ವೈಶಿಷ್ಟ್ಯ ಲೇಖನ

ವಾಲ್ಮೀಕಿ ನಾಯಕ ಜನಾಂಗದ ಇತಿಹಾಸ ಪರಿಚಯ

WhatsApp Group Join Now
Telegram Group Join Now

#ವಾಲ್ಮೀಕಿ_ನಾಯಕ_ಜನಾಂಗದ_ಇತಿಹಾಸ_ಪರಿಚಯ. (ವಿಶೇಷ ಮಾಹಿತಿ ಎಲ್ಲರೂ ಓದಿ ಶೇರ್ ಮಾಡಿ)

ನಾಯಕ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ ಇದೆ; ಇತಿಹಾಸವಿದೆ. ಅನೇಕರು ರ ಸಾಹಸಿಗಳಾಗಿ ಬಾಳಿ ಬದುಕಿ ಪಾಳೆಯಗಾರರಾಗಿ ರಾಜರೆನಿಸಿಕೊಂಡು, ಅಧಿಕಾರದಲ್ಲಿ ಮೆರೆದು, ಧೀಮಂತರೆನಿಸಿಕೊಂಡು ನಾಡಿನ ಉದ್ದಗಲಕ್ಕೂ ತಮ್ಮ ಪ್ರಭುತ್ವ ಸ್ಥಾಪಿಸಿ, ಧರ್ಮ ಪ್ರಭುಗಳಾಗಿ ರಾಷ್ಟ್ರ ಪ್ರೇಮಕ್ಕೆ, ಧೈರ್ಯಕ್ಕೆ, ಸಾಹಸಕ್ಕೆ, ಶೌರ್ಯ ಪರಾಕ್ರಮಗಳಿಗೆ ಹೆಸರುವಾಸಿಯಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳ ಪ್ರೋಹೆಸರುವಾಸಿಗಳಾಗಿದ್ದಾರೆ. ಕಂಪಿಲರಾಯ, ಗಂಡುಗಲಿ ಕುಮಾರರಾಮ, ರಾಷ್ಟ್ರರ ಎಚ್ಚಮ್ಮನಾಯಕ, ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ-ಬುಕ್ಕರು, ಚಿತ್ರದುರ್ಗದ ರಾಜರ ಮದಕರಿನಾಯಕ, ಸುರಪುರದ ರಾಜಾ ಚಿಕ್ಕ ವೆಂಕಟಪ್ಪ ನಾಯಕ, ವೀರ ಸಿಂಧೂರ ಲಕ್ಷ್ಮಣ ಹೀಗೆ ಸಾವಿರಾರು ಕಲಿಗಳು ಈ ಜನಾಂಗದಲ್ಲಿ ಜನಿಸಿದ್ದಾರೆ.

೧೯೮೧ರ ಜನಗಣತಿ ಪ್ರಕಾರ ನಾಯಕ ಜನಾಂಗವು ಕರ್ನಾಟಕದಲ್ಲಿ ೪೦ ಲಕ್ಷದಷ್ಟಿದೆ. ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಜನ ದಟ್ಟವಾಗಿದೆ. ಬೆಳಗಾವಿ, ಕೋಲಾರ, ತುಮಕೂರು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲ ಭಾಗಗಳಲ್ಲೂ ನಾಯಕ ಜನಾಂಗ ವಿಪುಲವಾಗಿದೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ನಾಯಕ ಸಮಾಜವು ವೇದ ಕಾಲದಿಂದ ಹುಟ್ಟಿ ಬಂದಿದೆ. ಈ ಸಮಾಜಕ್ಕೆ ‘ಬೇಡ’ ಅಂತಾ ಹೆಸರು ಬರಲು ಕಾರಣ, ಈ ಸಮಾಜ ವೇದ ಕಾಲದಿಂದ ಬಂದುದರಿಂದ ‘ವೇದ’ವೆಂಬ ಶಬ್ದವು ‘ವ್ಯಾದ’ ಎಂದು ರೂಢಿಯಲ್ಲಿ ಬಂದಿತು. ‘ವ್ಯಾದ’ ಅಂದರೆ, ಬೇಟೆಯಾಡುವವರು. ಆದ್ದರಿಂದ ಈ ಸಮಾಜದ ‘ಬೇಟೆ’ ಎಂಬ ಶಬ್ದ ಬದಲಾವಣೆ ಹೊಂದಿ ‘ಬೇಡ’ ಎಂದು ಕರೆಯುವ ರೂಢಿಗೆ ಬಂದಿತು. ಇದು ಅಲ್ಲದೇ, ಈ ಸಮಾಜಕ್ಕೆ ಬೇಡರು ಎಂದು ಕರೆಯುತ್ತಾರೆ. ‘ಬೇಡರ’ ಎಂಬುದು ಉರ್ದು ಶಬ್ದ. ಉರ್ದು ಭಾಷೆಯಲ್ಲಿ ‘ಬೇಡರ’ ಎಂದರೆ ಯಾರಿಗೂ ಹೆದರದವನು ಎಂದರ್ಥ. ಈ ಬೇಡರ ಸಮಾಜದವರು ಯಾರಿಗೂ ಹೆದರದೇ ಇದ್ದ ಶೂರ ಜನ. ಜೀವನದಲ್ಲಿ ಸುಖ ಬರಲಿ, ದುಃಖ ಬರಲಿ ಭಾವಾವೇಶಕ್ಕೊಳಗಾಗದೇ ನಗುನಗುತ್ತಾ ಇರುವ ಜನ. ಆದ್ದರಿಂದ ಈ ಸಮಾಜದವರಿಗೆ ಉರ್ದು ಶಬ್ದದಿಂದ ‘ಬೇಡರ’ ಎಂದು ಕರೆಯುತ್ತಾರೆ. ೧೬೭೦ರಲ್ಲಿ ಮೊಗಲ್ ಸೈನ್ಯ ಹಾಗೂ ಬೇಡರ ಸೈನ್ಯ ಒಂದಕ್ಕೊಂದು ಆದಿಲ್‌ಶಾಹಿಯ ಸಮೀಪವಿರುವ ವಾಗಿನ್‌ಗೇರಿ ಗುಡ್ಡದಲ್ಲಿ ಎದುರಿಗೆ ಬಂದಾಗ ಬೇಡರ ಜನಾಂಗದ ಸೈನ್ಯ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಕೂಡ ಅವರ ಶೂರತನ ಹಾಗೂ ಸಾಹಸಗಳನ್ನು ಕಂಡಾಗ ಔರಂಗಜೇಬನು “ಏ ಕಿಸಿಸೆ ನಹೀ ಡರನೇವಾಲೆ ಲೋಗ್”, ‘ಬೇಡರ ಲೋಗ್’ ಎಂದು ನುಡಿದನು. ಅಂದಿನಿಂದ ಈ ಜನಾಂಗಕ್ಕೆ ಉರ್ದು ಶಬ್ದದಿಂದ ಬೇಡರ ಎಂದು ಕರೆದರು. ಬೇಡರು ಎಂದರೆ, ಈ ಜನಾಂಗದವರು ಎಂದಿಗೂ ಭಿಕ್ಷೆಯನ್ನು ಬೇಡರು ಎಂದು ತಿಳಿಯುವ ಮೂಲಕ ಬೇಡರು ಎಂಬ ಹೆಸರು ಬಂದಿದೆ ಎಂದು ಈ ಜನಾಂಗದವರು ಹೇಳುತ್ತಾರೆ (ಡಿ.ಬಿ. ಡಂಗ, ೧೯೮೮: ೧-೨). ‘ಬೇರಡ’ ಅಂದರೆ ಮರಾಠಿಯಲ್ಲಿ ‘ಎಂದಿಗೂ ಅಳದವನು’ ಎಂದು ಅರ್ಥ ವಾಗುವುದು. ಆದ್ದರಿಂದ ಈ ಜನಾಂಗಕ್ಕೆ ಮರಾಠಿಯಲ್ಲಿ ‘ಬೇರಡ’ ಎಂದು ಕರೆಯುತ್ತಾರೆ. ಛತ್ರಪತಿ ಶಿವಾಜಿ ಕಾಲಕ್ಕೆ ಬೇಡರ ಜನಾಂಗದ ಅನೇಕ ಜನ ಸೈನ್ಯದಲ್ಲಿ ಸಹಾಯ ಮಾಡಿದ್ದರಿಂದ ಮಹಾರಾಷ್ಟ್ರದಲ್ಲಿ ‘ಬೇರಡ’ ಎಂದು ಕರೆಯುವುದು ರೂಢಿಗೆ ಬಂದಿದೆ. ದಕ್ಷಿಣ ಭಾರತದಲ್ಲಿ ಕೆಲ ಬೇಡರ ಸಂಸ್ಥಾನಗಳಿದ್ದವು. ಅವುಗಳನ್ನು ಆಳುತ್ತಿರುವವರೇ ಬೇಡರ ‘ದೊರೆಯರು’. ಆದ್ದರಿಂದ ಈ ಕೆಲ ಜನಾಂಗಕ್ಕೆ ‘ದೊರೆಯರು’ ಎಂದು ಸಹ ಹೆಸರು ಬಂದಿತು. ಈ ರೀತಿ ಕಲಬುರ್ಗಿ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಯಲ್ಲಿ ಕರೆಯುತ್ತಾರೆ. ಅದೇ ಪ್ರಕಾರ ಈ ‘ದೊರೆಯರು’ ಎಂಬ ಜನಾಂಗದಿಂದಲೇ ‘ದೊರೆ ಮಕ್ಕಳು’ ಎಂಬ ಮತ್ತೊಂದು ಉಪ ಜನಾಂಗ ಹುಟ್ಟಿತು. ವಿಜಾಪುರ ಆದಿಲ್‌ಶಾಹಿಯ ರಾಜಧಾನಿಯಲ್ಲಿ ಈ ಜನಾಂಗವು ಅತಿ ಶೂರತನದಿಂದ ಎಲ್ಲ ಕಾರ‍್ಯದಲ್ಲಿ (ಯುದ್ಧ ಮೊದಲಾದವುಗಳು) ಯಶಸ್ವಿಯಾಗುತ್ತಿದ್ದರು. ಆದ್ದರಿಂದ ಈ ಜನಾಂಗದ ಶೌರ್ಯ ಮೆಚ್ಚಿಕೊಂಡು ಆದಿಲ್‌ಶಾಹಿ ಸುಲ್ತಾನನು ಇವರಿಗೆ ಖಡ್ಗವನ್ನು ಬಹುಮಾನವನ್ನಾಗಿ ಕೊಡುತ್ತಿದ್ದನು. ಇಲ್ಲಿ ಖಡ್ಗ ಎಂದರೆ ‘ತಲ್‌ವಾರ್’ ಎಂದು ಅರ್ಥವಾಗುವುದು. ಈ ತಲ್‌ವಾರ್ ಬಹುಮಾನ ಪಡೆಯುತ್ತಿರುವ ಕೆಲ ಬೇಡರ ಸಮೂಹವೇ ‘ತಲ್‌ವಾರ್’ ಜನಾಂಗವೆಂದು ಹುಟ್ಟಿ ‘ತಳವಾರ’ವೆಂದು ಕರೆಯುವ ಪದ್ಧತಿ ಬಂದಿದೆ. ಈ ರೀತಿ ವಿಜಾಪುರ ಜಿಲ್ಲೆಯ ಸುತ್ತಲೂ ಕರೆಯುತ್ತಾರೆ.

