ಅಪರಾಧ

ಕಾಡಿನ ನ್ಯಾಯ ವ್ಯವಸ್ಥೆಯಲ್ಲಿ ಕಣ್ಮರೆಯಾಗುತ್ತಿರುವ ಜೀವನ ಮತ್ತು ಜೀವಗಳು!

WhatsApp Group Join Now
Telegram Group Join Now

ಕಾಡಿನ ನ್ಯಾಯ ವ್ಯವಸ್ಥೆಯಲ್ಲಿ ಕಣ್ಮರೆಯಾಗುತ್ತಿರುವ ಜೀವನ ಮತ್ತು ಜೀವಗಳು!

“ಅಲಪಾ ಯಣ್ಣ, ಎಲ್ಲರೂ ಕೈ ಬಿಟ್ಟಾರ ಅಂತ ನೀನು ಕೈ ಬಿಡುತ್ತೇನು? ಊರು ಕೈಬಿಟ್ಟಿತು, ದೈವ ಕೈಬಿಟ್ಟಿತು, ಬಂಧು-ಬಳಗ ಕೈಬಿಟ್ಟಿತು, ಎಲ್ಲರೂ ಕೈಬಿಟ್ಟರು. ನೀನು ಜನರ ಕಥಿ ಬರೀತಿ ಅಂತ. ಬದುಕಿನ ಕಥಿ ಬರೀತಿ ಅಂತ. ಪತ್ರಕರ್ತ ಅಂತ. ನಿನಗೆ ನನ್ನ ಕಥಿ ಬರೆಯುವ ಧೈರ್ಯವಿಲ್ಲವೇ? ನಿನ್ನ ಪೆನ್ನಿಗೆ ಆ ಶಕ್ತಿ ಇಲ್ಲವೇ? ನನ್ನ ಕಥಿ ನಿನ್ನ ಪೆನ್ನಿನ ಮಸಿಯಿಂದ ಮೂಡುವುದಿಲ್ಲವೇ? ನೀನೂ ಕೈಬಿಟ್ಟರೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದು ಯಾರಿಂದ? ಯಾರಿದ್ದಾರೆ ನನ್ನ ಪಾಲಿಗೆ?” ದಿಗ್ಗನೆ ಎದ್ದು ಕುಳಿತ ಮಹರ್ಷಿ. ಸುತ್ತಮುತ್ತ ಕತ್ತು ಹೊರಳಿಸಿ ನೋಡಿದ. ಯಾರೂ ಕಾಣಿಸಲಿಲ್ಲ. ಅದು ಮಧ್ಯೆ ರಾತ್ರಿಯ ಸಮಯ. ನಿಶ್ಯಬ್ದದ ಹೊರತು ಏನೂ ಇರಲಿಲ್ಲ. ದೀಪ ಆರಿಸಿದ ಶಯನ ಕೋಣೆಯಲ್ಲಿ ಕತ್ತಲಿನ ಹೊರತು ಮತ್ತೇನೂ ಇರಲಿಲ್ಲ. ಜಂತಿಯ ಪ್ಯಾನು ನಿಧಾನವಾಗಿ ತಿರುಗುತ್ತಿತ್ತು. ಮಹರ್ಷಿ ಬೆವತು ಹೋಗಿದ್ದ. ದೇಹ ಸಣ್ಣಗೆ ಕಂಪಿಸುತ್ತಿತ್ತು. ಯಾರು ಮಾತನಾಡುತ್ತಿರುವುದು? ಮಂಚದ ಪಕ್ಕ ಇದ್ದ ಬೆಡ್ ಲ್ಯಾಂಪಿನ ಸ್ವಿಚ್ಚನ್ನು ಅದುಮಿದ. ಕೋಣೆಯಲ್ಲಿ ಬೆಳಕು ಹರಡಿಕೊಂಡಿತು. ಆ ಬೆಳಕಿನಲ್ಲಿಯೂ ಇನ್ನೊಮ್ಮೆ ನಿಟ್ಟಿಸಿ ನೋಡಿದ, ಉಹುಂ, ಯಾರೂ ಕಾಣಿಸಲಿಲ್ಲ. ಮಹರ್ಷಿಗೆ ಖಚಿತವಾಯಿತು, ಮತ್ತೊಂದು ಅತೃಪ್ತ ಆತ್ಮ ತನ್ನ ಬೆನ್ನು ಬಿದ್ದಿದೆ ಎಂದು! ತನಗೇ ಏಕೆ ಆತ್ಮಗಳು ಕಾಡುತ್ತಿವೆ ಎಂದು ಪ್ರಶ್ನೆ ಹಾಕಿಕೊಂಡ. ಆ ಪ್ರಶ್ನೆಗೆ ಉತ್ತರವಿರಲಿಲ್ಲ.

