ಬಸವಾದಿ ಶರಣರ ಕರ್ಮಭೂಮಿ, ಋಷಿ ಮುನಿಗಳು ನಡೆದಾಡಿದ ಪಾವನನೆಲ.ಭಾವೈಕ್ಯತೆಯ ಪವಿತ್ರ ಭೂಮಿ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ವಚನ ಸಾಹಿತ್ಯ. ಕಲ್ಯಾಣ ನಾಡಿನ ಮುಕುಟವೆಂದೇ ಪ್ರಸಿದ್ಧಿ ಪಡೆದು ಜನಸಾಮಾನ್ಯರ ಪ್ರೀತಿಯ ಶ್ರೀ ಸುಕ್ಷೇತ್ರಗಳೆಂದೇ ಪ್ರಖ್ಯಾತ ಪಡೆದ ನೆಲವೇ ಶ್ರೀ ಸುಕ್ಷೇತ್ರ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮಗಳು.
ಶ್ರೀ ಸುಕ್ಷೇತ್ರ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮಗಳು ಇಂದಿನ ಪರಮ ಪೂಜ್ಯ ತಪಸ್ವಿ, ತ್ಯಾಗಯೋಗಿ, ವೀರ ಸನ್ಯಾಸಿಗಳ ಪಾವನ ಪವಿತ್ರ ಭೂಮಿ. ಇಲ್ಲಿ
ಸರ್ವರನ್ನು ಸಮಭಾವದಿಂದ ಕಾಣಲಾಗುತ್ತದೆ. ಸರ್ವ ಜನಾಂಗವನ್ನು ಅತ್ಯಂತ ಗೌರವ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿದೆ. ಮಾನವೀಯತೆಯ ಕಾರ್ಯಕ್ಕೆ ಹಾಗೂ ಕಾಯಕ ಸಿದ್ಧಾಂತಕ್ಕೆ ಆದ್ಯತೆ ನೀಡಿದ್ದಾರೆ. ಬಸವಾದಿ ಪ್ರಮಥರ ಹಾಗೂ ವಿಶೇಷವಾಗಿ ಶಿವಶರಣೆ ಅಕ್ಕಮಹಾದೇವಿ ಅಕ್ಕನವರ ವೈಚಾರಿಕ
ಚಿಂತನೆಗಳು ಜನಸಾಮಾನ್ಯರಲ್ಲಿ ನಿರಂತರವಾಗಿ ಬಿತ್ತುವ ಕೆಲಸ ಚಾಚೂ ತಪ್ಪದೇ ಶ್ರೀಗಳು ಮಾಡಿಕೊಂಡು ಬರುತ್ತಿದ್ದಾರೆ. ಅಂತೆಯೇ
ಶ್ರೀ ಕ್ಷೇತ್ರಗಳು ಹಲವು ವರ್ಷಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಹಾಗೂ ತೆಲಂಗಾಣ ರಾಜ್ಯದ ಸರ್ವಾಂಗೀಣ, ಸರ್ವೊತ್ತಮ
ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಅದಕ್ಕಾಗಿಯೇ ಇಂದು ಕಲ್ಯಾಣ ಕರ್ನಾಟಕ ಭಾಗ ಹಾಗೂ ತೆಲಂಗಾಣ ರಾಜ್ಯದಲ್ಲಿ ಹೆಮ್ಮೆಯ ಜನಪರ – ರೈತಪರ, ಬಡವರ – ನೊಂದವರ ಪರವಾಗಿ ನಿಂತು, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ
ಆಶ್ರಮಗಳಾಗಿ ಬೆಳೆಯುತ್ತಿವೆ.
ಈ ಎಲ್ಲಾ ಬೆಳವಣಿಗೆಗೆ ಕಾರಣಿಕರ್ತರೆಂದರೆ ಈ ಆಶ್ರಮಗಳ ಪೀಠಾಧ್ಯಕ್ಷರಾದ ಪರಮ ಪೂಜ್ಯ ಬಸವಲಿಂಗ ಅವಧೂತ ಶರಣರು ಎಂದು ಹೆಮ್ಮೆಯಿಂದ ಹೇಳಲೇಬೇಕು.
ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ತಾಲ್ಲೂಕಿನ ನ್ಯಾಲಕಲ್ ಮಂಡಲ ವ್ಯಾಪ್ತಿಯ ರತ್ನಾಪುರ ಗ್ರಾಮದ ಮಾತೋಶ್ರೀ ಬಂಡೆಮ್ಮ ಮತ್ತು ರಾಚಪ್ಪ ಮೂಲಗೆ ದಂಪತಿಗಳ ಮಗನಾಗಿ ದಿನಾಂಕ 26/06/1976 ರಂದು ಜನಿಸಿದ ಶ್ರೀಗಳು.ಇವರ ಪೂರ್ವಾಶ್ರಮದ ಹೆಸರು ಬಸವರಾಜ ಮೂಲಗೆ ಆಗಿತ್ತು.
ಸ್ವಗ್ರಾಮ ರತ್ನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಶಿಕ್ಷಣ ಪಡೆದರು. ಕರ್ನಾಟಕ ರಾಜ್ಯದ ಗಡಿ ಜಿಲ್ಲೆಯಾದ ಬೀದರ ನಗರದ ಪ್ರತಿಷ್ಠಿತ ಎನ್.ಎಫ್.ಎಚ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ, ಪದವಿಪೂರ್ವ ಶಿಕ್ಷಣ ಪೂರೈಸಿದರು.
