ನವದೆಹಲಿ: ನನಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. ಇದರ ಬಗ್ಗೆ ಅನುಮಾನವಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಕಲಿ ಪತ್ರವನ್ನು ಸೃಷ್ಟಿಸಿರಬಹುದೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂಶಯ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅಧಿಕೃತವಾಗಿ ಶೋಕಾಸ್ ನೋಟಿಸ್ ಬರುವವರೆಗೂ ಯಾವುದೇ ಪ್ರತಿಕ್ರಿಯೆ ನೀಡಬಾರದೆಂದು ಸುಮನಿದ್ದೇನೆ. ನನಗೆ ಈಗಲೂ ಈ ಪತ್ರದ ನೈಜ್ಯತೆ ಬಗ್ಗೆ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ವಿಜಯೇಂದ್ರ ಅವರ ತಂದೆಯ ಸಹಿಯುಳ್ಳ ಪತ್ರಕ್ಕೆ ಸಹಿ ಹಾಕಿದ್ದಾರೆಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರೇ ಹೇಳಿದ್ದಾರೆ. ಹಾಗಾಗಿ ನನಗೆ ಪತ್ರದ ಬಗ್ಗೆಯೇ ಸಂಶಯವಿದೆ. ಒಂದು ವೇಳೆ ಅಧಿಕೃತ ಶೋಕಾಸ್ ನೋಟಿಸ್ ನೀಡಿದರೆ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.
ನಾನು ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದಿರುವುದಕ್ಕೆ ಕೆಲವರು ನನ್ನ ವಿರುದ್ಧ ಷಡ್ಯಂತರ ನಡೆಸುತ್ತಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಇದು ವಿಜಯೇಂದ್ರ ಸೃಷ್ಟಿಸಿರುವ ನಕಲಿ ಪತ್ರ. ಅಷ್ಟಕ್ಕೂ ನೋಟಿಸ್ ಬಂದರೆ ಉತ್ತರ ಕೊಡಲು ಸಮರ್ಥನಿದ್ದೇನೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಯತ್ನಾಳ್ ಅನೂನ್ಯವಾಗಿದ್ದಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಕೆಂಡ ಕಾರಿದ ಅವರು, ನಾನು ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮನೆಗೆ ಹೋಗಿ ಪತ್ರಕ್ಕೆ ಸಹಿ ಹಾಕಿರುವುದಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಎಸೆದರು.
ನಾನು ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಎಂದಿಗೂ ಹೋಗಿಲ್ಲ. ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಡಿ.ಕೆ.ಸುರೇಶ್ಗೆ ಮಾನಮರ್ಯಾದೆ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು. ವಿಜಯೇಂದ್ರ ಮತ್ತು ಯಡಿಯೂರಪ್ಪ ಹಿಂದೆಯೂ ಹೊಂದಾಣಿಕೆ ಮಾಡಿಕೊಂಡಿದ್ದರು. ಹೀಗಾಗಿ ಅವರು ಕಾಂಗ್ರೆಸ್ ವಿರುದ್ಧ ಎಂದಿಗೂ ಮಾತನಾಡುವುದಿಲ್ಲ. ವಿಜಯೇಂದ್ರ ತುಂಬ ಚಲೋ ಇದ್ದಾನೆ. ಯಡಿಯೂರಪ್ಪ ಬೆದರಿಕೆಯಿಂದಾಗಿ ರಾಜ್ಯಾಧ್ಯಕ್ಷರ ಸ್ಥಾನ ನೀಡಿದ್ದಾರೆಯೇ ಹೊರತು ಬೇರೆ ಯಾವ ಅರ್ಹತೆಗಳಿವೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಮೇಲೆ ತುಂಬ ಗಂಭೀರವಾದ ಆರೋಪಗಳಿವೆ. ಜಾಮೀನು ರಹಿತ ವಾರೆಂಟ್ಗಳಿವೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ಗೆ ಶರಣಾಗಿದ್ದಾರೆ. ನೋಟಿಸ್ಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.
ಸಚಿವ ಈಶ್ವರ್ ಖಂಡ್ರೆ ವಿರುದ್ಧವೂ ಕೆಂಡ ಕಾರಿದ ಯತ್ನಾಳ್, ಸರ್ಕಸ್ನಲ್ಲಿ ಒಬ್ಬ ಜೋಕರ್ ಇದ್ದಂತೆ ಇವರು ಅದೇ ರೀತಿ. ವೀರಶೈವ ಲಿಂಗಾಯಿತ ಸಮುದಾಯ ಕೇವಲ ಮೂವರ ಕಪಿಮುಷ್ಟಿಯಲ್ಲಿದೆ. ಬಸವಣ್ಣನವರ ಬಗ್ಗೆ ಇವರಿಗೆ ಏನೇನೂ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು.