರು ಕೇಳಿದರೆ ಅವರು ಇಷ್ಟುಕೊಟ್ಟರು, ಇವರು ಇಷ್ಟುಕೊಟ್ಟರು ಹಂಗಾಗಿ ಅವರಿಗೊಂದು ಇವರಿಗೊಂದು ಹಾಕಿದೆ ಎಂಬರ್ಥದ ಮಾತುಗಳನ್ನು ಆಡುತ್ತಾನೆ. ಇದು ನಿಜಕ್ಕೂ ಸತ್ಯ, ಇದೇ ಅರ್ಥದಲ್ಲಿ ಈ ದೇಶದ ಮತದಾರರಿದ್ದಾರೆ. ಈ ದೇಶದ ಮತದಾರರನ್ನು ರಾಜಕೀಯ ನಿರಕ್ಷರಿಗಳನ್ನಾಗಿ ಕಾಪಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿಯೇ ಸೀಮಿತ ಪಕ್ಷ, ಸೀಮಿತ ಕುಟುಂಬಗಳು ರಾಜಕೀಯಕ್ಕೆ ಸೀಮಿತವಾಗುತ್ತಿವೆ. ಈ ಕಾರಣಕ್ಕಾಗಿಯೇ ಸಂವಿಧಾನದ ಆಶಯಗಳು ಫಲ ಕೊಡುತ್ತಿಲ್ಲ

ಅಂತಿಮವಾಗಿ ಇಲ್ಲಿ ಏನು ಹೇಳಲು ಪ್ರಯತ್ನಿಸಲಾಗುತ್ತಿದೆ ಎಂದರೆ ಈ ದೇಶದಲ್ಲಿ ಈ ರಾಜ್ಯದಲ್ಲಿ ಯಾವುದೇ ಪಕ್ಷದ ಯಾವುದೇ ಸರ್ಕಾರವಿರಲಿ ಲಾರ್ಡ ಬ್ರೈಸ್ ಹೇಳಿದಂತೆ ಪ್ರಜಾ ಪ್ರಭುತ್ವ ಎಂದ ಮೇಲೆ ಪ್ರಜೆಗಳ ಎಲ್ಲಾ ಮುಖ್ಯ ವಿಷಯಗಳು ಇತ್ಯರ್ಥ ಆಗಬೇಕು ಹಾಗೂ ಸೀಲಿ ಹೇಳಿದಂತೆ ಪ್ರತಿಯೊಬ್ಬನು ಪಾಲ್ಗೊಳ್ಳಲು ಅವಕಾಶ ಇರುವ ಸರ್ಕಾರವೇ ಪ್ರಜಾಭ್ರುತ್ವ ಎನ್ನುವ ಮಾತುಗಳಿಗೆ ವ್ಯತಿರಿಕ್ತವಾಗಿ ಚುನಾಯಿತ ರಾಜಕಾರಣಿ ಅಥವಾ ಊರ ಮುಖಂಡ, ಲಾಡ್ ಸಾಬ್ ಹೇಳಿದರೆ ಮಾತ್ರ ಸಾಮಾನ್ಯ ಜನರಿಗೆ ಸರ್ಕಾರಿ ಸೌಲಭ್ಯಗಳು ಲಭ್ಯವಾಗುತ್ತವೆ ಮತ್ತು ಆ ಮೂಲಕ ಜನರನ್ನು ಸೀಮಿತ ಜನರು ಹಿಡಿದಿಟ್ಟುಕೊಳ್ಳಲು ಅವಕಾಶ ಒದಗಿಸುವ ಮೂಲಕ ಸಾಂವಿಧಾನಿಕ ದ್ರೋಹಗಳನ್ನು ಮಾಡಲಾಗುತ್ತಿದೆ. ಸರ್ಕಾರ ಪಕ್ಷಪಾತ ರಹಿತವಾಗಿ ದೇಶದ ಪ್ರತಿ ಪ್ರಜೆಯನ್ನು ತಲುಪುತ್ತಿಲ್ಲ. ದೇಶದ ಪ್ರಜೆಯೊಬ್ಬನಿಗೆ ಕಾರ್ಯಕರ್ತ ಅಥವಾ ಮುಖಂಡ ಅಥವಾ ರಾಜಕೀಯ ಪುಡಾರಿಗಳ ಮುಖಾಂತರ ತಲುಪಲಾಗುತ್ತಿದೆ. ಇದು ಎಷ್ಟು ಸರಿ?

ಸರ್ಕಾರಿ ಅಧಿಕಾರಿಗಳು, ಸರ್ಕಾರಿ ನೌಕರರು ಈ ದೇಶದಲ್ಲಿ ಒಂದು ಲಂಚ ಸ್ವೀಕರಿಸಿ ಕೆಲಸಗಳನ್ನು ಮಾಡುತ್ತಾರೆ, ಇನ್ನೊಂದು ವ್ಯಕ್ತಿಯ ಪ್ರಭಾವ ನೋಡಿ ಕೆಲಸಗಳನ್ನು ಮಾಡುತ್ತಾರೆ, ಮೂರನೆಯದು ಬಂದಿರುವ ವ್ಯಕ್ತಿ ಯಾರ ಕಡೆಯವನು, ಯಾವ ಪಕ್ಷದವನು, ಯಾವ ಸಂಘಟನೆಯವನು ಎನ್ನುವ ಹಿನ್ನೆಲೆ ಗಮನಿಸಿ ಕೆಲಸಗಳನ್ನು ಮಾಡುತ್ತಾರೆ. ಇದ್ಯಾವುದೂ ಅಲ್ಲದ ವ್ಯಕ್ತಿಯ ಪರಿಸ್ಥಿತಿ ಏನು ಎನ್ನುವುದು ಈ ಬರಹದ ಸಂಪೂರ್ಣ ಉದ್ದೇಶ. ಇದಕ್ಕೆ ಉತ್ತರಿಸಬೇಕಾದವರು ಯಾರು?