ನಂತರ ಕವಿರತ್ನ ಕಾಳಿದಾಸ ಪದವಿ ಕಾಲೇಜಿನಲ್ಲಿ ಬಿ.ಎ ಶಿಕ್ಷಣ ಪಡೆದರು. ಹಾಗೆಯೇ
ಭಾಲ್ಕಿ ತಾಲ್ಲೂಕಿನ ನಿಟ್ಟೂರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಸಹ ಪೂರ್ಣಗೊಳಿಸಿದರು. ಬಳಿಕ ಧಾರವಾಡಕ್ಕೆ ತೆರಳಿ, ಅಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಮತ್ತು ಎಂ.ಎ ಫಿಲಾಸಫಿ ಸ್ನಾತಕೋತ್ತರ ಪದವಿ ಪಡೆದು, ಚಿನ್ನದ ಪದಕಕ್ಕೂ ಭಾಜನರಾಗಿದ್ದಾರೆ.
ಆಧ್ಯಾತ್ಮಿಕ ಹಸಿವು : ಪದವಿ ವ್ಯಾಸಂಗದಲ್ಲಿದ್ದಾಗಲೇ ಶ್ರೀಗಳು ಆಧ್ಯಾತ್ಮಿಕ ಒಲವು ಬೆಳೆಸಿಕೊಂಡರು. ಶಿಕ್ಷಣ ಪೂರ್ಣಗೊಳಿಸಿದ ನಂತರ ಪರಮ ಹಂಸ ಪಾಗಲ್ ಬಾಬಾ ಅವರಿಂದ ಜ್ಞಾನ ದೀಕ್ಷೆ ಪಡೆದು, ಲೋಕ ಕಲ್ಯಾಣಕ್ಕೆ ಸಮರ್ಪಿಸಿಕೊಂಡರು.ತದನಂತರ
ಹಿಮಾಲಯ ಪರ್ವತದಲ್ಲಿ ತಪಸ್ಸುಗೈದರು. ಕಾಶಿ, ಶ್ರೀಶೈಲ, ಹರಿದ್ವಾರ, ಋಷಿಕೇಶ, ಬದ್ರಿನಾಥ, ಕೇದಾರನಾಥ ಮೊದಲಾದ ಕಡೆಗಳಲ್ಲಿಯೂ ತಪೋ ಅನುಷ್ಠಾನಗೈದು, 2006 ರಲ್ಲಿ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಕುಪ್ಪಾನಗರ-ಚಿಲ್ಲಾಪಲ್ಲಿ ಮಧ್ಯದಲ್ಲಿ ಇರುವ ಮಲ್ಲಯ್ಯಗಿರಿಗೆ ಬಂದು ನೆಲೆಸಿದರು.
ಆಗ ಈ ಒಂದು ಸ್ಥಳದಲ್ಲಿ ಆಶ್ರಮ ಇರಲಿಲ್ಲ. ಆದರೂ ಪೂಜ್ಯರು ದೃತಿಗಿಡದೇ ಇದನ್ನೇ ಸವಾಲಾಗಿ ಸ್ವೀಕರಿಸಿ, ತನು, ಮನ, ಭಕ್ತಿಯಿಂದ ಆಶ್ರಮ ಕಟ್ಟಿದರು. ಪ್ರಯುಕ್ತ ಭಕ್ತರ ಇಚ್ಚೆಯಂತೆ ಆಶ್ರಮದ ಪೀಠಾಧಿಪತಿಯಾಗಿ ಪೂಜ್ಯ ಬಸವಲಿಂಗ ಅವಧೂತ ಶರಣರು ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಅಂತೆಯೇ ದಿನನಿತ್ಯವೂ ಪೂಜೆ, ಪ್ರವಚನ, ಧ್ಯಾನ ಮಾಡುತ್ತ, ಭಕ್ತರ ಭಾವನೆಗಳಿಗೆ ಗೌರವ ನೀಡುತ್ತ, ಅವರೆಲ್ಲ ಕಷ್ಟಗಳಿಗೆ ಸ್ಪಂದನೆ ಮಾಡುತ್ತಿದ್ದಾರೆ.
ಅಂದಿನಿಂದ ಇಂದಿನವರೆಗೂ
ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಆಶ್ರಮದ ಸರ್ವೋತ್ತೋಮುಖ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ.
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಹತ್ತು ಹಲವು ವಿನೂತನ ಅಭಿವೃದ್ಧಿಯ ಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಶ್ರೀಕ್ಷೇತ್ರದ ಶ್ರೇಯಸ್ಸಿಗಾಗಿ, ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಟ್ಟ ಚಟಗಳಿಗೆ ದಾಸರಾದ ಎಷ್ಟೋ ವ್ಯಕ್ತಿಗಳನ್ನು ತಿದ್ದಿ ತೀಡಿ ಸರಿದಾರಿಗೆ ತಂದು ಅವರ ನೆಮ್ಮದಿ ಜೀವನಕ್ಕೆ ಕಾರಣಿಕರ್ತರಾಗಿದ್ದಾರೆ. ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಂಡು ಅನೇಕ ಕಾರ್ಯಕ್ರಮಗಳನ್ನು ನೀಡಿ ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಜನರಿಗೆ ಮಾದರಿಯಾಗಿದ್ದಾರೆ.
