ಸ್ಥಳೀಯ

ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್

WhatsApp Group Join Now
Telegram Group Join Now

ಶ್ರೇಷ್ಠ ಅರ್ಥಶಾಸ್ತ್ರಜ್ಞರು,ಭಾರತ ದೇಶಕ್ಕೆ ಎರಡು ಬಾರಿ ಪ್ರಧಾನಮಂತ್ರಿಗಳಾಗಿ ಯಶಸ್ವೀ ಆಡಳಿತ ನಡೆಸಿದ ಧೀಮಂತ ನಾಯಕರು,ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಿದ, ಐಟಿ – ಬಿಟಿ ಕ್ರಾಂತಿಗೆ ನಾಂದಿ ಹಾಡಿ ವಿಶ್ವವೇ ಭಾರತದತ್ತ ತಿರುಗುವಂತೆ ಮಾಡಿದ, ಹಲವಾರು ಜನಪರ, ಜನಪ್ರಿಯ ಯೋಜನೆಗಳನ್ನು ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಡಾ.ಮನಮೋಹನ ಸಿಂಗ್ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ದೇಶ ಕಂಡ ಅಪರೂಪದ ಮುತ್ಸದ್ಧಿ ಡಾ.ಸಿಂಗ್ ಅವರು ನಮ್ಮ ದೇಶದ ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸುವಲ್ಲಿ ನೀಡಿದ ಕೊಡುಗೆ ಅನನ್ಯ.ಅವರ ಅಪ್ರತಿಮ ಬುದ್ಧಿವಂತಿಕೆಯ ರಾಜನೀತಿಜ್ಞ, ಅವರ ನಾಯಕತ್ವ ಮತ್ತು ದೂರದೃಷ್ಟಿ ಅಳಿಸಲಾಗದ ಹೆಜ್ಜೆಗುರುತುಗಳಾಗಿವೆ. ನರೇಗಾ, ಕಡ್ಡಾಯ ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯ್ದೆ, ಮೊದಲಾದ ಬದಲಾವಣೆಗಳ ಮೂಲಕ ಕೋಟ್ಯಾಂತರ ಜನರ ಜೀವನ ಸುಧಾರಿಸಿದ ಹಿರಿಮೆಗೆ ಪಾತ್ರವಾಗಿದ್ದಾರೆ. ಭಾರತದ ಆರ್ಥಿಕ ಪುನಶ್ಚೇತನಕ್ಕೆ ಅವರು ನೀಡಿದ ಕೊಡುಗೆ ಎಂದಿಗೂ ಅವಿಸ್ಮರಣೀಯ. ಕೇವಲ ಪ್ರಧಾನಿ ಮಂತ್ರಿ ಅಲ್ಲದೆ ದೇಶದ ಅತಿ ಮುಖ್ಯ ಸಂಸ್ಥೆಗಳ ಮುಖ್ಯಸ್ಥರಾಗಿ ಅತ್ಯುತ್ತಮ ಆಡಳಿತ ನೀಡಿದ್ದಾರೆ.

ಮನಮೋಹನ್ ಸಿಂಗ್ ರವರು ಬಸವಾದಿ ಶರಣರ ಆಶಯದಂತೆ” ಕಾಯಕವೇ ಕೈಲಾಸ” ತತ್ವದಲ್ಲಿ ನಂಬಿಕೆ ಇಟ್ಟು, ಅದರಂತೆ ನಡೆದವರು. ಅಂತೆಯೇ ಅವರ ಕಾರ್ಯಕಾಲದಲ್ಲಿ ಪಾರ್ಲಿಮೆಂಟ್ ಪ್ರಾಂಗಣದಲ್ಲಿ ಬಸವಣ್ಣನವರ ಫೋಟೋ ಇದ್ದ ೫ ರುಪಾಯಿ ನಾಣ್ಯ ಬಿಡುಗಡೆ ಮಾಡಿದ್ದು ಬಸವ ಅಭಿಮಾನಿಗಳು ಎಂದೆಂದಿಗೂ ಮರೆಯುವುದಿಲ್ಲ.

