ಅಪರಾಧ

ಹೆಣದ ಮೇಲೆ ಹಣ ಮಾಡಲು ನಿಂತಿತೆ ಭ್ರಷ್ಟ ವ್ಯವಸ್ಥೆ?

WhatsApp Group Join Now
Telegram Group Join Now

ಯಾದಗಿರಿ: ಹೆಣದ ಮೇಲೆ ಹಣ ಮಾಡಲು ನಿಂತರೇ ಯಾದಗಿರಿ ಜಿಲ್ಲಾ ಪೋಲಿಸರು ಎನ್ನುವ ಪ್ರಶ್ನೆಯೊಂದು ಜನ ಸಾಮಾನ್ಯರಲ್ಲಿ ಹರಿದಾಡುತ್ತಿದ್ದು ಸಾಮಾನ್ಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಹೌದು, ಇದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದ್ದು ಪೋಲಿಸ್‌ ಇಲಾಖೆಯ ಮೇಲೆ ಜನರಲ್ಲಿ ಸಂಶಯದ ಹೊಗೆಯಾಡುತ್ತಿದೆ. ಹಲವರು ನಡೆದಿರುವ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತಾ “ರಕ್ಷರಾಗಬೇಕಿದ್ದ ಮತ್ತು ರಕ್ಷಕರು ಎಂದು ಭಾವಿಸಿದ್ದ ಪೋಲಿಸರು ಭಕ್ಷಕರಾಗಿ ಬದಲಾಗಿದ್ದು ನಾಗರಿಕ ಸಮಾಜದ ಅವನತಿಯ ಆರಂಭದ ಮುನ್ಸೂಚನೆ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಇನ್ನೊಂದು ಭಯಾನಕ ಸಂಗತಿ ಮೇಲ್ನೋಟಕ್ಕೆ ಕಂಡು ಬಂದಿದ್ದು ಅದು ಜನರ ಅಚ್ಚರಿಗೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಹಲವು ಪತ್ರಿಕೆಗಳು, ವರದಿಗಾರರು, ಅನೇಕ ಸಂಘಟನೆಗಳಿದ್ದು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವ ಘಟನೆ ನಡೆದರೂ ಅದು ವ್ಯಾಪಕ ಪ್ರಚಾರ ಪಡೆಯದಿರುವುದು ಅಚ್ಚರಿ ಮೂಡಿಸಿದೆ ಎನ್ನಲಾಗುತ್ತಿದೆ. ಘಟನೆ ನಡೆದು ಇಪ್ಪತ್ತು ದಿನಗಳು ಕಳೆದ ಮೇಲೆ ಹೋರಾಟಗಳು ಆರಂಭವಾಗಿದ್ದು ಮತ್ತು ಸಾಮಾಜಿಕ ಜಾಲತಾಣ ಹಾಗೂ ಕೆಲವು ಪ್ರಕಟಿತವಾಗದ ಪತ್ರಿಕೆಗಳಲ್ಲಿ ವರದಿಗಳು ಮೂಡಿ ಬರುತ್ತಿರುವುದು ವಿಶ್ಮಯಕ್ಕೆ ಕಾರಣವಾಗಿದೆ.

ಜನ ಆಕ್ರೋಶ ಪತ್ರಿಕೆಯ ಮೂಲಗಳು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಇಂದು ಅಂದರೆ ದಿನಾಂಕ ೨೮-೦೬-೨೦೨೪ರಂದು ಶಹಾಪೂರಿನಲ್ಲಿ ಪ್ರತಿಭಟನೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ನಿರತರು ನಗರದ ಬಸವೇಶ್ವರ ವೃತ್ತದಿಂದ ತಹಶೀಲ ಕಚೇರಿಯವರೆಗೆ ರಾಸ್ತಾ ರೋಖೋ ನಡೆಸಿ ತಹಶೀಲದಾರರಿಗೆ ಮನವಿ ಸಲ್ಲಿಸಿದರು. ಕಾರಣ ಏನು ಗೊತ್ತೇ?

