ಸ್ಥಳೀಯ

ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಪ್ರಕರಣಗಳ ಬಗ್ಗೆ ಸಮರ್ಪಕ ದಾಖಲು ಮಾಡಿ : ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರು-ಶಶಿಧರ್ ಕೋಸಂಬೆ

WhatsApp Group Join Now
Telegram Group Join Now

ಯಾದಗಿರಿ : ಜುಲೈ 26,  : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಾಲಾ ವ್ಯವಸ್ಥೆ ಸುಧಾರಣೆ ಸೇರಿದಂತೆ ವಸತಿ ನಿಲಯಗಳಲ್ಲಿ ಅವಶ್ಯಕ ವ್ಯವಸ್ಥೆಗಳನ್ನು ಕಲ್ಪಿಸಲು ವಿಶೇಷ ಗಮನ ನೀಡುವಂತೆ ರಾಜ್ಯ ಮಕ್ಕಳ  ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಸೂಚಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿವಿಧ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಭಾಗೀದಾರರೊಂದಿಗೆ ಸಮಾಲೋಚನಾ ಸಭೆ ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಾಗೂ ಮಕ್ಕಳ ಪಾಲನಾ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಸಮಾಲೋಚನಾ ಸಭೆ ನಡೆಸಿ ಅವರು ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯಗಳನ್ನು ಒದಗಿಸುವ ಜೊತೆಗೆ ಸರ್ಕಾರ ಒದಗಿಸುವ ಅನುದಾನ ದುರುಪಯೋಗ ಆಗದಂತೆ ನಿಗಾ ವಹಿಸಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಳಮಟ್ಟದಿಂದ ಸುಧಾರಣಾ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಿಭಾಯಿಸಿದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ನೆರವಾಗಲಿದೆ ಎಂದು ಅವರು ಹೇಳಿದರು.

ಎಲ್ಲಾ ಶಾಲೆಗಳಲ್ಲಿ ಹಾಜರಾತಿ ವ್ಯವಸ್ಥೆ ಸಮರ್ಪಕವಾಗಿ ನಿಭಾಯಿಸಬೇಕು. ದಾಖಲಾತಿ ಅನ್ವಯ ಹಾಜರಾತಿ ನಿರ್ವಹಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡುವಂತೆ ಅವರು ಸೂಚಿಸಿದರು.

ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ಊಟದ,ಗುಣಮಟ್ಟದ ಧವಸಧಾನ್ಯ ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರುತ್ತಿದ್ದು, ಇದಕ್ಕಾಗಿ ಸಂತಸ ವ್ಯಕ್ತಪಡಿಸಿದ ಅವರು ಜಿಲ್ಲಾಡಳಿತ, ಜಿ.ಪಂ. ಗೆ ಅಭಿನಂದನೆಗಳನ್ನು ಸಲ್ಲಿಸಿದರು.

ವಿವಿಧ ಶಾಲೆಗಳಲ್ಲಿ ಮತ್ತು ವಸತಿ ಶಾಲೆಗಳಿಗಾಗಿ ಪಡೆಯುವಂತಹ ಅತಿಥಿ ಶಿಕ್ಷಕರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಿ, ಪೊಲೀಸ್ ವೆರಿಫಿಕೇಷನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು.ಶಾಲೆ, ವಸತಿ ನಿಲಯಗಳಲ್ಲಿ ತಪ್ಪದೆ ದೂರು, ಸಲಹಾ ಪೆಟ್ಟಿಗೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಮಕ್ಕಳ ಸುರಕ್ಷತೆಗಾಗಿ ಎಲ್ಲ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿ ತಪ್ಪದೆ ನಮೂದಿಸುವಂತೆ ಸೂಚನೆ ನೀಡಿದರು.

ಪ್ರಸವಪೂರ್ವ ಪತ್ತೆ ನಿಷೇಧ ಕಾನೂನಿನ ಅನ್ವಯ ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಸಂಬAಧಪಟ್ಟ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ನಿರಂತರ ಪರಿಶೀಲನೆ ನಡೆಸುವ ಮೂಲಕ ಅಕ್ರಮವಾಗಿ ಭ್ರೂಣ ಪತ್ತೆ ಮತ್ತು ಹತ್ಯೆ ಬಗ್ಗೆ ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯುವ ಜೊತೆಗೆ ಬಾಲ ಗರ್ಭಿಣಿಯರ ಪ್ರಕರಣಗಳ ಬಗ್ಗೆ ಸಂಬAಧಿಸಿದ ಪೋರ್ಟಲ್ ದಲ್ಲಿ ಸಮರ್ಪಕ ದಾಖಲಾತಿ ಮಾಡಬೇಕು. ಎ ಎನ್ ಎಮ್ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಿ ಸರಿಯಾಗಿ ಅಪ್ಲೋಡ್ ಮಾಡುವುದರ ಜೊತೆಗೆ ನಿಖರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಚಿಕಿತ್ಸೆ ಬಗ್ಗೆ ವಿಶೇಷ ಗಮನ ನೀಡಬೇಕು. ಅದರಂತೆ ಅನಿಮಿಯದಿಂದ ಬಳಲುತ್ತಿರುವ ಮಕ್ಕಳಿಗೆ ಅವಶ್ಯಕ ಚಿಕಿತ್ಸೆಯನ್ನು ದೊರಕಿಸಬೇಕು. ವಿವಿಧ ಆಸ್ಪತ್ರೆಗಳಲ್ಲಿ ಅವಶ್ಯಕ ವ್ಯವಸ್ಥೆಗಳನ್ನು ಸುಧಾರಿಸಿಕೊಳ್ಳುವಂತೆ ತಿಳಿಸಿದ ಅವರು ಆಸ್ಪತ್ರೆಗಳಲ್ಲಿ ದಾಖಲಾಗುವ ಅಪೌಷ್ಟಿಕ ಮತ್ತು ಅನೀಮಿಯ ಮಕ್ಕಳ ನಿರಂತರ ಪರಿಶೀಲನೆ ನಡೆಸುವುದರ ಜೊತೆಗೆ ಚೇತರಿಕೆ ಬಗ್ಗೆ ಸೂಕ್ತ ನಿಗಾ ಇಡುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಸುಶೀಲ.ಬಿ, ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಶ್ರೀ ವೀರಣ್ಣಗೌಡ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಹಣಮಂತ್ರಾಯ.ಸಿ ಕರಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್.ಪಿ, ಡಿಹೆಚ್‌ಓ ಡಾ.ಪ್ರಭುಲಿಂಗ ಮಾನಕರ್, ಮಕ್ಕಳ ರಕ್ಷಣಾ ಅಧಿಕಾರಿ ದಶರಥನಾಯಕ, ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ) ಗೋವಿಂದ್ ರಾಥೋಡ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts