ಸುರಪುರ: ತಾಲ್ಲೂಕಿನ ಹದಿನೆಂಟು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ಎಸಗಲಾಗಿದೆ ಎನ್ನುವ ಸಾರ್ವಜನಿಕ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಯುವ ಮುಖಂಡ ಶ್ರಾವಣಕುಮಾರ ನಾಯಕ ಇವರು ಇಂದು ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ಕೋರಿ ಮನವಿ ಸಲ್ಲಿಸಿದರು.
ಸುರಪುರ ತಾಲ್ಲೂಕಿನ ಹದಿನೆಂಟು ಗ್ರಾಮ ಪಂಚಾಯತಿಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಆಡಳಿತ ಪಕ್ಷದ ಕಾರ್ಯಕರ್ತರು ಹಸ್ತಕ್ಷೇಪ ನಡೆಸಿ ಫಲಾನುಭವಿ ಆಯ್ಕೆಯಲ್ಲಿ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಈ ಕುರಿತು ಮಾಹಿತಿ ಜೆಡಿಎಸ್ ಪಕ್ಷದ ಯುವ ಮುಖಂಡ ಶ್ರಾವಣಕುಮಾರ ನಾಯಕ ಇವರಿಗೆ ಬಂದ ಹಿನ್ನೆಲೆಯಲ್ಲಿ ಇಂದು ತಮ್ಮ ಬೆಂಬಲಿಗರೊಂದಿಗೆ ತೆರಳಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿಯೊಂದನ್ನು ನೀಡಿದ್ದಾರೆ. ಮನವಿಯಲ್ಲಿ ಸುರಪುರ ತಾಲ್ಲೂಕಿನ ಹದಿನೆಂಟು ಗ್ರಾಮ ಪಂಚಾಯತಿಯ ವಿವಿಧ ವಸತಿ ಯೋಜನೆಗಳು ಅಂದರೆ ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ, ಇಂದಿರಾ ಆವಾಸ್, ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳಿಂದ ವಿತರಿಸಲಾಗುತ್ತಿರುವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದ್ದು ತಾಲ್ಲೂಕಿನ ಹದಿನೆಂಟು ಗ್ರಾಮ ಪಂಚಾಯತಿಗಳ ಫಲಾನುಭವಿಗಳ ಪಟ್ಟಿ, ಫಲಾನುಭವಿ ಕೋಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ದೃಢೀಕರಿಸಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ನಂತರ ಜನ ಆಕ್ರೋಶದೊಂದಿಗೆ ಮಾತನಾಡಿದ ಶ್ರಾವಣಕುಮಾರ ನಾಯಕ “ನಾವು ಈ ಅಕ್ರಮ ವಸತಿ ಫಲಾನುಭವಿ ಆಯ್ಕೆಯ ವಿಷಯವನ್ನು ಇಲ್ಲಿಗೆ ಬಿಡುವುದಿಲ್ಲ. ಫಲಾನುಭವಿ ಆಯ್ಕೆಯಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅನರ್ಹ ಫಲಾನುಭವಿಗಳಿಗೆ ವಸತಿ ಆಯ್ಕೆ ಆಡಲಾಗಿದೆ. ಇದರಿಂದ ರಾಜಕೀಯ ಬೆಂಬಲವಿಲ್ಲದ, ಸರ್ಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಇಲ್ಲದ, ಬಡ ಮತ್ತು ನಿರಕ್ಷರಿ ಜನರಿಗೆ ಅನ್ಯಾಯವಾಗಿದೆ. ಸೂಕ್ತವಾದ ದಾಖಲೆಗಳನ್ನು ಪಡೆದು ಕಾನೂನು ಹೋರಾಟ ರೂಪಿಸಲಾಗುವುದು” ಎಂದು ತಿಳಿಸಿದ್ದಾರೆ.