ಭಾರತವು ಅನೇಕ ಜಾತಿ ಮತ ಧರ್ಮಗಳಿರುವ ದೇಶ. ಲೆಖ್ಖವಿಲ್ಲದಷ್ಟು ಜಾತಿಗಳು. ತಮಾಷೆ ಎಂದರೆ ಇವರು ಒಗ್ಗೂಡುವುದು ಸಾಮಾಜಿಕ ಕಾರ್ಯಗಳಿಗೋ, ಸಮಾಜದ ಮೌಲ್ಯಗಳನ್ನು ಕಾಪಾಡಲು ಅಲ್ಲ. ಇವರು ಒಂದೇ ವಿಷಯದಲ್ಲಿ ತಮ್ಮೊಳಗಿನ ತಾರತಮ್ಯಗಳನ್ನು ತೊರೆದು ಒಂದಾಗುತ್ತಾರೆ, ದೇವರ ವಿಷಯಕ್ಕೆ! ಈ ದೇವರುಗಳೂ ಕಡಿಮೆ ಸಂಖ್ಯೆಯಲ್ಲಿ ಇಲ್ಲ. ಒಂದೊಂದು ಜಾತಿಗೆ ಒಂದೊಂದು ದೇವರು, ಒಬ್ಬ ಕುಲಗುರು,ಒಂದು ಮಠ. ಜನ ದೈವಶ್ರದ್ಧೆಯನ್ನು ಹೊಂದಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ ದೇವರ ಒಂದು ಕೋಣೆಯನ್ನು ಕಡ್ಡಾಯವಾಗಿ ನಿರ್ಮಿಸಿಕೊಂಡಿದ್ದಾರೆ. ಪ್ರತಿದಿನವೂ ಪರಿಶುಭ್ರರಾಗಿ ಪೂಜೆ ಮಾಡುತ್ತಾರೆ. ದೀಪ ಹಚ್ಚುತ್ತಾರೆ. ಗಂಧದ ಕಡ್ಡಿ ಹಚ್ಚುತ್ತಾರೆ. ವಾರಕ್ಕೊಂದು ಸಲ ಎಣ್ಣಿ ಚಿಟ್ಟಿ ಹಿಡಿದು ಸಾರ್ವಜನಿಕ ದೇವಸ್ಥಾನ ಎನ್ನುವುದಕ್ಕೆ ಹೋಗುತ್ತಾರೆ. ಪ್ರತಿ ಊರುಗಳಲ್ಲಿ ಹಣಮಪ್ಪನ ಗುಡಿ, ಮಲ್ಲಯ್ಯನ ಗುಡಿ, ದ್ಯಾವಮ್ಮನ ಗುಡಿ, ದುರುಗಮ್ಮ, ಮರುಗಮ್ಮ, ಯಲ್ಲಮ್ಮ ಪಾಲಕಮ್ಮ ಎನ್ನುವಂತಹ ದೇವಸ್ಥಾನಗಳಿರುತ್ತವೆ. ಸೋಮುವಾರ ಒಂದು ದೇವರ ವಾರವಾದರೆ ಪ್ರತಿ ವಾರಗಳು ಒಂದೊಂದು ದೇವರಿಗೆ ಮೀಸಲಿವೆ. ಭಾರತದ ಒಬ್ಬ ವ್ಯಕ್ತಿ ಪ್ರತಿದಿನವೂ ಒಂದು ದೇವಸ್ಥಾನ ಅಥವಾ ದೇವರಿಗೆ ಹೋಗುತ್ತಾನೆ. ಆತ ರೂಢಿಗತವಾಗಿ ಹಾಗೆ ಮಾಡುತ್ತಾನೆ. ಇದು ಪಾರಂಪರಿಕ. ಹಾಗೆ ಗುಡಿ ಗುಂಡಾರಗಳಿಗೆ ಹೋಗುವಾಗ ಶ್ರದ್ಧೆಯನ್ನು ಪ್ರದರ್ಶಿಸುತ್ತಾನೆ. ಹಣೆಗೆ ವಿಭೂತಿ ಹಚ್ಚಿಕೊಳ್ಳುತ್ತಾನೆ. ಕುಂಕುಮ ಹಚ್ಚಿಕೊಳ್ಳುತ್ತಾನೆ. ದೇವರೇ ತಾನು ಎನ್ನುವಂತೆ ಕಾಣಿಸಿಕೊಳ್ಳುತ್ತಾನೆ. ದೈವ ಸ್ಮರಣೆ ಇಲ್ಲದೆ ಆತ ದಿನವನ್ನು ಆರಂಭಿಸುವುದಿಲ್ಲ. ಇದು ಕೇವಲ ಹಿಂದೂಗಳಿಗೆ ಸಂಬಂಧಿಸಿದ ವಿಷಯವಲ್ಲ. ಮುಸ್ಲಿಮರು, ಕ್ರೈಸ್ತರ ಬದುಕು ಮತ್ತು ಜೀವನಶೈಲಿಯೂ ಇದೇ ರೀತಿ ಇದೆ. ಇವೆಲ್ಲವೂ ಪಾರಂಪರಿಕವಾಗಿ ರೂಢಿಸಿಕೊಂಡು ಬಂದಿರುವ ಪದ್ಧತಿಗಳು. ಇವುಗಳನ್ನು ಸಂಸ್ಕೃತಿ ಎನ್ನೋಣ, ಸಂಪ್ರದಾಯ ಎನ್ನೋಣ. ಇವು ಉತ್ತಮ ಬದುಕಿನ ಧ್ಯೋತಕಗಳು ಎನ್ನೋಣ. ಧಾರ್ಮಿಕ ವ್ಯಕ್ತಿಯೇ ಉತ್ತಮನು, ಧಾರ್ಮಿಕ ಜೀವನ ಪದ್ಧತಿ ಉತ್ತಮ ಸಮಾಜಕ್ಕೆ ಅವಶ್ಯ ಎನ್ನುವುದಾದರೆ ನಿಜಕ್ಕೂ ಅದೊಂದು ಅದ್ಬುತ ಚಿಂತನೆ. ಇರಬೇಕು. ಈ ಪರಂಪರೆ ಇನ್ನೂ ಸಾವಿರಾರು ವರ್ಷಗಳ ಕಾಲ ಮುಂದುವರೆಯುತ್ತಾ ಸಾಗಬೇಕು.
ಈಗ ಕೆಲವು ಪ್ರಶ್ನೆಗಳನ್ನು ನಮಗೆ ನಾವೇ ಸ್ವಗತ ಎನ್ನುವಂತೆ ಹಾಕಿಕೊಳ್ಳೋಣ. ದೇವರನ್ನು ನಾವೇಕೆ ಪೂಜಿಸುತ್ತೇವೆ? 1) ಬದುಕು ನೆಮ್ಮದಿಯಿಂದ ಇರಲಿ, 2) ಕಷ್ಟನಷ್ಟಗಳು ಬಾರದಿರಲಿ, 3) ಸಂಪತ್ತು ವೃದ್ಧಿಯಾಗಲಿ ವ್ಯಾಪಾರ ವಹಿವಾಟುಗಳು ಲಾಭದಿಂದ ನಡೆಯಲಿ, 4) ಆರೋಗ್ಯದಿಂದ ಇರಲು. ಪ್ರಮುಖವಾಗಿ ಈ ಕೆಲವು ಅಂಶಗಳು ಜನರನ್ನು ದೇವರ ಕಡೆ ಮುಖಮಾಡಿಸಿವೆ. ಮನುಷ್ಯನು ಅಭದ್ರತಾ ಭಾವದಿಂದ ಸದಾ ನರಳುತ್ತಾನೆ. ಅಂತರ್ಗತವಾಗಿ ಆ ಅನೇಕ ಭಯಗಳನ್ನು ಹೊಂದಿದ್ದಾನೆ. ದೇವರು ತನ್ನನ್ನು ಕಾಪಾಡುತ್ತಾನೆ ಎನ್ನುವ ಆತನ ನಂಬಿಕೆ ಆತನಲ್ಲಿ ಧೈರ್ಯವನ್ನು ನೀಡುತ್ತದೆ. ಈ ಧೈರ್ಯದ ಅಗತ್ಯ ಪ್ರತಿಯೊಬ್ಬರಿಗೂ ಬೇಕು.