‘ವೇಡನ್’ ಇದು ತಮಿಳು ಶಬ್ದ. ತಮಿಳಿನಲ್ಲಿ ಈ ಬೇಡರ ಸಮಾಜಕ್ಕೆ ‘ವೇಡನ್’ ಎಂದು ಕರೆಯುತ್ತಾರೆ. ತೆಲುಗು ಭಾಷೆಯಲ್ಲಿ ಬೇಡರ ಸಮಾಜಕ್ಕೆ ‘ಭೋಯಾ’ ಎಂದು ಕರೆಯುತ್ತಾರೆ. ರಾಜರ ಕಾಲದಲ್ಲಿ ಪಲ್ಲಕ್ಕಿಯನ್ನು ಹೊರುವವರನ್ನು ‘ಭೋಯಾ’ ಎಂದು ಕರೆಯುತ್ತಾರೆ. ‘ರಾಮೋಶಿ’ ಎಂಬುದು ‘ರಾಣವಾಸಿ’ ಎಂಬ ಮರಾಠಿ ಶಬ್ದದಿಂದ ಕರೆಯುವುದು ರೂಢಿಗೆ ಬಂದಿದೆ. ‘ರಾಣ’ ಎಂದರೆ; ಅರಣ್ಯ ಎಂದು ಅರ್ಥ. ‘ವಾಸಿ’ ಎಂದರೆ ವಾಸಿಸುವವ. ಬೇಡರ ಜನಾಂಗ ಪ್ರಾಚೀನ ಕಾಲದಲ್ಲಿ ಅರಣ್ಯದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರು. ಆದ್ದರಿಂದ ಈ ಬೇಡರ ಜನಾಂಗಕ್ಕೆ ‘ರಾಮೋಶಿ’ ಎಂದು ಕರೆಯುತ್ತಾರೆ. ಕೆಲ ಭಾಗದಲ್ಲಿ ‘ರಾಮೋಶಿ’ ಎಂದರೆ ‘ರಾಮನ ವಂಶದವರು’ ಎಂದು ಹೇಳಿಕೊಳ್ಳುತ್ತಾರೆ. ಈ ‘ಬೇಡರ’ ಜನ ತಾವು ಬೇಟೆಯಾಡುತ್ತಿರುವಾಗ ಸ್ಪಷ್ಟವಾಗಿ ಗುರಿಯಿಟ್ಟು ಬೇಟೆಯಾಡುತ್ತಿದ್ದರು. ಆದ್ದರಿಂದ ಈ ಬೇಡರ ಜನಾಂಗಕ್ಕೆ ‘ಗುರಿಕಾರ’ರೆಂದು ಕಲಬುರ್ಗಿ ಜಿಲ್ಲೆಯ ಕಡೆಗೆ ಕರೆಯುತ್ತಾರೆ. ಬೇಡರ ಶಬ್ದದಿಂದ ಬದಲಾವಣೆ ಹೊಂದಿ ‘ಬೇಂಡರ’ ಎಂದು ಕೆಲವು ಕಡೆ ಕರೆಯುತ್ತಾರೆ. ತಮಿಳು ಶಬ್ದದಿಂದ ನಾಯಕಡ ಎಂದು ಕೆಲವು ಕಡೆ ಕರೆಯುತ್ತಾರೆ. ‘ಕನ್ನಯ್ಯನವರು’, ‘ಕನ್ನಯ್ಯನ ಮಕ್ಕಳು’ ಎಂದು ಕೆಲವು ಕಡೆ ಕರೆಯುವುದು ವಾಡಿಕೆಯುಂಟು. ಈ ಸಮಾಜದಲ್ಲಿ ಕೆಲವರು ಬೇಡರ ಕನ್ನಯ್ಯನ ಭಕ್ತರಿದ್ದಾರೆ. ಅವರಿಗೆ ‘ಕನ್ನಯ್ಯನವರು’ ಎಂದು ಕರೆಯುತ್ತಾರೆ. ಇದು ಅಲ್ಲದೇ ಉತ್ತರ ಭಾರತದ ಕಡೆ ‘ವಾಸಿ’ ಎಂದು ಕರೆಯುತ್ತಾರೆ. ‘ವೇಟನ್’, ‘ವೇಡುವಾಸ್’, ‘ವೇಡುವಾಸ್’, ‘ವೆಡ್ಡಾಸ್’ ಈ ರೀತಿ ಸಿಲೋನ್‌ನಲ್ಲಿ ಕರೆಯುತ್ತಾರೆ. ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕೆಲ ಭಾಗಗಳಲ್ಲಿ ‘ಪೆದ್ದರು’ ಎಂದು ಕರೆಯುತ್ತಾರೆ. ಕಾಶ್ಮೀರದಲ್ಲಿ ಈ ಜನಾಂಗಕ್ಕೆ ‘ಡೋಗ್ರಾ’ ಎಂದು, ಉತ್ತರಪ್ರದೇಶದಲ್ಲಿ ‘ಜಾಟ’ ಎಂದು, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯ ಹಾಗೂ ಮಧ್ಯಪ್ರದೇಶಗಳಲ್ಲಿ ಭಿಲ್ ಎಂದು ಕರೆಯುತ್ತಾರೆ. ಇದು ಅಲ್ಲದೆ ಪಂಜಾಬಿನಲ್ಲಿ ‘ಬಾಲ್ಮೀಕಿ’ ಎಂದು, ಬಂಗಾಲ ಮತ್ತು ಬಿಹಾರದಲ್ಲಿ ‘ಸೇನ್’ ಎಂದು, ಕೇರಳದಲ್ಲಿ ‘ನಾಯರ್’ ಎಂದು ಕರೆಯುತ್ತಾರೆ. ತಮಿಳುನಾಡಿನಲ್ಲಿ ‘ನಾಯಿಡು’ ಎಂದು, ಬೈಡಾಸ್ ಅಥವಾ ಬ್ಯಾಡಾಸ್ ಎಂದು ಬಳ್ಳಾರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕರೆಯಿಸಿಕೊಳ್ಳುತ್ತಾರೆ.

