ಮನುಷ್ಯರೆಂಬ ಕುರಿಗಳ ಮೇಲೆ ಸಂಪಾದನೆ, ನಮ್ಮಪ್ಪ ಒಂದು ರೂಪಾಯಿ ಮುಟ್ಟುವುದಿಲ್ಲ!-2
ಯೋಚನೆಯೊಂದರ ಅಂಕುರ ಜನರ ಮನಸ್ಸೆಂಬ ಕೃಷಿ ಭೂಮಿಯ ಮೇಲೆ ನಾಟಿಸಿದ್ದಾಗಿದೆ, ಅದಕ್ಕೆ ನೀರೆರೆದು ಪೋಷಿಸದಿದ್ದರೆ ಅದು ಮೊಳಕೆ ಹೊಡೆದು ಮರವಾಗಲಾರದು ಮತ್ತು ಫಲ, ನೆರಳನ್ನು ನೀಡಲಾರದು ಎನ್ನುವ ಯೋಚನೆಯಲ್ಲಿ ಮಹಯಂತ್ರಾಯ ಹಗಲಿರುಳು ಕಾಲ ವ್ಯಯಿಸತೊಡಗಿದ್ದ. ಮೂರು ದಿನದಲ್ಲಿ ಏಳು ದಿನಗಳ ಮೊಹರಂ ಹಬ್ಬ ಆರಂಭವಾಗಲಿದೆ. ಅದು ಊರ ಜನರೆಲ್ಲಾ ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬ. ಸಸಿಗೆ ಗೊಬ್ಬರ ಒದಗಿಸುವ ಸಮಯ. ತಾನು ಮಾಡುವುದೇನಿದ್ದರೂ ಇದೇ ಸಮಯದಲ್ಲಿ ಮಾಡಬೇಕು. ಜನ ನಂಬಿದಂತೆ ಕಾಣಿಸುತ್ತಿದೆ. ಅವರು ಒಂದು ಸಲ ನಂಬಿದರೆ ತನ್ನ ಅದೃಷ್ಟದ ಬಾಗಿಲು ತೆರೆಯಲಿದೆ. ಈ ಕೈಲಾಗದ ದೇಹಕ್ಕೆ ಸುಖದ ಸುಪ್ಪತ್ತಿಗೆ ದೊರೆಯಲಿದೆ, ನಾನಷ್ಟೇ ಅಲ್ಲ; ನಮ್ಮ ಖಾಂಧನ ಕೂಡಾ. ರೋಮಾಂಚನಗೊಂಡ ಮಹಯಂತ್ರಾಯ. ಅದಾಗಲೇ ಮಹಯಂತ್ರಾಯನಿಗೆ ದೇವರ ಒಲುಮೆಯಾಗಿರುವ ಸಂಗತಿಯನ್ನು ಊರ ಜನ ಆಡಿಕೊಳ್ಳತೊಡಗಿದ್ದರು. ಈ ಸುದ್ದಿ ಹೆಂಡತಿಯಿಂದ ಲಭ್ಯವಾಯಿತು. ಹಳ್ಳಿಗಳಲ್ಲಿ ವಾರ್ತಾ ಪತ್ರಿಕೆಗಳೆಂದರೆ ಈ ಹೆಂಗಸರೇ! ಅವರು ಸಾಮೂಹಿಕವಾಗಿ ಬಯಲು ಶೌಚ ಮಾಡುತ್ತಾ ಆ ಬಯಲು ಶೌಚದ ಪ್ರದೇಶವನ್ನೇ ವಿಧಾನಸೌಧ, ಸಂಸತ್ತನ್ನಾಗಿ ಮಾಡಿಕೊಳ್ಳುತ್ತಾರೆ. ಹೆಂಡತಿ ಆ ಮಾತನ್ನು ಅಂದಾಗ ಮಹಯಂತ್ರಾಯ ಮತ್ತೊಮ್ಮೆ ರೋಮಾಂಚನಕ್ಕೆ ಒಳಗಾದನಲ್ಲದೆ ಈ ಸುದ್ದಿಯನ್ನು ಸುತ್ತಮುತ್ತಲಿನ ಹಳ್ಳಿಗಳಿಗೂ ಹಬ್ಬಬೇಕು. ಹಾಗೇ ಹಬ್ಬಬೇಕು ಎಂದರೆ ಯಾರನ್ನು ಹಿಡಿಯುವುದು ಎನ್ನುವ ಯೋಚನೆಗೆ ಬಿದ್ದ. ಯಾವುದಕ್ಕೂ ಇರಲಿ ಎಂದು ಹೆಂಡತಿಗೆ ಈ ಮಾತನ್ನು ಹೇಳಿದ: ಬರೀ ನಮ್ಮೂರಲ್ಲಿ ಸುದ್ದಿಯಾದರೆ ಏನೂ ಪ್ರಯೋಜನೆ ಇಲ್ಲ. ನನಗೆ ದೇವರು ಒಲಿದಿರುವ ಸಂಗತಿ ನಿನ್ನ ತವರು ಮನೆ, ನಿಮ್ಮ ಬೀಗರು ಬಿಜ್ಜರಿಗೂ ಹಬ್ಬಬೇಕು. ಇನ್ನೆರಡು ದಿನದಲ್ಲಿ ಮೊಹರಂ ಹಬ್ಬ ಇದೆ. ಎಲ್ಲಾ ಬೀಗರಿಗೂ ಹಬ್ಬಕ್ಕೆ ಬರಲು ಹೇಳು ಎಂದು.
ಊರು ಮುಖ್ಯವಾಗಿ ಗುಡದಯ್ಯನ ಕೈಯೊಳಗಿತ್ತು. ಆತ ಹಿರಿ ಮನುಷ್ಯ. ಪ್ರತಿ ವರ್ಷ ತನ್ನ ಊರಿನಲ್ಲಿ ನಡೆಯುವ ಹಬ್ಬ ಹರಿದಿನಗಳ ಮುಂದಾಳತ್ವ ಆತನೇ ವಹಿಸಿಕೊಳ್ಳುತ್ತಿದ್ದ. ಇಂಥದ್ದು ಮಾಡೋಣ, ಇಂಥದ್ದು ಬಿಡೋಣ ಎನ್ನುವ ವಿಷಯಗಳನ್ನು ಆತನೇ ನಿರ್ಧರಿಸುತ್ತಿದ್ದ. ಯಮನೂರಪ್ಪನ ಕುದುರೆ ಈಗ ಐದಾರು ತಿಂಗಳ ಹಿಂದೆ ಸತ್ತು ಹೋದಾಗ ಊರು ಗೌರವದಿಂದ ಅದನ್ನು ಮಣ್ಣು ಮಾಡಿದ್ದರು. ಎಷ್ಟೇ ಆಗಲಿ ದೇವರ ಕುದುರೆಯಲ್ಲವೇ? ಊರು ಸಂತಾಪಕ್ಕೆ ಒಳಗಾಗಿತ್ತು. ಮತ್ತು ಊರಿಗೆ ಮುಂಬರುವ ಮೊಹರಂಕ್ಕೆ ಕುದುರೆಯ ಚಿಂತೆಯೂ ಕಾಡಿತ್ತು. ಮುಖಂಡರೆಲ್ಲ ಒಂದು ಕಡೆ ಸೇರಿದಾಗ ಈ ವಿಷಯದ ಕುರಿತು ಚರ್ಚಿಸಿದ್ದರೂ ಕೂಡಾ. ಈ ಸಂಗತಿ ನಡೆದಾಗ ಮಹಯಂತ್ರಾಯ ಅಲ್ಲೇ ಇದ್ದ. ಅವತ್ತೇ ಅವನಲ್ಲಿ ತಾನೇಕೆ ಕುದುರೆಯಾಗಬಾರದು ಎನ್ನುವ ಯೋಚನೆಯೊಂದು ಮೆದುಳಿನಲ್ಲಿ ಕದಲಿ ಹೋಗಿತ್ತು. ದಾರಿ ಕಾಣಿಸಿರಲಿಲ್ಲ. ಮಹಯಂತ್ರಾಯನೆಂಬ ನನ್ನೊಳಗೆ ದೇವರು ಹೊಕ್ಕಿರುವ ವಿಷಯ ಈ ಊರ ಮುಖ್ಯಸ್ಥ ಎನ್ನುವ ಗುಡದಯ್ಯನ ಕಿವಿಗೆ ಬಿದ್ದಿದೆಯಾ ಇಲ್ಲವೇ ಎನ್ನುವ ಯೋಚನೆ ಕಾಡಿತು ಒಂದು ಕ್ಷಣ. ಏನೇ ಆಗಲಿ, ಒಂದುಸಲ ಭೇಟಿಯಾಗುವುದು ಒಳ್ಳೆಯದು ಎನ್ನುವ ನಿರ್ಧಾರಕ್ಕೆ ಬಂದ ಮಹಯಂತ್ರಾಯ.