ದೇವರನ್ನು ಸೃಷ್ಟಿಸುವ ಮೊದಲು ಮನುಷ್ಯ ನಿಸರ್ಗವನ್ನು ಪೂಜಿಸುತ್ತಿದ್ದನಂತೆ. ಅವತ್ತಿನ ಆತನ ಭಯಕ್ಕೆ ಕಾರಣವಾದ ಸಂಗತಿಗಳು ನಿಸರ್ಗದ ಏರುಪಾರುಗಳು. ಅಂದರೆ ಗಾಳಿ, ಮಳೆ, ಬೆಂಕಿ ಅವತ್ತಿನ ಆದಿವಾಸಿ ಮನುಷ್ಯನ ಭಯಗಳಾಗಿದ್ದವು ಎನ್ನಲಾಗುತ್ತಿದೆ. ಮನೆಯ ಕಲ್ಪನೆ ಇರದಿದ್ದ ಆ ದಿನಗಳಲ್ಲಿ ಮನುಷ್ಯ ಗುಡ್ಡ ಗವಿಗಳ ಆಶ್ರಯನಾಗಿದ್ದ. ಆತನಿಗೆ ಆಪತ್ತು ತರುವ ಸಂಗತಿಗಳ ಕುರಿತು ರಕ್ಷಣೆಗಾಗಿ ಆತ ನಿಸರ್ಗದ ಮೊರೆ ಹೋಗುತ್ತಿದ್ದ. ಸೂರ್ಯನನ್ನು ದೇವರೆಂದು ಪೂಜಿಸಲಾಗುತ್ತಿತ್ತಂತೆ. ನಂತರ ಮನುಷ್ಯನ ಬುದ್ದಿ ವಿಕಾಸ ಹೊಂದುತ್ತಿರುವಂತೆ ಆತನು ಉತ್ತಮ ಬದುಕಿನ ಮಾರ್ಗಗಳನ್ನು ಹುಡುಕ ತೊಡಗಿದ. ಬುದ್ದಿವಂತನೊಬ್ಬ ಮನುಷ್ಯನಲ್ಲಿ ಭಯಗಳನ್ನು ಸೃಷ್ಟಿಸತೊಡಗಿದ. ಮನುಷ್ಯ ಭಯ ಮಾತ್ರದಿಂದ ನಿಯಂತ್ರಿಸಲ್ಪಡಬಲ್ಲ ಎಂದು ಅರಿತ ವ್ಯಕ್ತಿಯೊಬ್ಬ ದೆವ್ವವನ್ನು ಸೃಷ್ಟಿಸಿದ. ದೆವ್ವದಿಂದ ರಕ್ಷಣೆ ಹೊಂದಲು ದೇವರನ್ನು ಸೃಷ್ಟಿಸಿದ. ಇವತ್ತಿಗೂ ದೇವರು ಸೈತಾನನ ವಿರುದ್ಧ ಹೋರಾಡುತ್ತಲೇ ಇದ್ದಾನೆ. ಸೈತಾನನಿಲ್ಲದಿದ್ದರೆ ದೇವರ ಅಸ್ತಿತ್ವ ಇಲ್ಲ. ಅದಿರಲಿ, ದೇವರಿಂದ ಮನುಷ್ಯರಿಗೆ ಆಗುತ್ತಿರುವ ಪ್ರಯೋಜನೆಗಳು ಏನು?