ಈ ಕುರಿತು ಜನ ಆಕ್ರೋಶ ಹೋರಾಟ ನಿರತರನ್ನು ಪ್ರಶ್ನಿಸಿದಾಗ-

ದಿನಾಂಕ ೦೫-೦೬-೨೦೨೪ರಂದು ಸಾಯಂಕಾಲ ೦೭-೩೦ರ ಸಮಯದಲ್ಲಿ ಶಹಾಪೂರು ಭೀಮರಾಯನಗುಡಿ ಮಾರ್ಗ ಮಧ್ಯೆ ಮೋಟಗಿ ರೆಸ್ಟೋರೆಂಟ್‌ ಹತ್ತಿರ ಅಥವಾ ಅದರ ಮುಂದೆ ಅರಣ್ಯ ಅಧಿಕಾರಿಯೊಬ್ಬರ ಶವ ಪತ್ತೆಯಾಗುತ್ತದೆ. ಅದು ಕೊಲೆಯಾಗಿದ್ದು ಶಹಾಪೂರು ಪೋಲಿಸರು ಅದನ್ನು ಅಸಹಜ ಮರಣ ಎಂದು ವರದಿ ಮಾಡಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ, ಈ ಕಾರಣಕ್ಕಾಗಿ ನ್ಯಾಯಕ್ಕಾಗಿ ಹೋರಾಟ ಮಾಡಲಾಗುತ್ತಿದೆ ಎನ್ನುವ ಉತ್ತರ ದೊರಕಿದೆ. ಹೋರಾಟ ನಿರತರು ತಹಶೀಲದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಇದೇ ಅಂಶವನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ

ಜನ ಆಕ್ರೋಶ ತಂಡ ಇಷ್ಟಕ್ಕೆ ಬಿಡುವುದಿಲ್ಲ. ಇನ್ನೂ ಮಾಹಿತಿಯನ್ನು ಕಲೆ ಹಾಕಲು ಯತ್ನಿಸುತ್ತದೆ. ಹೋರಾಟ ನಿರತರು ಹೇಳಿದಂತೆ ದಿನಾಂಕ ೫ರಂದು ಮೋಟಗಿ ರೆಸ್ಟೋರೆಂಟ್‌ ಹತ್ತಿರ ವ್ಯಕ್ತಿಯೊಬ್ಬರ ಶವ ಪತ್ತೆಯಾದದ್ದು ನಿಜ, ಸಾಯಂಕಾಲ ಏಳುವರೆಗೆ ಪತ್ತೆಯಾದ ಶವ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲ್ಪಟ್ಟಿದೆ, ಒಂದು ಅನಾಥ ಶವದ ರೀತಿಯಲ್ಲಿ! ಆದರೆ ಶವ ಅನಾಥವಲ್ಲ ಮತ್ತು ಮಾಮೂಲಿ ಶವವಲ್ಲ ಎಂದು ಅಲ್ಲಿದ್ದ ಸಾರ್ವಜನಿಕರು ದೃಢೀಕರಿಸಿಕೊಂಡಿದ್ದಾರೆ. ಜನ ಆಕ್ರೋಶ ತಂಡಕ್ಕೆ ಲಭ್ಯವಾದ ಛಾಯಾಚಿತ್ರಗಳ ಪ್ರಕಾರ ಅಲ್ಲಿನ ಸಾರ್ವಜನಿಕರು ವ್ಯಕ್ತಿಯ ಕಿಸೆಯಿಂದ ಐಡಿ ಕಾರ್ಡನ್ನು ತೆಗೆದಿದ್ದಾರೆ, ನಂತರ ಅಚ್ಚರಿಗೆ ಒಳಗಾಗಿದ್ದಾರೆ, ಕಾರಣ: ಆತನೊಬ್ಬ ಸರ್ಕಾರಿ ಅಧಿಕಾರಿ! ಆತ ಶಹಾಪೂರಿನ ಉಪ ವಲಯ ಅರಣ್ಯ ಅಧಿಕಾರಿ!! ಮರು ಮಾತನಾಡದೆ ಅವಸರ ಅವಸರವಾಗಿ ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಿ ಪ್ರಕರಣದಿಂದ ವಿಮುಕ್ತರಾಗಬೇಕು ಎನ್ನುವ ಆತುರ ಅಲ್ಲಿದ್ದ ಯಾರಿಗೋ ಉಂಟಾಗಿದೆ, ಆ ಪ್ರಕಾರ ಸಾಯಂಕಾಲದ ಕಾಲಕ್ಷೇಪ ಮಾಡಲು ವಿಶ್ರಾಂತಿಗೆಂದು ಸಾಮಾಜಿಕ ಡ್ರಿಂಕ್ಸ್‌ ಸೇವಿಸಲು ಬಂದ ಮಹೇಶ ತಂದೆ ಶಿವಶರಣಪ್ಪ ಕನಕಟ್ಟಿ ಎನ್ನುವ ೪೯ ವರ್ಷ ವಯೋಮಾನದ ವ್ಯಕ್ತಿ ಅನಿರೀಕ್ಷಿತ ರೀತಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಇದು ಆತನು ಊಹಿಸದ ಮರಣ. ಮರಣ ಏಕೆ ಸಂಭವಿಸಿತು, ಹೇಗೆ ಸಂಭವಿಸಿತು, ಕಾರಣ ಏನು ಎನ್ನುವುದು ಬಹುತೇಕರಿಗೆ ಗೊತ್ತಿದೆ ಮತ್ತು ಅದು ಇನ್ನೂ ಸಾಯಂಕಾಲದ ಏಳುವರೆಯ ಸಮಯ! ಆ ಸಮಯದಲ್ಲಿ ಪ್ರತಿಷ್ಠಿತರು ಮಾತ್ರ ಕುಡಿಯಲು ಬರುವ ಮೋಟಗಿ ಬಾರ್‌ ಅಂಡ್‌ ರೆಸ್ಟೋರೆಂಟಿನಲ್ಲಿ ವ್ಯಾಪಾರ ಜೋರಾಗಿರುತ್ತದೆ ಇನ್ನುವುದು ನೆನಪಿಡಬೇಕಾದ ವಿಷಯ. ಈ ಬಗ್ಗೆ ಪುನಃ ಸ್ಮರಿಸಿಕೊಳ್ಳೋಣ.