ಸಂಜಿಯಾಗಿತ್ತು, ಸೂರ್ಯ ಅದಾಗ ತಾಯ ಗರ್ಭ ಸೇರಿದ್ದ. ಕತ್ತಲು ನಿಧಾನವಾಗಿ ಸುರಿಯತೊಡಗಿತ್ತು. ಗುಡದಯ್ಯನ ಮನೆಯ ಮುಂದೆ ನಿಂತಾಗ ಕುರಿಹಟ್ಟಿಯ ಹತ್ತಿರ ಮಲಗಿದ್ದ ನಾಯಿ ಇವನ ಪೋಚು ಗಡ್ಡ, ಸೊಣಕಲು ದೇಹ ನೋಡಿ ಗುರ್ ಅಂತು. “ಹಚ್ಯಾ, ಮಾಮ ಇದ್ದೇನಪಾ ಮನ್ಯಾಗ?” ಎಂದ. ಮುದ್ಯಾತನಿಗೆ ಕಿವಿ ಕೇಳಿಸಿರಲಿಕ್ಕಿಲ್ಲ, ಮತ್ತೊಂದು ದಿಕ್ಕಿನಿಂದ ಮುದಿಕಿಯ ಧ್ವನಿ ಕೇಳಿಸಿತು, “ಆನ ಬಾ” ಅಂತ. ಕುರಿಮರಿ, ದನಕರುಗಳಿರುವ ಮನೆಯಾಗಿದ್ದರಿಂದ ಪಶುಗಳ ಮೂತ್ರ ಸೆಗಣಿ ಸಂಗಮದ ಘಮ ಆ ಪರಿಸರವನ್ನೆಲ್ಲಾ ವ್ಯಾಪಿಸಿತ್ತು. ಬಹುತೇಕ ಸಮಯ ಕುರಿಹಟ್ಟಿಯಲ್ಲಿ ಮಲಗುತ್ತಿದ್ದ ಹಳ್ಳಿಯ ಜನಕ್ಕೆ ಅದೇನು ಗಂಭೀರ ವಿಷಯವಲ್ಲ. ನೊಣಗಳು, ಸೊಳ್ಳೆಗಳು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಂಡವರು ಗ್ರಾಮೀಣ ಜನರು. ಹೊಸ್ತಿಲು ದಾಟಿ ಮನೆಯ ಒಳಕ್ಕೆ ಕಾಲಿಟ್ಟಾಗ ಮಂಚದ ಮೇಲೆ ಕುಳಿತಿದ್ದ ಗುಡದಯ್ಯ ಅಂಗೈಯಲ್ಲಿ ತಂಬಾಕು ಹಾಕಿಕೊಂಡು ಅದಕ್ಕೆ ಸುಣ್ಣ ಬೆರಸಿ ಹದ ಮಾಡುತ್ತಿದ್ದ. ಕುಂತತಹ ಗುಡದಯ್ಯನಿಗೆ “ಕುಂತೇನಪಾ ಮಾಮ” ಎಂದು ಕೇಳಿ ಗಮನ ಸೆಳೆದ. “ಬಾಬಾ, ಸಂಜಿಕಡೆ ಬಂದೆಲ್ಲ” ಅಂದ ಗುಡದಯ್ಯ. ಅಲ್ಲೇ ಪಡಸಾಲೆಯಲ್ಲಿ ಇರುವ ಮುರಿದ ಕುರ್ಚಿಯೊಂದರ ಮೇಲೆ ಕುಳಿತುಕೊಳ್ಳುತ್ತಾ “ಏನಿಲ್ಲ, ಹೊಲದ ಕಡೆಗೆ ಹೋಗಿದ್ದೆ. ಬಾಳ್ ದಿನದಿಂದ ಮನಿ ಕಡೆಗೆ ಬಂದಿದ್ದಿಲ್ಲಲ್ಲ? ಅದಕ ಮಾಮನ ಮಾತಾಡಿಸಿಕೊಂಡು ಹೋಗಣಾಂತ ಬಂದೆ” ಎಂದ ತನಗೊಂದಿಷ್ಟು ತಂಬಾಕು ಕೊಡು ಎನ್ನುವ ಇಂಗಿತ ವ್ಯಕ್ತಪಡಿಸುತ್ತಾ. ಇಲ್ಲಿ ಮುಖ್ಯವಾಗಿ ವ್ಯಕ್ತವಾಗಬೇಕಿರುವುದು ತನ್ನ ಮೈಯೊಳಗೆ ಹೊಕ್ಕ ದೇವರ ಕುರಿತು.
