ವೈಶಿಷ್ಟ್ಯ ಲೇಖನ

ಪಂಚಾಯತ್‌ ರಾಜ್‌ ವ್ಯವಸ್ಥೆ ಭ್ರಷ್ಟಾಚಾರ, ನರಕವಾದ ಗ್ರಾಮೀಣ ಬದುಕು

WhatsApp Group Join Now
Telegram Group Join Now

ಈ ಪಂಚಾಯತ್‌ ರಾಜ್ಯ ವ್ಯವಸ್ಥೆಯನ್ನು ಸ್ಥಾಪಿಸಿದ ಉದ್ಧೇಶ ಘನವಾದದ್ದಿದೆ. ಆಡಳಿತ ವ್ಯವಸ್ಥೆಯ ಅತ್ಯುತ್ತಮ ಕೊಡುಗೆ ಇದು. ಜನರ ಬದುಕನ್ನು, ಗ್ರಾಮೀಣ ಪ್ರದೇಶದ ಜನರ ಬದುಕನ್ನು ಸಮೂಲವಾಗಿ ಸುಧಾರಿಸುವ ಮಹತ್ತರ ಉದ್ದೇಶ ಇದರ ಹಿಂದೆ ಇದೆ. ಗ್ರಾಮೀಣ ಜನರು ತಮ್ಮದೇ ಒಂದು ಸ್ಥಳೀಯ ಸರ್ಕಾರ ರಚಿಸಿಕೊಂಡು ತಮ್ಮ ಬದುಕನ್ನು ತಾವೇ ಸುಧಾರಿಸಿಕೊಳ್ಳಲಿ ಮತ್ತು ತಮ್ಮನ್ನು ತಾವು ಸರ್ವಾಂಗೀಣಿಯವಾಗಿ ಅಭಿವೃದ್ಧಿಪಡಿಸಿಕೊಳ್ಳಲಿ ಎನ್ನುವುದು ಇದರ ಪ್ರಮುಖ ಉದ್ದೇಶ. ಈ ಉದ್ದೇಶ ಈಡೇರಿದೆಯಾ ಎನ್ನುವುದು ಈಗ ನಮ್ಮ ಮುಂದೆ ಇರುವ ಪ್ರಶ್ನೆ. ಈ ಲೇಖನದ ಲೇಖಕನಾಗಿ ನನ್ನ ಅಭಿಪ್ರಾಯ ದಾಖಲಿಸುವುದಾದರೆ, ಈ ಅಧಿನಿಯಮದ ಯಾವ ಉದ್ದೇಶಗಳೂ ಈಡೇರಿಲ್ಲ. ಗ್ರಾಮೀಣಿಗರು ಬಹುತೇಕ ನಿರಕ್ಷರಿಗಳು ಹಾಗೂ ರಾಜಕೀಯ ಜ್ಞಾನ ಹೊಂದಿಲ್ಲದವರಾಗಿದ್ದಾರೆ. ಯಾವನೋ ಒಬ್ಬ ವ್ಯಕ್ತಿ ಅಜ್ಞಾನಿಗಳನ್ನು, ತನ್ನ ಗುಲಾಮರನ್ನು, ಮೂರ್ಖರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತಾನೆ. ಆ ನಂತರ ಆ ಪಂಚಾಯತಿಯನ್ನು ಗುತ್ತಿಗೆ ಪಡೆದವನಂತೆ ಆಳಲು ಆರಂಭಿಸುತ್ತಾನೆ. ನೀತಿ ನಿಯಮಗಳಿಗೆ ಯಾವ ಅರ್ಥವನ್ನು, ಬೆಲೆಯನ್ನು ಕೊಡುವುದಿಲ್ಲ. ಒಂದು ದುರಾದೃಷ್ಟದ ಸಂಗತಿ ಎಂದರೆ ಓದಿ, ಬರೆದು, ಸರ್ಕಾರಕ್ಕೆ ಪ್ರಮಾಣ ವಚನ ಸಲ್ಲಿಸಿ ನೌಕರಿಗೆ ನಿಯುಕ್ತನಾಗುವ ಸರ್ಕಾರಿ ಸಿಬ್ಬಂದಿಯೂ ಯಾವುದ್ಯಾವುದೋ ಸ್ವಾರ್ಥಕ್ಕಾಗಿ ಗುಲಾಮನಲ್ಲ, ನಾಯಿಯಂತೆ ವರ್ತಿಸುತ್ತಾನೆ. ಗ್ರಾಮದ ಅಭಿವೃದ್ಧಿಯನ್ನು ಹಳ್ಳ ಹಿಡಿಸುತ್ತಾನೆ. ಜನರ ಹಕ್ಕುಗಳನ್ನು ಚರಂಡಿ ಪಾಲು ಮಾಡುತ್ತಾನೆ. ನೆನಪಿರಲಿ: ಗ್ರಾಮೀಣ ಜನರಿಗೆ ಕ್ರಿಯಾ ಯೋಜನೆ ಎನ್ನುವ ಪದದ ಅರ್ಥವೇ ಗೊತ್ತಿಲ್ಲ. ಅದನ್ನು ಏಕೆ ತಯಾರಿಸಬೇಕು, ಹೇಗೆ ತಯಾರಿಸಬೇಕು ಎನ್ನುವ ಮಾಹಿತಿಯೂ ಇರುವುದಿಲ್ಲ. ಕೆಲವೊಂದು ಕಡೆ ಸದಸ್ಯರಿಗೂ ಈ ಕುರಿತು ಮಾಹಿತಿ ಇರುವುದಿಲ್ಲ. ಆ ಪಂಚಾಯತಿಯ ಸರ್ಕಾರಿ ಸಿಬ್ಬಂದಿಗಳು ನಗರ ಪ್ರದೇಶದ ಎಲ್ಲೋ ಕಂಪ್ಯೂಟರ್‌ ಸೆಂಟರ್‌ನಲ್ಲಿ ಕೂತು ಕ್ರಿಯಾ ಯೋಜನೆ ತಯಾರಿಸುತ್ತಾರೆ. ಯಾವುದ್ಯಾವುದೋ ಕಾರಣಗಳನ್ನು ಹೇಳಿ ಸಭಾ ನಡವಳಿಗೆ ಸಹಿ ಪಡೆಯಲಾಗುತ್ತದೆ. ಒಂದು ಅಚ್ಚರಿ ಸಂಗತಿ ಎಂದರೆ ಯಾದಗಿರಿ ಜಿಲ್ಲೆಯ ಶಹಾಪೂರು ತಾಲ್ಲೂಕಿನ ದೋರನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯರೊಬ್ಬರು “ನಮಗೆ ಕ್ರಿಯಾ ಯೋಜನೆ ಎಂದರೆ ಏನೆಂದೇ ಗೊತ್ತಿಲ್ಲ. ನಮಗೆ ತಿಳಿಯದಂತೆ ಯೋಜನೆ ರೂಪಿಸಲಾಗುತ್ತಿದೆ, ನಮಗೆ ತಿಳಿಯದಂತೆ ಹಣ ಲೂಟಿ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಮಾನತುಗೊಂಡ ಬಳಿಕ ಕೂಡಾ ಅವ್ಯಾಹತವಾದ ಲೂಟಿ ನಡೆದಿದೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನೆ ಇಲ್ಲ” ಎಂದು ಯೂಟ್ಯೂಬಿನ ಚಾನೆಲ್‌ವೊಂದಕ್ಕೆ ಹೇಳಿಕೆ ನೀಡಿದ್ದರು. ನಿಜಕ್ಕೂ ನಡೆಯುತ್ತಿರುವುದೇ ಇದು. ಇಲ್ಲಿ ಪಂಚಾಯತಿಯನ್ನು ಅಧ್ಯಕ್ಷ ಮತ್ತು ಪಿಡಿಓ ಗುತ್ತಿಗೆ ಹಿಡಿಯುತ್ತಾನೆ. ಒಂದಿಷ್ಟು ಶ್ಯಾಣ್ಯಾ ಇರುವ ಸದಸ್ಯರನ್ನು, ಊರ ಪುಡಾರಿಗಳನ್ನು ಒಳ ಹಾಕಿಕೊಂಡು ಆಡಳಿತ ನಡೆಸಲಾಗುತ್ತದೆ, ಎಂತಹ ಆಡಳಿತ? ಅವ್ಯಾಹತ ಲೂಟಿಯ ಆಡಳಿತ!