ರಾಜಕಾರಣಿ ಅಥವಾ ಚುನಾಯಿತ ಪ್ರತಿನಿಧಿಯ ಬೆಂಬಲವಿಲ್ಲದೆ ಜನ ಸಾಮಾನ್ಯರ ಸಮಸ್ಯೆಗಳು ಸರ್ಕಾರಿ ನೌಕಕರಿಂದ ಬಗೆಹರಿಯುತ್ತಿಲ್ಲ. ಈ ಕುರಿತು ಸರ್ಕಾರದ ಮೇಲೆ ಜನ ಸಾಮಾನ್ಯರ ತೀವ್ರವಾದ ಆಕ್ರೋಶವಿದೆ. ಇದೆಂಥಹ ಪ್ರಜಾಪ್ರಭುತ್ವ ಎಂದು ಸಾಮಾನ್ಯ ಜನರು ಪ್ರಶ್ನೆ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಆನರಿಗೆ ಮುಕ್ತವಾದ ಮತ್ತು ಪಾರದಶ್ಕವಾದ ಆಡಳಿತ ನೀಡದಿದ್ದರೆ ಸರ್ಕಾರವಿದ್ದರೇನು ಪ್ರಯೋಜನೆ ಎನ್ನುವ ಭಾವ ಮೂಡುತ್ತಿದೆ. ಈ ಪರಿಸ್ಥಿತಿಯನ್ನು ಹೊಗಲಾಡಿಸಬೇಕು.
ಈ ಸಂಪಾದಕೀಯ ಬರಹವನ್ನು ಇಷ್ಟೊಂದು ದೀರ್ಘವಾಗಿ ಬರೆದು ಈ ಲೇಖನವನ್ನು ರಾಜ್ಯದ ಮುಖ್ಯಮಂತ್ರಿಗಳ ಛಾಯಾಚಿತ್ರ ಹಾಕಿ ಮುಖಪುಟದಲ್ಲಿ ಪ್ರಕಟಿಸಿರುವುದರ ಹಿನ್ನೆಲೆ ಎಲ್ಲಾ ವರ್ಗದವರಿಗೂ ಬಡವ ಬಲ್ಲಿದನೆನ್ನದೆ ಮೇಲು ಕೀಳು ಎನ್ನದೆ, ಸಾಮಾನ್ಯ ಅಸಾಮಾನ್ಯನೆನ್ನದೆ ಸರ್ಕಾರ ಪ್ರತಿಯೊಬ್ಬ ಪ್ರಜೆಯನ್ನೂ ತಲುಪಬೇಕು ಎನ್ನುವ ಆಶಯದಿಂದ. ಇಲಾಖೆಗಳ ಮೇಲೆ ಮತ್ತು ಸರ್ಕಾರಿ ನೌಕರರ ಮೇಲೆ ರಾಜಕೀಯ ಪ್ರಭಾವ ಬೀರುವುದು ಅಧಿಕಾರ ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎನ್ನುವ ಕಾಳಜಿಯಿಂದ. ಈ ಲೇಖನದ ಬರಹಗಾರನ ಗಮನಕ್ಕೆ ಬಂದಿರುವಂತೆ ಮಹಿಳೆಯೊಬ್ಬಳು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಪೋಲಿಸ್ ಠಾಣೆಗೆ ಬರುತ್ತಾಳೆ, ಹಲ್ಲೆ ಮಾಡಿದವರು ಪ್ರಭಾವಿಗಳು, ಅಲ್ಲಿನ ಸ್ಥಳೀಯ ಶಾಸಕನ ಆಪ್ತರು. ಹಲ್ಲೆ ಮಾಡಿ ಅವರು ನೇರವಾಗಿ ಶಾಕನ ಮನೆಗೆ ಹೋಗುತ್ತಾರೆ. ಇತ್ತ ಪೋಲಿಸ್ ಠಾಣೆಯಲ್ಲಿ ಆಕೆಯ ದೂರನ್ನು ಸ್ವೀಕರಿಸುವುದಿಲ್ಲ. ಎರಡ್ಮೂರು ದಿನ ಕಳೆದರೂ ಕನಿಷ್ಠ ದೂರು ಸ್ವೀಕರಿಸಿ ಆರೋಪಿಗಳನ್ನು ಕರೆಯಿಸಿ ವಿಚಾರಣೆ ನಡೆಸುವ ಪ್ರಕ್ರಿಯೆ ಕೈಗೊಳ್ಳುವುದಿಲ್ಲ. ಏಕೆ ದೂರು ಸ್ವೀಕರಿಸಿ ಪ್ರತಮ ವರ್ತಮಾನ ವರದಿ ದಾಕಲಿಸುತ್ತಿಲ್ಲ ಎಂದು ಕೇಳಿದರೆ “ಇರಿ ಸರ್, ಅವರೂ ಬರಲಿ, ಅವರದು ಕೌಂಟರ್ ದೂರು ಗೆದುಕೊಳ್ಳೋಣ” ಎನ್ನಲಾಗುತ್ತದೆ. ಪೋಲಿಸ್ ಇಲಾಖೆ ಮತ್ತು ನ್ಯಾಯಾಲಯಗಳು ಮಾಡಬೇಕಿರುವ ಕೆಲಸವನ್ನು ಶಾಸಕರ ಕಚೇರಿ, ಪ್ರಭಾವವಿರುವ ವ್ಯಕ್ತಿಗಳು ಮಾಡುತ್ತಿದ್ದಾರೆ. ಅವರೇನು ಸುಮ್ಮನೆ ಮಾಡುವುದಿಲ್ಲ. ಅಮಾಯಕ ಜನರಿಂದ ಯಥೇಚ್ಚವಾಗಿ ಹಣ ಸುಲಿಯುತ್ತಾರೆ, ನ್ಯಾಯ ಹೇಳುತ್ತೇವೆ ಎಂದು.

ಇಂಥದ್ದೊಂದು ಆಡಳಿತ ವ್ಯವಸ್ಥೆ ಸರ್ವೆ ಸಾಮಾನ್ಯವಾಗಿದೆ. ಈ ಎಲ್ಲಾ ಅಪಸವ್ಯಗಳಿಗೆ ಮುಕ್ತಿ ಯಾವಾಗ ಎಂದು ಕೇಳುವುದು ಈ ಲೇಖನದ ಉದ್ದೇಶ.

WhatsApp Group Join Now
Telegram Group Join Now

Related Posts