ಮಾನವರ ಆರೋಗ್ಯಕರ ಬೆಳವಣಿಗೆಗಾಗಿ ಯೋಗ ಶಿಬಿರಗಳು ಹಾಗೂ ಆಯುರ್ವೇದ ಶಿಬಿರಗಳು ನಡೆಸಿಕೊಂಡು ಬರುತ್ತಿದ್ದಾರೆ. ಅಂತೆಯೇ ಹೀಗೆ
ಅನೇಕ ಯೋಜನೆಗಳನ್ನು ಹಾಕಿಕೊಂಡು ಸೇವಾ ಕೈಂಕರ್ಯಗಳು ಮಾಡುತ್ತಿದ್ದಾರೆ. ಬಸವಾದಿ ಶರಣರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ವಿಚಾರ ಮತ್ತು ಚಿಂತನಾ ಗೋಷ್ಠಿಗಳನ್ನು ಹಮ್ಮಿಕೊಂಡು ದಾರ್ಶನಿಕರ ತತ್ವಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ
ಜನಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ನಿತ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಭಾಗಗಳಲ್ಲಿ ನಡೆದಾಡುವ ಶರಣರು ಎಂದೇ ಸುಪ್ರಸಿದ್ಧ ಪಡೆದಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಅಹಂಕಾರ, ದರ್ಪ, ದೌಲತ್ತುಗಳನ್ನು ಪ್ರದರ್ಶಿಸದೇ, ಸರ್ವ ಪರಿತ್ಯಾಗಿಯಾಗಿ, ಸಹನೆ, ತಾಳ್ಮೆ ,ಸೌಜನ್ಯತೆ, ವಿನಮ್ರತೆಯ
ಅಕ್ಕರೆಯಿಂದ ಜನಸಾಮಾನ್ಯರನ್ನು ಹಾಗೂ ಮಕ್ಕಳನ್ನು ಗೌರವಿಸುತ್ತಾರೆ. ಅದಕ್ಕಾಗಿ ಇವರನ್ನು ಜನಸಾಮಾನ್ಯರ ಸ್ನೇಹ ಜೀವಿ ಶ್ರೀಗಳೆಂದೇ ಕರೆಯುವುದುಂಟು. ಇವರ ಪ್ರಾಮಾಣಿಕತೆ, ಪ್ರಬುದ್ಧತೆ, ನಿಷ್ಕಲ್ಮಶತೆಯಿಂದ ಲಕ್ಷಾಂತರ ಬಡವರಿಗೆ ಅನೇಕ ಸೌಲಭ್ಯಗಳನ್ನು ಒದಿಗಿಸಿದ್ದಾರೆ. ಹೀಗೆ ಶ್ರೀಗಳ ಕಾರ್ಯ ಚಟುವಟಿಕೆಗಳು ಸದ್ದುಗದ್ದಲವಿಲ್ಲದೆ ನಿತ್ಯ ನಿರಂತರವಾಗಿ ಸೇವಾ ನಿಷ್ಠೆಯ ಕಾರ್ಯಗಳು ಚಾಚೂ ತಪ್ಪದೆ ಸಾಗರೋಪಾದಿಯಾಗಿ ಸಾಗುತ್ತಿವೆ. ಜನಮಾನಸಗೊಂಡಿವೆ ಎಂಬುದಂತೂ ಅಷ್ಟೇ ಸತ್ಯ.ಅದೇ ರೀತಿ ಪರಮ ಪೂಜ್ಯ ಬಸವಲಿಂಗ ಅವಧೂತ ಶರಣರು ದಿನನಿತ್ಯವೂ ಸೇವಾ ಕೈಂಕರ್ಯಗಳು ಯಾವುದೇ ಹಮ್ಮುಗಳಿಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ. ಜನಪರ, ರೈತಪರ, ಬಡವರ ಪರ, ಕೂಲಿ ಕಾರ್ಮಿಕರ, ನೊಂದವರ ಧ್ವನಿಯಾಗಿದ್ದಾರೆ. ಹೀಗಾಗಿಯೇ ಪೂಜ್ಯರ ನಿಷ್ಕಲ್ಮಶ
ಶ್ರದ್ಧಾ ಭಕ್ತಿಯ ಸೇವಾ ಕಾರ್ಯಗಳು ಐತಿಹಾಸಿಕ ಮತ್ತು ಶ್ಲಾಘನೀಯ ಸೇವಾ ಕೆಲಸ ಎಂದೇ ಹೆಮ್ಮೆಯಿಂದ ಹೇಳಬಹುದು.
ಅದಕ್ಕಾಗಿಯೇ ಪೂಜ್ಯರು ಸರ್ವ ಜನಾಂಗದ ಶಾಂತಿಯ ತೋಟದ ರೂವಾರಿಗಳು, ಮಾನವೀಯ ಮೌಲ್ಯಗಳ ಹರಿಕಾರರು, ಸೇವೆಯೇ ಶ್ರೇಷ್ಠ ಜೀವನದ ಪ್ರತಿಪಾದಕರಾಗಿ ನಮ್ಮೆಲ್ಲರ ಮಾರ್ಗದರ್ಶಕರಾಗಿ ಬೆಳಗುತ್ತಿದ್ದಾರೆ.
