ದೇಶ ಕಂಡ ಅಪ್ರತಿಮ ನಾಯಕ ಅಟಲ್ ಜಿ
ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ ಎಂದೇ ಪ್ರಸಿದ್ಧಿ ಪಡೆದವರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜಿ.
ಅಟಲ್ ಬಿಹಾರಿ ವಾಜಪೇಯಿ ಜಿ ಈ ದೇಶ ಕಂಡ ಅಪರೂಪದ ಹೆಮ್ಮೆಯ ಜನನಾಯಕ, ಉತ್ತಮ ಭಾಷಣಕಾರರಾಗಿ, ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುವಂತವರಾಗಿದ್ದರು. ಅವರ ಭಾಷಣ ಕೇಳಲು ಸಹಸ್ರಾರು ಜನ ಸೇರುತ್ತಿದ್ದರು. ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್ ಜಿ ತಮ್ಮ ವಾದವನ್ನು ನಿಚ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು. ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೇ ಮಾತನಾಡುತ್ತಿದ್ದರು. ಉದ್ರಿಕ್ತ ಅಥವಾ ಉದ್ರೇಕವಾದ ಭಾವನೆ ಅವರ ನಡತೆ ಮತ್ತು ನಡುವಳಿಯಲ್ಲಿ ಎಂದು ಕಂಡು ಬಂದಿಲ್ಲ. ಅವರ ಮಾತುಗಳಲ್ಲಿ ಯಾವಾಗಲೂ ಪ್ರಮಾಣಿಕತೆಯೂ ಎದ್ದು ಕಾಣುತ್ತಿತ್ತು.
ಅವರು ಆಡಿದ ಮಾತು ಮಾತಲ್ಲ ಅದು ಮುತ್ತು. ಆ ಸರಳ ಮಾತುಗಾರಿಕೆ ಶುದ್ದ ಸ್ವಚ್ಛ ಮಧುರ ಹಾಗೂ ಕಾವ್ಯಮಯವಾಗಿತ್ತು.ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೇ, ಎಲ್ಲರೊಂದಿಗೆ ಸ್ನೇಹಮಯ ಜೀವನ ಸಾಗಿಸಿದರು. ಎಲ್ಲ ರಾಜಕೀಯ ಮುಖಂಡರ ಅಚ್ಚುಮೆಚ್ಚಿನ ನಾಯಕರಾಗಿದ್ದರು.ಇವರು ರಾಜಕಾರಣದೊಂದಿಗೆ ಅನೇಕ ಸಾಮಾಜಿಕ, ಸಾಂಸ್ಕಾಂತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದುಂಟು. 1961 ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರು. ಆಲ್ ಇಂಡಿಯ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಟ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿದ್ದರು. ಪಂಡಿತ್ ದಿನದಯಾಳು ಉಪಾಧ್ಯಾಯ ಸ್ಮಾರಕ ಸಮಿತಿ, ದೀನದಯಾಳು ಧಾಮ, ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ರಾಜ್ಯಸಭೆ, ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಎಂಬ ಒಕ್ಕೂಟವನ್ನು ರಚಿಸಿ ಮೂರು ಬಾರಿ ಪ್ರಧಾನಮಂತ್ರಿಗಳಾಗಿ ಸರ್ಕಾರ ನಡೆಸಿ, ಅನಿವಾರ್ಯವಾದ ಒಕ್ಕೂಟ ಸರ್ಕಾರ ವ್ಯವಸ್ಥೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಸೇವೆಯನ್ನು ನೀಡಿದರು. ರಾಜಕೀಯ ಸ್ಥಿರತೆಯ ಪ್ರಯತ್ನ, ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಗತಿ, ಉತ್ತಮ ಹೆದ್ದಾರಿಗಳ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ತಮ ವಿದೇಶಾಂಗ ಸಂಬಂಧಗಳು ಇವರ ಸರ್ಕಾರದ ಪ್ರಮುಖ ಸಾಧನೆಗಳೆನ್ನಬಹುದು. ಅದಕ್ಕಾಗಿಯೇ ಭಾರತದ ಶ್ರೇಷ್ಠ ರಾಜಕೀಯ ಗಣ್ಯ ವ್ಯಕ್ತಿಗಳಲ್ಲಿ ಅಟಲ್ಪ ಜಿ ಅಪರೂಪದ ಜನಸಾಮಾನ್ಯರ ಅಚ್ಚುಮೆಚ್ಚಿನ ನಾಯಕರೆಂದು ಜನರು ಪ್ರೀತಿಯಿಂದ ಕರೆಯುತ್ತಾರೆ.
