ರಾಜಕೀಯ

೧೪ರಂದು ರಾಜ್ಯದಲ್ಲಿ ಮೋದಿ ಪ್ರಚಾರ

WhatsApp Group Join Now
Telegram Group Join Now

ಬೆಂಗಳೂರು, 7 ಏಪ್ರಿಲ್ : ಶತಾಯಗತಾಯ ರಾಜ್ಯದಲ್ಲಿ ಈ ಬಾರಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ದಾಖಲೆ ಬರೆಯುವ ಹೆಗ್ಗುರಿಯೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರು ಇದೇ 14ರಂದು ರಾಜ್ಯದಲ್ಲಿ ವಿಧ್ಯುಕ್ತವಾಗಿ ಪ್ರಚಾರದ ರಣಕಹಳೆ ಮೊಳಗಿಸಲಿದ್ದಾರೆ. ಇದೇ ತಿಂಗಳ 26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ವಿಶೇಷವಾಗಿ ಒಕ್ಕಲಿಗರ ಬಾಹುಳ್ಯ ವಿರುವ ಕ್ಷೇತ್ರದಲ್ಲಿ ಮೋದಿಯವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಕೆಲವು ಕಡೆ ರೋಡ್ ಶೋಗಳನ್ನು ನಡೆಸಲಿದ್ದಾರೆ.

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ದಿನದಂದು ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ್ದ ಮೋದಿಯವರು ಇದೇ ಮೊದಲ ಬಾರಿಗೆ ವಿದ್ಯುಕ್ತವಾಗಿ ಪ್ರಚಾರಕ್ಕೆ ಧುಮುಕಲಿದ್ದು, ಚುನಾವಣಾ ಕಾವು ರಂಗೇರಿಸಲಿದ್ದಾರೆ. 14ರಂದು ಭಾನುವಾರ ಕರ್ನಾಟಕಕ್ಕೆ ಆಗಮಿಸಲಿರುವ ಮೋದಿಯವರು ಮೂರು ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಪ್ರಚಾರ ನಡೆಸಲಿದ್ದಾರೆ. ಮೊದಲು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಸುವ ಮೋದಿಯವರು ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಮೋದಿಯವರು ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚಿಕ್ಕಬಳ್ಳಾಪುರ ನಂತರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ಮತ್ತೊಂದು ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದ್ದಾರೆ.

ದೇವನಹಳ್ಳಿಯಲ್ಲಿ ಪ್ರಚಾರ ನಡೆಸಿದರೆ ಅದು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರವಿದೆ. ಇನ್ನೊಂದು ಮೂಲದ ಪ್ರಕಾರ ದೇವನಹಳ್ಳಿಯಲ್ಲಿ ಸಾಧ್ಯವಾಗದಿದ್ದರೆ ರಾಮನಗರ, ಚನ್ನಪಟ್ಟಣ ಮಧ್ಯಭಾಗದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ನಡೆಸಲು ಬಿಜೆಪಿ ಉದ್ದೇಶಿಸಿದೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now

Related Posts