ಪ್ರಸಿದ್ಧ ಇತಿಹಾಸಕಾರ ಡಾ. ಪಿ.ಬಿ. ದೇಸಾಯಿ ತಮ್ಮ ‘ಮದಗಜಮಲ್ಲ’ ಪುಸ್ತಕದಲ್ಲಿ ಈ ರೀತಿ ತಿಳಿಸಿದ್ದಾರೆ. ‘ಬೇಡ ಜನಾಂಗದ ಪ್ರಾಚೀನ ಚರಿತ್ರೆ ಕನಿಷ್ಠ ೧೨-೧೩ನೇ ಶತಮಾನ ದಷ್ಟಾದರೂ ಹಿಂದಿನ ಕಾಲದವರೆಗೆ ಹೋಗುವುದು. ಬೇಡರೆಂದರೆ; ಕರ್ನಾಟಕದ ರಜಪೂತರು. ರಜಪೂತರು ತಾವು ರಾಜಪುತ್ರರು ಎಂದರೆ; ಅರಸನ ಮಕ್ಕಳು ಎಂದು ಹೇಳಿಕೊಳ್ಳುವಂತೆ, ಈ ಬೇಡರು ತಾವು ದೊರೆ ಮಕ್ಕಳು, ಕನ್ನಯ್ಯನವರು ಎಂದರೆ; ಶ್ರೀಕೃಷ್ಣ ಪರಿವಾರದವರು ಎಂಬುದಾಗಿ ಗೌರವದಿಂದ ಕರೆಯಿಸಿಕೊಳ್ಳುವರು.

ಬೇಡರು ಮೊದಲಿನಿಂದಲೂ ದಂಡಿನ ಊಳಿಗಕ್ಕಾಗಿ ಮೀಸಲಾಗಿ ನಿಂತಿದ್ದ ಕ್ಷಾತ್ರ ವೃತ್ತಿಯ ರಜನಾಂಗ. ಈ ಜನಾಂಗದವರು ಕರ್ನಾಟಕದ ವಿಸ್ತಾರವಾದ ಪ್ರದೇಶಗಳಲ್ಲಿಯೂ ಆಂಧ್ರ ಮತ್ತು ಮಹಾರಾಷ್ಟ್ರಗಳ ಕೆಲ ಭಾಗಗಳಲ್ಲಿಯೂ ನೆಲೆಸಿದರು. ವಿಜಯನಗರದ ಸ್ಥಾಪನೆಯ ಪೂರ್ವದಲ್ಲಿ ಮಹಮ್ಮದೀಯರ ದಾಳಿಯನ್ನು ಎದುರಿಸಿ, ಕೆಲ ಕಾಲ ತಡೆದು ನಿಲ್ಲಿಸಿ, ಸ್ವರಾಜ್ಯ ಮತ್ತು ಸ್ವಧರ್ಮ ರಕ್ಷಣೆ ಆದರ್ಶವನ್ನು ಎತ್ತಿ ಹಿಡಿದು, ವಿಜಯನಗರದ ಸ್ಥಾಪನೆಗೆ ಮಾರ್ಗ ತೋರಿಸಿಕೊಟ್ಟ ರ ಕಂಪಿಲರಾಯ ಹಾಗೂ ಆತನ ಕಡುಗಲಿ ಕುಮಾರನಾದ ಕುಮಾರ ರಾಮನಾಥನು ಈ ಬೇಡ ಜಾತಿಯವರೇ ಆಗಿದ್ದರು. ಮುಂದೆ ವಿಜಯನಗರ ಸೈನ್ಯದ ಬಹುಭಾಗವು ಈ ಬೇಡ ಕಾಲಾಳುಗಳ ಪಡೆಯಿಂದ ವ್ಯಾಪಿಸಿದ್ದಿತು. ವಿಜಯನಗರದ ಅನಂತರ ಪ್ರಾಮುಖ್ಯತೆಗೆ ಬಂದ ಅನೇಕ ಪಾಳೆಯಗಾರ ರಾಜ್ಯಗಳು ಈ ಬೇಡ ನಾಯಕರಿಂದ ಸ್ಥಾಪನೆಯಾದವು. ಹೈದರ್, ಟಿಪ್ಪುವಿನ ದಂಡಿನಲ್ಲಿ ಈ ಬೇಡ ರರು ಬಹುಸಂಖ್ಯೆಯಿಂದ ಸೇರಿಕೊಂಡಿದ್ದು, ಆ ಪಿತಾಪುತ್ರಗಳ ವಿಜಯಗಳ ಶ್ರೇಯಸ್ಸಿನ ಮುಖ್ಯ ಭಾಗವು ಈ ಬೇಡರಿಗೆ ಸಲ್ಲುವುದಾಗಿದೆ ಎಂದು ಬಲ್ಲವರು ಅಭಿಪ್ರಾಯಪಟ್ಟಿರುವರು (ರಣ್ಣ ದಳವಾಯಿ, ೧೯೯೯:೫). “ಆ ಕಾಲದ ಇಬ್ಬರು ಮುಸ್ಲಿಂ ಚರಿತ್ರೆಕಾರರು ವಿಜಯನಗರ ಸಾಮ್ರಾಜ್ಯ ಸ್ಥಾಪಕ ಹಕ್ಕಬುಕ್ಕರ ಬಗ್ಗೆ ವಿಮರ್ಶಿಸುವಂತೆ, ಒಬ್ಬರು ಓರಂಗಲ್ಲಿನ ಕಣ್ಯಾನಾಯಕನ ಸಂಬಂಧಿಕರೆಂದು, ಇನ್ನೊಬ್ಬರು ಕಂಪಿಲರಾಯನ ಮಕ್ಕಳೆಂದೂ ಇನ್ನೂ ಕೆಲವು ಉಲ್ಲೇಖಗಳಲ್ಲಿ ಕಂಪಿಲಿರಾಯನ ಅಕ್ಕನ ಮಕ್ಕಳೆಂದೂ, ಇವರ ತಂದೆ ಸಂಗಮರಾಯನೆಂದೂ ತಿಳಿಸಿದ್ದಾರೆ. ಹೀಗೆ ಒಬ್ಬೊಬ್ಬ ಲೇಖಕರು ಒಂದೊಂದು ರೀತಿಯಲ್ಲಿ ಉಲ್ಲೇಖಿಸಿದ್ದರೂ, ಇವರು (ಬೇಡ) ನಾಯಕ ಜನಾಂಗಕ್ಕೆ ಸೇರಿದವರೆಂದು ಸ್ಥಿರಗೊಳಿಸಿದ್ದಾರೆ. ವಿಜಯನಗರದ ಅರಸರಲ್ಲಿ ಪ್ರೌಢದೇವರಾಯ ತುಳುವಂಶದ ನರಸನಾಯಕನ ಮಗ ಕೃಷ್ಣದೇವರಾಯ ಇತಿಹಾಸ ಲೋಕದಲ್ಲಿ ಧ್ರುವತ್ರಾರೆಗಳಾಗಿ ಬೆಳಗಿದರು. ಶ್ರೀಕೃಷ್ಣನ ಅಂತ್ಯ ಆಶೀರ್ವಾದಕ್ಕೆ ಪಾತ್ರನಾದ ಮೂಗನಾಯಕ, ಮಹಿಮಾಪುರುಷ ಜಗಲೂರು ಪಾಪನಾಯಕ (೧೩ನೆಯ ಶತಮಾನ) ಸದ್ಯ ಬೆಂಗಳೂರಿನ ಕೈಲಾಸಾಶ್ರಮ ನಿವಾಸಿ ಜ್ಞಾನ ಜ್ಯೋತಿ ಪಳನಿ (\ರುಚಿ) ಸ್ವಾಮಿಗಳು ಇದೇ ಜನಾಂಗದವರು” (ರಣ್ಣ ದಳವಾಯಿ, ೧೯೯೯:೫).