ಈ ಮೇಲಿ ವಿಷಯ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕನು ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕನಿಗೂ ಗೊತ್ತಿರುತ್ತದೆ. ಅವರು ಸಮಪಾಲು ಸಮ ಬಾಳ್ವೆಯನ್ನು ಶ್ರದ್ಧಾಪೂರ್ವಕ ಆಚರಿಸುವ ಶಿಸ್ತಿನ ಜನ. ನೀವು ದೂರು ಕೊಟ್ಟಿರೋ? ನಿಮ್ಮ ಕುರಿತು ಮಾಹಿತಿ ನೀವು ಆ ಆಫೀಸಿನ ಹೊಸಿಲು ದಾಟಿರುವುದಿಲ್ಲ ಭ್ರಷ್ಟರಿಗೆ ಹೋಗಿರುತ್ತದೆ. ನಂತರ ನಾನಾ ತಂತ್ರ, ನಾನಾ ಷಡ್ಯಂತ್ರಗಳು, ಬಾಯಿ ಮುಚ್ಚಿಸುವ ಪ್ರಯತ್ನಗಳು ಮೊದಲಾಗುತ್ತವೆ. ನಿಮ್ಮ ಮೇಲೆ ಭ್ರಷ್ಟ ದ್ವೇಷ ಕಾರಲು ಆರಂಭಿಸುತ್ತಾನೆ. ಅದಿರಲಿ,

