ಬೀದರ್: ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಡಿಜಿಟಲ್ ಖಾತೆ ಹಂಚಿಕೆ ಮಾಇಕೊಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ತಾಲೂಕಿನ ಏಳು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮವಾಗಿ ಡಿಜಿಟಲ್ ಖಾತೆಗಳನ್ನು ಹಂಚಿಕೆ ಮಾಡಿರುವ ಕುರಿತು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಕುರಿತು ತನಿಖೆ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸೂಚನೆ ನೀಡಿದ್ದರು. ಅದರಂತೆ ಈಗ ತನಿಖೆ ಕೈಗೊಳ್ಲಲಾಗಿದೆ. ತನಿಖಾಧಿಕಾರಿಯನ್ನಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ನೇಮಿಲಾಗಿದೆ ಎಂದು ಜಿಲ್ಲಾ ಪಂಚಾಯತಿಯಿಂದ ತಿಳಿದು ಬಂದಿದೆ.
ಬೀದರ್ ತಾಲ್ಲೂಕಿನ ಗಾದಗಿ, ಮರಕಲ್, ಅಮಲಾಪುರ, ಚಿಟ್ಟಾ, ಯದಲಾಪುರ, ಕಮಠಾಣ ಹಾಗೂ ಅಣದೂರ ಗ್ರಾಮ ಪಂಚಾಯತಿಗಳ ಪಿಡಿಓಗಳು ಅಕ್ರಮವಾಗಿ ಡಿಜಿಟಲ್ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಫಲವತ್ತಾದ ಕೃಷಿ ಜಮೀನಿನಲ್ಲಿ ಖಾಸಗಿ ಸರ್ವೇ ನಂಬರ್ಗಳಲ್ಲಿ ಅನಧಿಕೃತವಾಗಿ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಕಾನೂನಿಗೆ ವಿರುದ್ಧವಾಗಿ 9, 11ಎ, 11ಬಿ ಡಿಜಿಟಲ್ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಆರೋಪವಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಹಣ ಗಳಿಸಿದ್ದಾರೆ ಎಂದು ಸಾರ್ವಜನಿಕರು, ಸಂಘ ಸಂಸ್ಥೆಗಳು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಇದು ಇಷ್ಟಕ್ಕೆ ನಿಲ್ಲದೆ ಈಗಲೂ ಸತತವಾಗಿ ದೂರುಗಳು ಬರುತ್ತಿವೆ ಎಂದು ತಿಳಿದು ಬಂದಿದೆ.
ಪಿಡಿಓಗಳ ವಿರುದ್ಧ ಸತತವಾಗಿ ದೂರುಗಳು ಬರುತ್ತಿವೆ. ಅವುಗಳ ಸ್ವರೂಪ ನೋಡಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ಸಿಇಓ ಡಾ. ಗಿರೀಶ್ ಬದೋಲೆ ತಿಳಿಸಿದ್ದಾರೆ.
ಸಾಕಷ್ಟು ದೂರು ಬರುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯ ಲೆಖ್ಖ ಪರಿಶೋಧಕರು ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿ ವರದಿ ಸಲ್ಲಿಸಬೇಕು. ಪಿಡಿಓಗಳಿಂದ ಲಿಖಿತ ರೂಪದ ಹೇಳಿಕೆ ಪಡೆದುಕೊಳ್ಳುವಂತೆಯೂ ಸೂಚಿಸಲಾಗಿದೆ.
ಬೀದರ್ ನಗರ ತೀವ್ರವಾಗಿ ಬೆಳೆಯುತ್ತಿರುವುದರಿಂದ ನಗರದ ಆಸುಪಾಸಿನಲ್ಲಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೂಮಿಗೆ ಚಿನ್ನದ ಬೆಲೆ ಬಂದಿರುವುದರಿಂದ ರಿಯಲ್ ಎಸ್ಟೇಟ್ ದಂದೆ ಮಾಡುವವರು ಕೃಷಿ ಭೂಮಿಗಳನ್ನು ಖರೀದಿ ಮಾಡಿ ಲೇಔಟ್ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿರುವುದರಿಂದ ಪಂಚಾಯತಿಯ ಡಿಜಿಟಲ್ ಖಾತೆ ಮಾಡಲು ಸಾಕಷ್ಟು ಪ್ರಮಾಣದ ಹಣ ನೀಡಲಾಗುತ್ತಿದ್ದು ಅಕ್ರಮವಾಗಿ ಹಣ ಮಾಡಲು ಪಿಡಿಓಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವುದು ಖಚಿತಗೊಂಡಿದೆ.