ಬದುಕು ಮುಗಿಸಿಕೊಂಡ ಆತ್ಮಗಳ ಕಥೆ ಬರೆಯುವುದರಿಂದ ಆಗುವ ಪ್ರಯೋಜನೆ ಏನು? ಆತ್ಮಗಳ ಕಥೆ ಕೇಳಿ ತನಗಾಗುವ ಪ್ರಯೋಜನೆ ಏನು? ಅತೃಪ್ತ ಆತ್ಮಗಳ ಕಥೆ ಸಮಾಜದಲ್ಲಿ ಯಾವ ಧನಾತ್ಮಕ ಪರಿಣಾಮ ಬೀರೀತು? ಈ ಅತೃಪ್ತ ಆತ್ಮಗಳು ರೋಧನ ಮತ್ತು ಗೋಳಿನ ಹೊರತು ಏನನ್ನು ಹೇಳುತ್ತವೆ? ಯಾವುದೋ ಕಾರಣಕ್ಕೆ ಮರಣಿಸಿ ಸಮಾಧಿ ಸೇರಿದ ದೇಹ ಕೊಳೆತು ಅಸ್ತಿತ್ವವನ್ನು ಕಳೆದುಕೊಂಡಿರುತ್ತದೆ. ಸಮಾಜದ ನೆನಪಿನಿಂದ ಮರೆಯಾದ ವ್ಯಕ್ತಿ ಪ್ರಸ್ತುತ ಅಪ್ರಸ್ತುತನಾಗಿರುತ್ತಾನೆ. ಬದುಕೆನ್ನುವುದು ನಾವು ನಿರ್ಮಿಸಿಕೊಳ್ಳುವ ಧ್ಯೇಯದ ಮೇಲೆ ಸಾಗುತ್ತಿರುತ್ತದೆ. ಬದುಕಿಗೆ ಗುರಿ ಇರಬೇಕು ಮತ್ತು ಗುರಿಯ ಕಡೆಗೆ ಪಯಣವಿರಬೇಕು. ಗುರಿ ತಲುಪದ ಆತ್ಮಗಳನ್ನು ನಾವು ಅತೃಪ್ತ ಆತ್ಮಗಳು ಎನ್ನುತ್ತೀವಾದರೂ ಈ ಆತ್ಮಗಳು ಅರ್ಧ ಪ್ರಯಾಣ ಮಾಡಿ ಜೀವನ ಸ್ತಗಿತಗೊಳಿಸಿಕೊಂಡ ಕಥೆ ವಿಶಾದಕರವಾಗಿರುತ್ತದೆ. ತಾನೊಂದು ಆತ್ಮದ ಕಥೆ ಬರೆದು, ಅದು ಜನರನ್ನು ತಲುಪಿ ಜನರಿಗೆ ಮನರಂಜನೆ ಒದಗಿಸಬಲ್ಲದೆ ಹೊರತು ಆತ್ಮದ ದಾರುಣ ಕಥೆಗೆ ನ್ಯಾಯ ಒದಗಿಸುವ ಪ್ರಯತ್ನ ಯಾವ ಓದುಗನೂ ಮಾಡುವುದಿಲ್ಲ.

ಮಾಡಲಿಕ್ಕೆ ಮನುಷ್ಯರಿದ್ದರೆ ತಾನೇ?