“ಜಗತ್ತಿನಲ್ಲಿ ಬೇಡರಷ್ಟು ಶೂರರು ಸಿಗಬಹುದು. ಆದರೆ ಬೇಡರಗಿಂತ ಶೂರರು ದೊರೆಯಲಾರರು” ಎಂದು ವಿಲಿಯಂ ಸ್ಮಿಥ್ ಹೇಳಿದ್ದಾರೆ (ಅದೇ ಪು. ೬). ಮೂಲತಃ ಕಾಡಿನಲ್ಲಿ ವಾಸವಾಗಿದ್ದುಕೊಂಡು, ಬೇಟೆಯ ವೃತ್ತಿಯಿಂದ ಬದುಕುವ ಜನಾಂಗವನ್ನು ಬೇಡರು ಎಂದು ಕರೆಯಲಾಗಿದೆ. ನಾಗರೀಕತೆಯ ಬೆಳವಣಿಗೆಯ ಹಂತದಲ್ಲಿ ಇವರು ಗ್ರಾಮವಾಸಿಗಳಾಗಿ ಕೃಷಿ ಮತ್ತಿತರ ವೃತ್ತಿಗಳನ್ನು ಕೈಗೊಂಡರು. ಇವರಿಗೆ ಬೇರಾದ್, ಕಿರಾತ, ಶಬರ, ವ್ಯಾಧ ಎಂಬ ಬೇರೆ ಬೇರೆ ಹೆಸರುಗಳು ಉಂಟು.

ಬೇಡರು ಕಣ್ವ ಋಷಿಯ ವಂಶಜರೆಂಬ ನಂಬಿಕೆಯಿದೆ. ಅದಕ್ಕಾಗಿಯೇ ಅವರು ತಮ್ಮನ್ನು ‘ಕಾಣ್ಯಮ್’ ಕುಲದವರೆಂದು ಕರೆದುಕೊಳ್ಳುತ್ತಾರೆ. ತಮ್ಮ ವಂಶದ ಮೂಲ ಪುರುಷ ವಾಲ್ಮೀಕಿ ಮಹರ್ಷಿಯೆಂಬ ಇನ್ನೊಂದು ನಂಬಿಗೆಯೂ ಇರುವುದರಿಂದ, ತಮ್ಮನ್ನು ವಾಲ್ಮೀಕಿ ಕ್ಷತ್ರಿಯರೆಂದು ಕರೆದುಕೊಳ್ಳುತ್ತಾರೆ. ಪೂರ್ವದಲ್ಲಿ ದಾರಿ ಹೋಕರನ್ನು ಪೀಡಿಸಿ, ಅವರಿಂದ ವಸ್ತುಗಳನ್ನು ದೋಚಿಕೊಳ್ಳುತ್ತಿದ್ದರು. ತಮಿಳುನಾಡಿನಲ್ಲಿ ಆಗಿ ಹೋದ ೬೩ ಪುರಾತನ ಶಿವಶರಣರಲ್ಲಿ ಒಬ್ಬರಾಗಿರುವ ಬೇಡರ ‘ಕಣ್ಣಯ್ಯ’ ಎನ್ನುವ ವ್ಯಕ್ತಿಯು ಈ ಜನಾಂಗದ ಆದರಣೀಯ ವ್ಯಕ್ತಿ.

ವಿದೇಶಿ ವಿದ್ವಾಂಸರಾದ ಬುಖಾನನ್‌ರವರು, “ಬೇಡರು ಮೂಲತಃ ದ್ರಾವಿಡ ಜನಾಂಗಕ್ಕೆ ಸೇರಿದವರಾಗಿರಬಹುದು” ಎಂದು ಹೇಳಿದ್ದಾರೆ. ಉತ್ತರ ಮಲಬಾರಿನ ಪೆರಿಂಗಾಲ್ ಪೆಟ್‌ವಾನ್ಸ್ ಅವರು, ಟ್ರವೆಂಕೂರಿನ ಮಾಲವೇದನ್ಸ್, ಸಿಲೋನಿನ ವೆಡ್ಡಾ ಮತ್ತು ಕರ್ನಾಟಕದ ಬೇಡರು ಒಂದೇ ಮೂಲದವರೆಂಬುದು ರೈಸ್ ಅವರ ಅಭಿಪ್ರಾಯವಾಗಿದೆ. ವ್ಯಾಪಕವಾದ ತೌಲನಿಕ ಅಧ್ಯಯನದ ಮೂಲಕ ಈ ಅಭಿಪ್ರಾಯ ಖಚಿತ ರೂಪ ಪಡೆಯ ಬೇಕಾಗಿದೆ.

ನಮ್ಮ ದೇಶದಲ್ಲಿ ಬಹು ಪುರಾತನ ಕಾಲದಿಂದಲೂ ಈ ಜನಾಂಗ ಅಸ್ತಿತ್ವದಲ್ಲಿತ್ತೆಂಬ ಬಗೆಗೆ ಅನುಮಾನವಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೌರಾಣಿಕ-ಸಾಂಸ್ಕೃತಿಕ ಹಿನ್ನೆಲೆಯ ಹಲವಾರು ಉಲ್ಲೇಖಗಳ ಉಪಲಬ್ಧವಿದೆ” (ಡಾ. ಕರಿಶೆಟ್ಟಿ ರುದ್ರಪ್ಪ, ೧೯೯೫:೧೧-೧೨).

ಬೇಟೆಯೇ ಬದುಕಿನ ಭಾಗವಾಗಿಸಿಕೊಂಡ ಬುಡಕಟ್ಟು ಜನಾಂಗವು ‘ಬೇಡ’ರೆಂದು ಕರೆಯಿಸಿಕೊಂಡ ಬಗ್ಗೆ ಒಂದು ವರ್ಣರಂಜಿತ ಇತಿಹಾಸವೇ ಇದೆ. ಕಾಡು, ಕಣಿವೆ, ಗುಡ್ಡ, ಗವಿಗಳನ್ನೇ ತಮ್ಮ ವಾಸಸ್ಥಳ ಮಾಡಿಕೊಂಡ ಇವರು ಚರ್ಮ, ತೊಗಟಿಗಳನ್ನೇ ಉಡುಪಾಗಿ ಧರಿಸಿದರು. ಆದಿ ಮಾನವನ ಎಲ್ಲ ಅವಸ್ಥೆಗಳನ್ನು ಹೊತ್ತುಕೊಂಡ ಇವರು ಕ್ರೂರ ಪ್ರಾಣಿಗಳ ಮಧ್ಯೆ ಬಾಳಿದರು. ಇಂಥ ಬೇಡ ಜನಾಂಗದ ರೋಮಾಂಚಕ ಹೆಜ್ಜೆಗಳು ಎಲ್ಲಿಂದ ಆರಂಭವಾಗುತ್ತವೆ ಎಂಬುದಕ್ಕೆ ಹಲವಾರು ವಿದ್ವಾಂಸರು ಅನೇಕ ವಾದಗಳನ್ನು ನೀಡಿದ್ದಾರೆ.

