ವಿಜಯಪುರ: ಜಗಳ ಸಂಬಂಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾ ಜಾಮೀನು ನೀಡಲು ಆರೋಪಿಗಳಿಂದ ನಲವತ್ತು ಸಾವಿರ(40 ಸಾವಿರ) ತೆಗೆದುಕೊಳ್ಳುವ ಸಮಯದಲ್ಲಿ ವಿಜಯಪುರದ ಗೋಳಗುಮ್ಮಟ ಠಾಣೆಯ ಇಬ್ಬರು ಪೋಲಿಸ್ ಪೇದೆಗಳು ಬುಧವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಪೇದೆಗಳಾದ ಜಟ್ಟೆಪ್ಪ ಬಿರಾದಾರ ಮತ್ತು ಹನುಮಂತ ಪೂಜಾರಿ ಎಂಬುವವರು ಆರೋಪಿಗಳಿಗೆ ಠಾಣಾ ಬೇಲ್ ಕೊಡುವುದಕ್ಕೆ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಾಹಿತಿ ಪಡೆದ ವಿಜಯಪುರದ ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ, ಡಿವೈಎಸ್ಪಿ ಸುರೇಶರೆಡ್ಡಿ, ಇನ್ಸಪೆಕ್ಟರ್ ಆನಂದ ಠಕ್ಕನವರ ಮತ್ತು ಎ.ಎ ಡೋಣಿ ದಾಳಿ ನಡೆಸಿ ಇಬ್ಬರು ಪೋಲಿಸ್ ಪೇದೆಗಳನ್ನು ಬಂಧಿಸಿದ್ದಾರೆ.