ಎದುರಿನ ಗೋಡೆಗೆ ನೇತು ಹಾಕಿದ ಗಡಿಯಾರ ಸಮಯ ಒಂದುವರೆಯನ್ನು ಸೂಚಿಸುತ್ತಿತ್ತು. ಕಳೆದ ರಾತ್ರಿ ಸೇವಿಸಿದ ಮದ್ಯದ ನೆಶೆಯಿನ್ನೂ ಇಳಿದಿರಲಿಲ್ಲ. ತಲೆ ಭಾರವಾಗಿತ್ತು. ಬಿಸಿಲ ಕಾಲವದು. ಪ್ಯಾನು ತಿರುಗುತಿದ್ದೂ ದಗೆ ಇತ್ತು. ಮಹರ್ಷಿ ಮಂಚದ ಪಕ್ಕವೇ ಇದ್ದ ಟೀಪಾಯಿ ಮೇಲಿನ ನೀರಿನ ಬಾಟಲನ್ನು ತೆಗೆದುಕೊಂಡು ಗಟಗಟ ನೀರು ಕುಡಿದ. ತಣ್ಣಗಿನ ನೀರು ಎದೆಯನ್ನು ತಂಪಾಗಿಸಿ ಹೊಟ್ಟೆ ಸೇರಿತು. ಈ ಸಿಗರೇಟಿನದೊಂದು ದೊಡ್ಡ ವ್ಯಸನ; ಬಿಡಲು ಎಷ್ಟೇ ಪ್ರಯತ್ನಿಸಿದರೂ ಅದು ಮತ್ತೆಮತ್ತೆ ಗಂಟು ಬೀಳುತ್ತಿತ್ತು. ಸದ್ಯದ ತನ್ನ ಪರಿಸ್ಥಿತಿಯಲ್ಲಿ ವ್ಯಸನಗಳಿಂದ ಮುಕ್ತವಾಗುವುದು ಕಷ್ಟವಿತ್ತು. ದಿನವಿಡೀ ಕುಡುಕರು, ತಂಬಾಕು ವ್ಯಸನಿಗಳ ಜೊತೆ ಕಾಲ ಕಳೆಯಬೇಕಿತ್ತು. ಈ ದೇಶದ ಕೆಟ್ಟ ಸರ್ಕಾರ ಒಳ್ಳೆಯ ಪ್ರಚಾರದ ಜಾಹಿರಾತನ್ನು ಜನರಿಗೆ ತಲುಪಿಸುವುದೇ ಇಲ್ಲ. ಆದರೆ ಕೆಟ್ಟ ಚಟಗಳಿಗೆ ಕಾರಣವಾಗುವ ಜಾಹಿರಾತುಗಳು ಎಲ್ಲಂದರಲ್ಲಿ ಕಾಣಿಸುತ್ತವೆ. ಸರ್ಕಾರ ಜನರ ದೌರ್ಬಲ್ಯಗಳ ನಡೆಯುತ್ತಿರುವಂತೆ ಯಥೇಚ್ಚವಾದ ಮದ್ಯ ಮಾರಾಟಕ್ಕೆ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಒತ್ತು ನೀಡಿದೆ. ಕೆಟ್ಟ ರಾಜಕಾರಣಿಗಳು, ಕೆಟ್ಟ ಪ್ರಜೆಗಳಿರುವ ಈ ದೇಶದ ಸ್ಥಿತಿ ಯಾವತ್ತಿಗೂ ಬದಲಾಗುವುದಿಲ್ಲ. ಅದೊಂದು ತಾನೂ ಗೆಳೆಯ ವಶಿಷ್ಟ ಮಾತಿಗೆ ಕುಳಿತಾಗ ದೇಶದ ಕೆಟ್ಟ ಸ್ಥಿತಿಯ ಬಗ್ಗೆ ಚರ್ಚೆ ಬಂದಿತ್ತು. ವಶಿಷ್ಟ ಗಹಗಹಿಸಿ ನಗುತ್ತಾ “ಮಾನಸಿಕ ರೋಗಿಗಳನ್ನು ದೇವರು ಎಂದು ಭಾವಿಸುವ, ವಿಜ್ಞಾನಿಗಳನ್ನು ಹುಚ್ಚರು ಎಂದು ಭಾವಿಸುವ ಈ ದೇಶದ ಸ್ಥಿತಿ ಇನ್ನೂ ಸಾವಿರ ಶತಮಾನಗಳು ಗತಿಸಿದರೂ ಬದಲಾಗುವುದಿಲ್ಲ” ಎಂದಿದ್ದ. ದೇಶದ ವಿದ್ಯಾಮಾನಗಳು ಅವನ ಮಾತಿಗೆ ಪೂರಕವಾಗಿವೆ. ಸಿಗರೇಟು ತುಟಿಗಿಟ್ಟುಕೊಂಡು ಕಡ್ಡಿ ಗೀರಿದ.

“ಕೊಂದು ಹಾಕಲಾಯಿತಣ್ಣ ನನ್ನನ್ನು! ನನ್ನನ್ನು ಮಾತ್ರ ಕೊಂದಿದ್ದರೆ ನನಗೆ ನೋವಿರುತ್ತಿರಲಿಲ್ಲ. ನನ್ನ ಹೊಟ್ಟೆ ಒಳಗಿನ ಐದು ತಿಂಗಳ ಮಗುವಿನ ಜೊತೆಗೆ ಕೊಂದು ಹಾಕಲಾಯಿತು. ನನ್ನನ್ನು ಬಿಡಿ, ಮಗುವಿನ ಮೇಲೂ ರಾಕ್ಷಸನಿಗೆ ಕನಿಕರ ಹುಟ್ಟಬಾರದೆ?” ಎಂದು ಮತ್ತೆ ಶೂನ್ಯದಿಂದ ಮಾತುಗಳು ಕೇಳಿಬಂದವು. ಮಹರ್ಷಿ ಮ್ಲಾನವದನನಾದ. ಕರಳು ಕಿವಿಚಿದಂತಾದವು. ಈ ಜಗತ್ತಿಗೆ ಇನ್ನೂ ನಾಗರಿಕತೆ ರೂಢಿಯಾಗದಿರುವಿಕೆಗೆ ಖೇದಗೊಂಡ. ಜಗತ್ತು ಆದುನಿಕವಾಗುತ್ತಾ ಆಗುತ್ತಾ ಕ್ರೂರವಾಗುತ್ತಿದೆಯಲ್ಲ ಅಂತನ್ನಿಸಿತು. ಮನುಷ್ಯ ಮೃಗವಾಗಿ ಪರಿವರ್ತಿತನಾಗುತ್ತಿದ್ದಾನೆಯೇ ಎನ್ನುವ ಪ್ರಶ್ನೆ ಮೂಡಿತು. ರಾಜ ಪ್ರಭುತ್ವದಿಂದ ಪ್ರಜಾ ಪ್ರಭುತ್ವಕ್ಕೆ ಬಂದಿದ್ದೇವೆ. ನಮ್ಮನ್ನು ನಾವು ಆಳಿಕೊಳ್ಳುವ ಒಂದು ವ್ಯವಸ್ಥಿತ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಮಿಲಟರಿ ಇದೆ, ಪೋಲಿಸ್ ಇದೆ, ನಾನಾ ನಮೂನೆಯ ನ್ಯಾಯಾಲಯಗಳು ಇವೆ. ಇದ್ದರೂ ಏನು ಉಪಯೋಗ? ಕ್ರಿಮಿನಲ್ಸ್ಗಳಿಗೆ ಶಿಕ್ಷೆ ನೀಡದ ಸ್ಥಿತಿಯಲ್ಲಿ ನಾವಿದ್ದೇವೆ. ಕಣ್ಣಲ್ಲಿ ನೀರು ತುಂಬಿ ಬಂದವು ಮಹರ್ಷಿಗೆ.

“ನಾನೊಂದು ಬಡತನದ ಮನೆಯ ತಂದೆ ತಾಯಿ ಇಲ್ಲದ ಅನಾಥ ಮಗು, ಚಿಕ್ಕಮ್ಮ ನನ್ನನ್ನು ಸಾಕಿದಳು. ನನಗೀಗ ಹದಿನೇಳು ವರ್ಷ. ಅಮ್ಮನಿಗೆ ನನಗೆ ಮದುವೆ ಮಾಡುವ ಚಿಂತೆ. ನನಗೊಂದು ಬದುಕು ಕಲ್ಪಿಸುವ ಚಿಂತೆ. ವರಾನ್ವೇಷಣೆ ನಡೆಸಿದರು. ಸಾಕು ಮಗಳಿಗೊಂದು ಸುಂದರ ಬದುಕು ರೂಪಿಸುವ ಕನಸು ಅಮ್ಮ ಅಪ್ಪನದು. ಅವರ ವರಾನ್ವೇಷಣೆಗೆ ವರನೊಬ್ಬ ಸಿಕ್ಕ. ಅವನು ಕುರಿಗಾಹಿ. ಮದುವೆ, ಸಂಸಾರ ಒಂದು ಅದ್ಬುತವಾದ ಅನುಭೂತಿ ಎಂದು ನಾನು ಭಾವಿಸಿದ್ದೆ. ಮದುವೆಯ ಕುರಿತು ಸುಂದರವಾದ ಕನಸು ಮತ್ತು ಕಲ್ಪನೆಗಳನ್ನು ಕಾಣತೊಡಗಿದೆ. ಗಂಡ, ನಂತರ ಮಕ್ಕಳು. ನಮ್ಮದೇ ಆದ ಒಂದು ಚಿಕ್ಕ ಸುಂದರ ಸಂಸಾರ. ಇನ್ನೇನು ನಾನು ಪ್ರಬುದ್ಧ ಗೃಹಿಣಿಯಾಗಲಿದ್ದೇನೆ. ಗಂಡನಿಗೆ ಅಡುಗೆ ಮಾಡುವುದು, ಇಬ್ಬರೂ ಕುಳಿತು ನಗುನಗುತ್ತಾ ಊಟ ಮಾಡುವುದು, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದು, ಪರಸ್ಪರ ದೇಹಗಲ ಸಮ್ಮಿಲನ… ಈ ಕಲ್ಪನೆಗಳು ನನ್ನನ್ನು ರೋಮಾಂಚಿತಳನ್ನಾಗಿ ಮಾಡುತ್ತಿದ್ದವು. ಆದರೆ ವಿಧಿ ಆಟ ಬೇರೆ ಇತ್ತು. ವಿಧಿ ನನ್ನ ಹಣೆಬರಹವನ್ನು ಅತ್ಯಂತ ಕ್ರೂರವಾಗಿ ಬರೆದಿತ್ತು”