ಏಕೆ ಗ್ರಾಮ ಪಂಚಾಯತಿ ಅಥವಾ ಪಂಚಾಯತ್‌ ರಾಜ್‌ ಅಧಿನಿಯಮವನ್ನು ಜಾರಿಗೆ ತರಲಾಯಿತು ಎನ್ನುವ ಪ್ರಶ್ನೆಗೆ ಆ ಕಾಯ್ದೆ ಅದ್ಯಾಯ ೧ ಎ ಸುಂದರವಾದ ನಿರ್ದೇಶಕ ತತ್ವಗಳನ್ನು ಹೇಳುತ್ತದೆ. ಓದಿದರೆ ಕಣ್ಣಿಗೆ ಮತ್ತು ಮನಸ್ಸಿಗೆ ತಂಪು ನೀಡುವ ಆ ತತ್ವಗಳು ಎದೆಯೊಳಗೆ ಅಗ್ನಿ ಪರ್ವತವನ್ನು ಸಿಡಿಸುತ್ತವೆ. ಇಷ್ಟೊಂದು ಅದ್ಬುವಾದ ಉದ್ದೇಶಗಳಿದ್ದರೂ ನಮ್ಮ ಬದುಕೇಕೆ ನರಕದಿಂದ ಕೂಡಿದೆ ಎನ್ನುವ ಸಂಗತಿ ಅರಿವಿಗೆ ಬಂದು ಭ್ರಷ್ಟರನ್ನು ಹೇಗೆ ಮಟ್ಟ ಹಾಕುವುದು ಎನ್ನುವ ವಿಲಕ್ಷಣ ವ್ಯಸನಕ್ಕೆ ಒಳಗಾಗುತ್ತೇವೆ, ನೋಯುತ್ತೇವೆ, ವ್ಯಗ್ರರಾಗುತ್ತೇವೆ. ಇವರನ್ನು ಮಟ್ಟ ಹಾಕಬೇಕು ಎಂದು ಪ್ರಯತ್ನಿಸಲು ಮುಂದಾದರೆ ತೊಂಬತ್ತೊಂಬತ್ತು ಪ್ರತಿಶತ ಜನ ಈ ಭ್ರಷ್ಟರ ಹಿಂದೆ ಇರುತ್ತಾರೆ. ಇಲ್ಲ, ನಮಗೆ ಅನ್ನು ರುಚಿಸುವುದಿಲ್ಲ. ಹೇಲು ತಿನ್ನುವುದು ನಮ್ಮ ಜನ್ಮಸಿದ್ದ ಹಕ್ಕು ಎನ್ನುತ್ತಾರೆ!

ಏನೆ ಈ ಹೇಳುತ್ತವೆ ಈ ನಿರ್ದೇಶಕ ತತ್ವಗಳು?

೨ ಎ. ಪಂಚಾಯತ್‌ ನೀತಿ ನಿರ್ದೇಶಕ ತತ್ವಗಳು:- (೧) ಗ್ರಾಮ ಪಂಚಾಯತಿಯೊಂದು ಈ ಮುಂದಿನ ಉದ್ದೇಶಗಳ ಈಡೇರಿಕೆಗಾಗಿ ಶ್ರಮಿಸತಕ್ಕದ್ದು ಎಂದು ಹೇಳುತ್ತಾ-

(೧) ಎಲ್ಲರಿಗೂ ಶುದ್ಧ ಕುಡಿಯುವ ನೀರು, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಸಮುದಾಯದ ಜೀವನಮಟ್ಟವನ್ನು ಮತ್ತು ಬದುಕಿನ ಗುಣಮಟ್ಟವನ್ನು ಸುಧಾರಿಸುವುದು.

ಈ ಮಾತಿಗೆ ಬಂದರೆ ಯಾವ ಗ್ರಾಮ ಪಂಚಾಯತಿಗಳು ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿವೆ ಎನ್ನುವ ಪ್ರಶ್ನೆ ನಮ್ಮ ಮುಂದೆ ತಲೆ ಎತ್ತುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಸುಮಾರು ಹತ್ತಾರು ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಲಾದ ಆ ಕಾಮಗಾರಿಗಳು ಒಂದು ವರ್ಷ ಕೂಡಾ ಕಾರ್ಯನಿರ್ವಹಿಸಲಿಲ್ಲ. ಅವು ಹಾಳು ಬಿದ್ದು ಹೋದವು. ಸರ್ಕಾರಿ ಹಣ ಅಂದರೆ ಜನರ ಹಣದಿಂದ ಪೂರೈಸಿದ ಆ ಕಾಮಗಾರಿಗಳಿಗೆ ಬಡ್ಡಿ ಮಕ್ಕಳು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಆದೇಶಗಳನ್ನು ಮೀರಿ ತಮ್ಮ ಭಾವಚಿತ್ರಗಳನ್ನು ಹಾಕಿಕೊಂಡು ಉದ್ಘಾಟನೆ ಮಾಡಿಕೊಂಡರು. ಆ ಶುದ್ಧ ಕುಡಿಯುವ ನೀರಿನ ಘಟಕಗಳು ಆ ದರಿದ್ರ ಮುಖಗಳಿಂದಾಗಿಯೇ ಅವು ನಿರ್ಮಾಣಗೊಂಡ ಅತ್ಯಲ್ಪ ಅವಧಿಯಲ್ಲಿ ಹದಗೆಟ್ಟು ಹೋದವು. ಈ ಕಳಪೆ ಕಾಮಗಾರಿಗಳ ವಿರುದ್ಧ ಯಾರೂ ಮಾತನಾಡಲಿಲ್ಲ. ಏಕೆಂದರೆ ಎಲ್ಲರೂ ಲು ಎನ್ನುವ ಪದಾರ್ಥವನ್ನು ತಿನ್ನುವವರೆ! ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಗ್ರಾಮ ಪಂಚಾಯತಿಗಳು ವಿಫಲವಾಗಿವೆ. ಯಾದಗಿರಿ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ಹತ್ತಾರು ಮರಣಗಳು ನೂರಾರು ಜನ ಅನಾರೋಗ್ಯಕ್ಕೆ ಈಡಾದದ್ದು ನಮ್ಮ ಕಣ್ಣ ಮುಂದೆ. ಯಾರ ವಿರುದ್ಧವೂ ತನಿಖೆಯಾಗಲಿಲ್ಲ. ಶಿಕ್ಷೆಯಾಗಲಿಲ್ಲ. ಇಲ್ಲಿ ಪ್ರತಿಯೊಬ್ಬನ ಹಿಂದೆ ರಾಜಕಾರಣಿ ಇದ್ದಾನೆ, ಭ್ರಷ್ಟ ಹಿರಿಯ ಅಧಿಕಾರಿ ಇದ್ದಾನೆ. ಸರ್ಕಾರವೆನ್ನುವುದು ಇವರು ಸಾಕಿದ ನಾಯಿ ಮಾತ್ರ. ದುರಂತವೆಂದರೆ ಒಬ್ಬ ಕೆಳಹಂತದ ಲೋಕನೌಕರನನ್ನೂ ಶಿಕ್ಷಿಸದ ಸ್ಥಿತಿಯಲ್ಲಿ ಭಾರತೀಯ ನಾಗರಿಕರಾದ ನಾವಿದ್ದೇವೆ. ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಜನರನ್ನು ಅನಾರೋಗ್ಯಕ್ಕೆ ಮತ್ತು ಸಾವಿನ ಮನೆಗೆ ದೂಡುತ್ತಿರುವುದೇ ಗ್ರಾಮ ಪಂಚಾಯತಿ. ಕೆಟ್ಟ ಆಹಾರ ಉತ್ಪಾದನೆ ಮಾಡಿ ಜನರಿಗೆ ಮಾರಿ ಅವರ ಆರೋಗ್ಯವನ್ನು ಹಾಳು ಮಾಡುವ ಅನೇಕ ದಂದೆಗಳು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿವೆ. ಗ್ರಾಮ ಪಂಚಾಯತಿಯ ಸಾಕ್ಷಿಯಾಗಿ ಅಕ್ರಮ ಮದ್ಯ ಮಾರಾಟ ಇತ್ಯಾದಿ ದಂದೆಗಳು ನಡೆಯುತ್ತಿವೆ. ಇಂತಹ ದಂದೆಗಳಲ್ಲಿ ಸದಸ್ಯರೇ ಭಾಗಿಯಾಗಿರುತ್ತಾರೆ. ಪಂಚಾಯತಿ ಈ ವಿಷಯಗಳನ್ನು ಗಮನಿಸುವುದಿಲ್ಲ. ಅಸಲು ಅಲ್ಲಿ ಆರೋಗ್ಯಕಾರಿ ಚರ್ಚೆ ವಾದ-ವಿವಾದಗಳು ನಡೆದರೆ ತಾನೇ? ಇನ್ನು ನೈರ್ಮಲ್ಯದ ವಿಷಯಕ್ಕೆ ಬಂದರೆ ಮನೆಯ ಆಸುಪಾಸಿನಲ್ಲಿ ತಿಪ್ಪೆ ಹಾಕಿಕೊಂಡು ತಿಪ್ಪೆಯನ್ನೇ ಡೈನಿಂಗ್‌ ಟೇಬಲ್‌ ಮಾಡಿಕೊಂಡು ಭೋಜನ ಮಾಡುವ ಜನರಿದ್ದಾರೆ. ವೈಯುಕ್ತಿಕ ಶೌಚಾಲಯಗಳ ಬಗ್ಗೆ ಅರಿವು ಮೂಡಿಸದೆ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿಯನ್ನು ಹಾಳು ಮಾಡಿತು. ಒಂದು ಶೌಚಾಲಯ ಕಟ್ಟಿಸಿಕೊಂಡರೆ ಸರ್ಕಾರದ ವತಿಯಿಂದ ಹದಿನೈದು ಸಾವಿರ ಸಹಾಯ ಧನ ಸಿಗುತ್ತದೆ ಎಂದರಿತ ಜನ ಮನೆಗೆ ನಾಲ್ಕೈದು ಕಟ್ಟಿಸಿಕೊಂಡರು, ಆರು ಏಳು ಸಾವಿರ ಖರ್ಚು ಮಾಡಿಕೊಂಡು. ನಂತರ ಅವುಗಳನ್ನು ಕೋಳಿ ಗೂಡುಗಳನ್ನಾಗಿಯೋ, ಸ್ಟೋರ್‌ ರೂಮನ್ನಾಗಿಯೋ ಮಾಡಿಕೊಂಡರು. ಯಾರೂ ಅವುಗಳನ್ನು ಬಳಕೆ ಮಾಡಲಿಲ್ಲ. ಬಳಕೆ ಮಾಡಿಕೊಳ್ಳುವ ಜ್ಞಾನವೂ ಹಳ್ಳಿಯ ಜನರಿಗೆ ಇರಲಿಲ್ಲ. ಈ ವಿಷಯದಲ್ಲಿ ಸರ್ಕಾರ ಏನೂ ಮಾಡಲಿಲ್ಲ. ಜನ ಬಯಲು ಶೌಚ ಮಾಡುವುದನ್ನು ಬಿಡಲಿಲ್ಲ.

ಆಯ್ತಲ್ಲ? ಈ ಮೊದಲ ತತ್ವ ಎಲ್ಲೂ ಕೆಲಸ ಮಾಡಲಿಲ್ಲ. ಅದು ಕಾಗದದಲ್ಲಿ ಯಶಸ್ವಿಯಾಗಿರಬೇಕಷ್ಟೇ? ಈ ದೇಶದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಕಾಗದ ನೋಡಿ ಭಾಷಣ ಮಾಡುತ್ತಾನೆ. ನಾವು ಪ್ಯಾಲಿಗಳಂತೆ ಕೇಳಿಸಿಕೊಳ್ಳುತ್ತೇವೆ.

(೨) ಅಗತ್ಯ ಗ್ರಾಮೀಣ ಮೂಲ ಸೌಲಭ್ಯಗಳನ್ನು ಒದಗಿಸುವುದು ಮತ್ತು ಗ್ರಾಮೀಣ ಸಮುದಾಯಗಳ ಮತ್ತು ಸಂಘಟನೆಗಳನ್ನು ತನ್ನ ಸುಧಾರಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದು.