ಅಂದಹಾಗೆ ಪರಮ ಪೂಜ್ಯ ಬಸವಲಿಂಗ ಅವಧೂತ ಶರಣರು ಧಾರ್ಮಿಕ ಮತ್ತು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದಂತೆ. ಉಪನ್ಯಾಸ ಮಾಲೆ, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವೈಚಾರಿಕ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಯಲ್ಲಿ ಸಂಗೀತ ಸೇವೆ ಸಹ ಪ್ರತಿ ವರ್ಷ ಆಶ್ರಮದಲ್ಲಿ ನಿರಂತರವಾಗಿ ನಡೆಯುತ್ತದೆ. ಇದಲ್ಲದೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಹಿತಿ,ಸಾಂಸ್ಕೃತಿಕ ಲೋಕದಲ್ಲಿ ಪೂಜ್ಯರ ಸೇವೆ ಅನನ್ಯ ಹಾಗೂ ಅಪಾರವಾಗಿದೆ. ಹೀಗಾಗಿಯೇ ಶ್ರಿ ಕ್ಷೇತ್ರಗಳು ಪವಿತ್ರ ಶರಣರ ಸುಕ್ಷೇತ್ರವನ್ನಾಗಿ ಮಾಡಿದ್ದಾರೆ. ಅಪಾರ ಅಭಿಮಾನಿಗಳು ಹೊಂದಿರುವ ಶ್ರೀಗಳು ಈ ಭಾಗದಲ್ಲಿ ವೈಚಾರಿಕ ಮೌಲ್ಯಾಧಾರಿತ ಚಿಂತನೆಗಳನ್ನು ಪ್ರತಿಪಾದನೆ ಮಾಡಿಕೊಂಡು ಬರುತ್ತಿದ್ದಾರೆ.ಮನೆಮಠ ತೊರೆದು, ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿ, ಸಮಾಜದ ಕಾರ್ಯದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದು ಸಣ್ಣ ಮಾತೇನು ಅಲ್ಲವೇ ಅಲ್ಲ.ಅದಕ್ಕಾಗಿಯೇ ಇವರನ್ನು ಆಧ್ಯಾತ್ಮಿಕ ಸಂತ ಎಂದು ಜನಸಾಮಾನ್ಯರು ಹೆಮ್ಮೆಯಿಂದ ಕರೆಯುತ್ತಾರೆ.
ಅದಕ್ಕಾಗಿಯೇ ಪರಮ ಪೂಜ್ಯ ಬಸವಲಿಂಗ ಅವಧೂತ ಶರಣರ ಸಾಮಾಜಿಕ ಸೇವೆ ಕಂಡು ಎಲ್ಲರೂ ತಲೆ ಬಾಗುತಾರೆ. ಹಾಗೆಯೇ ಕರ್ನಾಟಕ ಹಾಗೂ ತೆಲಂಗಾಣ ನಾಡಿಗೆ ಶ್ರೇಷ್ಠ ಆಧ್ಯಾತ್ಮಿಕ ಸಂತರಾಗಿ ಬೆಳಗುತ್ತಿದ್ದಾರೆ.
ತೆಲಂಗಾಣ ಹಾಗೂ ಕಲ್ಯಾಣ ನಾಡಿನ ಹೆಮ್ಮೆಯ ಆಶ್ರಮಗಳು:
ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮಗಳಿಗೆ
ಅನೇಕ ರಾಜಕರಣಿಗಳು, ಸಾಹಿತಿಗಳು, ಕವಿಗಳು ಕಲಾವಿದರು ಹಾಗೂ ಅಪಾರ ಭಕ್ತವೃಂದದವರು ದಿನನಿತ್ಯ ಬಂದು ಹೊಗುತ್ತಾರೆ. ಅನಾಥರಿಗೆ ಮತ್ತು ಬಡವರಿಗೆ ಶ್ರೀ ಕ್ಷೇತ್ರಗಳು ನೆಮ್ಮದಿಯ ಆಶ್ರಯತಾಣವಾಗಿವೆ.
ಮುಂಜಾನೆಯಿಂದ ಮಧ್ಯ ರಾತ್ರಿ ವರೆಗೂ ದಾಸೋಹ ವ್ಯವಸ್ಥೆ ಇರುತ್ತದೆ. ಆಶ್ರಯಕ್ಕಾಗಿ ಬಂದವರಿಗೆ ಆಶ್ರಯ ನೀಡಿರುವ ಕೀರ್ತಿ ಈ ಪೂಜ್ಯರಿಗೆ ಸಲ್ಲುತ್ತದೆ.
ಶ್ರೀ ಆಶ್ರಮಗಳಲ್ಲಿ ದಾಸೋಹ ಭಾವ: ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮಗಳು
ಕಲ್ಯಾಣ ನಾಡಿನ ಶ್ರೇಷ್ಠ ಆಶ್ರಮಗಳು ಎಂಬ ಕೀರ್ತಿಗೆ ಭಾಜನವಾಗಿವೆ. ಯಾಕೆಂದರೆ ದಿನದ 24 ಗಂಟೆಗಳಲ್ಲಿಯೋ ಪ್ರಸಾದದ ವ್ಯವಸ್ಥೆ ಇರುತ್ತದೆ.
ದಾಸೋಹ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಜಾತಿ, ಧರ್ಮ ಬೇದ ಭಾವನೆಗಳನ್ನು ಮಾಡುವುದಿಲ್ಲ. ಎಲ್ಲರೂ ಸಮಾನರು.ಹಾಗಾಗಿ ಬರುವ ಎಲ್ಲಾ ಭಕ್ತವೃಂದಕ್ಕೂ ಯಾವುದೇ ರೀತಿಯಲ್ಲಿಯೂ ನೋವಾಗದೇ ಇರುವ ಹಾಗೆ ಆಶ್ರಮದ ವತಿಯಿಂದ ದಾಸೋಹ ವ್ಯವಸ್ಥೆ ನಿರ್ವಹಿಸಿಕೊಂಡು ಬರುತ್ತಿರುವುದು ನೋಡುತ್ತೇವೆ.