ನಂತರ ಬಿಕ್ಕಿಬಿಕ್ಕಿ ಅಲತೊಡಗಿತು ಆತ್ಮ. ಅದೊಂದು ಮುಗ್ದವಾದ ನಿರಕ್ಷರೀ ಆತ್ಮ. ಬಡತನದ ಕುಟುಂಬವೊಂದರಲ್ಲಿ ಜನಸಿ ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡು ಪರಾವಲಂಬಿಯಾಗಿ ಬೆಳೆದ ಅತೃಪ್ತ ಬದುಕಿನ ಆತ್ಮ ಅದಾಗಿತ್ತು. ಆ ನೀರವ ರಾತ್ರಿಯಲ್ಲಿ ದುಃಖಪೂರಿತ ಧ್ವನಿಯಲ್ಲಿ ಸ್ಪಷ್ಟ ಶಬ್ದಗಳಲ್ಲಿ ತನ್ನ ನೋವಿನ ಕಥೆ ಹೇಳುತ್ತಿದ್ದರೆ ಇತ್ತ ಮಹರ್ಷಿಯೂ ಬಿಕ್ಕತೊಡಗಿದ. ತನ್ನ ಪಾಲಿಗೆ ಬರೀ ಇಂತಹ ಕಥೆಗಳೇ ಲಭ್ಯವಾಗುತ್ತವಲ್ಲ ಏಕೆ ಎನ್ನುವ ಪ್ರಶ್ನೆ ಅವನನ್ನು ಕಾಡತೊಡಗಿತು. ನೋವಿಗೆ ಕನ್ನಡಿಯಾಗಬೇಕಾದ ಕರ್ಮ ಯಾವ ಶತೃವಿಗೂ ಬೇಡ. ಹೋಗಮ್ಮಾ ಇಲ್ಲಿಂದ ಎಂದು ಈ ಆತ್ಮಕ್ಕೆ ಗದುರಿಸಲೇ ಎನ್ನುವ ಯೋಚನೆ ಬಂದಿತು. ಮತ್ತೊಂದು ಕ್ಷಣ ಹೇಳಿಕೊಂಡರೆ ಹೇಳಿಕೊಳ್ಳಲಿ, ತನ್ನ ಭಾವನೆಗಳನ್ನು, ತನ್ನ ಕಥೆಯನ್ನು ನನ್ನೊಂದಿಗೆ ಹಂಚಿಕೊಳ್ಳುವ ಮೂಲಕ ಈ ಆತ್ಮ ಸಮಾಧಾನಗೊಳ್ಳುವಂತಿದ್ದರೆ ಆಗಲಿ. ಇದರಿಂದ ನನಗಾಗುವ ನಷ್ಟವೇನು?