“ಪುಣ್ಯ ಮಾಡಿದಿಲೆ ಅಳಿದೇವರು, ಚೆಂದ ನಡಕೊಂಡು ಹೋಗು. ಯಮನೂರಪ್ಪನಂತಹ ಬೆಂಕಿಯಂತಹ ದೇವರಿಗೆ ನಿನ್ನ ಮೇಲೆ ಒಲುಮೆಯಾಗಿದೆ ಎಂದರೆ ಸಣ್ಣ ಮಾತಲ್ಲ. ಬಾಳ ಶುದ್ಧ ಇರಬೇಕಪಾ, ಇಲ್ಲಾಂದರ ಒಂದೋಗಿ ಒಂದಾಗ್ತದ. ದೇವರಂತಹ ಮಾತು, ಅದು ಹುಲಿ ಸವಾರಿ ಮಾಡಿದ ದೇವರು. ಬಾಳ್ ಬೆರಕಿ ಐತಿ” ಎಂದ ಗುಡದಯ್ಯ. ಮುದ್ಯಾತ ನಂಬಿದ್ದಾನೆ ಎನ್ನುವುದು ಖಚಿತವಾದ ಆ ಕ್ಷಣ ಮಹಯಂತ್ರಾಯನ ದೇಹ ರೋಮಾಂಚನದಿಂದ ತಲ್ಲಣಕ್ಕೆ ಒಳಗಾಯಿತು. ಆತ ನಖಶಿಖಾಂತ ನಡುಗಿ ಹೋದ. “ಹಿರಿಯರು ನೀವು, ನೀವು ದಾರಿ ತೋರಿಸಿದಂಗ ನಡಕೊಳ್ಳವ ನಾನು, ಆ ನನ ತಂದಿಗೆ ನನ ಮ್ಯಾಲ ಯಾಕ ಒಲುಮೆಯಾಗಿದೆಯೋ ಆತನಿಗೆ ಗೊತ್ತು. ಈ ಬಡ ದೇಹದ ಮೇಲೆ ಸವಾರಿ ಮಾಡುವ ಇಷ್ಟ ಆತನಿಗೆ ಯಾಕ್ ಉಂಟಾಗಿದೆಯೋ ಆತನಿಗೆ ಗೊತ್ತು. ಮಾಮ, ನಿಂದೆಪ್ಪೋ ಧೈರ್ಯ. ನೀನೇ ದಾರಿ ತೋರಿಸಬೇಕು” ಎಂದ. ಮುದೇಕಿ ಆಡಿನ ಹಾಲಿನಲ್ಲಿ ಕಾಸಿದ ಚಹಾ ತಂದುಕೊಟ್ಟಳು, ಈಗ ತಿಕ್ಕಿ ಹದಮಾಡಿಟ್ಟುಕೊಂಡ ತಂಬಾಕನ್ನು ಏನು ಮಾಡಬೇಕು ಎನ್ನುವ ಸಂದಿಗ್ದತೆಗೆ ಒಳಗಾಗಿ “ಬಾಯಿ ಮುಕುಳಿಸಲಿಕ್ಕೆ ಒಂಚೂರು ನೀರು ತಾಂಬ” ಎಂದ. ಚಹಾ ಕುಡಿದಾದ ಮೇಲೆ ಇಬ್ಬರು ತಂಬಾಕು ಹಾಕಿಕೊಂಡರು. ಬ್ಯಾರೆ ಬ್ಯಾರೆ ಮಾತುಗಳನ್ನು ಆಡಿಕೊಂಡರು. ಕುರಿಮರಿ, ಆಡು ದನಕರುಗಳ ಸಂಖ್ಯೆಗಳನ್ನು ಪರಸ್ಪರ ವಿನಿಯೋಗ ಮಾಡಿಕೊಂಡರು. ಊರೇನು ದೊಡ್ಡದಲ್ಲ. ಚಿಕ್ಕದು, ಆದರೆ ಗುಡದಯ್ಯನ ಮನೆಗೂ ಮಹಯಂತ್ರಾಯನ ಮನೆಗೂ ಒಂದಿಷ್ಟು ದೂರ ಇತ್ತು. ಇಬ್ಬರವು ಜಾತಿ ಒಂದೇ, ಕಾರಣ ಕರ್ತೃ ಇದ್ದಾಗ ಪರಸ್ಪರ ಕೂಡುವುದರ ಹೊರತು ಸಾಮಾನ್ಯ ದಿನಗಳಲ್ಲಿ ಸೇರುವುದು ಕಡಿಮೆ ಇತ್ತು. ಈ ಕುರಿ,ಆಡು,ದನಕರುಗಳಿರುವ ಬಾಳ್ವೆಯ ಮಂದಿಗೆ ಪುರುಸೊತ್ತಿರುವುದು ಕಡಿಮೆ. “ಹೋಗಿ ಬರ್ತೀನಿ ಮಾಮ” ಎಂದು ಎದ್ದ ಮಹಯಂತ್ರಾಯ, ಅವನ ತಳ ಹುಬ್ಬಿ ಹೋಗಿತ್ತು.
ಅದೊಂದು ಚಿಕ್ಕ ಮಣ್ಣಿನ ಗೋಡೆಯ ಮಸೀದಿ ಎಂದು ಕರೆಯುವ ಸ್ಥಳ. ಮಸೀದಿ ಎಂದರೆ ಮುಸ್ಲೀಮರು ನಮಾಜು ಮಾಡುವ ಸ್ಥಳವಲ್ಲ. ಈ ಕಲಬುರಗಿ, ಯಾದಗಿರಿ, ರಾಯಚೂರು ಭಾಗಗಳಲ್ಲಿ ಈ ಪೀರಲು ದೇವರು ಅಥವಾ ಅಲ್ಲಾಯ್ ದೇವರು ಎಂದು ಕರೆಯುವ ಪಿಂಜಾರ ಮಂದಿ ನಡೆಸುವ ಮೊಹರಂ ಹಬ್ಬ ಆಚರಿಸುವ ಸ್ಥಳ. ನಿಮಗೆಲ್ಲಾ ತಿಳಿದಿರುವಂತೆ ಈ ಮೊಹರಂ ಹಬ್ಬವನ್ನು ಹಿಂದೂ ಮತ್ತು ಪಿಂಜಾರ ಅಥವಾ ನದಾಪ್ ಎಂದು ಕರೆದುಕೊಳ್ಳುವ ಜನ ಒಟ್ಟಾಗಿ ಸೇರಿ ಆಚರಿಸುತ್ತಾರೆ. ಈ ಸ್ಥಳವನ್ನು ನೈಜಾಮನ ತೆರಿಗೆ ಸಂಗ್ರಹದ ಸ್ಥಳವೆಂದೂ ಕರೆಯುತ್ತಾರೆ. ಅತ್ಯಂತ ಕ್ರೂರಿಗಳಾಗಿದ್ದ ನೈಜಾಮನ ಸರ್ಕಾರದ ಸೈನಿಕರು ಹಳ್ಳಿಗಳಿಗೆ ಕಂದಾಯ ವಸೂಲಿ ಮಾಡಲು ಬಂದಾಗ ಗ್ರಾಮಸ್ಥರ ಮೇಲೆ ಹಲವು ರೀತಿಯ ಕ್ರೌರ್ಯಗಳನ್ನು ಮೆರೆಯುತ್ತಿದ್ದರಂತೆ, ಅಂದರೆ ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು, ಕೊಲೆ ಮಾಡುವುದು ಇತ್ಯಾದಿ. ಈ ಕಾರಣಕ್ಕೆ ಅದು ಇತರೆ ಜನಾಂಗದವರು ದ್ವೇಷಿಸಲ್ಪಡುವ ಸ್ಥಳವಾಗಿಯೂ ಪ್ರಖ್ಯಾತಿಯನ್ನು ಹೊಂದಿದೆ. ಈ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಮತ ಬೇಟೆಗಾಗಿ ಗುಡಿಗುಂಡಾರಗಳಿಗೆ ಹಣ ಕೊಡುವ ಸಂಪ್ರದಾಯ ಆರಂಭಿಸಿದರಲ್ಲ? ಆಗ ಈ ಹಾಳು ಬಿದ್ದ ಮಸೂದಿಗಳು ಅಭಿವೃದ್ದಿಗೊಂಡವು. ಅವುಗಳೂ ಕಟಾಂಜನ ನಿರ್ಮಿಸಿಕೊಂಡವು, ಕಬ್ಬಿಣದ ಬೇಲಿ ಹಾಕಿಸಿಕೊಂಡವು. ಇದಕ್ಕೂ ಮುನ್ನ ಅವು ಹಾಳು ಬಿದ್ದ ಸ್ಥಿತಿಯಲ್ಲಿದ್ದವು. ಅದನ್ನು, ಮತ್ತು ರಜಾಕಾರರ ಕ್ರೌರ್ಯವನ್ನು ಸುಪ್ತ ಮನಸ್ಸಿನಲ್ಲಿಟ್ಟುಕೊಂಡ ಗ್ರಾಮೀಣ ಜನ ತಮ್ಮ ವೈರಿಗಳಿಗೆ “ನಿನ್ನ ಮನಿ ಮಸೀದಿಯಾಗಲಿ” ಎನ್ನುವ ಶಾಪ ಕೊಡುತ್ತಿದ್ದರು. ಅದೇನೆ ಇರಲಿ, ಈಗ ಕಥೆಗೆ ಬರುವುದಾದರೆ-
ಅದೊಂದು ಹಾಳು ಬಿದ್ದ ಮಸೂದಿ, ಅದು ಪ್ರತಿ ಭಾನುವಾರ ಮತ್ತು ಗುರುವಾರ ಅಲಂಕಾರಗೊಳ್ಳುತ್ತಿತ್ತು. ಆ ಎರಡೂ ವಾರಗಳಂದು ಆ ಗ್ರಾಮಕ್ಕೆ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಪ್ರಸ್ತುತ ಇವತ್ತು ಭಾನುವಾರ. ಊರ ಹೊರಗಿರುವ ಆ ಮಸೀದಿಯ ಮುಂದೆ ವಿಫುಲವಾಗಿ ಸ್ಥಳವಿದೆ. ಅಲ್ಲಿ ಆಲದ ಮರಗಳ ನೆರಳಿದೆ. ಅಲ್ಲೇ ತುಸು ದೂರದಲ್ಲಿ ಹಳ್ಳವೊಂದು ಹರಿದು ಹೋಗುತ್ತದೆ. ಆ ಮಸೀದಿ ಮುಂದಿರುವ ಸ್ಥಳದಲ್ಲಿ ಇವತ್ತೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ರಾಜ್ಯಾದ ನಾನಾ ಮೂಲೆ ಮಾತ್ರವಲ್ಲ, ನೆರೆಯ ರಾಜ್ಯಗಳಿಂದಲೂ ಅಲ್ಲಿಗೆ ಜನ ಬರುತ್ತಾರೆ, ಬಂದಿದ್ದಾರೆ. ಮಸೀದಿ ಅಲಂಕಾರಗೊಂಡಿದೆ. ಯಮನೂರಪ್ಪ ಎನ್ನುವ ದೇವರು ರೇಶ್ಮೆಯ ಬಟ್ಟೆಯಿಂದ ಸಿಂಗಾರಗೊಂಡು ಹೂವ್ವಿನಲ್ಲಿ ಮುಳುಗಿದೆ. ಚೀನಿ ಗಡ್ಡಗಳು ಎದೆಯವರೆಗೆ ಇಳಿಬಿದ್ದ ಪೂಜಾರಿ ಯಮನೂರಪ್ಪನ ಮುಂದೆ ಕುಳಿತಿದ್ದಾನೆ. ಜನ ಸಾಲಾಗಿ ಪೂಜಾರಿಯನ್ನು ಭೇಟಿಯಾಗುತ್ತಿದ್ದಾರೆ.