ಹಾಗೆಯೇ ಬಡವರಿಗೆ ಕನಿಷ್ಠ ೧೦೦ ದಿವಸದ ನರೇಗಾ ಕೆಲಸ ಗ್ಯಾರಂಟಿ ಕೊಟ್ಟು ಬಡವರ ಜೀವನಶೈಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ.
ಆರ್ಥಿಕವಾಗಿ ಸ್ವಾವಲಂಬನೆ ಮಾಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಇನ್ನು ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿ ಗ್ರಾಮಾಭಿವೃದ್ಧಿ ಮಾಡುವಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದಾರೆ. ಹಸಿವು ಮುಕ್ತ ರಾಷ್ಟ್ರ ಮಾಡಲು ಫುಡ್ ಗ್ಯಾರಂಟಿ ಯೋಜನೆ ನೀಡಿದ್ದಾರೆ. ಬಡವರ ಶಿಕ್ಷಣ ವೃದ್ಧಿಗೊಳಿಸಲು ರೈಟ್ ಫರ್ ಎಜುಕೇಷನ್ ಯೋಜನೆ ತಂದು ಬಡವರ ಕಣ್ಣಿರ ಹನಿ ಒರೆಸುವ ಕೆಲಸ ಮಾಡಿದ್ದಾರೆ. ಇನ್ನು ಸರಕಾರದ ಎಲ್ಲಾ ಕಾರ್ಯಗಳು ಜನರಿಗೆ ಗೊತ್ತಾಗಬೇಕು ಎನ್ನುವ ದೃಷ್ಟಿಯಿಂದ
ರೈಟ್ ಫರ್ ಇನ್ಫರ್ಮೇಷನ್ ಕಾಯ್ದೆ ತಂದಿದ್ದಾರೆ. ದೇಶದ ಯುವಕರಿಗೆ ಉದ್ಯೋಗಾವಕಾಶ ಒದಗಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದರು. ಎಪ್ ಡಿ ಐ ಮುಖಾಂತರ ವಿದೇಶದವರಿಗೆ ನಮ್ಮ ದೇಶದಲ್ಲಿ ಹಣ ಹೂಡಲು ಕಾನೂನು ಮಾಡಿದ್ದರು. ಇದರಿಂದ ದೇಶದ ಆರ್ಥಿಕತೆ ಸದೃಢವಾಗಲು ಸಹಕಾರಿಯಾಗಿತ್ತು. ಹೀಗಾಗಿಯೇ ಜಗತ್ತಿನಲ್ಲಿ ಭಾರತ ದೇಶ ಬಲಿಷ್ಠ ಆರ್ಥಿಕವಾಗಿ ಸದೃಢವಾಗಲು ಕಾರಣವಾಯಿತು ಎನ್ನಬಹುದು.

ಇವುಗಳಲ್ಲದೆ
ಮನಮೋಹನ್ ಸಿಂಗ್ ಅವರು ಆರ್ಥಿಕ ಸಚಿವರಾಗಿ ದೇಶದ ಆರ್ಥಿಕತೆ ಚೇತರಿಕೆಗೆ ನೀಡಿದರು. 2007-08 ರಲಿ ವಿಶ್ವ ಆರ್ಥಿಕ ಹಿಂಜರಿಕೆ ಉಂಟಾಗಿದ್ದಾಗ ಅಮೆರಿಕಾ ರಾಷ್ಟ್ರಪತಿ ಕೂಡ ಮನಮೋಹನಸಿಂಗ ಅವರ ಸಲಹೆ – ಮಾರ್ಗದರ್ಶನ ಕೇಳಿದ್ದರು. ಅದರಂತೆ ಅವರು ಅಮೆರಿಕ ದೇಶಕ್ಕೆ ಮಾರ್ಗದರ್ಶನ ನೀಡಿ ಆರ್ಥಿಕ ಹಿಂಜರಿಕೆಯಿಂದ ಹೊರಬರಲು ಸಹಾಯ ಮಾಡಿದ್ದರು. ದೇಶದ ಬಹುಸಂಖ್ಯೆಯಲ್ಲಿ ಇದ್ದ ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿಗತಿ ಸಂಕಷ್ಟದಲ್ಲಿ ಇದಾಗ, ಅವರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಹಲವು ಮಹತ್ವಪೂರ್ಣ ಯೋಜನೆಗಳು ಜಾರಿಗೆ ತಂದರು.
ಇಡೀ ಜಗತ್ತು ಆರ್ಥಿಕ ತೊಂದರೆಯಲ್ಲಿ ಇದ್ದಾಗ ಭಾರತ ದೇಶದ ಆರ್ಥಿಕ ಪ್ರಗತಿಯಲ್ಲಿ ಜಿಡಿಪಿ ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಂಡಿರುವುದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಮನಮೋಹನ್ ಸಿಂಗ್ ರವರ ಹಿನ್ನೆಲೆಯಲ್ಲಿ: ಮನಮೋಹನ್ ಸಿಂಗ ರವರು ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗಳ ಮಗನಾಗಿ ೧೯೩೨ ರ ಸೆಪ್ಟೆಂಬರ್ ೨೬ ರಂದು ಜನಿಸಿದರು.ಅವರು ಚಿಕ್ಕವರಿದ್ದಾಗಲೇ ಅವರ ತಾಯಿ ನಿಧನರಾದರು. ತರುವಾಯ
ಅವರ ತಂದೆಯ ಅಜ್ಜಿ ಹತ್ತಿರವೇ ಸಿಂಗ್ ಬೆಳೆದು ದೊಡ್ಡವರಾದರು. ಹೋಶಿಯಾರ್ಪುರದಲ್ಲಿ ಅರ್ಥಶಾಸ್ತ್ ವಿಷಯದಲ್ಲಿ ಅಧ್ಯಯನ ಮಾಡಿದ ಇವರು ೧೯೫೨ ರಲ್ಲಿ ಪದವಿ ಹಾಗೂ ೧೯೫೪ ಸ್ನಾತಕೋತ್ತರ ಪದವಿಗಳನ್ನು ಪಡೆದರು. ಅವರ ಶೈಕ್ಷಣಿಕ ವೃತ್ತಿಜೀವನದುದ್ದಕ್ಕೂ ಪ್ರಥಮ ಸ್ಥಾನದಲ್ಲಿಯೇ ತೇರ್ಗಡೆ ಹೊಂದಿರುತ್ತಾರೆ. ಮತ್ತೆ ಅದೇ ರೀತಿ ಅವರು ೧೯೫೭ ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಟ್ರೈಪೋಸ್ ಸಹ ಪೂರ್ಣಗೊಳಿಸಿ ಸೇಂಟ್ ಜಾನ್ಸ್ ಕಾಲೇಜಿನ ಸದಸ್ಯರಾಗಿ ಸೇವೆ ಸಲ್ಲಿಸಿದರು. ತದನಂತರ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಅವರು ತಮ್ಮ ಡಿಫಿಲ್‌ಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿ ಕೆಲಸ ಮಾಡಿರುತ್ತಾರೆ.
ಮುಂದೆ ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕರಾಗಿಯೂ ಹಾಗೂ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ನಂತರ ಅವರು ೧೯೬೬ ರಿಂದ ೧೯೬೯ ರವರೆಗೆ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಓನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಗಾಗಿ ಕೆಲಸ ಮಾಡಿದರು. ಅನಂತರ ಇವರ ಪ್ರತಿಭೆಯನ್ನು ಗುರುತಿಸಿ ಲಲಿತ್ ನಾರಾಯಣ್ ಮಿಶ್ರಾ ಎಂಬುವವರು ಇವರನ್ನು ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿ ನೇಮಿಸಿದರು. ಇದಾದನಂತರ

೧೯೭೨ ರಲ್ಲಿ ಸಿಂಗ್ ಅವರನ್ನು ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿಯೂ ಮತ್ತು ೧೯೭೬ ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. ೧೯೮೦-೧೯೮೨ ರಲ್ಲಿ ಅವರು ಯೋಜನಾ ಆಯೋಗದಲ್ಲಿ ಕೆಲಸ ನಿರ್ವಹಣೆ ಮಾಡಿದರು. ಮತ್ತೆ ೧೯೮೨ ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ಕೆಲಸ ಮಾಡಿದರು. ನಂತರ ೧೯೮೫ ರಿಂದ ೧೯೮೭ ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮತ್ತೆ ೧೯೮೭ ರಿಂದ ನವೆಂಬರ್ ೧೯೯೦ ರವರೆಗೆ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್‌ನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೯೦ ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದರು ಮತ್ತು ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರರಾಗಿ ಕೆಲಸ ನಿರ್ವಹಣೆ ಮಾಡಿದರು. ಮಾರ್ಚ್ ೧೯೯೧ ರಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೦೪ ರಿಂದ ೨೦೧೪ ವರೆಗೆ ದೇಶದ ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ಹಿರಿಮೆ ಸಾಕ್ಷಿಯಾಗಿದ್ದಾರೆ.