ಆದಿ ಮೂಲನಾದ ಭಗವಂತನು ಬೇಡರ ಚಂಚುಲಕ್ಷ್ಮಿಯನ್ನು ಮದುವೆಯಾಗುವ ಮೂಲಕ ಬೇಡರ ವಂಶವನ್ನು ಬೆಳೆಯಿಸಿದನೆಂಬ ಕಥೆಯೊಂದು ನಮ್ಮಲ್ಲಿ ಇಂದಿಗೂ ಪ್ರಚಲಿತವಿದೆ. ಅದರಂತೆ ಮನುವಿನ ಏಳನೆಯ ತಲೆಯವನಾಗಿ ಚಂದ್ರವಂಶದಲ್ಲಿ ಕಾರ್ತ್ಯಾವಿರ‍್ಯಾರ್ಜುನ ಹುಟ್ಟಿದ. ಈತ ಹೇಹಯ ರಾಜ್ಯವನ್ನು ಆಳುತ್ತಿರುವಾಗ ವೈಷ್ಣವ ಯಾಗಾದಿಗಳನ್ನು ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಜಮದಗ್ನಿ ಈತನಿಂದ ಹತನಾದ. ಇದರಿಂದ ಕುಪಿತನಾದ ಪರಶುರಾಮ ಕಾರ್ತ್ಯಾರ‍್ಯಾರ್ಜುನ ಹಾಗೂ ಅವನ ಮಕ್ಕಳನ್ನು ಕೊಂದು ಕ್ಷತ್ರಿಯರೆಲ್ಲರನ್ನು ಸದೆಬಡೆಯಲು ೨೧ ಬಾರಿ ಭೂಮಿ ಮೇಲೆ ದಂಡೆಯಾತ್ರೆ ಕೈಗೊಂಡ. ಬೆದರಿದ ಕ್ಷತ್ರಿಯರೆಲ್ಲ ಕಾಡಿಗೆ ಹೋದರು. ಕಾಡುವಾಸಿಗಳಾದರು. ಇವರೇ ಮುಂದೆ ‘ಬೇಡ’ರಾದರೆಂದು ಹೇಳುತ್ತ ಕ್ಷತ್ರಿಯರಿಗೂ, ಬೇಡರಿಗೂ ಭಿನ್ನತೆಯಿಲ್ಲವೆಂದು ಕೆಲ ಶೋಧಕರು ಪ್ರತಿಪಾದಿಸಿದ್ದಾರೆ.

ಪಾಂಡವರ ಪ್ರತಿಯೊಬ್ಬರಿಗೂ ಒಂದೊಂದು ಬೇಡರ ಪಡೆ ಬೆಂಗಾವಲಿಗೆ ಇತ್ತಂತೆ. ದಕ್ಷಿಣದ ಪೈನ ಗಂಗಾತೀರದ ಸುತ್ತಿನ ಪ್ರದೇಶ ಬೇಡರ ದೊರೆಯ ಹತೋಟಿಯಲ್ಲಿತ್ತಲ್ಲದೆ, ಸೂರ್ಪರಕದಿಂದ ರತ್ನಗಿರಿವರೆಗಿನ ಪ್ರದೇಶ ಬೇಡರ ರಾಜ್ಯವಾಗಿತ್ತೆಂದು ಹೇಳುವ ಮೂಲಕ ಮಹಾಭಾರತ ಕಾಲೀನ ಬೇಡರ ರಾಜ್ಯ ಮತ್ತು ಅವರ ಅಸ್ತಿತ್ವವನ್ನು ಗುರುತಿಸಲಾಗಿದೆ. ಕಲಿಯುಗದ ಆರಂಭಕ್ಕೆ ದಕ್ಷಿಣದ ದೇಶದಲ್ಲಿ ಬೇಡರ ವಿನಃ ಬೇರೆ ಯಾವ ಜನಾಂಗವು ಇರಲಿಲ್ಲ. ಅನಂತರ ಉದಯಿಸಿದ ಮನೆತನಗಳಿಗೆಲ್ಲ ಬೇಡರೇ ಮೂಲರೆಂದು ಪ್ರತಿಪಾದಿಸುವ ಅನೇಕ ಊಹೆಯ ವಾದಗಳಿವೆ.

ಬೇಡರ ಜನಾಂಗವು ‘ಮೂಲ ದ್ರಾವಿಡ’ ಜನಾಂಗದವರೆಂಬ ವಾದದಲ್ಲಿ ಎರಡಿಲ್ಲ. ಅವರಿದ್ದ ಪುಳಿಂದ, ಭಿಲ್ಲ, ಕಿರಾತ, ವ್ಯಾಧ, ಶಿಬಿರ, ನಿಷಾದ ಮುಂತಾದ ಪುರಾತನ ಹೆಸರುಗಳೇ ಸಾಕ್ಷಿ. ಅಂತೆಯೇ ದ್ರಾವಿಡ ಭಾಷೆಯಲ್ಲಿ ವೇಡನ್, ವೇಂದನ್, ವೆಟ್ಟುವನ್ ಎಂದೆಲ್ಲ ಕರೆಯಲಾಗಿದೆ. ಹಳೆಗನ್ನಡದಲ್ಲಿ ವೇಡರ್, ವೇಳರ್, ವಿದಿಕ್, ಬಿಲ್ಲ, ಬೇಂಟೆಯವರ್, ಬೇಂಟೆಕಾರ, ವಿಯದರ್, ಬಿಯದರ್, ಕುಣಿಂದರ್, ಕೋವರ್ ಎಂಬ ನಾಮಗಳಿವೆ. ರಾಷ್ಟ್ರಕೂಟರ ಅಪಭ್ರಂಶ ಭಾಷೆಯಲ್ಲಿ ನಾಹಲ, ನಾಹಿಲ, ನಾಇಲ್ಲ, ವಾಹ, ಸಮರ, ಸಿಮಿರ, ಬೆಲಾಡ, ಭಿಲ್ಲ, ಪಾದ್ದಿಯ ಮುಂತಾಗಿ ಗುರುತಿಸಲಾಗಿದೆ. ಇವೆಲ್ಲ ಪದಗಳು ಬೇಡ ಜನಾಂಗದ ಪ್ರಾಚೀನತೆಯ ವ್ಯಾಪ್ತಿಯನ್ನು ಸ್ಪಷ್ಠೀಕರಿಸುತ್ತವೆ.

ಬೇಡ ಜನಾಂಗದ ಮೂಲ ‘ವಾಲ್ಮೀಕಿ’ಯೆಂದು ಹಲವರ ಅನಿಸಿಕೆ. ಕಿರಾತರ ಯಜಮಾನನಾದ ಈತ ಕಾಮಕೇತು, ಲಕ್ಷ, ಮೀನ, ಮಲ್ಲರೆಂಬ ಇನ್ನಿತರ ಏಳು ಜನ ತನ್ನ ಮಕ್ಕಳ ನೇತೃತ್ವದಲ್ಲಿ ಏಳು ಪಡೆಗಳನ್ನು ರಚಿಸಿ, ದರೋಡೆ ನಡೆಸುತ್ತಿದ್ದನು. ಮುಂದೆ ಕಾಡಿನಲ್ಲಿ ಕಾಲಾನಂತರ ಚದುರಿ ಹೋದ ಈ ಪಡೆಗಳೇ ಬೇಡರ ಜನಾಂಗದ ವಂಶ ವಿಕಾಸಕ್ಕೆ ನಾಂದಿ ಹಾಡಿದವು ಎಂಬ ಒಂದು ಐತಿಹ್ಯವಿದೆ. ಅದೇನೇ ಇದ್ದರೂ ತೂರಿ ಹೋದ ಇಂಥ ಬೇಡ ಪಡೆಯ ತುಕಡಿಗಳು ಆಯಾ ಪ್ರದೇಶಗಳಲ್ಲಿ ಗಟ್ಟಿಯಾಗಿ ನೆಲೆಯೂರಿದವು ಎಂಬುದರಲ್ಲಿ ಸಂಶಯವಿಲ್ಲ. ಅವರೀಗ ಅಲ್ಲಿಯ ಹೆಸರುಗಳಿಂದಲೇ ಇಂದು ದೇಶಾದ್ಯಂತ ಗುರುತಿಸಲ್ಪಡುತ್ತಿದ್ದಾರೆಂಬುದೇ ಬಹು ಮಹತ್ವ ಪೂರ್ಣ ಅಂಶ (ಡಾ. ರಂಗರಾಜ ವನದುರ್ಗ, ೧೯೯೬:೧-೨). ತ್ರೇತಾಯುಗದ ಮೂಲ ಸಂವೇದನೆಯನ್ನು ಬದುಕಿನ ಮೌಲ್ಯವನ್ನು ಸೋಲು ಗೆಲುವುಗಳನ್ನೆಲ್ಲ ಒಟ್ಟಾಗಿ ಹಿಡಿದಿಟ್ಟ ದಾರ್ಶನಿಕ ಶಕ್ತಿ ವಾಲ್ಮೀಕಿಗೆ ದಕ್ಕಿತು ಮತ್ತು ಅದು ರಾಮಾಯಣದ ರೂಪದಲ್ಲಿ ಹೊರಬಿತ್ತು. ಇಂತಹ ಶಕ್ತಿ ಸಿಗುವ ಮುನ್ನ ಆದಿ ಮಾನವನಂತೆ, ಅಡವಿಯಲ್ಲಿ ಅಲೆಯುತ್ತಿದ್ದ ವಾಲ್ಮೀಕಿ ಪ್ರಚೇತಸ ಮತ್ತು ಪ್ರಮೋಜೆಯರ ಮಗನಾಗಿ ಹುಟ್ಟಿ, ತಮಸಾ ನದಿ ತೀರದಲ್ಲಿ ವಾಸವಾಗಿದ್ದನು. ನಂತರ ಕಿರಾತರ ಯಜಮಾನನಾಗುವ ಮೂಲಕ ಕಾಮಕೇತು, ಲಕ್ಷ, ಮೀನಮಲ್ಲರೆಂಬ ಹನ್ನೆರಡು ಮಕ್ಕಳಲ್ಲಿ ಏಳು ಮಕ್ಕಳನ್ನು ಆಯ್ಕೆ ಮಾಡಿಕೊಂಡು ವಾಲ್ಮೀಕಿಯು ಅವರ ಮುಖಂಡತ್ವದಲ್ಲೇ ಪಡೆ ರಚಿಸಿ, ದರೋಡೆ ನಡೆಸುತ್ತಿದ್ದನೆಂದು ಒಂದು ಅಭಿಪ್ರಾಯವಿದೆ. ಮುಂದೆ ಕಾಡಿನಲ್ಲಿ ಚದುರಿ ಹೋದ ಈ ಪಡೆಗಳೇ ‘ಬೇಡರ’ ಜನಾಂಗದ ವಂಶ ವಿಕಾಸಕ್ಕೆ ಕಾರಣವಾಯಿತೆಂದು ಹೇಳುತ್ತಾರೆ. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡ ಹಲವರು ‘ಬೇಡ’ ಜನಾಂಗದ ಮೂಲ ವಾಲ್ಮೀಕಿಯೆಂದು ವಾದಿಸುತ್ತಾರೆ. ಇದರಿಂದ ಬೇಡರ ಒಂದು ಗುಂಪು ತಮ್ಮನ್ನು ‘ವಾಲ್ಮೀಕಿ’, ವಾಲ್ಮೀಕಿ ಮಕ್ಕಳೆಂದು ಕರೆಯಿಸಿಕೊಳ್ಳಲು ಇಚ್ಛಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕಬ್ಬಲಿಗರು ವಾಲ್ಮೀಕಿ ಪೂಜಕರಾಗಿರುವುದರಿಂದ ಅವರಿಗೆ ವ್ಯಾಲ್ಯಾ (ವಾಲ್ಮೀಕಿ) ಕೋಳಿ ಎನ್ನುತ್ತಾರೆ. ಅದರಂತೆ ತ್ರೇತಾಯುಗದಲ್ಲಿದ್ದ ಗುಹ, ಶಬರಿ, ದ್ವಾಪರದಲ್ಲಿದ್ದ ಏಕಲವ್ಯ, ಧರ್ಮವ್ಯಾಧ, ಕಲಿಯುಗದಲ್ಲಿದ್ದ ಬೇಡರ ಕಣ್ಣಪ್ಪರನ್ನು ಬೇಡರು ತಮ್ಮ ಪೂರ್ವಜರೆಂದು ಇಂದಿಗೂ ಆರಾಧಿಸುತ್ತಿರುವುದರ ಅರ್ಥ. ಇವರ ವಂಶ ವಿಕಾಸವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ ಅವರ ವಂಶದವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ. ವ್ಯಾಸನ ವಂಶಸ್ಥರ ಚರಿತ್ರೆ ಮಹಾಭಾರತವಾದರೆ, ವಾಲ್ಮೀಕಿ ತನ್ನ ವಂಶದ ಚರಿತ್ರೆಯನ್ನು ರಾಮಾಯಣವಾಗಿಸಿರಬಹುದೆ ಎಂಬ ಬಲವಾದ ಊಹೆಯೊಂದು ಇದೆ.

ನಾಯಕ : ಬೇಡರ ಗುಂಪಿನಲ್ಲಿ ಶೂರನಾದ ವ್ಯಕ್ತಿ ಪಾಳೆಪಟ್ಟುಗಳನ್ನು ಕಟ್ಟಿಕೊಂಡು ಪಾಳೆಯಗಾರನೆನಿಸಿದ. ಆತನೆ ಮುಂದೆ ಮುಖಂಡನಾದ. ನೇತೃತ್ವವಹಿಸಿದ ಈತನಿಗೆ ‘ನಾಯಕ’ ನೆಂದೇ ಗೌರವ ಸೂಚಕ ಅಭಿದಾನವಿತ್ತರು. ‘ನಾಯಕ’ ಎಂಬ ಪದವು ಕ್ರಿ.ಶ. ೯ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ಸೇನಾಪತಿ, ಪಡೆಗಳ ಮುಂದಾಳು, ಮುಖ್ಯಸ್ಥನೆಂಬ ಅರ್ಥಗಳಲ್ಲೇ ಬಳಕೆಯಾಗಿದೆ. ಬೇಡರ ಹೆಸರುಗಳ ಕೊನೆಗೆ ‘ನಾಯಕ’ ಪದ ಬಳಕೆಯಾಗುವ ಪೂರ್ವದಲ್ಲಿ ಬೋವ, ಬೋಯ, ಬೋಯಿ ಎಂದಿದ್ದ ಬಗ್ಗೆ ಹಲವಾರು ದಾಖಲೆಗಳು ಇಂದಿಗೂ ದೃqsಕರಿಸುತ್ತವೆ. ಬೇಡರ ರಾಜ್ಯಗಳಲ್ಲಿ ಸುಮಾರು ೫೭೦ ವರ್ಷಗಳಷ್ಟು ದೀರ್ಘಕಾಲ ಇಂಥ ನಾಯಕರು ‘ಶ್ರೀಮನ್ಮಹಾನಾಯಕಾಚಾರ್ಯ’ ಎಂಬ ಬಿರುದು ಹೊತ್ತು ಆಳ್ವಿಕೆ ಮಾಡಿದರೆಂಬುದು ಗಮನಾರ್ಹ. ‘ನಾಯಕ’ ಎಂದು ಹೆಸರು ಬರಲು ಕಾರಣ ಆದಿಕಾಲದಲ್ಲಿ ಏಕಲವ್ಯನಂಥ ಅನೇಕರು ಅರಸರಾಗಿದ್ದರು. ಅಂಥವರಿಂದ ಬಂದ ಕೆಲ ಜನಾಂಗಕ್ಕೆ ‘ನಾಯಕ’ ಜನಾಂಗ ಎಂದು ಕರೆಯುತ್ತಾರೆ. ‘ನಾಯಕ’ ಈ ಶಬ್ದ ಒಂಬತ್ತನೇ ಶತಮಾನದಿಂದ ಬಳಕೆಯಲ್ಲಿ ಬಂದಿದೆ. ಇದು ವಿಜಯನಗರ ಅರಸರ ಕಾಲದಲ್ಲಿ ಆಗಿನ ರಾಜರು ಈ ಸಮಾಜದಲ್ಲಿ ಕೆಲವರಿಗೆ ಉಂಬಳಿಯನ್ನು ಹಾಕಿ, ಮುಖಂಡತ್ವ ಕೊಟ್ಟು, ಅವರಿಗೆ ‘ನಾಯಕ’ರೆಂದು ಕರೆಯುತ್ತಿದ್ದರು. ಅವರೆಲ್ಲರನ್ನು ತಮ್ಮ ಸೈನ್ಯದ ಜೊತೆ ಸೇರಿಸಿ ಕೊಂಡು ಹೋಗುತ್ತಿದ್ದರು. ಆದ್ದರಿಂದ ಇವರಿಗೆ ನಾಯಕ ಎಂದು ಹೆಸರು ಬಂದಿತು” (ಡಿ.ಬಿ. ಡಂಗ, ೧೯೮೮:೩).