ಆಶ್ರಮಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ವಸತಿ, ನಿತ್ಯದಾಸೋಹ ವ್ಯವಸ್ಥೆ ಇರುತ್ತದೆ.
ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಶ್ರೀ ಸುಕ್ಷೇತ್ರಗಳು ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿವೆ ಮತ್ತು ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ”ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ಆಶ್ರಮಗಳು ತೊಡಗಿಸಿಕೊಂಡಿವೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ವೈಚಾರಿಕ ಚಿಂತನೆಗಳಿಗೆ ಆದ್ಯತೆ :
ಡಾಂಬಿಕತೆಗೆ ಹೆಚ್ಚು ಆಸ್ಪದ ನೀಡದೇ ವೈಚಾರಿಕ ಚಿಂತನೆಗಳಿಗೆ ಆದ್ಯತೆ ನೀಡುವ ಪೂಜ್ಯರು, ಯಾವುದೇ ತರಹದ ಪಲ್ಲಕ್ಕಿಗಳಲ್ಲಿ ಮರವಣಿಗೆ ಮಾಡಿಸಿಕೊಳ್ಳದೆ, ಪಾದಯಾತ್ರೆಯ ಮೂಲಕ ಶ್ರೀಸಾಮಾನ್ಯರ ಭಾವನೆಗಳಿಗೆ ಗೌರವ ನೀಡುತ್ತಾ,ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಹಾಗಾಗಿ
ನಾಡಿನ ಯಾವುದೇ ಸಂಘ – ಸಂಸ್ಥೆ ಮತ್ತು ಸರಕಾರಗಳು ಮಾಡದೇ ಇರುವ ಜನಪರ ಕೆಲಸಗಳು ಪೂಜ್ಯರು ತಮ್ಮ ಆಶ್ರಮದಿಂದ ಮಾಡಿಕೊಂಡು ಬರುತ್ತಿರುವುದು ಕಾಣುತ್ತೇವೆ. ಹಾಗೆಯೇ ಸಂಸ್ಕಾರಯುತ ಜೀವನವನ್ನು ಸರ್ವರೂ ನಡೆಸಲು ಸರ್ವರಲ್ಲಿಯೂ
ಸುಸಂಸ್ಕೃತಿಯ ತತ್ವಗಳನ್ನು, ಬಿತ್ತುತ್ತಿದ್ದಾರೆ.
ಲೋಕ ಕಲ್ಯಾಣಕ್ಕಾಗಿ :
ದೇಶದ ವಿವಿಧೆಡೆ ಲೋಕ ಕಲ್ಯಾಣಕ್ಕಾಗಿ ತಪಸ್ಸುಗೈದ ಶ್ರೀಗಳು ಪ್ರಖರ ವಾಗ್ಮಿಗಳು. ಕೋಟ್ಯಂತರ ಭಕ್ತರ ಆರಾಧ್ಯ ದೈವವೂ ಹೌದು.
ನಾಟಿ ವೈದ್ಯರು ಸಹ ಆಗಿರುವ ಇವರು ತಮ್ಮನ್ನು ನಂಬಿಕೊಂಡು ಬಂದ ಅನೇಕ ಭಕ್ತರನ್ನು ಕಾಯಿಲೆಗಳಿಂದ ಮುಕ್ತಗೊಳಿಸಿದ್ದಾರೆ. ಬಹಳಷ್ಟು ಜನರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ಪೋಷಕರಿಗೆ ಮಕ್ಕಳನ್ನು ಬೆಳೆಸುವ ಪರಿ ಹೇಳಿಕೊಡುತ್ತಿದ್ದಾರೆ. ಸಂಸ್ಕಾರದ ಮಹತ್ವ ಮನವರಿಕೆ ಮಾಡುತ್ತಿದ್ದಾರೆ. ದುಶ್ಚಟಗಳ ವಿರುದ್ಧ ಯುವ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಭ್ರಾತೃತ್ವ, ಐಕ್ಯತೆ ಸಂದೇಶ ಸಾರುತ್ತಿದ್ದಾರೆ. ದೇಶ ಭಕ್ತಿ, ದೇಶ ಪ್ರೇಮ ಬೆಳೆಸುತ್ತಿದ್ದಾರೆ. ಸಾಮಾಜಿಕ ಪರಿವರ್ತನೆಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.
ಆಶ್ರಮದಿಂದ ಸಾಹಿತ್ಯ, ಸಂಸ್ಕೃತಿಗೆ ಆದ್ಯತೆ: ಕೇವಲ ಆದ್ಯಾತ್ಮೀಕ, ಸಮಾಜಿಕ ಕಾರ್ಯಗಳಿಗೆ ಸೀಮಿತವಾಗದೆ ಸಮಾಜ ಮುಖಿ ಚಿಂತನೆಯುಳ್ಳ ಸಾಹಿತ್ಯ, ಸಾಂಸ್ಕೃತಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸಾಹಿತಿಗಳಿಗೆ, ಸಾಂಸ್ಕೃತಿಕ ಕಲಾವಿದರಿಗೆ ಆಶ್ರಯ ನೀಡಿ, ಗೌರವಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ವಿಶೇಷವಾಗಿ ಪೂಜ್ಯರಿಗೆ
ಪುಸ್ತಕಗಳ ಮೇಲೆ ಅಪಾರವಾದ ಅಭಿಮಾನ ಮತ್ತು ಪ್ರೀತಿ ಇದೆ. ನಿರಂತರವಾಗಿ ಪುಸ್ತಕ ಬಿಡುಗಡೆ ಕಾರ್ಯ ಮಾಡಲಾಗುತ್ತಿದೆ.