ಇದಂತೂ ವ್ಯರ್ಥ! ಅಗತ್ಯ ಗ್ರಾಮೀಣ ಮೂಲ ಸೌಲಭ್ಯಗಳು ಎಂದರೆ ಯಾವು? ರಸ್ತೆ, ಚರಂಡಿ, ನೈರ್ಮಲೀಕರಣ ಇವೇ ತಾನೇ? ಇವುಗಳನ್ನು ಹತ್ತಿಪ್ಪತ್ತು ಸಾವಿರ ರೂಪಾಯಿಗಳಲ್ಲಿ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಚರಂಡಿ ನಿರ್ಮಾಣಕ್ಕೆ ಮೂವತ್ತು ಸಾವಿರ ನಲವತ್ತು ಸಾವಿರ ರೂಪಾಯಿಗಳನ್ನು ಇಡುವುದು, ಆ ಕಾಮಗಾರಿಯನ್ನು ಗ್ರಾಮ ಪಂಚಾಯತಿಯ ಸದಸ್ಯನಿಗೆ ಒದಗಿಸಿಕೊಡುವುದು! ಈ ಮೂಲಕ ಈ ತತ್ವದ ಉದ್ದೇಶವನ್ನು ಈಡೇರಿಸಿಕೊಳ್ಳಲಾಗುತ್ತಿದೆ. ಗ್ರಾಮೀಣ ಸಮುದಾಯ ಎಂದರೆ ಕೇವಲ ಸದಸ್ಯರು ಎಂದು ಭಾವಿಸಲಾಗಿದೆ, ಸಂಘಟನೆಗಳೂ ಅವರೇ? ತಾವು ಮಾಡುವ ಹಲ್ಕಾ ಕೆಲಸಗಳು ಜನಗಳಿಗೆ ತಿಳಿಯದಿರಲಿ ಎಂದು ಸಾರ್ವಜನಿಕರಿಗೆ ತಿಳಿಸದೆ ಗುಪ್ತವಾಗಿ ಸಭೆಗಳನ್ನು ನಡೆಸಲಾಗುತ್ತದೆ. ಇಂಥವರು ಸಮುದಾಯ ಮತ್ತು ಸಂಘಟನೆಗಳನ್ನು ವಿಶ್ವಾಸಕ್ಕೆ ಅಥವಾ ಆಡಳಿತದೊಂದಿಗೆ ಸೇರಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಾರೆ ಎಂದರೆ ಇದು ಪ್ರಪಂಚದ ಎಂಟನೆಯ ಸಂಗತಿಗಿಂತಲೂ ದಿಗ್ಭ್ರಮೆ ಮೂಡಿಸುವ ವಿಷಯ. ವ್ಯರ್ಥ ಇದು.

(೩) ತನ್ನ ನಿವಾಸಿಗಳ ಆರ್ಥಿಕ, ಸಾಮಾಜಿಕ ಮತ್ತು ಪರಿಸರಾತ್ಮಕ ಗುಣಮಟ್ಟವನ್ನು ವೃದ್ಧಿಸುವುದಕ್ಕಾಗಿ ಆಸ್ತಿಗಳ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಪಂಚಾಯತಿ ಪ್ರದೇಶದಲ್ಲಿ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ, ಸಾಮಾಜಿಕ ಸಮ್ಮಿಲನ ಮತ್ತು ಅರ್ಥಪೂರ್ಣ ಸಮುದಾಯವನ್ನು ತೊಡಗಿಸಿಕೊಳ್ಳುವುದು.

ನಿವಾಸಿಗಳ ಆರ್ಥಿಕ ಮತ್ತು ಸಾಮಾಜಿಕ ಮತ್ತು ಪರಿಸರಾತ್ಮಕ ಅಭಿವೃದ್ಧಿಗೆ ಇವರು ಕೈಗೊಂಡ ಕಾಮಗಾರಿ ಅಥವಾ ಯೋಜನೆಗಳನ್ನು ನಮಗೆ ತೋರಿಸಲಿ! ಏನೇ ಕೆಲಸ ಕೇಳಲಿ ಬಜೆಟ್‌ ಇಲ್ಲ ಎನ್ನುವ ಸಿದ್ದ ಉತ್ತರವನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಸುಸ್ಥಿರ ಆಸ್ತಿಗಳ ನಿರ್ವಹಣೆ ಇವರು ಹೇಗೆ ಮಾಡುತ್ತಾರೆ, ಹೇಗೆ ಮಾಡಿದ್ದಾರೆ ಎನ್ನುವುದ ಮಾಹಿತಿ ನಮಗಿಲ್ಲ. ನಿಮಗಿದ್ದರೆ ತಿಳಿಸಿ, ಅಥವಾ ಸಂಬಂಧಿಸಿದ ಸಚಿವಾಲಯ ಮತ್ತು ಸಚಿವರು ತಿಳಿಸಲಿ. ನಾವು ಕಂಡಂತೆ ಲಕ್ಷಾಂತರ ಕೋಟಿ ಹಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಹೆಸರಿನಲ್ಲಿ ಪೋಲು ಮಾಡಿದ್ದಾರೆ. ಹಣ ಎಲೆಕ್ಟ್ರಿಕಲ್‌ ಅಂಗಡಿಗಳ ವೆಂಡರ್‌ಗಳ ಪಾಲಾಗಿದೆ. ಆ ಮೂಲ ಪಿಡಿಓ ಮತ್ತು ಅಧ್ಯಕ್ಷನ ತಿಜೋರಿಗೆ! ಇನ್ನು ಸಾಮಾಜಿಕ ಸಮ್ಮಿಲನ ಎನ್ನುವುದು ಒಂದು ಅರ್ಥಹೀನ ಪದ. ಜನ ಜಾತಿ ಮತ ಧರ್ಮಗಳು ಎನ್ನುತ್ತಾ ಕಿತ್ತಾಡುತ್ತಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯತಿಗಳು ಕೈಗೊಂಡ ಯೋಜನೆಗಳು ನಮಗೆ ಕಂಡಿಲ್ಲ. ಇನ್ನೂ ವರ್ಗ ತಾರತಮ್ಯ, ಅಸ್ಪೃಶ್ಯತೆ ಹಳ್ಳಿಗಳಲ್ಲಿ ತಾಂಡವವಾಡುತ್ತಿದೆ.