“ಸದ್ಯ ಕರ್ನಾಟಕದಲ್ಲಿ ಬೇಡರಲ್ಲಿ ಮುಖ್ಯವಾಗಿ ಎರಡು ಬಣಗಳನ್ನು ಕಾಣುತ್ತೇವೆ. ಮ್ಯಾಸಬೇಡರು, ಊರ ಬೇಡರೆಂದು. ತಮ್ಮನ್ನು ತಾವೇ ಇವರು ಸೀಳಿಕೊಂಡಿದ್ದಾರೆ. ಆಳುತ್ತಿರುವ ಅರಸನಿಗೆ ವೈರಿಗಳ ಬರುವಿಕೆ ಬಗ್ಗೆ ಗೂಢಾಚಾರಿಕೆ ತಲುಪಿಸುತ್ತ ಕಾಡಿನಲ್ಲೇ ಅಲೆಯುತ್ತಿದ್ದವರೆಲ್ಲಾ ಮ್ಯಾಸಬೇಡರಾದರೆ, ಊರಲ್ಲಿದ್ದವರೆಲ್ಲ ಊರ ಬೇಡರಾದರು. ಮ್ಯಾಸಬೇಡರಲ್ಲಿ ಊರು ಮ್ಯಾಸ, ಅಡವಿ ಮ್ಯಾಸ, ಕಳ್ಳ ಮ್ಯಾಸ, ಮುಂಜಿ ಮ್ಯಾಸಗಳೆಂದು ವಿಧಗಳಿವೆ. “ಮೋಯಿಸ” ಇದರರ್ಥವೇ ಮ್ಯಾಸವೆಂದು ಡಾ. ಕೃಷ್ಣಮೂರ್ತಿ ಹನೂರ ಅವರ ತರ್ಕ. ‘ಮೀಸಲು’ ಸೈನ್ಯವಾಗಿದ್ದ ಇವರ ವೃತ್ತಿಯನ್ನು ಗ್ರಾಮೀಣರು ‘ಮ್ಯಾಸ’ ಎಂಬರ್ಥದಲ್ಲಿ ಪ್ರಯೋಗಿಸಿರುವುದನ್ನು ಡಾ. ಹನೂರ ಆಧರಿಸುತ್ತಾರೆ” (ಡಾ. ರಂಗರಾಜ ವನದುರ್ಗ, ೧೯೯೬:೬). ಇವರನ್ನೇ ಕೆಲವೆಡೆ ಊರು ನಾಯಕರು, ಮ್ಯಾಸನಾಯಕರೆಂದು ಗುರುತಿಸಲಾಗುತ್ತಿದೆ. ಮಾರಮ್ಮ ನಾಯಕರು, ಮುತ್ಯಾಲ ನಾಯಕರು, ಹಾಲು ಬೇಡರು, ಮೊಂಡ ಬೇಡರು, ಸಂಚಲು, ಭಿಲ್ಲರು, ರಾಜ ಪರಿವಾರದವರು, ಕೊಂಡರಾಜಲು ಎಂದೆಲ್ಲಾ ಕರೆಯುವಲ್ಲಿ ಅವರ ವೃತ್ತಿ ಮತ್ತು ಗುಣ ವಿಶೇಷಣಗಳನ್ನು ಅರ್ಥೈಸಲೇಬೇಕಾಗುತ್ತದೆ. ಇವರಲ್ಲಿ ಕೆಲವರು ಕ್ರಮೇಣ ಊರು ಕಟ್ಟಿ ವಿಸ್ತರಿಸಿ, ಅವುಗಳ ಮೇಲೆ ಒಡೆತನ ಸಾಧಿಸಿ, ರಾಜ್ಯಪಾಲರಾದರು, ರಾಜರೆನಿಸಿಕೊಂಡರು.