ಭಾರತದಲ್ಲಿ ಆಸ್ತಿಕತೆ ತಾರಕಕ್ಕೇರಿದೆ. ಅದರ ಕಾರಣ ಇಲ್ಲಿರುವ ಮನುಷ್ಯನಲ್ಲಿ ಪಾಪ ಭೀತಿ ಹೆಚ್ಚಾಗಿದೆ. ಪಾಪ ಭೀತಿ ಹೆಚ್ಚಾದಷ್ಟು ಅದರ ಪರಿಹಾರಕ್ಕಾಗಿ ವ್ಯಕ್ತಿ ಹಾತೊರೆಯುತ್ತಾನೆ. ಆತ ನರಕವನ್ನು ನಂಬುತ್ತಾನೆ. ಜನ್ಮ ಪುನರ್ಜನ್ಮಗಳನ್ನು ನಂಬುತ್ತಾನೆ. ನಂಬುವಂತೆ ಜಗತ್ತನ್ನು ನಿಯಂತ್ರಿಸುವ ಶಕ್ತಿಗಳು ಮಾಡಿವೆ. ಇಲ್ಲಿ ನೈತಿಕ ಬದುಕಿನ ಮೌಲ್ಯಗಳನ್ನು ಇಟ್ಟುಕೊಂಡು ಸ್ಮಶಾನ ಕಾಯುವಂತಹ ಕೆಲಸ ಮಾಡಬಹುದೇ ಹೊರತು ಸುಖ ಸುಪ್ಪತ್ತಿಗೆಗಳನ್ನು ಅನುಭವಿಸಲಾರೇವು. ಹಣ ಇನ್ನೊಬ್ಬರನ್ನು ವಂಚಿಸದೆ ಕ್ರೋಢೀಕರಣವಾಗದು. ಶ್ರಮಕ್ಕೆ ಲಕ್ಷ್ಮೀ ಎನ್ನುವಾಕೆ ಒಲಿಯುತ್ತಾಳೆ ಎನ್ನುವುದು ಪರಮ ಸುಳ್ಳು. ಮಿತಿಮೀರಿದ ಹಣ ಮಾಡಲು ಅಕ್ರಮವಾದ ಮಾರ್ಗವನ್ನು ಹಿಡಿಯಲೇಬೇಕಾಗಿದೆ. ಬುದ್ದಿವಂತನೊಬ್ಬ ದಡ್ಡರ ಹತ್ತಿರ ಸಂಗ್ರಹವಾಗಿರುವ ಹಣವನ್ನು ಉಪಾಯಗಳಿಂದ ಕಿತ್ತುಕೊಳ್ಳುತ್ತಾನೆ. ಅದಕ್ಕೆ ನಾನಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾನೆ. ಹಣದಾಹ ಭಯಂಕರವಾದದ್ದು. ಕೊಲೆ ಸುಲಿಗೆಗಳಿಗೂ ಅದು ಕೈ ಹಚ್ಚುತ್ತದೆ. ಆಯ್ತಲ್ಲ? ಹಣ ಸಂಪಾದಿಸಿದೇವು, ಅವರಿವರನ್ನು ಏಮಾರಿಸಿ. ಒಂದಿಷ್ಟು ಪಾಪ ಸುತ್ತಿಕೊಂಡಿರಬಹುದು, ದೇವರೇಕಿದ್ದಾನೆ? ನಮ್ಮ ಕುಲಗುರುವೇಕಿದ್ದಾನೆ? ಒಂದಿಷ್ಟು ಹಣವನ್ನು ಅವರಿಗೆ ಖರ್ಚು ಮಾಡಿದರೆ ಪ್ರಾಯಶ್ಚಿತ್ತದ ಮಾರ್ಗ ಹುಡುಕುತ್ತಾರೆ ಎನ್ನುವಂತೆ ಯೋಚಿಸಲಾಗುತ್ತಿದೆ. ಈ ಕಾರಣಕ್ಕೆ ಆತ ದೇವಸ್ಥಾನಗಳಿಗೆ ಅಲೆಯತೊಡಗುತ್ತಾನೆ. ಆಗ ಆತನಿಗೆ ಶಾಂತಿ ಮತ್ತು ನೆಮ್ಮದಿಗಳು ಲಭ್ಯವಾಗುತ್ತವಂತೆ! ನೀವು ಭಾರತದಲ್ಲಿ ಖ್ಯಾತವಾಗಿರುವ ದೇವಸ್ಥಾನಗಳ ದೈನಂದಿನ ಆದಾಯವನ್ನು ಅಲ್ಲಿನ ಜನ ನಿಭಿಡತೆಯನ್ನು ಗಮನಿಸಿರಿ. ಈಗ ದೇವರ ಭಕ್ತಿಗೆ ಫೀಸ್‍ನ್ನು ನಿಗದಿಪಡಿಸಲಾಗಿದೆ. ಇಂತಹ ಪೂಜೆ ಮಾಡಿದರೆ ಇಷ್ಟು ದರ.
