ಯಾದಗಿರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಕಳ್ಳತನ ಪ್ರಕರಣಗಳು, ಅವರಿವರ ಬಂಧನ ಹೈಡ್ರಾಮಗಳು ಕೇವಲ ಜನರನ್ನು ಏಮಾರಿಸಲು ನಡೆಸುವ ಪ್ರಯತ್ನಗಳು. ಇಲ್ಲಿ ಯಾರಿಗೂ ನಿಜವಾದ ಕಾಳಜಿ ಇಲ್ಲ. ಕಾಳಜಿ ಇದ್ದರೆ ಈ ಜಿಲ್ಲೆ ಇಷ್ಟೊಂದು ದಾರುಣವಾದ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಇಲ್ಲಿನ ಆಡಳಿತಗಾರರು ಜನರನ್ನು ಏಮಾರಿಸಿ ಗೆಲ್ಲುವ ಮೂಲಕ ಅವ್ಯಾಹತವಾದ ಲೂಟಿಗೆ ಇಳಿದಿದ್ದಾರೆ. ರಾಜಕಾರಣಿಗಳ ಬೆಂಬಲವಿಲ್ಲದೆ ಯಾವ ಅಕ್ರಮ ದಂದೆಗಳು ನಡೆಯುವುದಿಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಆನ ಆಕ್ರೋಶ ಅಕ್ಕಿ ಕಳ್ಳತನ ಪ್ರಕರಣ, ಮಣಿಕಂಠ ರಾಥೋಡನ ಬಂಧನದ ಹೈಡ್ರಾಮ, ಚಾಮನಾಳ ಮಲ್ಲಿಕನ ಹೆಸರು ಪ್ರಸ್ತಾಪ ಈ ಅಂಶಗಳ ಮೇಲೆ ಮಾಹಿತಿ ಸಂಗ್ರಹಕ್ಕಿಳಿದಾಗ ಜನರಿಂದ ಈ ಅಭಿಪ್ರಾಯಗಳು ವ್ಯಕ್ತವಾಗಿವೆ.
ಶಹಾಪುರು, ಸುರಪುರ, ಯಾದಗಿರಿ, ಗುರಮಿಟ್ಕಲ್ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಪಡಿತರ ವಿತರಣೆ ವ್ಯವಸ್ಥೆಯ ಜಾಲದಲ್ಲಿ ಅಕ್ಕಿ ಕಳ್ಳತನಕ್ಕೆ ಬೆಂಬಲವಿದೆ. ಪಡಿತರ ಹಂಚುವವನು ಇದರ ಪ್ರಾಥಮಿಕ ಹಂತದ ಕಳ್ಳನಾಗಿದ್ದಾನೆ. ಪಡಿತರ ಚೀಟಿದಾರರಿಗೆ ತೂಕದಲ್ಲಿ ವಂಚಿಸುವ ಮೂಲಕ ಉಳಿತಾಯವಾಗುವ ಹೆಚ್ಚುವರಿ ಅಕ್ಕಿಯನ್ನು ಕಳ್ಳತನಕ್ಕೆ ಉಪಯೋಗಿಸಲಾಗುತ್ತಿದೆ. ನ್ಯಾಯಬದ್ಧವಾಗಿ ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣೆ ಮಾಡಿದರೆ ಕಳ್ಳತನಕ್ಕೆ ಅಕ್ಕಿ ಎಲ್ಲಿ ಉಳಿಯುತ್ತದೆ? ಇದೊಂದು ವ್ಯವಸ್ಥಿತ ಜಾಲವಾಗಿದ್ದು ಈ ದಂದೆಯೂ ಬಹುಕಾಲದಿಂದ ನಡೆಯುತ್ತಾ ಬಂದಿದೆ. ಸದ್ಯ ಸರ್ಕಾರ ಡಿಜಿಟಲ್ ತಂತ್ರಾಂಶವನ್ನು ಕಾರ್ಯಾಂಗದ ವ್ಯವಹರಣೆಗೆ ಬಳಸಿಕೊಳ್ಳುತ್ತಿರುವುದರಿಂದ ಜನರು ಜಾಗೃತವಾಗಿರುವುರಿಂದ ಈ ಕಳ್ಳತನಗಳು ಬಯಲಿಗೆ ಬರತೊಡಗಿವೆ. ಇದು ಈ ಜಿಲ್ಲೆಯ ರಾಜಕಾರಣಿಗಳ ಸಹಕಾರವಿಲ್ಲದೆ ಪ್ರೋತ್ಸಾಹವಿಲ್ಲದೆ ನಡೆಯುವುದಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ರಾಜಕೀಯ ಮುಖಂಡರೊಬ್ಬರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಣಿಕAಠ ರಾಥೋಡ ಮಾಮೂಲಿ ವ್ಯಕ್ತಿಯಲ್ಲ. ಆತ ಕಳೆದ ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ, ಆತ ಪ್ರಿಯಾಂಕ್ ಖರ್ಗೆ ವಿರುದ್ಧ ಚಿತ್ತಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ. ಬಿಜೆಪಿಯ ಘನ ನಾಯಕರು ಆತನ ಗೆಲುವಿಗೆ ಶಪಥಗೈದು ಪ್ರಚಾರಕ್ಕೆ ಬಂದಿದ್ದರು. ಹಂಗಾಮಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆರ್ ಅಶೋಕ್, ಚಿತ್ರನಟಿ ಶೃತಿ, ಸುರಪುರ ಮತಕ್ಷೇತ್ರದ ಮಾಜಿ ಶಾಸಕ ನರಸಿಂಹ ನಾಯಕ ರಾಥೋಡ್ ಪರವಾಗಿ ಪ್ರಚಾರಕ್ಕೆ ಬಂದಿದ್ದರು. ನೂರಾರು ಪ್ರಕರಣಗಳ ಆರೋಪಿಗೆ ಬಿಜೆಪಿ ಟಿಕೆಟ್ ನೀಡಿರುವುದು ಅಚ್ಚರಿಗೆ ಕಾರಣವಾಗಿತ್ತು ಮತ್ತು ಜನರಿಂದ ಬಿಜೆಪಿಗರು ಕಳ್ಳರ ಅಪರಾಧಿಗಳ ಬೆಂಬಲಿಗರು ಎನ್ನುವ ಮಾತು ಜನರಿಂದ ವ್ಯಕ್ತವಾಗಿತ್ತು. ಅನೇಕರು ಬಿಜೆಪಿಯನ್ನು ವ್ಯಂಗಿಸಿದ್ದರು, ಟೀಕಿಸಿದ್ದರು. ಇನ್ನೂ ಚಾಮನಾಳಿನ ಮಲ್ಲಿಕ್ ವಿಷಯಕ್ಕೆ ಬರುವುದಾದರೆ ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಆತ ಶಹಾಪೂರಿನ ಪಾರಂಪರಿಕ ಶಾಸಕ ಸದ್ಯದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪೂರು ಇವರ ಬೆಂಬಲಿಗ. ಈ ಕಳ್ಳರನ್ನು ಬೆಳೆಸಿದ್ದು ಇಲ್ಲಿನ ಕೆಟ್ಟ ರಾಜಕಾರಣಿಗಳು. ಯಾದಗಿರಿ ಜಿಲ್ಲೆಯ ಮತಕ್ಷೇತ್ರಗಳು ಸೀಮಿತ ಕುಟುಂಬಗಳಿಗೆ ಮೀಸಲು ಎಂಬಂತಾಗಿದ್ದು ಇಲ್ಲಿ ಪರ್ಯಾಯ ನಾಯಕತ್ವಗಳು ಸೃಷ್ಟಿಯಾಗಿಲ್ಲ. ಇತರೆ ನಾಯಕರನ್ನು ಬೆಳೆಸುವ ಇಚ್ಚಾಶಕ್ತಿಯೂ ಈ ಕುಟುಂಬಗಳಿಗೆ ಇಲ್ಲ. ನಾಯಕರು ಸೃಷ್ಟಿಯಾಗದಂತೆ ವ್ಯವಸ್ಥಿತವಾದ ಸಂಚುಗಳನ್ನು ಸೀಮಿತ ಅಥವಾ ರಾಜಕಾರಣವನ್ನು ಕ್ಷೇತ್ರವನ್ನು ಗುತ್ತಿಗೆ ಹಿಡಿದ ಕುಟುಂಬಗಳು ರೂಪಿಸಿವೆ ಎನ್ನಲಾಗುತ್ತಿದೆ.