ಮನಮೋಹನ್ ಸಿಂಗ್ ಅವರ ಜೀವನದಲ್ಲಿ ಜರುಗಿದ ಪ್ರಮುಖ ಘಟನೆಗಳು:

ಅರ್ಥಶಾಸ್ತ್ರದಲ್ಲಿ ಬಿ.ಎ. (ಆನರ್ಸ್) ೧೯೫೨;
ಅರ್ಥಶಾಸ್ತ್ರದಲ್ಲಿ ಎಂ.ಎ(ಪ್ರಥಮ ದರ್ಜೆ), ೧೯೫೪ ಪಂಜಾಬ್ ವಿಶ್ವವಿದ್ಯಾಲಯ.
ಅರ್ಥಶಾಸ್ತ್ರದಲ್ಲಿ ಗೌರವ ಪದವಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ – ಸೇಂಟ್ ಜಾನ್ಸ್ ಕಾಲೇಜು (೧೯೫೭)
ಹಿರಿಯ ಉಪನ್ಯಾಸಕ, ಅರ್ಥಶಾಸ್ತ್ರ (೧೯೫೭-೧೯೫೯)
ರೀಡರ್ (೧೯೫೯ – ೧೯೬೩)
ಪ್ರೊಫೆಸರ್ (೧೯೬೩-೧೯೬೫)
ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಟ್ರೇಡ್ (೧೯೬೯ – ೧೯೭೧)
ಅರ್ಥಶಾಸ್ತ್ರದಲ್ಲಿ ಡಿ.ಫಿಲ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ – ನಫೀಲ್ಡ್ ಕಾಲೇಜ್ (೧೯೬೨)
ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯ
ಗೌರವ ಪ್ರಾಧ್ಯಾಪಕ (೧೯೬೬)
ಚೀಫ್, ಫೈನಾನ್ಸಿಂಗ್ ಫಾರ್ ಟ್ರೇಡ್ ವಿಭಾಗ, ಯುಎನ್ಸಿಟಿಎಡಿ, ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್, ನ್ಯೂಯಾರ್ಕ್
೧೯೬೬: ಆರ್ಥಿಕ ವ್ಯವಹಾರಗಳ ಅಧಿಕಾರಿ ೧೯೬೬
ಆರ್ಥಿಕ ಸಲಹೆಗಾರ, ವಿದೇಶಿ ವ್ಯಾಪಾರ ಸಚಿವಾಲಯ, ಭಾರತ (೧೯೭೧ – ೧೯೭೨)
ಮುಖ್ಯ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯ, ಭಾರತ (೧೯೭೨ – ೧೯೭೬)
ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ (೧೯೭೬)
ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ (೧೯೭೬-೧೯೮೦)
ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ (೧೯೭೬-೧೯೮೦)
ಆಡಳಿತ ಮಂಡಳಿ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಮನಿಲಾ
ಕಾರ್ಯದರ್ಶಿ, ಹಣಕಾಸು ಸಚಿವಾಲಯ (ಆರ್ಥಿಕ ವ್ಯವಹಾರಗಳ ಇಲಾಖೆ), ಭಾರತ ಸರ್ಕಾರ (೧೯೭೭ – ೧೯೮೦)
ಗವರ್ನರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (೧೯೮೨-೧೯೮೫)
ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ (೧೯೮೫-೧೯೮೭)
ಪ್ರಧಾನ ಕಾರ್ಯದರ್ಶಿ, ದಕ್ಷಿಣ ಆಯೋಗ, ಜಿನೀವಾ (೧೯೮೭-೧೯೯೦)
ಆರ್ಥಿಕ ವ್ಯವಹಾರಗಳ ಬಗ್ಗೆ ಭಾರತದ ಪ್ರಧಾನ ಮಂತ್ರಿಯ ಸಲಹೆಗಾರ (೧೯೯೦-೧೯೯೧)
ಅಧ್ಯಕ್ಷರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (೧೫ ಮಾರ್ಚ್ ೧೯೯೧ – ೨೦ ಜೂನ್ ೧೯೯೧)
ಭಾರತದ ಹಣಕಾಸು ಸಚಿವರು (೨೧ ಜೂನ್ ೧೯೯೧ – ೧೫ ಮೇ ೧೯೯೬)
ರಾಜ್ಯಸಭೆಯ ಸಂಸತ್ ಸದಸ್ಯ (೧ ಅಕ್ಟೋಬರ್ ೧೯೯೧ – ೧೪ ಜೂನ್ ೨೦೧೯)
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ (ಭಾರತ) (೧೯೯೮-೨೦೦೪)
ಭಾರತದ ಪ್ರಧಾನ ಮಂತ್ರಿ (೨೨ ಮೇ ೨೦೦೪ – ೨೬ ಮೇ ೨೦೧೪)
ರಾಜ್ಯಸಭೆಯ ಸಂಸತ್ ಸದಸ್ಯ (೧೯ ಆಗಸ್ಟ್ ೨೦೧೯ – ೩ ಏಪ್ರಿಲ್ ೨೦೨೪)

