ಅಥಣಿ: ಗ್ರಾಮ ಪಂಚಾಯತಿಯು ತನ್ನ ಖಾಸಗಿ ಸ್ವತ್ತು ಎಂಬಂತೆ ಭಾವಿಸಿ ಸರ್ಕಾರದ ವಿವಿಧ ಯೋಜನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ ಸರ್ಕಾರದ ಶುದ್ಧ ಕುಡಿಯು ನೀರಿನ ಘಟಕ ಹಾಳು ಮಾಡಿ ಸ್ವಂತ ಶುದ್ಧ ಕುಡಿಯು ನೀರಿನ ಘಟಕ ಆರಂಭಿಸಿ ವ್ಯಾಪರ ಮಾಡುತ್ತಿರುವ ಗ್ರಾಮ ಪಂಚಾಯತಿಯ ಸಿಬ್ಬಂದಿಯ ದುರ್ನಡತೆ ಇದೀಗ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ ವಸೂಲಿಗಾರನಾಗಿ ಸೇವೆ ಸಲ್ಲಿಸುತ್ತಿರುವ ಹನುಮಂತ ಸತ್ತಿ ಎನ್ನುವ ವ್ಯಕ್ತಿಯಿಂದ ಕರ್ತವ್ಯ ದುರ್ಬಳಕೆ ಆರೋಪ ಕೇಳಿ ಬಂದಿದ್ದು ಕರ ವಸೂಲಿಗಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕನಾಗಿ ಕೂಲಿ ಮಾಡಿ ತಾನೂ ಮತ್ತು ತನ್ನ ಕುಟುಂಬದ ತಾಯಿ ಹಾಗೂ ಹೆಂಡತಿಯ ಹೆಸರಿನಲ್ಲಿ ಕೂಲಿಯ ಹಣ ಪಡೆದಿರುವುದು ಚರ್ಚೆಗೆ ಗ್ರಾಸ ಒದಗಿಸಿದ್ದು ಇದು ಅಚ್ಚರಿಯ ಬೆಳವಣಿಗೆಗೂ ಕಾರಣವಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಸುದ್ದಿಯ ಹಿನ್ನೆಲೆ ಹೀಗಿದೆ.
ಹಣಮಂತ ಸತ್ತಿ ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮ ಪಂಚಾಯತಿಯ ಕರ ವಸೂಲಿಗಾರ. ಪಂಚಾಯತಿಯ ನೌಕರಿಯನ್ನು ದುರ್ಬಳಕೆ ಮಾಡಿಕೊಂಡ ಈ ವ್ಯಕ್ತಿ ಸಹಸಿಬ್ಬಂದಿಗಳ ಮೇಲೆ ಪ್ರಭಾವ ಬೀರಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಸ್ವಂತಕ್ಕೆ ಅಳವಡಿಸಿಕೊಂಡಿದ್ದಾನೆ. ಮತ್ತು ಈ ಕಾಮಗಾರಿಗಳಿಗೆ ತನ್ನ ಮತ್ತು ತನ್ನ ಹೆಂಡತಿ ಹಾಗೂ ತಾಯಿಯ ಜಾಬ್ ಕಾರ್ಡುಗಳನ್ನು ಸೃಷ್ಟಿಸಿ ಕೂಲಿ ಹಣ ಹೊಡೆದಿದ್ದಾನೆ. ಒಬ್ಬ ಕರ್ತವ್ಯ ನಿರತ ಕರ ವಸೂಲಿಗಾರ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಮಾಡಿದ್ದು ಯಾವಾಗ? ಮತ್ತು ಹೇಗೆ ಎನ್ನುವ ಪ್ರಶ್ನೆ ಉದ್ಬವವಾಗಿದ್ದು ಸಾರ್ವಜನಿಕರು ಈ ಕುರಿತು ಸ್ಪಷ್ಟೀಕರಣ ನೀಡಲು ಈ ಯೋಜನೆಯ ಅನುಷ್ಠಾನ ಅಧಿಕಾರಿಗಳನ್ನು ಕೇಳುತ್ತಿದ್ದಾರೆ. ಸದರಿ ಕರ ವಸೂಲಿಗಾರ ಗ್ರಾಮ ಪಂಚಾಯತಿಯನ್ನು ತನ್ನ ಸ್ವಂತ ಸ್ವತ್ತು ಎಂದು ಭಾವಿಸಿ ಪಂಚಾಯತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನುವ ಆರೋಪ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ನೀರಿನ ವ್ಯಾಪಾರದಲ್ಲಿರುವ ಲಾಭವನ್ನು ಕಂಡಿರುವ ಈತ ಸರ್ಕಾರಿ ಶುದ್ಧ ನೀರಿನ ಘಟಕವನ್ನು ಹಾಳುಗೆಡವಿ ಸ್ವಂತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ವ್ಯಾಪಾರಕ್ಕಿಳಿದಿದ್ದಾನೆ. ಇದು ಅಧಿಕಾರ ದುರುಪಯೋಗ ಎಂದು ಜನ ಆರೋಪಿಸುತ್ತಿದ್ದಾರೆ.
ಗ್ರಾಮ ಪಂಚಾಯತಿಯ ವಿವಿಧ ಯೋಜನೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸುವ ಜನ ಆತ ಅಕ್ರಮ ಆಸ್ತಿ ಸಂಪಾದಿಸಿರುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಸಾಮಾನ್ಯ ಕರ ವಸೂಲಿಗಾರ ಸ್ನೇಹಿತನ ಹೆಸರಿನಲ್ಲಿ ಒಂದು ಕಾರನ್ನು ಹೊಂದಿದ್ದು ಎರಡು ಬೈಕುಗಳನ್ನು ಇಟ್ಟುಕೊಂಡಿದ್ದಾನೆ. ಮೊನ್ನೆ ಮೊನ್ನೆ ಒಂಬತ್ತು ಲಕ್ಷ ರೂಪಾಯಿಗಳಿಂದ ಜಮೀನೊಂದನ್ನು ಖರೀದಿಸಿದ್ದಾನೆ. ಇದೆಲ್ಲವೂ ಪಂಚಾಯತಿಯ ಅನುದಾನ ದುರ್ಬಳಕೆಯಿಂದ ಸಾಧ್ಯವಾಗಿದೆ ಎನ್ನುವುದು ಪಂಚಾಯತಿ ವ್ಯಾಪ್ತಿಯ ಜನಗಳ ಆರೋಪವಾಗಿದೆ.
ಈ ಹಣಮಂತಪ್ಪ ಸತ್ತಿ ಪಂಚಾಯತಿಯ ವೇಸ್ಟ್ ಮೆಟಿರಿಯಲ್ ಮಾರಿಕೊಂಡ ಆರೋಪವೂ ಇದೆ.