ಪೂಜ್ಯರ ಪ್ರೀತಿಯ ಗೋಶಾಲೆ : ಪೂಜ್ಯರ ಈ ಪ್ರೀತಿಯ ಗೋಶಾಲೆ ಬೀದಿ ಹಸುಗಳಿಗೆ ರಕ್ಷಣಾತ್ಮಕ ಆಶ್ರಯ ತಾಣವಾಗಿದೆ. ಇಲ್ಲಿ ವಿವಿಧ ರೀತಿ ತಳಿಯ ಹಸುಗಳಿವೆ. ಪೂಜ್ಯರ ಪ್ರೀತಿಯ ಅಕ್ಕರೆಯಿಂದ 50 ಕ್ಕೂ
ಹೆಚ್ಚು ಹಸುಗಳಿಗೆ ವಸತಿ ಮತ್ತು ಆರೈಕೆ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.ಗೋಶಾಲೆಗಳಲ್ಲಿನ ಹಸುಗಳಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ನೀಡುತ್ತಿದ್ದಾರೆ. ಹಸುಗಳಿಗೆ ಯಾವುದೇ ರೀತಿಯ ಕಾಯಿಲೆಗಳು ಇದ್ದರೆ ಚಿಕಿತ್ಸೆಗಳು ಸೇರಿದಂತೆ ವೈದ್ಯಕೀಯ ಆರೈಕೆಯನ್ನು ಸಹ ಮಾಡುತ್ತಿದ್ದಾರೆ. ಹಸುವಿನ ಸಗಣಿ ಮತ್ತು ಮೂತ್ರವನ್ನು ಎಚ್ಚರಿಕೆಯಿಂದ ಸಂಗ್ರಹಿಸಲಾಗುತ್ತದೆ.ಸ್ಥಳೀಯ ಹಸು, ಮನುಕುಲಕ್ಕೆ ಅಮೂಲ್ಯವಾದ ವರವಾಗಿದೆ ಎಂಬುದು ಪೂಜ್ಯರ ಅಭಿಮತವಾಗಿದೆ. ಅಂತೆಯೇ ಹಸುಗಳನ್ನು ಗೌರವಿಸುವ ಮತ್ತು ಬಳಸಿಕೊಳ್ಳುವವರಿಗೆ ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸುವ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ. ಜೊತೆಗೆ, ದೇಸಿ ಹಸುವನ್ನು ಪೂಜಿಸುವ ಮತ್ತು ನೋಡಿಕೊಳ್ಳುವ ಧಾರ್ಮಿಕ ಕ್ರಿಯೆಯು ಪುಣ್ಯ ಎಂದು ಕರೆಯಲ್ಪಡುವ ಆಧ್ಯಾತ್ಮಿಕ ಅರ್ಹತೆಯನ್ನು ಗಳಿಸುತ್ತದೆ ಎಂದು ಹೇಳುತ್ತಾರೆ. ದುಃಖಕರವೆಂದರೆ, ನಮ್ಮ ಸಮಾಜದಲ್ಲಿ ಹಸುಗಳ ಆಳವಾದ ಪ್ರಾಮುಖ್ಯತೆಯ ಬಗ್ಗೆ ಅರಿವಿನ ಕೊರತೆಯಿದೆ ಮತ್ತು ಇದರ ಪರಿಣಾಮವಾಗಿ, ಅವುಗಳ ಅಸ್ತಿತ್ವವು ಅಳಿವಿನ ಅಪಾಯದಲ್ಲಿದೆ ಎಂದು ಪೂಜ್ಯರು ಯಾವಾಗಲೂ ಆತಂಕ ವ್ಯಕ್ತಪಡಿಸುತ್ತಾರೆ.
ಈ ನಿಟ್ಟಿನಲ್ಲಿ ಎಲ್ಲಾ ಹಸುಗಳನ್ನು ಪ್ರೀತಿಯಿಂದ ಪೋಷಿಸಲಾಗುತ್ತದೆ, ಭವಿಷ್ಯದ ಪೀಳಿಗೆಯ ಅನುಕೂಲಕ್ಕಾಗಿ ಅವುಗಳ ನಿರಂತರತೆಯನ್ನು ಖಾತ್ರಿಪಡಿಸಲಾಗುತ್ತಿದೆ. ಈ ಪ್ರಯತ್ನದ ಹಿಂದಿನ ಉದ್ದೇಶವು ಕೇವಲ ಹಸುಗಳ ಭೌತಿಕ ಉಪಸ್ಥಿತಿಯನ್ನು ಕಾಪಾಡುವುದು ಮಾತ್ರವಲ್ಲ, ಆಧುನಿಕ ಜಗತ್ತಿಗೆ ಈ ಭವ್ಯ ಜೀವಿಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ನೀಡುವುದಾಗಿದೆ. ಅದಕ್ಕಾಗಿಯೇ
ಗೋಶಾಲೆ ಸ್ಥಾಪನೆಗಾಗಿ ಪೂಜ್ಯರು ಕೈಗೊಂಡ ದೂರದೃಷ್ಟಿಯ ಪ್ರಯತ್ನಗಳಲ್ಲಿ ಒಂದಾಗಿದೆ. ಅಂತೆಯೇ ಅಮೂಲ್ಯವಾದ ದೇಶಿ ಹಸುಗಳನ್ನು ರಕ್ಷಿಸುವುದಲ್ಲದೆ, ಮುಂದಿನ ಪೀಳಿಗೆಗೆ ಅನುರಣಿಸುವ ಬುದ್ಧಿವಂತಿಕೆ ಮತ್ತು ಸಹಾನುಭೂತಿಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂಬುವುದು ಪೂಜ್ಯರ ಕಳಕಳಿಯ ಸದಾಶಯವಾಗಿದೆ.