 

ಗೌರವ ನುಡಿ ನಮನ: ಅಪರೂಪದ ರಾಜಕಾರಣಿ ಶ್ರೀ ಮನಮೋಹನ್ ಸಿಂಗ್ ರವರು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಾಗು ಸೂಕ್ಷ್ಮ ಆರ್ಥಿಕತಜ್ಞ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿ ಭಾರತದ ಹಲವಾರು ಅತ್ಯೋನ್ನತ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುವ ಮುಖಾಂತರ ಭಾರತ ದೇಶಕ್ಕೆ ಅರ್ಥ ಶಾಸ್ತ್ರದ ಜಾಗೃತಿ ಮೂಡಿಸಿರುವ ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ.
2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದು.ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ಯವರ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿ ಎಂಬ ಕೀರ್ತಿಗೆ ಭಾಜನರು. ಅತ್ಯುತ್ತಮ ಆಡಳಿತ ನೀಡಿದ ರಾಜಕಾರಣಿ, ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮತ್ತು ನರೇಗಾ ಮತ್ತು ಶಿಕ್ಷಣ ಹಕ್ಕು ಕಾಯ್ದೆಯಂತಹ ಪರಿವರ್ತನಾ ನೀತಿಗಳ ಪ್ರಾರಂಭಿಸಿದ ಹೆಗ್ಗಳಿಕೆಗೆ ಇವರದು.
ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸದಾ ಅಜರಾಮರ. ಅವರು ಮಾಡಿದ ಆರ್ಥಿಕ ಸಾಧನೆಗಳನ್ನು ಇತಿಹಾಸ ಸದಾ ನೆನಪಿಡುತ್ತದೆ.
ಸಮಗ್ರತೆ ಮತ್ತು ಬುದ್ಧಿವಂತಿಕೆಯ ಶಾಂತ ಸ್ವಭಾವದ ನಾಯಕರಾಗಿ ಅವರು ಸಲ್ಲಿಸಿರುವ ಕೊಡುಗೆ ಅನನ್ಯವಾದದ್ದು. ಅವರ ಜನಪರ ಮತ್ತು ಸಮಾಜಮುಖಿ ಕೆಲಸಗಳು ನಮಗೆ ಎಂದಿಗೂ ದಾರಿದೀಪ.
ಇಂತಹ ನಾಯಕ ಇಂದು ನಮ್ಮಿಂದ ಅಗಲಿದ್ದು ನಮ್ಮ ದೇಶಕ್ಕೆ ತುಂಬಲಾಗದ ನಷ್ಟ.
ಸೃಷ್ಟಿಕರ್ತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

******
– ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು,ಬೀದರ ಜಿಲ್ಲೆ.

WhatsApp Group Join Now
Telegram Group Join Now

Related Posts