(೪) ಪಂಚಾಯತ್‌ ಅಧೀನದಲ್ಲಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಪಂಚಾಯತಿ ಪ್ರದೇಶದ ಅರಣ್ಯ ಮತ್ತು ವನ್ಯಜೀವಿಗಳನ್ನು ಸುಸ್ಥಿರ ಅಭಿವೃದ್ಧಿಗೆ ಸಮರ್ಪಕವಾಗಿ ಮುಂದಿನ ಪೀಳಿಗೆಗಾಗಿ ಅವುಗಳನ್ನು ಸಂರಕ್ಷಿಸುವ ಸಮರ್ಥನೀ ವಿಧಾನವನ್ನು ಅನುಸರಿಸುವುದು.

ಇದು ಹಾಸ್ಯಾಸ್ಪದ ತತ್ವ, ಇವತ್ತು ಮಾಡಿದ ಒಂದು ಕಾಮಗಾರಿ ಮುಂದಿನ ತಿಂಗಳು ಕಾಣಿಸಿಕೊಳ್ಳುವುದಿಲ್ಲ. ವರ್ಷವಿಡೀ ಮರಗಳನ್ನು ನೆಡುತ್ತಾರೆ, ಅವು ಬೆಳೆದ ಉದಾಹರಣೆ ಎಲ್ಲೂ ಇಲ್ಲ. ಮನುಷ್ಯರನ್ನು ರಕ್ಷಿಸದ ಇವರು ವನ್ಯಜೀವಿಗಳನ್ನು ಕಾಪಾಡುತ್ತಾರೆ ಎಂದರೆ ಇಡೀ ದೇಶವೇ ಒಂದು ಮೈದಾನವಾದರೆ ಉರುಳಾಡಿ ನಗಲು ಅದು ಸಾಕಾಗುವುದಿಲ್ಲ!

(೫) ಸ್ಥಳೀಯ ಸಮುದಾಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ರಕ್ಷಿಸುವುದು ಮತ್ತು ಕಾಪಾಡುವುದು ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು

ಸ್ಥಳೀಯ ಸಮುದಾಯದ ಕಲೆ ಎಂದರೆ ಗಾಂಜಾ ಸೇದಿ ಭಜನೆ ಮಾಡುವುದು! ಗಾಂಜಾ ಮದ್ಯ ಮತ್ತು ಇತರೆ ಮತ್ತುಕಾರಕ ವಸ್ತುಗಳನ್ನು ಯಥೇಚ್ಛವಾಗಿ ದೊರೆಯುವಂತೆ ಮಾಡಿರುವುದರ ಹಿಂದೆ ಈ ತತ್ವದ ಈಡೇರಿಕೆಯ ಉದ್ದೇಶವಿದೆ. ನೆಶೆಯಲ್ಲಿ ಮಾಡುವ ಭಜನೆ ನಮ್ಮ ಪರಂಪರೆ. ಇನ್ನು ಪ್ರವಾಸೋದ್ಯಮಕ್ಕೆ ಉತ್ತೇಜನೆ ಎಂದರೆ ಬಯಲು ಶೌಚದ ಕುಪ್ಪೆಗಳು ಮತ್ತು ವಿಶಾಲವಾಗಿ ಹರಡಿರುವ ತಿಪ್ಪೆಗಳು. ನಿಜಕ್ಕೂ ಗ್ರಾಮ ಪಂಚಾಯತಿಗಳು ಈ ತತ್ವದ ಪಾಲನೆಯಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಅಹೋರಾತ್ರಿ ಮಾಡುತ್ತಿವೆ.

(೬) ನವಣೆ, ಸಜ್ಜೆ, ಬಿಳಿ ಜೋಳ, ಸಾವೆ, ಕೋರ್ಲಿ, ಇತ್ಯಾದಿ ಮತ್ತು ಔಷಧೀಯ ಮೌಲ್ಯವುಳ್ಳ ಗಿಡಮೂಲಿಕೆಗಳಂಥ ದೇಸಿ ವೈವಿಧ್ಯತೆಯುಳ್ಳ ಬೀಜಗಳನ್ನು ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಮತ್ತು ಹಂಚಿಕೆ ಮಾಡುವುದು.

ಯಾರು ಮಾಡಬೇಕು? ಪಂಚಾಯತಿ ಸಿಬ್ಬಂದಿಗಳಿಗೆ ಒಕ್ಕಲುತನದ ತರಬೇತಿ ನೀಡಿ ಅದರ ಅಭಿವೃದ್ಧಿ ಅಧಿಕಾರಿಗೆ ಗಳೆ ಹೊಡೆಯುವ ಕೌಶಲ್ಯ ಕಲಿಸಿ ಹತ್ತಿಪ್ಪತ್ತೆಕೆರೆ ಜಮೀನನ್ನು ನೀರಾವರಿ ಮಾಡಿಕೊಂಡು ಈ ಕೆಲಸ ಮಾಡಬೇಕು., ಮಾಡುತ್ತಾರೆಯೇ?