ಮೌನವೃತ ಪೂಜ್ಯರು: ಆಶ್ರಮದ ಜವಾಬ್ದಾರಿ ಹೊತ್ತುಕೊಂಡ ನಂತರ ಇಲ್ಲಿಯವರೆಗೂ ಆಶ್ರಮದಲ್ಲಿ ಸಾವಿರಾರು ಬಾರಿ ಮೌನ ವೃತ ಮಾಡಿರುತ್ತಾರೆ.
ಅದೇ ರೀತಿ ನಾಡಿನಾದ್ಯಂತ ಅನುಷ್ಠಾನಗೈದ ಸ್ಥಳಗಳಾದ
ಹಿಮಾಲಯ ಪರ್ವತ, ಕಾಶಿ, ಶ್ರೀಶೈಲ, ಹರಿದ್ವಾರ, ಋಷಿಕೇಶ, ಬದ್ರಿನಾಥ, ಕೇದಾರನಾಥ ಮೊದಲಾದ ಅನೇಕ ಬೆಟ್ಟಗುಡ್ಡ ಕಾಡು ಪ್ರದೇಶಗಳಲ್ಲಿ ಮೌನವೃತ ಅನುಷ್ಠಾನ ಮಾಡಿದ ಶ್ರೇಯಸ್ಸು ಪರಮ ಪೂಜ್ಯ ಬಸವಲಿಂಗ ಅವಧೂತ ಅಪ್ಪಾಜಿಯವರಿಗೆ ಸಲ್ಲುತ್ತದೆ.
ಆಧ್ಯಾತ್ಮದ ಪ್ರವಚನ :
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಆಧಾತ್ಮಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ಸನ್ಮಾರ್ಗ ತೋರುತ್ತಿದ್ದಾರೆ. ನಗರ, ಪಟ್ಟಣ, ಗ್ರಾಮಗಳು ಸೇರಿದಂತೆ 2,500ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರವಚನ ನಡೆಸಿಕೊಟ್ಟು, ಆಧ್ಯಾತ್ಮದ ಸವಿ ಉಣಬಡಿಸಿದ್ದಾರೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಪ್ರವಚನ ನೀಡುವ ಕಾರಣದಿಂದ, ಶ್ರೀಗಳ ಪ್ರವಚನ ಕಾರ್ಯಕ್ರಮಗಳಿಗೆ ಜನಸಾಗರವೇ ಹರಿದು ಬರುತ್ತದೆ. ಪ್ರತಿ ಹುಣ್ಣಿಮೆಯಂದು ಮಲ್ಲಯ್ಯಗಿರಿ ಆಶ್ರಮದಲ್ಲಿ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವುದು ವಿಶೇಷವಾಗಿದೆ. ಅಲ್ಲದೇ ಕನ್ನಡ, ಹಿಂದಿ, ತೆಲುಗು, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಪ್ರವಚನ ಮಾಡುವ ಹಿರಿಮೆ ಶ್ರೀಗಳದ್ದು. ಆಯಾ ಪ್ರದೇಶಗಳಿಗೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆಗಳಲ್ಲಿಯೇ ಪ್ರವಚನ ಮಾಡುವ ಮುಖಾಂತರ ಭಕ್ತರ ಹೃದಯವನ್ನು ಗೆಲ್ಲುತ್ತಾರೆ.
ಶ್ರೀಗಳ ಸಂಗೀತ/ಸಾಹಿತ್ಯ ಸೇವೆ:
ಆಧ್ಯಾತ್ಮಿಕ ಜಾಗೃತಿ ಜತೆಗೆ ಸಾಹಿತ್ಯ ಕೃಷಿಯಲ್ಲೂ ಶ್ರೀಗಳು ತೊಡಗಿಸಿಕೊಂಡಿದ್ದಾರೆ. ‘ಒಲಿದು ಹಾಡಿದ ಹೃದಯ ಗೀತೆ’, ‘ಅನುಭಾವಾಮೃತ’ (ತೆಲುಗು ಹಾಡು), ಸತ್ಯ ಶುದ್ಧ (ಆಧುನಿಕ ವಚನ ರಚನೆ) ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಹಾಗೆಯೇ ಇವರು ವಚನಗಳು ಸಹ ರಚಿಸಿದ್ದಾರೆ. ಇವರ ವಚನಗಳ ಅಂಕಿತ ನಾಮ ‘ಘನಯೋಗಿ ಮಲ್ಲಿನಾಥ’ ಎಂದಾಗಿದೆ. ಇನ್ನು ಶ್ರೀಗಳ ಸಂಗೀತ ಸೇವೆ ಸುಮಧುರ, ಇವರ ಕಂಠಸಿರಿಯಿಂದ ಹೊರಡುವ ಹಾಡುಗಳು ಕೇಳುವುದೇ ಬಹು ಆನಂದ. ಶ್ರೀಗಳ ಹಾಡು ಕೇಳುವುದೆಂದರೆ ಭಕ್ತರಿಗೆ ಬಲು ಖುಷಿ. ಜನಪದ ಶೈಲಿಯ ಶ್ರೀಗಳ ಹಾಡುಗಳು ಭಕ್ತರ ಮನ – ಹೃದಯ ಮಂದಿರ ತಟ್ಟುತ್ತವೆ. ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಗೀತೆಗಳು ಶ್ರೀಗಳು ಯಾವಾಗಲೂ ಹಾಡುತ್ತಾರೆ. ಈ ಮೂಲಕ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ನಿರಂತರವಾಗಿ ಶ್ರೀಗಳು ಸಲ್ಲಿಸುತ್ತಿದ್ದಾರೆ.