ಈ ಹಿಂದೆ ಥಗ್ಗರು ಎನ್ನುವ ಒಂದು ತಂಡವಿತ್ತು. ಅದು ದೇವರ ಅನುಮತಿ ಪಡೆದು ಕೊಲೆ ಕಳ್ಳತನ ಮಾಡುತ್ತಿತ್ತು. ಭಾರತದಲ್ಲಿ ಇಂತಹವುಗಳೆಲ್ಲಾ ಸಾಧ್ಯ. ಕೊಲೆಯಾಗುವವನಿಗೂ ದೇವರಿದ್ದಾನೆ, ಕೊಲೆ ಮಾಡುವವನಿಗೂ ದೇವರಿದ್ದಾನೆ. ಕೊಲೆಯಾಗುವವನು ‘ದೇವರೇ ಇವತ್ತು ತಣ್ಣಗೆ ಬದುಕಿಸು’ ಎಂದು ಬೇಡಿಕೊಂಡು ಮನೆಯಿಂದ ಹೊರ ಬಂದರೆ ಕೊಲೆ ಮಾಡುವವನು ‘ಇವತ್ತಿನ ಈ ಕೊಲೆ ಸುಸೂತ್ರವಾಗಿ ನೆರವೇರಿಸು ದೇವರೆ’ ಎಂದು ಬೇಡಿಕೊಂಡು ಹೊರಬರುತ್ತಾನೆ. ದೇವರು ಯಾರ ಬೇಡಿಕೆಯನ್ನು ಈಡೇರಿಸಬೇಕು?
ಲಂಚ ತೆಗೆದುಕೊಳ್ಳುವವನಿಗೆ ಅದು ಪಾಪ ಮತ್ತು ದೇವರು ಮೆಚ್ಚದ ಕೆಲಸ ಎಂದು ಗೊತ್ತಿದೆ. ಆತ ಲಂಚವನ್ನು ಬಿಡಲಾರ. ಮನೆಯಿಂದ ಕರ್ತವ್ಯಕ್ಕೆ ಕಚೇರಿಗೆ ಹೋಗುವಾಗ ಲಕ್ಷ್ಮೀಯ ಭಾವಚಿತ್ರಕ್ಕೆ ಭಕ್ತಿಯಿಂದ ಕೈಮುಗಿದು ‘ತಾಯಿ, ಇವತ್ತು ಒಳ್ಳೆಯ ಆದಾಯವಾಗುವಂತೆ ಮಾಡು’ ಎಂದು ಬೇಡಿಕೊಂಡು ಬಂದಿರುತ್ತಾನೆ. ತಮಾಷೆ ಎಂದರೆ ಭಾರತದ ಸರ್ಕಾರಿ ಕಚೇರಿಗಳಲ್ಲಿ ಲಕ್ಷ್ಮೀಯ ಭಾವಚಿತ್ರಗಳಿವೆ. ಮತ್ತು ಅವುಗಳಿಗೆ ಪ್ರತಿನಿತ್ಯ ಶ್ರದ್ಧೆಯಿಂದ ಪೂಜೆ ಮಾಡಲಾಗುತ್ತದೆ. ರಾಜಕಾರಣಿಗೆ ತಾನು ಜನರನ್ನು ವಂಚಿಸುತ್ತಿದ್ದೇನೆ ಎನ್ನುವ ಸಂಗತಿ ಗೊತ್ತಿದೆ. ಸಂವಿಧಾನದ ಅಡಿಯಲ್ಲಿ ರಚಿತವಾಗಿರುವ ಅನೇಕ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದೇನೆ. ಅಗೌರವಿಸುತ್ತಿದ್ದೇನೆ ಎನ್ನುವುದು ಗೊತ್ತಿದೆ. ಜನರ ತೆರಿಗೆಯನ್ನು ಸಾರಾಸಗಟಾಗಿ ತಾವು ತಿನ್ನುತ್ತಿದ್ದೇವೆ ಎನ್ನುವುದು ಗೊತ್ತಿದೆ. ಅದು ಪಾಪ ಎನ್ನುವ ಸಂಗತಿಯೂ ಈ ಬುದ್ದಿವಂತನಿಗೆ ಗೊತ್ತಿದೆ. ಅದು ದೇವರು ಮೆಚ್ಚುವ ಕೆಲಸವಲ್ಲ ಎನ್ನುವುದೂ ಗೊತ್ತಿದೆ. ಆದರೂ ಆತ ಪಾಪ ಮಾಡುತ್ತಾನೆ. ರಕ್ಷಿಸಲು ದೇವರಿದ್ದಾನೆ, ದೇವರಿಗೆ ಸಂತೃಪ್ತಿ ಪಡಿಸಲು ಹೇಗೂ ಪಾಪದ ಹಣವಿದೆಯಲ್ಲ? ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ತಾಖತ್ತಿನ ಅನುಸಾರ ಇನ್ನೊಬ್ಬರನ್ನು ಏಮಾರಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ದೇವರಿದ್ದಾನೆ ಎನ್ನುವ ಧೈರ್ಯದಿಂದ. ದೇವರಿಗೆ ಮಾಡಬೇಕಾದದ್ದನ್ನು ಮಾಡಿದರೆ ಸಾಕು ಎನ್ನುವ ಧೈರ್ಯದಿಂದ. ಈ ಪಾಪಿಗಳನ್ನು ಅವಲಂಬಿಸಿಯೇ ಪೂಜಾರಿಯ ಬದುಕಿದೆ, ಜೋತಿಷಿಗಳ ಬದುಕಿದೆ. ಧಾರ್ಮಿಕ ಮುಖಂಡರ ಬದುಕಿದೆ.
ಎಷ್ಟು ಲಕ್ಷ ಸಲ ಯಾವ ಪ್ರಭಾವಿ ದೇವಸ್ಥಾನದಲ್ಲಿ ಕುಳಿತು ಹೊಯ್ಕೊಂಡರೆ ತಲೆನೋವು ನೀವಾರಣೆಯಾಗುತ್ತದೆ ಎನ್ನುವುದು ಒಂದು ಸರಳ ಪ್ರಶ್ನೆ. ಅದಕ್ಕೆ ಸರಳ ಉತ್ತರ: ಕೋಟಿ ಸಲ ಹೊಯ್ಕೊಂಡರೂ ಕಡಿಮೆಯಾಗುವುದಿಲ್ಲ. ಒಂದು ರೂಪಾಯಿಯ ನೋವು ನಿವಾರಕ ಮಾತ್ರೆ ಬೇಕು ಎನ್ನುವುದು.