ನಂತರ ಆಸ್ಪತ್ರೆಗೆ ಸಾಗಿಸಲ್ಪಡುವ ಶವ ಶವ ಪರೀಕ್ಷೆಗೆ ಒಳಪಡುತ್ತದೆ. ಸರ್ಕಾರಿ ವೈದ್ಯ ವಿದ್ಯುಕ್ತವಾಗಿ ಶವ ಪರೀಕ್ಷೆ ಮಾಡಿ “ಮರಣವು ಹೃದಯಾಘಾತದಿಂದ ಸಂಭವಿಸಿದೆ” ಎನ್ನುವ ವರದಿ ನೀಡುತ್ತಾರೆ! ಮರೆಯದಿರಿ, ಸರ್ಕಾರಿ ಸಂಬಳ ಪಡೆಯುವ, ಜನರ ತೆರಿಗೆಯ ಹಣದಿಂದ ಜೀವಿಸುವ, ಜನರಿಗೆ ಮತ್ತು ಸರ್ಕಾರಕ್ಕೆ ನಿಷ್ಠನಾಗಿರಬೇಕಾದ ವ್ಯಕ್ತಿ ಸರ್ಕಾರಿ ನೌಕರನೊಬ್ಬನ ಮರಣ ಪರೀಕ್ಷಾ ವರದಿಯಲ್ಲಿ ಮರಣವು ಹೃದಯಾಘಾತದಿಂದ ಸಂಭವಿಸಿದೆ ಎಂದು ಷರಾ ಬರೆಯುತ್ತಾ ಶವ ಪರೀಕ್ಷೆ ವರದಿ ನೀಡುತ್ತಾನೆ. ಒಂದು ಮೂಲದಿಂದ ಪಡೆದ ಮಾಹಿತಿಯಂತೆ “ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದರೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ದೊರೆಯುವುದಿಲ್ಲ” ಎಂದು ಅಧಿಕಾರಿಯೊಬ್ಬರು ಮಹೇಶ ಕುಟುಂಬವನ್ನು ಬೆದರಿಸುತ್ತಾರಂತೆ, ಬೆದರಿಸುವುದು ಎಂದರೆ ಬ್ರೈನ್‌ ವಾಶ್‌ ಮಾಡುವುದು. ಅಂದರೆ ಅನುಕಂಪದ ನೌಕರಿ ದೊರೆಯುವುದಿಲ್ಲ. ಮರಣೋತ್ತರ ಸಿಗಬೇಕಾದ ಹಣಕಾಸು ನೆರವು ಇತ್ಯಾದಿಗಳು ದೊರೆಯುವುದಿಲ್ಲ ಎನ್ನುವುದು. ಗಂಡ, ಅಪ್ಪ, ಅಣ್ಣನೇ ಮರಣಿಸಿ ಇನ್ನಿಲ್ಲವಾದಾಗ ಕೇಸು, ಸಂಶಯ ಅಂತ ಇಲ್ಲದ್ದೊಂದು ರಗಳೆ ಸೃಷ್ಟಿಸಿಕೊಳ್ಳುವುದು ಏಕೆ ಎಂದು ಅವರಲ್ಲಿ ಭಾವನೆ ಮೂಡುವಂತೆ ಕಥೆಯನ್ನು ಅಥವಾ ದೃಶ್ಯವನ್ನು ಹೆಣೆಯಲಾಗಿದೆ. ಮಹೇಶನ ಕುಟುಂಬ ಇನ್ನೇನು ಯೋಚಿಸದೆ ಶವವನ್ನು ಪಡೆದು ಸಂಸ್ಕಾರ ಮಾಡಿದೆ. ಕಥೆ ಮುಗಿದು ಹೋಯಿತು ಎಂದು ಇಲ್ಲಿ ಅನೇಕರು ಭಾವಿಸಿದ್ದಾರೆ, ನಿರಾಳರಾಗಿದ್ದಾರೆ. ಆದರೆ ಅಕಾಲಿಕವಾಗಿ ಆಕಸ್ಮಿಕವಾಗಿ ಅನಿರೀಕ್ಷಿತವಾಗಿ ಮರಣಕ್ಕೀಡಾದ ಮಹೇಶ ಕನಕಟ್ಟಿಯವರ ಆತ್ಮ ಸುಮ್ಮನಿರಬೇಕಲ್ಲ? ಅದು ನಂತರ ಒಂದೊಂದೇ ಕಥೆಗಳನ್ನು ಹೇಳಲು ಆರಂಭಿಸಿದೆ.