“ಅಡವಿಯಲ್ಲಿ ಆಡುಕುರಿ ಮೇಯಿಸಿಕೊಂಡಿದ್ದ ಅವನು ಮುಗ್ಧನಾಗಿರುತ್ತಾನೆ ಎನ್ನುವ ಭಾವನೆ ನನಗಿತ್ತು. ಗಂಡನಿಗೆ ಈ ಜೀವ ಮತ್ತು ಜೀವನವನ್ನು ಸಂಪೂರ್ಣವಾಗಿ ಅರ್ಪಿಸಿ ಸುಂದರವಾದ ಜೀವನವನ್ನು ಕಟ್ಟಿ ತುಂಬು ಜೀವನ ಸಾಗಿಸಬೇಕು ಎನ್ನುವ ಕನಸು ನನ್ನದಾಗಿತ್ತು. ಮದುವೆಯಾದ ತಿಂಗಳೊಳಗೆ ಅವನ ನಿಜ ಸ್ವರೂಪ ತಿಳಿಯಿತು. ಅವನೊಬ್ಬ ಮೂರ್ಕನಾಗಿದ್ದ. ಹುಚ್ಚನಾಗಿದ್ದ. ಕ್ರೂರಿಯಾಗಿದ್ದ. ಮಾನಸಿಕ ರೋಗಿಯಾಗಿದ್ದ. ಅವನೊಬ್ಬ ಸಂಶಯ ಪಿಶಾಚಿಯಾಗಿದ್ದ. ನನ್ನನ್ನು ಅನುಕ್ಷಣವೂ ಅನುಮಾನಿಸತೊಡಗಿದ. ಅನುಕ್ಷಣವೂ ಹಾದರದ ಬಗ್ಗೆ ಮಾತನಾಡತೊಡಗಿದ. ಬರಿ ಅನುಮಾನಕ್ಕೆ ಸಂಬಂಧಿಸಿದ ಮಾತುಗಳನ್ನು ಮಾತ್ರ ಆಡುತ್ತಿದ್ದ. ಕುಂತರೊಂದು, ನಿಂತರೊಂದು ಅನುಮಾನ ವ್ಯಕ್ತಪಡಿಸುತ್ತಿದ್ದ. ಬದುಕು ಎಷ್ಟೊಂದು ಘೋರ ನರಕವಾಗಿ ಬದಲಾಯಿತು ಎಂದರೆ ಹೆಣ್ಣು ಜನ್ಮವನ್ನು ಪ್ರಸಾದಿಸಿದ ದೇವರಿಗೆ ನಾನು ಅನುಕ್ಷಣವೂ ಶಾಪ ಹಾಕತೊಡಗಿದೆ. ಅವರು ಕೊಟ್ಟಾಗಿದೆ, ಮತ್ತೆ ಇಟ್ಟುಕೊಳ್ಳುತ್ತಾರೆಯೇ? ಇದು ನನ್ನ ಪಾಲಿನ ಜೀವನ, ಮುಂದೆ ಯಾವತ್ತೋ ಸರಿಹೋಗಬಹುದು ಎನ್ನುವ ಸಣ್ಣ ಭರವಸೆ ಎದೆಯಾಳದಲ್ಲಿದ್ದ ಕಾರಣ ಎಲ್ಲಾ ನೋವುಗಳನ್ನು ಸಹಿಸತೊಡಗಿದೆ. ಅವನು ಹೀಂಸ್ರ ಪಶುವಿನಂತೆ ಭೋಗಿಸುತ್ತಿದ್ದ. ಕ್ರೂರ ಮೃಗದಂತೆ ಹಲ್ಲೆ ಮಾಡುತ್ತಿದ್ದ. ಅವನ ಎದೆಯೊಳಗೆ ಒಂದು ಹನಿ ಕನಿಕರವಿರಲಿಲ್ಲ. ಮದುವೆಯಾದ ತಿಂಗಳೆರಡು ತಿಂಗಳಿನಲ್ಲಿ ಕಟ್ಟಿದ ಭ್ರೂಣವೊಂದು ಅವನು ಒದ್ದ ಒದೆತಕ್ಕೆ ಮಂಚದ ಕಾಲಿಗೆ ಸಿಡಿದು ಬಿದ್ದೆನಲ್ಲ? ಪಿಂಡ ಘಾಷಿಗೊಂಡು ಶರೀರದಿಂದ ರಕ್ತ ಸುರಿಯತೊಡಗಿತು. ಮೊದಲ ಮಗು ಹಾಗೇ ಸತ್ತು ಹೋಯಿತು. ಮೂಕವಾಗಿ ರೋಧಿಸುವುದರ ಹೊರತು ನಾನೇನು ಮಾಡದ ಸ್ಥಿತಿ. ಅತ್ತು ಅತ್ತು ಕಣ್ಣೀರು ಬತ್ತಿ ಹೋದವು” ಆತ್ಮ ಮೌನವಾಯಿತು. ನಿಜಕ್ಕೂ ಇದೊಂದು ದುರಂತಮಯ ಕಥೆ. ಸರ್ಕಾರ ಮಹಿಳಾ ದೌರ್ಜನ್ಯಗಳನ್ನು ತಡೆಯಲಿಕ್ಕೆ ಸಾಕಷ್ಟು ಯೋಜನೆಗಳನ್ನು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎನ್ನುವ ಒಂದು ಇಲಾಖೆಯನ್ನೇ ಸ್ಥಾಪಿಸಿದರೂ ಮಹಿಳೆಯರ ಮೇಲಾಗುತ್ತಿರುವ ಈ ಘೋರ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಇಲಾಖೆ ನೆಪ ಮಾತ್ರ ಅಂತನ್ನಿಸುತ್ತದೆ. ಅತಿಕೆಟ್ಟ ಆಡಳಿತ ವ್ಯವಸ್ಥೆ. ಇಂತಹ ವ್ಯವಸ್ಥೆಯ ವಿರುದ್ಧ ಹೋರಾಡುವವರು ಯಾರು? ಇಲ್ಲಿ ಇನ್ನೊಂದು ಮುಖ್ಯವಾದ ಸಂಗತಿ ಇದೆ: ಜನರಿಗೆ ಅದರಲ್ಲೂ ಮಹಿಳೆಯರಿಗೆ ಶಿಕ್ಷಣ ಇಲ್ಲದಿರುವಿಕೆ. ನೋವಿನ ನಿಟ್ಟುಸಿರು ಬಿಟ್ಟ ಮಹರ್ಷಿ. ಸಾಕಷ್ಟು ಜನ ಸ್ತ್ರೀ ಪರ ಹೋರಾಟಗಾರರು, ಸಂಘಟನೆಗಳೂ ಇವೆ, ಇದ್ದರೇನು ಪ್ರಯೋಜನೆ?