ಅಂದಹಾಗೆ
ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದವರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿ ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ದೇಶವನ್ನು ಮುನ್ನಡೆಸಿದ ಕೀರ್ತಿ ಇವರದು. ಇನ್ನು
ಇವರು ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇದ್ದಿತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು ಒಂದು ಐತಿಹಾಸಿಕ ಸಾಧನೆ. ಅಟಲ್ ಜಿಯವರು ಗ್ರಾಮೀಣ ಬಡಜನರ ಆರ್ಥಿಕ ಸಬಲೀಕರಣದ ಮಹದೋದ್ದೇಶ ಹೊಂದಿ, ಉತ್ತಮ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ, ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅನೇಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಭಾರತ ಒಂದು ಪ್ರಬಲ ಸ್ವಾವಲಂಬೀ ರಾಷ್ಟ್ರವಾಗಬೇಕೆಂಬುದು ಇವರ ಹೆಬ್ಬಯಕೆ. 52ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಂಪುಕೋಟೆಯಲ್ಲಿ ಆಚರಿಸಿದ ಸಂದರ್ಭದಲ್ಲಿ ಭಾಷಣ ಮಾಡುತ್ತಾ “ನನಗೊಂದು ಭವ್ಯ ಭಾರತದ ಕಲ್ಪನೆಯಿದೆ. ಆ ಭಾರತ ಹಸಿವೆಯಿಂದ, ಭಯದಿಂದ ಮುಕ್ತವಾಗಿರುತ್ತದೆ. ಆ ಭಾರತ ನಿರಕ್ಷರತೆ ಮತ್ತು ದಾರಿದ್ರ್ಯದಿಂದ ದೂರವಾಗಿರುತ್ತದೆ” ಎಂದು ಹೇಳಿದ್ದಾರೆ. ಅಲ್ಲದೆ ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀ. ಉದ್ದದ “ಸುವರ್ಣ ಚತುಷ್ಪಥ” ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, “ಸರ್ವ ಶಿಕ್ಷಾ ಅಭಿಯಾನ” ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ನಿಜಕ್ಕೂ ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ.ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡಿದ್ದು ಮರೆಯಲಾಗದು.ಇನ್ನು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ಶ್ರೀವಾಜಪೇಯಿ ಅವರು ದೂರದೃಷ್ಟಿಯ, ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿ, ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿ ಹಗಲಿರುಳು ದುಡಿದಿದ್ದಾರೆ.ಇದಲ್ಲದೆ ಅಟಲ್ ರವರು ಲಾಲ್ ಬಹದ್ದೂರ್ ಶಾಸ್ತ್ರೀಯವರಂತೆ ಸ್ವಂತ ಮನೆ ಹೊಂದಿರಲಿಲ್ಲ. ಗ್ವಾಲಿಯರ್ನಲ್ಲಿ ಇದ್ದ ತಮ್ಮ ತಂದೆಯ ಮನೆಯನ್ನು ವಾಜಪೇಯಿಯವರು ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ. ಈಗ ಅದು ಸಾರ್ವಜನಿಕ ಗ್ರಂಥಾಲಯ. ಇಂದಿನವರೆಗೂ ಅಟಲ್ ರವರಿಗೆ ಸ್ವಂತ ಮನೆಯಿಲ್ಲ. ರಾಜಕೀಯದಲ್ಲಿ ಯಾವುದಾದರೂ ಪದವಿ ಪಡೆದ ವರ್ಷಗಳಲ್ಲಿ ಮನೆ, ಕಾರು, ಹಣ ಮಾಡಿಕೊಳ್ಳವ ಜನರಿದ್ದಾರೆ. ಆದರೆ ಕಳೆದ 45 ವರ್ಷಗಳಿಂದ ರಾಜಕಿಯದಲ್ಲಿದ್ದು ಇನ್ನು ಸ್ವಂತ ಮನೆ ಹೊಂದದಿರುವುದು ಅಚ್ಚರಿಯ ಸಂಗತಿ.