ಅನೇಕ ಕರಾಳ ಸತ್ಯಗಳು ಬಯಲಾಗತೊಡಗಿವೆ, ಸಾಮಾನ್ಯ ನಾಗರಿಕರು ಭಯಪಡುವ ಬೆಚ್ಚಿ ಬೀಳುವ ಸತ್ಯಗಳು ಬಯಲಾಗತೊಡಗಿವೆ. ಮಹೇಶ ಕನಕಟ್ಟಿಯವರ ಆತ್ಮ ಶಹಾಪೂರಿನ ರಾಜಕಾರಣ, ಆಡಳಿತ, ಪೋಲಿಸ್‌ ವ್ಯವಸ್ಥೆಯ ವಿಕಾರ ಮುಖದ ಅನಾವರಣ ಮಾಡತೊಡಗಿದೆ. ಆ ಸತ್ಯಗಳು ನಿಮ್ಮನ್ನೂ ಬೆಚ್ಚಿ ಬೀಳಿಸಲಿವೆ, ಸರ್ಕಾರಕ್ಕೆ, ಭ್ರಷ್ಟ ಆಡಳಿತ ವ್ಯವಸ್ಥೆಯ ವಿರುದ್ಧ ಹಿಡಿ ಶಾಪ ಹಾಕಲಿದ್ದೀರಿ, ರೊಚ್ಚಿಗೇಳಲಿದ್ದೀರಿ. ಈ ವರದಿಯ ಮುಂದುವರೆದ ಭಾಗ ನಾಳೆ ಓದಲಿದ್ದೀರಿ!

(ಮುಂದುವರೆಯುತ್ತದೆ)

 

ಜನ ಆಕ್ರೋಶ ಪತ್ರಿಕೆಗೆ ಜಾಹಿರಾತು ಮತ್ತು ಸುದ್ದಿ ಹಾಗೂ ಲೇಖನಗಳನ್ನು ನೀಡಲು ನೇರವಾಗಿ ಸಂಪಾದಕರೊಂದಿಗೆ ವ್ಯವಹರಿಸಿ ಮತ್ತು ಮಾತನಾಡಿ. ನಕಲಿ ಪತ್ರಕರ್ತರು, ನಕಲಿ ವರದಿಗಾರರ ಸಂಖ್ಯೆ ಹೆಚ್ಚಾಗಿದ್ದು ಸರ್ಕಾರಿ ನೌಕರರನ್ನು ಗುತ್ತಿಗೆದಾರರನ್ನು ಏಮಾರಿಸುವ ಕಾರ್ಯ ನಡೆಯುತ್ತಿದೆ. ಒಂದೇ ಒಂದು ವಾಕ್ಯ ಬರೆಯಲು ಬಾರದವನ ಕೈಯಲ್ಲಿ ಮೈಕು ಮತ್ತು ವಾಹನಕ್ಕೆ ಪ್ರೆಸ್‌ ಎಂದು ಬರೆದಿರುತ್ತದೆ. ಇವರೆಲ್ಲಾ ಖದೀಮರು! ಖದೀಮರ ಬದುಕು ನರಕವಾಗಬೇಕು ಎಂದರೆ ಜನರು ಜಾಗೃತರಾಗಬೇಕು.

ಲಕ್ಷ್ಮೀಕಾಂತ ನಾಯಕ, ಸಂಪಾದಕರು ಜನ ಆಕ್ರೋಶ ಪತ್ರಿಕೆ. ಮೊಬೈಲ್‌ ಸಂಖ್ಯೆಗಳು: 9845968164/9886535957  email: [email protected]

 

WhatsApp Group Join Now
Telegram Group Join Now

Related Posts