“ಅವತ್ತು ರಾತ್ರಿ ವಿನಾಕಾರಣ ಹೊಡೆಯತೊಡಗಿದ. ಕಾರಣ: ಮತ್ತದೇ ಸಂಶಯ. ಅವನು ನನ್ನನ್ನು ಶೌಚಕ್ಕೂ ಒಬ್ಬಂಟಿಗಳನ್ನಾಗಿ ಕಳುಹಿಸುತ್ತಿರಲಿಲ್ಲ. ತಾನೂ ಬೆನ್ನ ಹಿಂದೆ ಬರುತ್ತಿದ್ದ. ಬೇಡ, ಹೊಟ್ಟೆಯಲ್ಲಿ ಮಗುವಿದೆ. ಮೊದಲಿನಂತೆ ಆಗುವುದು ಬೇಡ ಎಂದು ಬೇಡಿಕೊಂಡೆ. ಕಾಲು ಹಿಡಿದೆ. ಕನಿಕರ ಮೂಡಲಿ ಎಂದು ಹೃದಯ ಕರಗುವ ಅಳು ಅತ್ತೆ. ಅವನಿಗೆ ಕನಿಕರ ಮೂಡಲಿಲ್ಲ. ಹೊಡೆದ, ಹೊಡೆದ, ಹೊಡೆದ. ಆ ಕಠಿಣವಾದ ಏಟುಗಳನ್ನು ಹೆಣ್ಣಾದ ಮತ್ತು ಬಸಿರು ಹೆಂಗಸಾದ ನಾನು ಎಷ್ಟೂಂತ ಸಹಿಸಲಿ? ಕೊನೆಗೆ ಉಸಿರು ಚೆಲ್ಲಿದೆ, ಸಾಯುವ ಮುನ್ನ ನನ್ನ ಕಾಡಿದ ನೋವು: ನನ್ನ ಕಂದಮ್ಮನನ್ನು ಪ್ರಪಂಚ ನೋಡುವ ಮುನ್ನ ಕರೆದೊಯುತ್ತಿದ್ದೇನಲ್ಲ ಎನ್ನುವುದು. ಸತ್ತು ಹೋದೆ” ಎಂದು ಆತ್ಮ ಮಾತನ್ನು ನಿಲ್ಲಿಸಿತು. ಸತ್ತ ಮೇಲೆ ಇನ್ನೇನು ಮಾತುಗಳಿರುತ್ತವೆ? ಕಥೆ ಎಲ್ಲಿರುತ್ತದೆ? ಆತ್ಮ ಶೂನ್ಯದಲ್ಲಿ ಕರಗಿ ಹೋಗಿರಬೇಕು, ಅದರ ಸದ್ದು ಆನಂತರ ಹೊರಡಲಿಲ್ಲ. ಮಹರ್ಷಿ ಇನ್ನೊಂದು ಸಲ ನೀರು ಕುಡಿದು ಹೊಸ ಸಿಗರೇಟು ಹಚ್ಚಿಕೊಂಡ. ಇಂತಹ ಘಟನೆಗಳು ಈ ದೇಶದಲ್ಲಿ ಒಂದು ದಿನಕ್ಕೆ ಎಷ್ಟು ನಡೆಯುತ್ತವೋ ಗೊತ್ತಿಲ್ಲ. ಆದರೆ ಅವುಗಳ ಸಂಖ್ಯೆ ಮಾತ್ರ ಕಡಿಮೆ ಇರುವುದಿಲ್ಲ. ಮಾನಸಿಕ ರೋಗಿ ಗಂಡನಿಂದ ಹತರಾಗುವ ಹತಭಾಗಿನಿಯರ ಸಾವಿಗೆ ನ್ಯಾಯ ಯಾವತ್ತಿಗೂ ಸಿಗುವುದಿಲ್ಲ. ನ್ಯಾಯ ಕೊಡಿಸುವವರಾದರೂ ಯಾರು? ಕುಡುಕ ಗಂಡಂದಿರ ಹಿಂಸೆಗೆ ಬಲಿಯಾಗುವವರ ಸಾವುಗಳೂ ಕಡಿಮೆ ಇಲ್ಲ. ತಾನು ನೊಂದ ಆತ್ಮಗಳ ಕಥೆಗೆ ಅಕ್ಷರಗಳನ್ನು ಒದಗಿಸಬಲ್ಲನೆ ಹೊರತು ತನ್ನಿಂದ ಮಾಡಲು ಏನು ಸಾಧ್ಯವಾದೀತು?

ವಶಿಷ್ಟ ಈ ಆತ್ಮದ ಕಥೆಯನ್ನು ಓದಿದ ಮೇಲೆ ಮಾತೊಂದನ್ನು ಹೇಳಿದ, ಆ ಮಾತು ಕೇಳಿ ಮಹರ್ಷಿ ನೋವಿನಿಂದ ವಿಲವಿಲ ಒದ್ದಾಡಿದ. ಇದೊಂದು ಕನಿಕರವಿಲ್ಲದ ಕ್ರೂರ ಜಗತ್ತು. ಹೆಜ್ಜೆ ಹೆಜ್ಜೆಗೊಂದು ದೇವಸ್ಥಾನ, ಮಸೀದಿ, ಚರ್ಚುಗಳಿವೆ. ಜನ ದೇವರಿಗೆ ಹೆದರುತ್ತಾರೆ. ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಯಾವ ಕಾರಣಕ್ಕೆ ಮತ್ತು ಏಕೆ ಎನ್ನುವುದು ಅರ್ಥವಾಗದ ಸಂಗತಿ. ಏಕೆಂದರೆ ಕ್ರೌರ್ಯಗಳು, ಹಲ್ಲೆಗಳು, ಅತ್ಯಾಚಾರಗಳು ನಡೆಯುತ್ತಲೇ ಇವೆ. ಇದರ ಅರ್ಥ ಏನನ್ನು ಸೂಚಿಸುತ್ತದೆ ಎಂದು ಯೋಚಿಸಿದ ಮಹರ್ಷಿ. ಇದೆಲ್ಲದ್ದಕ್ಕಿಂತ ಅವನನ್ನು ಕಾಡಿದ್ದು ವಶಿಷ್ಟನ ಮಾತು.

“ಮಿತ್ರ, ಇಂತಹ ಘಟನೆಗಳು ಪೋಲಿಸ್ ಮೆಟ್ಟಿಲೂ ಏರುವುದಿಲ್ಲ. ಕೊಂದವನ ಕಡೆಯವರು, ಕೊಲ್ಲಿಸಿಕೊಂಡವರ ಕಡೆಯವರು ಮತ್ತು ಕೆಲವು ಮಧ್ಯೆವರ್ತಿಗಳು ಸೇರಿ ಗುಪ್ತವಾಗಿ ಮಾತುಕತೆಗಳನ್ನಾಡಿ ಸತ್ತಿರುವ ಪ್ರಾಣಕ್ಕೆ ಬೆಲೆ ನಿರ್ಧರಿಸುತ್ತಾರೆ. ನಂತರ ಶವ ಮುಂದೆಂದೂ ಕಾಡದಿರುವಂತೆ ಸಮಸ್ತ ಗ್ರಾಮಸ್ಥರ ಸಮ್ಮುಖದಲ್ಲಿ ಸುಟ್ಟು ಹಾಕುತ್ತಾರೆ. ಇದು ಪದ್ಧತಿ. ಅತ್ಯಂತ ಘೋರವಾದ ರೀತಿಯಲ್ಲಿ ಗಂಡನ ಹಿಂಸೆಗೆ ಬಲಿಯಾಗುವ ಮಹಿಳೆಯರ ಸಾವುಗಳಿಗೆ ನ್ಯಾಯ ಸಿಗದೇ ಹೋಗುತ್ತದೆ. ಕೊಂದನಾ? ಏನೋ ಆಕಸ್ಮಿಕ ಸಂಭವಿಸಿದೆ. ಸತ್ತವರು ಸತ್ತು ಹೋಗಿದ್ದಾರೆ, ಇದ್ದವನು ಜೈಲಿಗೆ ಹೋಗಬೇಕೆ? ಎಂದು ಮಾತುಕತೆ ಮುಗಿಸುತ್ತಾರೆ. ಕಾನೂನಿನ ಕಣ್ಣಿಗೆ ಕಾನೂನು ಯಾರಿಗಾಗಿ ಯಾರಿಂದ ರಚನೆಗೊಂಡಿದೆಯೋ ಅವರೇ ದ್ರೋಹ ಮಾಡುತ್ತಾರೆ. ಅಪರಾಧಿ ಕೆಲಕಾಲದ ನಂತರ ನಿರ್ಭಯವಾಗಿ ತಿರುಗುತ್ತಾನೆ, ಮತ್ತೊಂದು ಮದುವೆ ಮಾಡಿಕೊಳ್ಳುತ್ತಾನೆ. ಇದು ಕೆಟ್ಟ ಪ್ರಜೆಗಳಿರುವ ದೇಶ ಮಿತ್ರ. ಇಲ್ಲಿ ನ್ಯಾಯ ನೀತಿಗಳಿಲ್ಲ. ಕಾಡಿನ ನ್ಯಾಯ ವ್ಯವಸ್ಥೆ ಇದೆ” ಎಂದ.

ಆ ಮಾತು ಸತ್ಯವಿದೆ ಎಂದುಕೊಂಡ ಮಹರ್ಷಿ.

ಲಕ್ಷ್ಮೀಕಾಂತ ನಾಯಕ

WhatsApp Group Join Now
Telegram Group Join Now

Related Posts