(೭) ಕೃಷಿ-ಕೈಗಾರಿಕಾ ಕೇಂದ್ರಗಳು, ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ಉದ್ಯೋಗಗಳನ್ನು ಸೃಜಿಸುವುದು ಮತ್ತು ವ್ಯವಹಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದಕ್ಕಾಗಿ ದಸ್ತಾವೇಜುಗಳನ್ನು ಸೀಕರಿಸುವ ಏಕಗವಾಕ್ಷಿ ವ್ಯವಸ್ಥೆ ಮಾಡುವುದು.

ಯುವಕರಿಗೆ ರಾತ್ರಿ ಹಗಲೆನ್ನೆದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಆ ಕೈಗಾರಿಕೆಯ ಹೆಸರು: ಇಸ್ಪೀಟು ಮತ್ತು ಮಟ್ಕಾದಂತಹ ಜೂಜು ಉದ್ಯಮಗಳು. ಎಲ್ಲೆಂದರಲ್ಲಿ ಆಡಬಹುದು, ಯಾವುದೇ ನಿರ್ಬಂಧವಿಲ್ಲ. ದೇವಸ್ಥಾನದ ಕಟ್ಟೆ, ಗಿಡದ ನೆರಳು… ಎಲ್ಲಂದರಲ್ಲಿ ಈ ಗುಡಿ ಕೈಗಾರಿಕೆಯನ್ನು ಮಾಡಬಹುದು. ಇದಕ್ಕೆ ಗ್ರಾಮ ಪಂಚಾಯತಿಗಳ ಒತ್ತಾಸೆ ಇದೆ.

(೮) ರಾಷ್ಟ್ರೀಯ ಮತ್ತು ರಾಜ್ಯ ಕಾರ್ಯನೀತಿಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಲು ಸಮರ್ಥಗೊಳಿಸುವುದಕ್ಕಾಗಿ ಬೇರುಮಟ್ಟದಲ್ಲಿ ಸಹಕಾರಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮೂಲಕ ಸಹಕಾರಿ ಮನೋಭಾವ ಮತ್ತು ವಾತಾವರಣವನ್ನು ನಿರ್ಮಿಸುವುದು.

ಇದೂ ನಗುವ ವಿಷಯವೇ, ಪಂಚಾಯತಿಯ ಅಂಗಳವನ್ನು ಮೈದಾನವಾಗಿಸಿಕೊಂಡು ಉರುರುಳಿ!

(೯) ಗ್ರಾಮೀಣ ಪ್ರದೇಶಗಳಲ್ಲಿ ಜನರ ಕೌಶಲ್ಯ, ಜ್ಞಾನ ಮತ್ತು ಇತರ ಸಾಮರ್ಥ್ಯಗಳಿಗೆ ಅನುಗುಣವಾಗಿ ಗ್ರಾಮೀಣ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಬಲೀಕರಣಗೊಳಿಸುವುದು.

ಅದ್ಬುತ! ಗ್ರಾಮೀಣ ಮಾನವ ಸಂಪನ್ಮೂಲ ಅದ್ಬುತವಾಗಿ ಅಭಿವೃದ್ಧಿಗೊಂಡಿದೆ. ಗ್ರಾಮೀಣ ಪ್ರದೇಶ ಮಾನವ ಸಂಪನ್ಮೂಲ ಗುಟ್ಕಾ ಪಾಕೆಟ್‌ನ್ನು ತಂಬಾಕಿನೊಂದಿಗೆ ಮಿಶ್ರಣ ಮಾಡುವ ಅದ್ಬುತ ಕೌಶಲ್ಯವನ್ನು ಹೊಂದಿದೆ. ಅದು ಅಂಗೈಯಲ್ಲಿ ತಂಬಾಕು ಹಾಕಿಕೊಂಡು ಸುಣ್ಣ ಬೆರಸುವ ಕಲೆಯನ್ನೂ ಕರಗತ ಮಾಡಿಕೊಂಡಿದೆ. ಆದರೆ ಎಲ್ಲಂದರಲ್ಲಿ ಸಿಗುವ ಅಗ್ಗದ ದರದ ಮದ್ಯದ ಬಲಶಾಲಿ ಪಾಕೆಟ್‌ನ್ನು ಕೈಯಿಂದ ಹರಿಯುವ ಸಾಮರ್ಥವನ್ನು ಕಳೆದುಕೊಂಡಿದೆ, ಸದ್ಯಕ್ಕೆ ಅದು ಬಾಯಿಯೊಳಗಿನ ಹಲ್ಲುಗಳನ್ನು ಬಳಸಿಕೊಂಡು ಆ ಕರಕುಶಲ ಕೆಲಸದಲ್ಲಿ ನಿರತವಾಗಿದೆ. ಪಂಚಾಯತ್‌ ರಾಜ್‌ ಈ ಒಂಬತ್ತನೆಯ ತತ್ವ ಈ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಬೇಕಿದೆ.

(೧೦) ಶಾಂತಿಯುತ ಸಮಾಜ ಮತ್ತು ಕೋಮು ಸೌಹಾರ್ದವನ್ನು ಸಂರಕ್ಷಿಸುವ ಹಾಗೂ ಎಲ್ಲಾ ರೀತಿಯ ಹಿಂಸೆಗಳನ್ನು ತಡೆಗಟ್ಟುವ ಸುರಕ್ಷಿತ ಮತ್ತು ಸಹನಶೀಲ ಸಮುದಾಯವನ್ನು ಪೋಷಿಸುವುದು.

ಶಾಂತಿಯುತ ಸಮಾಜ? ಕೋಮು ಸೌಹಾರ್ದ? ವಿಚಿತ್ರ ಪದಗಳು. ಹೇಗೆ ಈ ತತ್ವವನ್ನು ಪಾಲಿಸಬೇಕು? ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಈ ಪದಗಳನ್ನು ನಾಶ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುವಾಗ ಈ ಪದಗಳ ಅನುಷ್ಠಾನ ಸಾಧ್ಯವೇ? ಮಾನವ ಸಮಾಜವನ್ನು ಧರ್ಮಗಳಾಗಿ ಒಡೆಯಲಾಗಿದೆ, ಜಾತಿಗಳಾಗಿ ಒಡೆಯಲಾಗಿದೆ. ಸಾಲದ್ದಕ್ಕೆ ಕುಟುಂಗಳನ್ನೂ ಒಡೆಯಲಾಗುತ್ತಿದೆ.

ಈ ಅಧ್ಯಾಯದ ಎರಡನೆಯ ಪ್ರಕರಣ ಹೀಗೆ ಹೇಳುತ್ತದೆ: ಗ್ರಾಮದ ನಿವಾಸಿಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದಾದರೂ ಒಂದು ನಿರಾಶಾದಾಯಕ ಪ್ರವೃತ್ತಿ ಅಥವಾ ಆಲೋಚನೆ ಹಬ್ಬಿದಾಗ ಅದು ನೆಲೆಗೊಳ್ಳುವುದನ್ನು ತಡೆಯುವುದು ಗ್ರಾಮ ಪಂಚಾಯತಿಯ ನಿರ್ದೇಶನ ತತ್ವಗಳ ಪ್ರಮುಖ ತತ್ವವಾಗಿದೆ. ಹಣಕಾಸಿನ ಋಣಭಾರ, ಬಡತನ, ಅಥವಾ ಇತರ ಕಾರಣಗಳಿಗಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಮಾನಸಿಕ ಸ್ಥಿತಿಯಿಂದ ಪೀಡಿತರಾದ ರೈತರು ಮತ್ತು ಇತರರು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಒತ್ತಡಕ್ಕೆ ಸಿಲುಕಿ ನಾಜೂಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಬಗಳಲ್ಲಿ ಅವರೆಡೆಗೆ ಗ್ರಾಮ ಪಂಚಾಯತಿಯು ವಿಶೇಷ ಗಮಹರಿಸತಕ್ಕದ್ದು ಮತ್ತು ಗ್ರಾಮ ಪಂಚಾಯತಿಯ ಸದಸ್ಯರು ಅಂತಹ ವ್ಯರ್ಥ ಸಾಹಸಗಳ ಮನಸ್ಥಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ನಿವಾಸಿಗಳನ್ನು ಜಾಗೃತಗೊಳಿಸಿ ಅವರಲ್ಲಿ ವಿಶ್ವಾಸ ಕುದುರಿಸುವ ಕ್ರಮ ಕೈಗೊಳ್ಳುವುದು.

ಇದಂತೂ ವಿಚಿತ್ರ. ಲೇಖಕನಾದ ನನಗೆ ಈ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮಗೆ ಮಾನಸಿಕ ಹಿಂಸೆಗಳನ್ನು ಮಾಡಲಾಗುತ್ತಿದೆ, ಹಲ್ಲೆಗಳನ್ನು ಮಾಡಲಾಗುತ್ತಿದೆ, ಕೊಲೆ ಸಂಚು ರೂಪಿಸಲಾಗುತ್ತಿದೆ, ಪೋಲಿಸರನ್ನು ಬಳಸಿಕೊಂಡು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿಕೊಂಡು ಜೈಲಿಗೆ ಹಾಕಲಾಗುತ್ತಿದೆ ಎಂದು ದಿನಕ್ಕೆ ನೂರಾರು ಕರೆಗಳು ಬರುತ್ತಿವೆ. ಖುದ್ದೂ ಈ ಲೇಖನದ ಲೇಖಕನಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬ ಕೀಳಿ ಮಟ್ಟದ ಪದಗಳನ್ನು ಬಳಸಿದ್ದ. ರಾಜ್ಯದ ಹತ್ತಾರು ಕಡೆ ಈ ಪಂಚಾಯತಿಯೊಳಗಿನ ಭ್ರಷ್ಟಾಚಾರದ ಕಾರಣಕ್ಕೆ ನೂರಾರು ಕೊಲೆಗಳಾಗಿವೆ. ಇಂಥವರಿಂದ ಉತ್ತಮ ಸಮಾಜದ ನಿರ್ಮಾಣ ಮತ್ತು ಆತ್ಮ ವಿಶ್ವಾಸ ಮೂಡಿಸುವ ಪ್ರವೃತ್ತಿಯನ್ನು ನಿರೀಕ್ಷಿಸುವುದು ಹೇಗೆ?

ಇವೆಲ್ಲ ಒಂದು ಕಡೆ ಇರಲಿ, ಇಷ್ಟೆಲ್ಲ ಕರ್ತವ್ಯಗಳನ್ನು ಪಾಲಿಸಲಿಕ್ಕೆ ಪಂಚಾಯತಿಗಳು ಬಾಗಿಲು ತೆರೆದರೆ ತಾನೇ?

ಲಕ್ಷ್ಮೀಕಾಂತ ನಾಯಕ

WhatsApp Group Join Now
Telegram Group Join Now

Related Posts