ಅವಧೂತ ಶ್ರೀಗಳಿಗೆ ಸಂದ ಪ್ರಶಸ್ತಿ ಗೌರವಗಳು:
ಧಾರ್ಮಿಕ,ಸಾಮಾಜಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಪೂಜ್ಯರಿಗೆ ಅನೇಕ ಪ್ರಶಸ್ತಿಗಳು ಆರಿಸಿ ಬಂದಿವೆ. ಅದರಲ್ಲಿ ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾದ ಶರಣ ಸೇವಾ ರತ್ನ ಪ್ರಶಸ್ತಿ , ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾದ ಕನ್ನಡ ರತ್ನ ಪ್ರಶಸ್ತಿ, ಜರ್ಮನಿಯ ಇಂಟರ್ನ್ಯಾಷನಲ್ ಪೀಸ್ ವಿಶ್ವವಿದ್ಯಾಲಯವು 2020 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹೀಗೆ 100 ಕ್ಕೂ ಹೆಚ್ಚು ಗೌರವ ಸನ್ಮಾನಗಳು ಹಾಗೂ 50ಕ್ಕೂ ಹೆಚ್ಚು ಭಕ್ತರಿಂದ ತುಲಾಭಾರಗಳು ನೆರವೇರಿವೆ.ಅದೇ ರೀತಿ ಇನ್ನು ನಾಡಿನ ಅನೇಕ ಪ್ರತಿಷ್ಠಿತ ಸಂಘ – ಸಂಸ್ಥೆ, ಮಠಗಳಿಂದ ಪ್ರಶಸ್ತಿ,ಗೌರವಗಳು ಸಂದಿವೆ.
ಬದ್ಧತೆಯ ಅವಧೂತ ಶ್ರೀಗಳು: ಸದಾ ಹಸನ್ಮುಖಿಯಾಗಿ ಇರುವ ಶ್ರೀಗಳು ಎಂದೆಂದಿಗೂ ಅವರ ನೋವುಗಳನ್ನು ತೋರಪಡಿಸದೆ, ಸಮಾಜದ ಉನ್ನತಿಗಾಗಿ ಸದಾ ಚಿಂತನೆ ಮಾಡುತ್ತಿರುತ್ತಾರೆ. ಇವರ ಸಮಾಜಿಕ ಕಳಕಳಿಯ ಬದ್ಧತೆ ಯಾರು ಪ್ರಶ್ನೆ ಮಾಡುವಂತೆ ಇರುವುದೇ ಇಲ್ಲ. ತಾನಾಯ್ತು ತಮ್ಮ ಕೆಲಸವಾಯಿತು ಎನ್ನುವ ದಿಸಯಲ್ಲೇ ಹೆಜ್ಜೆ ಹಾಕುವ ಮೇಧಾವಿ ಸಂತ ಇವರು.
ಜನರ ಅಶೋತ್ತರಗಳು ಈಡೇರಿಸುವ ನಿಟ್ಟಿನಲ್ಲಿ ಹತ್ತು ಹಲವು ವಿಶಿಷ್ಟ ಸೇವೆಗಳ ಮೂಲಕ ಜನಸಾಮಾನ್ಯರ ಬವಣೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಗೌರವದ ನುಡಿ: ಬಸವಣ್ಣನವರ ಹಾಗೂ ಜಗನ್ಮಾತೆ ಅಕ್ಕಮಹಾದೇವಿ ತಾಯಿಯವರ ಅನುಯಾಯಿಯಾಗಿ,
ಸದ್ದು ಗದ್ದಲವಿರದ ಸಾಧನೆಯ ಗದ್ದುಗೆಯೇರಿದ ಪರಮ ಪೂಜ್ಯ ಬಸವಲಿಂಗ ಅವಧೂತ ಅಪ್ಪಾಜಿಯವರ ಸೇವಾ ಕೈಂಕರ್ಯಗಳು ಅನನ್ಯ ಮತ್ತು ಅಪಾರವಾಗಿವೆ.
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದ ಭಾವ ಇವರಲ್ಲಿ ಸದಾ ಎದ್ದು ಕಾಣುತ್ತದೆ.
ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಗಳು.
ಕಾಯಕವೇ ಕೈಲಾಸ ಎಂದು ನುಡಿಯಲ್ಲಿ ಮಾತ್ರ ಹೇಳದೇ ಕೃತಿಯಲ್ಲಿ ನಡೆದು ತೋರಿಸಿಕೊಟ್ಟಿದ್ದಾರೆ.
ಒಬ್ಬ ಭಾರತೀಯ ಆಧ್ಯಾತ್ಮಿಕ ಯುಗ ಪುರುಷರಾಗಿ, ಮಾನವೀಯ ಮೌಲ್ಯಗಳನ್ನು ಸಾರುವ ಸಂತರಾಗಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯದಲ್ಲಿ ಬೆಳಗುತ್ತಿದ್ದಾರೆ.
ಲೇಖಕರು: ಸಂಗಮೇಶ ಎನ್ ಜವಾದಿ