“ಹೇಳಮ್ಮಾ, ಏನಾಗಿದೆ? ಆ ಭಗವಂತ ನಿನ್ನ ಸಮಸ್ಯೆಗಳನ್ನು ಪರಿಹರಿಸಲಿದ್ದಾನೆ” ಎಂದನು ಮುತ್ತ್ಯಾ.
“ಮದುವೆಯಾಗಿ ಹತ್ತು ವರ್ಷವಾಯ್ತು ಮುತ್ತ್ಯಾ, ಮಕ್ಕಳಾಗಿಲ್ಲ”
“ಆ ಯಮನೂರಪ್ಪ ನಿನಗೆ ಮಕ್ಕಳನ್ನು ಕೊಡಲಿದ್ದಾನೆ, ಏಳು ವಾರ ತಪ್ಪದೆ ಇಲ್ಲಿಗೆ ಬಾ”
ಮುತ್ಯಾ ಕಣ್ಣುಮುಚ್ಚಿಕೊಂಡ, ಅಸ್ಪಷ್ಟವಾಗಿ ಏನನ್ನೋ ಗೊಣಗಿದ. ತಾರಕ ಸ್ವರದಲ್ಲಿ ನಂತರ “ಓಂ ಹ್ರೀಂ ಪಟ್ ಸ್ವಾಹಾ!” ಎಂದ. ಯಮನೂರಪ್ಪನ ಮೈಮೇಲೆ ಪೇರಿಸಿಟ್ಟ ಹೂಗಳು ನೆಲಕ್ಕೆ ಬಿದ್ದವು. ಅವುಗಳನ್ನು ತೆಗೆದುಕೊಳ್ಳುತ್ತಾ “ಸೆರಗು ಹೊಡ್ಡು ತಾಯಿ, ಯಮನೂರಪ್ಪನ ಆಶಿರ್ವಾದವಾಗಿದೆ” ಎಂದ. ಆ ಹೆಂಗಸು ಭಕ್ತಿಯಿಂದ ಸೆರಗು ಹೊಡ್ಡಿದಳು. ಮುತ್ಯಾ ಸೆರಗಿನಲ್ಲಿ ಹೂಗಳನ್ನು ಹಾಕುತ್ತಾ ಚೀಟಿಯೊಂದನ್ನು ಕೊಟ್ಟ. “ಈ ಔಷಧಿಗಳನ್ನು ತೆಗೆದುಕೊಂಡು ಹೋಗು, ಹೊರಗೆ ಇವೆ” ಎಂದ. ಹೆಂಗಸು ತಲೆ ಬಾಗಿ ನಮಸ್ಕರಿಸುತ್ತಾ ಹೊರ ಬಂದಳು. ಇನ್ನೊಬ್ಬ ಭಕ್ತರು ಮುತ್ಯಾನ ಮುಂದೆ ಕುಳಿತರು.