ಒಟ್ಟಿನಲ್ಲಿ ವಾಜಪೇಯಿಯವರ ರಾಜಕೀಯ ಚತುರತೆಯನ್ನು, ಇಚ್ಚಾ ಶಕ್ತಿಯನ್ನು, ಆಡಳಿತ ವೈಖರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಜೊತೆಗೆ
ಪಸರಿಸಲು ಫೋಖ್ರಾನ್ ಸ್ಫೋಟವೂ ಮುಖ್ಯ ಪಾತ್ರ ವಹಿಸಿತು ಎಂಬುದು ಯಾರು ಅಲ್ಲಗಳೆಯುವಂತಿಲ್ಲ.ಆದ್ದರಿಂದ ಇಂತಹ ಮಾಹಾನ ವ್ಯಕ್ತಿ ದೇಶದ ಜನತೆಗೆ ಮತ್ತು ರಾಜಕೀಯ ಮುಖಂಡರಿಗೆ ಮಾದರಿ ಎಂದೇ ಹೇಳಬಹುದಾಗಿದೆ. ಅದಕ್ಕಾಗಿ ಇವರನ್ನು 90ರ ದಶಕದ ಭಾರತದ ರಾಷ್ಟ್ರ ರಾಜಕೀಯದ ಅತ್ಯಂತ ಪ್ರಬಲ ವ್ಯಕ್ತಿಯೆಂದು ಪರಿಗಣಿಸಿ ಭಾರತ ಸೇರಿದಂತೆ ವಿಶ್ವ ಸಮುದಾಯ ಕರೆಯುತ್ತದೆ.ಆರ್ಥಿಕ ಸಂಕಷ್ಟಗಳಲ್ಲಿಯೂ ಯಶಸ್ವಿಯಾಗಿ ದೇಶ ಮುನ್ನಡೆಸಿದ್ದನ್ನು ಅಂತರಾಷ್ಟ್ರೀಯ ನಾಯಕರು, ದೇಶದ ರಾಜಕೀಯ ಮುಖಂಡರು ಆತ್ಮಸಾಕ್ಷಿಯಾಗಿ ಒಪ್ಪಿಕೊಳ್ಳುತ್ತಾರೆ.ಆದಕಾರಣ ಇಂತಹ ನಿಸ್ವಾರ್ಥ ಸೇವೆಗಳ ಮಾದರಿ ಸೇವಕ ಇನ್ನೊಮ್ಮೆ ಈ ದೇಶದಲ್ಲಿ ಹುಟ್ಟಿ ಬರಲೆಂದು ಬಯಸುತ್ತೇವೆ.
ಗೌರವದ ಭಕ್ತಿಯ ನಮನ :
ವಾಜಪೇಯಿ ರವರ ಜೀವನದುದ್ದಕ್ಕೂ ಕರ್ತವ್ಯನಿಷ್ಠೆ, ನ್ಯಾಯಬದ್ಧ ತೀರ್ಮಾನಗಳು, ಅಭಿವೃದ್ಧಿಯ ವಿಚಾರಗಳು ಸೇರಿದಂತೆ ಇನ್ನಿತರ ಸಮಾಜಮುಖಿ ಸೇವೆಗಳಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೇ ದೇಶದ ಉನ್ನತಿಗಾಗಿ ಹಗಲಿರುಳು ಶ್ರಮಿಸಿದ ಧೀಮಂತರು.
ಅದಕ್ಕಾಗಿಯೇ ಅಜಾತ ಶತ್ರು ಅಟಲ್ ಜಿಯರನ್ನು ಪ್ರತಿಯೋಬ್ಬ ಭಾರತೀಯ ಪ್ರಜೆಯೂ ಅವರನ್ನು ಗೌರವದಿಂದ ನೆನೆಯಬೇಕು. ಅವರ ವಿಚಾರ ಧಾರೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗಲೇ ಮಾತ್ರ ನಾವು ಅಟಲ್ ಜೀ ರವರ ಜನ್ಮದಿನಾಚರಣೆ ಆಚರಣೆ ಮಾಡಿದ್ದಕ್ಕೂ ಸ್ವಾರ್ಥಕವಾಗಲಿದೆ.
ಅಟಲ್ ಜೀ ರವರನ್ನು ಈ ದಿನದಂದು ಭಕ್ತಿಯಿಂದ ನೆನೆಯುತ್ತಾ (25 – 12 – 1924) ಜನಿಸಿದ ಈ ಶುಭದಿನದಂದು ಅಟಲ್ ಜಿ ಅವರಿಗೆ ಗೌರವ ಪೂರ್ವಕವಾದ ಭಕ್ತಿ ನಮನಗಳನ್ನು ಸಲ್ಲಿಸುತ್ತೇವೆ.
…….…….
ಲೇಖಕರು : ಸಂಗಮೇಶ ಎನ್ ಜವಾದಿ.
ಸಾಹಿತಿ, ಪತ್ರಕರ್ತ, ಹೋರಾಟಗಾರರು, ಬೀದರ ಜಿಲ್ಲೆ.