ಬಹುತೇಕ ರೆಡ್ಡಿಗಳ ತೆಕ್ಕೆಯಲ್ಲಿರುವ ಯಾದಗಿರಿ ಜಿಲ್ಲೆಗೆ ಒಟ್ಟು ನಾಲ್ಕು ಮತಕ್ಷೇತ್ರಗಳಿವೆ. ಗುರಮಿಟ್ಕಲ್, ಯಾದಗಿರಿ, ಶಹಾಪೂರು, ಸುರಪುರ. ಸುರಪುರ ಮತಕ್ಷೇತ್ರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದ್ದು ಇಲ್ಲಿನ ರಾಜಕಾರಣ ಕೇವಲ ಎರಡು ಕುಟುಂಬಗಳಿಗೆ ಸೀಮಿತವಾಗಿದೆ. ಇಂತಿರುವಾಗ ಈ ಕುಟುಂಬಗಳು ಗೆದ್ದರೂ ಸೋತರೂ ಯಾವುದೇ ಚಿಂತೆ ಮಾಡುವುದಿಲ್ಲ. ಕಾರಣ: ಅವರು ಸೆಟ್ ಮಾಡಿಕೊಂಡ ಆಮದನಿಗಳು ಬರುತ್ತಲೇ ಇರುತ್ತವೆ. ರಾಜಕಾರಣಿ, ಶಾಸಕ, ರಾಜಕೀಯ ಪಕ್ಷಗಳ ಬೆಂಬಲ ಮತ್ತು ಪ್ರೋತ್ಸಾಹವಿಲ್ಲದೆ ಕಳ್ಳರಿಗೆ ಪೋಲಿಸರು ಸ್ನೇಹಿತರಾಗುವುದಲ್ಲ ಎನ್ನುವುದು ಆರೋಗ್ಯವಂತ ಜನರ ಅಭಿಪ್ರಾಯವಾಗಿದೆ.
ಮಣಿಕಂಠ ರಾಥೋಡ, ಚಾಮನಾಳಿನ ಮಲ್ಲಿಕ್ ಅಕ್ಕಿ ಕಳ್ಳತನದ ಕಳ್ಳರಾದರೆ ಈ ಜಿಲ್ಲೆಯಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡಲು ಬೇರೆ ಬೇರೆ ರೀತಿಯ ಜನಗಳನ್ನು ನೇಮಿಸಿಕೊಳ್ಳಲಾಗಿದೆ. ಸ್ವಾತಂತ್ರ್ಯ ಬಂದು ಇಷ್ಟೊಂದು ಸುದೀರ್ಘ ಕಾಲವಾದರೂ ನಮ್ಮ ಭಾಗದ ದಾರಿದ್ರ್ಯ ಅಳಿಯದಿರುವಿಕೆಗೆ ಕಾರಣ ಸ್ಪರ್ಧೆ ಇಲ್ಲದ ರಾಜಕಾರಣ ಮಾತ್ರವಲ್ಲದೆ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಇಲ್ಲಿನ ರಾಜಕಾರಣಿಗಳು ಸೆಟ್ ಮಾಡಿಕೊಂಡ ಕಳ್ಳರ ಹಸ್ತಕ್ಷೇಪವೇ ಕಾರಣ ಎನ್ನುತ್ತಾರೆ ಹೊರಾಟಗಾರರೊಬ್ಬರು.
ಇಂತಿರಲು, ಮಣಿಕಂಠ ರಾಥೋಡನ ಬಂಧನ, ಚಾಮನಾಳ ಮಲ್ಲಿಕನ ನಿರ್ಲಕ್ಷö್ಯ, ಇವೆಲ್ಲವೂ ನಾಟಕ. ಇವರನ್ನು ಬಂಧಿಸಿದ ಮಾತ್ರಕ್ಕೆ ಕಳ್ಳತನಗಳು ನಿಲ್ಲುವುದಿಲ್ಲ. ಜನರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಖೂದ್ದೂ ಶಾಸಕ, ಸಂಸದರೂ ಸೇರಿದಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕಳ್ಳರ ಪಾಲು ಮಾಡುತ್ತಿದ್ದಾರೆ. ಸರ್ಕಾರದ ನಿಯಮಗಳು, ಕಾನೂನು ಮತ್ತು ಸಂವಿಧಾನ ಕೇವಲ ನೆಪ ಮಾತ್ರ. ಇದೊಂದು ನಿರ್ಲಕ್ಷಿತ ಜಿಲ್ಲೆ, ಇದು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಕಳ್ಳಕಾಕರ ಸಮೃದ್ಧ ಹುಲ್ಲುಗಾವಲು ಎನ್ನುವುದು ಪ್ರಜ್ಞಾವಂತ ಜನರ ಅಭಿಪ್ರಾಯವಾಗಿದೆ.
ಕಳ್ಳರಿಗೂ ಪೋಲಿಸರಿಗೂ ವ್ಯತ್ಯಾಸ ಕಂಡು ಹಿಡಿಯುವುದು ಜಟಿಲ ಪ್ರಶ್ನೆ ಎನ್ನುವುದು ಜನರ ಅಂತಿಮ ಅಭಿಪ್ರಾಯವಾಗಿದೆ.
ವರದಿಗಾರ