‘ಸದಾ ಸುಸಜ್ಜಿತ ಸೈನ್ಯವನ್ನು ಹೊಂದಿ, ದಂಡಿನೊಡನೆ ಪಾಳೆಯವನ್ನು ಹಾಕಿ ಇಳಿದು ಕೊಂಡು ಕದನಕ್ಕೆ ಸಿದ್ಧವಾಗಿರತಕ್ಕವರಿಗೆ ಪಾಳೆಯಗಾರ’ರೆಂದು ಕರೆಯುತ್ತಾರೆ. ಪಾಳೆಯಗಾರ ರಲ್ಲಿ ಬೇಡರ ಸಂಖ್ಯೆ ಹೆಚ್ಚಾಗಿರುವ ಕಾರಣ ಇವರು ತಮ್ಮನ್ನು ‘ಪಾಳೆಯಗಾರರು’ ಎಂದು ಕರೆದುಕೊಂಡಿರಬೇಕು. ವಿಜಯನಗರ ಸಾಮ್ರಾಜ್ಯಕ್ಕಿಂತ ಹಿಂದೆಯೇ ಪಾಳೆಯಗಾರರ ಮನೆತನಗಳಿದ್ದರೂ ಈ ಕಾಲದಲ್ಲಿಯೇ ಇವರು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡರು. ರಕ್ಕಸತಂಗಡಿ ಕದನದ ನಂತರ ಸ್ವತಂತ್ರವಾಗಿ ಪಾಳೆಯಪಟ್ಟುಗಳಲ್ಲಿ ಆಳ್ವಿಕೆ ನಡೆಸಿದರು. ಬ್ರಿಟಿಷರ ಆಗಮನದಿಂದ ಇವರ ಅಧಿಕಾರ ಮೊಟಕಾಯಿತು. ನಾಯಕ ಎಂಬ ಪದವನ್ನು ಕುರಿತು ಚಿತ್ರಲಿಂಗಯ್ಯ, ಎಂ.ವಿ. ಅವರು ವಿವರಣಾತ್ಮಕವಾದ ಮಾಹಿತಿ ಯನ್ನು ಒದಗಿಸಿದ್ದಾರೆ. ‘ನಾಯಕಾಚಾರ್ಯ’, ‘ಶ್ರೀಮನ್ಮಹಾನಾಯಕಾಚಾರ್ಯ’, ‘ನಾಯಕ ಶಿರೋಮಣಿ’, ‘ನಾಯಕ ನಾರಾಯಣ’, ‘ನಾಯಕಶಿಖಾಮಣಿ’ ಮುಂತಾದ ಬಿರುದುಗಳನನ್ನು ಪಡೆದುಕೊಂಡಿದ್ದ ಬೇಡ ಜನಾಂಗದ ಪಾಳೆಯಗಾರರು ತಮ್ಮನ್ನು ‘ನಾಯಕ’ ಜಾತಿಯವರು ಎಂದು ಅರ್ಥ ಬರುವಂತೆ ಕರೆದುಕೊಂಡಿದ್ದಾರೆ. ಕ್ರಿ.ಶ. ೯ನೆಯ ಶತಮಾನದಲ್ಲಿ ಮೊಟ್ಟ ಮೊದಲು ಕಾಣಿಸಿಕೊಳ್ಳುವ ‘ನಾಯಕ’ ಎಂಬ ಪದ ಜಾತಿ ಸೂಚಕವಲ್ಲ. ಗೌರವ ಸೂಚಕ ಅಥವಾ ಅಧಿಕಾರ ಸೂಚಕ ಪದ. ನಂತರ ಕನ್ನಡ ನಾಡಿನ ಚರಿತ್ರೆಯಲ್ಲಿ ಬೇಡರ ನಿರಂತರ ಪ್ರಸಿದ್ದಿಯಿಂದಾಗಿ ಅವರ ಪಾಲಿಗೆ ‘ನಾಯಕ’ ಪದವು ಜಾತಿ ಸೂಚಕ ಶಬ್ದವಾಗಿದೆ. ‘ನಾಯಕ’ ಎಂಬ ಉಪನಾಮವು ಬೇಡರ ಹೆಸರಿನ ಕೊನೆಯಲ್ಲಿ ಬರುವುದಕ್ಕಿಂತ ಪೂರ್ವದಲ್ಲಿ ‘ಬೋವ, ಬೋಯ, ಬೋಯಿ ಎಂಬ ಉಪನಾಮಗಳು ಬಳಕೆಯಲ್ಲಿದ್ದವು. ತೆಲುಗಿನಲ್ಲಿ ಇಂದಿಗೂ ಬೇಡರನ್ನು ‘ಬಾಯೊಡ, ಬಾಯೋಳ್ಳು’ ಎಂದು ಕರೆಯುತ್ತಾರೆ. ಕರ್ನಾಟಕದ ಇತಿಹಾಸದ ಉದ್ದಕ್ಕೂ ಬೇಡರ ಧೈರ್ಯ, ಸಾಹಸದ ವರ್ಣನೆ ಕಂಡುಬರುತ್ತದೆ. ಬುಖನಾನ್ ಅವರು ತಮ್ಮ ಕೃತಿಯಲ್ಲಿ ಬನವಾಸಿಯ ಕದಂಬರು ಬೇಡರ ಜಾತಿಗೆ ಸೇರಿದವರು ಎಂದು ಅಭಿಪ್ರಾಯಪಟ್ಟಿದ್ದಾರೆ (ಮನೆ ಸಮಾಜ ಮತ್ತು ಸಂಸ್ಕೃತಿ, ಎಂ.ಪಿ. ವೀಣಾ ಅವರ ಪ್ರಬಂಧ). ವಿಜಯನಗರ ಕಾಲದಲ್ಲಿ ಬೇಡರು ಸೈನಿಕ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು. ವಿಜಯನಗರದ ದೊರೆಗಳು ತಮ್ಮ ಸೈನ್ಯದಲ್ಲಿ ಹೆಚ್ಚಾಗಿ ಬೇಡರನ್ನೇ ನೇಮಿಸಿ ಕೊಳ್ಳುತ್ತಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಪಾಳೆಯಗಾರರನ್ನಾಗಿ ನೇಮಿಸಿ, ಪಾಳೆಯಪಟ್ಟು ಗಳನ್ನು ನೀಡಿ, ಅವರಿಂದ ವರ್ಷಕ್ಕೆ ಇಂತಿಷ್ಟು ಎಂದು ಹಣವನ್ನು ಅಥವಾ ಸೈನಿಕ ಸಹಾಯ ವನ್ನು ಪಡೆದುಕೊಳ್ಳುತ್ತಿದ್ದರು. ವಿಜಯನಗರದ ಅವನತಿಯ ನಂತರ ಜರಿಮಲೆದುರ್ಗ, ಗುಡೇಕೋಟೆ, ಹರಪನಹಳ್ಳಿ, ಚಿತ್ರದುರ್ಗ ಪಾಳೆಯಗಾರರು ತಮ್ಮ ಸ್ವತಂತ್ರವನ್ನು ಘೋಷಿಸಿ ಕೊಂಡರು. ಹೈದರ್ ಮತ್ತು ಟಿಪ್ಪುಸುಲ್ತಾನರು ಸಹ ತಮ್ಮ ಸೈನ್ಯದಲ್ಲಿ ಬೇಡರನ್ನು ನೇಮಿಸಿಕೊಂಡಿದ್ದರು. ಕಪ್ಪಲದುರ್ಗದ ಉತ್ತರದ ಗುಡ್ಡಗಾಡಿನಲ್ಲಿ ಸಾಗುವಳಿಯಾದ ಅನೇಕ ಹೊಲಗಳಿವೆ. ಟಿಪ್ಪುಸುಲ್ತಾನನು ತನ್ನ ಆಳ್ವಿಕೆಯ ಕಾಲದಲ್ಲಿ ಬೇಡರನ್ನು ಈ ಹೊಲಗಳಲ್ಲಿ ನೆಲೆಗೊಳಿಸಿದ್ದ. ಅವರಿಗೆ ಹನ್ನೆರಡು ಪಗೊಡಾ ಸಂಬಳವನ್ನು ಕೊಡುತ್ತಿದ್ದ. ಬೇಕಾದಾಗ ಈ ಬೇಡರನ್ನು ತನ್ನ ಸೈನ್ಯದಲ್ಲಿ ಯುದ್ಧಕ್ಕಾಗಿ ಸೇರಿಸಿಕೊಳ್ಳುತ್ತಿದ್ದ. ಇವರು ಸುಸಜ್ಜಿತವಾದ ಫೌಜಿನಲ್ಲಿ ಸೇರುತ್ತಿದ್ದರು. ಇವರ ಸೈನ್ಯದ ಸಹಾಯದಿಂದಲೇ ಬೇಡ ಜಾತಿಯ ಪಾಳೆಯಗಾರ ರನ್ನು ಸೋಲಿಸುತ್ತಿದ್ದ ದಾಖಲೆಗಳಿವೆ. ಹೈದರ್ ಮತ್ತು ಟಿಪ್ಪು ಬಹಳ ಬುದ್ದಿವಂತಿಕೆಯಿಂದ ಬೇಡರನ್ನು ಬೇಡರ ವಿರುದ್ದವೇ ಎತ್ತಿಕಟ್ಟುತ್ತಿದ್ದರು!.

ವಾಲ್ಮೀಕಿ ನಾಯಕ ಸಮಾಜದ ಇತಿಹಾಸವನ್ನು ನಾನು ತುಂಬಾ ಶ್ರಮಪಟ್ಟು ಎಲ್ಲಾ ಪುಟಗಳನ್ನು ವಾಟ್ಸಪ್ ಗ್ರುಪ್ ಗೆ ತಮಗೆ ಕಳುಹಿಸಿದ್ದೇನೆ. ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಈ ಇತಿಹಾಸವನ್ನು ಪ್ರತಿಯೊಬ್ಬ ವಾಲ್ಮೀಕಿ ಸಮುದಾಯದ ಬಾಂಧವರು ಅರಿತು ಕೊಳ್ಳಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಓದಿದ್ದೇನೆ. ಇಷ್ಟರಲ್ಲಿಯೇ ಒಂದು ಪ್ರಬಂಧ ಮಂಡಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ವಾಲ್ಮೀಕಿ ಸಮುದಾಯದ ತಾವುಗಳು ನನಗೆ ಸಲಹೆಗಳನ್ನು ನೀಡಿ ನಿರ್ದೇಶನ ನೀಡಬೇಕೆಂದು ಪ್ರಾರ್ಥನೆ.

ಆದಿ ಕವಿ, ಮಹಾನ್ ಮಾನವತಾವಾದಿ, ಮಹಾನ್ ತಪಸ್ವಿಗಳು ಶ್ರೀಮಹರ್ಷಿ ವಾಲ್ಮೀಕಿಯವರ ಕುರಿತು ನಾನು ಒಂದು ಪ್ರಬಂಧ ಬರೆದು 2008 ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಗೆ ಕೊಟ್ಟಿದ್ದು ಅದು ಪ್ರಕಟಗೊಂಡಿದೆ. ತಮ್ಮ ಸಹಕಾರ ಹಾಗೂ ಪ್ರೋತ್ಸಾಹ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ.

(ಮದಕರಿನಾಯಕ ಯುವ ಪಡೆ
ಶ್ರೀ ಹರಿ ಪಾಳೇಗಾರ ಇವರ ಗೋಡೆಯಿಂದ ಸಂಗ್ರಹಿಸಲಾಗಿದೆ)

ವಂದನೆಗಳೊಂದಿಗೆ 💐🌺🙏🙏

ದೇವೇಂದ್ರಪ್ಪ ಎಂ ಪತ್ತಾರ ಎಐಟಿಯುಸಿ ಜಿಲ್ಲಾಧ್ಯಕ್ಷರು ಯಾದಗಿರಿ ಸಾ.ಸುರಪುರ

WhatsApp Group Join Now
Telegram Group Join Now

Related Posts