ಹೊರಗೆ ಬಂದ ಆ ಹೆಂಗಸು ಅಲ್ಲೆ ಔಷದಿ ಮಾರುವವನ ಹತ್ತಿರ ಬಂದಳು, ತಾತ ಬರೆದುಕೊಟ್ಟ ಚೀಟಿಕೊಟ್ಟಳು. ಆತ ಕೆಲವು ಗಿಡದ ತೊಪ್ಪಲು, ಬೇರುಗಳನ್ನು ಕೊಡುತ್ತಾ ಎರಡು ಸಾವಿರ ಎಂದ. ಹೆಂಗಸು ಭಕ್ತಿಯಿಂದ ಕೊಟ್ಟು ಔಷಧಿಗಳನ್ನು ಪಡೆದುಕೊಂಡಳು. “ಇಲ್ನೋಡಮ್ಮಾ, ಅಲ್ಲಿರುವ ಅಂಗಡಿಯಲ್ಲಿ ಜೋಡು ಕಾಯಿಗಳನ್ನು ತೆಗೆದುಕೋ, ಆ ಬಾಜಿರುವ ಅಂಗಡಿಯಲ್ಲಿ ಲೋಭಾನ ಮತ್ತು ಊದುಬತ್ತಿ ಸಿಗುತ್ತವೆ, ದೇವರಿಗೆ ಸಮರ್ಪಿಸಿ ಹೋಗು, ಒಳ್ಳೆಯದಾಗುತ್ತದೆ” ಎಂದ. ಹೆಂಗಸು ಆತನ ಮಾತನ್ನು ಚಾಚೂ ತಪ್ಪದೆ ಪಾಲಿಸಿದಳು.
ಸಾಯಂಕಾಲ. ಕತ್ತಲು ಕವಿದ ಸಮಯ. ಬಂದಂತಹ ಭಕ್ತರೆಲ್ಲಾ ಹೊರಟು ಹೋಗಿದ್ದರು. ಮುತ್ಯಾ ಸುತ್ತಿಕೊಂಡ ರುಮಾಲು ಬಿಚ್ಚಿದ, ಬೆಳಿಗ್ಗೆಯಿಂದ ಸುತ್ತಿಕೊಂಡಿದ್ದ ರುಮಾಲು ಬಿಚ್ಚಿದ ಮೇಲೆ ತಲೆಗೆ ಗಾಳಿ ಸೋಕಿ ಆಯ್ ಅನ್ನಿಸಿತು. ರುಮಾಲು ಬಿಚ್ಚುವುದೊಂದು ಸಿಗ್ನಲ್, ಅಲ್ಲಿಗೆ ಔಷಧಿ ಮಾರುವವನು, ಕಾಯಿ ಕರ್ಫೂರ ಮಾರುವವರು ಎಲ್ಲರೂ ಬಂದರು. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಆದ ಕಲೆಕ್ಷನನ್ನು ಎಣಿಸಿ ತಾತನ ಕೈಗಿಟ್ಟುರು. ತಾತ ಕೊಟ್ಟಷ್ಟನ್ನು ತೆಗೆದುಕೊಂಡು ಅವರೆಲ್ಲರೂ ಅವತ್ತಿನ ವ್ಯಾಪಾರ ಮುಗಿಸಿದರು.
ತಾತ ಒಂದು ರೂಪಾಯಿ ಮುಟ್ಟುವುದಿಲ್ಲ. ಆತ ಕಲಿಯುಗದ ನಿಜ ದೈವ ಎನ್ನುತ್ತಲೇ ಬಂದಂತಹ ಭಕ್ತರು ಅಲ್ಲಿಂದ ಹೋಗುತ್ತಿದ್ದರು ಮತ್ತು ಪ್ರಚಾರ ಮಾಡುತ್ತಿದ್ದರು.
ಮಹಯಂತ್ರಾಯನ ಎರಡು ದಿನಗಳ ಆದಾಯ ಈಗ ಲಕ್ಷಾಂತರ!
(ಮುಂದುವರೆಯುತ್ತದೆ, ಇವತ್ತಿನ ಸ್ಥಿತಿಯವರೆಗೆ)