ಪಾಪಿಗಳು ಆಹಾರವನ್ನು ಕಲಬೆರೆಕೆ ಮಾಡಿದ್ದಾರೆ. ನೀರನ್ನು ಕಲಬೆರೆಕೆ ಮಾಡಿದ್ದಾರೆ. ಗಾಳಿಯನ್ನೂ ಕಲಬೆರೆಕೆ ಮಾಡಿದ್ದಾರೆ. ಮಾತೆತ್ತಿದರೆ ದೇವರು ಎನ್ನುತ್ತಾರೆ. ದೇವರಿಂದಲೇ ಜಗತ್ತು ಅನ್ನುತ್ತಾರೆ. ರೋಗಗಳನ್ನು ರೋಗಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಔಷಧವನ್ನು ಸೃಷ್ಟಿ ಮಾಡುತ್ತಿದ್ದಾರೆ. ಮನುಷ್ಯನನ್ನು ಯಾವ ದೇವರು ಕಾಪಾಡುತ್ತಿಲ್ಲ. ಇಲ್ಲೊಂದು ಮೂರ್ಖತನವಿದೆ: ದೇವಸ್ಥಾನ, ಮಸೀದಿ, ಚರ್ಚುಗಳಿಗೆ ಮೊದಲು ಹೋಗಿ ಭಕ್ತಿ ಸಮರ್ಪಿಸಿಕೊಂಡು ನಂತರ ದವಾಖಾನೆಗಳಿಗೆ ಹೋಗಲಾಗುತ್ತದೆ. ಸತ್ತರೆ ದೇವರು ಕೈಬಿಟ್ಟ, ಬದುಕಿದರೆ ದೇವರು ಕೈ ಹಿಡಿದ. ವಿಜ್ಞಾನವನ್ನು ಮಾತ್ರ ಸ್ಮರಿಸಲಾರರು.
ದೇವರು ಈ ಜಗತ್ತಿನ ದೊಡ್ಡ ದುಖಾನು, ಜಗತ್ತಿನ ಎಲ್ಲಾ ವ್ಯವಹಾರಗಳು ದೇವರು ಎನ್ನುವ ಪದವನ್ನು ಅವಲಂಬಿಸಿ ನಡೆಯುತ್ತಿವೆ. ಹರಿದ ಅಂಗಿ ಬದಲಿಸಿಕೊಳ್ಳಲೂ ಒಂದು ಹಬ್ಬದ ನೆಪಬೇಕು. ಅದಕ್ಕೊಂದು ದೇವರು ಬೇಕು. ಇದನ್ನು ಅವಲಬಿಸಿಯೇ ಅಲ್ಲವೇ ಬಂಡವಾಳಿಗರು ಬದುಕುವುದು? ತಿಂಗಳಿಗೊಂದು ಹಬ್ಬದ ಸೃಷ್ಟಿಯಾದರೂ ಈ ಜನ ಆಚರಿಸುತ್ತಾರೆ. ನಿರಂತರವಾದ ಸುಲಿಗೆಯನ್ನು ಅವರು ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ. ದೇವರಿಗೆ ಖರ್ಚು ಮಾಡಿದರೆ ದೇವರು ಕೊಡುತ್ತಾನೆ ಎನ್ನುವ ನಂಬಿಕೆ ಅವರದು. ಎಲ್ಲಿ ಕೊಡುತ್ತಾನೆ ದೇವರು? ದುಡಿಯದೆ ಒಂದು ತುತ್ತು ಅನ್ನವೂ ಸಿಗುವುದಿಲ್ಲ.
ಮನುಷ್ಯನ ಮೆದುಳಿನೊಳಗೆ ತರ್ಕ ಪ್ರವೇಶಿಸುವುದನ್ನು ಇಲ್ಲದ ಮೌಢ್ಯಗಳನ್ನು ತುರುಕಿ ವ್ಯವಸ್ಥಿತವಾಗಿ ನಿಲ್ಲಿಸಲಾಗಿದೆ. ಆತ ಸದಾ ಅವಲಂಬಿತನಾಗಿರಬೇಕು. ಸದಾ ಒಂದಿಲ್ಲೊಂದು ಭಯದಿಂದ ನರಳುತ್ತಿರಬೇಕು. ಸ್ವಂತಿಕೆ, ಸ್ವಂತ ವಿಚಾರಗಳು ಆತನ ತಲೆಯೊಳಗೆ ಮೊಳಕೆ ಹೊಡೆಯದಂತೆ ನೋಡಿಕೊಳ್ಳಲಾಗುತ್ತಿದೆ.
ಇದು ಯಾವತ್ತಿಗೂ ಬದಲಾಗದು.
ಲಕ್ಷ್ಮೀಕಾಂತ ನಾಯಕ